೧೦೭. ಲಲಿತಾ ಸಹಸ್ರನಾಮ ೪೦೩ರಿಂದ ೪೧೦ನೇ ನಾಮಗಳ ವಿವರಣೆ
ಲಲತಾ ಸಹಸ್ರನಾಮ ೪೦೩-೪೧೦
Mahā-kāmeśa-nayana-kumudahlāda-kaumudī महा-कामेश-नयन-कुमुदह्लाद-कौमुदी (403)
೪೦೩. ಮಹಾ-ಕಾಮೇಶ-ನಯನಾ-ಕುಮುದಹ್ಲಾದ-ಕೌಮುದೀ
ಮಹಾ-ಕಾಮೇಶನೆಂದರೆ ಶಿವ, ನಯನ ಎಂದರೆ ಕಣ್ಣುಗಳು, ಕೌಮುದ ಎಂದರೆ ಕಾರ್ತೀಕ ಮಾಸದ ಚಂದ್ರ (ಸಾಮಾನ್ಯವಾಗಿ ಕಾರ್ತೀಕ ಮಾಸವು ನವೆಂಬರ್ ತಿಂಗಳಿನ ಎರಡನೇ ಪಕ್ಷ ಮತ್ತು ಡಿಸೆಂಬರ್ ತಿಂಗಳಿನ ಮೊದಲನೇ ಪಕ್ಷಗಳನ್ನು ಒಳಗೊಂಡಿರುತ್ತದೆ), ಕುಮುದ ಎಂದರೆ ಕಮಲದ ಹೂವು. ಲಲಿತಾಂಬಿಕೆಯನ್ನು ನೋಡುತ್ತಿರುವಂತೆಯೇ ಶಿವನ ಕಣ್ಣುಗಳು ಚಂದ್ರನಿರುವಾಗ ಅರಳುತ್ತಿರುವ ಕಮಲದ ಹೂವಿನಂತೆ ಅಗಲವಾಗಿ ತೆರೆದುಕೊಳ್ಳುತ್ತವೆ. ದೇವಿಯನ್ನು ಕಾಣುವುದರಿಂದ ಶಿವನಿಗೆ ಉಂಟಾಗುವ ಸಂತೋಷವು ಅವನ ಕಣ್ಣುಗಳಲ್ಲಿ ಪ್ರತಿಫಲಿಸುತ್ತದೆ. ಕಾರ್ತೀಕ ಮಾಸದ ಚಂದ್ರನು ಹೆಚ್ಚು ಪ್ರಕಾಶಮಾನವಾಗಿರುತ್ತಾನೆ ಎಂದು ಹೇಳಲಾಗುತ್ತದೆ.
ಇದಕ್ಕೆ ಇನ್ನೊಂದು ವಿಧವಾದ ವ್ಯಾಖ್ಯಾನವೂ ಇದೆ. ಕುಮುದ ಶಬ್ದವು ಕು+ಮುದ ಶಬ್ದಗಳಿಂದ ಉಂಟಾಗಿದೆ; ಕು ಎಂದರೆ ಕೆಟ್ಟ (ನೀಚ) ಮತ್ತು ಮುದ ಎಂದರೆ ಸಂತೋಷ. ಆದ್ದರಿಂದ ಕುಮುದ ಎಂದರೆ ಪ್ರಾಪಂಚಿಕ ಸಂತೋಷವೆನ್ನುವ ಅರ್ಥವನ್ನು ಕೊಡುತ್ತದೆ. ಪ್ರಾಪಂಚಿಕ ಸುಖಗಳನ್ನು ಯಾವಾಗಲೂ ಕೆಳಮಟ್ಟದವುಗಳೆಂದು ಪರಿಗಣಿಸಲಾಗಿದೆ ಏಕೆಂದರೆ ಅವುಗಳು ಯಾವಾಗಲೂ ದುಃಖ ಮತ್ತು ಯಾತನೆಗಳನ್ನುಂಟು ಮಾಡುತ್ತವೆ. ಲಲಿತಾಂಬಿಕೆಯು ಪರಮೋನ್ನತ ಮಾತೆಯಾಗಿರುವುದರಿಂದ, ಯಾರು ಪ್ರಾಪಂಚಿಕ ಸುಖಗಳಲ್ಲಿ ನಿರತರಾಗಿರುತ್ತಾರೆಯೋ ಅವರ ಮೇಲೆ ದಯೆ ತೋರಿ ಅವರನ್ನು ಅಂತಿಮ ಮುಕ್ತಿಗಾಗಿ ಶಿವನಲ್ಲಿಗೆ ಕರೆದುಕೊಂಡು ಹೋಗುತ್ತಾಳೆ. ಇದರ ಅರ್ಥವೇನೆಂದರೆ ದೇವಿಯು ಅವರನ್ನು ಅಂತಿಮ ಮುಕ್ತಿಗಾಗಿ ಆಧ್ಯಾತ್ಮದ ಮಾರ್ಗವನ್ನು ಹಿಡಿಯುವಂತೆ ಮಾಡುತ್ತಾಳೆ.
