ಹೊರಡುವ ಮೊದಲು
ಪಯಣ ಹೋದರೆ ಮತ್ತೆ ಬಾರದೆ ಇರುವುದುಂಟೇ ಸುಂದರಿ?
ಎನ್ನ ಸಲುವಿಗೆ ಚಿಂತೆಯೇತಕೆ? ಏತಕೀಪರಿ ಸೊರಗಿಹೆ?
ಒದ್ದೆಗಣ್ಣಲಿ ನಾನು ಕೇಳಲು ನಾಚಿ ತುಂಬಿದ ಕಣ್ಗಳ
ನೀರ ತಡೆದಳು! ನೋಡಿ ನಕ್ಕಳು! ತೋರಿ ಸಾವಿಗೆ ಕಾತರ!
ಸಂಸ್ಕೃತ ಮೂಲ (ಅಮರುಕಶತಕ, ೧೦):
ಯಾತಾಃ ಕಿಂ ನ ಮಿಲಂತಿ ಸುಂದರಿ ಪುನಶ್ಚಿಂತಾ ತ್ವಯೇ ಮತ್ಕೃತೇ
ನೋ ಕಾರ್ಯಾ ನಿತರಾಂ ಕೃಶಾಸಿ ಕಥಯತ್ಯೇವಂ ಸಬಾಷ್ಪೇ ಮಯಿ
ಲಜ್ಜಾಮಾಂಥರತಾರಕೇಣ ನಿಪತತ್ಪೀತಾಶ್ರುಣಾಂ ಚಕ್ಷುಷಾ
ದೃಷ್ಟ್ಚಾ ಮಾಂ ಹಸಿತೇನ ಭಾವಿಮರಣೋತ್ಸಾಹಸ್ತಯಾ ಸೂಚಿತಃ ||೧೦||
याताः किं न मिलंति सुंदरि पुनश्चिन्ता त्वये मत्कृते
नो कार्या नितरां कृशासि कथयत्येवं सबाष्पे मयि
लज्जामान्थरतारकेण निपतत्पीताश्रुणां चक्षुषा
दृष्ट्चा मां हसितॆन भाविमरणोत्साहस्तया सूचितः ||१०||
-ಹಂಸಾನಂದಿ
ಕೊ: ದೂರದೂರಿಗೆ ವ್ಯಾಪಾರಕ್ಕೆ ಗಂಡ ಹೊರಟಾಗ ಸಂದರ್ಭದ ಚಿತ್ರಣವಿದು. ಅಮರುಕ ಶತಕದಲ್ಲಿ ಈ ಸಂಧರ್ಭದ ಹಲವಾರು ಪದ್ಯಗಳು ಬರುವುದರಿಂದ, ಆ ಸಮಯದಲ್ಲಿ ದೂರದೂರಿಗೆ ವ್ಯಾಪಾರಕ್ಕೆ ಹೋಗುವವರ ಸಂಖ್ಯೆ ಬಹಳವಿತ್ತು ಎಂದು ಊಹಿಸಬಹುದು.
ಕೊ.ಕೊ: ಮೂಲವು ಶಾರ್ದೂಲವಿಕ್ರೀಡಿತ ವೃತ್ತದಲ್ಲಿದೆ. ಅನುವಾದವು ಮಾತ್ರಾ ಮಲ್ಲಿಕಾಮಾಲೆಯ ಚೌಪದಿಯಲ್ಲಿದೆ. ಪ್ರಾಸವನ್ನಿಟ್ಟಿಲ್ಲ.
ಚಿತ್ರ ಕೃಪೆ: ಮಾಲವಕೌಶಿಕ (ಮಾಲಕೋಶ್?) ರಾಗಿಣಿಯನ್ನು ಚಿತ್ರಿಸುವ ರಾಗಮಾಲಾ ಶೈಲಿಯ ವರ್ಣಚಿತ್ರ. ವಿಕಿಮೀಡಿಯಾದಿಂದ
( https://commons.wikimedia.org/wiki/File:1_Shaykh_Husayn._Malkausik_Raga_... )
Comments
ಉ: ಹೊರಡುವ ಮೊದಲು
ಅನುವಾದವೂ ಸುಂದರವಾಗಿದೆ. 'ತೋರಿ ಸಾವಿಗೆ ಕಾತರ' - ಮೂಲಕ್ಕೆ ತಕ್ಕ ಅನುವಾದವಾದರೂ ಈ ಪದಬಳಕೆಯಲ್ಲಿ ಕವಿಯ ಇಂಗಿತ, ಪತಿಯ ಅಗಲಿಕೆಯನ್ನು ಸಹಿಸಲಾಗದ ಬೇಗುದಿಯನ್ನು ವ್ಯಕ್ತಪಡಿಸುವ ರೀತಿಯಿರಬಹುದೇನೋ!