ಹೆಂಡ್ತೀರ್ ಮಾತು ಗಂಡಂದ್ರು ಯಾಕೆ ಕೇಳ್ತಾರೆ?

ಹೆಂಡ್ತೀರ್ ಮಾತು ಗಂಡಂದ್ರು ಯಾಕೆ ಕೇಳ್ತಾರೆ?

ಒಂದಿವಸ ಒಬ್ಬರು ಹೇಳ್ತಿದ್ದು ಕೇಳಿದೆ. ಗಂಡಸ್ರಿಗೆ ಮದ್ವೆ ಆಗೋ ತನಕ, ಯಾವಾಗ ಏನ್ಕೆಲ್ಸ ಮಾಡ್ಬೇಕು ಅಂತ ತಿಳೀದೆ ನೂರಿಪ್ಪತ್ತೆಂಟಕ್ಕೆ ಕೈಹಾಕ್ತಿರ್ತಾರೆ ಅಂತ.  ನಾನೂ ಮದ್ವೆ ಆಗಿರೋನೇ, ಆದ್ರೂ ನೂರಿಪ್ಪತ್ತೆಂಟು ಕೆಲಸ ಕೈಗಂಟ್ಕೊಂಡಿರತ್ತಲ್ಲ ಅಂತ ನನಗನಿಸ್ತು. ಅದಕ್ಕೇ ಅವರನ್ನ ಹಾಗೇ ಕೇಳೂ ಬಿಟ್ಟೆ. 

ಆಗ ಅವ್ರಂದ್ರು - "ಅಲ್ರೀ, ನೀವು ಮಾಡ್ಬೇಕೂ ಅಂದ್ಕೊಂಡಿರೋ ಈ ನೂರಿಪ್ಪತ್ತೆಂಟು ವಿಷಯದಲ್ಲಿ ಮೊದಲ ನೂರು ವಿಷಯಗಳನ್ನಾದ್ರೂ  ನಿಮಗೆ ಹೇಳಿರೋದು, ನೆನಪಿಸೋದು ನಿಮ್ಮ ಹೆಂಡ್ತೀ ತಾನೇ?" ಅಂತ. "ಅರೆ, ಹೌದಲ್ಲ!" ಅನ್ನಿಸ್ತು. "ಅದೇರೀ, ಗಂಡಸ್ರಿಗೂ ಹೆಂಗಸ್ರಿಗೂ ಇರೋ ವ್ಯತ್ಯಾಸ. ಯಾವ್ದನ್ನ ಎಲ್ಲಿಡ್ಬೇಕು ಅನ್ನೋದು ಹೆಂಗಸ್ರಿಗಲ್ವೇ ಸರಿಯಾಗ್ಗೊತ್ತಿರೋದು? ಅದು ಅವರ್ಗೆ ಹುಟ್ಟಿಂದ ಬಂದಿರತ್ತೇ ರೀ" ಅಂದ್ಕೊಂಡು ಅವರು ಹೋದ್ರು.

ಹೌದು. ಅದೇನೋ ನಿಜ. ಯಾವ್ದನ್ನ ಎಲ್ಲಿಟ್ಟಿರ್ಬೇಕು, ಯಾರನ್ನ ಎಲ್ಲಿಟ್ಟಿರ್ಬೇಕು ಅನ್ನೋದನ್ನ ಹೆಂಗಸ್ರು ಚೆನ್ನಾಗೇ ತಿಳ್ಕೊಂಡಿರ್ತಾರೆ.  ಅದ್ರಲ್ಲೂ, ಅವರವರ ಗಂಡಂದ್ರನ್ನ ಎಲ್ಲಿಟ್ಟಿರ್ಬೇಕು ಅಂತ ಬಹಳ ಚೆನ್ನಾಗೇ ತಿಳ್ಕೊಂಡಿರ್ತಾರೆ. ಇದನ್ನ ಅವರ್ಗೆ ಯಾರೂ ಹೇಳ್ಕೊಡ್ಬೇಕಾಗಿಲ್ಲ. ಯಾರಾದ್ರೂ, ಹೇಳ್ಕೊಡ್ಬೇಕು ಅಂದ್ರೆ, ಅವರವರ ತಾಯಿ ಹೇಳ್ಕೊಡ್ಬೇಕು. ಇಲ್ಲ ಅವರ ನಡವಳಿಕೆ ನೋಡ್ಕೊಂಡು ಕಲ್ತ್ಕೋತಾರೋ? ಗೊತ್ತಿಲ್ಲ. ನನ್ ಹೆಂಡ್ತೀನೇ ಕೇಳಿ ನೋಡ್ಬೇಕು ಅಂದ್ಕೊಂಡಿದ್ದೆ. ಆದ್ರೆ, ಅಷ್ಟ್ರೊಳ್ಗೆ ಉತ್ತರ ಸಿಕ್ತು ಅನ್ನಿ.

