೧೦೮. ಲಲಿತಾ ಸಹಸ್ರನಾಮ ೪೧೧ರಿಂದ ೪೧೫ನೇ ನಾಮಗಳ ವಿವರಣೆ

೧೦೮. ಲಲಿತಾ ಸಹಸ್ರನಾಮ ೪೧೧ರಿಂದ ೪೧೫ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೪೧೧-೪೧೫

Śiṣṭeṣṭā शिष्टेष्टा (411)

೪೧೧. ಶಿಷ್ಠೇಷ್ಠಾ

         ಶಿಷ್ಠರೆಂದರೆ ಯಾರು ಶಾಸ್ತ್ರವಿಧಿತ ಧರ್ಮಮಾರ್ಗವನ್ನು ಅನುಸರಿಸುತ್ತಾರೆಯೋ ಅವರು. ಶಿಷ್ಠರೆಂದರೆ ಯಾರು ತಮ್ಮ ಇಂದ್ರಿಯಗಳನ್ನು ನಿಗ್ರಹದಲ್ಲಿ ಇಟ್ಟುಕೊಂಡಿರುತ್ತಾರೆಯೋ ಮತ್ತು ವೇದಗಳನ್ನು ಅರಿತಿರುತ್ತಾರೋ ಅವರು. ಅವರ ಕಾರ್ಯಗಳು ವೇದಗಳನ್ನು ಆದರಿಸಿದ ಶಾಸ್ತ್ರವಿಹಿತ ಕರ್ಮಗಳನ್ನು ಅವಲಂಬಿಸಿರುತ್ತವೆ. ದೇವಿಯು ಈ ಶಿಷ್ಠರನ್ನು ಇಷ್ಟಪಡುತ್ತಾಳೆ. ವಿಷ್ಣುವು ತನ್ನ ಧರ್ಮಗುಣಕ್ಕೆ ಹೆಸರಾಗಿದ್ದಾನೆ. ಒಬ್ಬನು ತನ್ನ ಪಂಗಡಕ್ಕನುಗುಣವಾಗಿ ಶಾಸ್ತ್ರವಿಹಿತವಾಗಿ ದೇವರನ್ನು ಪೂಜಿಸಬೇಕು; ಕೇವಲ ಹೂವು ಮುಂತಾದವುಗಳಿಂದ ಪೂಜಿಸುವುದಲ್ಲ ಎಂದು ಹೇಳುತ್ತಾರೆ. ವಿಷ್ಣು ಸಹಸ್ರನಾಮದ ೩೧೦ನೇ ನಾಮವೂ ಸಹ ಶಿಷ್ಠೇಷ್ಠಃ ಮತ್ತು ಅಲ್ಲಿ ಕೊಟ್ಟಿರುವ ವ್ಯಾಖ್ಯಾನವೇನೆಂದರೆ ಅವನು (ವಿಷ್ಣುವು) ಜ್ಞಾನಿಗಳಾದ ಮನುಜರನ್ನು ಇಷ್ಟಪಡುತ್ತಾನೆ (ವಿಷ್ಣುವಿಗೆ ಜ್ಞಾನಿಗಳು ಪ್ರಿಯರು).

        ಸ್ವಯಂ ಶ್ರೀಕೃಷ್ಣನೇ ಭಗವದ್ಗೀತೆಯಲ್ಲಿ (೭.೧೭), "ಅವರಲ್ಲಿ ಪ್ರಮುಖರಾದವರು ಜ್ಞಾನಿಗಳು; ಅವರು ನಿರಂತರ ಮತ್ತು ಏಕಾಗ್ರ ಭಕ್ತಿಯಿಂದ ಕೂಡಿದವರಾಗಿದ್ದು ನಾನು ಅವರಿಗೆ ಅತ್ಯಂತ ಪ್ರಿಯನು ಮತ್ತು ಅವರು ನನಗೂ ಸಹ ಅತ್ಯಂತ ಪ್ರಿಯರು" ಎಂದು ಹೇಳಿದ್ದಾನೆ. ಶ್ರೀ ಕೃಷ್ಣನು ಇಲ್ಲಿಗೆ ನಿಲ್ಲಿಸದೆ, ಮುಂದುವರೆಯುತ್ತಾ ಹೇಳುತ್ತಾನೆ, "ಅಷ್ಟೊಂದು ಜ್ಞಾನವನ್ನು ಪಡೆದ ಮನುಷ್ಯನು ಸಿಗುವುದು ಬಹಳ ಕಠಿಣವಾದದ್ದು ಮತ್ತು ಅಂತಹ ಸ್ಥಿತಿಯು ಹಲವಾರು ಜನ್ಮಗಳ ನಂತರ ಹೊಂದಲ್ಪಡುತ್ತದೆ. (ಗೀತೆ, ೭.೧೯)

