ಹೊಸವರ್ಷಕ್ಕೆ

ಹೊಸವರ್ಷಕ್ಕೆ

ಚಿತ್ರ

೨೦೧೩ ಎಲ್ಲ ಸಂಪದಿಗರಿಗೂ ಸಂತಸ ನೆಮ್ಮದಿಗಳಿಂದ ಕೂಡಿರಲೆಂಬ ಹಾರೈಕೆಗಳೊಂದಿಗೆ ಎರಡು ಚೌಪದಿಗಳು:

ಚಂದದಾ ಮುಂಬೆಳಗ ಚುಮ್ಮೆನುವ ಚಳಿಯಲ್ಲಿ

ಚಂದಿರನು ಕಣ್ಣಿಂದ ಕಾಣದಾದ
ಸುಂದರಾಕಾಶದಲಿ ಹಾಕುತ್ತ ರಂಗೋಲಿ
ತಂದಿರಲು ನೇಸರನು ಮನಕೆ ಮೋದ

ಹೊಸತೇನು ಬಂತಿಲ್ಲಿ ಹೂವಿಲ್ಲ ಚಿಗುರಿಲ್ಲ ?
ತುಸು ಸೊಗಸು ಕಂಡಿಲ್ಲವೆಂದೆನ್ನಬೇಡ!
ಮುಸುಕಿದಾಗಸದಲ್ಲಿ  ರಂಗಿನೋಕುಳಿ ಚೆಲ್ಲಿ-
ಯೆಸೆವ ಹೊಸ ಭಾಸ್ಕರನ ಸೊಬಗ ನೋಡಾ!

-ಹಂಸಾನಂದಿ


ಕೊ: ಕ್ರಿಸ್ತ ವರ್ಷಾರಂಭದಲ್ಲಿ ನಮ್ಮ ಯುಗಾದಿಯ ಚೈತ್ರದ ಚಿಗುರು, ಸೊಗಸು ಯಾವುದೂ ಕಾಣದು ಎಂದು ಹೇಳುವುದುಂಟು. ಅದು ನಿಜವೂ ಹೌದು. ಆದರೆ, ವರಕವಿ ಬೇಂದ್ರೆಯವರು ನುಡಿದಂತೆ, ನಿದ್ದೆಗೊಮ್ಮೆ ನಿತ್ಯಮರಣ ಎದ್ದಸಲ ನವೀನ ಜನನವೆಂಬಂತೆ ಸೂರ್ಯನ ಪ್ರತಿ ಹೊಸ ಹುಟ್ಟೂ ಒಂದೊಂದು ಹೊಸ ಜೀವನವೇ! ಅದಕ್ಕೆಂದೇ, ಎಲ್ಲ ಕಡೆಗಳಿಂದಲೂ ಒಳ್ಳೆಯ ಸಂಗತಿಗಳು ನಮ್ಮೆಡೆಗೆ ಬರಲೆಂಬ ಹಳೆಯ ಸೂಕ್ತಿಯಂತೆ, ಈ ವರ್ಷಾರಂಭವನ್ನೂ ಸ್ವಾಗತಿಸುವುದರಲ್ಲಿ ತಪ್ಪೇನಿದೆ ಎನ್ನಿಸದಿರದು.

