'ಹ್ಹಿ ಹ್ಹಿ'ಯ ಶಾಶ್ವತ ನಿರ್ಗಮನ

'ಹ್ಹಿ ಹ್ಹಿ'ಯ ಶಾಶ್ವತ ನಿರ್ಗಮನ

ಮೊನ್ನೆ ದೀಪಾವಳಿಯಂದು ೪ ದಿನ ರಜಾ ಇದ್ದರೂ ಎಲ್ಲೂ ಚಾರಣ ಮಾಡಲು ಸಾಧ್ಯವಾಗಲಿಲ್ಲ. ೩ ದಿನ ಮನೆಯಲ್ಲೇ ಕೂತು 'ಫುಲ್ ಬೋರ್' ಹೊಡೆಸಿಕೊಂಡು, ನಾಲ್ಕನೇ ದಿನ ಸೋಮವಾರ ೨೩ ಅಕ್ಟೊಬರ್-ರಂದು 'ನಡೀಪ್ಪಾ ಮಾರಾಯ, ಆಗುಂಬೆಗಾದರೂ ಹೋಗಿಬರೋಣು' ಎಂದು ಯಮಾಹ ಏರಿದೆ.

ರಜಾದಿನವಾಗಿದ್ದರಿಂದ 'ಸನ್ ಸೆಟ್ ವ್ಯೂ ಪಾಯಿಂಟ್'ನಲ್ಲಿ ಜನಜಂಗುಳಿ. ಸ್ವಲ್ಪ ಮುಂದೆ ಸಾಗಿ ನೋಡಿದರೆ ಪಡಿಯಾರ್-ನ ಅಂಗಡಿಯಲ್ಲಿ 'ಫುಲ್ ರಶ್'. ತಲೆ ಮೇಲೆತ್ತಿ ನೋಡಲು ಕೂಡಾ ಪುರುಸೊತ್ತಿಲ್ಲದೆ, ಚಟ್ಟಂಬಡೆ ಕರಿಯಲು ಬಿಡುತ್ತಾ, ಜನ ಹೆಚ್ಚಾದಂತೆ ಹಾಲಿಗೆ ಇನ್ನಷ್ಟು ನೀರು ಬೆರೆಸುತ್ತಾ ಚಹಾ/ಕಾಫಿ/ಕಷಾಯ ಮಾಡುವುದರಲ್ಲಿ ಪಡಿಯಾರ್ ಮಗ್ನನಾಗಿದ್ದ. ಸ್ವಲ್ಪ ಸಮಯದ ಬಳಿಕ ನನ್ನನ್ನು ನೋಡಿ 'ಅರೆ ನಾಯ್ಕ್ರೆ, ಯಾವಾಗ ಬಂದ್ರಿ? ಬಹಳ ಜನ ಇವತ್ತು' ಎಂದು ಮತ್ತೆ ತನ್ನ ಕಾಯಕದಲ್ಲಿ ನಿರತನಾದ. ನನ್ನ ಕಣ್ಣುಗಳು 'ಹ್ಹಿ ಹ್ಹಿ' ಯನ್ನೇ ಹುಡುಕುತ್ತಿದ್ದವು. ವಿಪರೀತ ಜನಜಂಗುಳಿಯಿದ್ದರೆ 'ಹ್ಹಿ ಹ್ಹಿ'ಗೆ ಸಂಭ್ರಮ - ತಿನ್ನಲು ಹೆಚ್ಚು ಸಿಗತ್ತದೆಂದು. ಆತ ಎಲ್ಲೂ ಕಾಣುತ್ತಿರಲಿಲ್ಲ.

ಹಿಂತಿರುಗುವಾಗ ಪಡಿಯಾರ್-ಗೆ ಕೆಲಸದಲ್ಲಿ ಸ್ವಲ್ಪ ಬಿಡುವಾದರೆ 'ಹ್ಹಿ ಹ್ಹಿ'ಯ ಬಗ್ಗೆ ಕೇಳಿದರಾಯಿತು ಎಂದು 'ಗೆಸ್ಟ್-ಹೌಸ್' ಕಡೆಗೆ ತೆರಳಿದೆ. ಮರಳಿ 'ಚೆಕ್-ಪೋಸ್ಟ್' ಬಳಿ ಬಂದಾಗ ಪಡಿಯಾರ್ ವಾಸ್ ಸ್ಟಿಲ್ ಬಿಝಿ. ಆಚೀಚೆ ನೋಡಿದರೆ 'ಹ್ಹಿ ಹ್ಹಿ' ಯ ಪತ್ತೆಯಿಲ್ಲ. ೧೦ ನಿಮಿಷ ಕಾದು ಉಡುಪಿಗೆ ಹಿಂತಿರುಗಿದೆ. 

