೧೦೯. ಲಲಿತಾ ಸಹಸ್ರನಾಮ ೪೧೬ರಿಂದ ೪೧೭ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೪೧೬-೪೧೭
Cicchaktiḥ चिच्छक्तिः (416)
೪೧೬. ಚಿಚ್ಛಕ್ತಿಃ
ಚಿತ್ ಎಂದರೆ ಪರಿಶುದ್ಧವಾದ ಚೈತನ್ಯ ಮತ್ತು ಪರಿಶುದ್ಧವಾದ ಜ್ಞಾನ. ನಿರ್ಗುಣ ಬ್ರಹ್ಮವು ಮೂರು ಪ್ರಧಾನವಾದ ಅಂಶಗಳನ್ನು ಒಳಗೊಂಡಿರುತ್ತದೆ. ಅವೆಂದರೆ ಸತ್ (ನಿರಂತರ ಅಸ್ತಿತ್ವ), ಚಿತ್ (ಈ ನಾಮ - ಶುದ್ಧವಾದ ಪ್ರಜ್ಞೆ) ಮತ್ತು ಆನಂದ (ಪರಮಾನಂದ ಅಥವಾ ಪರಮ ಶಾಂತತೆ). ಈ ಮೂರೂ ಗುಣಗಳನ್ನು ಒಟ್ಟಾಗಿಸಿ ಸಚ್ಚಿದಾನಂದವೆಂದು ಕರೆಯುತ್ತಾರೆ ಮತ್ತು ಬ್ರಹ್ಮವನ್ನೂ ಈ ಹೆಸರಿನಿಂದಲೇ ಕರೆಯಲಾಗುತ್ತದೆ. ಸಚ್ಚಿದಾನಂದವೆಂದರೆ ನಿರಂತರವಾಗಿ ಇರುವುದು (ಸತ್), ಪ್ರಜ್ಞೆಯಳ್ಳದ್ದು (ಚಿತ್) ಮತ್ತು ಶಾಂತ ಸ್ವರೂಪದಿಂದಿರುವುದು (ಆನಂದ). ಇಲ್ಲಿ ಶುದ್ಧ ಚೈತನ್ಯ ಅಥವಾ ಪ್ರಜ್ಞೆ ಎಂದರೆ ಅದು ಆಧ್ಯಾತ್ಮಿಕ ಪ್ರಜ್ಞೆಯಾಗಿದೆ. ಕೇವಲ ಪರಿಶುದ್ಧವಾದ ಮತ್ತು ಯಾವುದೇ ವಿಧವಾದ ಕಳಂಕಗಳಿಲ್ಲದ ಜ್ಞಾನವು ಆಧ್ಯಾತ್ಮಿಕ ಚೈತನ್ಯವನ್ನು ಉತ್ಪಾದಿಸಲು ಶಕ್ಯವಾಗುತ್ತದೆ.
ಚಿತ್ನ ಕುರಿತು ಇನ್ನಷ್ಟು ವಿವರಗಳು:
ಚಿತ್ ಎನ್ನುವುದನ್ನು ಚಿದಾತ್ಮ ಎಂದೂ ಕರೆಯಲಾಗಿದೆ. ಯಾವಾಗ ಅದು ಬ್ರಹ್ಮಾಂಡದ ಅಜ್ಞಾನದಲ್ಲಿ (ಅವಿದ್ಯೆಯಲ್ಲಿ) ಪ್ರತಿಫಲನ ಹೊಂದುತ್ತದೆಯೋ ಆಗ ಅದನ್ನು ಈಶ್ವರ ಎಂದೂ ಮತ್ತದು ಯಾವಾಗ ವ್ಯಕ್ತಿಗತ ಅಜ್ಞಾನದಲ್ಲಿ ಪ್ರತಿಫಲನ ಹೊಂದುತ್ತದೆಯೋ ಆಗ ಅದನ್ನು ಜೀವಾತ್ಮವೆಂದೂ ಕರೆಯುತ್ತಾರೆ. ಈಶ್ವರ ಎನ್ನುವುದು ಪರಬ್ರಹ್ಮವಲ್ಲ, ಏಕೆಂದರೆ ಅದು ಬ್ರಹ್ಮಾಂಡದ ಅಜ್ಞಾನದ ಪ್ರತಿಫಲನವಷ್ಟೇ. ಈ ವ್ಯಾಖ್ಯಾನಕ್ಕೆ ಎರಡು ಪ್ರಮುಖ ಅಂಶಗಳಿವೆ. ಇಲ್ಲಿ ಈಶ್ವರ ಎಂದರೆ ಅದು ಕೇವಲ ಪ್ರತಿಫಲಿಸುವ ಗುಣವನ್ನು ಹೊಂದಿದ್ದು ಅದು ಸ್ವಯಂ-ಪ್ರಕಾಶಕವಲ್ಲ. ಎರಡನೆಯದಾಗಿ ಬ್ರಹ್ಮವು ಎಂದಿಗೂ ಅವಿದ್ಯೆಯೊಂದಿಗೆ ಸಹಯೋಗ ಹೊಂದಿರುವುದಿಲ್ಲ. ಈ ಈಶ್ವರವು ಪ್ರಕೃತಿಯ ಒಡೆಯನೆಂದು ಹೇಳಲಾಗುತ್ತದೆ. ಯಾವಾಗ ಆತ್ಮದ ಅಥವಾ ವ್ಯಕ್ತಿಗತ ಅಜ್ಞಾನವು ಪ್ರಕೃತಿಯೊಂದಿಗೆ ಸಂಪರ್ಕಕ್ಕೆ ಬರುತ್ತದೆಯೋ ಆಗ ಆತ್ಮವು ಹೊಸ ಭೌತಿಕ ದೇಹದ ಸೃಷ್ಟಿಯನ್ನು ಪ್ರಚೋದಿಸುತ್ತದೆ; ಅದರೊಳಗೆ ಅಡಕವಾಗಿರುವ ಕರ್ಮಗಳನ್ನು ಅನಾವರಣಗೊಳಿಸಲು. ಅದೇನೆ ಇರಲಿ, ಈಶ್ವರವು ಅಸಂಸ್ಕರಿತ ರೂಪದಲ್ಲೇ ಇರುತ್ತದೆ ಆದರೆ ಆತ್ಮವು ತನ್ನ ಸಂಸ್ಕರಿತ ರೂಪದಲ್ಲಿ ಇರುವುದನ್ನು ಮುಂದುವರೆಸುತ್ತದೆ ಏಕೆಂದರೆ ಅದು ಕೆಳ ಸ್ತರದ ಪ್ರಜ್ಞೆಗಳಿಂದ ದುಷ್ಪ್ರಭಾವಕ್ಕೆ ಒಳಗಾಗುತ್ತದೆ ಅದನ್ನು ವ್ಯಕ್ತಿಗತ ಪ್ರಜ್ಞೆ ಎಂದು ಕರೆಯಲಾಗುತ್ತದೆ. ಈಶ್ವರನು ತ್ರಿಗುಣಗಳ ಪ್ರಭಾವದಿಂದ ಯಾವುದೇ ವಿಧವಾದ ರೂಪಾಂತರಗಳನ್ನು ಹೊಂದುವುದಿಲ್ಲ ಆದರೆ ಆತ್ಮವು ತ್ರಿಗುಣಗಳಿಂದ ಪ್ರಭಾವಿತಗೊಂಡು ಅದು ಸೃಷ್ಟಿಕ್ರಿಯೆಗೆ ದಾರಿ ಮಾಡಿಕೊಡುತ್ತದೆ. ಈಶ್ವರವೆಂದರೆ ಅದನ್ನು ಮಾನವರ ಆತ್ಮಕ್ಕೆ ಸಮಾನಾಂತರವಾದ ಬ್ರಹ್ಮಾಂಡದ ಭಾಗವೆಂದು ವ್ಯಾಖ್ಯಾನಿಸಬಹುದು. ಈಶ್ವರ ಮತ್ತು ಪ್ರಕೃತಿಗಳು ಇತರೇ ಇಪ್ಪತ್ನಾಲ್ಕು ತತ್ವಗಳೊಂದಿಗೆ ಸೇರಿಕೊಂಡು ಸೃಷ್ಟಿಯನ್ನು ಉಂಟು ಮಾಡುತ್ತವೆ. ಆದ್ದರಿಂದ, ಈ ನಾಮದಲ್ಲಿ ಈಶ್ವರ ತತ್ವವೆನ್ನುವ ಹೊಸದೊಂದು ತತ್ವವು ನಮಗೆ ಪರಿಚಯಿಸಲ್ಪಡುತ್ತದೆ.
