ಹೊಸ ಪಯಣದ ದಾರಿಯಲ್ಲಿ...
ವಿದಾಯ ಹೇಳುವ ಸಮಯವು ಇದೀಗ ಬಂದೇ ಬಿಟ್ಟಿತಾ? ದಿನಾ ಉದಯಿಸುತ್ತಿರುವ ಸೂರ್ಯನನ್ನು ನೋಡಿ ಸಂತಸ ಪಡುತ್ತಿರುವ ಅವಳು ಇಂದು ಮುಳುಗುವ ಸೂರ್ಯನನ್ನು ನೋಡಿ ಕಣ್ಣೀರು ಸುರಿಸುತ್ತಿದ್ದಾಳೆಯೇ?. ಕ್ಯಾಲೆಂಡರ್್ನ ಪುಟ ಬದಲಾಗಲು ಇನ್ನು ಕೆಲವೇ ಕ್ಷಣ. ಆಗಸದಲ್ಲಿ ಕೆಂಪನೆಯ ಚಿತ್ತಾರವನ್ನು ಬಿಡಿಸಿ ಇನ್ನೇನು ಅಲ್್ವಿದಾ ಹೇಳುವ ಸೂರ್ಯನಲ್ಲಿ ಅವಳಿಗೆ "ಇನ್ನೂ ಸ್ವಲ್ಪ ಹೊತ್ತು ನಿಲ್ಲು" ಅಂತಾ ಹೇಳಬೇಕು ಎಂದು ಅನಿಸುತ್ತಿದೆ. ಆದರೆ ಜಗದ ನಿಯಮವನ್ನು ತಿದ್ದಲು ಅವಳಿಗೆ ಹೇಗೆ ಸಾಧ್ಯ?
ತನ್ನ ಇನಿಯನ ಜೊತೆ ಕುಳಿತಿರುವಾಗ ಇದೇ ಸೂರ್ಯ ಇದೇ ರೀತಿ ಮುಳುಗುತ್ತಿದ್ದಂತೆ "ಇನ್ನು ನಾವು ಹೊರಡಬೇಕು" ಎಂದು ಆತ ತನ್ನ ಕೈಹಿಡಿದು ಕಲ್ಲಿನ ಬೆಂಚಿನಿಂದ ಎದ್ದು ನಿಂತಾಗ ಯಾಕೋ ಈ ಸೂರ್ಯ ಮುಳುಗಬಾರದಿತ್ತು ಅಂತಾ ಅವಳಿಗೆ ಅನಿಸಿತ್ತು. ಇನ್ನೂ ಒಂದಿಷ್ಟು ಹೊತ್ತು ಅವನೊಂದಿಗೆ ಕಳೆಯಬೇಕೆಂದು ಕೊಂಡರೂ ಸಮಯ ನಿಲ್ಲುತ್ತಿರಲಿಲ್ಲ. ಆದಾಗ್ಯೂ, ಸಂತಸದ ಕ್ಷಣಗಳಲ್ಲಿ ಸಮಯದ ಮುಳ್ಳು ಓಡೋಡಿ ಹೋಗುವಂತೆಯೂ, ಯಾರೂ ಇಲ್ಲದ ವೇಳೆ ದೂಡಿದರೂ ಹೋಗದಂತಿರುವ ಆ ಗಡಿಯಾರದ ಮುಳ್ಳುಗಳ ಬಗ್ಗೆ ಅವಳಿಗೆ ತುಂಬಾ ಕೋಪವಿದೆ.
