ಹೌದು ಅಂದು ಮಳೆ ಬರುತಿತ್ತು.

ಹೌದು ಅಂದು ಮಳೆ ಬರುತಿತ್ತು.

ಬಿಸಿಲು ತೀಕ್ಷ್ಣವಾಗಿ ಮಂದವಾಗಿ ಗಾಳಿ ಬೀಸಿದಾಗಲೇ ಅನ್ನಿಸಿತ್ತು ಇಂದು ಮಳೆ ಬರುವುದೆಂದು. ತಗ್ಗು ಏರು ಗುಂಡಿಗಳಿಲ್ಲದ ಮಲೆನಾಡಿನ ರಸ್ತೆಯೊಂದರಲ್ಲಿ ನಮ್ಮ ಕಾರು ಚಲಿಸುತ್ತಿದ್ದ ಕಾರಣ ಅಂದಿನ ಪಯಣ ತ್ರಾಸದಾಯಕವಾಗಿರಲಿಲ್ಲ.. ಮಳೆಬರುವ ಮುನ್ಸೂಚನೆಯಂತೆ ಕಪ್ಪು ಮೋಡಗಳು ತೀಕ್ಷ್ಣವಾದ ಬಿಸಿಲಿನ ಪ್ರಕರವನ್ನು ಕಡಿಮೆ ಮಾಡಲು ವಾಯುಮಾಂಡಲವನ್ನು ಕವಿಯುತ್ತಿದ್ದವು. ಕಪ್ಪು ಮೋಡವೇ ಹಿನ್ನೆಲೆಯಾಗಿರಲು, ಮಲೆನಾಡಿನ ಬೆಳ್ಳಕ್ಕಿಗಳು ತಮ್ಮಗೂಡು ಸೇರಿಕೊಳ್ಳಲು ವ್ಯವಸ್ಥಿತವಾದ ಗುಂಪಿನಲ್ಲಿ ಹಾರಿ ಹೋಗುತ್ತಿದ್ದುದ್ದನ್ನು ಕಾರಿನ ಕಿಟಕಿಯಮೂಲಕ ನೋಡಿದೆ. "ಜಗದಚ್ಚರಿಯಂದದ ಒಪ್ಪಂದಕೆ ಚಿರಚೇತನ ತಾನಿಹೆನೆಂಬದಿ ಬೆಳ್ಳಕ್ಕಿಯ ಹಂತಿಯ ಆ ನೆವದಿ ದೇವರು ರುಜು ಮಾಡಿದನು" ಎಂಬ ಕವಿವಾಣಿಯು ನನ್ನ ಹೃದಯಕ್ಕೆ ನಾಟಿತ್ತು. ಆ ಸಾಲುಗಳ ಪ್ರತಿಪದಗಳು ಅರ್ಥಪೂರ್ಣವೆನಿಸತೊಡಗಿದವು. ಹಾಗೆಯೇ ಕಾರ್ ಡ್ರೈವರ್ ರಂಗಣ್ಣನಿಗೆ ಕಾರ್ ನಿಲ್ಲಿಸಲು ಹೇಳಿದೆ.  ಕಿರಿದಾದ ರಸ್ತೆಯ ಒಂದು ಬದಿಗೆ ಆತ ಕಾರ್ ನಿಲ್ಲಿಸಿದ. ಕಾರ್ ನಿಂದ ಕೆಳಗಿಳಿದೆ. ಭೂಮಿಯಿಂದ ಸ್ವಯಂಭು ಲಿಂಗದಂತೆ ಮೇಲೆದ್ದು ಗಗನವನ್ನು ಮುತ್ತಿಕ್ಕುತ್ತಿದ್ದ ಬೆಟ್ಟ ಗುಡ್ಡಗಳ ಸಾಲು ಕಾಣಿಸಿತು. ನೀಲಿಯಿಲ್ಲದ ಕಪ್ಪು ಆಗಸ ರೈತನ ಮೊಗದಲ್ಲಿ ಹರ್ಷವನ್ನು ತರಲು ತುಡಿಯುತ್ತಿತ್ತು. ಹಾಗೇಯೆ ಸ್ವಲ್ಪ ಹೊತ್ತು ನಿಂತು ಮನಸ್ಸಿನಲ್ಲಿ ಏಳುತ್ತಿದ್ದ ಲೌಕಿಕ ವಿಚಾರಗಳನ್ನು ಕಡಿಮೆ ಮಾಡಲು ಯತ್ನಿಸಿದೆ... ಅಷ್ಟರಲ್ಲೆ "ಸರ್, ಸ್ವಲ್ಪ ಹೊತ್ತು, ಬಂದೆ" ಎನ್ನುತ್ತ ಕಾರ್ ಡ್ರೈವರ್ ಒಂದು ಪೊದೆಯ ಬಳಿ ಮೂತ್ರವಿಸರ್ಜಿಸಲು ಹೋದ..