ಈಶ್ವರನು ಪ್ರಕೃತಿಯ ಒಡೆಯನೆಂದು ಹೇಳಲ್ಪಟ್ಟಿರುವುದರಿಂದ ಅದನ್ನು ಮಾಯೆಯ ಒಟ್ಟು ಸ್ವರೂಪ ಮತ್ತು ವ್ಯಕ್ತಿಗತ ಆತ್ಮಗಳ ಒಟ್ಟು ಮೊತ್ತವೆಂದು ಹೇಳಬಹುದು. ಈ ಈಶ್ವರ ತತ್ವವು ಬ್ರಹ್ಮದ ನಾಲ್ಕು ವಿಶಿಷ್ಠ ಸ್ಥಿತಿಗಳಲ್ಲಿ ಒಂದಾಗಿದ್ದು ಉಳಿದ ಮೂರು ’ಅವ್ಯಕ್ತ’ (ನಾಮ ೩೯೮),”ಹಿರಣ್ಯಗರ್ಭ’ (ನಾಮ ೬೩೮, ಇದು ಸೂಕ್ಷ್ಮ ಶರೀರದ ಒಳಗಡೆ ಇದ್ದು ಅದು ಪ್ರಪಂಚದ ಎಲ್ಲಾ ಅಂಶಗಳನ್ನು ಒಂದಾಗಿ ಬೆಸೆಯುತ್ತದೆ) ಮತ್ತು ವಿರಾಟ್ (ನಾಮ ೭೭೮; ವಿಶ್ವದ ಬ್ರಹ್ಮಾಂಡರೂಪ) ಆಗಿವೆ.
ಶ್ವೇತಾಶ್ವತರ ಉಪನಿಷತ್ತು (೫.೧) ಸಹ ಈ ಸಿದ್ಧಾಂತವನ್ನು ಉಲ್ಲೇಖಿಸುತ್ತದೆ. ಪರಬ್ರಹ್ಮವು ಹಿರಣ್ಯಗರ್ಭಕ್ಕಿಂತಲೂ ಉನ್ನತವಾದದ್ದು. ಜ್ಞಾನ ಮತ್ತು ಅಜ್ಞಾನಗಳೆರಡೂ ಪರಬ್ರಹ್ಮದಲ್ಲಿ ಗುಪ್ತವಾಗಿ ಇರುತ್ತವೆ. ಅಜ್ಞಾನವು ಹುಟ್ಟು ಮತ್ತು ಸಾವುಗಳಿಗೆ ಕಾರಣವಾಗಿದೆ, ಆದರೆ ಜ್ಞಾನವು ಅಮೃತತ್ವಕ್ಕೆ ಕೊಂಡೊಯ್ಯುತ್ತದೆ. ಯಾರು ಜ್ಞಾನಜ್ಞಾನಗಳೆರಡನ್ನೂ ನಿಯಂತ್ರಿಸುತ್ತಾನೋ ಅವನು ಅವೆರಡರಿಂದಲೂ ಭಿನ್ನವಾಗಿರುತ್ತಾನೆ, ಅದುವೇ ಬ್ರಹ್ಮ (ಪರಿಶುದ್ಧವಾದ ನಿರ್ಗುಣ ಬ್ರಹ್ಮ) ಮತ್ತು ಪರಮೋನ್ನತವಾದದ್ದು.
ಈ ನಾಮವು ದೇವಿಯು ಚಿತ್ ಶಕ್ತಿಯ (ಚಿಚ್ಚಕ್ತಿಃ) ರೂಪದಲ್ಲಿ ಇದ್ದಾಳೆಂದು ಹೇಳುತ್ತದೆ.
