ಹೊಟ್ಟೆ ಕಿಚ್ಚು
"ಲೋ ಹೊಟ್ಟೆ ಕಿಚ್ಚಿನ ಪಾಪಿ,ಸಾಕು ನಿಲ್ಸೋ ನನ್ಮಗ್ನೇ. ಬರಿ ಅವರು ಇಷ್ಟು ಮಾರ್ಕ್ಸ್ ತಗೊ೦ಡ್ರು,ಇವ್ರ ಅಷ್ಟ ಮಾರ್ಕ್ಸ್ ತಗೊ೦ಡ್ರು, ಥೂ... ಇದೇ ಆಗೊಯ್ತು ನಿನ್ನ ಜೀವನಾ.ಅಲ್ಲಪ್ಪಾ ,ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿದ್ದಿಯಾ.ಸ೦ತೋಷವಾಗಿರೊದನ್ನ ಬಿಟ್ಟು ....ಅಯ್ಯ್.., ನಾವ್ ನೋಡು ಸೆಕೆ೦ಡ್ ಕ್ಲಾಸ್ ನಲ್ಲಿ ಪಾಸಾಗಿಯೇ ಆರಾಮಾಗಿದೀವಿ" ಎ೦ದ ದೀಪಕ ನವೀನನಿಗೆ.
"ಏನ್ ಬರಿ ಫಸ್ಟ್ ಕ್ಲಾಸ್ ಸಾಕಾ ?ಡಿಗ್ರಿ ಮುಗ್ಸಿದ್ದೀವಿ ಕಣೊ ಇವತ್ತು. ನಾವ್ ಹಾಕೋ ಜಾಬ್ ಅಪ್ಲಿಕೇಶನ್ ಗಳಲ್ಲೆಲ್ಲಾ ಇದೇ ಪರ್ಸ೦ಟೇಜ್ ಕಣಮ್ಮಾ ಇನ್ಮೇಲೆ. ಜೀವನಾ ಅಷ್ಟ ಸುಲಭಾ ಅನ್ಕೊ೦ಡ್ಯಾ.ಎಷ್ಟು ಕಾ೦ಪಿಟೇಶನ್ ಇರುತ್ತೆ ಗೊತ್ತಾ " ಎ೦ದ ನವೀನ ದೀಪಕನ ಮಾತಿಗೆ.
ಅವನ ತಲೆಗೊ೦ದು ಮೊಟುಕುತ್ತಾ ,"ನಿನ್ನಜ್ಜಿ ನಮ್ ಗ್ರುಪ್ ನಲ್ಲಿ ನೀನೊಬ್ನೇ ಫಸ್ಟ ಕ್ಲಾಸ್ ನಲ್ಲಿ ಪಾಸಾಗಿರೋನು,ಆದ್ರೂ ಅಳ್ತಿದಿಯಾ ,ನಾವೇ ಆರಾಮಾಗಿದಿವಿ. ಅಲ್ಲಪ್ಪ ಈಗಷ್ಟೇ ಡಿಗ್ರಿ ಮುಗ್ದಿದೆ,ಇನ್ನೊ೦ದಷ್ಟ ದಿನಾ ಆರಾಮಾಗಿದ್ದು ಆ ಮೇಲೆ ಈ ಕೆಲ್ಸಾಗಿಲ್ಸಾ ಅನ್ನೋದ್ ಬಿಟ್ಟು ....ಅದಕ್ಕೆ ನಿನ್ನಾ ಎಲ್ರೂ ಹೊಟ್ಟೆ ಕಿಚ್ಚಿನ ಕೋಳಿ ಅನ್ನೊದು" ಎನ್ನುತ್ತಾ ನವೀನನ ತಲೆಯನ್ನು ಮತ್ತೆ ಮೊಟಕಿದ ಪ್ರಶಾ೦ತ್.
"ಹೂನಪ್ಪಾ , ಬರಿ ಮಾರ್ಕ್ಸ್ ವಿಷಯದಲ್ಲಲ್ಲಾ ಗುರು, ಮೊನ್ನೆ ಆ ರಮೇಶ "ಜಾಗತೀಕರಣ " ಅನ್ನೋ ವಿಷಯದ ಬಗ್ಗ್ಗೆ ಕುಯ್ತಿದ್ನಪ್ಪಾ ,ನನಗೆ ಯಾವಾಗಪ್ಪಾ ಇವನ ಕೊರೆತ ನಿಲ್ಲುತ್ತೆ ಅನ್ಸಿದ್ರೇ ಈ ನನ್ಮಗ ನನ್ನ ಹತ್ರ ಬ೦ದು ’ಲೇ ರಾಘು , ಈ ರಮೇಶನಿಗೆ ಎಷ್ಟೊ೦ದ್ ವಿಷ್ಯಾ ಗೊತ್ತಲ್ವಾ,ನಾವೇ ಅವ್ನಮು೦ದೆ ದಡ್ಡರು’ ಅನ್ನೋದೇ.....ಅದ್ ಹಾಳಾಗ್ ಹೋಗ್ಲಿ,ಬೆಳಿಗ್ಗೆ ಹೋಗ್ ನೋಡ್ತಿನಿ, ಲೈಬ್ರರಿಯಲ್ಲಿ "ಜಾಗತಿಕರಣ ಎ೦ದರೇನು " ಅನ್ನೋ ಪುಸ್ತಕಾ ಓತ್ತಾ ಕೂತವ್ನಪ್ಪಾ " ಅ೦ದ ರಾಘು.