ಗಾಳಿಯ ಶಬ್ದವೇ ಶೃತಿಯಾಗಿ, ಬರಲಿರುವ ಅಮೋಘವರ್ಷ ಸಂಗೀತಕ್ಕೆ ಮೃದಂಗವನ್ನೋ, ತಬಲವನ್ನೋ ಸಜ್ಜುಗೊಳಿಸುತ್ತಿರುವಂತೆ ಸಿಡಿಲುಗಳು, ಗುಡುಗುಗಳು ಆಗಾಗ್ಗೆ ಕೇಳಿಬರುತ್ತಿದ್ದವು.. ಮೊದಲ ವರ್ಷದ ಮೊದಲ ಹನಿಯ ಸ್ಪರ್ಶವಾಗುತ್ತಿದ್ದಂತೆ ಮೈಮನಗಳು ಪುಲಕಗೊಳ್ಳಲಾರಂಭಿಸಿದವು.. ಕೋಟಿ ಕೊಟ್ಟರೂ ಮನುಷ್ಯನ ಈ ಭಾವಾವಸ್ಥೆ ಸಿಗುವುದು ದುರ್ಲಭ ಎಂದು ಮನಸಿಗೆ ಅನ್ನಿಸಿತು...  ಮೆದುವಾಗಿ ಬೀಳುತ್ತಿದ್ದ ಸಣ್ಣ ಹನಿಗಳು, ನನ್ನ ಜೀವನದ ಭೂತದ ಪುಟಗಳೆಡೆಗೆ ನನ್ನ ಮನಸ್ಸನ್ನು ಕರೆದೊಯ್ಯಲು ಪ್ರಯತ್ನಿಸಿದಂತಿತ್ತು...   ಅಂದು ಮಳೆ ಬರುತ್ತಿತ್ತು.
