ಹ್ಯಾರಿ ಪೊಟ್ಟರ್
ಮೊನ್ನೆ ಊರಿಂದ ಬಂದಿದ್ದ ಬಶ್ಯ "ಸ್ವಾಮ್ಯಾರೆ, ಏನ್ ಓದಕತ್ತೀರಿ, ಊಟ ಮಾಡ್ತಾನೂ. ಪರೀಕ್ಸೇನಾ?' ಎಂದು ಕೇಳಿದ.
ಪರೀಕ್ಷೆ ಅನ್ನೋ ಮಾತು ಕೇಳಿ ಮನಸ್ಸಿನಲ್ಲಿ ಸ್ವಲ್ಪ ಗಲಿಬಿಲಿಯಾದರೂ ಎಚ್ಚರಗೊಂಡು ಪರೀಕ್ಷೆ ಬರೆಯುವ ಸಂಪತ್ತು ಇನ್ನು ಬರೋದಿಲ್ಲವೆಂಬುದನ್ನು ಮನಸ್ಸಿನಲ್ಲಿಯೇ ಖಾತ್ರಿಪಡಿಸಿಕೊಂಡೆ - ಕಾಲೇಜು ಮುಗಿದು ಸರಿಯಾಗಿ ೩ ವರ್ಷ ಆಯ್ತಲ್ವ ಎಂದು ಕ್ಯಾಲೆಂಡರು ನೋಡುತ್ತ.
ಬಶ್ಯನಿಗೆ ನಾನವತ್ತು ಉತ್ತರವಾಗಿ "ಹ್ಯಾರಿ ಪಾಟರ್ ಪುಸ್ತಕ ಓದ್ತಿದೀನಿ ಕಣೋ" ಎಂದು ಹೇಳಿದ್ದರೆ ಹ್ಯಾರಿ ಪಾಟರ್ ಯಾರು, ಎಲ್ಲಿಂದ ಬಂದ, ಏನಾಗಿತ್ತು ಅವನಿಗೆ, ಯಾಕವನು ಇಷ್ಟು ಫೇಮಸ್ಸು ಎಂದೆಲ್ಲ ದೊಡ್ಡದೊಂದು ಉಪನ್ಯಾಸವೇ ಕೊಡಬೇಕಾಗಿತ್ತು. ಇಂಗ್ಲೀಷರ ಮಕ್ಕಳ ಕಥೆಯಾದರೂ ಇದನ್ನು ದೊಡ್ಡವರೇ ಜಾಸ್ತಿ ಓದ್ತಾರೆ ಅನ್ನೋದನ್ನ ಅವನಿಗೆ ಬಿಡಿಸಿ ಸವಿವರವಾಗಿ ಹೇಳಬೇಕಿತ್ತು.
"ಪರೀಕ್ಷೆಯೇನೂ ಇಲ್ಲ ಕಣೋ, ಈ ಪುಸ್ತಕ ಇದೆಯಲ್ಲಾ ಕೋಟಿಗಟ್ಲೆ ಮಾರಾಟ ಆಗಿದೆಯಂತೆ ಮಾರಾಯ. ನನಗೊಂದು ಕೋಟಿ urgent ಬೇಕಿತ್ತು ನೋಡು, ಇದರಲ್ಲೇನಿದೆ ನೋಡಿ ನಾನೂ ಹಾಗೇ ಬರೆಯೋಣಾಂತ" ಎಂದು ತಮಾಷೆ ಮಾಡಿದೆ.