ದೇವಿಯ ತಾಯ್ತನದ ಹಾರೈಕೆಯ ಬಗೆಗೆ ಸರಿಯಾಗಿ ತಳಿದುಕೊಂಡ ಯಾರೇ ಆದರೂ ಎಲ್ಲಾ ವಿಧವಾದ ಕಷ್ಟಗಳನ್ನು ದೂರ ಮಾಡಿಕೊಳ್ಳಬಹುದು. ಒಬ್ಬರು ತಮ್ಮ ಕಡೆಯಿಂದ ಅವಶ್ಯವಾಗಿ ಮಾಡಲೇ ಬೇಕಾಗಿರುವ ಕಾರ್ಯವೇನೆಂದರೆ ಅವಳನ್ನು ಸಾಕ್ಷಾತ್ಕರಿಸಿಕೊಳ್ಳುವುದೇ ಆಗಿದೆ.
Bhakta-hārda-tamo-bheda-bhānumad-bhānu-santatiḥ भक्त-हार्द-तमो-भेद-भानुमद्-भानु-सन्ततिः (404)
೪೦೪. ಭಕ್ತ-ಹಾರ್ಧ-ತಮೋ-ಭೇದ-ಭಾನುಮದ್-ಸಂತತಿಃ
ದೇವಿಯು ತನ್ನ ಭಕ್ತರ ಅಜ್ಞಾನದ ಕತ್ತಲೆಯನ್ನು ಹೊಡೆದೋಡಿಸುತ್ತಾಳೆ. ಆಕೆಯನ್ನು ತಾನು ಉದಯಿಸುವಾಗ ಕತ್ತಲೆಯನ್ನು ಹೊಡೆದೋಡಿಸುವ ಸೂರ್ಯನಿಗೆ ಹೋಲಿಸಲಾಗಿದೆ. ದೇವಿಯ ಪರಮ ಮಾತೆಯಾಗಿರುವುದರಿಂದ ಇದನ್ನು ಕರುಣೆಯಿಂದ ಮಾಡುತ್ತಾಳೆ. ಕೇವಲ ಆಕೆಯ ನೆನಪೊಂದೇ ಅಜ್ಞಾನವನ್ನು ಹೋಗಲಾಡಿಸುತ್ತದೆ.
ಶ್ರೀ ಕೃಷ್ಣನು ಈ ವಿಧವಾದ ಕರುಣೆಯನ್ನು ಭಗವದ್ಗೀತೆಯಲ್ಲಿ (೧೦.೧೧), "ಕೇವಲ ಅವರ ಮೇಲಿನ ಮಮತೆಯಿಂದ, ನಾನು, ಅವರ ಹೃದಯದಲ್ಲಿ ವಾಸವಾಗಿರುತ್ತಾ ಅವರ ಅಜ್ಞಾನದ ಕತ್ತಲೆಯನ್ನು ಜ್ಞಾನದ ಪ್ರಜ್ವಲಿಸುವ ಹಣತೆಯಿಂದ ನಾಶಪಡಿಸುತ್ತೇನೆ", ಎಂದು ಹೇಳುತ್ತಾನೆ. ಇಲ್ಲಿ ಕತ್ತಲೆಯೆಂದು ಉಲ್ಲೇಖಿಸಲಾಗಿರುವುದು ಅಜ್ಞಾನದಿಂದ ಉಂಟಾದದ್ದು.
Śivadūtī शिवदूती (405)
೪೦೫. ಶಿವದೂತೀ
ದೇವಿಯು ಶಿವನನ್ನು ಇಬ್ಬರು ರಾಕ್ಷಸರಿಗೆ ತನ್ನ ದೂತನನ್ನಾಗಿರಲು ಕೇಳಿಕೊಂಡಳು. ಸ್ವಯಂ ಶಿವನೇ ಆಕೆಯ ದೂತನಂತೆ ವರ್ತಿಸಿದ್ದರಿಂದ ಅಥವಾ ಆಕೆಯು ಶಿವನನ್ನು ತನ್ನ ದೂತನಾಗುವಂತೆ ಮಾಡಿದ್ದರಿಂದ ಆಕೆಯು ಶಿವದೂತೀ ಎಂದು ಹೆಸರಾಗಿದ್ದಾಳೆ. ಶಿವದೂತಿ ಎನ್ನುವುದು ಶ್ರೀ ಚಕ್ರದಲ್ಲಿರುವ ಹದಿನೈದು ತಿಥಿ ನಿತ್ಯ ದೇವಿಯರಲ್ಲಿ ಒಬ್ಬಳು.
