ಹೇಮಾಂತರಂಗ- ಸಿದ್ದಾಂತ???

ಹೇಮಾಂತರಂಗ- ಸಿದ್ದಾಂತ???

ಬೆಳಿಗ್ಗೆ ೮ ಗಂಟೆಗೆ ಎಚ್ಚರವಾದಾಗ ಅಂದು ಭಾನುವಾರವೆಂದು ನೆನಪಾಯಿತು. ಹಾಸಿಗೆ
ಬಿಟ್ಟೇಳಲು ಮನಸ್ಸಾಗದೆ ಮತ್ತೆ ಕಂಬಳಿ ಎಳೆದುಕೊಂಡಳು. ನಿನ್ನೆ ರಾತ್ರಿ ನಡೆದದ್ದೆಲ್ಲ
ಫಿಲ್ಮೀನ ರೀಲುಗಳಂತೆ ಕಣ್ಣ ಮುಂದೆ ಬಂದವು. ತಲೆ ಭಾರವಾಗುತ್ತಿದೆಯೆನಿಸಿತು. ನಿನ್ನೆ
ಎಷ್ಟು ರೌಂಡ್ 'ಟಕೀಲ' ಕುಡಿದಿದ್ದೆ ಎಂದು ನೆನೆಸಿಕೊಳ್ಳಲು ಪ್ರಯತ್ನಿಸಿದಳು.
ನೆನಪಾಗಲಿಲ್ಲ. ಛೆ ಇನ್ನು ಮುಂದೆ ಅದನ್ನು ಕುಡಿಯಬಾರದೆಂದು ನಿರ್ಧರಿಸಿದಳು. ಅದೇನು
ಅಸಾಧ್ಯವಲ್ಲವೆಂಬ ಅಹಂಕಾರ ಅವಳಿಗೆ. ಯಾವ ಚಟಗಳಿಗೂ ನಿರಂತರವಾಗಿ ಅವಳ
ಜೊತೆಯಲ್ಲಿರುವುದು ಸಾಧ್ಯವಿಲ್ಲವೆಂಬುದು ಅವಳಿಗಷ್ಟೇ ಗೊತ್ತಿದ್ದ ಸತ್ಯ. ತೀರ
ಅದಿಲ್ಲದೆ ಬದುಕಲಾರೆ ಅನಿಸಿದ ಕ್ಷಣ ಅದರಿಂದ ಕೈಕೊಡವಿಕೊಂಡು ಹೊರಟು ಬಿಡುತ್ತಿದ್ದಳು.
ಅದೊಂತರ ಹುಚ್ಚು ಯಾರಿಗೂ, ಯಾವುದಕ್ಕೂ ತನ್ನ ಮೇಲೆ ಅಧಿಕಾರ ಚಲಾಯಿಸಲು ಅವಕಾಶ
ಕೊಡಕೂಡದೆಂಬ ಹುಚ್ಚು. ಆ ಹುಚ್ಚಿನಿಂದಲೇ ಅವಳು ತನ್ನಿಷ್ಟದ ಬೆಂಗಳೂರನ್ನು ಬಿಟ್ಟು
ಪೂನಾವೆಂಬ ಕೊಂಪೆಗೆ ಬಂದದ್ದು. ರಾತ್ರಿಯ ಘಟನೆಗಳು ನೆನಪಾದವು. ಎಂದಿಗಿಂತ ಹೆಚ್ಚೇ
ಕುಡಿದಿದ್ದನಾ? ಇರಲಾರದು. ಹೆಚ್ಚು ಕುಡಿದಿದ್ದರೆ ತಾನು ಆ ರೀತಿ
ಪ್ರತಿಕ್ರಿಯಿಸುತ್ತಿರಲಿಲ್ಲವೆಂದು ಸಮಾಧಾನ ಮಾಡಿಕೊಂಡಳು. ಅಬ್ಬಾ! ಅದೇನು ಶಕ್ತಿಯಿದೆ
ಈ ಗಂಡಸಿನ ಸ್ಪರ್ಶಕ್ಕೆ ನನ್ನಂತ ನನ್ನನ್ನೇ ಒಂದು ಕ್ಷಣ ಮೈ ಮರೆಯುವಂತೆ
ಮಾಡಿಬಿಟ್ಟಿತಲ್ಲ. ಛೆ ಅವನು ಕಿಸ್ ಮಾಡೋಕೆ ಬಂದಾಗಲೇ ತಾನವನನ್ನು ರೆಸಿಸ್ಟ್
ಮಾಡಬೇಕಿತ್ತು ಎಂದುಕೊಂಡಳು. ತನ್ನ ಕೈಲಿ ಅದು ಸಾಧ್ಯವಿತ್ತೇ? ಮುಗುಳ್ನಗುವೊಂದು
ಮಿಂಚಿತು. ಆದರೂ ಅದೆಷ್ಟು ಧ್ಯರ್ಯ ಆ ಬಡ್ಡೀ ಮಗನಿಗೆ, ನನ್ನ ಮನೆಯಲ್ಲೇ ನನ್ನನ್ನೇ
ಆವರಿಸುಕ್ಕೆ ಬಂದನಲ್ಲ! ಇದ್ದಕ್ಕಿದ್ದಂತೆ ಅವಳಿಗೆ ತನ್ನ ಮೇಲೆ ವಿಪರೀತ ಕೋಪ ಬಂತು.