Śiṣṭapūjitā शिष्टपूजिता (412)

೪೧೨. ಶಿಷ್ಠಪೂಜಿತಾ

       ದೇವಿಯು ಹಿಂದಿನ ನಾಮದಲ್ಲಿ ಉಲ್ಲೇಖಿಸಲ್ಪಟ್ಟ ಶಿಷ್ಠರಿಂದ ಪೂಜಿಸಲ್ಪಡುತ್ತಾಳೆ. ಜ್ಞಾನಿಯಾದವನು ಯಾರು ಪೂಜೆಗೊಳ್ಳಲು ಅರ್ಹರಲ್ಲವೋ ಅವರನ್ನು ಪೂಜಿಸುವುದಿಲ್ಲ, ಅವನು ಕೇವಲ ಶ್ರೇಷ್ಠನಾದ ಪರಬ್ರಹ್ಮವನ್ನು ಆರಾಧಿಸುತ್ತಾನೆ. ಈ ನಾಮವು ಹಿಂದಿನ ನಾಮದ ಮುಂದುವರಿಕೆಯಾಗಿದ್ದು ಇದು ದೇವಿಯು ಪರಮೋನ್ನತ ಸ್ವರೂಪವನ್ನು ದೃಢ ಪಡಿಸುತ್ತದೆ. 

Aprameyā अप्रमेया (413)

೪೧೩. ಅಪ್ರಮೇಯಾ

         ದೇವಿಯನ್ನು ಅಳೆಯಲಾಗುವುದಿಲ್ಲ ಅಥವಾ ಪ್ರಮಾಣಬದ್ಧಗೊಳಿಸಲಾಗುವುದಿಲ್ಲ. ಕೇವಲ ಪರಬ್ರಹ್ಮವೊಂದನ್ನೇ ಅಳೆಯಲಾಗದು. ದೇವಿಯು ಅಪ್ರಮೇಯಳಾಗಿರುವುದರಿಂದ ಅವಳು ಜ್ಞಾನಿಗಳು ಮತ್ತು ಶಿಷ್ಠೇಷ್ಠರಿಂದ ಮಾತ್ರವೇ ಪೂಜಿಸಲ್ಪಡುತ್ತಾಳೆ.

       ವಿಷ್ಣು ಸಹಸ್ರನಾಮದ ೪೬ನೇ ನಾಮವೂ ಸಹ ಅಪ್ರಮೇಯಃ. ಅವನನ್ನು ಇಂದ್ರಿಯಗಳಿಂದ ತಿಳಿಯಲಾಗದು ಏಕೆಂದರೆ ಅವನು ಶಬ್ದ ಮೊದಲಾದವುಗಳನ್ನು ಹೊಂದಿಲ್ಲದವನಾಗಿದ್ದಾನೆ. ಅವನನ್ನು ಕಲ್ಪಿಸಿಕೊಳ್ಳಲಾಗದು, ಏಕೆಂದರೆ ಅವನು ಕಲ್ಪನೆಗೆ ಅತೀತನಾಗಿದ್ದಾನೆ. ಅವನನ್ನು ಉಪಮೆಗಳ ಮೂಲಕ ತಿಳಿಯಲಾಗದು ಏಕೆಂದರೆ ಅವನಿಗೆ ಹೋಲಿಕೆ ಇರುವುದು ಯಾವುದೂ ಇಲ್ಲ (ಇದು ಸರಳ ತರ್ಕದ ಮೇಲೆ ಆಧಾರಿತವಾಗಿದೆ, ಅದೇನೆಂದರೆ ಒಂದು ಇಲಿ ಮತ್ತು  ಸಿಂಹ ಎರಡಕ್ಕೂ ನಾಲ್ಕು ಕಾಲುಗಳು, ಬಾಲ ಮೊದಲಾದವುಗಳಿದ್ದರೂ ಸಹ ಅವೆರಡನ್ನೂ ಹೋಲಿಸಲಾಗದು). ಅವನನ್ನು ಸಕಾರಾತ್ಮಕ ಹೇಳಿಕೆಗಳಿಂದ ಅಥವಾ ನಕಾರಾತ್ಮಕ ಹೇಳಿಕೆಗಳಿಂದ ಅರಿಯಲಾಗುವುದಿಲ್ಲ ಏಕೆಂದರೆ ಅಂತಹ ಸಕಾರಾತ್ಮಕ ಅಥವಾ ನಕಾರಾತ್ಮಕ ಹೇಳಿಕೆಗಳಿಗೆ ನಮ್ಮ ಬಳಿ ಯಾವುದೇ ಆಧಾರಗಳಿಲ್ಲ. ಆದರೆ ವೇದಗಳು ಮತ್ತು ಉಪನಿಷತ್ತುಗಳು ಅವನನ್ನು "ಅದು" ಎಂದು ಅನಾವರಣಗೊಳಿಸಲು ಪ್ರಯತ್ನಿಸುತ್ತವೆ ಮತ್ತವು ಹೇಳುವುದೇನೆಂದರೆ ಅವನು ಸ್ವಯಂಪ್ರಕಾಶಕನಾದ ಜ್ಯೋತಿಸ್ವರೂಪನಾಗಿದ್ದು, ಸೃಷ್ಟಿಯ ಚಟುವಟಿಕೆಗಳನ್ನು ಅವನು ನೋಡುತ್ತಿರುತ್ತಾನೆ ಎಂದು. ವೇದೋಪನಿಷತ್ತುಗಳಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕವಾದ ಹೇಳಿಕೆಗಳಿದ್ದರೂ ಸಹ,  ಇಂತಹ ಸಕಾರಾತ್ಮಕ ಮತ್ತು ನಕಾರಾತ್ಮಕವಾದ ಹೇಳಿಕೆಗಳ ಮೂಲಕವಷ್ಟೇ ಅವನ ಬಗ್ಗೆ ತಿಳುವಳಿಕೆಯು ಉಂಟಾಗುತ್ತದೆ.

       ಕೇನ ಉಪನಿಷತ್ತು (೧.೬) ಈ ಅಂಶವನ್ನು ವಿಶದ ಪಡಿಸುತ್ತದೆ, "ಯಾವುದು ಮನೋಗ್ರಾಹ್ಯವಲ್ಲದೋ ಮತ್ತು ಯಾವುದನ್ನು ಯೋಗಿಗಳು ಯಾವುದರಿಂದ ಈ ಮನಸ್ಸು ಕ್ರಿಯಾಶೀಲವಾಗಿದೆ ಎಂದು ಹೇಳುತ್ತಾರೆಯೋ ಅದನ್ನೇ ಬ್ರಹ್ಮವೆಂದು ತಿಳಿಯಿರಿ. ಬ್ರಹ್ಮವು ಜನರಿಂದ ಪೂಜಿಸಲ್ಪಡುವ ಈ ಇಂದ್ರಿಯಗ್ರಾಹ್ಯ ಪ್ರಪಂಚವಲ್ಲ". ಈ ಉಪನಿಷತ್ತು ಮುಂದುವರೆಯುತ್ತಾ ಹೇಳುತ್ತದೆ, "ನೀನು (ಗುರುವು ತನ್ನ ಶಿಷ್ಯನನ್ನು ಉದ್ದೇಶಿಸಿ ಹೇಳುತ್ತಿದ್ದಾನೆ) ’ನನಗೆ ಬ್ರಹ್ಮದ ಬಗ್ಗೆ ಚೆನ್ನಾಗಿ ತಿಳಿದಿದೆ’ ಎಂದು ನೀನು ಆಲೋಚಿಸಿದರೆ ನಿನಗೆ ಬ್ರಹ್ಮದ ಸ್ವರೂಪದ ಕುರಿತು ಬಹಳ ಸ್ವಲ್ಪವೇ ತಿಳಿದಿದೆ ಎಂದರ್ಥ. ನಿನಗೆ ಅದರ ರೂಪಾಂತರವು ಜೀವಾತ್ಮಗಳಲ್ಲಿ, ದೇವರುಗಳಲ್ಲಿ ಮತ್ತು ತೋರಿಕೆಯ ಪ್ರಪಂಚದಲ್ಲಿ ಮಾತ್ರವೇ ತಿಳಿದಿದೆ ಎಂದರ್ಥ. ಆದ್ದರಿಂದ ಬ್ರಹ್ಮದ ಕುರಿತಾಗಿ ಇನ್ನೂ ಕೂಲಂಕುಷವಾಗಿ ಅರಿಯಬೇಕಾಗಿದೆ". ಆದರೆ ಅವನನ್ನು ತಿಳಿಯಲು ಕೆಲವು ಮೂಲಭೂತ ವಿಷಯಗಳನ್ನು ಅರಿತಿರಬೇಕು. ಇದನ್ನೇ ಮುಂದಿನ ನಾಮದಲ್ಲಿ ವಿವರಿಸಲಾಗಿದೆ.