ಅವನಿಗೆ ಅದರಲ್ಲಡಗಿರುವ ತಮಾಷೆ ಗೊತ್ತಾಯ್ತೋ ಇಲ್ಲವೊ ಪುಸ್ತಕ ಬರೆದು ಕೋಟಿಗಟ್ಟಲೆ ದುಡ್ಡು ಮಾಡಬಹುದೆಂಬ ವಿಷಯ ಕಿವಿಗೆ ಬಿದ್ದದ್ದೇ ಅವನಿಗೆ ತಾನೇನೂ ಓದಲಿಲ್ಲವಲ್ಲ, ಶಾಲೆಯಿಂದ ಓಡಿಹೋದೆನಲ್ಲ - ಓದಿದ್ದರೆ ತಾನೂ ಒಂದು ಕೋಟಿ ಹೊಡೀಬೋದಾಗಿತ್ತು ಎಂದೆಲ್ಲ ಧಿಡೀರ್ ಜಿಗುಪ್ಸೆ ಶುರುವಾಗಿಬಿಟ್ಟಿತ್ತು. ಅದನ್ನವನು ತನ್ನ ಮಾತಿನಲ್ಲಿ ಹೊರಗೆಡವಿದ್ದ.
ನಾನು:
"ಅಷ್ಟೊಂದು ತಲೆ ಕೆಡಿಸಿಕೊಳ್ಳಬೇಡ ಬಶ್ಯ. ಓದಿದ ತಕ್ಷಣ ಹೀಗೆ ಬರೆಯೋದಕ್ಕಾಗಲ್ವೊ. ಅದಕ್ಕೂ ಬೇಕು... ನಿನ್ನ ಮಕ್ಕಳನ್ನಾದರೂ ಓದಿಸ್ತಿದೀಯಲ್ಲ, ಬಿಡು" ಎಂದು ಏನೇನೋ ವದರಿ ಅಲ್ಲಿಂದ ರೂಮಿಗೆ ಕಾಲ್ಕಿತ್ತಿದ್ದೆ.
ಹ್ಯಾರಿಪಾಟರ್ ಪುಸ್ತಕಗಳ ಕೊನೆಯ ಕಂತು ಶನಿವಾರ ಹೊರಬಂದಿತು. ಪುಸ್ತಕ ಓದಿ ಮುಗಿಸಿದ ಮಾರನೆಯ ದಿನ ಬೆಳಿಗ್ಗೆ ಸ್ಟ್ರಾಂಡ್ ಪುಸ್ತಕ ಮಳಿಗೆಗೆ ತೆರಳಿ ನನ್ನ ಕಾಪಿ ಎತ್ತಿಕೊಂಡು ಬಂದಿದ್ದೆ. ನಾನು ಪ್ರಿ-ಆರ್ಡರ್ ಮಾಡಿದ ಪುಸ್ತಕ ಕೈಸೇರುವ ಮುಂಚೆಯೇ ಪುಸ್ತಕದ ನಕಲುಗಳು ಅಂತರ್ಜಾಲದಲ್ಲಿ ಹರಿದಾಡುತ್ತಿತ್ತು. ಹಿಂದಿನ ಪುಸ್ತಕ ಓದಿ ಕೊನೆಯ ಕಂತಿನ ಕಥೆಗೆ ಕಾತುರರಾಗಿದ್ದವರಿಗೆ ಕಾಯುವ ಪ್ರಮೇಯವಿರಲಿಲ್ಲ.
ಹ್ಯಾರಿ ಪಾಟರ್ ವಿಶ್ವದಾದ್ಯಂತ ಮಾಡಿರುವ ಮೋಡಿಯ ಬಗ್ಗೆ ಮತ್ಯಾರಾದರೂ ಮಾತನಾಡಿದರೆ ಬೆಂಕಿಗೆ ತುಪ್ಪ ಸುರಿದಂತೆ - ಈಗಾಗಲೇ ಹುಚ್ಚೆದ್ದು ಕುಣಿದ ಜನರಿಗಿಂತಲೂ ಹೆಚ್ಚಾಗಿ ಮೀಡಿಯ ತಾಳಕ್ಕೆ ಕುಣಿದಿದೆ. ಹಾಗೆ ಕುಣಿಯುವಂತಹ ಸರಕು ಆ ಪುಸ್ತಕದಲ್ಲಿರುವುದೂ ನಿಜವೇ ಆದರೂ ಅದೇ intensityಯ ಸರಕು ಹೊತ್ತ ಪ್ರಾದೇಶಿಕ ಪುಸ್ತಕಗಳಿಗೆ ಇಲ್ಲದಿರುವುದು ನಾವು ಕಂಡುಕೊಂಡಿರುವ "ಸಮತೋಲನ'ವನ್ನು ಹೊರಹಾಕುತ್ತದೆ.
