ಹೆಸರಲ್ಲೇ ಎಲ್ಲಾ ಇದೆ!

ಹೆಸರಲ್ಲೇ ಎಲ್ಲಾ ಇದೆ!

ರೂಪಮಂಜುನಾಥ್ ಇವತ್ತು ಸಂಪದದಲ್ಲಿ ಒಂದು ಲೇಖನ ಬರೆದಿದ್ದಾರೆ." ನಿಮ್ಮ ಹೆಸರೇನು? " ಲೇಖನ ಓದಿದಾಗ ನಮ್ಮೂರಲ್ಲಿ ಈಗಲೂ ಚಾಲ್ತಿಯಲ್ಲಿರುವ  ವಿಚಿತ್ರವಾದ ಹೆಸರುಗಳು ನೆನಪಿಗೆ ಬಂತು .ಅಷ್ಟನ್ನೂ ಪ್ರತಿಕ್ರಿಯೆಯಲ್ಲಿ ಬರೆಯುವ ಬದಲು ಪ್ರತ್ಯೇಕ ಬರಹ ಮಾಡಿರುವೆ.

"ಸಣ್ಣದು"  ಅಂತಾ ನಮ್ಮೂರಲ್ಲಿ ಒಬ್ಬರು ಇದ್ದಾರೆ.ಅವರ ವಯಸ್ಸು ಅರವತ್ತು  ದಾಟಿದೆ.ಊರ ಮಕ್ಕಳು ಸಣ್ಣದು ತಾತ  ಅಂತಾ ಕರೆದರೆ ಜನರೆಲ್ಲಾ ಸಣ್ಣದು ಅಂತಾಲೇ ಕರೆಯೋದು.

" ಅಣ್ಣ ಮಾವ" - ಎಷ್ಟು ವಿಚಿತ್ರ ವಾಗಿದೆಯಲ್ಲವೇ? ಆದರೂ ಈ ಹೆಸರಲ್ಲಿ ಒಬ್ಬರು ಇದ್ದರು. ತಂಗಿ ಅಣ್ಣಾ ಅಂತ ಕರೆದರೆ ತಂಗಿ ಮಕ್ಕಳು ಮಾವ ಅಂತಾ ಕರೆದರು, ಉಳಿದವರಿಗೆ ಅವರು ಅಣ್ಣಮಾವ ಆದರು. ಊರೆಲ್ಲಾ ಹಾಗೇ ಕರೆಯುತ್ತಿದ್ದರು.