ವಿದ್ಯೆಗೆ, ಕಲಿಕೆಗೆ ಅಧಿದೇವತೆ ಸರಸ್ವತಿ ಅಂತ ಅಂದ್ಕೋತೀವಿ. ಇದು ಬಹುಶಃ ಗಂಡಸ್ರಿಗೆ ಮಾತ್ರ - ಅಥವಾ ’ಪುಸ್ತಕದ ಬದನೇಕಾಯಿ’ ಅಂತೀವಲ್ಲ ಅಂತಹ ವಿದ್ಯಕ್ಕೆ. ಗಂಡಂದ್ರನ್ನ ಹೇಗೆ ನೋಡ್ಕೊಳ್ಬೇಕು ಅನ್ನೋದಕ್ಕೆ ಹೆಂಗಸ್ರಿಗೆಲ್ಲ ದೊಡ್ಡ ಗುರು ಅಂದ್ರೆ ಅದು ಲಕ್ಷ್ಮಿ. ಜೂಲಿ ಲಕ್ಷ್ಮಿ ಅಲ್ಲಾರೀ. ಹ್ಹ ಹ್ಹ - ಈ ಕಾಲದವರಿಗೆ ಜೂಲಿ ರಮ್ಯ ಗೊತ್ತಿರ್ಬಹುದೇ ಹೊರತು ಜೂಲಿ ಲಕ್ಷ್ಮಿ ಗೊತ್ತಿರೋಲ್ಲ ಅನ್ನೋದು ನನ್ ಹಳೇ ಕಾಲದ್ ಮನಸ್ಗೆ ಮರ್ತೇ ಹೋಯ್ತು. ಇರ್ಲಿ. ನಾನು ಹೇಳಿದ್ದು ಸಾಕ್ಷಾತ್ ಹಾಲ್ಗಡಲಲ್ಲಿ ಹುಟ್ಟಿ ಬಂದ ಮಹಾಲಕ್ಷ್ಮಿ ವಿಷಯ. 