Svaprakāśā स्वप्रकाशा (414)

೪೧೪. ಸ್ವಪ್ರಕಾಶಾ

        ದೇವಿಯು ಸ್ವಯಂಪ್ರಕಾಶಕಳು. ಬ್ರಹ್ಮವೊಂದೆ ಸ್ವಯಂಪ್ರಕಾಶಕವಾಗಿದ್ದು ಉಳಿದೆಲ್ಲಾ ಹೊಳೆಯುವ ವಸ್ತುಗಳಾದ ಸೂರ್ಯ, ಚಂದ್ರ, ನಕ್ಷತ್ರ ಮೊದಲಾದವುಗಳು ಅವುಗಳ ಬೆಳಕನ್ನು ಪರಬ್ರಹ್ಮದಿಂದಲೇ ಪಡೆಯುತ್ತವೆ. ಈ ಸ್ವಯಂ ಪ್ರಕಾಶಿತ ಬೆಳಕಿನಿಂದಾಗಿಯೇ ನಾವು ಈ ಭೌತಿಕ ಪ್ರಪಂಚವನ್ನು ನೋಡಲು ಸಾಧ್ಯವಾಗಿದೆ.

         ಈ ತತ್ವವನ್ನು ಬೃಹದಾರಣ್ಯಕ ಉಪನಿಷತ್ತಿನಲ್ಲಿ (೪.೩.೯) ವಿವರಿಸಲಾಗಿದೆ. "ಅವನ ಸ್ವಂತ ಬೆಳಕಿನಿಂದಲೇ ಅವನ ಪ್ರಭೆಯನ್ನು ಅನಾವರಣಗೊಳಿಸುತ್ತಾ" ಎಂದು ಅದು ಹೇಳುತ್ತದೆ. ಈ ಹಂತದಲ್ಲಿ ಬೆಳಕು ಎಲ್ಲಾ ವಸ್ತುಗಳಿಂದ ಸ್ವತಂತ್ರ‍ವಾಗಿರುತ್ತದೆ; ಪಂಚಭೂತಗಳನ್ನೂ ಸಹ ಹೊರತು ಪಡಿಸಿ. ಅವನು ಯಾರಿಗೂ ಭಯಪಡನು, ಏಕೆಂದರೆ ಅವನ ಹತ್ತಿರದಲ್ಲಿ ಬೇರಾರೂ ಇಲ್ಲ.

       ಕಠೋಪನಿಷ್ತು (೨.೨.೧೫) ಹೇಳುತ್ತದೆ, “ಬ್ರಹ್ಮದ ಸನಿಹದಲ್ಲಿ ಸೂರ್ಯ, ಚಂದ್ರ, ನಕ್ಷತ್ರಗಳಾಗಲಿ ಅಥವಾ ಮಿಂಚೂ ಸಹ ಹೊಳೆಯುವುದಿಲ್ಲ ಇನ್ನು ಬೆಂಕಿಯ ಮಾತೆಲ್ಲಿ? ಯಾವಾಗ ಬ್ರಹ್ಮವು ಹೊಳೆಯುತ್ತದೆಯೋ ಉಳಿದೆಲ್ಲವೂ ಅದನ್ನನುಸರಿಸುತ್ತವೆ. ಈ ಬೆಳಕಿನಿಂದ ಉಳಿದೆಲ್ಲವೂ ಬೆಳಗುತ್ತವೆ". ಈ ನಾಮವೂ ಸಹ ಅವಳ ಪರಬ್ರಹ್ಮ ಸ್ವರೂಪವನ್ನು ದೃಢ ಪಡಿಸುತ್ತದೆ.