ಮುಸ್ಸಂಜೆಯ ವೇಳೆ ತನ್ನನ್ನು ಕಾಲೇಜಿನ ಹಾಸ್ಟೆಲ್್ಗೆ ತಲುಪಿಸಿ ಆತ ಬೈಕ್ ಸ್ಟಾರ್ಟ್ ಮಾಡಿ ಹಿಂತಿರುಗುವಾಗ ಇದೇ ಸೂರ್ಯ ಹಾಸ್ಟೆಲ್್ನ ಕಟ್ಟಡಗಳ ನಡುವೆ ಕಣ್ಣು ಮುಚ್ಚಾಲೆಯಾಡಿ ನಸು ನಕ್ಕಿದ್ದ. 'ಅವನಿಲ್ಲದ' ದಿನ ಏಕಾಂಗಿಯಾಗಿ ಕುಳಿತು ಸೂರ್ಯ ಮುಳುಗುತ್ತಿರುವುದನ್ನೇ ನೋಡುತ್ತಿರುವಾಗ ಅವಳ ಕಣ್ಣಲ್ಲಿ ಕಣ್ಣೀರು. ಆದರೆ ಈ ಸೂರ್ಯನಿದ್ದಾನಲ್ಲ....ಮೊದಲ ಬಾರಿಗೆ ಹುಡುಗ ಮುತ್ತಿಟ್ಟಾಗ ನಾಚಿ ನೀರಾಗುವ ಹುಡುಗಿಯಂತೆ, ಅವಳ ಕೆಂಪು ಕೆನ್ನೆಗಳನ್ನು ನೆನಪಿಸುವಂತೆ ನೀಲಾಕಾಶವನ್ನು ರಂಗೇರಿಸಿ ಸ್ನಾನಕ್ಕಿಳಿದಿದ್ದ.
ದಿನ ಬದಲಾಗುತ್ತಿದ್ದಂತೆ ಜೀವನವೂ ಒಂದೊಂದು ರೀತಿಯ ತಿರುವನ್ನು ಪಡೆಯುತ್ತಿದೆ. ಆದರೆ ದಿನಾ ಮುಳುಗುವ ಸೂರ್ಯ, ಮರುದಿನ ಹುಟ್ಟುವಾಗ ಅಷ್ಟೇ ಪ್ರಭೆಯಿಂದ ಕಂಗೊಳಿಸುತ್ತಾನೆ. ಮತ್ತೆ ಮುಳುಗುವಾಗ ಅದೇ ರೀತಿ ಬಾನು ಕೆಂಪಾಗಿಸಿ ಲವಲವಿಕೆಯಿಂದ ಸಾಗರದ ತೆಕ್ಕೆಗೆ ಜಾರುತ್ತಾನೆ.
ಆದರೆ, ನಾನು...ಹುಂ. ನಾನೂ ಬದಲಾಗಬೇಕು, ಹೊಸ ಹೊಸ ಕನಸುಗಳನ್ನು ನನಸು ಮಾಡಲು ತಾನೂ ಸಿದ್ಧಳಾಗಬೇಕು. ಸೂರ್ಯ ಮುಳುಗಿ ಮತ್ತೆ ಹುಟ್ಟುವಂತೆ ಒಂದೊಂದು ದಿನವೂ ಹೊಸತನವನ್ನು ಅನುಭವಿಸಬೇಕು ಎಂಬ ನಿರ್ಧಾರದಲ್ಲಿ ಅವಳು ಕಣ್ಣೀರೊರಸಿ ಅಣಿಯಾಗಿದ್ದಾಳೆ.
ಹೊಸ ಸುಪ್ರಭಾತದಲ್ಲಿ ಕಿಲಕಿಲ ನಗುವ ಸೂರ್ಯನೊಂದಿಗೆ ತುಂಟಾಟವಾಡಲು...ಮಧ್ಯಾಹ್ನದ ಸುಡು ಬಿಸಿಲಿನೊಂದಿಗೆ ಗುದ್ದಾಡಲು....ಮುಳುಗುವ ಸೂರ್ಯನಲ್ಲಿಯೂ ಭರವಸೆಯ ಆಶಾದೀಪವನ್ನು ಕಾಣುವ ನಿಟ್ಟಿನಲ್ಲಿ ಅವಳು ಸಜ್ಜಾಗಿದ್ದಾಳೆ.... ಮನೆ ಮುಂದೆ ರಂಗೋಲಿ ಬರೆದು...ಅಲ್ಲ...ಹೊಸ ವರುಷದ ಹೊಸ ನಿರ್ಧಾರಗಳೊಂದಿಗೆ.
Comments
ಉ: ಹೊಸ ಪಯಣದ ದಾರಿಯಲ್ಲಿ...