ಎಲ್ಲಾ ಆಗಿದ್ದು ತನ್ನಿಂದಲೇ, ತನ್ನದೇ ಸಿದ್ದಾಂತಗಳಿಗೆ ಜೋತು ಬೀಳದೆ, ಎಲ್ಲ
ಹುಡುಗಿಯರಂತೆ ಇದ್ದಿದ್ದರೆ ತಾನಿವತ್ತು ಪಶ್ಚಾತಾಪಪಡುತ್ತಿರಲಿಲ್ಲವೆನಿಸಿ ತನ್ನ
ಬಗ್ಗೆ ಇನ್ನಷ್ಟು ಮುನಿಸಿಕೊಂಡಳು.

ಪ್ರಪಂಚದ ಅರಿವಾಗ ತೊಡಗಿದಾಗಿನಿಂದ ಹೆಣ್ಣಿನ
ಬಗ್ಗೆ ಅವಳಿಗೆ ವಿಚಿತ್ರ ದ್ವೇಷ. ಸ್ವತಂತ್ರಳಾಗಿರಲು ಯಾವ ಹೆಣ್ಣೂ ಬಯಸುವುದಿಲ್ಲ!
ಹೆಣ್ಣಿಗೆ ಯಾವಾಗಲೂ ಒಂದು ಕಂಫರ್ಟಬಲ್ ಆಗಿರೋ ಜೈಲು ಬೇಕು. ಅವಳ ವಾದ, ಜಗಳ, ನಿಲುವು
ತೀರ್ಮಾನಗಳು ಅವಳಿರುವ ಜೈಲಿಗೆ ಕಂಫರ್ಟ್ ಒದಗಿಸಲಿಕ್ಕೇ ಹೊರತು ಅವಳಿಗೆ
ಸ್ವೇಚ್ಛಾಚಾರದ ವಿಚಾರವೇ ಇರುವುದಿಲ್ಲ ಎಂದು ಬಲವಾಗಿ ನಂಬಿದ್ದಳು. ತಾನು
ಇದೆಲ್ಲವನ್ನು ಮೀರಿ ಬದುಕಬೇಕೆಂಬ ಅವಳ ನಿರ್ಧಾರ ಅವಳನ್ನು ಬೇರೆಲ್ಲರಿಗಿಂತ
ವಿಭಿನ್ನವೆನಿಸುವಂತೆ ಮಾಡಿದ್ದವು. ಆ ಡಿಫ್ರೆನ್ಸಿಯೇಶನ್ನು ಅವಳಿಗೆ ವಿಚಿತ್ರ ಖುಷಿ
ಕೊಡುತ್ತಿತ್ತು. ಆಗಲೇ ಅಲ್ಲವೇ ಅವಳು ಬೆಂಗಳೂರು ಬಿಡಬೇಕೆಂದು ಕೊಂಡಿದ್ದು. ಅದ್ಯಾವ
ಗಳಿಗೆಯಲ್ಲಿ ಆ ಯೋಚನೆ ಬಂತೋ, ಅದರ ಮರುಕ್ಷಣದಿಂದ ಅವಳು ತನ್ನ ತಯಾರಿ ನಡೆಸಿದ್ದಳು.