Śivārādhyā शिवाराध्या (406)
೪೦೬. ಶಿವಾರಾಧ್ಯಾ
ಸ್ವಯಂ ಶಿವನಿಂದಲೇ ದೇವಿಯು ಪೂಜಿಸಲ್ಪಡುತ್ತಾಳೆ. ಶಿವನು ಆಕೆಯನ್ನು ಧ್ಯಾನಿಸುವುದರ ಮೂಲಕ ತನ್ನ ಅರ್ಧನಾರೀಶ್ವರ (ಅರ್ಧ ಶಿವ ಮತ್ತು ಅರ್ಧ ಶಕ್ತಿ) ರೂಪವನ್ನು ಹೊಂದಿದ. ದೇವಿಯನ್ನು ಧ್ಯಾನಿಸುವ ಮೂಲಕ ಶಿವನು ಎಲ್ಲಾ ಸಿದ್ಧಿಗಳ ಒಡೆಯನಾದನು. ಈ ಸಿದ್ಧಿಗಳು ಅಥವಾ ಅತಿಮಾನುಷ ಶಕ್ತಿಗಳು ದೇವಿಯಿಂದ ಹೊರಹೊಮ್ಮುತ್ತವೆ; ಅವಳ ಸೂಕ್ಷ್ಮಾತೀಸೂಕ್ಷ್ಮ ರೂಪವಾದ ಕುಂಡಲಿನೀ ಮೂಲಕ. ಈ ನಾಮವು ಈ ಸೂಕ್ಷ್ಮವಾದ ಸಂದೇಶವನ್ನು ಸಾರುತ್ತದೆ.
ಸೌಂದರ್ಯ ಲಹರಿಯು (ಸ್ತೋತ್ರ ೧) ಹೇಳುತ್ತದೆ, "ಶಿವನು ಶಕ್ತಿಯೊಂದಿಗೆ ಐಕ್ಯವಾಗಿದ್ದರೆ ಮಾತ್ರವೇ ರೂಪಾಂತರ ಹೊಂದಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಶಿವನಿಗೆ ನಾಡಿಯನ್ನು ಸಹ ಹೇಗೆ ಮಿಡಿತಗೊಳಿಸುವುದೆಂದು ತಿಳಿಯದು".
Śivamūrtiḥ शिवमूर्तिः (407)
೪೦೭. ಶಿವಮೂರ್ತಿಃ
ದೇವಿಯ ಸ್ವರೂಪವೇ ಶಿವನಾಗಿದೆ. ವಾಸ್ತವವಾಗಿ ಶಿವ ಮತ್ತು ಶಕ್ತಿಯರ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಶಿವ ಎಂದರೆ ಮಂಗಳಕರವಾದುದು. ದೇವಿಯು ಮಂಗಳಕರವಾದುದರ ಮೂರ್ತ ರೂಪವೇ ಆಗಿರುವುದರಿಂದ ಆಕೆಯು ಶಿವಮೂರ್ತಿಃ ಆಗಿದ್ದಾಳೆ.
ಋಗ್ವೇದವು ಹೇಳುತ್ತದೆ (೧೦.೯೨.೯), "ಗೌರವಾದರಗಳಿಂದ, ನಾವಿಂದು ನಿನ್ನ ಸ್ತೋತ್ರವನ್ನು ವೀರರ ಒಡೆಯನಾದ ಶಕ್ತಿಶಾಲಿಯಾದ ರುದ್ರನಿಗೆ ಕಾಣಿಕೆಯಾಗಿ ಕೊಡುತ್ತಿದ್ದೇವೆ. ಕ್ಷಿಪ್ರಗತಿಯ ಮತ್ತು ಪ್ರಚಂಡರಾದ ದೇವತೆಗಳ ಜೊತೆಯಲ್ಲಿ ತನ್ನ ಪ್ರಸಿದ್ಧಿಯನ್ನು ತಾನೇ ಕಂಡುಕೊಳ್ಳುವ ದಯಾಮಯನಾದ (ಶಿವಃ) ಮತ್ತು ಭವ್ಯವಾದವನು (ರುದ್ರನು) ನಮ್ಮನ್ನು ಆಕಾಶದಿಂದ ರಕ್ಷಿಸಲಿ." ಶಿವನು ಸಂಪೂರ್ಣ ಕರುಣೆಯುಳ್ಳವನಾಗಿದ್ದು ಮತ್ತು ಸಂತೋಷದಿಂದೊಡಗೂಡಿದವನಾಗಿದ್ದು ಅವನನ್ನು ಪರಮ ರಕ್ಷಕನೆಂದು ಭಾವಿಸಲಾಗಿದೆ. ಯಾವಾಗ ದೇವಿಯು ಸ್ವಯಂ ಶಿವನ ಸ್ವರೂಪದಲ್ಲಿಯೇ ಇರುವಳೆಂದು ಭಾವಿಸುತ್ತೇವೆಯೋ ಅದು ಅವಳಿಗೆ ಕೊಡುವ ಅತ್ಯಂತ ಉನ್ನತವಾದ ಗೌರವವೆಂದು ತಿಳಿಯಲಾಗುತ್ತದೆ. ಇದನ್ನು ನಿರ್ಗುಣ ಬ್ರಹ್ಮವೆಂದೂ ಎಂದೂ ಅರ್ಥೈಸಬಹುದು. ಈ ಸಹಸ್ರನಾಮವು ’ಶ್ರೀ ಶಿವಾ’ (ನಾಮ ೯೯೮), ಶಿವ-ಶಕ್ತಿ ಐಕ್ಯ ರೂಪಿಣೀ (ನಾಮ ೯೯೯) ಮತ್ತು ಲಲಿತಾಂಬಿಕಾ (ನಾಮ ೧೦೦೦) ಎನ್ನುವುದರೊಂದಿಗೆ ಕೊನೆಗೊಳ್ಳುತ್ತದೆ.
