ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)

ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)

ನನ್ನ ಮೊದಲ ಮಗಳು ಗೌರಿ ಹುಟ್ಟಿದ್ದು ೨೦೦೨ರ ಏಪ್ರಿಲ್ ೧೯ರಂದು.

ಹಿಂದಿನ ರಾತ್ರಿಯೇ ರೇಖಾಳಿಗೆ ಹೆರಿಗೆ ನೋವು ಪ್ರಾರಂಭವಾಗಿದ್ದಾಗಲಿ, ಬೆಳಿಗ್ಗೆ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾಗಲಿ ಯಾರೂ ನನಗೆ ಹೇಳಿರಲಿಲ್ಲ. ಆಗ ನಾನು ಆಫೀಸ್‌ನಲ್ಲಿದ್ದೆ. ಸುದ್ದಿ ತಿಳಿದಾಗ ಬೆಳಿಗ್ಗೆ ೯ ಗಂಟೆ. ತಕ್ಷಣ ಆಸ್ಪತ್ರೆಗೆ ಹೋದೆ.

ಮೊದಲಿನಿಂದಲೂ ನನಗೆ ಆಸ್ಪತ್ರೆಗಳು ಎಂದರೆ ಅಲರ್ಜಿ. ಇದುವರೆಗೆ ಬಂದ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಂದ ಔಷಧಿಗಳು ನನ್ನನ್ನು ದೈಹಿಕವಾಗಿ ಹುಷಾರು ಮಾಡಿವೆಯಾದರೂ, ಆಸ್ಪತ್ರೆಗಳಲ್ಲಿ ನಾನು ಕಳೆದ ಅವಧಿ ತುಂಬ ಕಡಿಮೆ. ಯಾವಾಗ ಅಲ್ಲಿಂದ ಹೊರಬರುತ್ತೇನೋ ಎಂಬ ಭಾವನೆಯೇ ಯಾವಾಗಲೂ. ರೇಖಾ ಗರ್ಭಿಣಿಯಾಗಿದ್ದಾಗ ಆಗೀಗ ಆಸ್ಪತ್ರೆಗೆ ಹೋಗಿದ್ದೆನಾದರೂ ಆ ಭಾವನೆಯೇನೂ ನನ್ನನ್ನು ಬಿಟ್ಟಿರಲಿಲ್ಲ. ಈಗಲೂ ಅಂಥದೇ ಭಾವನೆಯಿಂದ ಆಸ್ಪತ್ರೆಗೆ ಹೋದೆ.

ಚೊಚ್ಚಲ ಹೆರಿಗೆ ಎಂದರೆ, ಸಾಮಾನ್ಯವಾಗಿ, ಆಸ್ಪತ್ರೆಗಳಿಗೆ ಸುಗ್ಗಿ ಎಂದೇ ಅರ್ಥ. ಮೊದಲ ಮಗು ಬರುವ ಸಂಭ್ರಮ ನಮ್ಮದಾದರೆ, ಅದನ್ನು ಬಳಸಿಕೊಂಡು ಗರಿಷ್ಠ ಮಟ್ಟಕ್ಕೆ ಸುಲಿಯಬಹುದು ಎಂಬ ಸಂಭ್ರಮ ವೈದ್ಯರದು. ಬಸಿರು ನಿಂತಿದ್ದು ಗ್ಯಾರಂಟಿಯಾಗುತ್ತಲೇ ವೈದ್ಯರು ಸುಲಿಯಲು ಸಿದ್ಧರಾಗುತ್ತಾರೆ. ಅವರು ಬರೆಯುವ ಔಷಧಿಗಳ ಪಟ್ಟಿ ನೋಡಿದರೆ, ಹೆಂಡತಿ ಗರ್ಭಿಣಿಯಾಗಿದ್ದಾಳೋ ಅಥವಾ ಆಕೆಗೆ ಯಾವುದಾದರೂ ಗಂಭೀರ ಕಾಯಿಲೆ ಬಂದಿದೆಯೇನೋ ಎಂಬ ಅನುಮಾನ ಹುಟ್ಟುತ್ತದೆ.