ಹೊರಗಿನ ಪುಸ್ತಕಕ್ಕೆ ಸಿಗುವ ಮಾರ್ಕೆಟಿಂಗ್, ಪಬ್ಲಿಸಿಟಿ ದೇಶದ ಒಳಗಿನವಕ್ಕಿಲ್ಲ.
ಪುಸ್ತಕದ ಜೊತೆ ಬಂದ ಸೆಂಟಿಮೆಂಟ್ಸ್ ಏನೇ ಇದ್ದರೂ ವಿದೂಷಕರಂತೆ ಬಟ್ಟೆ ಸುತ್ತಿಕೊಂಡು ಘಂಟೆಗಟ್ಟಲೆ, ದಿನಗಟ್ಟಲೆ ಪುಸ್ತಕ ಪಡೆಯೋದಕ್ಕೆ ಕಾಯುವ ಓದುಗರ ಮಹಾಪೂರವನ್ನೇ ಹುಟ್ಟಿಹಾಕುವ ಈ ಪುಸ್ತಕದ simplicity, creativity, marketing ಇವೆಲ್ಲವನ್ನೂ ಮೆಚ್ಚಬೇಕಾದದ್ದೆ. ಪುಸ್ತಕ ಮಾತ್ರ ಓದಿಸಿಕೊಂಡೇ ಹೋಗುತ್ತದೆ. ಓದು ಪ್ರಾರಂಭಿಸಿದ ನಂತರ ಪುಸ್ತಕ ಆಚೆ ಇಟ್ಟು ಹೋಗಲಾಗದಂತಹ ಥ್ರಿಲ್ಲರ್ ಅದು. ಅದರಲ್ಲಿರುವ "ಮ್ಯಾಜಿಕ್" ಕಥೆಯನ್ನು ಹೆಣೆಯಲು ಅದರ ಕರ್ತೃವಿಗೆ ಬೇಕಾದ ಸರಕಷ್ಟೆ. ಪುಸ್ತಕದ ತುಂಬ ಸುಲಭವಾಗಿ ಅರ್ಥವಾಗುವ ವಾಕ್ಯಗಳ ಬಳಕೆಯಾಗಿದೆ. ಪಾತ್ರಗಳು ಮನಸ್ಸನ್ನು ಕುಲುಕಿಸುತ್ತವೆ. ಕಥೆ ಓದಿಸಿಕೊಂಡು ಹೋಗುತ್ತದೆ. ಓದುಗರಿಗೆ (ನೋಡುಗರಿಗೆ) ಬೇಕಾದ ಸರಕನ್ನೇ ಒದಗಿಸುವ ಇದು (ಏನೂ ಅರ್ಥವಿಲ್ಲದ) ಸೂಪರ್ ಹಿಟ್ ಬಾಲಿವುಡ್ ಸಿನಿಮಾದಂತೆ. ಬರಿಯ ಎಂಟರ್ಟೇನ್ಮೆಂಟ್.