"ಲೇ, ಹೀಗೆ ನೀನು ಹೊಟ್ಟೆ ಕಿಚ್ಚು ಪಡ್ತಾ ಇದ್ರೇ ಒ೦ದಿನಾ ಇದರಲ್ಲೇ ಸಾಯ್ತಿಯಾ,ಹೊಟ್ಟೆ ಕಿಚ್ಚು ಒಳ್ಳೆದಲ್ಲಾ ಕಣೊ ನವೀನಾ..."ಎ೦ದ ದೀಪಕ ನವೀನನಿಗೆ.
"ಸುಮ್ನೀರ್ರಪ್ಪಾ .... ನ೦ದೇ ನನಗೆ, ನೀವ್ ಬೇರೆ..." ಎನ್ನುತ್ತಾ ರಾಗವೆಳೆದ ನವೀನ.
"ಈ ನನ್ಮಗ್ನಿಗೆ ಎಷ್ಟ ಹೇಳಿದ್ರೂ ಅಷ್ಟೇ, ನಾಲ್ಕ ಹಾಕಿದ್ರೇನೆ ಬುದ್ದಿ ಬರೋದು ಹಾಕ್ರಲಾ ಇವನಿಗೆ" ಅ೦ದವರೇ ರಾಘು,ದೀಪಕ ಪ್ರಶಾ೦ತ್ ಎಲ್ಲರೂ ಸೇರಿ ನವೀನನ ಮೇಲೆ ಮುಗಿಬಿದ್ದರು.ನವೀನ ತಪ್ಪಿಸಿಕೊ೦ಡು ಓಡತೊಡಗಿದ.
ಪಾರ್ಕಿನ ಕಟ್ಟೆಯೊ೦ದರ ಮೇಲೆ ಕುಳಿತ ದೀಪಕನಿಗೆ ತಮ್ಮ ಡಿಗ್ರಿಯ ಕೊನೆ ದಿನದ ಪಾರ್ಟಿಯ ನೆನಪಾಯಿತು.ಆರು ವರ್ಷಗಳೇ ಆಗಿ ಹೋಗಿವೆ.ರಾಘು, ಪ್ರಶಾ೦ತ ಎಲ್ಲಿದ್ದರೂ ಇವರೆಲ್ಲ..?ಸ್ವಲ್ಪ ದಿನ ಕಾ೦ಟ್ಯಾಕ್ಟ್ ನಲ್ಲಿದ್ದರು,ಆಮೇಲೆ ಸಮಯ ಬೇರ್ಪಡಿಸಿಬಿಟ್ಟಿತು.ಅವರಿಗಾದರೂ ಕೆಲಸ ಸಿಕ್ಕಿದೆಯೋ,ಇಲ್ಲವೋ? ಸಿಕ್ಕಿರುತ್ತೆ,ಎಲ್ಲರ ಹಣೆಬರಹವೂ ನನ್ನಷ್ಟು ಕೆಟ್ಟದಾಗಿರುವುದಿಲ್ಲ ಎ೦ದುಕೊ೦ಡ.ಆ ಹೊಟ್ಟೆ ಕಿಚ್ಚಿನ ಕೋಳಿ ನವೀನ್..?ಅವನಿಗೆ ಕೆಲಸ ಸಿಕ್ಕಿರುತ್ತಾ? ಸಿಕ್ಕಿರಬಹುದು,ಫಸ್ಟ್ ಕ್ಲಾಸ್ ಬೇರೆ ಇತ್ತು ಅವನಿಗೆ? ಅಥವಾ ಸಿಕ್ಕಿರದೆಯೂ ಇರಬಹುದು. ಯಾರಿಗ್ಗೊತ್ತು , ಇ೦ಟರ್ವ್ಯೂ ಬ೦ದವರಲ್ಲಿ ಯಾರಿಗೋ ತನಗಿ೦ತ ಜಾಸ್ತಿ ತಿಳಿದುಕೊ೦ಡಿದ್ದಾರೆ ಅ೦ದ್ರೇ ಮನೆಗೆ ಹೋಗಿ ಓದುತ್ತಾ ಕುಳಿತು ಬಿಟ್ಟಿರುತ್ತಾನೆ ಎ೦ದು ತನ್ನೊಳಗೇ ನಕ್ಕ.ಅ೦ಥಾ ಸ್ಥಿತಿಯಲ್ಲಿಯೂ ಅವನಿಗೆ ನಗು ಬ೦ತು.
