ಹೆಸರಿನಲ್ಲೇನಿದೆ ಅಂತೀರಾ?

ಹೆಸರಿನಲ್ಲೇನಿದೆ ಅಂತೀರಾ?

ದು ವರ್ಷ ಹಿಂದಿನ ಮಾತು. ಒಂದು ಪೈಪಿಂಗ್ ಕೆಲಸದ ಕಂಪೆನಿಯಲ್ಲಿ ಡಿಸೈನ್ ಚೆಕ್ಕರ್ ಆಗಿ ಬಹರೈನ್‌ಗೆ ಬಂದಿದ್ದ ನನಗೆ ತಪಾಸಣೆ ಮಾಡಿದ ಎಲ್ಲಾ ಡಿಸೈನಿನ ಮೇಲೆ ಹಸ್ತಾಕ್ಷರ ಮಾಡಬೇಕಿತ್ತು. ಅದಕ್ಕೆ ನನ್ನ ಹೆಸರಿನ ಮೊದಲ ಮೂರು ಇಂಗ್ಲೀಷ್ ಅಕ್ಷರಗಳನ್ನು ಹೆಕ್ಕಿ, ಜೋಡಿಸಿ "ಎಮ್ಮೆಸ್ಸೆಸ್" ಅಂತ ಗೀಚಿದ್ದೆ. ಕಂಪೆನಿಯಲ್ಲಿ ಎಲ್ಲರೂ ಅವರವರ ಇನೀಷಿಯಲ್ಲಿನಿಂದ ತಮ್ಮ ಹೆಸರನ್ನು  ಬರೆಯುತ್ತಿದ್ದರು. ಬಿಹಾರದಿಂದ ಬಂದಿರುವ ಶಾರದಾನಂದ್ "ಎಸ್" ಬರೆದರೆ ಇಲ್ಲಿಯವನೇ ಆದ ಅಹ್ಮದ್ ಸಿಂಪಲ್ಲಾಗಿ "ಎ" ಎಂದು ಬರೆಯುತ್ತಿದ್ದ. ಯಾರೂ ಅವರನ್ನು ಆ ಹೆಸರುಗಳಿಂದ ಕರೆಯುತ್ತಿರಲಿಲ್ಲ. ಆದರೆ ಈ "ಎಮ್ಮೆಸ್ಸೆಸ್" ಏನು ಮೋಡಿ ಮಾಡಿತೋ ಗೊತ್ತಿಲ್ಲ, ಇಲ್ಲಿ ಎಲ್ಲರೂ ನನ್ನನ್ನು ಇದೇ ಹೆಸರಿನಿಂದ ಕರೆಯತೊಡಗಿದರು!

ಈ ಹೆಸರಿನ ಶಾರ್ಟ್ ಫಾರ್ಮ್‌ನಿಂದ ನನಗೆ ಕೆಲವೊಮ್ಮೆ ಕಿರಿಕಿರಿಯಾಗುತ್ತಿರುತ್ತದೆ. ಕಂಪೆನಿಯಲ್ಲಿ ನನ್ನನ್ನು ಹೀಗೆ ಕರೆದಾಗ ಕಾಲೇಜಿನಲ್ಲಿ ನಾವು ಜೋರಿನ ಪ್ರಾಧ್ಯಾಪಕರಿಗೆ, ಕೆಲವು ನತದೃಷ್ಟ ಗೆಳೆಯರಿಗೆ ಇಡುತ್ತಿದ್ದ ಅಡ್ಡತಿಡ್ಡ ಹೆಸರುಗಳ ನೆನಪಾಗಿ ಅದರಿಂದ ಅವರಿಗೆ ಎಷ್ಟು ಕಿರಿಕಿರಿಯಾಗಿದ್ದಿರಬಹುದೆಂಬ ಯೋಚನೆಯೂ ಬರುತ್ತದೆ. ಬರೇ ಅಧ್ಯಾಪಕರಿಗಲ್ಲ, ಕಾಲೇಜಿನಲ್ಲಿದ್ದಾಗ ಅಕ್ಕಪಕ್ಕದ ಎಲ್ಲಾ ವಸ್ತುಗಳಿಗೆ, ಬಸ್ಸುಗಳಿಗೆ, ಹೋಟೇಲುಗಳಿಗೆ, ದೈನಂದಿನ ಮಾತುಕತೆಗಳಲ್ಲಿ ಬರುವ ಎಲ್ಲಾ ಸಜೀವ, ನಿರ್ಜೀವ ವಸ್ತುಗಳಿಗೆ ಒಂದು ಚಿಕ್ಕದಾದ, ನಾಲಗೆಗೆ ಹೆಚ್ಚು ಉಪದ್ರವ ಕೊಡದ ಹೆಸರುಗಳಿದ್ದವು. ಅದರಲ್ಲಿನ ಕೆಲವು ಹೆಸರುಗಳ ಬಗ್ಗಿನ ಚಿಕ್ಕ ಬರಹ ಇಲ್ಲಿದೆ ಓದಿ...