ಅಪ್ಪ ಅಮ್ಮ, ಅಕ್ಕ ಇವರೆಲ್ಲರನ್ನು ಒಪ್ಪಿಸಿ, ಹುಟ್ಟಿ ಬೆಳೆದಿರುವ ಊರನ್ನು ಬಿಟ್ಟು
ಒಬ್ಬಳೇ ಬೇರೆ ಊರಿನಲ್ಲಿರುವುದು ಅಷ್ಟು ಸುಲಭದ್ದಾಗಿರಲಿಲ್ಲವಲ್ಲ. ಕಷ್ಟವೆನಿಸಿದಷ್ಟು
ಅದನ್ನು ಮಾಡಲೇಬೇಕೆಂಬ ಹಟ ಹೆಚ್ಚಾಗುತ್ತದೆ ಇದವಳ ಇನ್ನೊಂದು ಸಿದ್ದಾಂತ. ಎರಡು ವರ್ಷ
ಅಕ್ಷರಷಃ ಬಡಿದಾಡಿ ಪೂನಾಗೆ ಹೊರಟು ನಿಂತಳು. 'ಅಲ್ಲಿ ರೂಮು ಸಿಗೋವರೆಗಾದ್ರೂ ನಾನು
ಜೊತೇಲಿರ್ತೇನೆ' ಅಂದ ಅಮ್ಮನನ್ನು ಬೇಡವೇ ಬೇಡವೆಂದು ನಿರಾಕರಿಸಿ ಒಬ್ಬಳೇ ಹೊರಟಳಲ್ಲ
ಆಗವಳಲ್ಲಿ ಗೆದ್ದ ಸಂಭ್ರಮವಿತ್ತು. ಪೂನಾಕ್ಕೆ ಕಾಲಿಟ್ಟ ತಕ್ಷಣ ತಾನೊಂದು ಸ್ವತಂತ್ರ
ಹಕ್ಕಿ. ಇಲ್ಲಿ ತನ್ನನ್ನು ಬಂಧಿಸುವಂತಹ ಯಾವುದೇ ಕಟ್ಟಳೆಗಳಿಲ್ಲ. ತಾನೆಂದರೆ
ತನ್ನಿಷ್ಟ ಅಷ್ಟೇ ಎಂದುಕೊಂಡಳು.

ತಾನು ಮೊದಲು ಸಿಗರೇಟು ಹಚ್ಚಿದ್ದು ಯಾವಾಗ? ಎಂಟನೇ
ಕ್ಲಾಸಿನಲ್ಲಿದ್ದಾಗ, ಅಪ್ಪನ ಪ್ಯಾಂಟ್ ಜೇಬಿನಿಂದ ಕದ್ದು ದೂರದಲ್ಲೆಲ್ಲೋ ಯಾರು ಇಲ್ಲದ
ಜಾಗದಲ್ಲಿ ಹಚ್ಚಿ ಉಸಿರೆಳೆದುಕೊಂಡಾಗ ಬಂದಿತ್ತಲ್ಲ ಕೆಮ್ಮು. ಆಹಾ! ೧೦ ನಿಮಿಷ ನಿಂತೇ
ಇರಲಿಲ್ಲ ಕಣ್ಣು ಮೂಗು ಎನ್ನದೇ ಎಲ್ಲಾ ಕಡೆಯಿಂದ ಹೊಗೆ, ನೀರು ಕಿತ್ತುಕೊಂಡು
ಬಂದಿತ್ತು. ಅದೇ ಕೊನೆ ಮತ್ತೆ ಸಿಗರೇಟು ಮುಟ್ಟಲು ಇನ್ನಿಲ್ಲದ ಭಯವಾಗಿತ್ತು. ಎರಡು
ತಿಂಗಳಿಂದೆ ಅದೇಕೋ ಮತ್ತದರ ನೆನಪು ಬಂದು ಅಂಗಡಿಗೆ ಹೋದವಳೇ ಒಂದು ಪ್ಯಾಕ್ ಗೋಲ್ದ್ ಫ್ಲೇಕ್
ತಂದೇ ಬಿಟ್ಟಳಲ್ಲ. ಮೊದಲು ಕಷ್ಟವಾಯಿತು, ಉಸಿರೆಳುಯುತ್ತಿದ್ದ ಹಾಗೆ ಕೆಮ್ಮು
ಗುದ್ದಿಕೊಂಡು ಬಂದು ಬಿಡೋದು, ಎರಡು ದಿನ ಅಷ್ಟೇ. ಮೂರನೇ ದಿನ ಮೂರು ಸಿಗರೇಟನ್ನು