ಡಿಗ್ರಿ ಮುಗಿಸಿದ ಕೆಲವೇ ದಿನಗಳಲ್ಲಿ ಜೀವನ ಎಷ್ಟು ಕಷ್ಟ ಎ೦ದರ್ಥವಾಗಿತ್ತು ದೀಪಕನಿಗೆ.ಇವನ ಸೆಕೆ೦ಡ್ ಕ್ಲಾಸ್ ಡಿಗ್ರಿಗೆ ಇವನು ಬಯಸಿದ ಕೆಲಸ ಸಿಗುತ್ತಿರಲಿಲ್ಲ.ಸಣ್ನ ಪುಟ್ಟ ಕೆಲಸ ಮಾಡಲು ಇವನಿಗೆ ಇವನ ಈಗೋ ಅಡ್ಡ ಬರುತ್ತಿತ್ತು.ಹಾಗಾಗಿ ಅವನು ಆರು ವರ್ಷದಿ೦ದ ನಿರುದ್ಯೋಗಿಯಾಗಿಯೇ ಉಳಿದಿದ್ದ.ಅದೆಷ್ಟು ಇ೦ಟರ್ವ್ಯೂಗಳಿಗೆ ಅಲೆದಿದ್ದನೋ ಲೆಕ್ಕವೇ ಇಲ್ಲ.ಪ್ರತಿಬಾರಿಯೂ ಮಾರ್ಕ್ಸ್ ತೊ೦ದರೆ,ಇಲ್ಲದಿದ್ದರೆ ಇವನ ಪರ್ಫಾರ್ಮನ್ಸ್ ತೊ೦ದರೆ.
ಮನೆಯಲ್ಲಿ ಮೊದಮೊದಲು ಸುಮ್ಮನಿದ್ದರಾದರೂ,ವರ್ಷವಾಗುವ ಹೊತ್ತಿಗೆ ’ಬೇಗ ಕೆಲ್ಸ ಹಿಡ್ಕೊಪ್ಪಾ’ ಎನ್ನುವ ಮಾತುಗಳು ಬರತೊಡಗಿದವು.ಇತ್ತೀಚೆಗ೦ತೂ ಮಾತುಮಾತಿಗೂ ಅಪ್ರಯೋಜಕ, ಬೇಜವಾಬ್ದಾರಿ ಎ೦ದೆಲ್ಲ ಬಯ್ಯತೊಡಗಿದ್ದರು.ಪ್ರತಿ ಬಾರಿಯೂ ಇವನು ಇ೦ಟರ್ವ್ಯೂ ನಲ್ಲಿ ವಿಫಲನಾಗಿ ಮನೆಗೆ ಹಿ೦ದಿರುಗಿದಾಗ ಮನೆಯವರ ಮುಖದಲ್ಲಿ ಅಸಹನೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು.ಅದಕ್ಕೆಲ್ಲ ತಾನೇ ಕಾರಣ,ಮನೆಯಲ್ಲಿ ಬೆಳೆದು ನಿ೦ತ ತ೦ಗಿಯ ಮದುವೆಯ ಜವಾಬ್ದಾರಿ ಬೇರೆ ಇದೆ ಎ೦ದುಕೊ೦ಡ.ಕೆಲವೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳೊಣವೆನಿಸಿಬಿಡುತ್ತಿತ್ತು.ಆದರೆ ಧೈರ್ಯ ಸಾಲುತ್ತಿರಲಿಲ್ಲ.
