ಹೇಳಿಕೊಳ್ಳಲು ಒಂದೆರಡು ಹಾಡು, ಓದಿಕೊಳ್ಳಲು ಒಂದೆರಡು ಸಾಲು

ಹೇಳಿಕೊಳ್ಳಲು ಒಂದೆರಡು ಹಾಡು, ಓದಿಕೊಳ್ಳಲು ಒಂದೆರಡು ಸಾಲು

ನಾನು ನಿನ್ನನ್ನು ಏನೂ ಕೇಳುವುದಿಲ್ಲ ಬದುಕೇ. ಯಾವುದನ್ನು ಇದುವರೆಗೆ ಸಾಮಾನ್ಯ ಜೀವನ ಅಂದುಕೊಂಡಿದ್ದೆನೋ, ಅದನ್ನು ಕೊಡ ಮಾಡಿದರೆ ಸಾಕು. ಒಂದಾರು ತಾಸು ನಿದ್ದೆ, ಎದ್ದಾಗ ಒಂದಿಷ್ಟು ಇನಿ ಬೆಳಕು, ರಾತ್ರಿಯಿಡೀ ಆರಿದ ಬಾಯಿಗೆ ಒಂದು ಲೋಟ ಸಿಹಿ ನೀರು, ಎಳೆದುಕೊಂಡರೆ ಪುಪ್ಫುಸ ತುಂಬುವ ಬೆಳಗಿನ ತಂಪು ಗಾಳಿ, ತಲೆ ಎತ್ತಿ ನೋಡಿದರೆ ಉದಯಿಸುವ ಸೂರ್ಯ, ಇಂದು ಯಾವ ಪಾಪಿಯ ಕುರಿತೂ ಮಾತನಾಡದ ನಿಗ್ರಹ, ಯಾರ ಮೇಲೂ ಕೋಪಿಸಿಕೊಳ್ಳದ ನಿಲುವು, ಸಾಕು. ಯಾರಿಗೂ ನನ್ನ ಪ್ರತಿಭಾ ಪರಿಚಯ ಬೇಡ. ಯಾರಿಗೂ ನನ್ನ ನೋವಿನ ಪಡಿತರ ಬೇಡ. ಮನೆ ಬಿಡುವಾಗ ಒಂದು ಮುಗುಳ್ನಗುವಿರಲಿ. ಟ್ರಾಫಿಕ್ನಲ್ಲಿ ಅಸಹನೆ ಉಕ್ಕದಿರಲಿ. ಗಾಡಿ ನಲ್ವತ್ತು ಕಿಮೀ ಮೇಲೆ ಓಡದು ಎಂಬ ಬೇಸರ ಬೇಡ. ರಸ್ತೆಯಲ್ಲಿ ಕಡಿಮೆ ಗುಂಡಿಗಳಿದ್ದರೆ ಸಾಕು. ದಾರಿಯುದ್ದಕೂ ನೂರಾರು ಗಾಡಿ. ಒಂದಕ್ಕಿಂತ ಒಂದು ಭಿನ್ನ. ಅದು ಹಾಗಿದ್ದರೇ ಚೆನ್ನ. ಎಲ್ಲೆಲ್ಲಿಂದಲೋ ಬಂದವರು ಎಲ್ಲೆಲ್ಲೋ ಹೊರಟಿದ್ದಾರೆ. ನನ್ನಂತೇ ಅವರು, ನೆಮ್ಮದಿ ಹುಡುಕುವವರು. ಕಚೇರಿಗೆ ಎಲ್ಲರಿಗಿಂತ ಮುಂಚೆ ಬಂದೆ ಎಂಬ ಹಳಹಳಿ ಬೇಡ. ತಡವಾಯಿತು ಎಂಬ ಆತಂಕವೂ ಬೇಡ. ಲಿಫ್ಟ್ ಕೆಲಸ ಮಾಡದಿದ್ದರೆ ಏನಂತೆ, ಮೆಟ್ಟಿಲುಗಳಿವೆ ಎಂಬ ಸಮಾಧಾನ ಬರಲಿ. ಏರಲು ಕಾಲುಗಳು ಗಟ್ಟಿಯಾಗಿವೆ ಎಂಬ ಕೃತಜ್ಞತೆ ಇರಲಿ. ನಾ ಕೂತ ಕಡೆ ತಂಪು ಗಾಳಿ ಇಲ್ಲ ಎಂದೇಕೆ ಕಿರಿಕ್ಕು? ಕನಸ ಹಂಚಿಕೊಳ್ಳಲು ಕಂಪ್ಯೂಟರ್ ಇದೆ ಎಂಬ ನೆಮ್ಮದಿ ಸಾಕು. ಅರ್ಥ ಮಾಡಿಕೊಳ್ಳುವವರು ಕಡಿಮೆ ಎಂಬ ತಗಾದೆಗಿಂತ, ಅರ್ಥ ಮಾಡಿಕೊಳ್ಳಲು ಕೆಲವರಾದರೂ ಇದ್ದಾರಲ್ಲ ಎಂಬ ಸಮಾಧಾನವಿರಲಿ. ಎಲ್ಲವನ್ನೂ ಬಲ್ಲೆ ಎಂಬ ಬಿಂಕ ಇಳಿಯಲಿ. ಕಲಿಯುವುದು ಇನ್ನೂ ಇದೆ ಎಂಬ ವಿನಯ ಬೆಳೆಯಲಿ. ಬುದ್ಧಿವಂತಿಕೆ ಕಾಡಿನ ಹಸಿರಿನಂತೆ ಎಂಬ ಅರಿವು. ನಾನೊಬ್ಬನೇ ಮರ ಅಲ್ಲ ಎಂಬ ತಿಳಿವು. ಟಿವಿ ಒಟಗುಟ್ಟುತ್ತದೆ. ಸಹೋದ್ಯೋಗಿಗಳು ಪಿಸುಗುಟ್ಟುತ್ತಾರೆ. ಎಲ್ಲರಿಗೂ ಎಲ್ಲದರ ಬಗ್ಗೆ ಮಾತನಾಡುವ ಹಂಬಲ. ಥ್ಯಾಂಕ್ಸ್ ಬದುಕೇ, ಕೇಳಿಸಿಕೊಳ್ಳಲು ಎರಡು ಕಿವಿ ಕೊಟ್ಟಿದ್ದಕ್ಕೆ. ಬೆಳಿಗ್ಗೆ ಹೋಗಿ ಮಧ್ಯಾಹ್ನವಾಗುತ್ತದೆ. ಆರೋಗ್ಯವಂತನಿರಬೇಕು ನಾನು, ಅದಕ್ಕೇ ಹೊಟ್ಟೆ ಹಸಿಯುತ್ತೆ. ಒಬ್ಬನೇ ಉಣ್ಣಲು ಮತ್ತದೇ ಬೇಸರ. ಯಾರಾದರೂ ಜೊತೆ ಕೂರಲಿ ಎಂಬ ಕಾತರ. ಊಟದ ನಂತರ ಮನಸ್ಸೇಕೋ ಮಂಕು. ಬ್ಲಾಗ್ ತೆರೆದರೆ ಅಲ್ಲಿ ಕನಸುಗಳದೇ ಇಂಕು. ಯಾರಾರೋ ಬಿಡಿಸಿದ ಮನಸುಗಳ ಚಿತ್ರ. ಅದರೊಂದಿಗೆ ಅಚ್ಚಾಗಲಿ ನನ್ನದೂ ಒಂದು ಪತ್ರ. ನಿದ್ದೆ ಎಳೆವ ದೇಹಕ್ಕೆ ಬಿಸಿ ಬಿಸಿ ಚಹ. ಇನ್ನು ಕೆಲಸ ಮುಂದುವರೆಸಬೇಕೆಂಬ ತಹತಹ. ಬರೆದಷ್ಟೂ ಮುಗಿಯದು ಬರವಣಿಗೆಯ ಬಯಕೆ. ಇದು ಹೀಗೇ ಇರಲಿ ಎಂಬುದೊಂದೇ ಕೋರಿಕೆ. ಸಂಜೆಯಾದಂತೆ ಸಹೋದ್ಯೋಗಿಗಳ ಸಡಗರ. ಸಂದರ್ಶನಕ್ಕೆ ಬಂದ ಹೊಸಬರಲ್ಲಿ ಮುಜುಗರ. ಎಲ್ಲವನ್ನೂ ನೋಡುತ್ತ ಕಾಯುತ್ತಿದ್ದಾರೆ ಕೆಲವರು. ಗಾಡಿ ತಂದವರ ಜೊತೆ ಹೋಗಲು ಕೂತಿದ್ದಾರೆ ಅವರು.  