ಹೊಸವರ್ಷದ ಮುನ್ನಾದಿನ ಒಂದಷ್ಟು ಪುಡಿ ನೆನಪುಗಳು

ಹೊಸವರ್ಷದ ಮುನ್ನಾದಿನ ಒಂದಷ್ಟು ಪುಡಿ ನೆನಪುಗಳು

ಮತ್ತೊಂದು ವರ್ಷ ಕಳೆದು ಹೋಯ್ತು. ಸಾಧಿಸಿದ್ದೇನಾದ್ರೂ ಉಂಟೇ ಅಂದ್ರೆ ಉತ್ತರಕ್ಕೆ ತಡಕಾಡಬೇಕು. ಅದಿರಲಿ, ಎಲ್ಲಾದನ್ನೂ ನಾವು ಯಾವುದಾದರೂ ಸಾಧನೆಗಾಗಿ ಅಂತಲೇ ಯಾಕೆ ಮಾಡ್ಬೇಕು? ನಾಕು ಜನರಿಗೆ ತೊಂದ್ರೆ ಆಗದ್‍ಹಾಗೆ ನಡ್ಕೊಂಡು, ಆಗೋದಾದ್ರೆ ಒಂದೋ ಎರಡೋ ಒಳ್ಳೇ ಕೆಲಸ ಮಾಡಿ, ಕಷ್ಟದಲ್ಲಿದ್ದೋರಿಗೆ ಅಯ್ಯೋ ಪಾಪ ಅಂದು ಕೈಲಾದ ಸಹಾಯ ಮಾಡಿದ್ರೆ ಸಾಕಲ್ಲಪ್ಪ? ಎತ್ತೆತ್ತರದ ಗುರಿಗಳನ್ನ ಇಟ್ಟುಕೊಂಡಿರುವವರಿಗೆ ಅದು ಸಾಕು ಅನ್ನಿಸದಿರಬಹುದು. ಆದರೆ ನನ್ನ ಮಟ್ಟಿಗೆ ಅದು ಸಾಕು. ಯಾಕಂದ್ರೆ, ಬಸವಣ್ಣೋರು ಹೇಳಿರೋದು ಕೇಳಿದ್ದೀವಲ್ಲ?

ಲೋಕದ ಡೊಂಕ ನೀವೇಕೆ ತಿದ್ದುವಿರಿ?
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ.

ಹಾಗಿದ್ದ ಮೇಲೆ, ನಮ್ಮ ನಮ್ಮ ತನು-ಮನಕ್ಕೆ ಹಿತವಾಗೋ ಕೆಲಸ ನಾವು ಮಾಡ್ಕೊಂಡು ಹೋಗ್ತಾ ಇದ್ರೆ ಸಾಕು. ಈ ವರ್ಷ ಅಂತಾ ಒಂದು ಕೆಲಸದಲ್ಲಿ ಕೈಯಿಟ್ಟ ನೆಮ್ಮದಿ ನನಗಿದೆ.  ಹಿಂದೆ ಯಾವಾಗಲೋ ಒಂದು ಪೇಪರ್ ಬರೆಯೋವಾಗ ದಾಸಸಾಹಿತ್ಯ ಅಂತರ್ಜಾಲದಲ್ಲಿ ಸಿಗೋ ಹಾಗೆ ಮಾಡ್ಬೇಕು ಅನ್ನೋದು ನನ್ನ ಕನಸು ಅಂತ ಬರೆದಿದ್ದರ ನೆನಪಿದೆ. ಆದರೆ ಆ ಗಳಿಗೆಯಲ್ಲಿ ನನಗೆ ಅದಕ್ಕೆ ಯಾವರೀತಿ ತಾಂತ್ರಿಕ ಪರಿಣತಿ ಬೇಕಾಗುತ್ತೆ ಅನ್ನೋದೂ ಕೂಡ ಗೊತ್ತಿರಲಿಲ್ಲ. ಆದರೆ ಆ ಪರಿಣತಿ ನನ್ನಲ್ಲಿಲ್ಲದಿದ್ದರೂ, ಒಂದಲ್ಲ ಒಂದು ದಿವಸ ಕನಸು ನನಸು ಮಾಡಬೇಕು ಅನ್ನೋ ಆಸೆಯಂತೂ ಇತ್ತು.

ಅದು ಹೇಗೋ ನಾನೂ ಸಂಪದಕ್ಕೆ ಬಂದು, ನಂತರ ಹರಿಪ್ರಸಾದ ನಾಡಿಗರ ಸಹಯೋಗದಿಂದ ಹರಿದಾಸ ಸಂಪದ ಈ ವರ್ಷ ಹುಟ್ಟಿ, ಚಿಗುರುತ್ತಾ ಇದೆ. ಅದು ಇನ್ನೂ  ಬೆಳೆದು ಹೆಮ್ಮರವಾಗಬೇಕು.ಆಗುತ್ತೆ ಅನ್ನೋ ನಂಬಿಕೆ ನನಗಿದೆ. ಈಗ ಪುಟ್ಟ ಕೂಸಾಗಿದ್ದರೂ ಬೆಳೆದು ನೆಲೆ ನಿಲ್ಲೋ ಎಲ್ಲ ಲಕ್ಷಣಗಳೂ ಕಾಣ್ತಾ ಇದೆ ಅನ್ನೋದು ನನಗೆ ಈ ವರ್ಷ ಬಹಳ ಸಮಾಧಾನ ತಂದ ವಿಚಾರ.

ಮತ್ತಿನ್ನೇನು? ಹೊಸ ವರ್ಷ ಎಲ್ಲರಿಗೂ ಒಳ್ಳೇದನ್ನು ತರಲಿ ಅನ್ನೋ ಆಶಯದೊಂದಿಗೆ, ಹೊಸ ವರ್ಷದಲ್ಲಿ ಮತ್ತೆ ನೋಡೋಣವಾ?

-ಹಂಸಾನಂದಿ

Rating
No votes yet