ಲಕ್ಷ್ಮಿ ಬಹಳ ಜಾಣೆ. ಪಾರ್ವತಿ ಪಾಪ, ತಿಂಗಳುಗಟ್ಟಲೆ ಶಿವನಿಗೆ ಸೇವೆ ಮಾಡ್ತಾ, ಅವನು ಯಾವತ್ತು ಕಣ್ತೆಗೀತಾನೋ, ಯಾವಾಗ ತನ್ನ ಕಡೆ ನೋಡ್ತಾನೋ ಅಂತ ಕಷ್ಟವಂತೂ ಪಟ್ಟಿದ್ದೇ ಪಟ್ಟಿದ್ದು. ಕಡುಜಾಣೆ ಲಕ್ಷ್ಮಿ ಸಮುದ್ರದಿಂದ ಹುಟ್ಟಿದ ತಕ್ಷಣ  ಸುತ್ಮುತ್ಲೂ ನೋಡಿ ಕಣ್ಣಿಗೆ ಚೆನ್ನಾಗಿ ಕಂಡ ನಾರಾಯಣನ್ನ ಮದುವೆ ಮಾಡ್ಕೊಂಡ್ಬಿಟ್ಳು. ಅಷ್ಟೇ ಅಲ್ಲ, ತವರ್ಮನೇ ಆದ ಸಮುದ್ರದಲ್ಲೇ ಗಂಡನ್ಜೊತೆ ಠಿಕಾಣೀನೂ ಹೂಡ್ಬಿಟ್ಳು. ಕಷ್ಟ ಪಟ್ಟು ಮದ್ವೆ ಆದ ಪಾರ್ವತಿಯನ್ನ ನಾವು ದಂಪತಿಗಳನ್ನ ಹೇಳೋವಾಗ ಶಿವ-ಪಾರ್ವತಿ ಅಂತ ಮೊದ್ಲು ಗಂಡನ ಹೆಸ್ರು ಹೇಳ್ತೀವಿ. ಆದ್ರೆ, ಲಕ್ಷ್ಮಿ ದಂಪತಿಗಳಿಗೆ ಹಾಗಿಲ್ಲ ನೋಡಿ. ಅವರು ಏನಿದ್ರೂ ಲಕ್ಷ್ಮೀ-ನಾರಾಯಣ, ಲಕ್ಷ್ಮೀ-ಕೇಶವ, ಲಕ್ಷ್ಮೀ-ಜನಾರ್ದನ, ಲಕ್ಷ್ಮೀ-ವೆಂಕಟೇಶ್ವರ. ಅಂತೂ ಲಕ್ಷ್ಮಿಗೆ ಗಂಡ ಯಾವತ್ತೂ ತನ್ನ ಹಿಂದೆ ಇರ್ಬೇಕು ಅನ್ನೋದು ಮೊದಲಿಂದ್ಲೇ ಗೊತ್ತಿತ್ತು ಅನ್ಸತ್ತೆ. ಅದಕ್ಕೇ ಹೆಂಗಸ್ರೆಲ್ಲ ಅವಳನ್ನ ಗುರು ಅಂದ್ಕೊಂಡ್ರೆ ಆಶ್ಚರ್ಯ ಏನಿದೆ? ಅಲ್ವಾ? 

ಆ ಲಕ್ಷ್ಮಿ ಐಶ್ವರ್ಯಕ್ಕೆ ದೇವತೆ ಅಂತ ಅಂದ್ಕೊಳೋದು ಗಂಡಸ್ರು ಮಾತ್ರ ಅನ್ಸತ್ತೆ .ಪುರಂದರ ದಾಸರ ಒಂದು ರಚನೆಯನ್ನ ಓದಿದಮೇಲೆ, ಹೆಂಗಸ್ರಿಗೆಲ್ಲ ಸಂಸಾರದ ಪಾಠ - ಅದ್ರಲ್ಲೂ ಗಂಡಂದ್ರನ್ನ ಹೇಗೆ ’ನೋಡ್ಕೋಬೇಕು’ ಅಂತ ಹೇಳ್ಕೊಡೋ ಪರಮಗುರು ಅಂದ್ರೆ ಈ ಲಕ್ಷ್ಮೀದೇವಿಯೇ ಅನ್ನೋದು ನನಗೆ ಖಾತ್ರಿಯಾಯ್ತು ಈಗ. 

ಓದಿ ನೋಡಿ ಈ ದೇವರನಾಮವನ್ನ - ಮರುಳುಮಾಡಿಕೊಂಡೆಯಲ್ಲ ಮಾಯಾದೇವಿಯೆ!

ಪಲ್ಲವಿ:

ಮರುಳು ಮಾಡಿಕೊಂಡೆಯಲ್ಲ ಮಾಯಾದೇವಿಯೆ |
ಇರುಳು ಹಗಲು ಏಕವಾಗಿ ಹರಿಯು ನಿನ್ನ ಬಿಡದಿಪ್ಪಂತೆ || ಪಲ್ಲವಿ||

ಚರಣಗಳು:

ಜ್ಞಾನಿಗಳು ನಿತ್ಯ ಪಾನಾದಿಗಳನ್ನು ಬಿಟ್ಟು
ನಾನಾ ವಿಧ ತಪವಿದ್ದರು ಧ್ಯಾನಕ್ಕೆ ಸಿಲುಕದವನ|| ಮರುಳು ಮಾಡಿಕೊಂಡೆಯಲ್ಲ||