ನವೆಂಬರ್ ೧ ರಂದು ಮತ್ತೊಂದು ರಜೆ, ಮತ್ತೆ ಆಗುಂಬೆಗೆ ಪಯಣ. ಈ ಬಾರಿ ಪಡಿಯಾರ್ ವಾಸ್ ನಾಟ್ ಬಿಝಿ ಎಟ್ ಆಲ್. ಕೂತು ನೊಣ ಓಡಿಸುತ್ತಿದ್ದ ಪಡಿಯಾರ್ ನನ್ನನ್ನು ನೋಡಿದ ಕೂಡಲೇ 'ಮೊನ್ನೆ ನೀವು ಯಾವಾಗ ಬಂದ್ರಿ, ಯಾವಾಗ ಹೋದ್ರಿ ಅನ್ನೋದೆ ಗೊತ್ತಾಗ್ಲಿಲ್ಲ' ಅನ್ನುತ್ತಾ ತಿನ್ನಲು ನೀಡಿದ. 'ಹ್ಹಿ ಹ್ಹಿ' ಎಲ್ಲಿ ಎಂದು ಕೇಳಲು, 'ಹೋಯ್ತ್ರಿ ಅದು, ತ್ಚ್ ತ್ಚ್ ತ್ಚ್ ಬಹಳ ಮುದ್ದಿನ ನಾಯಿ, ಎಷ್ಟು ಪ್ರೀತಿ ಮಾಡ್ತಿತ್ತು....' ಅಂದಾಗ ಆತ ನೀಡಿದ ತಿಂಡಿಗೆ ಟೇಸ್ಟೇ ಇಲ್ಲವೆನಿಸಿತು. ವರ್ಷಕ್ಕೆ ಕನಿಷ್ಟ ೧೦-೧೨ ಜಾನುವಾರುಗಳನ್ನು ಆಗುಂಬೆಯಲ್ಲಿ ಬಲಿ ತೆಗೆದುಕೊಳ್ಳುವ ಉಡುಪಿಯಿಂದ ಶಿವಮೊಗ್ಗ, ಕೊಪ್ಪ, ಶೃಂಗೇರಿ, ಬಾಳೆಹೊನ್ನೂರು ಇತ್ಯಾದಿ ಊರುಗಳಿಗೆ ತೆರಳುವ ಮಿನಿ ಬಸ್ಸುಗಳೊಂದಕ್ಕೆ 'ಹ್ಹಿ ಹ್ಹಿ' ಬಲಿಯಾಗಿದ್ದ.

'ಗೆಸ್ಟ್-ಹೌಸ್' ಬಳಿ ತೆರಳಲು ಮನಸಾಗದೆ ಅಲ್ಲಿಂದಲೇ ಉಡುಪಿಗೆ ಹಿಂತಿರುಗಿದೆ. ಪಡಿಯಾರ್, 'ಹ್ಹಿ ಹ್ಹಿ' ಯ ಗೆಳೆಯನಾಗಿದ್ದ ಇನ್ನೊಂದು ನಾಯಿಗೆ 'ಹೆಚ್ ಹಚ್ಯಾ.. ಬದಿಗ್ ನಡಿ, ಯಾವಾಗ್ ನೋಡಿದ್ರು ರಸ್ತೆ ಮಧ್ಯದಲ್ಲೇ ಅಡ್ಡಾಡೋದು... ಮೊನ್ನೆ ಒಬ್ಬ ಹೋದ, ಈಗ ಇಂವ ಹೋಗ್ಲಿಕ್ಕೆ ತಯಾರಿ ಮಾಡ್ತಿದ್ದಾನೆ..ಬದಿಗ್ ಹೋಗ್' ಎಂದು ಬೈಯುತ್ತಾ ಉಳಿದು ಹೋಗಿದ್ದ ಇಡ್ಲಿ ಚೂರುಗಳನ್ನು ಅದಕ್ಕೆ ನೀಡುತ್ತಿದ್ದ.

Rating
No votes yet