ಹೊಸ ವರ್ಷ, ಹೊಸ resolution ಮತ್ತು ಉಡುಗೊರೆ!

ಹೊಸ ವರ್ಷ, ಹೊಸ resolution ಮತ್ತು ಉಡುಗೊರೆ!

ಹೊಸ ವರ್ಷದ ಸಂಭ್ರಮದಲ್ಲಿ ತೇ(ಓ)ಲಾಡುತ್ತಿರುವವರಿಗೆಲ್ಲರಿಗೆ ತನ್ನ "ಗುಡ್ ಬೈ" ತಿಳಿಸಲು 2006ನೇ ಇಸವಿಯು ಬೊಗಳೆ ರಗಳೆ ಬ್ಯುರೋವನ್ನು ಕೋರಿದೆ. (bogaleragale.blogspot.com)

2007ನ್ನು ಅಪ್ಪಿಕೊಳ್ಳಲಾರಂಭಿಸಿರುವ ಈ ಸಂದರ್ಭದಲ್ಲಿ ಹೊಸ ವರ್ಷವನ್ನು ಸ್ವಾಗತಿಸುವುದಕ್ಕಿಂತಲೂ ಹಳೆ ವರ್ಷವನ್ನು, ಅದರ ಕರಾಳ ನೆನಪುಗಳನ್ನು ದೂರೀಕರಿಸುವುದಕ್ಕೇ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಲಾಗಿದೆ.

ಕಾಲನ ನಡಿಗೆಯಲ್ಲಿ 2007 ಎಂಬ ಹೊಸ ಹೆಜ್ಜೆಯ ಗುರುತು ಮೂಡಿದ್ದು, 24x7x365 ಎಂಬ ಸಂಖ್ಯಾಪ್ರಕಾರದಲ್ಲಿ busyನೆಸ್ ಮಾಡುತ್ತಿರುವ ಮನುಜ ಪ್ರಾಣಿಗಳಿಗೆ ಮತ್ತೊಂದು ಸಂಖ್ಯಾ ಲೆಕ್ಕಾಚಾರಕ್ಕೆ ವೇದಿಕೆ ದೊರೆತಿದೆ.

ಡಿಸೆಂಬರ್ ಕೊನೆಯ ರಾತ್ರಿ ಕಳೆದು ಜನವರಿಯ ಮೊದಲ ದಿನ ಬಾಲ ಬಿಚ್ಚಲಾರಂಭಿಸಿದಾಗ, ಹಿಂದೆ ತಿರುಗಿ ನೋಡಿಯೇ ಮುಂದಡಿಯಿಡುವುದು ಸೂಕ್ತ ಮತ್ತು ಏರಿದ ಏಣಿಯಲ್ಲಿ ಎಷ್ಟು ಮೆಟ್ಟಿಲುಗಳಿದ್ದವು ಎಂಬುದನ್ನು ಲೆಕ್ಕ ಹಾಕುವುದು ಸೂಕ್ತ ಎಂಬ ಸಲಹೆ ಬೊಗಳೆ ರಗಳೆ ಬ್ಯುರೋದಿಂದ ಉದುರಿದೆ.

ಈಗಿನ ಕಾಲದಲ್ಲಿ ಹೊಸ ವರುಷದ ಉದಯವಾಯಿತು ಎಂದು ಹೇಳುವ ಹಾಗಿಲ್ಲ. ಯಾಕೆಂದರೆ ಕೆಲವರಿಗೆ ದಿನದ ಚಟುವಟಿಕೆ ಆರಂಭವಾಗುವುದು ರಾತ್ರಿ ಕಾಲದಲ್ಲಿ. ಹಗಲು-ರಾತ್ರಿ ದುಡಿತದಲ್ಲಿ ತೊಡಗುವವರಿಗೆ ಮಾತ್ರವಲ್ಲದೆ ಕುಡಿತದಲ್ಲಿ ತೊಡಗುವವರಿಗೂ ಇದು ಅನ್ವಯ.

ನಿನ್ನೆಯಷ್ಟೇ ಉಗಿಬಂಡಿಯಂತೆ ಹೊಗೆಯುಗುಳುತ್ತಿದ್ದವರು ಇಂದು "ನಾನು smoking ಬಿಟ್ಟು, ಬರೇ king ಆಗುತ್ತೇನೆ" ಅಂತ ನಿರ್ಣಯ ಕೈಗೊಳ್ಳುತ್ತಾರೆ. ನಿನ್ನೆಯಷ್ಟೇ ಪೀಪಾಯಿಗಟ್ಟಲೆ ಮದ್ಯ ಸುರಿದುಕೊಳ್ಳುತ್ತಾ, ಸ್ನಾನದ ನೀರಿಗೂ ತತ್ವಾರ ಉಂಟು ಮಾಡಿದವರು, ನಾನು Drinking ಬಿಟ್ಟು king ಆಗುತ್ತೇನೆ ಎನ್ನುತ್ತಾರೆ.

ಆದರೆ ಇವರಲ್ಲಿ ಹೆಚ್ಚಿನವರು ಸತ್ಯವನ್ನೇ ಹೇಳುತ್ತಾರೆ ಎಂಬುದು ಒಪ್ಪತಕ್ಕ ಅಂಶ ಎಂಬುದನ್ನು ನಮ್ಮ ಬ್ಯುರೋ ಪತ್ತೆ ಹಚ್ಚಿದೆ. smoking ಬಿಟ್ಟವ ನಿಜಕ್ಕೂ ಹೇಳಿದ್ದೇನು? small size ಬಿಟ್ಟು, king size cigarette ಮಾತ್ರ ಸೇವಿಸುತ್ತೇನೆ ಅಂತ. ಅದೇ ರೀತಿ Drinking ಬಿಟ್ಟು king ಆಗುತ್ತೇನೆ ಎಂದವ, ಬರೇ Kingಫಿಶರ್ ಮಾತ್ರವೇ ಸೇವಿಸುತ್ತೇನೆ ಎಂದು ತನಗೇ ಸಮಾಧಾನ ಮಾಡಿಕೊಳ್ಳುತ್ತಾನೆ!

ಇನ್ನೊಂದು ನಿರ್ಣಯ ಇರುತ್ತದೆ. ಆಯಾ ದಿನದ ದಿನಚರಿ ಬರೆದಿಡುತ್ತೇನೆ ಎಂಬುದು. ಇದನ್ನು ಮುರಿಯುವ ಸುಲಭೋಪಾಯವೇನು? ಅದು ಪರ್ಸನಲ್ ಡೈರಿ ಆಗಿರುವುದರಿಂದ ಅದನ್ನು ಇತರರು ಓದುವಂತಿಲ್ಲ ಎಂಬುದು ಸರ್ವವಿದಿತ. ಆದರೆ ಬರಹಗಾರನೇ ತನ್ನ ಬರವಣಿಗೆಯ ಏಕೈಕ ಓದುಗ ಎಂದಾದಲ್ಲಿ ಅದನ್ನು ಬರೆದು ಪ್ರಯೋಜನವಾದರೂ ಏನು ಎಂಬುದು ಈ ನಿರ್ಧಾರ ಮುರಿಯಲೊಂದು ಸೂಕ್ತವಾದ ಕಾರಣ!!!

ಇನ್ನು ಹೊಸ ವರ್ಷದ ಉಡುಗೊರೆ ವಿಷಯ. ಒಂದು ಡೈರಿ ಉಡುಗೊರೆ ನೀಡುವುದು ಸಾಮಾನ್ಯ. (ಯಾರು ಕೂಡ ಅದರಲ್ಲಿ ಬರೆಯುವ ಗೋಜಿಗೆ ಹೋಗದಿದ್ದರೂ!). ಆದರೆ ನಾವೇ ಮಿತ್ರನೊಬ್ಬನಿಗೆ ಕೊಟ್ಟ ಡೈರಿ, ಹಲವು ಕೈಗಳನ್ನು ಸುತ್ತಿಕೊಂಡು ಬಂದು, ಕೊನೆಗೆ ನಮಗೇ "ಆತ್ಮೀಯ" New Year Gift ರೂಪದಲ್ಲಿ ಮರಳಿದಾಗ ಹೇಗಾಗಿರಬೇಡ! ಕೆಲವರು ದುಂಬಾಲು ಬಿದ್ದು ಡೈರಿ ಕೇಳುವುದು ಏತಕ್ಕೆ ಎಂಬುದು ನಮ್ಮ ಬ್ಯುರೋಗೆ ಗೊತ್ತಾಗಿದ್ದು ಆಗಲೇ! ಆದರೂ ಒಂದು ಡೈರಿಯು ಎಷ್ಟು ಜನರ ಮೊಗದಲ್ಲಿ ಸರಣಿ ನಗು ಅರಳಿಸಿತಲ್ಲ ಎಂಬುದೊಂದು ಸಮಾಧಾನ ಅಲ್ಲಿ ಉಳಿದುಬಿಡುತ್ತದೆ. ಇದೂ ಒಂದು chain reaction!

