ಹೇಮಂತ ಋತುರಾಜ
ಕಾಲೇಜಿನಲ್ಲಿದ್ದಾಗ ಒಬ್ಬ ಸಹಪಾಠಿ ಒಂದು ಹಾಡನ್ನು ಬಹಳ ಚೆನ್ನಾಗಿ ಹಾಡುತ್ತಿದ್ದ. ಅದರಲ್ಲಿ ಹೇಮಂತ ಋತುರಾಜ ಬಂದಾಗ ಹೇಗೆ "ಹೂವಿಲ್ಲ- ಚಿಗುರಿಲ್ಲ - ಹಸಿರೆಲೆಗಳಿಲ್ಲ" ಎಂದು ವರ್ಣಿಸುತ್ತಿತ್ತು. ಆ ಹಾಡನ್ನು ಸ್ವಲ್ಪ ಶೋಕರಸಪೂರ್ಣವಾದ ಶುಭಪಂತುವರಾಳಿ ರಾಗದಲ್ಲಿ ನಿಯೋಜಿಸಿದ್ದರಿಂದ ಹೇಮಂತದ ಬಗ್ಗೆ ಯಾವುದೇ ಒಳ್ಳೆಯ ಕಲ್ಪನೆ ನನ್ನಲ್ಲಿ ಮೂಡಿರಲಿಲ್ಲ- ಆರು ಋತುಗಳಲ್ಲಿ ಅದೂ ಒಂದು ಅನ್ನುವುದನ್ನು ಬಿಟ್ಟರೆ. ಎಲೆ ಉದುರದ ದಕ್ಷಿಣ ಕರ್ನಾಟಕದಲ್ಲಿ, ಹೂವಿಲ್ಲ ಚಿಗುರಿಲ್ಲ ಅನ್ನುವುದನ್ನು ಮಾತ್ರ ಗಮನಿಸಿದ್ದೆ.
ಕೆಲ ಕಾಲದ ನಂತರ ಹಿಂದೂಸ್ತಾನಿ ಸಂಗೀತದ ಪರಿಚಯವಾಗುತ್ತ ಅದರಲ್ಲಿರುವ ಹೇಮಂತ್ ರಾಗವನ್ನು ಕೇಳಿದಾಗ - ಅದು ಒಂದು ಉತ್ಸಾಹ ತುಂಬುವ ಭಾವನೆಯ ರಾಗ ಅನ್ನುವುದು ಗೊತ್ತಾಯಿತು. ಮುಂಚೆ ಕೇಳಿದ್ದ ’ಹೇಮಂತ ಋತುರಾಜ’ ಎಂಬ ಹಾಡಿನಲ್ಲಿ ರಾಜ ಎಂದು ಬಂದರೂ ಅದೇಕೋ ಮುದಗೊಳ್ಳದೇ ಇದ್ದ ಮನಸ್ಸು ಹೇಮಂತ್ ರಾಗದ ಸ್ವರಗಳಿಗೂ, ಅದರ ಹುರುಪಿಗೂ ಮನಸೋತಿತು!
ಇಷ್ಟೆಲ್ಲ ಹೇಳಿ, ಹೇಮಂತ ರಾಗವನ್ನು ನಿಮಗೆ ಕೇಳಿಸದಿದ್ದರೆ ಹೇಗೆ? ಕೆಳಗೆ ನೋಡಿ-ಕೇಳಿ - ಶ್ರೀನಿವಾಸ್ ರೆಡ್ಡಿ ಅವರ ಸಿತಾರ್ ವಾದನದಲ್ಲಿ ಹೇಮಂತ್ ರಾಗದ ಆಲಾಪ:
ಹಿಂದೂಸ್ತಾನಿ ವಾದ್ಯ ಸಂಗೀತದಲ್ಲಿ ರಾಗಗಳಿಗೆ ಆಲಾಪ್-ಜೋಡ್- ಮತ್ತು ಝಾಲಾ ಎನ್ನುವ ಮೂರು ಹಂತಗಳಿರುತ್ತವೆ. ಆಲಾಪವು ನಿದಾನಗತಿಯಲ್ಲಿದ್ದರೆ, ಜೋಡ್ ದುರಿತಗತಿಯಲ್ಲಿರುತ್ತೆ. ಹೇಮಂತ್ ರಾಗದ ನಿಜವಾದ ಹುರುಪು ನಿಮಗೆ ತಿಳಿಯಬೇಕಾದರೆ, ಅಭಿಷೇಕ್ ಅವರ ಸಿತಾರ್ ವಾದನದಲ್ಲಿ ಈ ಜೋಡ್ ಕೇಳಿ:
ಹೇಮ ಎಂದರೆ ಬಂಗಾರ. ಹೇಮಂತ ಎಂದರೆ ಬಂಗಾರ ಬಣ್ಣದ ಎಂದು ಅರ್ಥ ಮಾಡಿಕೊಳ್ಳಬಹುದು. ಭೂಮಧ್ಯ ರೇಖೆಯಿಂದ ದೂರ ಹೋದಂತೆಲ್ಲ, ಹೇಮಂತ ಋತುವಿನಲ್ಲಿ ಎಲೆಗಳು ಬಣ್ಣ ಬದಲಿಸುತ್ತಾ, ಬಂಗಾರದ ಬಣ್ಣ ತಳೆಯುವುದು ಸಾಮಾನ್ಯ. ಅದಕ್ಕೇ ಈ ಹೆಸರು ಖಂಡಿತ ಅರ್ಥ ಪೂರ್ಣ.
ನಾನಿರುವ ಊರಿನ ಬಳಿಯಲ್ಲಿನ ಕೆಲವು ಹೇಮಂತದ ಚಿತ್ರಗಳಿಗೆ ಕೆಳಗಿನ ಕೊಂಡಿಯನ್ನು ಚಿಟುಕಿಸಿ
http://neelanjana.wordpress.com/2008/10/28/colors-of-hemanta/
-ಹಂಸಾನಂದಿ
Comments
ಉ: ಹೇಮಂತ ಋತುರಾಜ