ಹೋಳಿ - ಲಕ್ಷ್ಮೀಕಾಂತ ಇಟ್ನಾಳ

ಹೋಳಿ - ಲಕ್ಷ್ಮೀಕಾಂತ ಇಟ್ನಾಳ

ಚಿತ್ರ

ಹೋಳಿ

ಇಂದು ಹೋಳಿ ಹಬ್ಬ, ಎಲ್ಲೆಲ್ಲೂ ಬಣ್ಣ ಎರಚಾಟ
ಮುಖಗಳಿಗೆಲ್ಲ ಚೆಹರೆ ಮರೆಯಾಗಿಸಿದ ಬಣ್ಣ,
ನೆಲಮೊಗಕ್ಕೂ ಬಣ್ಣದೋಕುಳಿಯ ಬಣ್ಣ
ಮುಗಿಲಿಗೆ ನೀಲಿ ಬಣ್ಣವಾದರೆ, ಬನಸಿರಿಗೆ ಹಸಿರುಡುಗೆಯ ಬಣ್ಣ
ಹೂಗಿಡಗಳಲ್ಲಿ ತರಹೇವಾರು ಬಣ್ಣ
ಬಣ್ಣವಿಲ್ಲದ ಬದುಕು ಊಹೆಗೂ ನಿಲುಕದಣ್ಣ

ನವಿಲು ಬಣ್ಣಗಳ ಯುವಕ –ಯುವತಿಯರು
ಖುಷಿಯಲ್ಲಿ ಮಿಂದ ಕಣ್ಣುಗಳಲ್ಲಿ
ರಸ್ತೆಯಂಗಳದಲ್ಲಿ ಹಾಕಿದ ಕಾರಂಜಿ ಸೆಟ್ಟುಗಳಲ್ಲಿ
ಸಾವಿರ ಸಾವಿರ ಸಂಖ್ಯೆಗಳಲ್ಲಿ,
ಕೈ ಮೇಲೆತ್ತಿ ಸಂಗೀತದ ಬೀಟ್ಸ್ ಗೆ ತಕ್ಕಂತೆ
ರೇನ್ ಡ್ಯಾನ್ಸ್ಸ್ ಗೆ ಕುಣಿದಿದ್ದೇ ಕುಣಿದಿದ್ದು
ಆ ಲಯದ ಕುಣಿತಗಳಿಗೆ ಎದೆಯಲ್ಲಿ ಪುಟಿದ ಊಟೆಗಳಿಗೆ ಲೆಕ್ಕವಿಡಲಿಲ್ಲ!

ಒಂದು ವೃತ್ತದಲ್ಲಿ ಅದೆಷ್ಟೋ ‘ಬೀಟ್ಸ’ಗಳ ಸದ್ದು,
ಇನ್ನೊಂದೆಡೆ ಇನ್ನೆಷ್ಟೋ ಗಿಜಿಗಿಡುವ ಸದ್ದು
ಅಗೋ ಅಲ್ಲಿ, ಮಾತೇ ಕೇಳಿಸದಂತಹ ಸದ್ದು,
ಎಲ್ಲೆಲ್ಲೂ ಗಡಚಿಕ್ಕುವ ಸದ್ದು,
ಸದ್ದು, ಸದ್ದು, ಸದ್ದು,

ಸಂಜೆ ಹೇಳಿದರೆಲ್ಲ,
ಅಬ್ಬಾ! ಹೋಳಿ ಶಾಂತವಾಗಿತ್ತು

 

(ಚಿತ್ರ ಕೃಪೆ: ಅಂತರ್ಜಾಲ)

Rating
No votes yet

Comments

Submitted by nageshamysore Sat, 03/07/2015 - 01:22

ಇಟ್ನಾಳರೆ ನಮಸ್ಕಾರ. 'ಸಹನೀಯ ಸದ್ದುಗಳ ಪ್ರಶಾಂತ ಹೋಳಿ'ಯ ವರ್ಣೋಪೇತ ವೈಭವದ ಸುಂದರ ಚಿತ್ರಣ, ಸೊಗಸಾದ ಚಿತ್ರಗಳೊಡನೆ ಚೆನ್ನಾಗಿ ಮೂಡಿಬಂದಿದೆ. ಇಂತಹ ಸಾಮೂಹಿಕ ಆಚರಣೆಗಳೂ ಶಾಂತಿ ಕದಡುವ ಪರಿಕರಗಳಾಗಿರುವ ಈ ಕಾಲದ ಹಿನ್ನಲೆಯಲ್ಲಿ, ಈ ಕೊನೆಯೆರಡು ಸಾಲುಗಳು ಅರ್ಥಗರ್ಭಿತವಾಗಿವೆ! ಅಭಿನಂದನೆಗಳು :-)
'ಸಂಜೆ ಹೇಳಿದರೆಲ್ಲ,
ಅಬ್ಬಾ! ಹೋಳಿ ಶಾಂತವಾಗಿತ್ತು'!

Submitted by H A Patil Sun, 03/08/2015 - 19:50

ಲಕ್ಷ್ಮೀಕಾಂತ ಇಟ್ನಾಳರವರಿಗೆ ವಂದನೆಗಳು
ಹೋಳಿ ಕವನ ಮತ್ತು ಆ ಕುರಿತ ಸಾಂಧರ್ಭಿಕ ಚಿತ್ರಗಳು ಸೊಗಸಾಗಿ ಮೂಡಿ ಬಂದಿವೆ. ನೀವು ಚಿತ್ರಿಸಿದ ಹೋಳಿ ನನಗೆ ಅಪರಿಚಿತ ಹೋಳಿ ಎನಿಸುತ್ತಿದೆ ಕಾರಣ ನಾನು ನನ್ನ ಬಾಲ್ಯದ ಗ್ರಾಮೀಣ ಪರಿಸರದ ಓಕುಳಿಯಾಟ ನೋಡಿದವನ ಈ ಗುಲಾಲು ಒಣ ಬಣ್ಣಗಳ ಎರಚಾಟ ಆಗಿರಲಿಲ್ಲ. ಕಾಡಿನಿಂದ ಮುತ್ತುಗದ ಹೂವುಗಳನ್ನು ತಂದು ಸ್ವಲ್ಪ ಕೆಂಪುಬಣ್ಣವನ್ನು ಸೇರಿಸಿ ಸರಿಯಾಗಿ ಕುದಿಸಿ ತಯಾರಿಸುತ್ತಿದ್ದ ಬಣ್ಣ ಶಾಶ್ವತ ಕಲೆಗಳ ನ್ನುಬಟ್ಟೆಗಳ ಮೇಲೆ ಉಳಿಸುತ್ತಿತ್ತು. ಅದೆಲ್ಲವನ್ನು ನಿಮ್ಮ ಕವನ ನೆನಪಿಗೆ ತಂತು. ಧನ್ಯವಾದಗಳು.