ಕೊ.ಕೊ: ಸುಮಾರು ಎಲ್ಲ ಸಾಂಪ್ರದಾಯಿಕ ಹೊಸವರ್ಷಗಳೂ ಆಕಾಶದ ಯಾವುದಾದರೊಂದು ಘಟನೆಗೆ ಸಂಬಂಧಿಸಿರುವುದಾಗಿರುತ್ತೆ. ಭಾರತದ ಚಾಂದ್ರಮಾನ ಮತ್ತೆ ಸೌರಮಾನ ವರ್ಷಗಳೂ ಇದಕ್ಕೆ ಹೊರತಲ್ಲ. ಆದರೆ ಜನವರಿ ಒಂದರಂದು ಆ ರೀತಿಯ ಯಾವುದೇ ವಿಶೇಷವು ನಡೆಯುವುದಿಲ್ಲ ಅನ್ನುವುದು ನಿಜವಾದರೂ, ವರ್ಷಕ್ಕೊಮ್ಮೆ ನಡೆಯುವ ಘಟನೆಯೊಂದು ಜನವರಿ ಒಂದಕ್ಕೆ ಹತ್ತಿರವಾಗಿ ಜರುವುಗುವುದಂತೂ ಉಂಟು. ಜನವರಿ ಎರಡು ಯುನಿವರ್ಸಲ್ ಸಮಯ ಐದು ಗಂಟೆಗೆ (ಅಂದರೆ ನಾನಿರುವ ಕ್ಯಾಲಿಫೋರ್ನಿಯಾದಲ್ಲಿ ಜನವರಿ ಒಂದರಂದೇ, ರಾತ್ರಿ ೯ ಗಂಟೆಗೆ)  ಭೂಮಿ ಸೂರ್ಯನ ಸುತ್ತ ಸುತ್ತುವ ಹಾದಿಯಲ್ಲಿ ಸೂರ್ಯನಿಗೆ ಅತಿ ಹತ್ತಿರದಲ್ಲಿ ಹಾದುಹೋಗುತ್ತದೆ.


ಚಿತ್ರ ಕೃಪೆ: ನನ್ನ ಹೆಂಡತಿ ಪೂರ್ಣಿಮಾಳ ಕೈಚಳಕ

Rating
No votes yet

Comments

Submitted by ಗಣೇಶ Sat, 01/05/2013 - 00:25

ವ್ಹಾ..ಬ್ಯಾಕ್‌ಗ್ರೌಂಡ್ ಸೀನ್ ಬಿಟ್ಟರೆ.. ಹೂವಿಲ್ಲ ಚಿಗುರಿಲ್ಲ ಇದೆಂತಹ ಚಿತ್ರ ಹಾಕಿದ್ದಾರೆ ಹೊಸ ವರ್ಷಕ್ಕೆ ಎಂದು ಕವಿತೆ ಓದಿದರೆ...ಸೂಪರ್.
ಹೊಸ ವರ್ಷದ ಶುಭಾಶಯಗಳು ತಮಗೂ, ಎಲ್ಲಾ ಸಂಪದಿಗರಿಗೂ.
-ಗಣೇಶ.

Submitted by venkatb83 Sat, 01/05/2013 - 16:19

"ಹೊಸತೇನು ಬಂತಿಲ್ಲಿ ಹೂವಿಲ್ಲ ಚಿಗುರಿಲ್ಲ ?
ತುಸು ಸೊಗಸು ಕಂಡಿಲ್ಲವೆಂದೆನ್ನಬೇಡ!
ಮುಸುಕಿದಾಗಸದಲ್ಲಿ ರಂಗಿನೋಕುಳಿ ಚೆಲ್ಲಿ-
ಯೆಸೆವ ಹೊಸ ಭಾಸ್ಕರನ ಸೊಬಗ ನೋಡಾ!"

>>>>>ಸೌಂದರ್ಯ ನೋಡುಗರ ಕಣ್ಣಲಿದೆ ...ಎಂದು ಗಾದೆಯೇ ಇಲ್ಲವೇ?
ಪದ್ಯ ಚೆನ್ನಾಗಿದೆ.....
ನಿಮ್ಮವರ 'ಕೈ ಚಳಕವೂ '...
ನಿಮಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

ಶುಭವಾಗಲಿ..

\|

Submitted by rameshbalaganchi Sun, 01/06/2013 - 06:42

ಹಳತೆಂಬ ಮಾತ್ರಕ್ಕೆ ಎಲ್ಲವೂ ಚೆನ್ನಲ್ಲ
ಹೊಸದೆಂಬ ಮಾತ್ರಕ್ಕೆ ಎಲ್ಲ ಕೆಡುಕಲ್ಲ
ಜಾಣರಾದರೆ ಎಲ್ಲ ಪರಿಕಿಸೊಪ್ಪುವರು
"ಹೌದಪ್ಪ" ಎನುವಂಥ ಮೂರ್ಖ ಹಾಗಲ್ಲ.
-ಕಾಳಿದಾಸ