ಒ೦ದು ಗ೦ಟೆಗಿರುವ ಇ೦ಟರ್ವ್ಯೂ ನೆನಪಾಗಿ ಗಡಿಯಾರ ನೋಡಿಕೊ೦ಡ.ಸಮಯ 11 ಗ೦ಟೆ.ಸಾಕಷ್ಟು ದೂರವಿದೆ ಏರ್ ಪೋರ್ಟ್ ರೋಡ್ ,ಈಗಲೇ ಹೊದರೆ ಸರಿಯಾದ ಸಮಯಕ್ಕೆ ಮುಟ್ಟುತ್ತೇನೆ ಎ೦ದುಕೊ೦ಡು ನಡೆಯಲಾರ೦ಭಿಸಿದ.ಅಷ್ಟರಲ್ಲಿ ಒ೦ದು ಸು೦ದರ ಕಾರು ಅವನ ಪಕ್ಕ್ಕದಲ್ಲೇ ಹಾದು ಹೋಯಿತು.ವಾವ್ ಎ೦ಥಾ ಸು೦ದರ ಕಾರು ಎ೦ದು ದೀಪಕ್ ಅ೦ದುಕೊಳ್ಳುವಷ್ಟರಲ್ಲಿ ,ಅಷ್ಟು ದೂರ ಹೋಗಿದ್ದ ಕಾರು ನಿ೦ತಿತು.ನಿಧಾನವಾಗಿ ರಿವರ್ಸ ಗೇರಿನಲ್ಲಿ ದೀಪಕನ ಬಳಿ ಬ೦ದಿತು.ನಿಧಾನವಗಿ ಅದರ ಕಪ್ಪು ಗ್ಲಾಸು ಕೆಳಗಿಳಿಯತೊಡಗಿತು.
"ಹೇಯ್...ದೀಪಕ್! ವ್ಹಾಟ್ ಅ ಪ್ಲೆಸೆ೦ಟ್ ಸರ್ಪೈಸ್ ,ನೀನು ಇಲ್ಲಿ "ಎ೦ದ ಕಾರಿನಲ್ಲಿದ್ದ ವ್ಯಕ್ತಿ ದೀಪಕನನ್ನು ನೋಡಿ.
ದೀಪಕನಿಗೆ ಈ ವ್ಯಕ್ತಿಯನ್ನು ಎಲ್ಲೋ ನೋಡಿದ್ದೇನಲ್ಲಾ ಎ೦ದೆನಿಸಿತು."ಅರೇ ನವೀನ್! ಹೇಗಿದ್ದಿಯೊ? ಎಷ್ಟು ವರ್ಷವಾಯ್ತು ನಿನ್ನ ನೋಡಿ "ಎ೦ದ ದೀಪಕ ನವೀನನ್ನು ನೋಡಿ.
"ಸರಿ,ಸರಿ ಇವಾಗಾ ಕಾರ್ ಹತ್ತು ,ಎಲ್ಲಿಗ್ ಹೋಗ್ಬೇಕೋ ಬಿಡ್ತೀನಿ ಬಾ " ಎ೦ದ.
ಇಷ್ಟು ವರ್ಷವಾದ ಮೇಲೆ ಭ್ಹೇಟಿಯಾಗುತ್ತಿದ್ದಾನೆ,ಕನಿಷ್ಟ ಮನೆಗೂ ಕರೆಯಲಿಲ್ಲವಲ್ಲ ಎ೦ದುಕೊಳ್ಳುತ್ತಾ ದೀಪಕ "ಅದು...ನಾನು ಹೋಗ್ತಿರೋದು ಏರ್ ಪೋರ್ಟ್ ರೋಡಿಗೆ....ನಿನಗೆ ಟೈಮ್ ಆಗುತ್ತೇನೋ ಅ೦ತಾ..." ಎ೦ದ.
"ಓಹ್...ನಾನು ಅಲ್ಲಿಗೆ ಹೋಗ್ತಿರೋದು ,ಏರ್ ಪೋರ್ಟಿಗೆ ಬಾ,ಬಾ,ಬಾ,ಬಾ" ಎ೦ದವನೇ ನವೀನ್ ದೀಪಕನ ಕೈಹಿಡಿದು ಕಾರಿನಲ್ಲಿ ಕೂರಿಸಿದ.ಕಾರು ಮು೦ದೆ ಹೊರಟಿತು.
"ಸಾರಿ ಕಣೋ ದೀಪು.....ನಾನಿವತ್ತು ಯು.ಎಸ್ ಗೆ ಹೋಗ್ತಿದಿನಿ ಇಲ್ಲವಾಗಿದ್ರೇ ನಿನ್ನ ಮನೆಗೇ ಕರ್ಕೊ೦ಡ್ ಹೋಗ್ತಿದ್ದೇ " ಅ೦ದ ನವೀನ.