ಶಿವ ಎಂದರೆ ಮುಕ್ತಿ ಮತ್ತು ಮೂರ್ತಿಃ ಎಂದರೆ ರೂಪ. ಅಂತಿಮ ಮುಕ್ತಿಯು ಕೇವಲ ಆತ್ಮಸಾಕ್ಷಾತ್ಕಾರದಿಂದ ಮಾತ್ರವೇ ಲಭ್ಯವಾಗುತ್ತದೆ ಮತ್ತದನ್ನು ಜ್ಞಾನ ಅಥವಾ ವಿದ್ಯೆಯ ಮೂಲಕವಷ್ಟೇ ಹೊಂದಲು ಸಾಧ್ಯವಿದೆ. ಆದ್ದರಿಂದ ದೇವಿಯ ಪೂಜೆಯನ್ನು ಶ್ರೀ ವಿದ್ಯಾ ಅಥವಾ ಪರಮ ಜ್ಞಾನ ಎಂದು ಹೆಸರಿಸಲಾಗಿದೆ.
Śivaṁkarī शिवंकरी (408)
೪೦೮. ಶಿವಂಕರೀ
ದೇವಿಯು ಸಂತೋಷವನ್ನು ಹರಡುತ್ತಾಳೆ. ಶಿವ ಎಂದರೆ ಮಂಗಳಕರವೆಂದು ಮತ್ತು ಕರೀ ಎಂದು ಕೊಡುವವಳೆಂದು ಅರ್ಥ. ದೇವಿಯು ಅವಳ ಭಕ್ತರ ಅಜ್ಞಾನ ಅಥವಾ ಅವಿದ್ಯೆಯನ್ನು ಹೊಡೆದೋಡಿಸುವುದರ ಮೂಲಕ ಅವರಿಗೆ ಮಂಗಳವನ್ನುಂಟು ಮಾಡುತ್ತಾಳೆ. ಯಾವಾಗ ಅವಿದ್ಯೆಯು ಹೊಡೆದೋಡಿಸಲ್ಪಡುತ್ತದೆಯೋ ಆಗ ಜ್ಞಾನವು ಹೊಂದಲ್ಪಟ್ಟು ಅದು ಆತ್ಮ ಸಾಕ್ಷಾತ್ಕಾರಕ್ಕೆ ದಾರಿ ಮಾಡಿಕೊಡುತ್ತದೆ. ದೇವಿಯು ಸರ್ವ ಮಂಗಳ ಮಾಂಗಲ್ಯೇ (ಎಲ್ಲಾ ವಿಧವಾದ ಸಂತೋಷಗಳನ್ನು ಕರುಣಿಸುವಾಕೆ) ಎನ್ನುತ್ತದೆ ದುರ್ಗಾ ಸಪ್ತಶತೀ.
Śivapriyā शिवप्रिया (409)
೪೦೯. ಶಿವಪ್ರಿಯಾ
ದೇವಿಯು ಶಿವನಿಗೆ ಪ್ರಿಯೆಯಾಗಿದ್ದಾಳೆ. ಶಿವನು ಅವಳಿಂದ ಪ್ರೀತಿಸಲ್ಪಡುತ್ತಾನೆ. ಶಿವನು ಅವಳಿಗೆ ಆಪ್ಯಾಯಮಾನನಾಗಿದ್ದಾನೆ. ಅವರ ಪ್ರೇಮವು ಪರಸ್ಪರ ಪೂರಕವಾಗಿದೆ, ಹಾಗಿಲ್ಲದಿದ್ದರೆ ಶಿವನು ಅವಳಿಗೆ ತನ್ನ ದೇಹದ ಅರ್ಧ ಭಾಗವನ್ನು ಕೊಡುತ್ತಿರಲಿಲ್ಲ.
Śivaparā शिवपरा (410)
೪೧೦. ಶಿವಪರಾ
ದೇವಿಯನ್ನು ಶಿವನೊಂದಿಗೆ ಹೋಲಿಸುವ ವಾಕ್-ದೇವಿಯರು ಅವಳು ಶಿವನಿಗೆ ಅತೀತಳಾಗಿರುವವಳು ಎಂದು ಹೇಳಲು ಉತ್ಸುಕರಾಗಿದ್ದಾರೆ. ಪರಾ ಎನ್ನುವುದನ್ನು ಈ ವಿಧವಾಗಿ ವಿವರಿಸಬಹುದು. ಪರಾ ಎನ್ನುವುದು ಅತ್ಯುನ್ನತವಾದದ್ದು ಅಥವಾ ಪರಮೋನ್ನತವಾದದ್ದು ಅಪರಾ ಎಂದು ಕರೆಯಲ್ಪಡುವ ಇಲ್ಲಿರುವ ಈಗಿನ ತೋರಿಕೆಯ ಸತ್ಯಕ್ಕೆ ವಿರುದ್ಧಾತ್ಮಕವಾದದ್ದು. ಬ್ರಹ್ಮವನ್ನು ಎರಡು ವಿಧವಾಗಿ ಗ್ರಹಿಸಬಹುದು. ಮೊದಲನೆಯದು ಪರಾ ಬ್ರಹ್ಮ, ಅದು ಪರಮೋನ್ನತವಾದದ್ದು ಮತ್ತೊಂದು ಅಪರಾ ಬ್ರಹ್ಮ, ಅದು ಅವೆರಡರಲ್ಲಿ ಕೆಳಸ್ತರದ್ದು.
ಮೊದಲನೆಯದು ರೂಪ ಲಕ್ಷಣರಹಿತವಾಗಿರುವುದರಿಂದ ಗ್ರಹಿಕೆಗೆ ನಿಲುಕಲಾರದ್ದಾಗಿದೆ. ದೇವಿಯು ಶಿವನ ಹಂತವನ್ನು ಅಧಿಗಮಿಸುವುದರಿಂದ, ಆಕೆಯನ್ನು ಪರಬ್ರಹ್ಮವೆಂದು ಕರೆಯಲಾಗಿದೆ. ಶಿವನು ಅವಳಿಲ್ಲದೆ ಜಡವಾಗುತ್ತಾನೆ. ಆದ್ದರಿಂದ ಅವಳನ್ನು ಪರಾ ಅಂದರೆ ಪರಮೋನ್ನತಳು ಎನ್ನಲಾಗುತ್ತದೆ. ಅವಳನ್ನು ಅರಿಯುವುದು ಪರಾ ವಿದ್ಯೆ ಅಥವಾ ಪರಮೋನ್ನತ ಜ್ಞಾನ. ಇದರ ಸೂಕ್ತವಾದ ವ್ಯಾಖ್ಯಾನವು ಅವಳು ಪರಮೋನ್ನತವಾದ ಅಥವಾ ಪರಶಿವನನ್ನು ತನ್ನ ಭಕ್ತರಿಗೆ ವ್ಯಕ್ತವಾಗುವಂತೆ ಮಾಡುತ್ತಾಳೆ. ಪರಮಶಿವನನ್ನು ಹೀಗೆ ವಿವರಿಸಬಹುದು, "ಯಾವ ಪರಿಪೂರ್ಣವಾದ ವಸ್ತುವು ಎಲ್ಲಾ ತೋರಿಕೆಯ ವಸ್ತುಗಳಿಗೆ ಕಾರಣವಾಗಿದೆಯೋ ಅದು". ಈ ವಿವರಣೆಯು ಆಕೆಯ ‘ಪ್ರಕಾಶ-ವಿಮರ್ಶ ಮಹಾ-ಮಾಯಾ ಸ್ವರೂಪಿಣೀ’ ರೂಪಕ್ಕೆ ಅನ್ವಯಿಸುತ್ತದೆ.
೪೦೫ರಿಂದ ೪೧೦ನೇ ನಾಮಗಳು ಆಕೆಯ ಗುಣಗಳನ್ನು ಪ್ರತ್ಯೇಕವಾಗಿ ಶಿವನೊಂದಿಗೆ ಹೋಲಿಸಿ ವಿವರಿಸಲ್ಪಟ್ಟಿವೆ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 403-410 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೧೦೭. ಲಲಿತಾ ಸಹಸ್ರನಾಮ ೪೦೩ರಿಂದ ೪೧೦ನೇ ನಾಮಗಳ ವಿವರಣೆ
ಶ್ರಿಧರರೆ ೧೦೭. ಶ್ರೀ ಲಲಿತಾ ಸಹಸ್ರನಾಮದ ವಿವರಣೆಯ ಕಾವ್ಯಸಾರ ಪರಿಷ್ಕರಣೆಗೆ ಸಿದ್ದ.
ಲಲತಾ ಸಹಸ್ರನಾಮ ೪೦೩-೪೧೦
_______________________________________
೪೦೩. ಮಹಾ-ಕಾಮೇಶ-ನಯನಾ-ಕುಮುದಾಹ್ಲಾದ-ಕೌಮುದೀ
ತ್ರಿನೇತ್ರನಾಗಿ ಕಮಲ ನೇತ್ರ, ದೇವಿ ಕಾಣುತಲೆ ಕಾರ್ತೀಕ ಚಂದ್ರ
ಮುದದ ಬೆನ್ನಟ್ಟಿಸೆ ಪ್ರಾಪಂಚಿಕಸುಖ, ದುಃಖ ಯಾತನೆಗೆ ಲಾಂದ್ರ
ಸಾಕ್ಷಾತ್ಕರಿಸಿದವರ ಆಧ್ಯಾತ್ಮದೆ ನಡೆಸಿ, ಅಂತಿಮ ಮುಕ್ತಿಗೆ ಭರದಿ
ಒಯ್ಯುವ ಮಹಾ ಕಾಮೇಶ ನಯನಾ ಕುಮುದಾಹ್ಲಾದ ಕೌಮುದೀ!
೪೦೪. ಭಕ್ತ-ಹಾರ್ಧ-ತಮೋ-ಭೇದ-ಭಾನುಮದ್-ಸಂತತಿಃ
ಅಜ್ಞಾನದ ಕತ್ತಲೆಯನಟ್ಟಲು, ಪ್ರಜ್ವಲಿಸಿ ಹೃದಯದೆ ಜ್ಞಾನದ ಹಣತೆ
ಕರುಣೆ ಮಮತೆಯ ಪರಮ ಮಾತೆ, ಭಕ್ತರಲುದಯಿಸುತ ರವಿಯಂತೆ
ಹೊಡೆದೋಡಿಸಿ ಅವಿದ್ಯಾತಮ, ಹೊಮ್ಮಿಸುತ ಮನದೆ ಕಿರಣದ ಕಾಂತಿ
ಬೆಳಕಾಗೊ ಲಲಿತೆ ಭಕ್ತ ಹಾರ್ಧ ತಮೋ ಭೇದ ಭಾನುಮದ್ ಸಂತತಿಃ!
೪೦೫. ಶಿವದೂತೀ
ಶ್ರೀ ಚಕ್ರ ನಿಲಯ ನಿವಸಿತ, ಪಂಚದಶ ತಿಥಿ ನಿತ್ಯ ದೇವತೆ
ಶಿವದೂತೀ ರೂಪದಲಿಹ ತಿಥಿನಿತ್ಯ ದೇವತೆಯಾಗಿ ಲಲಿತೆ
ರಾಕ್ಷಸಗಣ ಮರ್ದನ ಮುನ್ನ, ತೋರಿಸುತಲಿ ಕರುಣೆ ಪ್ರೀತಿ
ಶಿವನನೆ ದೂತನಾಗಿಸಿದ ರೀತಿ, ಹೆಸರೆ ದೇವಿಗೆ ಶಿವದೂತಿ!
೪೦೬. ಶಿವಾರಾಧ್ಯಾ
ಪ್ರಕೃತಿಯಿಲ್ಲದೆ ಜಡ ಪುರುಷ, ಚಲನ ರೂಪಾಂತರವಿಲ್ಲದ ನೀರಸ
ಐಕ್ಯವಾಗುತ ಪ್ರಕೃತಿ ಶಕ್ತಿ, ಅರ್ಧನಾರೀಶ್ವರ ರೂಪದಲಿ ಅವತರಿಸ
ಸಿದ್ದಿ ಅತಿಮಾನುಷ ಶಕ್ತಿಗಳ್ಹೊಮ್ಮಲು, ಸೂಕ್ಷ್ಮಾತಿಸೂಕ್ಷ್ಮ ಕುಂಡಲಿನಿ
ಧ್ಯಾನದಿಂದಾರಾಧಿಸಿ ಸಿದ್ಧಿಗೊಡೆಯಶಿವ, ಶಿವಾರಾಧ್ಯಳೀ ಸಚೇತನಿ!
೪೦೭. ಶಿವಮೂರ್ತಿಃ
ಶಿವವೆ ಮಂಗಳಕರ ರೂಪ, ಶಕ್ತಿಯದರ ಮೂರ್ತರೂಪ ಶಿವಮೂರ್ತಿಃ
ಶಿವವೆಂದರೆ ಮುಕ್ತಿ ಮೂರ್ತಿಃಯೆ ರೂಪ, ಆತ್ಮಸಾಕ್ಷಾತ್ಕಾರಕೆ ಪ್ರಸ್ತುತಿ
ಶ್ರೀವಿದ್ಯಾ ಪರಮಜ್ಞಾನ, ಗಳಿಸುವ ಹಾದಿ ಧ್ಯಾನ ಶಿವಸ್ವರೂಪಿ ಲಲಿತೆ
ನಿರ್ಗುಣ ಬ್ರಹ್ಮವೆ ತಾನಾಗಿ ದೇವಿ, ಶಿವಶಕ್ತಿ ಏಕಚಿತ್ತ ಏಕತ್ವದನೇಕತೆ!
೪೦೮. ಶಿವಂಕರೀ
ಮಂಗಳಕರ ಶಿವ, ವರ ಕರುಣಿಸುವ, ದೇವಿ ಶಿವಂಕರೀ
ಹೊಡೆದೋಡಿಸುತ ಅಜ್ಞಾನ, ಭಕ್ತರಿಗೆ ಸನ್ಮಂಗಳ ಸಿರಿ
ಅವಿದ್ಯೆಯ ನಿರ್ಗಮನಕೆ ವಿದ್ಯೆ ಆಗಮನ ಸಾಕ್ಷಾತ್ಕಾರ
ಸರ್ವ ಮಂಗಳ ಮಾಂಗಲ್ಯೇಯಾಗಿ ಸಂತೋಷ ಸಾಗರ!
೪೦೯. ಶಿವಪ್ರಿಯಾ
ಪ್ರಿಯರಲ್ಲದವರಿಗೆ ಕೊಡುವನೆ ಅರ್ಧ ಶರೀರವನೆ ಶಿವ
ಅರ್ಧನಾರೀಶ್ವರತೆಯಲೆ ಪರಸ್ಪರ ಪೂರಕ ಪ್ರೇಮಭಾವ
ದೇವಿಯಿಂದ ಪ್ರೀತಿಸಲ್ಪಡುತ, ಅಪ್ಯಾಯತೆಯ ಪ್ರಣಯ
ಶಿವ ಹೃದಯ ಸಿಂಹಾಸನವೇರಿ, ಲಲಿತೆಯೆ ಶಿವಪ್ರಿಯಾ!
೪೧೦. ಶಿವಪರಾ
ಪರಾ ಬ್ರಹ್ಮ ರೂಪ ಲಕ್ಷಣ ರಹಿತ, ಗ್ರಹಿಕೆಗೆ ನಿಲುಕದ ಸ್ವರೂಪ
ಅಧಿಗಮಿಸುತ ಶಿವನನೆ, ಪರಮೋನ್ನತಳು ಲಲಿತೆ ಪರಾ ರೂಪ
ತೋರಿಕೆ ವಸ್ತುವಿಗೆಲ್ಲ ಕಾರಣ, ಪರಿಪೂರ್ಣ ಪರಮಶಿವ ಸಾಕಾರ
ಪರಮೋನ್ನತ ಪರಶಿವನ ಭಕ್ತಗೆ, ವ್ಯಕ್ತವಾಗಿಸಿ ಲಲಿತೆ ಶಿವಪರಾ!
ಧನ್ಯವಾದಗಳೊಂದಿಗೆ
- ನಾಗೇಶ ಮೈಸೂರು
In reply to ಉ: ೧೦೭. ಲಲಿತಾ ಸಹಸ್ರನಾಮ ೪೦೩ರಿಂದ ೪೧೦ನೇ ನಾಮಗಳ ವಿವರಣೆ by nageshamysore
ಉ: ೧೦೭. ಲಲಿತಾ ಸಹಸ್ರನಾಮ ೪೦೩ರಿಂದ ೪೧೦ನೇ ನಾಮಗಳ ವಿವರಣೆ
ನಾಗೇಶರೆ,
ಈ ಸಾರಿಯೂ ಅತ್ಯುತ್ತಮವಾದ ಕವನಗಳನ್ನೇ ಹೊಸದಿದ್ದೀರಿ. ಶಿವ ಸೀರೀಸ್ನ (೪೦೫-೪೧೦) ವಿವರಣೆಗಳು ಸ್ವಲ್ಪ ಕ್ಲಿಷ್ಟವೆನಸಿದ್ದವು. ಇವೆಲ್ಲವನ್ನೂ ಅಧಿಗಮಿಸಿ ಬಹಳ ಸುಂದರವಾದ ಕವನಗಳನ್ನ ಕೊಟ್ಟಿದ್ದೀರ; ಅಭಿನಂದನೆಗಳು ನಿಮಗೆ. ಹುಡುಕಲೇ ಬೇಕೆಂದು ಹುಡುಕಿದ್ದರಿಂದ ಎರಡು ಮುದ್ರಾರಾಕ್ಷಸನ ಬಾಧಿತರು ಸಿಕ್ಕಿದ್ದಾರೆ; ಅವರನ್ನು ಸೆರೆಹಿಡಿದಿದ್ದೇನೆ; ಸೂಕ್ತ ಕ್ರಮ ಕೈಗೊಳ್ಳಿ :))
೪೦೭. ಶಿವಮೂರ್ತಿಃ
:
:
ಶಿವವೆಂದರೆ ಮುಕ್ತಿ ಮೂರ್ತಿಃಯೆ ರೂಪ,
ಮೂರ್ತಿಃಯೆ=ಮೂರ್ತಿಯೇ
೪೦೮. ಶಿವಂಕರೀ
ಸರ್ವ ಮಂಗಳ ಮಾಂಗಲ್ಯೇಯಾಗಿ ಸಂತೋಷ ಸಾಗರ!
ಮಾಂಗಲ್ಯೇಯಾಗಿ=ಮಾಂಗಲ್ಯೆಯಾಗಿ
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to ಉ: ೧೦೭. ಲಲಿತಾ ಸಹಸ್ರನಾಮ ೪೦೩ರಿಂದ ೪೧೦ನೇ ನಾಮಗಳ ವಿವರಣೆ by makara
ಉ: ೧೦೭. ಲಲಿತಾ ಸಹಸ್ರನಾಮ ೪೦೩ರಿಂದ ೪೧೦ನೇ ನಾಮಗಳ ವಿವರಣೆ
ಶ್ರೀಧರರೆ, ನೀವು ಕಟ್ಟಿ ಹಿಡಿದಿದ್ದ ಮುದ್ರಾರಾಕ್ಷಸನನ್ನು ತರಿದು ಮುಕ್ತಿಗಟ್ಟಿದ ನಂತರದ ರೂಪ ಕೆಳಗಿದೆ. ಈ ತಿದ್ದುಪಡಿಯೊಂದಿಗೆ ಈ ಕಂತನ್ನು ಅಂತಿಮಗೊಳಿಸಿದ್ದೇನೆ.
೪೦೭. ಶಿವಮೂರ್ತಿಃ
ಶಿವವೆ ಮಂಗಳಕರ ರೂಪ, ಶಕ್ತಿಯದರ ಮೂರ್ತರೂಪ ಶಿವಮೂರ್ತಿಃ
ಶಿವವೆಂದರೆ ಮುಕ್ತಿ ಮೂರ್ತಿಯೇ ರೂಪ, ಆತ್ಮಸಾಕ್ಷಾತ್ಕಾರಕೆ ಪ್ರಸ್ತುತಿ
ಶ್ರೀವಿದ್ಯಾ ಪರಮಜ್ಞಾನ, ಗಳಿಸುವ ಹಾದಿ ಧ್ಯಾನ ಶಿವಸ್ವರೂಪಿ ಲಲಿತೆ
ನಿರ್ಗುಣ ಬ್ರಹ್ಮವೆ ತಾನಾಗಿ ದೇವಿ, ಶಿವಶಕ್ತಿ ಏಕಚಿತ್ತ ಏಕತ್ವದನೇಕತೆ!
೪೦೮. ಶಿವಂಕರೀ
ಮಂಗಳಕರ ಶಿವ, ವರ ಕರುಣಿಸುವ, ದೇವಿ ಶಿವಂಕರೀ
ಹೊಡೆದೋಡಿಸುತ ಅಜ್ಞಾನ, ಭಕ್ತರಿಗೆ ಸನ್ಮಂಗಳ ಸಿರಿ
ಅವಿದ್ಯೆಯ ನಿರ್ಗಮನಕೆ ವಿದ್ಯೆ ಆಗಮನ ಸಾಕ್ಷಾತ್ಕಾರ
ಸರ್ವ ಮಂಗಳ ಮಾಂಗಲ್ಯೆಯಾಗಿ ಸಂತೋಷ ಸಾಗರ!
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
In reply to ಉ: ೧೦೭. ಲಲಿತಾ ಸಹಸ್ರನಾಮ ೪೦೩ರಿಂದ ೪೧೦ನೇ ನಾಮಗಳ ವಿವರಣೆ by nageshamysore
ಉ: ೧೦೭. ಲಲಿತಾ ಸಹಸ್ರನಾಮ ೪೦೩ರಿಂದ ೪೧೦ನೇ ನಾಮಗಳ ವಿವರಣೆ
ನಾಗೇಶರೆ,
ಕೂಡಲೇ ಕ್ರಮ ಕೈಗೊಂಡಿದ್ದಕ್ಕೆ ಧನ್ಯವಾದಗಳು. ಈ ಕಂತನ್ನು ಅಂತಿಮಗೊಳಿಸಿ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