ಪಿಡ್ಡೆ ರಾಜ, ಲಕ್ಕಡಿ, ಪೂರ್ಲಯ್ಯ, ವಕ್ಕಲರಾಗಿಹಲಗ, ಈರತ್ತನ ಜವರ, ಕುಟಿಯಾ,ಕಿವಡಿನಿಂಗ, ಸಣ್ಣತಮ್ಮ ........ಇವೆಲ್ಲಾ ನಮ್ಮೂರಲ್ಲಿ ಈಗಲೂ ಬಳಕೆಯಲ್ಲಿರುವ ಹೆಸರು. ನಮ್ಮೂರ ಪಟೇಲರ ಹೆಸರೇ ಗೆಡ್ಡೆ.ಅವರಿಗೆ ಹುಚ್ಚೇಗೌಡ ಅಂತಾ ಹೆಸರಿದ್ದರೂ ಜನ ಹಾಗೆ ಕರೀತಿದ್ರು. ನಮ್ಮತ್ತೆ ಪುಟ್ಟನಂಜು,ಇನ್ನೊಬ್ಬರು ಎನ್ಟಿ.  ಭಾವೀಕಟ್ಟೆ ಸೂರಪ್ಪ, ಅಂಗಡಿ ಸೂರಪ್ಪ, ಮಿರ್ಲೆ ಸೂರಪ್ಪ,ಓಣಿಮನೆ ಸೂರಪ್ಪ...ಹೀಗೆ ನಾಲ್ಕು ಜನ ಸೂರಪ್ಪ ನಮ್ಮೂರಲ್ಲಿ. ನಮ್ಮೂರಲ್ಲಿ ಒಬ್ಬರು " ಮೋಟಾರು" ಕೂಡ ಇದ್ದಾರೆ. ಅರವತ್ತೆಪ್ಪತ್ತು ವರ್ಷಗಳಲ್ಲಿಮೊದಲ ಬಾರಿಗೆ ಒಂದು ಮೋಟಾರ್ ಗಾಡಿ ನಮ್ಮೂರಿಗೆ ತಂದ ನಿಂಗಪ್ಪನೋರು ಮುಂದೆ ಮೋಟಾರುಆಗಿಬಿಟ್ಟರು. ಮಟದಯ್ಯ ಕೂಡ ನಮ್ಮೂರಲ್ಲಿದ್ದಾರೆ. ಅವರಮನೆಯಲ್ಲಿ ಶಾಲೆಗೆ ಹೋದ ಮೊಟ್ಟ ಮೊದಲಿಗರಾದ ನಂಜೇಗೌಡರಿಗೆ ಅವರ ಮನೆಯಲ್ಲಿ ಮಟದಯ್ಯ ಅಂತಾನೇ ಈಗಲೂ ಕರೆಯೋದು. ಹರಿಜನ ಕುಟುಂಬದಲ್ಲಿ ಕೆಲವರಿದ್ದಾರೆ. ಅವರೆಲ್ಲರ ಹೆಸರು ದೊಡ್ದ, ಚಿಕ್ಕ, ಸಣ್ಣ , ಕುಳ್ಳ,ಕರಿಯ,ಡೊಳ್ಳ, ಹೆಣವ, ಹೀಗೆ ಸಾಕಷ್ಟು ಹೆಸರುಗಳನ್ನು ಪತ್ತೆ ಮಾಡ ಬಹುದು. 

ಹಿಂದಿನ ದಿನಗಳಲ್ಲಿ ಊರಿನ ದೊಡ್ಡ ವ್ಯಕ್ತಿಗಳು  ಊರಿನ ಜನರನ್ನು ತಮಗಿಷ್ಟ ಬಂದಂತೆ ಕರೆದರೂ ಯಾರೂ ಬೇಸರ ಪಡುತ್ತಿರಲಿಲ್ಲ. ಮಕ್ಕಳಿಗೆ ದೇವರ ಹೆಸರನ್ನು ಇಟ್ಟರೆ ಆ ಮೂಲಕ ವಾದರೂ ಭಗವಂತನ ಸ್ಮರಣೆ ಮಾಡಬಹುದೆಂಬ ಚಿಂತನೆ ಸಾಮಾನ್ಯಜನರಲ್ಲಿದ್ದರೂ  ಹರಿಜನ ಕುಟುಂಬ ದಲ್ಲಂತೂ ಮಕ್ಕಳಿಗೆ ದೇವರ ಹೆಸರಿಟ್ಟಿರುವುದನ್ನು ಕಾಣಲಾರೆವು. ಹಿಂದೆ ಸಮಾಜದಲ್ಲಿ ಒಂದು ವರ್ಗದ ಜನರು ಎಷ್ಟು ಕೀಳರಿಮೆಯಿಂದ ಬಾಳ್ಮೆ ನಡೆಸುತ್ತಿದ್ದರೆಂಬುದಕ್ಕೆ  ಅವರ ಹೆಸರುಗಳು ಈಗಲೂ ಸಾಕ್ಷಿಯಾಗಿ ಉಳಿದಿವೆ.ಅಂತಹಾ ಕೀಳರಿಮೆ  ಈಗ ಮಾಯವಾಗುತ್ತಿರುವುದು ಸಮಾಧಾನದ ಸಂಗತಿ ಯಾಗಿದೆ.

 

 

Rating
No votes yet