Cetanā rūpā चेतना रुपा (417)
೪೧೭. ಚೇತನಾ ರೂಪಾ
ಕ್ರಿಯಾಶೀಲ ಸ್ಥಿತಿಯಲ್ಲಿರುವ ಪರಿಶುದ್ಧವಾದ ಮತ್ತು ರೂಪಾಂತರ ಹೊಂದದ ಅಸಂಸ್ಕರಿತ ಪ್ರಜ್ಞೆಯನ್ನು ಚೈತನ್ಯವೆಂದು ಕರೆಯುತ್ತಾರೆ. ಇದನ್ನು ಹಿಂದಿನ ನಾಮದ ಪರಿಶುದ್ಧ ರೂಪವೆಂದೂ ಸಹ ಹೇಳಬಹುದು. ಇಡೀ ಬ್ರಹ್ಮಾಂಡವು ಎರಡು ಮುಖಗಳುಳ್ಳ ಈ ಚೈತನ್ಯದಿಂದ ಆವಿರ್ಭಾವ ಹೊಂದುತ್ತದೆ. ಅದರಲ್ಲಿ ಮೊದಲನೆಯದು ಸ್ಥೂಲವಾಗಿದ್ದರೆ ಮತ್ತೊಂದು ಸೂಕ್ಷ್ಮವಾದದ್ದು. ಸ್ಥೂಲ ರೂಪವು ನಾಮ ರೂಪಗಳನ್ನು ಒಳಗೊಂಡಿದ್ದರೆ, ಸೂಕ್ಷ್ಮ ರೂಪವು ಮನಸ್ಸು ಮತ್ತು ಅದರ ಪರಿವರ್ತಿತ ರೂಪಗಳಾದ ಅಂತಃಕರಣಗಳಿಂದ (ಮನಸ್ಸು, ಬುದ್ಧಿ, ಚಿತ್ತ ಮತ್ತು ಅಹಂಕಾರ) ಮಾಡಲ್ಪಟ್ಟಿದೆ. ಸ್ಥೂಲ ರೂಪವು ನೇರವಾದ ಅನುಭವವನ್ನು ಕೊಟ್ಟರೆ ಸೂಕ್ಷ್ಮ ರೂಪವು ಆಂತರಿಕವಾದ ಅನುಭವವನ್ನು ಕೊಡುತ್ತದೆ. ಚೈತನ್ಯದ ಹಂತದಲ್ಲಿ ವಸ್ತು ಆಧಾರಿತ ಮತ್ತು ವಿಷಯಾಧಾರಿತ ಪ್ರಪಂಚಗಳೆರಡೂ ಅನುಭವಗಳಾಗಿ ಮಾರ್ಪಾಟು ಹೊಂದುತ್ತವೆ. ದೇವಿಯ ಚೇತನಾ ರೂಪಾ ಅಥವಾ ಚೈತನ್ಯ ರೂಪವನ್ನು ಆಕೆಯ ವಿಮರ್ಶ ರೂಪವೆಂದೂ ಸಹ ಕರೆಯಲಾಗುತ್ತದೆ.
*******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 416-417 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೧೦೯. ಲಲಿತಾ ಸಹಸ್ರನಾಮ ೪೧೬ರಿಂದ ೪೧೭ನೇ ನಾಮಗಳ ವಿವರಣೆ
ಶ್ರೀಧರರೆ, ೧೦೯. ಶ್ರೀ ಲಲಿತಾ ಸಹಸ್ರನಾಮದ ವಿವರಣೆಯ ಕಾವ್ಯಸಾರ ಪರಿಷ್ಕರಣೆಗೆ ಸಿದ್ಧ.
ಲಲಿತಾ ಸಹಸ್ರನಾಮ ೪೧೬-೪೧೭
_____________________________________
೪೧೬. ಚಿಚ್ಛಕ್ತಿಃ
ನಿರ್ಗುಣ ಬ್ರಹ್ಮದ ತ್ರಿಗುಣ, ಸತ್ ಚಿತ್ ಆನಂದ ಗಣ
ನಿರಂತರ ಅಸ್ತಿತ್ವ, ಶುದ್ಧ ಪ್ರಜ್ಞೆ, ಪರಮಾನಂದ ಕಲನ
ಸಂಕಲಿತರೂಪ ಸಚ್ಚಿದಾನಂದವೆ ಬ್ರಹ್ಮ, ಚಿತ್ ಚಿಚ್ಛಕ್ತಿಃ
ಪರಿಶುದ್ಧಚೈತನ್ಯ ರೂಪದಲಿ ಪ್ರಸ್ತುತವೀ ಲಲಿತಾಶಕ್ತಿ!
ಚಿತ್ ನ ಕುರಿತು ಇನ್ನಷ್ಟು ವಿವರಗಳು :
_______________________________
ಪ್ರಕೃತಿಗೊಡೆಯ ಈಶ್ವರ, ಆತ್ಮ-ಸಮಾಂತರ ಬ್ರಹ್ಮಾಂಡ ಭಾಗ
ಪ್ರಕೃತಿ ಜತೆ ಇಪ್ಪತ್ನಾಲ್ಕು ತತ್ವ, ಸೃಷ್ಟಿಕ್ರಿಯೆ ಈಶ್ವರತತ್ವ ಸೊಗ
ಚಿದಾತ್ಮವೀ ಚಿತ್, ಬ್ರಹ್ಮಾಂಡದ ಜ್ಞಾನದೆ ಪ್ರತಿಫಲಿಸೆ ಈಶ್ವರತೆ
ವ್ಯಕ್ತಿಗತ ಅಜ್ಞಾನದೆ ಜೀವಾತ್ಮ, ಪರಬ್ರಹ್ಮಕಷ್ಟೆ ಸ್ವಯಂಪ್ರಕಾಶತೆ!