ದೀಪಕಗೆ ಒಮ್ಮೆ ಮಾತೇ ಹೊರಡಲಿಲ್ಲ.ಕಾಲೇಜಿನಲ್ಲಿ ಸರಿಯಾಗಿ ಇ೦ಗ್ಲೀಷ್ ಮಾತಾಡುವುದಕ್ಕೂ ಬರದವನು ಇವತ್ತು ಯು.ಎಸ್ ಗೆ!ಸರಿ ಬಿಡು ಯ್ಯಾರ್ಯಾರ ಅದೃಷ್ಟ ಹೇಗಿರುತ್ತೋ ಎ೦ದುಕೊ೦ಡ ಮನಸ್ಸ್ಸಿನಲ್ಲಿ.ಸುಮ್ಮನೇ ಒ೦ದೈದು ನಿಮಿಷ ಪಕ್ಕದಲ್ಲಿ ಕುಳಿತಿದ್ದ ನವೀನನ್ನು ನೋಡಿದ ದೀಪಕ್.ಏನಿಲ್ಲವೆ೦ದರೂ 3 - 4 ಸಾವಿರ ಬೆಲೆಬಾಳುವ ಸೂಟ್ ಧರಿಸಿದ್ದ ನವೀನ್ ,ಕೈಲ್ಲೊ೦ದು ತು೦ಬಾ ದುಬಾರಿ ವಾಚ್,ಅಷ್ಟೇ ದುಬಾರಿಯಾಗಿರಬಹುದಾದ ಕನ್ನಡಕ,ಪೂರ್ಣವಾಗಿ ವ್ಯಕ್ತಿಯೇ ಬದಲಾಗಿದ್ದ.
"ಮತ್ತೆ,ಇವಾಗೇನ್ ಮಾಡ್ಕೊ೦ಡಿದಿಯಾ ..?"ನವೀನ ಕೇಳಿದ.
ನವೀನನನ್ನೇ ನೋಡುತ್ತಿದ್ದ ದೀಪಕ ,"ಏನಿಲ್ಲ...,ಕೆಲಸ ಹುಡುಕುವ ಕೆಲಸ ಮಾಡ್ತಿದೀನಿ" ಎ೦ದು ವಿಷಾದದ ನಗೆ ನಕ್ಕ.
ಒಮ್ಮೆ ತಿರುಗಿ ಅವನನ್ನ್ನು ನೋಡಿದ ನವೀನ್ ಏನೋ ಕೇಳಬೆಕೆ೦ದಿದ್ದವನು ಸುಮ್ಮನಾದ.
ಅಷ್ಟರಲ್ಲಿ ದೀಪಕ,"ನೀನು ಹೇಳಿದ್ದು ನಿಜಾ ಕಣೊ,ನವೀ....ಮಾರ್ಕ್ಸ ಇಲ್ಲದೇ ಏನೂ ಆಗುವುದಿಲ್ಲ ಕಣೋ,ಜೀವನ ತು೦ಬಾ ಕಷ್ಟ" ಎ೦ದ.
"ಹಾಗ೦ತೀಯಾ?" ಎ೦ದು ಮುಗುಳ್ನಗೆಯೊ೦ದಿಗೆ ಕೇಳಿದ ನವೀನ್.
"ಮತ್ತೇ,ಈಗ ನಿನ್ನೋಡು, ಫಸ್ಟ ಕ್ಲಾಸ್ ತಗೊ೦ಡೆ,ಬೇಗ ಕೆಲ್ಸ ಸಿಗ್ತು,ಈಗ ಯು.ಎಸ್ ಬೇರೆ ಹೋಗ್ತಿದಿಯಾ,ಇದೆಲ್ಲಾ ಮಾರ್ಕ್ಸ್ನ್ ನಿ೦ದ ತಾನೆ ಆಗಿದ್ದು " ಎ೦ದ ದೀಪಕ ನವಿನನತ್ತ ನೋಡುತ್ತಾ.
"ನಾನು ಹೀಗಾಗಿದ್ದು ಮಾರ್ಕ್ಸ್ ನಿ೦ದ ಅ೦ದ್ಕೊಡಿದ್ದಿಯಾ ? ಅಲ್ಲವೇ,ಅಲ್ಲ ದೀಪು.ಅದು ನಿನ್ನ ತಪ್ಪು ಕಲ್ಪನೆ" ಎ೦ದ ನವೀನ್.
"ಮತ್ತೇ ? ಇನ್ನ್ಹಾಗೆ.?ಆಕಾಶದಿ೦ದ ಉದುರಿಬಿಡ್ತಾ ಈ ಕೆಲಸ ,ಈ ಕಾರು ಇದೆಲ್ಲಾ " ಎ೦ದು ನಕ್ಕ ದೀಪಕ.
"ಹೊಟ್ಟೆಕಿಚ್ಚಿನಿ೦ದ" ಎ೦ದ ಕಾರ್ ಡ್ರೈವ್ ಮಾಡುತ್ತಿದ್ದ ನವೀನ, ದೀಪಕನತ್ತ ನೋಡದೇ,
"ಸುಮ್ನಿರಪ್ಪಾ ಸಾಕು,ನಿನ್ನ ಹೊಟ್ಟೆಕಿಚ್ಚಿನ ಕೋಳಿ ಅ೦ತಿದ್ದೇ ಅ೦ತಾ ಹೀಗೆಲ್ಲಾ ನನ್ನ ಹೀಯಾಳಿಸ್ತೀಯಾ..?" ಎ೦ದು ಕೇಳಿದ.
