ಹೊಗೇನಕಲ್ project ಗೆ ಹೊಗೆ!!
"ಯಾರು ತಮಿಳು ಮಾತನಾಡುವವನೊಂದಿಗೆ ತಮಿಳಿನಲ್ಲಿ, ತೆಲುಗು ಮಾತನಾಡುವವನೊಂದಿಗೆ ತೆಲುಗಿನಲ್ಲಿ, ಇಂಗ್ಲಿಷ್ ಮಾತನಾಡುವವನೊಂದಿಗೆ ಇಂಗ್ಲಿಷಿನಲ್ಲಿ, ಮತ್ತು ಕನ್ನಡ ಮಾತನಾಡುವವನೊಂದಿಗೆ ಇಂಗ್ಲಿಷಿನಲ್ಲಿ ಮಾತನಾಡುತ್ತಾನೊ ಅವನೇ ನಿಜವಾದ ಕನ್ನಡಿಗ" – ಅನಾಮಿಕ
ಆಹಾ, ಎಂಥ ಬಿರಿದು! ನಾಚಿಕೆಯಾಗಬೇಕು.
ಇಂಥ ಭಾಷಾಭಿಮಾನವಳ್ಳ ಕನ್ನಡಿಗರಿಗೆ, ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಪಟ್ಟವೇಕೆ, ರೇಲ್ವೆ ಹುದ್ಡೆಗಳಲ್ಲಿ ರಿಸರ್ವೇಶನ್ಗಳೇಕೆ, ಭಾರತದ ಸಾಫ್ಟ್ ವೇರ್ ರಾಜಧಾನಿಯೆಂಬ ಹೆಗ್ಗಳಿಕೆಯೇಕೆ (ಮತ್ತು ಕಾವೇರಿ ನೀರು ಏಕೆ?)?
ಕೆಲದಿನಗಳ ಹಿಂದೆ ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ("ಸಾಸ್ ಕೆನ್" ಯೆಂದು ಅದರ ಹೆಸರು) ಕೆನೆಡಾದ ಒಬ್ಬ ಯುವಕ ಕನ್ನಡದ ಯುವತಿಯೊಬ್ಬಳನ್ನು ಕೆಣಕಿದನಂತೆ! ಇಷ್ಟು ಸಾಲದೆಂಬಂತೆ ಕನ್ನಡಬಗ್ಗೆ, ಕನ್ನಡಿಗರಬಗ್ಗೆ ಕೆಟ್ಟದಾಗಿ ಬರೆದು ಪ್ರಚಾರ ಮಾಡಿದನಂತೆ. ಇವನ ಈ ದುರ್ನಡತೆಯನ್ನು ಹತ್ತಿಕ್ಕಲು "ಕನ್ನಡ ರಕ್ಷಣಾ ವೇದಿಕೆ"ಯವರೇ ಬರಬೇಕಾಯಿತೇನೋ! ಆದರೆ ಆ ಕೆನಡಿಯನ್ ಕೋತಿಯ ಕಾಲು ಮುರಿಯದೆ ಓಡಿಹೋಗಲು ಬಿಟ್ಟು ನಮ್ಮ ರಕ್ಷಣಾ ವೇದಿಕೆಯವರು ದೊಡ್ಡ ತಪ್ಪು ಮಾಡಿದರು. ಕರ್ನಾಟಕದ ಅನ್ನವನ್ನು ಉಣ್ಣುತ್ತಿರುವ ಈ ಸಾಫ್ಟ್ ವೇರ್ ಕಂಪನಿಗಳಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅವಮಾನಗಳಲ್ಲಿ ಇದು ಒಂದು ಮುಖ ಮಾತ್ರ!
ಮೊನ್ನೆ ನಮ್ಮ ದೇಶದ ರೇಲ್ವೆ ಸಚಿವರಾದ ಶ್ರೀಮಾನ್ ಲಾಲು ಪ್ರಸಾದ್ ಯಾದವ್ ರವರು ಕನ್ನಡಿಗರನ್ನು "ಡರ್ಟಿ ಪೀಪಲ್" ಎಂದು ಎಲೆ-ಅಡಿಕೆ ಹಾಕಿಕೊಂಡು ಉಗಿದರಂತೆ! ಇದರ ವಿರುದ್ಧ ನಮ್ಮ ರಾಜಕಾರಣಿಗಳು ಉಗ್ರ ಪ್ರತಿಭಟನೆ ಮಾಡದಿರುವುದು ಅಚ್ಚರಿ ತರುವ ವಿಚಾರ! ಆಸ್ತಿ ಮಾಡುವುದರಲ್ಲಿಯೇ ಆಸಕ್ತರಾದ ನಮ್ಮ ರಾಜಕಾರಣಿಗಳು ಇನ್ನೇನು ತಾನೆ ಮಾಡಿಯಾರು?
ಈಗ ತಮಿಳು ನಾಡಿನ ಮುಖ್ಯ ಮಂತ್ರಿ ಕರುಣಾನಿಧಿಯವರು "ಕನ್ನಡಿಗರು ನಮಗೆ ಕುಡಿಯುವ ನೀರು ಇಲ್ಲದ ಹಾಗೆ ಮಾಡುತ್ತಿದ್ದಾರೆ" ಎಂದು ದೂರಿದ್ದಾರೆ. ಇವರು ಕೇಳಿದಾಗಲೆಲ್ಲ ಕಾವೇರಿ ನೀರು ಕೊಟ್ಟದ್ದಕ್ಕೆ ನಮಗೆ ಸಿಕ್ಕ ಶಹಬಾಶ್ಗಿರಿ!
ಇಷ್ಟೆಲ್ಲಾ ಅವಹೇಳನವಾಗುತ್ತಿದ್ದರೂ ಕನ್ನಡಿಗರು ಕಣ್ಮುಚ್ಚಿ ಕುಳಿತಿರುವುದು ಎಂಥಾ ವಿಪರ್ಯಾಸ! ಇನ್ನಾದರೂ ನಮ್ಮ ಕನ್ನಡಿಗರು ಎಚ್ಚೆತ್ತುಕೊಳ್ಳುವರೆ? ಕರ್ನಾಟಕವೆಂಬ ಹೆಬ್ಬುಲಿ ಅಬ್ಬರಿಸುವುದೆ?