೧೦೪. ಲಲಿತಾ ಸಹಸ್ರನಾಮ ೩೯೧ರಿಂದ ೩೯೫ನೇ ನಾಮಗಳ ವಿವರಣೆ

೧೦೪. ಲಲಿತಾ ಸಹಸ್ರನಾಮ ೩೯೧ರಿಂದ ೩೯೫ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೩೯೧-೩೯೫

Nityā-ṣoḍaśikā-rūpā नित्या-षोडशिका-रूपा (391)

೩೯೧. ನಿತ್ಯಾ-ಷೋಡಶಿಕಾ-ರೂಪಾ

            ಇದು ಶ್ರೀ ಚಕ್ರದ ಪೂಜೆಯಲ್ಲಿ ಪೂಜಿಸಲ್ಪಡುವ ಹದಿನಾರು ತಿಥಿಗಳನ್ನು ಪ್ರತಿನಿಧಿಸುವ ಹದಿನಾರು ದೇವತೆಯರ (ತಿಥಿ ನಿತ್ಯ ದೇವಿಯರ) ಕುರಿತಾದ ಉಲ್ಲೇಖವಾಗಿದೆ. ಹದಿನಾರನೆಯ ದೇವತೆಯು ಸ್ವಯಂ ಲಲಿತಾಂಬಿಕೆಯೇ ಆಗಿದ್ದಾಳೆ. ಈ ಹದಿನೈದು ದೇವತೆಯರು ಪಂಚದಶೀ ಮಂತ್ರದ ಹದಿನೈದು ಬೀಜಾಕ್ಷರಗಳನ್ನು ಪ್ರತಿನಿಧಿಸುತ್ತಾರೆಂದು ಹೇಳಲಾಗುತ್ತದೆ ಮತ್ತು ಲಲಿತಾಂಬಿಕೆಯು ಷೋಡಶೀ ಮಂತ್ರವನ್ನು ಪ್ರತಿನಿಧಿಸುವ ಹದಿನಾರನೇ ಅಧಿದೇವತೆಯಾಗಿದ್ದಾಳೆ. ಷೋಡಶೀ ಮಂತ್ರವು ಹದಿನಾರು ಬೀಜಾಕ್ಷರಗಳನ್ನು ಒಳಗೊಂಡಿದೆ; ಇದರಲ್ಲಿನ ಅಧಿಕ ಅಕ್ಷರವಾದ श्रीं (ಶ್ರೀಂ) ಲಕ್ಷ್ಮೀ ಬೀಜಾಕ್ಷರವಾಗಿದೆ. ಷೋಡಶೀ ಮಂತ್ರವು ಮಂತ್ರಗಳಲ್ಲೆಲ್ಲಾ ಅತ್ಯಂತ ಶಕ್ತಿಯುತವಾದದ್ದೆಂದು ಪರಿಗಣಿತವಾಗಿದೆ. ಈ ಮಂತ್ರವು ಕೇವಲ ಅಂತಿಮ ಮುಕ್ತಿಗಾಗಿಯೇ ಮೀಸಲಾಗಿದೆ.

             ಅಗ್ನಿಷ್ಟೋಮ ಎಂದು ಹೇಳಲ್ಪಡುವ ಒಂದು ವಿಧವಾದ ಹೋಮವನ್ನೂ ಷೋಡಶೀ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ. ಈ ಹೋಮದಲ್ಲಿ ಯಜಮಾನನು (ಹೋಮವನ್ನು ಕೈಗೊಳ್ಳುವವನು) ಪವಿತ್ರಾಗ್ನಿಯ ನಿರ್ವಹಣೆಯನ್ನು ಮಾಡುತ್ತಾ ಅದಕ್ಕೆ ಸೋಮವನ್ನು ಆಹುತಿಯಾಗಿ ಸಮರ್ಪಿಸಿ ಇಂದ್ರ ಮೊದಲಾದ ದೇವತೆಗಳನ್ನು ತೃಪ್ತಿ ಪಡಿಸುತ್ತಾನೆ. ಇದಕ್ಕೆ ಬೇಕಾಗುವ ಪುರೋಹಿತರ ಸಂಖ್ಯೆಯು ಹದಿನಾರು ಆಗಿರುತ್ತದೆ ಮತ್ತು ಈ ಕಾರ್ಯವು ಐದು ದಿನಗಳವರೆಗೆ ಸಾಗುತ್ತದೆ. ಈ ಯಜ್ಞವು ಗೋಜಲು ಗೊಂದಲಗಳಿಂದ ಕೂಡಿದ ವಿಚಿತ್ರವಾದ ಮಂತ್ರಗಳನ್ನು ಹೊಂದಿದ್ದು ಈ ಮಂತ್ರಗಳು ಋಗ್ವೇದದಲ್ಲಿ ಕಂಡು ಬರುವುದಿಲ್ಲ; ಅವುಗಳ ಉಲ್ಲೇಖವು ಕೆಲವೊಮ್ಮೆ ಶೌತ್ರ ಸೂತ್ರಗಳಲ್ಲಿ ಮತ್ತು ಋಗ್ವೇದದ ಬ್ರಾಹ್ಮಣದಲ್ಲಿ ಹಾಗೂ ಸಾಮ-ವೇದ ಮತ್ತು ಅಥರ್ವಣ ವೇದಗಳಲ್ಲಿ ಕಂಡು ಬರುತ್ತದೆ. ಈ ಮಂತ್ರಗಳನ್ನು ಪಠಿಸುವುದು ಮತ್ತು ಶಾಸ್ತ್ರಬದ್ಧವಾಗಿ ಉಚ್ಛರಿಸುವುದು ಬಹಳ ಸಂಕೀರ್ಣತೆಯಿಂದ ಕೂಡಿದ ವಿಷಯವಾಗಿದೆ ಆದರೆ ಈ ಮಂತ್ರಗಳು ವಿಶೇಷ ಶಕ್ತಿ ಹಾಗು ಪಾವಿತ್ರ್ಯತೆಯಿಂದ ಕೂಡಿವೆ ಎಂದು ಪರಿಗಣಿತವಾಗಿವೆ.

           ಈ ನಾಮವು ಸಾವಿರಾರು ಯಜ್ಞ-ಯಾಗದಿಗಳನ್ನು ಮಾಡುವುದಕ್ಕಿಂತ ದೇವಿಯ ಷೋಡಶೀ ಮಂತ್ರವನ್ನು ಉಚ್ಛರಿಸುವುದರ ಮೂಲಕ ಆಕೆಯು ಸಂತುಷ್ಟಳಾಗುವಳೆಂದು ಹೇಳುತ್ತದೆ. ಚಂದ್ರಮಾನದ ಕೃಷ್ಣ ಪಕ್ಷದಲ್ಲಿ, ಲಲಿತಾಂಬಿಕೆಯು ಸೂರ್ಯನಲ್ಲಿ (ಸೂರ್ಯ ಮಂಡಲದಲ್ಲಿ) ಇರುತ್ತಾಳೆಂದೂ ಮತ್ತು ಶುಕ್ಲ ಪಕ್ಷದಲ್ಲಿ ದೇವಿಯು ಚಂದ್ರನಲ್ಲಿ (ಚಂದ್ರ ಮಂಡಲದಲ್ಲಿ) ಇರುತ್ತಾಳೆಂದು ಹೇಳಲಾಗುತ್ತದೆ. ಯಾರು ಪಂಚದಶೀ ಮಂತ್ರದ ದೀಕ್ಷೆಯನ್ನು ತೆಗೆದುಕೊಂಡಿರುತ್ತಾರೆಯೋ ಅವರು ಶುಕ್ಲ ಪಕ್ಷವನ್ನು ತಮ್ಮ ಮಂತ್ರದ ಸಿದ್ಧಿಯನ್ನು ಕಂಡುಕೊಳ್ಳಲು ಉಪಯೋಗಿಸಬೇಕೆಂತಲೂ ಮತ್ತು ಯಾರು ಷೋಡಶೀ ಮಂತ್ರದ ಉಪದೇಶವನ್ನು ಪಡೆದಿರುತ್ತಾರೆಯೋ ಅವರು ಮಂತ್ರ ಸಿದ್ಧಿಗಾಗಿ ಕೃಷ್ಣ ಪಕ್ಷವನ್ನು ಅವಲಂಬಿಸ ಬೇಕೆಂದು ಹೇಳಲಾಗುತ್ತದೆ. ಯಾರು ಪಂಚದಶೀ ಮಂತ್ರವನ್ನು ಉಚ್ಛರಿಸುತ್ತಾರೆಯೋ ಅವರು ಅದನ್ನು ಹಗಲು ಹೊತ್ತಿನಲ್ಲಿ ಅಂದರೆ ಸೂರ್ಯನಿಗೆ ಸಂಭಂದಿಸಿದ ಸಮಯದಲ್ಲಿ ಕೈಗೊಳ್ಳಬೇಕು ಮತ್ತು ಯಾರು ಷೋಡಶೀ ಮಂತ್ರವನ್ನು ಜಪಿಸುತ್ತಾರೆಯೋ ಅವರು ಅದನ್ನು ರಾತ್ರಿಯ ವೇಳೆಯಲ್ಲಿ ಅಂದರೆ ಚಂದ್ರನಿಗೆ ಸಂಭಂದಿಸಿದ ಸಮಯದಲ್ಲಿ ಕೈಗೊಳ್ಳಬೇಕು.