ಆದರೆ ಪುಸ್ತಕದ ವೈಶಿಷ್ಟ್ಯತೆ ಇರುವುದು ಈ ಸರಕನ್ನು ಜೋಡಿಸಿರುವ, ಓದುಗರಿಗೆ ನೀಡಿರುವ ರೀತಿಯಲ್ಲಿ. ಬರಹಗಾರ್ತಿ ಜೆ ಕೆ ರೌಲಿಂಗ್ ತನ್ನ ಕುಶಲತೆಯಿಂದ ಸೃಷ್ಟಿಸಿರುವ ಮಾಯದಲೋಕ ಓದುಗರ ಹತ್ತಿರವಾಗುತ್ತ, ಚಿರಪರಿಚಿತವಾಗುತ್ತ ಹೋಗುತ್ತದೆ. ನಾನು ಕಾಲೇಜಿನಲ್ಲಿದ್ದಾಗ ಹೊರಬಂದ ಇದರ ಮೊದಲನೆಯ ಕಂತು ಪುಸ್ತಕದಿಂದ ಇತ್ತೀಚೆಗೆ ಬಂದ ಏಳನೆಯ ಕಂತಿನವರೆಗೂ ನನಗೆ ಕೊಂಡು ಓದುವಂತೆ ಮಾಡಿದ ಈ ಪುಸ್ತಕಗಳ ಕಥೆ ಇಲ್ಲಿಗೆ ಮುಗಿಯುವುದಂತೆ. ಕಥೆ ಒಂದು ರೀತಿ ಮುಗಿದಂತೆಯೂ ಕಾಣುತ್ತದೆ. ಆದರೆ ಪುಸ್ತಕ, ಸಿನಿಮಾ, ಮರ್ಚೆಂಡೈಸ್ ಮೂಲಕ ಬಿಲಿಯನ್ನುಗಟ್ಟಲೆ ಡಾಲರುಗಳನ್ನು ಹೊರಳಿಸುತ್ತಿರುವ ಇದನ್ನು ಮತ್ತೊಮ್ಮೆ ಮತ್ತೊಂದು ಹೊಸ ಕಥೆಗಳ ಸರಣಿಯಾಗಿ ಹೊರತಂದರೂ ಅಚ್ಚರಿಯಿಲ್ಲ.
(ಹ್ಯಾರಿ ಪಾಟರ್ ಸಿನಿಮಾ ಮೊದಲು ನೋಡಿದವರಿಗೆ ಪುಸ್ತಕ ಓದುವ ಆಸಕ್ತಿ ಹುಟ್ಟುವುದಿಲ್ಲ. ಸಿನಿಮಾಗಳು ಪುಸ್ತಕದಲ್ಲಿರುವ ಹಾಗೂ ಈ ಇಡಿಯ ಫಿಕ್ಷನ್ನಿನಲ್ಲಿರುವ ವೈಶಿಷ್ಟ್ಯತೆಯನ್ನೇ ಬೇರೆ ಬೇರೆ ರೀತಿಯಲ್ಲಿ ಹದಗೆಡಿಸಿಬಿಟ್ಟಿವೆ. ಬರಿಯ ಕಂಪ್ಯೂಟರ್ ಎಫೆಕ್ಸ್ ನೋಡಲು ಮಾತ್ರ ಹ್ಯಾರಿ ಪಾಟರ್ ಸಿನಿಮಾ ಎಂಬಂತಾಗಿಹೋಗಿದೆ. ಇಡಿಯ ಪುಸ್ತಕವನ್ನು ಎರಡೂವರೆ ಘಂಟೆಗೆ ಫಿಟ್ ಮಾಡೋದೂ ಕಷ್ಟವೇ.)
ಮತ್ತಷ್ಟು ಓದು:
* [:http://hpnadig.net/blog/index.php/archives/2007/07/21/harry-potter-and-the-deathly-hallows|ಇಂಗ್ಲೀಷಿನಲ್ಲಿ ಇದರ ಬಗ್ಗೆಯೇ ನನ್ನ ಬ್ಲಾಗ್ ಬರಹ]
Comments
ಉ: ಹ್ಯಾರಿ ಪೊಟ್ಟರ್
In reply to ಉ: ಹ್ಯಾರಿ ಪೊಟ್ಟರ್ by omshivaprakash
ಉ: ಹ್ಯಾರಿ ಪೊಟ್ಟರ್