       
ಮಂಗಳೂರಿನಿಂದ ಐವತ್ತು ಕಿಲೋಮೀಟರ್ ದೂರದಲ್ಲಿರುವ "ನಿಟ್ಟೆ"ಯೆಂಬ ಪುಟ್ಟ ಗ್ರಾಮದಲ್ಲಿರುವ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಾನು ಪದವಿ ಮುಗಿಸಿದ್ದು. ನನ್ನ ಬದುಕಿನ ಮರೆಯಲಾಗದ ಹಲವಾರು ಸವಿನೆನಪುಗಳಲ್ಲಿ ಈ "ನಿಟ್ಟೆ"ಯ ನೆನಪುಗಳದ್ದೇ ಸಿಂಹಪಾಲು. ನನ್ನೂರು ಉಡುಪಿಯಿಂದ ಅದು ಸುಮಾರು ನಲುವತ್ತರಿಂದ ಐವತ್ತು ಕಿಲೋಮೀಟರ್ ದೂರವಿದೆ. ಕಾಲೇಜ್ ಹೋಗಲು NH 17 ರಲ್ಲಿ ಇಪ್ಪತ್ತೈದು ಕಿಲೋಮೀಟರ್‌ನಷ್ಟು ಉಡುಪಿ-ಮಂಗಳೂರು ವೇಗ(ಯಮ)ದೂತ ಬಸ್ಸಿನಲ್ಲಿ ಪಡುಬಿದ್ರಿಯೆಂಬ ಊರಿಗೆ ಪ್ರಯಾಣಿಸಿ ಮತ್ತೆ ಅಲ್ಲಿಂದ ಮಂಗಳೂರು-ಕಾರ್ಕಳ ವೇಗದೂತ ಬಸ್ಸು ಹಿಡಿದು ಹೋಗಬೇಕಿತ್ತು. ಹೋಗಲು ಇತರ ದಾರಿಗಳಿದ್ದರೂ ಈ ಮಾರ್ಗದಿಂದ ಪ್ರಯಾಣಿಸಿದರೆ ಬೇಗ ಮುಟ್ಟಬಹುದಿತ್ತು. ಈ ಮಾರ್ಗದ ಹೆಚ್ಚುಕಡಿಮೆ ಎಲ್ಲಾ ಬಸ್ಸುಗಳಿಗೆ ಕಾಲೇಜಿನ ಹುಡುಗರು ಅವರದೇ ಆದ ಶಾರ್ಟ್-ನೇಮುಗಳನ್ನಿಟ್ಟಿದ್ದರು.


ಬೆಳಗ್ಗೆ ಮೊದಲು ಬರುವ ಬಸ್ಸಿನ ಹೆಸರು "ಪದ್ಮಾಂಬಿಕಾ". ಈ ಪುಣ್ಯಾತ್ಮ ಬಸ್ಸು ಮರುನಾಮಕರಣಗೊಂಡಿರಲಿಲ್ಲ. ಎಲ್ಲರೂ ಪದ್ಮಾಂಬಿಕಾ ಎಂದೇ ಕರೆಯುತ್ತಿದ್ದರು. ಕಾಲೇಜಿನ ಹೆಚ್ಚು ವಿದ್ಯಾರ್ಥಿಗಳು ಈ ಬಸ್ಸಿನ ಬಗ್ಗೆ ಮಾತನ್ನಾಡಿಕೊಳ್ಳುತ್ತಿರಲಿಲ್ಲ. ಏಕೆಂದರೆ ಅದರಲ್ಲಿ  ಬರೇ ಮೂರು ತರಹದ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು. ೧. ರಾತ್ರಿಯಿಡೀ ಮೊಬೈಲಿನಲ್ಲಿ ಮಾತನಾಡಿ ಬೆಳಗ್ಗೆ ಬೇಗನೇ ಬಂದು ಒಬ್ಬರಿಗೊಬ್ಬರು ಅಂಟಿಕೊಂಡು ಪ್ರಯಾಣಿಸುವ ಕೆಲವು "ಜೋಡಿಹಕ್ಕಿ"ಗಳು ೨. ಬೇಗ ಕಾಲೇಜಿಗೆ ಬಂದು ಲೈಬ್ರೆರಿಯಲ್ಲಿ ಒಂದು ಗಂಟೆ ಕಳೆದು ಮುಂದಿನ ಡೆಸ್ಕುಗಳಲ್ಲಿ ಕುಳಿತುಕೊಳ್ಳುವ, ಕಲಿಯಲೆಂದೇ ಕಾಲೇಜಿಗೆ ಬರುವ "ಬ್ರೇನಿ"ಗಳು. ೩. ಬೇಗ ಕಾಲೇಜಿಗೆ ಮುಟ್ಟಿ ಬಸ್ಟಾಂಡಿನಲ್ಲೇ ಉಳಿದು ಮುಂದೆ ಬರಲಿರುವ ಹುಡುಗಿಯರ ಫಿಗರುಗಳ ಕಣ್ಣಿನಲ್ಲೇ ಸುತ್ತಳತೆ ತೆಗೆಯುವ ಪಡ್ಡೆ ಹುಡುಗರು. ಈ ಮೂರು ವಿಧದ ವಿದ್ಯಾರ್ಥಿಗಳನ್ನು ಬಿಟ್ಟರೆ  "ಈ ಬಸ್ಸುಗಳೆಲ್ಲಾ ತುಂಬಿವೆ, ಬೇಗ ಬರುವ ಪದ್ಮಾಂಬಿಕಾ ಖಾಲಿ ಇರಬಹುದೇನೋ" ಎಂಬ ಭ್ರಾಂತಿಯಿಲ್ಲಿ ಬೇಗ ಬಂದು ಅದೂ ತುಂಬಿರುವುದನ್ನು ನೋಡಿ ಕಂಗೆಟ್ಟು, ಕೊನೆಗೆ ಫುಟ್ ಬೋರ್ಡಿಗೆ ಜೋತು ಬೀಳುತ್ತಿದ್ದ ಒಂದು ಕಾಲಿನ ತಪಸ್ವಿಗಳೂ, ಹಾಯಾಗಿ ಬಸ್ಸಿನ ಮೇಲೆ ಹತ್ತಿ ಕುಳಿತುಕೊಂಡು ಪ್ರಯಾಣಿಸುವ (ಇದರಲ್ಲಿ ನಾನೂ ಒಬ್ಬ!) ಬಾಲ್ಕನಿ ಪ್ರಯಾಣಿಕರೂ ಕೆಲವೊಮ್ಮೆ ಅದರೊಳ(ಹೊರ)ಗೆ ಕಾಣಲು ಸಿಗುತ್ತಿದ್ದರು. ಆದ್ದರಿಂದ ಅದರ ಹೆಸರು ಬದಲಾಗಿರಲಿಲ್ಲವೆಂಬ ಬಲವಾದ ನಂಬಿಕೆ ನನ್ನದು.
ನಂತರ ಬರುವ ಬಸ್ಸು "ಭ್ರಮರಾಂಬಿಕಾ". ಅಂದರೆ "ಭ್ರಮ್ಸ್". ಇದರ ಸುಮಾರು ಒಂದು ಘಂಟೆಯಾದ ಬಳಿಕ ಇನ್ನೊಂದು "ಭ್ರಮ್ಸ್" ಕೂಡಾ ಬರಲಿಕ್ಕಿರುವ ಕಾರಣ ಇದು "ಭ್ರಮ್ಸ್-ಫರ್ಸ್ಟ್". ಈ ಬಸ್ಸು ಪದ್ಮಾಂಬಿಕದಂತಿರಲಿಲ್ಲ. ಪದ್ಮಾಂಬಿಕಾ ಟಾಟಾ ಆದರೆ ಇದು ಅಶೋಕ್ ಲೈಲ್ಯಾಂಡ್ ಕಂಪೆನಿಯಿಂದ ನಿರ್ಮಿತ ಬಸ್ಸು. ಸ್ವಲ್ಪ ಉಬ್ಬಿದ ಮೈಗೆ ಹಸಿರು ಆಯಿಲ್-ಪೇಂಟ್  ಹಚ್ಚಿಕೊಂಡು ಓಡುತ್ತಿದ್ದ ಈ ಬಸ್ಸು  ಹಸಿರು ಸೀರೆಯುಟ್ಟ ಮುತ್ತೈದೆಯಂತೆ ಗೋಚರಿಸಿ ಹೋಗುವ ದಾರಿಯುದ್ದಕ್ಕೂ ನೋಡುವವರ ಕಣ್ಣಲ್ಲಿ ಕಂಗೊಳಿಸುತ್ತಿತ್ತು. ಏಕೋ! ಕಾಲೇಜಿನ ಹೆಚ್ಚಿನ ಸುರಸುಂದರಿಯರನ್ನು ಇದೇ ತನ್ನ ಹೊಟ್ಟೆಯೊಳಗೆ ಹೊತ್ತು ತರುತ್ತಿತ್ತು. ಆದ್ದರಿಂದಲೇ ಪಡ್ಡೆ ಹುಡುಗರೆಲ್ಲಾ ಇದರ ಹಿಂದಿನ ಪದ್ಮಾಂಬಿಕಾದಲ್ಲೇ ಬಂದು ಕಾಯುತ್ತಿದ್ದರು.