ಯಾವುದೇ ಕಷ್ಟವಿಲ್ಲದೆ ಸುಟ್ಟಿದ್ದಳು. ಡಿಸ್ಕೋಗು ಹಾಗೆ ಹೋಗಬೇಕೆನಿಸಿರಲಿಲ್ಲ ಆ ಮಿನಿ
೨ ಬಾರಿ ಕರೆದಾಗಲೂ ಬರೋಲ್ಲವೆಂದಿದ್ದಳು. ಇದ್ದಕ್ಕಿದ್ದಂತೆ ಒಂದು ದಿನ ಮಿನಿಗೆ ಫೋನ್
ಮಾಡಿ ಡಿಸ್ಕೋಗೆ ಬರ್ತೀನೆ ನೀನು ಹೋಗೋವಾಗ ನನ್ನನ್ನು ಕರಿ ಎಂದಿದ್ದಳು. ನೀ
ಬರ್ತೀನಂದ್ರೆ ಇವತ್ತೆ ಹೋಗೋಣ ಡಾರ್ಲಿಂಗ್ ಅಂದವಳಿಗೆ ಸರಿ ಎಂದು ಅಂದು ರಾತ್ರಿ
ಮೂರುಗಂಟೆವರೆಗೂ ಕುಣಿದು ಬಂದಿದ್ದಳಲ್ಲ. ಮತ್ತೆ ಪ್ರತಿ ಶನಿವಾರ ಸಂಜೆ ಅದವಳ ರೊಟೀನ್
ಆಗಿ ಹೋಗಿತ್ತು. ಎರಡನೇ ಬಾರಿ ಡಿಸ್ಕೋ ಥೆಕ್ ನಲ್ಲಿ ಮಿನಿ ಅವನನ್ನು ಪರಿಚಯಿಸಿದಾಗ
ಅವನ ಬಗ್ಗೆ ಅವಳಿಗೆ ಏನೂ ಅನ್ನಿಸಲಿಲ್ಲ. ಇವತ್ತಿಗೂ ಅವನಲ್ಲಿ ತನ್ನನ್ನು ಆಕರ್ಷಿಸುವ
ಯಾವುದೇ ಗುಣವಿಲ್ಲವೆಂದೇ ನಂಬುತ್ತಾಳೆ. ಆ ಸ್ಥಿತಿಯಲ್ಲಿ ಅವನಲ್ಲದೇ ಯಾರಿದ್ದರೂ ತನ್ನ
ಪ್ರತಿಕ್ರಿಯೆ ಅದೇ ಆಗಿರುತ್ತಿತ್ತು. ಇಷ್ಟಕ್ಕೂ ತಾನು ನಿನ್ನೆ ರಾತ್ರಿ ಅವನ ಜೊತೆ
ಬರಲಿಕ್ಕೆ ಒಪ್ಪಿರದಿದ್ದರೆ ಇಷ್ಟೆಲ್ಲ ಸೀನ್ ಕ್ರಿಯೇಟ್ ಆಗ್ತಾನೆ ಇರಲಿಲ್ಲ. ಅಷ್ಟು
ರಾತ್ರಿಯಲ್ಲಿ ಕುಡಿದಿದ್ದ ತನ್ನನ್ನು ಕರೆದುಕೊಂಡು ಹೋಗಲು ಇವನೇ ಸರಿಯೆಂದು,
ಕುಡಿದಾಗಲೂ ಅವಳಿಗನ್ನಿಸಿದ್ದಕ್ಕೆ ಅವಳಿಗೆ ತನ್ನ ಬಗ್ಗೆ ಹೆಮ್ಮೆಯನಿಸಿತ್ತು. ನೋಡಲು
ಸಾಧುವಂತೆ ಕಂಡರೂ ಅವನು ಪರಿಸ್ಥಿತಿಯ ಲಾಭ ಪಡೆಯುವ ಕನ್ನಿಂಗ್ ಫೆಲೋ ಅಂತ ಅವಳಿಗೆ
ಗೊತ್ತಿತ್ತು, ಆದರೆ ಅವನು ಮಹಾನ್ ಪುಕ್ಕಲ ಎಂಬುದೂ ಎರಡನೇ ಭೇಟಿಯಲ್ಲೇ ಅವಳು
ಕಂಡುಕೊಂಡುಬಿಟ್ಟಿದ್ದಳು. ಅದಕ್ಕೆ ಅವಳು ಅವನು ಡ್ರಾಪ್ ಮಾಡಲೇ ಅಂದಾಗ ಮರುಮಾತಾಡದೇ