ಹೌದು ಅಂದು ಮಳೆ ಬರುತ್ತಿತ್ತು. ನನ್ನ ಮೈಯ್ಯನ್ನು ಕೊಂಚವೂ ನೆನೆಸಲಾಗದ ಮಳೆ!.  ನನ್ನ ತಲೆಯಮೇಲೆ ಇಂಪೋರ್ಟೆಡ್ ಕೊಡೆಯೊಂದನ್ನು ಇಸ್ಮಾಯಿಲ್ ಹಿಡಿದಿದ್ದ. ಎದುರಿಗೆ  ಸಿದ್ದಯ್ಯನವರ ಮಗ ನಾಗೇಶನ ಅರೆ ಜೀವಾವಸ್ಥೆಯ ಶರೀರವಿತ್ತು. ಆ ಶರೀರದ ಕಂಗಳಲ್ಲಿ ತಾನು ಸಾಯುವುದಿಲ್ಲವೆಂಬ ಭರವಸೆಯಿತ್ತು. ಸತ್ತರೆ!, ಸಾವಿನಲ್ಲೂ ಒಂದು ಸಾರ್ಥಕತೆಯ ಜೀವನನೆಡೆಸಿದ ಬಗ್ಗೆ  ಹೆಮ್ಮೆ ಇತ್ತು.. ನನ್ನ ಜೀವನವನ್ನು ಅಣುಕಿಸುವ ಹಾಗೆ ಕಾಣುತ್ತಿದ್ದ ಆತನ ಕಂಗಳನ್ನು ಮತ್ತಷ್ಟು ನೋಡಲಾಗಲಿಲ್ಲ. "ಯಾರೂ ನೋಡದ ಹಾಗೆ ಯಾವುದಾದರು ಕೆರೆಗೆ ಹಾಕಿ" ಅಂತಷ್ಟೇ ಹೇಳಿದೆ.  ನಮ್ಮ ಹಳ್ಳಿಯ ಮೂಲೆಯೊಂದರಲ್ಲಿ, ಕಸಿ ಮಾವಿನ ಮರದ ಕೆಳಗಿದ್ದ ಭಟ್ಟರ ಟೀ ಅಂಗಡಿಯಲ್ಲಿ ಕಾಫೀ ಕುಡಿಯುತ್ತ ಅಗ್ರಹಾರದ ಬ್ರಾಹ್ಮಣರ ಹುಡುಗಿ ಸುಶೀಲೆಯ ಬಗ್ಗೆ ಮಾತನಾಡುತ್ತ, ಅಪಹಾಸ್ಯಮಾಡಿಕೊಂಡು ಭಟ್ಟರಿಗೆ "ನಮ್ ಅಕೌಂಟ್ಗ್ ಬರ್ಕಳ್ಳಿ" ಅಂತ ಹೇಳಿದ್ದು ನೆನಪಾಯಿತು. ಅಂದು ನನ್ನ ಜೊತೆ ಅಲ್ಲಿದ್ದದ್ದು ನಾಗೇಶ ಮಾತ್ರ. ಹೊಸದಾಗಿ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದ ನನ್ನನ್ನು ಕಂಡರೆ ಭಟ್ಟರಿಗು ಅಷ್ಟೇ ಅಭಿಮಾನ!.  "ನಿಮ್ ಅಕೌಂಟ್ ಹಂಗಿರ್ಲೀ ನೀವ್ ಗೆದ್ದಿದ್ದುಕ್ ಪಾರ್ಟೀನೆ ಬರ್ಲಿಲ್ವಲ್ಲಾ" ಅಂತ ಭಟ್ಟರು ಛೇಡಿಸಿದರು. "ನೋಡ್ರಿ ಭಟ್ರೆ, ನಾನ್ ಗೆದ್ದಿರೋದು ಜನಗಳ ವಿಶ್ವಾಸದಿಂದಲೇ ಹೊರತು ಹಣದಿಂದಲ್ಲ, ಒಂದ್ವೇಳೆ ಹಣದಿಂದಲೇ ಗೆದ್ದಿದ್ರೆ ಪಾರ್ಟೀಗೀರ್ಟಿ ಮಾಡ್ಕಳ್ಬಹುದಿತ್ತು" ಅಂತ ಹೇಳಿದೆ...   ಮತ್ತೆ ಊರಿನ ಏಳ್ಗೆಗೆ ನಾವು ಏನೆಲ್ಲಾ ಮಾಡಬಹುದು ಎಂಬುದನ್ನು ಕುರಿತು ಚರ್ಚೆಮಾಡಲು ಕಸಿಮಾವಿನ ಮರದಡಿಯ ಹಾಸುಕಲ್ಲಿನ ಮೇಲೆ ಕುಳಿತುಕೊಂಡೆವು. "ರಾಜಕೀಯದಲ್ಲಿ ಒಳ್ಳೆ ಭವಿಷ್ಯ ಇದೆ ನಿಂಗೆ, ನಮ್ಮನ್ನೆಲ್ಲಾ ಮರಿಬೇಡಪ್ಪ " ಅಂತ ನಾಗೇಶ ಮಾತನ್ನು ಮುಂದುವರಿಸಿದ. ಇದ್ದಕ್ಕಿದ್ದಂತೆ ಕೆಲವು ಮಳೆಯ ಹನಿಗಳು ನಮ್ಮ ಮೇಲೆ ಬಿದ್ದವು. "ನೋಡಪ್ಪ, ಕಾಗಕ್ಕ ಗೂಬಕ್ಕನ ಮದುವೇನಾ, ಬಿಸಿಲಲ್ಲೂ ಮಳೆ ಬರ್ತಿದೆ" ಎಂದು ನಾಗೇಶ ಹೇಳಿದ. ಸ್ವಲ್ಪ ಹೊತ್ತಿನಲ್ಲಿಯೇ ಮೋಡಗಳು ಕಪ್ಪುಬಣ್ಣಕ್ಕೆ ಕವಿದು ವಾತಾವರಣದ ಬಣ್ಣವನ್ನೇ ಬದಲಿಸಿದವು. ಮಾವಿನ ಎಲೆಗಳ ಸಂದುವಿನಿಂದ ಮಳೆಯ ಸಿಬರು ನಾವು ಧರಿಸಿದ್ದ ಬಟ್ಟೆಗಳನ್ನು ತೋಯಿಸುತಿತ್ತು. ಅಂದಿನ ಗುಡುಗು ಹೊಸಹುಟ್ಟಿನ ಸಂಭ್ರಮಕ್ಕೆ ಮಂಗಳವಾದ್ಯವನ್ನು ಭಾರಿಸಿದಂತಿತ್ತು. ಪ್ರತಿಯೊಂದು ಹನಿಯು ನನ್ನ ಭೂತಕಾಲವನ್ನು ಕೆದಕಿ ಕೆದಕಿ ತೆಗೆಯುತ್ತಿದ್ದವು. ಅಂದು ಮಳೆ ಬರುತ್ತಿತ್ತು...
ಹೌದು ಅಂದು ಮಳೆ ಬರುತಿತ್ತು. ಗೌಡರ ಮಗ ಶ್ರೀನಿವಾಸನ ಸುತ್ತ ಜನ ನೆರೆದಿದ್ದರು. ಕೆಲವರು ಹಾಡಹಗಲಿನಲ್ಲಿಯೇ ಸಾರಾಯಿಯಿಂದ ಪಾನಮತ್ತರಗಿದ್ದರು. ಕಛೇರಿಯ ಒಳಗೆಲ್ಲ ಶ್ರೀನಿವಾಸನ ಜನರೇ ತುಂಬಿಕೊಂಡಿದ್ದರು. ನನ್ನ ಜೊತೆಯಿದ್ದ ಹನ್ನೊಂದು ಮಂದಿಯಲ್ಲಿ ಕೊಡೆಯಿದ್ದದ್ದು ರಾಘಣ್ಣನ ಬಳಿ ಮಾತ್ರ. ಕೆಲವರಿಗೆ ಮಳೆಯೆ ಬಂದಿರಲಿಲ್ಲ. "ನೀವಿದ್ನಿಟ್ಕೊಳ್ಳಿ" ಅಂತ ರಾಘಣ್ಣ ಕೊಡೆಯನ್ನು ನಾಗೇಶನ ಕೈಗೆ ಕೊಟ್ಟರು. ಬೇಡವೆಂದರು ಕೇಳಲಿಲ್ಲ.  ನಾಗೇಶ ಮತ್ತು ನಾನು ಕೊಡೆಯ ನೆರಳಲ್ಲಿ ನಿಂತೆವು. ರಿಪೇರಿ ಮಾಡಿಸಿರದ ಕೊಡೆಯ ಒಂದು ಪಾರ್ಷ್ವದಿಂದ ಮಳೆ ಸತತವಾಗಿ ನನ್ನ ಬಲ ಭುಜವನ್ನು ನೆನೆಸುತಿತ್ತು.  ನಮ್ಮ ಬಳಿ ಹಣವಿರಲಿಲ್ಲ, ಅದರೂ ದೈವ ಬಲವಿದೆ. ನಮ್ಮನ್ನು ಪ್ರೀತಿಸುವ ಜನರಿದ್ದಾರೆ ಎಂಬ ಧೃಡವಿಷ್ವಾಸ ಅಳಿದಿರಲಿಲ್ಲ. ನಮಗೆ ಮಳೆಯ ಪರಿವೆ ಇರಲಿಲ್ಲ. ನನ್ನ ಗೆಲುವು ನನ್ನ ಮೇಲೆ ಭರವಸೆಯಿಟ್ಟವರ ಗೆಲುವಾಗಿತ್ತು.  ವಾರವಿಡೀ ಧರಿಸಿದ್ದ ಒಂದೇ ಜೊತೆಯ ಬಟ್ಟೆಯ ಬೆವರಿನ ವಾಸನೆಯನ್ನು ಮಳೆಹನಿಗಳು ಕಿತ್ತು ತೆಗೆಯುತ್ತಿದ್ದವು. ಮಳೆಗೆ ಯಾವ ಸಂಕೋಚವೂ ಇರಲಿಲ್ಲ. ಮತದಾನದ ಎಣಿಕೆ ಆರಂಭವಾಯಿತು ಒಟ್ಟು ಐದುನೂರ ಮೂವತ್ತು ಮತಗಳಿದ್ದ ನನ್ನೂರಿನಲ್ಲಿ, ನಾನೂರಹದಿನೇಳು ಓಟುಗಳು ನನಗೇ ಬಿದ್ದಿದ್ದವು. ಶ್ರೀನಿವಾಸನಿಗೆ ಮುಖಭಂಗವಾಗಿತ್ತು. ಅಲ್ಲೀವರೆಗೂ ಶ್ರೀನಿವಾಸನನ್ನು ನೆಪಮಾತ್ರಕ್ಕೆ ಸುತ್ತುವರಿದಿದ್ದ ಜನರೆಲ್ಲರೂ ನನ್ನ ಬಳಿ ಬಂದರು. ಸುತ್ತಿದರು, ನನ್ನನು ಎತ್ತಿದರು. ಇಲ್ಲೀವರೆಗೂ ನಾನು ಸ್ಪರ್ಶ ಕೂಡ ಮಾಡಿರದ ಹೂವಿನ ಮಾಲೆಗಳು ನನ್ನ ಕೊರಳನ್ನಲಂಕರಿಸಿದವು. ನಮ್ಮ ಜನಗಳ ಆನಂದಬಾಷ್ಪಕ್ಕೆ ಪ್ರತಿಫಲಿತವಾದುವೇನೋ ಎಂಬಂತೆ ಮಳೆ ಧಾರಾಕಾರವಾಗಿ ಸುರಿಯಿತು..   ಯಾರೊಬ್ಬರಿಗೂ ಮಳೆ ಮಳೆಯೇ ಆಗಿರಲಿಲ್ಲ. ಯಾರೊಬ್ಬರ ಬಳಿಯೂ ಕೊಡೆಯಿರಲಿಲ್ಲ. ಅಂದಿನ ಮಳೆಯ ನಡುವೆ ಅಬ್ಬರಿಸಿದ ಗುಡುಗು, ಸಾಮ್ರಾಟನೊಬ್ಬನ ವಿಜಯಕ್ಕೆ ಸಂದ ನಗಾರಿಯ ವಾದ್ಯಕ್ಕೆ ಸಮನಾಗಿತ್ತು. ರಭಸದ ಮಳೆಯ ಹನಿಗಳು ಮನಸ್ಸೆಂಬ ಹೊತ್ತಿಗೆಯ ಹಿಂದಿನ ಪುಟವನ್ನೋದಲು ಹವಣಿಸುತ್ತಿದ್ದವು. ಅಂದು ಮಳೆಬರುತ್ತಿತ್ತು. ಮಳೆ ಭೀಕರವಾಗಿತ್ತು. 
ಹೌದು ಅಂದು ಮಳೆಬರುತ್ತಿತ್ತು. ನಮ್ಮಲ್ಲಿ ಕೆಲವರಿಗೆ  ತೂತುಗಳಿದ್ದ ಕೊಡೆಗಳಿದ್ದವು. ಕೆಲವರಿಗೆ ಹೆಗಲಿನ ಮೇಲೆ ಹಾಕಿಕೊಂಡಿದ್ದ ಹಳೆಯ ಟವೆಲ್ಗಳೇ ಕೊಡೆಯಾಗಿದ್ದವು. ಕೆಲವರಿಗೆ ಮಳೆಯೇ ಬಂದಿರಲಿಲ್ಲ. ರಭಸದಿಂದ ಹೊಡೆಯುತ್ತಿದ್ದ ಮಳೆ ರಣರಂಗದ ಬಾಣಗಳ ಸುರಿಮಳೆಯನ್ನೇ ನೆನಪಿಗೆ ತರುತ್ತಿತ್ತು. ಗುಡುಗುಗಳು ರಣರಂಗದ ದೊಡ್ಡದಾದ ಮದ್ದಳೆಗಳ ಶಬ್ದವನ್ನು ಹೋಲುತ್ತಿದ್ದವು. ಯಾರಿಗೂ ಅದರ ಪರಿವೆ ಇದ್ದಂತೆ ಕಾಣುತ್ತಿರಲಿಲ್ಲ. ಪ್ರತಿಯೊಬ್ಬ ರೈತನೂ ತನ್ನನ್ನು ತಾನು ವೀರಯೋಧನಂತೆಯೆ ಭಾವಿಸಿದ್ದನು.  ಸರ್ಕಾರ  ಕಸಿದುಕೊಂಡಿದ್ದ ನಮ್ಮ ತುಂಡುಭೂಮಿಯನ್ನು ಹಿಂತಿರುಗಿಸುವಂತೆ ನಾವೆಲ್ಲರೂ ಧರಣಿಹೂಡಿದ್ದೆವು. ರಂಗಪ್ಪ ಶೆಟ್ರು ನಮ್ಮ ಮುಂದಾಳತ್ವವನ್ನುವಹಿದ್ದರು. ನಾನು ಅವರ ಬಲಗೈನಂತಿದ್ದೆ. ಧರಣಿಯ ಕಾವು ಹೆಚ್ಚಾದಾಗ ನಾವೆಲ್ಲರೂ ಪೋಲಿಸರಿಂದ ಲಾಟಿಚಾರ್ಜ್ ಎದುರಿಸಬೇಕಾಯಿತು. ಮೊದಲೇ ಅನಾರೋಗ್ಯದಿಂದಿದ್ದ ರಂಗಪ್ಪ ಶೆಟ್ಟರಿಗೆ ಲಾಟಿಚಾರ್ಜನ್ನು ಎದುರಿಸಲಾಗಲಿಲ್ಲ. ಮಳೆ ಅವರ ಆರೋಗ್ಯವನ್ನು ಮತ್ತೂ ಕಸಿದುಕೊಂಡಿತು.  ಒಂದು ನಾಲ್ಕುದಿನಗಳಲ್ಲಿಯೇ ರಂಗಪ್ಪ ಶೆಟ್ಟರು ನಮ್ಮನ್ನು ಅಗಲಿದರು. ಅವರ ನಂತರ ನಮ್ಮ ಜನರ ಮುಂದಾಳತ್ವವನ್ನು ನಾನೇವಹಿಸಬೇಕಾಯಿತು.. ಸಾಕಷ್ಟು ಪರಿಶ್ರಮದ ನಂತರ ನಮ್ಮಿಂದ ಕಸಿದುಕೊಂಡಿದ್ದ ಭೂಮಿಯನ್ನು ಹಿಂತಿರುಗಿ ಪಡೆದೆವು.  ಆ ದಿನದ ಮಳೆ ರೈತರ ಕನಸುಗಳನ್ನು ಹೆಣೆಯುವ ತೆಳು ದಾರದ ಸಮೂಹದಂತೆ ಕಾಣುತ್ತಿತ್ತು. ಅಂದು ಮಳೆಬರುತ್ತಿತ್ತು.