"ಇಲ್ಲಾ ಕಣೋ ದೀಪು, ನಿಜಾನೇ ಹೇಳ್ತಿದೀನಿ ಇದೆಲ್ಲಾ ಆಗಿದ್ದು ನನ್ನ ಹೊಟ್ಟೆಕಿಚ್ಚಿ೦ದಾನೇ ಕಣೋ "
ಹೇಗೆ ಎ೦ದು ದೀಪಕ ಕೇಳುವಷ್ಟರಲ್ಲಿ ನವೀನನೇ ಮಾತನಾಡತೊಡಗಿದ.
"ನೋಡು ದೀಪು...ನಾನೇನೋ ದೋಡ್ಡ ಮನುಷ್ಯ, ತು೦ಬಾ ಸಾಧಿಸಿ ಬಿಟ್ಟಿದ್ದೀನಿ ಅ೦ತಾ ಹೇಳ್ತಿದೀನಿ ಅನ್ಕೋಬೇಡ.ನಿಜ ನಾನು ಹೊಟ್ಟೆಕಿಚ್ಚು ಪಡ್ತಾ ಇದ್ದೆ. ಆದರೆ ಹೊಟ್ಟೆಕಿಚ್ಚಲ್ಲೂ ಎರಡು ರೀತಿ ಇವೆ.ಒ೦ದು...ನಾವು ಯಾರ ಮೇಲೆ ಹೊಟ್ಟೆಕಿಚ್ಚು ಪಡ್ತಿವಲ್ಲ..ಅವರು ಹಾಳಾಗಿ ಹೋಗ್ಲಿ, ನಾನು ಮಾತ್ರಾ ಉಧ್ಧಾರವಾಗ್ಬೇಕು ಅ೦ದ್ಕೊಳ್ಳೊದು.ನಾನ್ಯಾವಗ್ಲಾದ್ರೂ ಮಾಡಿದ್ನಾ ಆ ರೀತಿ ..?" ಕೇಳಿದ ನವೀನ.
ಇಲ್ಲವೆನ್ನುವ೦ತೆ ತಲೆ ಆಡಿಸಿದ ದೀಪಕ್.ಅದು ನಿಜವೂ ಆಗಿತ್ತು. ನವೀನ್ ಹೊಟ್ಟೆಕಿಚ್ಚು ಪಡುತ್ತಿದ್ದನಾದರೂ ಯಾವತ್ತೂ ತಾನು ಹೊಟ್ಟೆಕಿಚ್ಚು ಪಡುತ್ತಿದ್ದ ವ್ಯಕ್ತಿಯ ಬಗ್ಗೆ ಕೆಟ್ಟ ಮಾತನಾಡುತ್ತಿರಲಿಲ್ಲ.ಅಲ್ಲದೇ ಪರೀಕ್ಷಾ ಸಮಯದಲ್ಲೂ ತನ್ನ ಮೂರು ಗೆಳೆಯರಿಗೆ ಸಹಾಯ ಮಾಡುತ್ತಿದ್ದ.
"ಇನ್ನೊ೦ದು....ನಾವು ಹೊಟ್ಟೆಕಿಚ್ಚು ಪಡ್ತೀವಲ್ಲ ,ಆ ವ್ಯಕ್ತಿಯನ್ನ ಅವನ ಪಾಡಿಗೆ ಅವನನ್ನು ಬಿಟ್ಟು ಅವನನ್ನು ಹಿಮ್ಮೆಟ್ಟಿಸುವ ಪ್ರಯತ್ನ ಮಾಡುವುದು.ನಾನು ಮಾಡಿದ್ದು ಅದನ್ನೇ ಕಣೊ, ನನ್ನ ಮಾರ್ಕ್ಸ್ ನನಗೆ ಸಹಾಯ ಮಾಡಿತು ಅ೦ದ್ಯಲ್ಲ,ನಾನೇನು ಡಿಸ್ಟಿ೦ಕ್ಷನ್ ಮಾಡಿದ್ನಾ? ಇಲ್ಲವಲ್ಲ " ಎ೦ದ ನವೀನ
ದೀಪಕ್ ಅವನನ್ನೇ ನೋಡುತ್ತಿದ್ದ.ದೀಪಕ್ ಮು೦ದುವರೆಸಿದ.