Śrīkaṇṭhārdha-śarīriṇī श्रिकण्ठार्ध-शरीरिणी (392)

೩೯೨. ಶ್ರೀಕಂಠಾರ್ಧ-ಶರೀರಿಣೀ

             ದೇವಿಯು ಶಿವನ ಅರ್ಧ ಶರೀರವನ್ನು ಹೊಂದಿದ್ದಾಳೆ. ಶ್ರೀಕಂಠ ಎನ್ನುವುದು ಶಿವನ ಇನ್ನೊಂದು ಹೆಸರಾಗಿದೆ. ಶ್ರೀ ಎಂದರೆ ವಿಷವೆಂದೂ ಮತ್ತು ಕಂಠವೆಂದರೆ ಗಂಟಲು ಎಂದೂ ಅರ್ಥ. ಶಿವನು ತನ್ನ ಗಂಟಲಿನಲ್ಲಿ ವಿಷವನ್ನು ಪಿಡಿದಿರುವುದರಿಂದ ಅವನಿಗೆ ಶ್ರೀ ಕಂಠನೆಂದು ಹೆಸರು ಬಂದಿದೆ. ಶ್ರೀಕಂಠ ಎಂದರೆ ಸುಂದರವಾದ ಕುತ್ತಿಗೆ ಎನ್ನುವ ಅರ್ಥವೂ ಇದೆ. ಮೊದಲೇ ಹೇಳಿದಂತೆ ದೇವಿಗೆ ಶಿವನ ಅರ್ಧ ಶರೀರವಿದೆ. ಬೃಹದಾರಣ್ಯಕ ಉಪನಿಷತ್ತು (೧.೪.೩) ಈ ಸ್ಥಿತಿಯನ್ನು ಹೀಗೆ ವಿವರಿಸುತ್ತದೆ: "ಅವನು (ಪುರುಷ ಅಥವಾ ಆತ್ಮ) ಒಂದು ಸಂಗಾತಿ (ಪ್ರಕೃತಿ) ಬೇಕೆಂದು ಬಯಸಿದನು. ಅವನು ಎಷ್ಟು ಪ್ರಮಾಣವುಳ್ಳವನಾದನೆಂದರೆ ಒಬ್ಬ ಪುರುಷ ಮತ್ತು ಸ್ತ್ರೀ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುವಷ್ಟು. ಅವನು ಈ ದೇಹವನ್ನೇ ಎರಡಾಗಿ ವಿಭಜಿಸಿದನು. ಅದರ ಮೂಲಕ ಗಂಡ ಮತ್ತು ಹೆಂಡತಿಯರ ಉದ್ಭವವಾಯಿತು. ಇದು ಒಬ್ಬನ ಮೊದಲ-ಅರ್ಧ ಭಾಗವಾಗಿದೆ, ಬಠಾಣಿಯ ಎರಡು ಅರ್ಧ ಬೇಳೆಗಳಂತೆ. ಆದ್ದರಿಂದ ಈ ಬಠಾಣಿಯು ಹೆಂಡತಿಯಿಂದ ಪೂರ್ಣವಾಗುತ್ತದೆ. ಅವನು ಆ ಎರಡನೇ ಅರ್ಧದೊಂದಿಗೆ ಸಮಾಗಮ ಹೊಂದಿದ್ದರಿಂದ ಮಾನವರ ಜನನವಾಯಿತು."