ಹೌದು ಅಂದು ಮಳೆಬರುತ್ತಿತ್ತು.  ನಾಗೇಶನ ಕೊಲೆಯಾಗಿ ಏಳುವರ್ಷಗಳಾದ ಮೇಲೆ ಅದೇ ಮೊದಲಬಾರಿಗೆ ಮಳೆ ನನ್ನನ್ನು ಸ್ಪರ್ಷಿಸಿದ್ದು!,  ಮಳೆ ನನ್ನ ಜೀವನವನ್ನು ಸಾಕಷ್ಟು ಬದಲಾಯಿಸಿತ್ತು... ಊಟಕ್ಕೂ ಗತಿಯಿಲ್ಲದ ಒಬ್ಬ ಸಾಮಾನ್ಯನಿಂದ ತುಂಡುಭೂಮಿಗೆ ಒಡೆಯನಾಗುವ ಸಂದರ್ಭಕ್ಕೆ,  ಒಬ್ಬ ಸಣ್ಣ ರೈತನಿಂದ ಗ್ರಾಮಪಂಚಾಯ್ತಿಯ ಸದಸ್ಯನಾಗುವ ಸಂದರ್ಭಕ್ಕೆ, ಒಬ್ಬ ಸಾಮಾನ್ಯ ಗ್ರಾಮಪಂಚಾಯ್ತಿಯ ಸದಸ್ಯನಿಂದ ಒಬ್ಬ ಭ್ರಷ್ಟ MLA ಆಗುವ ಸಂದರ್ಭಕ್ಕೆ ಈ ಮಳೆಯೇ ಸಾಕ್ಷಿಭೂತವಾಗಿತ್ತು.
ಇಂದು ಸುರಿಯುತ್ತಿರುವ ಈ ಮಳೆ ಯಾವುದಕ್ಕೆ ಸಾಕ್ಷಿಯಾಗಬಲ್ಲದೋ ಎಂದು ಮನಸು ಯೋಚಿಸುವಷ್ಟರಲ್ಲೇ ಯಾರೋ ತಲೆಗೆ ಬಲವಾಗಿ ಕಬ್ಬಿಣದ ಸಲಾಕೆಯಿಂದ ಹೊಡೆದ ಹಾಗಾಯ್ತು.. ಎದುರಿಗೆ ಕಾರ್ ಡ್ರೈವರ್ ರಂಗಣ್ಣನ ಜೊತೆ ಇನ್ನೂ ಎರಡು ಮಬ್ಬು ದೇಹಾಕೃತಿಗಳಷ್ಟೇ ಕಂಡವು.. ಅವರ ತುಟಿಗಳಲ್ಲಿ ಸಂತೃಪ್ತಿಯ ಭಾವವನ್ನು ಗುರುತಿಸಬಹುದಾಗಿತ್ತು.
ಹೌದು ಅಂದು ಮಳೆಬರುತ್ತಿತ್ತು... ಅಂದಿನ ಗುಡುಗು ಮರಣ ಮೃದಂಗವನ್ನು ಹೋಲುತ್ತಿತ್ತು...

Rating
No votes yet

Comments