ಸರ್ವ ಸಂಗವನು ಬಿಟ್ಟು ಸನ್ಯಾಸಿಯಾದ ಕಾಲಕ್ಕು
ಸರ್ವದಾ ತನ್ನೆದೆಯಮೇಲೇ ಬಿಡದೆ ನಿನ್ನ ಧರಿಸಿಪ್ಪಂತೆ ||ಮರುಳು ಮಾಡಿಕೊಂಡೆಯಲ್ಲ||

ಪ್ರಳಯ ಕಾಲದಲ್ಲಿ ಆಲದೆಲೆಯ ಮೇಲೆ ಮಲಗಿದ್ದಾಗ
ಹಲವು ಆಭರಣಗಳು ಜಲವು ಆಗಿ ಜಾಣತನದಿ ||ಮರುಳು ಮಾಡಿಕೊಂಡೆಯಲ್ಲ||

ರಂಗನು ಭೂಲೋಕದಿ ಭುಜಂಗ ಗಿರಿಯೊಳಲಮೇಲು-
ಮನ್ಗಪತಿಯಾಗಿ ನಿನ್ನ ಅಂಗೀಕರಿಸುವಂತೆ ||ಮರುಳು ಮಾಡಿಕೊಂಡೆಯಲ್ಲ||

ಮಕ್ಕಳ ಪಡೆದರೆ ನಿನ್ನ ಚೊಕ್ಕತನವು ಪೋಪುದೆಂದು
ಪೊಕ್ಕುಳೊಳು ಮಕ್ಕಳು ಪಡೆದು ಕಕ್ಕುಲಾತಿ ಪಡುವಂತೆ ||ಮರುಳು ಮಾಡಿಕೊಂಡೆಯಲ್ಲ||

ಎಡಕೆ ಭೂಮಿ ಬಲಕೆ ಶ್ರೀಯು ಎದುರಲ್ಲಿ ದುರ್ಗಾದೇವಿ
ತೊಡೆಯ ಮೇಲೆ ಲಕುಮಿಯಾಗಿ ಬಿಡದೆ ಮುದ್ದಾಡಿಸುವಂತೆ ||ಮರುಳು ಮಾಡಿಕೊಂಡೆಯಲ್ಲ||

ಎಂದೆಂದಿಗೂ ಮರೆಯ ನಿನ್ನಾನಂದದಿ ಜನರಿಗೆಲ್ಲ
ತಂದು ತೋರೆ ಸ್ವಾಧೀನ ಪುರಂದರ ವಿಟ್ಠಲರಾಯನ ||ಮರುಳು ಮಾಡಿಕೊಂಡೆಯಲ್ಲ||

ನೋಡಿ - ಲಕ್ಷ್ಮಿ ಮಾಡಿದ್ದು ಒಂದೊಂದಾ? ನಾರಾಯಣನನ್ನ ಮರುಳು ಮಾಡಿದ್ದು ನಾನಾ ತರಹ. ಮನೆ ಬಿಟ್ಟು ಹೋಗದ ಹಾಗೆ, ಕಣ್ಮುಂದೇ ಇರೋ ತರಹ, ತನ್ನ ತವರುಮನೆಯಾಗ ಹಾಲಿನ ಸಮುದ್ರದಲ್ಲೇ ಇರೋ ಹಾಗೆ ಮಾಡ್ಬಿಟ್ಲು. ಕಷ್ಟ ಪಟ್ಟು ಅವ್ನೂ ಪಾಪ, ಒಂದಷ್ಟು ದಿನ ಬೇರೆ ಊರಲ್ಲಿದ್ದು (ಭೂಲೋಕ) ಹೋಗೋಣ ಅಂತ ಬಂದ್ರೆ, ಅಷ್ಟರಲ್ಲೇ ತಾನೂ ಬಂದು ವೇಷ ಬದಲಿಸಿ, ಅಲಮೇಲುಮಂಗೆಯಾಗಿ ಅವನ ಕೈಯನ್ನೇ ಮತ್ತೆ ಹಿಡಿದಳು. ’ಎಲ್ಲೆಲ್ಲಿ ನೋಡಲಿ, ನಿನ್ನನ್ನೆ ಕಾಣುವೆ’ ಅಂತ ಅವನು ಹಾಡ್ಬೇಕೂ ಅಂತಲೋ ಏನೋ,  ಒಂದ್ಕಡೆ ಭೂದೇವಿ ಇನ್ನೊಂದ್ಕಡೆ ಶ್ರೀದೇವಿ ಆಗಿ ಅವನನ್ನೇ ಸುತ್ತುವರಿದಳು. ಇದೆಲ್ಲ ಚಾಕಚಕ್ಯತೆಗಳು ಎಲ್ಲ ಹೆಂಡ್ತೀರಲ್ಲೂ ಇವತ್ಗೂ ಇಲ್ವೇ? ಅಂದ್ರೆ ಲಕ್ಷ್ಮೀ ತಾನೇ ಎಲ್ಲ ಹೆಂಡ್ತೀರ್ಗೂ ಮಹಾಶಕ್ತಿ? ಅದಕ್ಕೇ ಇರಬೇಕು, ಬಹಳ ಜನದ ಮನೇಲಿ ’ನಮಸ್ತೇ ಶಾರದಾ ದೇವೀ’ ನೋ ’ಯಾಕುಂದೇಂದು ತುಷಾರಹಾರಧವಳಾ’ ನೋ ಹೇಳೋ ಹೆಚ್ಚಿಗೆ ಹೆಂಗಸ್ರನ್ನ ನಾನು ಕಂಡಿಲ್ಲ. ಅವರೆಲ್ಲರ ಮೆಚ್ಚಿನ ಸ್ತೋತ್ರ ಅಂದ್ರೆ ’ನಮಸ್ತೇಸ್ತು ಮಹಾಮಾಯೇ’ನೇ ಆಗಿರುತ್ತೆ!

ಮಕ್ಕಳನ್ನ ಹೆತ್ತರೆ ತನ್ನ ಮೈಕಟ್ಟು ಹಾಳಾಗತ್ತೆ ಅಂತ ಈ ಮಹಾಲಕ್ಷ್ಮಿ, ನಾರಾಯಣನ ಹೊಕ್ಕುಳಲ್ಲೇ ಮಗ ಹುಟ್ಟೋ ಹಾಗೆ ಮಾಡಿದ್ಲಂತೆ! ಭೂಲೋಕ ಲಕ್ಷ್ಮಿಯರು ಇದು ಒಂದ್ವಿಷಯದಲ್ಲಿ ಮಾತ್ರ -ಲಕ್ಷ್ಮಿಯ ಮಟ್ಟಕ್ಕೆ ಇನ್ನೂ ಹೋಗಿಲ್ಲ! ಅಥವಾ ಹೋಗಕ್ಕಾಗಿಲ್ಲ ಅನ್ನೋಣ. ನಾಳೆ ಏನೋ ಹೇಗೋ ಯಾರ್ಕಂಡವರು? ಏನಂತೀರಾ?

-ಹಂಸಾನಂದಿ

ಚಿತ್ರ: ಹಳೇಬೀಡು ದೇವಾಲಯದಲ್ಲಿನ ಲಕ್ಷ್ಮೀ ನಾರಾಯಣರು. ದಿನೇಶ್ ಕನ್ನಂಬಾಡಿ ಅವರ ಕೈಚಳಕ. ವಿಕಿಪೀಡಿಯಾ ಕೃಪೆ.

ಕೊ: ನೆನ್ನೆ ತಾನೇ ಈ ಹಾಡಿನ ಬಗ್ಗೆ ತೋರಿಕೊಟ್ಟ ತುಳಸೀವನದ ತ್ರಿವೇಣಿಯವರಿಗೆ ಧನ್ಯವಾದಗಳು.

ಕೊಕೊ: ಇದೊಂದು ಹರಟೆಯಷ್ಟೇ! ಅದನ್ನು ಗಮನದಲ್ಲಿಟ್ಟು ಓದಿಕೊಳ್ಳಿ :)

Rating
No votes yet

Comments