             ಈ ನಾಮಕ್ಕೆ ಇನ್ನೊಂದು ವಿಶ್ಲೇಷಣೆಯೂ ಇದೆ. ಸಂಸ್ಕೃತದ ಮೊದಲನೇ ಅಕ್ಷರವು अ (ಅ) ಆಗಿದ್ದು ಅದೂ ಸಹ ಶ್ರೀಕಂಠ ಎನ್ನುವ ಹೆಸರುಳ್ಳದ್ದಾಗಿದೆ ಅಥವಾ ಮೊದಲನೇ अ (ಅ) ಅಕ್ಷರವನ್ನು ಶ್ರೀಕಂಠ ಎಂದೂ ಕರೆಯಲಾಗುವುದು. ಮೊದಲನೆಯದಾದ ’ಅ’ ಅಕ್ಷರವು ಪರಾ (ನಾಮ ೩೬೬) ಎನ್ನುವ ಶಬ್ದ ರೂಪದಲ್ಲಿದ್ದು ಅದು ಮಾತನ್ನು ಹೊರಹಾಕುವ ಸಮಯದಲ್ಲಿ ವೈಖರೀ (ನಾಮ ೩೭೧) ಆಗಿ ಮಾರ್ಪಾಟು ಹೊಂದುತ್ತದೆ. ಮೊದಲನೇ ಅಕ್ಷರವು ಉಳಿದ ಅಕ್ಷರಗಳ ಒಟ್ಟು ಮೊತ್ತದ ಅರ್ಧವೆಂದು ಪರಿಗಣಿತವಾಗಿರುವುದರಿಂದ, ದೇವಿಯನ್ನು ಶ್ರೀಕಂಠಾರ್ಧ ಶರೀರಿಣೀ ಎಂದು ಕರೆಯಲಾಗಿದೆ.

Prabhāvati प्रभावती (393)

೩೯೩. ಪ್ರಭಾವತೀ

             ದೇವಿಯು ಪ್ರಭಾವದ ಶಕ್ತಿಯನ್ನು ಹೊಂದಿದವಳಾಗಿದ್ದಾಳೆ. ಆಕೆಯು ಅಷ್ಟ ಸಿದ್ಧಿಗಳನ್ನು ಪ್ರತಿನಿಧಿಸುವ ಎಂಟು ದೇವಿಯರಿಂದ ಸುತ್ತುವರೆಯಲ್ಪಟ್ಟಿದ್ದಾಳೆ. ಅವುಗಳು ಬಹಳ ಶಕ್ತಿಯುತವಾಗಿದ್ದು ಪ್ರಕಾಶವನ್ನು ಹೊಂದಿರುತ್ತವೆ ಅವುಗಳು ಕ್ರಮವಾಗಿ ಅಣಿಮಾ, ಲಘಿಮಾ, ಮಹಿಮಾ, ಈಶಿತ್ವ, ವಶಿತ್ವ, ಪ್ರಾಕಾಮ್ಯ, ಪ್ರಾಪ್ತಿ ಮತ್ತು ಸರ್ವಕಾಮ. ಈ ಎಂಟು ದೇವಿಯರನ್ನು ಪ್ರಭಾ ಎಂದು ಕರೆಯಲಾಗುತ್ತದೆ.  ಪ್ರಭಾವತೀ ಎಂದರೆ ಯಾರು ‘ಪ್ರಭಾ’ಗಳಿಂದ ಸುತ್ತುವರೆಯಲ್ಪಟ್ಟಿದ್ದಾಳೆಯೋ ಅವಳು.

             ಸೌಂದರ್ಯ ಲಹರಿಯು (ಸ್ತೋತ್ರ ೩೦) ಹೇಳುತ್ತದೆ, "ಯಾರು ನಿನ್ನ ಮೇಲೆ ನಿರಂತರ ಧ್ಯಾನವನ್ನು ಕೈಗೊಳ್ಳುತ್ತಾರೆಯೋ ಅವರಿಗೆ ಆರತಿಯ ವಿಷಯದಲ್ಲಿ ಸೋಜಿಗವೆನಿಸುವುದಕ್ಕೇನಿದೆ? ನಿನ್ನ ಪಾದಗಳಿಂದ ಮತ್ತು ಅಣಿಮಾದಿ ದೇವಿಯರ ಪ್ರಭೆಯಿಂದ ಹೊರಹೊಮ್ಮುವ ಕಿರಣಗಳ ಮುಂದೆ....."

Prabhārūpā प्रभारूपा (394)

೩೯೪. ಪ್ರಭಾರೂಪಾ

         ದೇವಿಯಿಂದ ಹೊರಹೊಮ್ಮುವ ಪ್ರಕಾಶಮಾನವಾದ ಬೆಳಕನ್ನು ಕುರಿತು ಹಿಂದಿನ ನಾಮದಲ್ಲಿ ಉಲ್ಲೇಖಿಸಲಾಗಿತ್ತು, ಅದು ಶಕ್ತಿಯುತವಾದದ್ದೆಂದು ಈ ನಾಮದಲ್ಲಿ ಹೇಳಲಾಗಿದೆ. ಆ ದೇವಿಯರು ಅವರ ಹೊಳಪನ್ನು ಈ ಪ್ರಕಾಶದಿಂದ ಪಡೆದಿದ್ದಾರೆ. ದೇವಿಯು ಪರಮೋನ್ನತವಾದ ಬೆಳಕಿನ ಸ್ವರೂಪದಲ್ಲಿರುತ್ತಾಳೆಂದು ಹೇಳಲಾಗುತ್ತದೆ.