ಸೂರ್ಯನಿಗೂ ಸುಸ್ತಾಗಿರಬೇಕು, ಕೆಂಪಾಗಿದ್ದಾನೆ. ಸದ್ದಿಲ್ಲದೇ ಮನೆಗೆ ಮರಳುವ ಸಿದ್ಧತೆಯಲ್ಲಿದ್ದಾನೆ. ಸಂಜೆ ಸೊಗಸಿಗೆ ಸಮ ಯಾವುದಿದೆ? ಏಕೋ ಏನೋ ನನ್ನ ಮನಸ್ಸೂ ಮುದಗೊಂಡಿದೆ. ಬಾಕಿ ಉಳಿದ ಕೆಲಸ ಮುಗಿಸಲು ಅವಸರಿಸುತ್ತೇನೆ. ತಿಂಡಿ ತಿಂದೇ ಇಲ್ಲ? ಎಂದು ಗೆಳೆಯ ಎಚ್ಚರಿಸುತ್ತಾನೆ. ’ಹಸಿವಿದ್ದು ಉಂಡರೆ ತಾನೆ ಸೊಗಸು? ತಿಂಡಿಯನ್ನೂ ನೀನೇ ಮುಗಿಸು.’ ಮಾನಿಟರ್ ಮುಂದೆ ಅಕ್ಷರಗಳ ಮಾಲೆ. ಹೊರಗೆ ಗಗನಚುಂಬಿಗಳಲ್ಲಿ ದೀಪಗಳ ಲೀಲೆ. ಕೊನೆಯ ಪ್ರಿಂಟ್ ಔಟ್ ನೋಡುತ್ತ ಎಂಥದೋ ಸಡಗರ. ಇವತ್ತಿನ ಕೆಲಸ ಮುಗಿಯಿತು ಹಗುರ. ಬ್ಯಾಗೆತ್ತಿಕೊಳ್ಳುತ್ತ ಎಲ್ಲರಿಗೂ ಬೈ, ವಿದಾಯ. ಆಗಲೇ ಅರ್ಧಕ್ಕರ್ಧ ಕಚೇರಿಯೇ ಮಾಯ. ಇಳಿಯುವಾಗ ಲಿಫ್ಟ್ ಚಿಂತೆಯಿಲ್ಲ. ಮನೆಗೆ ಹೊರಟಾಗ ಅದರ ಅವಶ್ಯಕತೆಯೇ ಇಲ್ಲ. ದಾರಿ ಕಾಯುತ್ತಿದೆ ನನ್ನ ಪುಟ್ಟ ಗಾಡಿ. ಬಿಸಿಲಿಗೇಕೋ ಬಾಡಿದಂತಿದೆ ಖೋಡಿ. ಸೀಟೊರಸಿ ಕೂತರೆ ಅದಕ್ಕೆ ಎಂಥದೋ ಪುಳಕ. ಭರ್ತಿಯಾದ ರಸ್ತೆಯೊಂದಿಗೆ ಹಾಕುತ್ತದೆ ತಳುಕ. ಸಿಗ್ನಲ್ ಲೈಟ್ಗಳು ಕಣ್ಣಾಮುಚ್ಚಾಲೆ ಆಡುತ್ತವೆ. ಅವಕ್ಕೆ ತಕ್ಕಂತೆ ಟ್ರಾಫಿಕ್ ಪೊಲೀಸ್ ಪೀಪಿ ಊದುತ್ತಾನೆ. ನಾವೇನು ಕಡಿಮೆ ಎಂದು ವಾಹನಗಳು ಹಾರ್ನ್ ಹೊಡೆಯುತ್ತವೆ. ಹಸಿರು ದೀಪ ಕಾಣುತ್ತಲೇ ಗೂಳಿಯಂತೆ ನುಗ್ಗುತ್ತವೆ.  ಎಲ್ಲರಿಗೂ ಮನೆ ತಲುಪುವ ಆತುರ. ಆದರೆ, ಟ್ರಾಫಿಕ್ ಇರೋದೇ ಥರ. ಗಾಡಿ ಮೇಲೆ ಕೂತಿದ್ದರೂ ಎಲ್ಲರೂ ನಿಂತು ನಿಂತೇ ಹೋಗಬೇಕು. ದೀಪ ಬಿದ್ದಾಗೊಮ್ಮೆ ಕಂತು ಕಂತಾಗಿ ಸಾಗಬೇಕು. ಮನೆ ತಲುಪಿದಾಗ ದೇಹಕ್ಕೆ ಸುಸ್ತು. ಆದರೆ, ಮನಸ್ಸು ಫ್ರೆಶ್ ಮತ್ತು ಮಸ್ತು. ಗೇಟಿಗೆ ನಿಂತ ದೊಡ್ಡ ಮಗಳು ಕೇಕೆ ಹಾಕುತ್ತಾಳೆ. ಅಮ್ಮನ ಕಂಕುಳಲ್ಲಿ ಕೂತ ಚಿಕ್ಕವಳು ಕೈ ಚಾಚುತ್ತಾಳೆ.  ಎಲ್ಲರನ್ನೂ ಮಾತನಾಡಿಸಿ ಮಕ್ಕಳಿಗೆ ಸಿಹಿ ಮುತ್ತು. ಹೆಂಡತಿಗೆ ಕೊಡಲು ಇನ್ನೂ ಇದೆ ಹೊತ್ತು. ಉಂಡು, ಆಡಿ, ದಣಿದ ಮಕ್ಕಳು ನಿದ್ರೆಗೆ ಜಾರುತ್ತವೆ. ಇಡೀ ದಿನದ ಬೆಳವಣಿಗೆಗಳು ಕಣ್ಣೆದುರು ಮೂಡುತ್ತವೆ. ಬೆಳಿಗ್ಗೆ ನಾನು ಕೇಳಿಕೊಂಡಿದ್ದು ಇದನ್ನೇ ಅಲ್ಲವೆ? ಒಂದು ಸಾಮಾನ್ಯ ಬದುಕು ಕೊಡು ಎಂದು ತಾನೆ? ಅವಸರದಿಂದ ಓಡುವ ಜಗದಲ್ಲಿ ಆಸರೆಗೊಂದು ನೆರಳು. ಹೇಗಾದರೂ ಸರಿ, ಸರಿಯಾಗಲಿ ಮಗಳು. ಮೌನವಾಗಿ ಕೂತ ಇವಳ ಮನದಲ್ಲೂ ಅದೇ ಯಾಚನೆ. ದೊಡ್ಡ ಮಗಳ ಭವಿಷ್ಯ ಬೆಳಗಲಿ ಎಂಬ ಪ್ರಾರ್ಥನೆ. ನಮಗಿಷ್ಟು ದಕ್ಕಿದರೆ ಸಾಕು ಬದುಕೇ. ಚಿಂತೆ ಮಾಡದೇ ಇದ್ದೇವು ನಾನು ಮತ್ತು ಈಕೆ. ನಮ್ಮೆಲ್ಲ ಹಮ್ಮುಬಿಮ್ಮುಗಳು ಪಕ್ಕಕ್ಕೆ ಸರಿಯಲಿ. ಮನದ ತಿಳಿಗೊಳದಲ್ಲಿ ಒಂಚೂರು ನೆಮ್ಮದಿ ಮೀಯಲಿ. ಕಷ್ಟದಲ್ಲಿದ್ದವರಿಗೂ ಚಾಚಲಿ ನಮ್ಮ ಬೆರಳು. ಅವರಿಗೂ ದಕ್ಕಲಿ ನೆಮ್ಮದಿಯ ನೆರಳು. 

- ಚಾಮರಾಜ ಸವಡಿ

Rating
No votes yet