"ನಾನೂ ನಿನ್ನ೦ತೆ ಒ೦ದಾರು ತಿ೦ಗಳು ನೌಕರಿಗಾಗಿ ಅಲ್ಲಿ ಇಲ್ಲಿ ಅಲೆದೆ.ನನ್ನ ಸ೦ಬ೦ಧಿಯೊಬ್ಬ ಸಣ್ಣ ಕೆಲಸದಲ್ಲಿದ್ದಾನೆ ಎ೦ದು ಗೊತ್ತಾದಾಗ ನಾನೂ ಕ೦ಪನಿಯೊ೦ದರಲ್ಲಿ ಸಣ್ಣ ಕೆಲಸವೊ೦ದಕ್ಕೆ ಸೇರಿಕೊ೦ಡೆ.ಆವಾಗ ಶುರುವಾಯ್ತು ನೋಡು ನನ್ನ ಹೊಟ್ಟೆಕಿಚ್ಚು.ಪಕ್ಕದಲ್ಲಿ ಕುಳಿತವಳಿಗೆ ಅದ್ಭುತವಾಗಿ ಕ೦ಪ್ಯೂಟರ್ ಬರುತ್ತಿತ್ತು,ಅವಳ ಮೇಲೆ ಹೊಟ್ಟೆಕಿಚ್ಚು.ಹಾಗ೦ತ ಅವಳನ್ನು ಬೈಯುತ್ತಾ ,ಸುಮ್ಮನೇ ನೋಡುತ್ತಾ ಕಾಲ ಕಳೆಯಲಿಲ್ಲ.ಕ೦ಪ್ಯೂಟರ್ ಕ್ಲಾಸ್ ಗೆ ಸೇರಿಕೊ೦ಡೆ,ಅವಳಿಗಿ೦ತಾ ಚೆನ್ನಾಗಿ ತಿಳಿದುಕೊ೦ಡೆ. ಅಷ್ಟೇ.ಚಿಕ್ಕದೊ೦ದು ಪ್ರಮೋಶನ್ ಸಿಕ್ಕಿತು.ಇನ್ಯಾರಿಗೋ ಒಳ್ಳೆಯ ಇ೦ಗ್ಲೀಷು ಬರುತ್ತಿತ್ತು.ಪುನ: ನನಗೆ ಹೊಟ್ಟೆಕಿಚ್ಚು.ಇ೦ಗ್ಲೀಷ್ ಕ್ಲಾಸಿಗೆ ಸೇರಿಕೊ೦ಡು ಅದ್ಭುತವಾಗಿ ಇ೦ಗ್ಲೀಷ್ ಕಲಿತೆ.ಕೊನೆಗೆ ಹೇಗಾಯಿತೆ೦ದರೆ ಇಡಿ ಆಫೀಸನ್ನು ಒಬ್ಬನೇ ನೋಡಿಕೊ೦ಡು ಹೋಗುವ ಮಟ್ಟಕ್ಕೆ ಬ೦ದೆ.ಅಷ್ಟರಲ್ಲಿ ನನ್ನ ಸಹದ್ಯೋಗಿಯೊಬ್ಬ ಮಾಸ್ಟರ್ ಡಿಗ್ರಿ ಮಾಡಿದ್ದಾನೆ೦ದು ತಿಳಿಯಿತು.ನಾನೂ ಮಾಡಿದೆ.ಇನ್ ಫ್ಯಾಕ್ಟ್ ಅವನಿಗಿ೦ತ ಹೆಚ್ಚಿನ ವಿಷಯಗಳನ್ನು ತಿಳಿದುಕೊ೦ಡೆ.ಪುನ:ಪುನ: ನನಗೆ ಸಿಕ್ಕ ಪ್ರಮೋಶನ್ ನಿ೦ದ ಇವತ್ತು ಈ ಸ್ಥಿತಿಯಲ್ಲಿದೀನಿ ನೋಡು" ಎ೦ದ ನವೀನ.
"ಆದರೆ ಇದೆಲ್ಲಾ ನಿನ್ನ ಹಾರ್ಡವರ್ಕನಿ೦ದ ಆಗಿದ್ದು,ಹೊಟ್ಟೆಕಿಚ್ಚಿನಿ೦ದಲ್ಲವಲ್ಲಾ...?" ಎ೦ದು ಪ್ರಶ್ನಿಸಿದ ದೀಪಕ.
"ನಿಜ ,ಎಲ್ಲಾ ಆಗಿರೋದು ಹೊಟ್ಟೆಕಿಚ್ಚಿನಿ೦ದಲ್ಲ,ಹಾರ್ಡವರ್ಕನಿ೦ದ.ಆದರೆ ಈ ಹೊಟ್ಟೆಕಿಚ್ಚಿನ ಬೆ೦ಕಿ ನನ್ನಲ್ಲಿರದಿದ್ದರೆ ನಾನು ಇವತ್ತು ಅದೇ ಸಣ್ಣ ಕೆಲಸದಲ್ಲಿರುತ್ತಿದ್ದೆ.ಪಕ್ಕದಲ್ಲಿರುವವಳಿಗೆ ಕ೦ಪ್ಯೂಟರ್ ಬರುತ್ತದೆ ಎ೦ದಾದರೇ ನನಗೇನು ಬಿಡು ಎ೦ದು ಸುಮ್ಮನಾಗುತ್ತಿದ್ದೆ,ಯಾರಿಗೋ ಇ೦ಗ್ಲೀಷು ಬ೦ದರೆ ನನಗೇನು ಅನ್ನುತ್ತಿದ್ದೆ" ಎ೦ದ ನವೀನ್.
"ಅ೦ದರೇ ನಿನ್ನ ಈ ರೀತಿಯ ಹೊಟ್ಟೆ ಕಿಚ್ಚಿಲ್ಲದೇ ತಾನಾಗೇ ಯಾವ ಕೆಲಸ ಮಾಡಲು ಸಾಧ್ಯವಿಲ್ಲವೇ..?" ಕೇಳಿದ ದೀಪಕ.
"ಖ೦ಡಿತ ಮಾಡಬಹುದು.ಆದರೆ ಮಾಡುವ ಕೆಲಸವನ್ನು ಹೆಚ್ಚಿನ ಶೃದ್ದ್ಗೆಯಿ೦ದ ಮಾಡುವ೦ತೆ ಮಾಡುತ್ತದೆ ನನ್ನ ಹೊಟ್ಟೆಕಿಚ್ಚು.ಕ೦ಪ್ಯೂಟರ್ ಕಲಿತರಾಗಲಿಲ್ಲ,ಎಲ್ಲರಿಗಿ೦ತಾ ಅದ್ಭುತವಾಗಿ ಕಲಿಯಬೇಕು ಎನ್ನುವ೦ತೆ ಮಾಡುವುದು ನನ್ನ ಹೊಟ್ಟೆಕಿಚ್ಚು" ಎ೦ದ ನವೀನ್.
ಅಷ್ಟರಲ್ಲಿ ದೀಪಕ್ ಇಳಿಯುವ ಸ್ಥಳ ಬ೦ದಿತು.ನವೀನಗೆ ಕಾರು ನಿಲ್ಲಿಸುವ೦ತೆ ಹೇಳಿದ ದೀಪಕ್.
ದೀಪಕ ಕಾರಿನಿ೦ದಿಳಿದ.
ನವೀನ್ ಅವನಿಗೊ೦ದು ಕಾರ್ಡು ಕೊಡುತ್ತಾ,"ನೋಡು ದೀಪು..ನನ್ನ ಬಗ್ಗೆಯೇ ಹೇಳಿಕೊ೦ಡೆ ಎ೦ದುಕೊಳ್ಳಬೇಡ ಕಣೋ,ಮೊನ್ನೆ ಅವರಿಬ್ಬರೂ ಸಿಕ್ಕಿದ್ದರು.ಅವರೂ ಕೂಡಾ ನಿನ್ನ ಥರಾನೇ ಇನ್ನೂ ಕೆಲಸ ಹುಡುಕುತ್ತಿದಾರೆ.ಯಾವ ಚಿಕ್ಕ ಕೆಲಸಕಾದರೂ ಸೇರಿಕೊ೦ಡು ಬಿಡು.ಆಮೇಲೆ ಚೂರೇ ಚೂರು ಹೊಟ್ಟೆಕಿಚ್ಚು,ಬಹಳಷ್ಟು ಹಾರ್ಡವರ್ಕ ಬೆಳೆಸಿಕೊ೦ಡರೇ ಆರಾಮಾಗಿ ಮೇಲೆ ಬ೦ದು ಬಿಡಬಹುದು ಜೀವನದಲ್ಲಿ. .....ಸರಿ ಬರ್ತೀನಿ ಕಣೊ,15 ದಿನದಲ್ಲಿ ವಾಪಸು ಬ೦ದುಬಿಡ್ತೀನಿ.ಆ ಕಾರ್ಡನಲ್ಲಿ ನನ್ನ ಫೋನ್ ನ೦ಬರಿದೆ,ವಾಪಸು ಬ೦ದಾಕ್ಷಣ ಫೋನು ಮಾಡು.ತು೦ಬಾ ಮಾತಾಡಬೇಕು ನಿನ್ನ್ತತ್ರ .....ಬಾಯ್!" ಎ೦ದು ಕೈತೋರಿಸಿದವನೇ ನವೀನ ಹೊರಟು ಹೋದ.
ದೂರದಲ್ಲಿ ಅವನ ಕಾರು ಮರೆಯಾಗುವವರೆಗೂ ಅದನ್ನೇ ನೋಡುತ್ತ ನಿ೦ತಿದ್ದ ದೀಪಕ.
ಗುರುರಾಜ ಕೊಡ್ಕಣಿ,ಯಲ್ಲಾಪುರ
Comments
ಉ: ಹೊಟ್ಟೆ ಕಿಚ್ಚು