ಈಶ್ವರಕಿಲ್ಲ ಸ್ವಯಂಪ್ರಕಾಶ, ಬ್ರಹ್ಮಕಿಲ್ಲದ ಸಂಸರ್ಗ ಅಜ್ಞಾನ
ವ್ಯಕ್ತಿಗತ ಅಜ್ಞಾನ ಪ್ರಕೃತಿ ಸಂಪರ್ಕ, ನವಭೌತಿಕ ಸೃಷ್ಟಿಮನ
ಆತ್ಮ ಪ್ರಚೋದನೆ ಕರ್ಮದನಾವರಣಕೆ, ವ್ಯಕ್ತಿಗತಪ್ರಜ್ಞೆ ರೂಪ
ತ್ರಿಗುಣ ಪ್ರಭಾವಾತ್ಮ ಸೃಷ್ಟಿಗೆ, ಅಸಂಸ್ಕರಿತ ಈಶ್ವರಸ್ವರೂಪ!
ಬ್ರಹ್ಮದ ನಾಲ್ಕು ವಿಶಿಷ್ಠ ಸ್ಥಿತಿ, ಈಶ್ವರ- ಅವ್ಯಕ್ತ- ಹಿರಣ್ಯಗರ್ಭ-ವಿರಾಟ್
ಈಶ್ವರ ತತ್ವ ಮಾಯಾ ಸಮಷ್ಟಿರೂಪ, ವ್ಯಕ್ತಿಗತಾತ್ಮದ ಮೊತ್ತದ ಒಟ್ಟು
ಅವ್ಯಕ್ತಾ ಸೃಷ್ಟಿ ಚಾಲನೆ, ಜಗದೆಲ್ಲ ಅಂಶ ಬೆಸೆಯೆ ಹಿರಣ್ಯಗರ್ಭ ಸೂತ್ರ
ವಿಶ್ವಬ್ರಹ್ಮಾಂಡರೂಪಾಗಿ ವಿರಾಟ್, ಜ್ಞಾನಮುಖೇನ ಅಮೃತತ್ವಕೆ ಪಾತ್ರ!
೪೧೭. ಚೇತನಾ ರೂಪಾ
ಅಸಂಸ್ಕರಿತ ಪ್ರಜ್ಞೆಯೆ ಚೈತನ್ಯ, ಪರಿಶುದ್ಧ ಕ್ರಿಯಾಶೀಲ ಸ್ಥಿತಿ
ಬ್ರಹ್ಮಾಂಡ ಸ್ಥೂಲ-ಸೂಕ್ಷ್ಮ ರೂಪ ಆವಿರ್ಭಾವ ಚೈತನ್ಯದ ಶಕ್ತಿ
ನಾಮರೂಪ ಸ್ಥೂಲ, ಮನಸಂತಃಕರಣ ಸೂಕ್ಷ್ಮ ಚೇತನಾರೂಪಾ
ನೇರ-ಆಂತರಿಕ ವಸ್ತು ವಿಷಯಾನುಭವವೀವ ವಿಮರ್ಶ ಸ್ವರೂಪ!
ಧನ್ಯವಾದಗಳೊಂದಿಗೆ
- ನಾಗೇಶ ಮೈಸೂರು
In reply to ಉ: ೧೦೯. ಲಲಿತಾ ಸಹಸ್ರನಾಮ ೪೧೬ರಿಂದ ೪೧೭ನೇ ನಾಮಗಳ ವಿವರಣೆ by nageshamysore
ಉ: ೧೦೯. ಲಲಿತಾ ಸಹಸ್ರನಾಮ ೪೧೬ರಿಂದ ೪೧೭ನೇ ನಾಮಗಳ ವಿವರಣೆ
ನಾಗೇಶರೆ,
ಈ ಕಂತಿನ ಪದ್ಯಗಳು ಸಿಂಪ್ಲಿ ಸೂಪರ್ಬ್! ನಿರೀಕ್ಷೆಗಿಂತ ಅತ್ಯಂತ ಚೆನ್ನಾಗಿ ಮೂಡಿ ಬಂದಿವೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