ಹೊಸ ವರ್ಷದ ಪಾರ್ಟಿಗಳ ಬಗ್ಗೆ ಹೇಳುವುದಾದರೆ, ಹೊಸ ವರ್ಷದ ಬೆಳಗನ್ನು ನಗುವಿನಿಂದ, ಉತ್ಸಾಹದಿಂದ, ಉಲ್ಲಾಸದಿಂದ ಸ್ವಾಗತಿಸಲು ನಿರ್ಣಯಿಸುವವರು ಡಿ.31ರ ರಾತ್ರಿಯಿಡೀ ಕುಡಿದು ಕುಣಿದು ಕುಪ್ಪಳಿಸಿ, ಜ.1ರ ಸೂರ್ಯೋದಯದ ವೇಳೆಗೆ ಧೊಪ್ಪನೆ ಹಾಸಿಗೆಯಲ್ಲಿ ಬಿದ್ದಿರುತ್ತಾರೆ. ಅವರು ಎದ್ದಾಗ, ಅಥವಾ ಎದ್ದರೂ ಅಮಲಿನಲ್ಲೇ ಇರುವುದರಿಂದ, ಪೂರ್ಣವಾಗಿ ಉಲ್ಲಾಸಮಯವಾಗಿರುವ ಹೊತ್ತಿಗೆ ಜ.1ರ ಸೂರ್ಯ ಅಸ್ತಮಿಸುವ ಮಾರ್ಗದಲ್ಲಿ ಬಲು ದೂರ ಸಾಗಿರುತ್ತಾನೆ. ಅಲ್ಲಿಗೆ ಹೊಸ ವರ್ಷಾಚರಣೆ ಮುಗಿದೇಹೋಗುತ್ತದೆ. ಕೆಲವರ (ಸೇವಿಸಿದ!) Spirit ಪ್ರಮಾಣ ಎಷ್ಟಿರುತ್ತದೆ ಎಂದರೆ, ಅವರ Hangover ಮುಂದಿನ ಹೊಸ ವರ್ಷಾಚರಣೆ ದಿನದವರೆಗೂ ಇರುತ್ತದೆ!

ಈ ಎಲ್ಲ ಕಾರಣಕ್ಕೆ ಹಳೆಯದನ್ನೆಲ್ಲಾ ಮರೆತು ಬೊಗಳೆ ರಗಳೆ ಬ್ಯುರೋ, ಹಳೆ ಕ್ಯಾಲೆಂಡರಿನ ಜಾಗದಲ್ಲಿ ಹೊಸ ಕ್ಯಾಲೆಂಡರ್ ಅಳವಡಿಸಿ 2007ನ್ನು ಹೊಸದೊಂದು ಜೋಕ್ ಎಂದು ಸ್ವಾಗತಿಸುತ್ತದೆ. ನೀವು?

ಸಮಸ್ತ ನೆಟ್-ಮಿತ್ರ ಸಮುದಾಯಕ್ಕೆ 2007 ಶುಭ ತರಲಿ, ಬಾಳು ಬೆಳಗಲಿ,
ಬದುಕು ಬಂಗಾರವಾಗಲಿ, ಜೀವನಯಾನದ ಹಾದಿ ಹೂವಿನ ಹಾಸಿಗೆಯಾಗಲಿ

Rating
No votes yet