ಇದಾದ ನಂತರ ಬರುವ ಮೂರು ಬಸ್ಸುಗಳು ಒಂದೇ ಮಾಲಕತ್ವದ್ದು. ಹೆಸರು "ನವದುರ್ಗಾ". ಕಾಲೆಜ್ ಹುಡುಗರು ಪ್ರೀತಿಯಿಂದ ಈ ಬಸ್ಸುಗಳಿಗೆ ಅದರ ಇನೀಷಿಯಲ್ಲನ್ನು ಬಳಸಿ "ಎನ್‌ಡಿ"ಯೆನ್ನುತ್ತಿದ್ದರು. "ಎನ್‌ಡಿ ವನ್"  "ಎನ್‌ಡಿ ಟು" ಮತ್ತು "ಎನ್‌ಡಿ ತ್ರೀ" ಇದರ ಪ್ರತ್ಯೇಕ ಹೆಸರುಗಳು. "ಎನ್‌ಡಿ ಟು" ಮತ್ತು "ಎನ್‌ಡಿ ತ್ರೀ"ಗಳ ನಡುವೆ "ಭ್ರಮ್ಸ್-ಸೆಕೆಂಡ್"ನ ಆಗಮನವಾಗುತ್ತಿತ್ತು. ಇದರಲ್ಲೂ ಹುಡುಗಿಯರೇ ಹೆಚ್ಚು.  ಕೆಲವು ಹುಡುಗರಿಗೆ "ಎನ್‌ಡೀ" ಕರೆಯಲೂ ಉದ್ದವಾಗಿ ಕಂಡು ಬರೇ "ಫಸ್ಟ್" "ಸೆಕೆಂಡ್" ಹಾಗೂ "ಥರ್ಡ್" ಎಂದು ಇನ್ನಷ್ಟು ತುಂಡರಿಸಿ ಪುನರ್‌ನಾಮಕರಣ ಮಾಡಿಬಿಟ್ಟಿದ್ದರು. ತಮ್ಮ ಬಸ್ಸಿನಲ್ಲಿ ಪ್ರತಿದಿನ ಪ್ರಯಾಣಿಸುವ ಹುಡುಗಿಯರು ಬಸ್ಟಾಂಡಿನಲ್ಲಿಲ್ಲದನ್ನು ನೋಡಿ "ಶಿಟ್... ಫಸ್ಟ್ ಮಿಸ್ಸಾಂಡ್‌ಯ ಸೆಕೆಂಡ್‍ಡ್ ಪೋಯಿ" (ಫಸ್ಟ್ ಮಿಸ್ಸಾಯ್ತು ಸೆಕೆಂಡಲ್ಲಿ ಹೋಗೋಣ) ಅಂತೆಲ್ಲಾ ಅವರು ಮಾತನಾಡಿಕೊಳ್ಳುತ್ತಿದ್ದರು.
"ಥರ್ಡ್‌"ನಲ್ಲಿ ಬರೇ ಹುಡುಗರದೇ ರಾಜ್ಯ. ಇದರಲ್ಲಿ ಬರುವ ಅರ್ಧ ಹುಡುಗರು ಮೊದಲ ಅವರ್ ಬಂಕ್ ಮಾಡುವ ಇರಾದೆಯುಳ್ಳವರಾದರೆ ಇನ್ನರ್ಧ ಹುಡುಗರಿಗೆ ಲೇಟಾದರೆ ಸರ್ "ಗೆಟೌಟ್" ಹೇಳಬಹುದೋ ಎಂಬ ಭಯ. ಕಾರಣ ಅದು ಸರಿಯಾಗಿ ಕಾಲೇಜ್ ಶುರುವಾಗೋ ಹೊತ್ತಿಗೆ ನಿಟ್ಟೆಗೆ ತಲುಪುತ್ತಿತ್ತು. ಅಪ್ಪಿತಪ್ಪಿ ವಿಳಂಬವಾಗಿ ಮುಟ್ಟಿದರೆ ಮೊದಲ ಅವರ್ ಗೋತಾ. ಆದ್ದರಿಂದ ಕೆಲವು "ಬೋಲ್ಡ್ ಆಂಡ್ ಬ್ಯೂಟಿಫುಲ್" ಚೆಲುವೆಯರು ಆಗೊಮ್ಮೆ ಈಗೊಮ್ಮೆ ಹತ್ತಿಕೊಳ್ಳುವುದನ್ನು ಬಿಟ್ಟರೆ ಇದರಲ್ಲಿರುವವರು ಬರೇ "ಬ್ಯಾಡ್ ಬಾಯ್ಸ್".
ಈ ಬೆಳಗ್ಗಿನ ಬಸ್ಸುಗಳಲ್ಲಿ ವಿದ್ಯಾರ್ಥಿಗಳನ್ನು ಬಿಟ್ಟರೆ ಬೇರೆ ಪ್ರಯಾಣಿಕರು ಪ್ರಯಾಣಿಸುವುದು ತೀರಾ ಕಡಿಮೆ. ಅಪ್ಪಿತಪ್ಪಿ ಸೇರಿಕೊಳ್ಳುವ ಪ್ರಯಾಣಿಕರು ಭಾರತದ ಗಡಿ ದಾಟಿ ಪಾಕಿಸ್ತಾನಕ್ಕೆ ಬಂದವರಂತೆ ಒಮ್ಮೆ ಇಡೀ ಬಸ್ಸನ್ನು ಭಯ ಮಿಶ್ರಿತ ಆಶ್ಚರ್ಯದೊಂದಿಗೆ ದಿಟ್ಟಿಸುತ್ತಿದ್ದರು. "ಯಾವುದೋ ಕಾಲೇಜ್ ಬಸ್ಸಿಗೆ ಹತ್ತಿಬಿಟ್ಟೆನೇನೋ" ಎಂಬ ಆತಂಕ ಅವರಿಗೆ. ಕಂಡಕ್ಟರ್ ಬಂದು "ಟಿಕೆಟ್ ಕೊರ್ಲೆ" (ಟಿಕೆಟ್ ಕೊಡಿ) ಹೇಳಿದ ಮೇಲೆ  "ಓ ಕಾಲೇಜ್ ಬಸ್ಸಲ್ಲ" ಎಂದು ಯೋಚಿಸುತ್ತಾ ಒಂದು ನೋಟು ಅವನೆಡೆಗೆ ಚಾಚಿ "ಒಂಜಿ ಕಾರ್ಲಾ(ಕಾರ್ಕಳ)" ಎಂದು ನಿಟ್ಟುಸಿರು ಬಿಡುತ್ತಿದ್ದರು.
ಈ ಬಸ್ಸುಗಳಿಂದಿಳಿದು ಕಾಲೇಜಿಗೆ ಹೊಕ್ಕರೆ ಕಲಿಯುವ ಪ್ರತಿ ವಿಷಯಕ್ಕೆ, ಅವನ್ನು ಕಲಿಸುವ ಪ್ರತಿ ಲೆಕ್ಚರರ್ಸ್‌ಗೆ ಇನೀಷಿಯಲ್ಲುಗಳೇ ಅನ್ವರ್ಥನಾಮಗಳು. (ಅಧ್ಯಾಪಕರ ಹೆಸರುಗಳ ಕಥೆ ಹೇಳಲು ನಾನಿಚ್ಛಿಸುವುದಿಲ್ಲ ಇಲ್ಲಿ. ಈಗಲಾದರೂ ಅವರ ಬಗ್ಗೆ ಅಲ್ಪ ಸ್ವಲ್ಪ ಆದರವಿರದಿದ್ದರೆ ಹೇಗೆ ಹೇಳಿ). ಹೀಗೆ ನಾವು ಕಲಿಯುತ್ತಿದ್ದ "ಸ್ಟ್ರೆಂತ್ ಆಫ್ ಮೆಟೀರಿಯಲ್ಸ್" "ಸೋಮ್", "ಥಿಯರಿ ಆಫ್ ಮೆಷೀನ್ಸ್" -ಟಾಮ್ ಒನ್" "ಟಾಮ್ ಟು", ಆದರೆ "ಪ್ರೊಡಕ್ಷನ್ ಆಪರೇಷನ್ ಮ್ಯಾನೇಜ್‌ಮೆಂಟ್" "ಪಾಮ್" ಆಯಿತು.
ಕಂಪ್ಯೂಟರ್ಸ್ ಹುಡುಗರಿಗೆ ಪುಸ್ತಕ ಮುದ್ರಿಸುವವರೇ ಅಥವಾ ಆ ವಿಷಯ ಕಂಡುಹುಡುಕಿದವರೇ ಒಂದು ಸುಲಭದ ಹೆಸರನ್ನಿಡುತ್ತಿದ್ದರು. "ಸಿ" "ಸಿ ++" "ಊಪ್ಸ್" "ಜಾವಾ" ಹೀಗೆಲ್ಲಾ ಪಠ್ಯ ಪುಸ್ತಕದಲ್ಲೇ ನಾಮಗಳು ನಿರ್ನಾಮವಾಗಿ ಬರುತ್ತಿದ್ದವು. ಸಿವಿಲ್, ಇಲೆಕ್ಟ್ರಾನಿಕ್ಸ್ ವಿಭಾಗದವರ ನಾಮಪುರಾಣದ ಪುಟಗಳನ್ನು ತಿರುವಿದ್ದಲ್ಲಿ ಇಂತಹ ಅಧ್ಯಾಯಗಳೇ ನಮಗೆ ಸಿಗುತ್ತವೆ.
ಕಾಲೇಜಿನಿಂದದ ಹೊರಗೆ ಬಂದರೆ ಅಲ್ಲಿರುವ ಹೋಟೇಲುಗಳಿಗೂ ನಾನಾ ನಾಮಗಳು. "ಶ್ರೀ ದೇವಿ ಪ್ರಸಾದ್" -"ಡೀಪಿ", "ಮೀಟಿಂಗ್ ಪಾಯಿಂಟ್" -"ಎಂಪಿ" ಮತ್ತು ಕಾಲೇಜಿಂದ ಕೊಂಚ ದೂರವಿದ್ದ "ಉಷಾ ಕಿರಣ್" ಎಂಬ ವಸತಿಗೃಹ ಹಾಗೂ ಊಟದ ಹೋಟೇಲು ನಮಗೆಲ್ಲಾ "ಯೂಕೆ" (UK). ಅದರ ಹತ್ತಿರವೇ ಒಂದು ಆಡಲು "ಸ್ನೂಕರ್ ಜಾಯಿಂಟ್", "ಬಾರ್" ಕೂಡಾ ಇದ್ದುದರಿಂದ, ಅದರಲ್ಲಿ ವಾಸಿಸೋ ಹುಡುಗರಿಗೆ ಚಂದ ಚಂದದ ಮಾಡರ್ನ್ "ಗರ್ಲ್ ಫ್ರೆಂಡ್ಸ್‌"ಗಳಿದ್ದುದರಿಂದ, UK ಹೆಸರು ಅದಕ್ಕೆ ಚೆನ್ನಾಗಿ ಒಗ್ಗುತ್ತಿತ್ತು. "ಇನಿ UKಡ್ ವನಸ್" (ಇವತ್ತು UKಯಲ್ಲಿ ಊಟ) ಹೇಳುವಾಗ ಒಂಥರಾ ಗತ್ತು ಎಲ್ಲರಿಗೆ. ಕಾಲೇಜಿನ ಹಿಂದಿದ್ದ "ಶೆಟ್ಟಿ"ಯ ಮನೆಗೆ ಅಂಟಿಕೊಂಡಿದ್ದ ಹೋಟೇಲಿಗೆ ಅವನು ಹೆಸರಿಡುವ ಮುನ್ನವೇ ಕೆಲವು ಪುಂಡರು "ಶೆಟ್ಟೀಸ್" ನಾಮಕರಣ ಮಾಡಿಬಿಟ್ಟಿದ್ದರು. ಈ  ಹೆಸರಿನಿಂದಲೇ ತೃಪ್ತಿ ಪಟ್ಟ ಆತ ತನ್ನ ಹೋಟೇಲಿಗೆ ನಾಮ ಫಲಕವೇ ಹಾಕಿಸಿರಲಿಲ್ಲ. (ಈಗ ಹಾಕಿಸಿದ್ದಾನೋ ಗೊತ್ತಿಲ್ಲ)
ಹಾಸ್ಟೆಲಿನ ಹುಡುಗರು ಬೆಳಗ್ಗೆ ತಡವಾಗಿ ಕಣ್ಣು ದಪ್ಪದಪ್ಪಗೆ ಮಾಡಿಕೊಂಡು ತರಗತಿಗಳಿಗೆ ಬಂದರೆ ಅಥವಾ ಬಸ್ಸಿನಲ್ಲಿ ಬರುವ ಹುಡುಗರು ಸಂಜೆ ಹಿಂತಿರುಗುವಾಗ ಬಸ್ಸಿನಲ್ಲಿ ವಾಕರಿಕೆ , ವಾಂತಿ ಮಾಡಿದ್ದಲ್ಲಿ ಎಲ್ಲರೂ ಅವನಿಗೆ ಪಾಪ "ಟೀಬಿ ಇಫೆಕ್ಟ್"  ಎಂದನಿಸಿಕೊಳ್ಳುತ್ತಿದ್ದರು. ಹೇ... ಅಲ್ಲಲ್ಲ... "ಟಿಬಿ" ನೀವೆನಿಸಿದಂತೆ "ಟ್ಯುಬರ್ ಕ್ಯುಲೋಸಿಸ್" ರೋಗವಲ್ಲ. ಇದು ನಿಟ್ಟೆಯ "ತುಳಸೀ ಬಾರ್"ನ ಚಿಕ್ಕ ಹಾಗೂ ಚೊಕ್ಕ ಹೆಸರು. ಇಲ್ಲಿ ಸಿಕ್ಕಾಪಟ್ಟೆ ಕುಡಿದು ಹಾಸ್ಟೆಲ್ ಹುಡುಗರು ರೂಮಿಗೆ ಹೋದರೆ ಬಸ್ಸಿನಲ್ಲಿ ಬರುವ ಹುಡುಗರು ಬಾರಿನ ಮೇಲೆ ಇದ್ದ ಮಿನಿ ಸಿನಿಮಾ ಥಿಯೇಟರ್ ಟಿಕೆಟ್ ತೆಗೆದು ಅದರಲ್ಲಿ ಮಲಗುತ್ತಿದ್ದರು. ತುಳಸೀ ಎಲೆಯಿಂದ ನೀರು ಕುಡಿದರೆ ಪುಣ್ಯ ಬರುತ್ತದೆಂದು ಎಲ್ಲೋ ಕೇಳಿದ್ದ ಹುಡುಗರು ತುಳಸೀ ಬಾರಿನಲ್ಲಿ ಕುಡಿಯುತ್ತಾ ಏನೋ ಪುಣ್ಯ ಕಾರ್ಯ ಮಾಡಿದಂತೆ ಖುಷಿಪಡುತ್ತಿದ್ದರು. ಕುಡಿದು ನಂತರ ಬರಬಹುದಾದ ನಿಜ "ಟೀಬಿ" ಅಥವಾ ಬೇರೆ "ಖರಾಬೀ"ಗಳ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.
ಸಂಜೆ ಮನೆಗೆ ಬಂದು ಗೆಳೆಯರ ಜೊತೆ ಕುಳಿತು ಕಾಲೇಜಿನಲ್ಲಿ ನಡೆಯುತ್ತಿರುವ ಹೊಸ ಪ್ರೇಮ ಪ್ರಕರಣಗಳ ಬಗ್ಗೆ, ನಡೆದ ಗ್ಯಾಂಗ್ ವಾರ್‌ಗಳ ಬಗ್ಗೆ ಮಾತನಾಡಲು, ರೋಡ್ ಟ್ರಿಪ್ ಪ್ಲಾನ್ ಮಾಡಲು, ಚಾರಣ ನಿರ್ಣಯವಾದರೆ ಮನೆಯಲ್ಲಿ ಯಾವ ಹೊಸ ಸುಳ್ಳು ಹೇಳಿ ಹೊರಡುವುದೆಂಬ ಗಂಭೀರ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಸೇರಬೇಕಾದ ಸ್ಥಳಗಳಿಗೂ ನಿಗೂಢ ನಾಮಗಳಿದ್ದವು. ಈ ಹೆಸರುಗಳು ನಮಗೆ ಅನಿವಾರ್ಯವಾಗಿದ್ದವು ಕೂಡಾ. ಅಪ್ಪನೆದುರು ಫೋನಿನಲ್ಲಿ ಗೆಳೆಯನಿಗೆ ಇವತ್ತು ಮಣಿಪಾಲದ "ಎಂಡ್ ಪಾಯಿಂಟ್"ಗೆ ಬಾ" ಹೇಳಿದರೆ ಮಗನ ನಿಜಾವಸ್ಥೆಯ ಪರಿಚಯವಾಗಿಬಿಡುವ ಹೆದರಿಕೆ ಇತ್ತು. ಅಥವಾ ಮೊಬೈಲಲ್ಲಿ ಆದಷ್ಟು ಬೇಗ ಟೈಪಿಸುವ ಸಲುವಾಗಿಯೂ ಈ ಹೆಸರುಗಳು ಬಹಳ ಸುಲಭವಾಗಿ ಪರಿಣಮಿಸುತ್ತಿದ್ದವು. ಹೀಗೆ "ಎಂಡ್ ಪಾಯಿಂಟ್" "ಈಪಿ" ಯಾದರೆ ದಿನಾಲು ಹೆತ್ತವರಿಗೆ "ಫೂಲ್" ಮಾಡಿ ಗಂಟೆಕಟ್ಟಲೆ ಪೂಲ್ ಆಡುತ್ತಿದ್ದ ಉಡುಪಿಯ "ಪೂಲ್ ಪಾಯಿಂಟ್" "ಪೀಪಿ"ಯಾಯಿತು. ಕೆಲವೊಮ್ಮೆ ತಡರಾತ್ರಿಯ ತನಕ ಕುಳಿತು ಏನೋ ತಡಕಾಡುತ್ತಿದ್ದ "ಅಜ್ಜರಕಾಡ್"  ಪಾರ್ಕ್ "ಏಕೆ" (AK) ಯಾಗಿತ್ತು ನಮಗೆ.
ಒಮ್ಮೊಮ್ಮೆ ಮನೆಯಲ್ಲಿ "ಈಪಿ ಬೇಡ ಪೀಪಿಯಲ್ಲೇ ಕುಳಿತು ಮಾತಾಡೋಣಾ" ಅಥವಾ  "ನಾಳೆ ಟಾಮ್ ಅಸ್ಸೈನ್‌ಮೆಂಟ್ ಮುಗಿಸಲು ಕೊನೇ ದಿನ ಭ್ರಮ್ಸಲ್ಲಿ ಬಾ, ukಯಲ್ಲಿ ಕುಳಿತು ಒಟ್ಟಿಗೆ ಮುಗಿಸುವ"  "ಪಾಮ್ ಕ್ಲಾಸ್ ಮಿಸ್ ಮಾಡುವ ಹಾಗಿಲ್ಲ ಅಟ್ಟೆಂಡೆನ್ಸ್ ಕಡಿಮೆ ಇದೆ" -ಗೆಳೆಯರೊಂದಿಗೆ ಫೋನಲ್ಲಿ ಮಾತನಾಡುವಾಗಲೆಲ್ಲಾ ಪಕ್ಕದಲ್ಲೇ ಕುಳಿತು ಓದುತ್ತಿರುತ್ತಿದ್ದ, ಇನ್ನೂ ಶಾಲೆಯಲ್ಲಿ ಕಲಿಯುತ್ತಿದ್ದ ತಂಗಿ "ಅಣ್ಣ ಊಹೆಗೂ ನಿಲುಕದ ಜೇಮ್ಸ್ ಬಾಂಡ್‌ನಂತೆ ಮಾತನಾಡುತ್ತಿದ್ದಾನಲ್ಲ, ಏನೋ ಮುಗಿಸೋ ಕೆಲಸ ಮಾಡುತ್ತಿದ್ದಾನಲ್ಲಾ" ಎನಿಸಿಕೊಂಡು ಅಚ್ಚರಿಯ ಕಣ್ಣುಗಳೊಂದಿಗೆ ನನ್ನನ್ನೇ ದುರುಗುಟ್ಟುತ್ತಿರುತ್ತಿದ್ದಳು. ಮುಗ್ದವಾಗಿ " "ಟಾಮ್" ಅಂದ್ರೆ ಯಾರಣ್ಣಾ?" ಎಂದು ಕೇಳುತ್ತಿದ್ದಳು. ಅಮ್ಮನಿಗೂ ಮಗ ಏನೋ ತನಗರ್ಥವಾಗದ ದೊಡ್ಡ ದೊಡ್ಡ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾನೆಂಬ ಸಣ್ಣದಾದ ಅಭಿಮಾನ.
ಹೀಗೆ ಈ ವಾರೆ ಕೋರೆ ಹೆಸರುಗಳೊಂದಿಗೆ ಬದುಕುತ್ತಿದ್ದ ನನಗೇ ಒಂದು ಇನೀಷಿಯಲ್ಲು ಕೊಟ್ಟು ಬಿಟ್ಟಿದೆ ಬದುಕು! ಕೆಲವೊಮ್ಮೆ ರೂಮಿನ ಟೆರೇಸಿನಲ್ಲಿ ನಿಂತು, ಕೈಯಲ್ಲಿರುವ ಕಾಫಿ ಮಗ್ಗಿನಿಂದ ಕಾಫಿ ಹೀರುತ್ತಾ. ಮೆಲ್ಲಗೆ ಜಗ್‌ಜೀತ್ ಸಿಂಗ್ ಗಝಲ್ ನುಡಿಸುತ್ತಾ, ಸುತ್ತಲಿರುವ ಮನುಷ್ಯನೆಂಬ ಪ್ರಾಣಿಗಳಿಂದ ತುಂಬಿದ ಕಾಂಕ್ರೀಟ್ ಕಾಡನ್ನು ನಿರ್ಭಾವುಕನಾಗಿ ನೋಡುತ್ತಾ  ಈ "ಎಮ್ಮೆಸ್ಸೆಸ್" ಹೆಸರು ಯಾಕೆ ನನಗಂಟಿಕೊಂಡಿತೆಂದು ಯೋಚಿಸುತ್ತಿರುತ್ತೇನೆ. ಕೆಲವರು ಜ್ಯೋತಿಷಿಗಳ ಸಲಹೆಯ ಮೇರೆಗೆ, ತಮ್ಮ ಹೆಸರುಗಳಲ್ಲಿ ಕೊಂಚ ವ್ಯತ್ಯಾಸ ಮಾಡಿಕೊಂಡರೆ ಭಾಗ್ಯ ಬದಲಾಗಬಹುದೆಂಬ (ಮೂಢ)ನಂಬಿಕೆಯಿಂದ ಹೆಸರುಗಳನ್ನು ಬದಲಾಯಿಸಿಕೊಳ್ಳುತ್ತಾರೆಂದು ಕೇಳಿದ್ದೆ. ಅದರಂತೆ ವಿಧಿ ಲಿಖಿತ ನನ್ನ ಈ ಮರುನಾಮಮಕರಣದಿಂದ ನನಗೆ ನಿಧಿಯೇನಾದರೂ ಸಿಗಲಿಕ್ಕಿದೆಯೋ? ಹೀಗೇ ಸಮಯ ಸಿಕ್ಕಾಗಲೆಲ್ಲಾ ಏನೇನೋ ಗೀಚುತ್ತಿರುವವನು ಮುಂದೊಮ್ಮೆ ದೊ(ದ)ಡ್ಡ ಕವಿ, ಲೇಖಕನಾಗಿ ನಾನು ಇಟ್ಟುಕೊಳ್ಳಬಹುದಾದ ಕಾವ್ಯನಾಮ ಇದಾಗಿರಬಹುದೋ? ಅಥವಾ ಅಡ್ಡಾತಿಡ್ಡಿ ಹೆಸರುಗಳನ್ನು ಕರೆದುದಕ್ಕೆ ಈ ಜನ್ಮದಲ್ಲೇ ಸಿಕ್ಕಿದ ದುಷ್ಫಲವೋ?!!
ಕಡೆಗೆ, "ಹೊಸ ಕೆಲಸಕ್ಕೆ ಸೇರಿಕೊಂಡರೆ ಅಲ್ಲಿ ಎಲ್ಲರೆದುರು ಶಫಿಯೆಂದೇ ಗುರುತಿಸಿಕೊಂಡು. ನಂತರ ಈ "ಎಮ್ಮೆಸ್ಸೆಸ್" ನನ್ನ ಮನಸಿನ ಕ್ಷಣಿಕ, ವ್ಯರ್ಥ ಕಳವಳವಾಗಿತ್ತೆಂದು ಯೋಚಿಸಿ, ಬಳಸಿದ್ದ ಹಲವಾರು ಇನೀಷಿಯಲ್ಲುಗಳೊಂದಿಗೆ ಇದೂ ನೆನಪಿನ ಸಾಲುಗಳಲ್ಲಿ ಸೇರಬಹುದೇನೋ ಎಂಬ ಯೋಚನೆಯೊಂದಿಗೆ ಕೆಳಗಿಳಿಯುತ್ತೇನೆ.
- ಎಮ್ಮೆಸ್ಸೆಸ್ (ಛೇ...)
  - ಶಫಿ
 

Rating
No votes yet

Comments

Submitted by ಗಣೇಶ Wed, 01/23/2013 - 23:16

:) :) ಎಮ್ಮೆಸ್ಸೆಸ್ :), ಈರ್‌ನ ಪುದರ್‌ದ ಕತೆ ಗಮ್ಮತ್ತುಂಡ್‌ಯೆ. ಅಯ್ಟ್‌ಲಾ "ಟೀಬಿ ಇಫೆಕ್ಟ್" ಸೂಪರ್‌ಯೆ..