      ಸ್ವಯಂ ಪ್ರಕಾಶದ ಕುರಿತು ಇನ್ನಷ್ಟು ವಿವರಗಳು: ಯಾವಾಗ ಜೀವವನ್ನು ಒಂದು ದೃಢ ಪಡಿಸಲ್ಪಟ್ಟಿರುವ ಆತ್ಮದಲ್ಲಿ ಇರಿಸಲಾಗುತ್ತದೆಯೋ, ಆಗ ಅಂತರ್ಯಾಮಿಯಾದ ಆ ದಿವ್ಯ ಜ್ಯೋತಿಯು ತನ್ನ ವೈಭವದೊಂದಿಗೆ ಹೊಳೆಯುತ್ತದೆ, ಆದರೆ ದುರ್ದೈವವಶಾತ್ ಅದು ನಮ್ಮ ಆಲೋಚನೆಗಳು ಒಡ್ಡುವ ತಡೆಯಿಂದಾಗಿ ನಮ್ಮ ಗ್ರಹಿಕೆಯಿಂದ ಅದು ಮರೆಮಾಚಲ್ಪಡುತ್ತದೆ. ಈ ಸ್ವಯಂ ಪ್ರಜ್ವಲಿಸುವ ಬೆಳಕನ್ನೇ ಪರಬ್ರಹ್ಮದ ಪ್ರಕಾಶ ರೂಪವೆಂದು ಕರೆಯಲಾಗಿದ್ದು ಅದು ಶಿವನನ್ನು ಸೂಚಿಸುತ್ತದೆ. ಇದನ್ನೇ ಅತ್ಯುನ್ನತ ಪ್ರಜ್ಞೆ ಅಥವಾ ಪರಮೋನ್ನತವಾದ ಚೈತನ್ಯ ಜ್ಯೋತಿಯೆಂದು ಕರೆಯಲಾಗುತ್ತದೆ. ಯಾವಾಗ ಶಿವನ ಪ್ರಕಾಶ ರೂಪ ಮತ್ತು ಶಕ್ತಿಯ ವಿಮರ್ಶ ರೂಪಗಳ ಸಮತೋಲನವಾದ ಸಂಯೋಜನೆಯು ಏರ್ಪಡುತ್ತದೆಯೋ ಆಗ ಈ ಬ್ರಹ್ಮಾಂಡದ ಸೃಷ್ಟಿಯು ಮೊದಲಾಗುತ್ತದೆ. ವಿಮರ್ಶ ರೂಪವು ಸ್ವಯಂ ಪ್ರಕಾಶಕ ರೂಪದ ಬೆಳಕನ್ನು ಪ್ರತಿಫಲಿಸುತ್ತದೆ ಮತ್ತು ಒಂದಿಲ್ಲದಿದ್ದರೆ ಮತ್ತೊಂದು ಸೃಷ್ಟಿಯನ್ನು ಅನಾವರಣಗೊಳಿಸಲು ಅಶಕ್ತವಾಗುತ್ತದೆ.

Manō-vācāmagōcarā मनो-वाचामगोचरा (415)

೪೧೫. ಮನೋ-ವಾಚಾಮಗೋಚರಾ

        ಅಪ್ರಮೇಯಾ (ನಾಮ ೪೧೩) ಗುಣಗಳನ್ನು ಇಲ್ಲಿ ವಿವರಿಸಲಾಗುತ್ತಿದೆ. ದೇವಿಯು ಮನಸ್ಸು ಮತ್ತು ಮಾತುಗಳಿಗೆ ಅತೀತಳಾದವಳು. ಈ ಹಂತವನ್ನು ಕೇನ ಉಪನಿಷತ್ತು ವಿವರಿಸುತ್ತದೆ ಎನ್ನುವುದನ್ನು ಈ ಮೊದಲೇ ಚರ್ಚಿಸಲಾಗಿದೆ. ಆಕೆಯನ್ನು ಅರಿಯುವುದು ಮನಸ್ಸಿಗೆ ಅತೀತವಾಗಿದ್ದು ಎನ್ನುವುದಾದರೆ ಎಲ್ಲವೂ ಕುಸಿಯುತ್ತವೆ ಏಕೆಂದರೆ ಅವೆಲ್ಲವೂ ಕೇವಲ ಮನಸ್ಸಿನ ಕ್ರಿಯೆಗಳಾಗಿರುವುದರಿಂದ.

