ಹೇಗೆ ತೊರೆಯಲಿ...?
ಹೇಗೆ ತೊರೆಯಲಿ ...?
ಹೇಗೆ ಒಡೆಯಲಿ ಕೈಯ ಬಳೆಯನು ?
ನಿನ್ನ ಸವಿನುಡಿ ಇಂಪು ದನಿಯನು
ಕಿಣಿಕಿಣಿ ಸದ್ದಲಿ ನೆನಪಿಸಿದೆ.
ಹೇಗೆ ತರಿಯಲಿ ಹೆರಳ ಹೂವನು?
ನಿನ್ನ ಉಸಿರೇ ತೇಲಿ ಬರುತಿದೆ,
ನನ್ನ ಉಸಿರಲಿ ನೆಲಸಿದೆ.
ಹೇಗೆ ಅಳಿಸಲಿ ಹಣೆಯ ಕುಂಕುಮ?
ನಿನ್ನ ಮುತ್ತಿನ ಹಚ್ಚೆ ಗುರುತಾಗಿ
ಶಾಶ್ವತ ಸಂಭ್ರಮ ಶೋಭಿಸಿದೆ.
ಹೇಗೆ ಬಿಸುಡಲಿ ಬಣ್ಣದುಡುಗೆಯ?
ನಿನ್ನ ಸನಿಹದ ಸಂಜೆಗನಸಿನ
ಸಪ್ತವರ್ಣಗಳು ಮೆರೆಯುತಿವೆ.
ಹೇಗೆ ತೊರೆಯಲಿ ಹೇಳು ನಲ್ಲನೆ?
ನಿನ್ನ ಸೇರಲು ಕಾಯುತಿರುವೆನು,
ಸ್ವರ್ಗದ ಲಗ್ನಕೆ ಮದುಮಗಳಾಗಿ;
ಸರ್ವಾಲಂಕಾರಭೂಷಿತೆಯಾಗಿ.
-೦-
Rating