ಹೇಳು ಮುಂದಿನ ಸರದಿ ನನ್ನದಲ್ಲ

ಹೇಳು ಮುಂದಿನ ಸರದಿ ನನ್ನದಲ್ಲ
***೧***
ಮತ್ತೆ ಜವನಾರ್ಭಟವು ಪಕ್ಕದಲ್ಲೇ
ಶವವಾದ ನವ ಯುವಕ ರಾತ್ರಿಯಲ್ಲೇ
ಸತಿ ಸುತರ ಮತ್ತಿತರರ ಮಾಡಿ ಅನಾಥರ
ಥಟ್ಟನೇ ಇಲ್ಲವಾದ ನಡು ಬೀದಿಯಲ್ಲೇ
ಹಿರಿಯುತ್ತ ಬಲಿಯುತ್ತ ಮೈ ಮನವ ಸುತ್ತುತ್ತ
ಸುತ್ತಿ ಕಾಡಿದೆ ನೋವು ಎದೆಯಾಳದಲ್ಲೆಲ್ಲ
ಹೇಳು ಮುಂದಿನ ಸರದಿ ನನ್ನದಿಲ್ಲ
***೨***
ಬಲಿಯುತ್ತದಾತಂಕ ಮನವನ್ನು ತುಂಬುತ್ತ
ಏಕಾಂತದೊಸರಲ್ಲಿ ಮಾಡುತ್ತ ಕಸರತ್ತು
ಇಬ್ಬಗೆಯ ನೋವಿನ ಮಸಲತ್ತು ಕಾಡುತ್ತ
ಸೋತಿಹವು ಕೈಕಾಲು , ಮನವಿಲ್ಲ ಸ್ಪಷ್ಟ
ಬಲಿತಿಹುದು ಕಿವಿ ದೂರ, ದೃಷ್ಟಿ ಅಸ್ಪಷ್ಟ
ಗ್ರೀಷ್ಮನಾ ಹರವಿನ್ನೂ ಮುಗಿದಿಲ್ಲ ಕಳೆದಿಲ್ಲ
ಹೇಳು ಮುಂದಿನ ಸರದಿ ನನ್ನದಲ್ಲ
****೩****
ಮುಗಿದಿಲ್ಲ ಆಸೆ ಆಕಾಂಕ್ಷೆ ಮೋಹಾವೇಶ
ಮೊಮ್ಮಗಳ ಮದುವೆ, ಸುತನ ಗೃಹ ಪ್ರವೇಶ
ಮಿತ್ರನಾ ಶಷ್ಟಬ್ದ್ಯ ಕಾದಿಹುದು, ಉಳಿದಿಹುದು
ಮತ್ತಿನ್ನೂ ಮರಿಮಗನ ಅನ್ನ ಪ್ರಾಶ
ಮತ್ತೆ ಬ್ರಂದಾವನದ ಭೇಟಿಯೇ ಮಾಡಿಲ್ಲ
ಕಾಶಿ ತಿರುಪತಿ ಮಥುರೆ ಬದುಕಲ್ಲೇ ನೋಡಿಲ್ಲ,
ಹೇಳು ಮುಂದಿನ ಸರದಿ ನನ್ನದಿಲ್ಲ
****೪****
ಗುರು ಹಿರಿಯಾದಿ ಹಳೇ ಮಿತ್ರರಾ ಭೇಟಿ
ಬಹುದೋ ಬಾರದೋ ಮತ್ತೆ ಕಾಲವಿದು ಮೀಂಟಿ
ನಮ್ಮದಾಗದು ನಾಳೆ ಬ್ಯಾಂಕಿನಾ ಇಡುಗಂಟು
ಬೆಳಕಿನಲ್ಲಿನ ನೆರಳೇ ಇಂದಿನಾ ನಂಟು
ಜವನ ಕೊಡುಗೆಯ ಕ್ಷಣದೆ ಜೀವನವು ಉಂಟು
ನಾಳೆಯಾ ಹುಮ್ಮಸ್ಸು ಬೋನಸ್ಸು, ಮತ್ತೆಲ್ಲ
ಹೇಳು ಮುಂದಿನ ಸರದಿ ನನ್ನದೆಲ್ಲಾ