’ಇಷ್ಟೊಂದು ಔಷಧಿಗಳು ಬೇಕಾ? ಆಕೆ ಆರೋಗ್ಯವಾಗೇ ಇದ್ದಾಳಲ್ಲ?’ ಎಂದೇನಾದರೂ ಕೇಳಿದರೆ, ನಿಮ್ಮನ್ನು ಗಮಾರ ಎಂಬಂತೆ ದಿಟ್ಟಿಸುತ್ತಾರೆ ವೈದ್ಯರು. ಮಗು ಮತ್ತು ಭಾವಿ ತಾಯಿ ಆರೋಗ್ಯವಾಗಿ ಇರಬೇಕೆಂದರೆ ಇವನ್ನೆಲ್ಲ ತೆಗೆದುಕೊಳ್ಳಲೇಬೇಕು. ನೀವು ಎಷ್ಟೇ ಪೌಷ್ಠಿಕ ಆಹಾರ ಸೇವಿಸುತ್ತಿದ್ದರೂ ಉಪಯೋಗವಿಲ್ಲ ಎಂಬ ಸಿದ್ಧಾಂತ ಅವರದು.

ಹೀಗಾಗಿ ಟಾನಿಕ್ ಸಿರಪ್‌ಗಳು, ಮಾತ್ರೆಗಳು ಧಂಡಿಯಾಗಿ ಬರೆಯಲ್ಪಡುತ್ತವೆ. ಆರೋಗ್ಯವಾಗಿರಬೇಕೆಂದರೆ ವಾಕಿಂಗ್ ಬೇಡ, ಪೌಷ್ಠಿಕ ಆಹಾರ ಬೇಡ, ಔಷಧಿ ಮಾತ್ರ ಸಾಕು ಎಂಬಂತೆ ಉದ್ದುದ್ದ ಪಟ್ಟಿ ಸಿದ್ಧವಾಗುತ್ತದೆ. ಅದನ್ನು ಹಿಡಿದುಕೊಂಡು ಆಸ್ಪತ್ರೆಯ ಭಾಗವೇ ಆಗಿರುವ ಔಷಧ ಅಂಗಡಿಗೆ ಹೋದರೆ, ಪಟ್ಟಿಯ ಉದ್ದವನ್ನು ನೋಡಿಯೇ ಸರ ಸರ ಔಷಧಿಗಳನ್ನು ತೆಗೆದು ಕೌಂಟರ್ ಮೇಲಿಡುವ ಅಂಗಡಿಯಾತ, ಆ ನಂತರವಷ್ಟೇ ಪಟ್ಟಿಯನ್ನು ಸರಿಯಾಗಿ ದಿಟ್ಟಿಸಿ ನೋಡುವುದು. ಅಷ್ಟರ ಮಟ್ಟಿಗೆ ಈ ಔಷಧಿಗಳು ಆತನಿಗೆ ಬಾಯಿಪಾಠ.

’ಇದು ಒಂದು ತಿಂಗಳ ಕೋರ್ಸ್‌ಗೆ. ಮತ್ತೆ ಮುಂದಿನ ತಿಂಗಳು ಚೆಕಪ್‌ಗೆ ಬನ್ನಿ’ ಎಂದು ಮತ್ತೊಂದು ಎನ್‌ಕೌಂಟರ್‌ಗೆ ನಿಮ್ಮನ್ನು ಮಾನಸಿಕವಾಗಿ (ಆಫ್‌ಕೋರ್ಸ್ ಆರ್ಥಿಕವಾಗಿಯೂ) ಸಿದ್ಧ ಮಾಡಿಯೇ ಕಳಿಸಿಕೊಡುತ್ತಾರೆ. ಅಲ್ಲಿಂದ ಆಸ್ಪತ್ರೆ ಸುತ್ತುವ ಕೆಲಸ ಶುರು. ಆರೋಗ್ಯವಾಗಿರುವ ವ್ಯಕ್ತಿಯ ಮನಸ್ಸನ್ನು ಕೆಡಿಸಿ, ಅವನನ್ನು ಅನಾರೋಗ್ಯವಾಗಿಸುವುದೇ ಬಹುತೇಕ ಆಸ್ಪತ್ರೆಗಳ ಅಧಿಕೃತ ಹಾಗೂ ಅನಧಿಕೃತ ಕಾರ್ಯಸೂಚಿ ಎಂದು ನನಗೆ ಯಾವಾಗಲೂ ಅನ್ನಿಸಿದೆ.

- ಚಾಮರಾಜ ಸವಡಿ

Rating
No votes yet