ಬೈಕನ್ನೇರಿದ್ದಳು. ಮನೆ ಹತ್ತಿರ ತಂದು ಬಿಟ್ಟವನನ್ನು ಕರಿಯಲೇ ಬೇಡವೇ ಅಂದುಕೊಂಡು,
ಶಿಷ್ಟಾಚಾರಕ್ಕಿರಲಿ ಅಂತ ಕರೆದರೆ, ಬಂದೇ ಬಿಟ್ಟನಲ್ಲ. ಕಾಫಿ ಕುಡಿಯೋಲ್ಲ ನಾನು ಟೀ
ಆದರೆ ಓಕೆ ಅಂದಿದ್ದ ಕೇಳೋಕೆ ಮುಂಚೇನೆ. ಟೀ ಮಾಡುತ್ತಿದ್ದ ತನ್ನ ಹಿಂದೆ ಅದ್ಯಾವ
ಮಾಯದಲ್ಲಿ ಬಂದು ನಿಂತನೋ, ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲಿ ತನ್ನ ತುಟಿಯನ್ನು
ನನ್ನ ತುಟಿಯ ಮೇಲೊತ್ತಿದ್ದ. ಆ ಕ್ಷಣಕ್ಕೆ ಮೈ ಮರೆತಂತೆ ಸುಮ್ಮನಿದ್ದು ಬಿಟ್ಟೆನಲ್ಲ.
ಎರಡೇ ಕ್ಷಣ ತನ್ನೆಲ್ಲ ಬಲವನ್ನು ಸೇರಿಸಿ ತಳ್ಳಿದ್ದಳು ಅವನನ್ನು. ಸ್ಸಾರಿ ಅಂದ ಅವನು
ತಲೆತಗ್ಗಿಸಿಕೊಂಡು ಹೊರಟು ಹೋಗಿದ್ದ. ಆ ಘಟನೆ ನೆನಪಾಗುತ್ತಿದ್ದ ಹಾಗೆ ಅವಳಿಗೆ ಅಳು
ಬಂದು ಬಿಟ್ಟಿತು, ಅದೇಕೋ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟಳು. ಮರುಕ್ಷಣವೇ ತಾನು
ಅತ್ತಿದ್ದಕ್ಕೆ ಅವಳಿಗೇ ನಾಚಿಕೆಯಾಯಿತು. ಇಷ್ಟು ದಿನ ತಾನು ಬದುಕಿದ ರೀತಿ ಏನು
ಸಾಧಿಸಿದಂತಾಯ್ತು ಎಂದು ತನ್ನನ್ನೇ ಕೇಳಿಕೊಂಡಳು. ಕಾಣದ ಸಿದ್ದಾಂತಗಳ ಬಲೆಗೆ ಬಿದ್ದು
ನಾನು ಸಾಧಿಸಬೇಕೆಂದುಕೊಂಡದ್ದಾದರೂ ಏನು? ಬದುಕಿಗೆ ಸಿದ್ದಾಂತಗಳು ಅಗತ್ಯವಾ?
ಸಿದ್ದಾಂತಗಳಿಲ್ಲದೆ ಬದುಕಲಿಕ್ಕೆ ಆಗೋದೆ ಇಲ್ವ? ಆಗುತ್ತೆ ಆದರೆ......
ಸಿದ್ದಾಂತಗಳಿಲ್ಲದೆ ಬದುಕುತ್ತೀನಿ ಅನ್ನೋದು ಒಂದು ಸಿದ್ದಾಂತದ ಪ್ರತಿಪಾದನೆ ಅಲ್ಲವೇ?
ಇನ್ನು ಯೋಚಿಸಿದರೇ ತನಗೆ ಹುಚ್ಚೇ ಹಿಡಿಯುತ್ತದೆನಿಸಿ, ಹಾಸಿಗೆ ಬಿಟ್ಟು ಮೇಲೆದ್ದಳು.

Rating
No votes yet

Comments