              ಛಾಂದೋಗ್ಯ ಉಪನಿಷತ್ತು (೩.೧೪.೨) ಈ ಬೆಳಕನ್ನು ವರ್ಣಿಸುತ್ತದೆ, "ಅವನು ಮನಸ್ಸಿನಿಂದ ನಿಯಂತ್ರಿಸಲ್ಪಡುತ್ತಾನೆ. ಅವನಿಗೆ ಸೂಕ್ಷ್ಮ ಶರೀರವಿದೆ ಮತ್ತು ಅವನು ಪ್ರಕಾಶಿಸುತ್ತಾನೆ (ಭಾರೂಪಃ)

Prasiddhā प्रसिद्धा (395)

೩೯೫.  ಪ್ರಸಿದ್ಧಾ

               ದೇವಿಯು ಎಲ್ಲರಿಗೂ ಸುಪರಿಚಿತಳು ಏಕೆಂದರೆ ಅವಳು ಬಹುತೇಕರಿಂದ ಆರಾಧಿಸಲ್ಪಡುತ್ತಾಳೆ. ಆಕೆಯು ಎಲ್ಲಾ ಜೀವಿಗಳ ಅಂತರಾತ್ಮವಾಗಿದ್ದಾಳೆ. ಯಾವಾಗಲಾದರೂ ಒಬ್ಬರು ’ನಾನು’ ಎಂದು ಹೇಳಿದರೆ ವಾಸ್ತವವಾಗಿ ಅದು ದೇವಿಯೆಂದು ಅರ್ಥ, ಏಕೆಂದರೆ ಆಕೆಯೇ ಆತ್ಮವಾಗಿರುವುದರಿಂದ.

******

           ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 391-395 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Wed, 08/28/2013 - 03:30

ಶ್ರೀಧರರೆ,  ೧೦೪. ಲಲಿತಾ ಸಹಸ್ರನಾಮ ೩೯೧ರಿಂದ ೩೯೫ನೇ ನಾಮಗಳ ವಿವರಣೆ  ಪರಿಷ್ಕರಣೆಗೆ ಸಿದ್ದ.

ಲಲಿತಾ ಸಹಸ್ರನಾಮ ೩೯೧-೩೯೫
____________________________________________
೩೯೧. ನಿತ್ಯಾ-ಷೋಡಶಿಕಾ-ರೂಪಾ
ಷೋಡಶ ತಿಥಿ ದೇವತೆ-ಷೋಡಶೀ ಲಲಿತೆ, ಹದಿನಾರು ತಿಥಿ ಪ್ರತಿನಿಧಿಸಿ
ಪಂಚದಶೀ ಬೀಜಾಕ್ಷರಕೆ ಪಂಚದಶಿ ದೇವತೆ, ಲಲಿತಾ ಸೇರುತ ಷೋಡಶಿ,
ಅಧಿದೇವತೆಗಳಧೀನದಲಿಹಮಂತ್ರ, ಷೋಡಶೀಯೆ ಅತ್ಯಂತ ಶಕ್ತಿಯುತ
ಶ್ರೀಂ ಲಕ್ಷ್ಮೀ ಬೀಜಾಕ್ಷರ, ನಿತ್ಯಾಷೋಡಶಿಕಾರೂಪಾ ಅಂತಿಮ ಮುಕ್ತಿಯತ್ತ!

ಚಂದ್ರಮಾನ 'ಕೃಷ್ಣಪಕ್ಷ ಸೂರ್ಯ- ಶುಕ್ಲ ಪಕ್ಷ ಚಂದ್ರ' ನಿವಸಿತೆ ಲಲಿತೆ
ಪಂಚದಶೀ ದೀಕ್ಷಾ ಸಿದ್ದಿಗೆ ಶುಕ್ಲ, ಷೋಡಶೀ ದೀಕ್ಷಾ ಸಿದ್ದಿಗೆ ಕೃಷ್ಣ ಪಕ್ಷಕೆ
ಅವಲಂಬನೆ ಪಂಚದಶೀಯಾಗಿ ಹಗಲಲಿ, ಷೋಡಶೀಯಾಗಿ ಇರುಳಲಿ
ಯಜ್ಞ ಯಾಗ ಮೀರಿಸಿ, ದೇವಿ ಸಂತುಷ್ಟೆ ಷೋಡಶಿ ಮಂತ್ರೋಚ್ಛಾರದಲಿ!

೩೯೨. ಶ್ರೀಕಂಠಾರ್ಧ-ಶರೀರಿಣೀ 
ಪ್ರಕೃತಿ ಪುರುಷ ಸಂಯುಕ್ತ ಪ್ರಮಾಣ, ವಿಭಜಿಸೆ ಸತಿಪತಿ, ಮಾನವ ಪ್ರಾಣಿ
'ಅ' ಶ್ರೀಕಂಠ ಮೊದಲಕ್ಷರ ಮೊತ್ತದಲರ್ಧ, ದೇವಿ ಶ್ರೀಕಂಠಾರ್ಧ ಶರೀರಿಣಿ
ಗರಳ ಕಂಠವೆ ಸುಂದರ ಶ್ರೀಕಂಠನಾಗಿ ಶಿವ, ದೇವಿಯಲರ್ಧ ಶರೀರವಿರಿಸಿ
ಲಲಿತೆಯರ್ಧ ಶರೀರವನ್ಹೊತ್ತು, ಅರ್ಧನಾರೀಶ್ವರ-ನಾರೀಶ್ವರಿ ಏಕತ್ವದಕಸಿ!

೩೯೩. ಪ್ರಭಾವತೀ
ಅಣಿಮಾಲಘಿಮಾಮಹಿಮಾಈಶಿತ್ವವಶಿತ್ವಪ್ರಾಕಾಮ್ಯಪ್ರಾಪ್ತಿಸರ್ವಕಾಮ
ಅಷ್ಟಸಿದ್ದಿದೇವಿಯರ ಪ್ರಭಾವಳಿ, ಲಲಿತಾ ಸುತ್ತುವರೆದ ಛವಿ ಸಂಭ್ರಮ
ಹೊರಹೊಮ್ಮಿಸುತ ತೀಕ್ಷ್ಣ ಕಿರಣ ಪ್ರಭೆ, ವಿಸ್ತರಿಸಿರೆ ದೇವಿ ಪ್ರಭಾವಲಯ
ಪ್ರಭಾವತೀ ಧ್ಯಾನಾಸಕ್ತಗೆ ಆರತಿ, ನೆನಪಿಸೆ ಸೂರ್ಯನಲಿಟ್ಟ ಹಣತೆಯ!

೩೯೪. ಪ್ರಭಾರೂಪ 
ಅಷ್ಟಸಿದ್ದಿ ದೇವಿ ರೂಪದ ಪ್ರಕಾಶ ಪ್ರಖರ, ಹೊಳಪಾಗಿಸುತವರ
ಪರಮೋನ್ನತ ಬೆಳಕ ರೂಪದಲಿರಿಸಿ, ಲಲಿತೆ ಪ್ರಭಾರೂಪ ಸಾರ
ಬೆಳಕೆ ಶಕ್ತಿಗೆ ಸಕಲ, ಪ್ರಖರತೆಯಾಗಿಸಿ ಶಕ್ತಿಯ ಅಪಾರ ಮೂಲ
ಮನೋನಿಯಂತ್ರಿತ ಸೂಕ್ಷ್ಮಶರೀರದಲೆ ಪ್ರಕಾಶಿಸೀ ಇಂದ್ರ ಜಾಲ!

೩೯೫.  ಪ್ರಸಿದ್ಧಾ
ಅರಿಯದವರಾರು ದೇವಿಯ, ಸುಪರಿಚಿತಳೆಲ್ಲರಿಗೂ ಪ್ರಸಿದ್ಧಾ
ಬಹುತೇಕರಿಂದಾರಾಧನೆ, ಅರಿತೊ ಅರಿಯದೆಯೊ ಸರ್ವದಾ
ಸಕಲ ಜೀವಿಗಳಂತರಾತ್ಮ, ಅವಳಾಗಿರಲು ಅಪರಿಚಿತತೆಯೆಲ್ಲಿ
'ನಾನು' ಎಂದವರೆಲ್ಲ ಲಲಿತಾತ್ಮವನೆ ಓಗೊಡಿಸುವ ಬ್ರಹ್ಮಶೈಲಿ!
 
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು