ಹೇಗೆ ಬಾರಿಸಲಿ ನಾನು...?
ಹೇಗೆ ಹಾಡಲಿ ನಾನು
ದೇಶವೇ ಹೊತ್ತಿ ಉರಿಯುವಾಗ
ಅಗೋ ಕೇಳಿಲ್ಲವೇ ಅಂದು-
ನಿರೋ ದೊರೆ ಪಿಟೀಲು ಬಾರಿಸಿದನೆಂದು,
ಇನ್ನು ಹೇಗೆ ಬಾರಿಸಲಿ ನಾನಿಂದು
ನನ್ನೀ ದಳ್ಳುರಿಯ ಡೋಲು?
ಇಲ್ಲಿ ನಾವೆಲ್ಲ ಒಂದೇ
ಎಂದು ನುಡಿದು ನಡೆದು ಬಂದ ಮಾತೇ
ನಮಗೆ ಬೊಟ್ಟು ಮಾಡಿ ಅಣಕಿಸುವಂತಾದುದೇಕೆ?
ಅಯ್ಯೋ ! ಅದ್ಯಾವ ಕತ್ತಲೆಯ ಲೋಕದ ಕರೆ
ಶತಶತಮಾನಗಳ ಧಾರ್ಮಿಕ ಪರಂಪರೆಯನೇ
ನಮ್ಮೊಳಗಿನ ರಾಜಕೀಯವೇ ಹೊಸಕಿಹಾಕಲು
ಹೊಂಚುತಿಹುದೋ ಬೇರೆ ಕಾಣೆ...
ಇನ್ನು ಹೇಗೆ ನುಡಿಸಲಿ ನಾನು
ಇಂದು ನನ್ನ ಹೃದಯ ವೀಣೆ?
ಇಲ್ಲೇ ಆರು ದಶಕಗಳಿಂದಲೂ
ಒಂದಾಗಿ ರಾಷ್ಟ್ರಗೀತೆ-ಭಾವೈಕ್ಯತೆ ಹಾಡುತಲಿರುವೆವು
“ಜನಗಣ ಮಂಗಳ ದಾಯಕ ಜಯಹೇ... ವಂದೇ ಮಾತರಂ”
ಎಂದೇ ಬಿಡದೆ ನುಡಿದು ಸಾಗಿ ಬರುತಿಹೆವು;
ನಾವು ಸ್ವಾತಂತ್ರ್ಯ ಸಾಮರಸ್ಯದ ಭವ್ಯ ಕನಸುಗಳ ಕಂಡವರು!
ಈ ಜನಮಾನಸದ ಕೋಟೆಯೊಳಗೇಕೆ ಹತ್ತಿಕ್ಕುವಂಥ
ಅಧಿಕಾರ ಲಾಲಸೆಯಲಿ ಕಾಲೆಳೆವಂಥ ಸ್ವಾರ್ಥಸಾಧಕರು
ಅಯ್ಯೋ ಇನ್ನು ಹೇಗೆ ಮೀಟಲಿ ನಾನು
ನನ್ನ ಭಾವದಲೆ ಮೇಲೆ ಹರಿಗೋಲು?
ಏಕೆ ಸುಮ್ಮನಿರುವಿರಿ ಏಳಿ ಏದ್ದೇಳಿ ಗೆಳೆಯರೇ-
ಆರಿಸೋಣ ಬನ್ನಿ;ಆತ್ಮಸಾಕ್ಷಿಯುಳ್ಳವರು
ನಾವು ನಮ್ಮ ನೆಲದೊಡಲಲೇ ಬದ್ದಿರುವ ಬೆಂಕಿ
ಬೂದಿಯಾಗದಿರಲೆಂದೂ ನಮ್ಮದೇ ಬಾಳು.
-ರೈಟರ್ ಶಿವರಾಂ