        ತೈತ್ತರೀಯ ಉಪನಿಷತ್ತೂ ಸಹ (೨.೯) ಈ ಸ್ಥಿತಿಯನ್ನು ವಿವರಿಸುತ್ತದೆ, "ಯಾವುದರಿಂದ ಶಬ್ದಗಳು ಹಿಂದಿರುಗುತ್ತವೆಯೋ, ಅಥವಾ ಅವು ವಿಮುಖವಾಗುತ್ತವೆಯೋ". ಹಾಗಾದರೆ ಆತ್ಮವನ್ನು ಶಬ್ದಗಳು ವಿವರಿಸುವುದಾದರೂ ಹೇಗೆ? ಯಾವುದು ಪರಿಮಿತವಾಗಿದೆಯೋ ಅದು ಅಪರಿಮಿತವಾದದ್ದನ್ನು ವಿವರಿಸಲಾಗುತ್ತದೆಯೇ? ಇಲ್ಲ, ಅದು ಪದಗಳಿಗೆ ಮತ್ತು ಆಲೋಚನೆಗೆ ನಿಲುಕಲಾರದ್ದು. ಮನಸ್ಸೂ ಸಹ ಈ ಪರಬ್ರಹ್ಮವನ್ನು ಗ್ರಹಿಸಲಾರದು. ನಿಮಗೆ ಯಾವುದಾದರೂ ಪರಿಚಿತವಿದ್ದುದ್ದನ್ನು ಕುರಿತು ಆಲೋಚಿಸಬಹುದು, ಯಾವುದು ನಿಮಗೆ ತಿಳಿದಿದೆಯೋ ಅದನ್ನು ಕುರಿತು ಆಲೋಚಿಸಬಹುದು ಆದರೆ ಯಾವುದರ ಬಗ್ಗೆ ನಿಮಗೆ ಅನುಭವವೇ ಆಗಿಲ್ಲವೋ ಅದರ ಕುರಿತು ಆಲೋಚಿಸುವುದಾದರೂ ಹೇಗೆ? ನಮ್ಮ ಆಲೋಚನೆಗಳು ಯಾವಾಗಲೂ ನಮ್ಮ ಅನುಭವಗಳಿಗೆ ಪರಿಮಿತವಾಗಿರುತ್ತವೆ".

        ಈ ನಾಮವು ದೇವಿಯನ್ನು ಕೇವಲ ಪರಿಶುದ್ದವಾದ ಜ್ಞಾನದಿಂದ ಮಾತ್ರವೇ ಅರಿಯಬಹುದು; ಯಾವ ಜ್ಞಾನವು ನಮಗೆ ಈ ಹಿಂದೆ ಪರಿಚಯವಿಲ್ಲವೋ ಅದರಿಂದ, ಎಂದು ಹೇಳುತ್ತದೆ.  

******

      ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 411-415 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Mon, 09/02/2013 - 19:57

ಶ್ರೀಧರರೆ, ೧೦೮. ಶ್ರೀ ಲಲಿತಾ ಸಹಸ್ರನಾಮದ ವಿವರಣೆಯ ಸಾರ ಪರಿಷ್ಕರಣೆಗೆ ಸಿದ್ದ.

ಲಲಿತಾ ಸಹಸ್ರನಾಮ ೪೧೧-೪೧೫
______________________________________

೪೧೧. ಶಿಷ್ಠೇಷ್ಠಾ
ಜನ್ಮಾಂತರ ಜಮೆ ಜ್ಞಾನದ ಖಾತೆ, ಜ್ಞಾನವೇತ್ತ ಸಿಗಲೆ ದುರ್ಲಭ
ಏಕಾಗ್ರ ನಿರಂತರ ಭಕ್ತಾಗ್ರೇಸರರು, ಪರಮಾತ್ಮಪ್ರಿಯತೆ ಸೌರಭ
ವೇದ ಶಾಸ್ತ್ರ ಧರ್ಮ ಮಾರ್ಗ, ಇಂದ್ರಿಯ ನಿಗ್ರಹ ಸನ್ಮಾರ್ಗ ಶಿಷ್ಠ
ದೇವಿಗೆ ಪ್ರಿಯ ಅರಿತನುಸರಿಸೊ ಶ್ರೇಷ್ಠ, ಜ್ಞಾನಿಗೆ ಪ್ರಿಯ ಶಿಷ್ಠೇಷ್ಠ!

೪೧೨. ಶಿಷ್ಠಪೂಜಿತಾ
ಜ್ಞಾನಿಗಳು ಶ್ರೇಷ್ಠ ಜನಗಳು, ಪೂಜಿಸರು ಅನರ್ಹರ ಶತಃಸಿದ್ಧ
ಶ್ರೇಷ್ಠಪರಬ್ರಹ್ಮದ ಆರಾಧನೆ, ಮಿಕ್ಕೆಲ್ಲಾ ಪೂಜೆಗನರ್ಹ ನಿಷಿದ್ದ
ಶ್ರೇಷ್ಠ ಜ್ಞಾನಸ್ವರೂಪಿ ಶಿಷ್ಠರೆ, ಭಕ್ತಿಪರವಶ ಆರಾಧಿಸುತ ಲಲಿತ
ತಾನೆ ಪರಬ್ರಹ್ಮವೆನ್ನುವ ಸತ್ಯ, ಸಾದರಪಡಿಸುತ ಶಿಷ್ಠಪೂಜಿತಾ!

೪೧೩. ಅಪ್ರಮೇಯಾ
ಅಳೆಯಲುಂಟೆ ಪರಿಧಿಯೆಳೆಯಲುಂಟೆ ದೇವಿಯ, ಪರಬ್ರಹ್ಮ ಅಪರಿಮಿತ
ಇಂದ್ರಿಯ ಕಲ್ಪನೆ ಉಪಮೆಗತೀತ ಲಲಿತಾಜ್ಯೋತಿ, ಅಪ್ರಮೇಯಾ ಗಣಿತ
ಜ್ಞಾನಿ ಶಿಷ್ಟೇಷ್ಠ ಪೂಜಿತ, ಸೃಷ್ಟಿ ಚಟುವಟಿಕೆ ನೋಟ ಅರಿತೆನೆನೆ ಅರಿತಿಲ್ಲದ
ಮನೋಗ್ರಾಹ್ಯವಲ್ಲದ ಕ್ರಿಯಾಶೀಲತೆ ಪ್ರೇರಕ, ರೂಪಾಂತರದಲಷ್ಟೇ ತಿಳಿದ!

೪೧೪. ಸ್ವಪ್ರಕಾಶಾ
ಸ್ವಯಂಪ್ರಕಾಶಿತ ಬ್ರಹ್ಮ ಸ್ವಪ್ರಕಾಶಾ, ಪ್ರಭಾಪುಂಜ ಅನಾವರಣ
ಅಣು ರೇಣು ತೃಣ ಭೌತಿಕ ಬೆಳಗಿ, ಮಿಂಚ ಮಂಕಾಗಿಸೊ ಲಕ್ಷಣ
ಸರ್ವತಂತ್ರ ಸ್ವತಂತ್ರ, ನಿರ್ಭೀತ ಏಕಾಂತ ಜ್ಯೋತಿಯ್ಹೊಳೆಯುತ
ದಕ್ಕದ ಗ್ರಹಿಕೆ ತೊಡಕು, ವೈಭವ ಚೈತನ್ಯವೆಲ್ಲಾ ಮರೆಮಾಚುತ!

೪೧೫. ಮನೋ-ವಾಚಾಮಗೋಚರಾ
ಮಾತು ಮನಸಿಗತೀತಳು ಲಲಿತೆ, ಮನೋ ವಾಚಾಮಗೋಚರಾ
ಶಬ್ದ ವಿವರಿಸಲಾಗದೆ ನಿಶ್ಯಬ್ದ, ಪರಿಮಿತಕಲ್ಲ ಅಪರಿಮಿತ ವಿವರ
ನಿಲುಕದ ಪದಾಲೋಚನೆ ಅನನುಭವ, ಗ್ರಹಿಸಾ ಮನ ಪರಬ್ರಹ್ಮ
ಅರಿತಿಲ್ಲದ ಜ್ಞಾನ, ಲಲಿತೆ ಅರಿಯೆ ಪರಿಶುದ್ಧಜ್ಞಾನ, ಕನಿಷ್ಠ ಧರ್ಮ!
 
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು