೧೧.ಲಲಿತಾ ಸಹಸ್ರನಾಮ ೬ ರಿಂದ ೧೧ರ ವಿವರಣೆ
ಲಲಿತಾ ಸಹಸ್ರನಾಮ ೬ರಿಂದ ೧೧
Udyadbhānu-sahasrābhā उद्यद्भानु-सहस्राभा (6)
೬. ಉದ್ಯದ್ಭಾನು-ಸಹಸ್ರಾಭಾ
ಉದ್ಯದ್ - ಉದಯಿಸುತ್ತಿರುವ, ಭಾನು - ಸೂರ್ಯ, ಸಹಸ್ರ - ಸಾವಿರ ಅಥವಾ ಲೆಕ್ಕವಿಲ್ಲದಷ್ಟು, ಅಭಾ - ಬೆಳಕು. ಲಲಿತಾಂಬಿಕೆಯು ಒಮ್ಮೆಲೇ ಸಾವಿರಾರು ಸೂರ್ಯರು ಉದಯಿಸಿದಾಗ ಉಂಟಾಗುವ ಬೆಳಕಿನಷ್ಟು ಪ್ರಭೆಯುಳ್ಳವಳಾಗಿ ಕಾಣಿಸುತ್ತಾಳೆ. ಉದಯಿಸುವ ಸೂರ್ಯನ ಬಣ್ಣವು ಕೆಂಪು. ಲಲಿತಾಂಬಿಕೆಯ ಮೈಬಣ್ಣವು ಸಹಸ್ರನಾಮದ ಧ್ಯಾನ ಶ್ಲೋಕದ ಕಂತಿನಲ್ಲಿ ವಿವರಿಸಿರುವಂತೆ ಕೆಂಪಾಗಿರುತ್ತದೆ (ಸಕುಂಕುಮ ವಿಲೇಪನಾಮ್). ಎಲ್ಲಾ ತಂತ್ರ ಶಾಸ್ತ್ರಗಳು ಹಾಗೂ ಪುರಾತನ ಗ್ರಂಥಗಳು ಅವಳ ಮೈಕಾಂತಿಯು ಕೆಂಪೆಂದೇ ಸಾರುತ್ತವೆ.
ಈ ಹಿಂದಿನ ನಾಮಾವಳಿಯಲ್ಲಿ ಅವಳ ಪ್ರಕಾಶ ರೂಪದ ಕುರಿತಾಗಿ ಚರ್ಚಿಸಿದರೆ ಈ ನಾಮದಲ್ಲಿ ಅವಳ ವಿಮರ್ಶಾ ರೂಪದ ಬಗ್ಗೆ ವಿವರಿಸಲಾಗುತ್ತಿದೆ. ಅವಳಿಗೆ ಮೂರು ರೂಪಗಳಿವೆ - ಪ್ರಕಾಶ ಅಥವಾ ಸೂಕ್ಷ್ಮ ರೂಪ, ವಿಮರ್ಶಾ ಅಥವಾ ಭೌತಿಕ ರೂಪ ಮತ್ತು ಪರಾ ರೂಪ ಅಥವಾ ಅತ್ಯುನ್ನತ ರೂಪ. ಅವಳ ಪ್ರಕಾಶ ರೂಪವು ವಿವಿಧ ರೀತಿಯ ಮಂತ್ರಗಳಿಂದ ಮಾಡಲ್ಪಟ್ಟಿದೆ ಎಂದು ಹೇಳುತ್ತಾರೆ; ಅದರಲ್ಲಿ ಪರಮೋನ್ನತವಾದದ್ದು ಮಹಾ ಷೋಡಶೀ ಮಂತ್ರ. ಅವಳ ವಿಮರ್ಶಾ ರೂಪವು ಅವಳ ಭೌತಿಕ ರೂಪವಾಗಿದ್ದು ಅವಳನ್ನು ಸಾವಿರಾರು ರೂಪಗಳಲ್ಲಿ ಪೂಜಿಸಲಾಗುತ್ತದೆ. ಅವಳ ಪರಾ ರೂಪವನ್ನು ಕೇವಲ ಮಾನಸಿಕ ಪೂಜೆಯಿಂದ ಗ್ರಹಿಸಬಹುದು. ಈ ಭೌತಿಕ ರೂಪಗಳು ಮತ್ತು ಅವುಗಳಿಗೆ ಸಂಭಂದಿಸಿರುವ ಕೆಂಪು ವರ್ಣವು ಅವಳನ್ನು ಸುಲಭವಾಗಿ ಧ್ಯಾನಿಸುವ ಸಾಧನಗಳಾಗಿವೆ. ಮುಂದಿನ ನಾಮಾವಳಿಗಳಲ್ಲಿ ಅವಳ ಭೌತಿಕ ರೂಪವನ್ನು ಕುರಿತು ವರ್ಣಿಸಲಾಗಿದೆ. ಕೆಂಪು ವರ್ಣವು ಕಾಳಜಿಯನ್ನು ಸಹ ಪ್ರತಿನಿಧಿಸುತ್ತದೆ. ದೇವಿಯು ತನ್ನ ಭಕ್ತರನ್ನು ಬಹಳಷ್ಟು ಪ್ರೀತಿ ಮತ್ತು ಅಕ್ಕರೆಗಳಿಂದ ತಾಯಿಯಂತೆ ನೋಡುತ್ತಾಳೆ.
ಕೃಷ್ಣನು ಭಗವದ್ಗೀತೆಯ ೧೧ನೇ ಅಧ್ಯಾಯದ ಹನ್ನೆರಡನೇ ಶ್ಲೋಕದಲ್ಲಿ, "ನೂರು ಸಾವಿರ ಸೂರ್ಯರು ಒಮ್ಮೆಲೇ ಆಕಾಶದಲ್ಲಿ ಉದಯಿಸಿದಾಗ ಅವುಗಳ ಕಿರಣಗಳಿಂದುಟಾಗುವ ಪ್ರಕಾಶಕ್ಕೆ ಸಮಾನವಾದುದು ಆ ಪರಮಾತ್ಮನ ವಿಶ್ವರೂಪದ ಪ್ರಭೆ" ಎನ್ನುತ್ತಾನೆ.
Caturbāhu-samanvitā चतुर्बाहु-समन्विता (7)
೭. ಚತುರ್ಬಾಹು-ಸಮನ್ವಿತಾ
ಲಲಿತಾಂಬಿಕೆಯ ಭೌತಿಕ ರೂಪದ ವರ್ಣನೆಯು ಈ ನಾಮದಿಂದ ಪ್ರಾರಂಭವಾಗುತ್ತದೆ. ಅವಳಿಗೆ ನಾಲ್ಕು ಕೈಗಳಿವೆ. ಈ ನಾಲ್ಕು ಕೈಗಳು ಅವಳ ಮಂತ್ರಿಗಳನ್ನು ಪ್ರತಿನಿಧಿಸುತ್ತವೆ ಮತ್ತು ಅವರ ಮೂಲಕ ದೇವಿಯು ಪರಿಪಾಲನೆಯನ್ನು ಕೈಗೊಳ್ಳುತ್ತಾಳೆ. ಅವಳಿಗೆ ಸಹಾಯಕರಾಗಿರುವ ಮಂತ್ರಿಣಿಯರು ಅಥವಾ ದೇವಿಯರ ವರ್ಣನೆಯು ಮುಂದಿನ ನಾಲ್ಕು ಶ್ಲೋಕಗಳಲ್ಲಿ ಸಿಗುತ್ತದೆ.
Rāgasvarūpa-pāśāḍhyā रागस्वरूप-पाशाढ्या (8)
೮. ರಾಗಸ್ವರೂಪ-ಪಾಶಾಢ್ಯಾ
ರಾಗವೆಂದರೆ ಆಸೆ ಅಥವಾ ಬಯಕೆ. ಪಾಶವು ಹಗ್ಗದ ಕುಣಿಕೆಯಾಗಿದ್ದು ಅದನ್ನು ವಸ್ತುಗಳನ್ನು ಸೆಳೆದುಕೊಳ್ಳಲು ಉಪಯೋಗಿಸುತ್ತಾರೆ. ದೇವಿಯು ತನ್ನ ಭಕ್ತರೆಲ್ಲರ ಆಸೆಗಳನ್ನು ಈ ಪಾಶದ ಮೂಲಕ ತನ್ನೆಡೆಗೆ ಸೆಳೆದುಕೊಳ್ಳುತ್ತಾಳೆ. ದೇವಿಗೆ ಮೂರು ವಿಧವಾದ ಶಕ್ತಿಗಳಿವೆ - ಇಚ್ಛಾ, ಜ್ಞಾನ ಮತ್ತು ಕ್ರಿಯಾ. ಈ ನಾಮವು ಅವಳ ಇಚ್ಛಾ ಶಕ್ತಿಯನ್ನು ಅಥವಾ ಆಸೆಯನ್ನು ಕುರಿತಾಗಿ ಹೇಳುತ್ತದೆ. ದೇವಿಯು ತನ್ನ ಭಕ್ತರು ಆಸೆಯಲ್ಲಿ ಮುಳುಗಲು ಯಾವಾಗಲೂ ಬಿಡುವುದಿಲ್ಲ. ಇದು ಅವಳ ಮೇಲಿನ ಎಡಗೈಯಾಗಿದ್ದು ಇದನ್ನು ಅಶ್ವಾರೂಢಾ ದೇವಿಯು ಪ್ರತಿನಿಧಿಸುತ್ತಾಳೆ.
Krodhākāraṅkuśojvalā क्रोधाकारङ्कुशोज्वला (9)
೯.ಕ್ರೋಧಾಕಾರಙ್ಕುಶೋಜ್ವಲಾ (ಕ್ರೋಧಾಕಾರಂಕುಶೋಜ್ವಲಾ)
ಅವಳು ಆನೆಯನ್ನು ಪಳಗಿಸಲು ಉಪಯೋಗಿಸುವ ಅಂಕುಶವನ್ನು ತನ್ನ ಮೇಲಿನ ಬಲಗೈಯಲ್ಲಿ ಹಿಡಿದಿದ್ದಾಳೆ. ಕ್ರೋಧವೆಂದರೆ ದ್ವೇಷ ಮತ್ತು ಅಕಾರವೆಂದರೆ ಜ್ಞಾನ. ಈ ನಾಮವು ಸೂಕ್ಷ್ಮ ಶರೀರದ ಕುರಿತಾಗಿ ಹೇಳುತ್ತದೆ. ಜ್ಞಾನವು ಯಾವಾಗಲೂ ಸೂಕ್ಷ್ಮವಾಗಿರುತ್ತದೆ. ದೇವಿಯು ಅಂಕುಶವನ್ನು ಉಪಯೋಗಿಸಿ ತನ್ನ ಭಕ್ತರಲ್ಲಿ ಉಂಟಾಗಬಹುದಾದ ದ್ವೇಷಾಸೂಯೆಗಳನ್ನು ನಾಶಮಾಡಿ ಅವರಿಗೆ ಜ್ಞಾನವನ್ನು ಪ್ರಸಾದಿಸುತ್ತಾಳೆ. ಕಾಳಿಕಾದೇವಿಯ ಒಂದು ಬೀಜಾಕ್ಷರವಾದ ಕ್ರೋಮ್(क्रों) ಎನ್ನುವುದು ಈ ನಾಮದಲ್ಲಿ ಹುದುಗಿದೆ. ಕಾಳಿಯು ಎಲ್ಲಾ ವಿಧವಾದ ಕೆಡಕುಗಳನ್ನು ನಾಶಮಾಡುವವಳು. ಲಲಿತಾಂಬಿಕೆಯ ಈ ಮೇಲಿನ ಬಲಗೈಯ್ಯನ್ನು ಸಂಪತ್ಕರೀ ದೇವಿಯು ಪ್ರತಿನಿಧಿಸುತ್ತಾಳೆ.
Manorūpekṣu-kodaṇḍā मनोरूपेक्षु-कोदण्डा (10)
೧೦. ಮನೋರೂಪೇಕ್ಷು-ಕೋದಂಡಾ
ಮನಸ್ಸು ಸಂಕಲ್ಪ ಮತ್ತು ವಿಕಲ್ಪ ಎರಡನ್ನೂ ಒಳಗೊಂಡಿರುತ್ತದೆ. ಸಂಕಲ್ಪವೆಂದರೆ ದೃಢ ನಿರ್ಧಾರ ಮತ್ತು ಆಲೋಚನೆಗಳನ್ನು ಪರಿಷ್ಕರಿಸು/ಸಂಸ್ಕರಿಸು ಎನ್ನುವ ಅರ್ಥಗಳಿವೆ. ವಿಕಲ್ಪವೆಂದರೆ ಗ್ರಹಿಕೆಯಲ್ಲಿನ ವ್ಯತ್ಯಾಸ. ಇವೆರಡೂ ಒಂದಕ್ಕೊಂದು ವಿರುದ್ಧವಾದವುಗಳು. ಮನಸ್ಸು ಕೂಡಾ ಜ್ಞಾನದಂತೆ ಸೂಕ್ಷ್ಮವಾದದ್ದು. ಮನಸ್ಸು ಐದು ಗ್ರಹಣೇಂದ್ರಿಯಗಳ ಮೂಲಕ ವ್ಯಕ್ತವಾಗುತ್ತದೆ. ಮನಸ್ಸಿಗೆ ಸಂಕಲ್ಪ ಮತ್ತು ವಿಕಲ್ಪ ಎರಡೂ ಗುಣಗಳಿವೆ; ಅದು ಗ್ರಹಣೇಂದ್ರಿಯಗಳಿಂದ ಒಡಮೂಡಿದ ಗ್ರಹಿಕೆಗಳನ್ನು ಆಲೋಚನೆಯ ಮೂಲಕ ಅವನ್ನು ಸ್ಪಷ್ಟವಾಗಿಸಿ; ಅಂತಿಮವಾಗಿ ಕ್ರಿಯೆಗಳ ಮೂಲಕ ಸ್ಪೋಟಿಸುತ್ತದೆ. ಇಕ್ಷು ಎಂದರೆ ಕಬ್ಬು ಮತ್ತು ಕೋದಂಡವೆಂದರೆ ಬಿಲ್ಲು. ದೇವಿಯು ತನ್ನ ಕೆಳ ಎಡಗೈಯ್ಯಲ್ಲಿ ಕಬ್ಬಿನ ಜಲ್ಲೆಯ ಬಿಲ್ಲನ್ನು ಹಿಡಿದಿದ್ದಾಳೆ. ಕಬ್ಬಿನ ಬಿಲ್ಲೇ ಏಕೆ? ಕಬ್ಬಿನ ಜಲ್ಲೆಯನ್ನು ಹಿಂಡಿದರೆ ಅದರಿಂದ ಸಿಹಿಯಾದ ಮತ್ತು ರುಚಿಕರವಾದ ರಸವು ಸಿಗುತ್ತದೆ ಮತ್ತು ಅದರಿಂದ ಸಕ್ಕರೆಯನ್ನು ತಯಾರಿಸುತ್ತಾರೆ. ಇದರ ಅರ್ಥವೇನೆಂದರೆ ಒಬ್ಬನ್ನು ತನ್ನ ಮನಸ್ಸನ್ನು ಹಿಂಡಿದರೆ (ಅಂದರೆ ನಿಗ್ರಹಿಸಿಕೊಂಡರೆ), ಅವನಿಗೆ ಪರಬ್ರಹ್ಮನ ಸಿಹಿಯಾದ ಅನುಭವವಾಗುತ್ತದೆ. ಈ ಕೈಯ್ಯನ್ನು ಶ್ಯಾಮಲಾ ದೇವಿ ಎಂದೂ ಕರೆಯಲ್ಪಡುವ ಮಂತ್ರಿಣೀ ದೇವಿಯು ಪ್ರತಿನಿಧಿಸುತ್ತಾಳೆ.
Pañcatanmātra-sāyakā पञ्चतन्मात्र-सायका (11)
೧೧. ಪಂಚತನ್ಮಾತ್ರ-ಸಾಯಕಾ
ಪಂಚ ಎಂದರೆ ಐದು ಮತ್ತು ತನ್ಮಾತ್ರೆಗಳೆಂದರೆ ಪಂಚಭೂತಗಳಾದ ಆಕಾಶ, ವಾಯು, ಅಗ್ನಿ, ನೀರು ಮತ್ತು ಭೂಮಿ ಇವುಗಳ ಸೂಕ್ಷ್ಮರೂಪದ ರೂಪಾಂತರಗಳು; ಅವುಗಳಾವುವೆಂದರೆ - ಶಬ್ದ, ಸ್ಪರ್ಶ, ದೃಷ್ಟಿ (ರೂಪ) ರುಚಿ (ರಸ) ಮತ್ತು ಗಂಧ.
ಮೊದಲಿನ ನಾಮವು ಧನುಸ್ಸಿನ ಬಗ್ಗೆ ಹೇಳಿದರೆ ಈ ನಾಮವು ದೇವಿಯ ಬಾಣಗಳ ಕುರಿತಾಗಿದೆ. ಅವಳ ಬಳಿ ಐದು ಬಾಣಗಳಿವೆ ಮತ್ತು ಈ ಐದೂ ಬಾಣಗಳು ಹೂವುಗಳಿಂದ ಮಾಡಲ್ಪಟ್ಟಿವೆ. ಈ ಐದು ಹೂಬಾಣಗಳು ಪಂಚ ತನ್ಮಾತ್ರಗಳನ್ನು ಪ್ರತಿನಿಧಿಸುತ್ತವೆ. ಈ ಐದು ಹೂವಿನ ಬಾಣಗಳನ್ನು ವಿವಿಧ ತಂತ್ರ ಶಾಸ್ತ್ರಗಳು ಹಲವಾರು ರೀತಿಯಲ್ಲಿ ವರ್ಣಿಸುತ್ತವೆ. ಈ ಐದು ಹೂವುಗಳೆಂದರೆ ಕಮಲ, ರಕ್ತಕೈವರ, ಕಲ್ಹಾರ, ಇಂದಿವರ ಮತ್ತು ಮಾವಿನ ಮರದ ಹೂವು. ಈ ಐದು ಹೂವುಗಳು ಆನಂದ, ಹುಚ್ಚುತನ, ಗೊಂದಲ, ಪ್ರೇರಣೆ, ಮತ್ತು ವಿನಾಶಗಳನ್ನು ಪ್ರತಿನಿಧಿಸುತ್ತವೆ. ಸಾಮಾನ್ಯವಾಗಿ ಬಾಣಗಳನ್ನು ಶತ್ರುಗಳನ್ನು ಗುರಿಯಾಗಿರಿಸಿಕೊಂಡು ಯುದ್ಧದಲ್ಲಿ ಉಪಯೋಗಿಸುತ್ತಾರೆ. ಲಲಿತಾಂಬಿಕೆಯು ತನ್ನ ಭಕ್ತರನ್ನು ಗುರಿಯಾಗಿರಿಸಿಕೊಂಡು ಈ ಐದು ಬಾಣಗಳನ್ನು ಹೂಡುತ್ತಾಳೆ ಮತ್ತು ಅವುಗಳ ಮೂಲಕ ಮಾಯೆಯನ್ನು ನಾಶಮಾಡುತ್ತಾಳೆ ಏಕೆಂದರೆ ಈ ಐದು ತನ್ಮಾತ್ರಗಳು ಮನಸ್ಸಿನೊಂದಿಗೆ ಸಂಭಂದಹೊಂದಿವೆ. ಇದನ್ನು ಅವಳು ತನ್ನ ಕೆಳ ಬಲಗೈಯ್ಯಲ್ಲಿ ಹಿಡಿದಿದ್ದಾಳೆ. ವಾರಾಹಿ ದೇವಿಯು ಈ ಕೈಯ್ಯನ್ನು ಪ್ರತಿನಿಧಿಸುತ್ತಾಳೆ.
೮,೯,೧೦ ಮತ್ತು ೧೧ನೇ ನಾಮಗಳಲ್ಲಿ ರಹಸ್ಯವಾದ ಬೀಜಾಕ್ಷರಗಳು ಹುದುಗಿವೆ. ಉದಾಹರಣೆಗೆ, ಎಂಟನೇ ನಾಮದಲ್ಲಿ ಹ್ರೀಂ (ह्रीं) ಬೀಜಾಕ್ಷರವು ಅಡಗಿದೆ ಇದನ್ನು ಮಾಯಾಬೀಜವೆನ್ನುತ್ತಾರೆ. ಎಂಟನೆಯ ನಾಮವು ರಾಗಸ್ವ ಎಂದು ಪ್ರಾರಂಭವಾಗುತ್ತದೆ, ರ+ಅಗ+ಸ್ವ. ‘ಅಗ’ ಎಂದರೆ ಶಿವ ಮತ್ತು ಅವನ ಬೀಜವು ಹಾಂ (हां). ಇದನ್ನು ಹ ಎಂದು ತೆಗೆದುಕೊಳ್ಳಬೇಕು. ಮುಂದಿನದು ರ(र) ಮತ್ತು ಇದನ್ನು ಅದೇ ವಿಧದಲ್ಲಿ ತೆಗೆದುಕೊಳ್ಳಬೇಕು. ಸ್ವ ಎಂದರೆ ಈಂ(ईं), ಈ ಅಕ್ಷರದ ಮೇಲೆ ಬಿಂದು (ಚುಕ್ಕೆ) ಇದೆ ಎನ್ನುವುದನ್ನು ಗಮನಿಸಬೇಕು. ಆದ್ದರಿಂದ, ಹ+ರ+ಈಂ=ಹ್ರೀಂ ಮೂಲಕ ಹ್ರೀಂ ಬೀಜಾಕ್ಷರವು ಉಂಟಾಗುತ್ತದೆ. ಇದೇ ರೀತಿ ಉಳಿದ ಮೂರು ನಾಮಾವಳಿಗಳಲ್ಲಿ ಬೀಜಾಕ್ಷರಗಳಾದ - ’ದ,ರ,ಕ,ಲ,ಯ,ಸ,ವ, ಆ, ಈ, ಊ’ಗಳು ರಹಸ್ಯವಾಗಿ ಹುದುಗಿವೆ. ಆದ್ದರಿಂದ ಲಲಿತಾ ಸಹಸ್ರನಾಮವು ವೇದಗಳಿಗೆ ಸಮಾನವಾದುದೆಂದು ಪರಿಗಣಿತವಾಗಿದೆ. ಮುಖ್ಯವಾಗಿ ನೆನಪಿಡಬೇಕಾದದ್ದೇನೆಂದರೆ ಈ ಸಹಸ್ರನಾಮವನ್ನು ರಾಗ ಅಥವಾ ಸಂಗೀತದ ಸ್ವರಗಳ ಮೂಲಕ ಹಾಡಬಾರದು.
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 6-11 http://www.manblunder.com/2009/07/lalitha-sahasranamam-6-11.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೧೧.ಲಲಿತಾ ಸಹಸ್ರನಾಮ ೬ ರಿಂದ ೧೧ರ ವಿವರಣೆ
ಶ್ರೀಧರರೆ, ಹತ್ತರ ನಂತರ ನಾಮವಳಿಯ ಹನ್ನೊಂದನ್ರೆ ಕಂತನ್ನು ಸೇರಿಸುತ್ತಿದ್ದೇನೆ, ಪರಿಷ್ಕರಣೆ-ತಿದ್ದುಪಡಿಗೆ. ಈ 9-10-11 ಪರಿಷ್ಕರಿಸಿ ಮುಗಿದ ಮೇಲೆ ಮುಂದಿನದನ್ನು ಸೇರಿಸುತ್ತೇನೆ. :-)
.
೧೧. ಲಲಿತಾ ಸಹಸ್ರನಾಮ ವಿವರಣೆ
.
ಲಲಿತಾ ಸಹಸ್ರನಾಮ ೬ರಿಂದ ೧೧
_____________________________
.
೬. ಉದ್ಯದ್ಭಾನು-ಸಹಸ್ರಾಭಾ
ಅಗಣಿತ ಅರುಣೋದಯ ದಿನಮಣಿಯಷ್ಟು ಪ್ರಭೆ
ಕುಂಕುಮ ಲೇಪಿತ ಕೆಂಪಿನ ಮೈಕಾಂತೀ ಸೊಬಗೆ
ಭೌತಿಕ ರೂಪವಾಗಿಸಿ ಸುಲಭ ಧ್ಯಾನದಾ ಮಾರ್ಗ
ಸೂಕ್ಷ್ಮರೂಪಕೆ ಮಂತ್ರ ಪರಾರೂಪಕೆ ಮನದ ಜಗ ||
.
೭. ಚತುರ್ಬಾಹು ಸಮನ್ವಿತ
ದೇವಿ ಲಲಿತಾಂಬಿಕೆ ಭೌತಿಕ ರೂಪ ಸುನೀತ
ಚತುರ್ಭುಜ ಬಾಹುಗಳಲಿ ದೇವಿ ರಾರಾಜಿತ
ಪ್ರತಿ ಕರವು ಪ್ರತಿನಿಧಿಸೆ ಲಲಿತೆಗೆ ಮಂತ್ರಿಣಿ
ಸಹಾಯದೆ ಜಗ ಪರಿಪಾಲಿಸಿ ಮಾತೆ ವಾಣಿ ||
.
೮. ರಾಗಸ್ವರೂಪ-ಪಾಶಾಢ್ಯ
ಆಶಾ ಪಾಶದ ಕುಣಿಕೆ ಸೆಳೆಯುವ ಹಗ್ಗ
ಭಕ್ತರಾಸೆಯೆಲ್ಲ ಪಾಶದೀ ಸೆಳೆವ ಸೊಗ
ಅಶ್ವಾರೂಢಾದೇವಿ ಪ್ರತಿನಿಧಿಸೊ ಎಡಗೈ
ಇಚ್ಚಾಶಕ್ತಿ ಬಳಸಿ ಆಸೆ ಮರೆಸೊ ತಾಯಿ ||
.
೯. ಕ್ರೋಧಾಕಾರಂಕುಶೋಜ್ವಲಾ
ಬಲದ ಕೈ ಪ್ರತಿನಿಧಿಸೊ ಸಂಪತ್ಕರಿದೇವಿ ಕೆಲಸ
ಭಕ್ತರ ಕ್ರೋಧ ದ್ವೇಷಾಸೂಯೆ ನಶಿಸುವ ಅಂಕುಶ
ಜ್ಞಾನ ಪ್ರಸಾದಿತೆ ದೇವಿಯ ಸೂಕ್ಷ್ಮಶರೀರ ನಾಮ
ಭಕ್ತ ಜನರೆಲ್ಲರ ಕೆಡುಕು ಕಾಳಿಯಾಗಿ ನಿರ್ನಾಮ ||
.
೧೦. ಮನೋರೂಪೇಕ್ಷು-ಕೋದಂಡಾ
ಮನ ಸಂಕಲ್ಪ ವಿಕಲ್ಪ ಗುಣಗಳ ತಾಣ, ಸೂಕ್ಷ್ಮತೆ ಜ್ಞಾನ
ಇಂದ್ರೀಯಗ್ರಹಣ ಸ್ಪಷ್ಟಾಲೋಚನ ಕ್ರಿಯಾಸ್ಪೋಟ ತಾಣ
ಕೆಳಎಡಗೈ ಕಬ್ಬಿನ ಬಿಲ್ಲೆ ಹಿಂಡಿದರೆ ಸಿಹಿ ಪರಬ್ರಹ್ಮ ಜಲ್ಲೆ
ಶ್ಯಾಮಲದೇವಿ ಪ್ರತಿನಿಧಿಸುವ ಕೈ, ಮನ ನಿಗ್ರಹ ಕಾವಲೆ ||
.
೧೧. ಪಂಚತನ್ಮಾತ್ರಾ-ಸಾಯಕ
ಶಬ್ದ ಸ್ಪರ್ಶ ರೂಪ ರಸ ಗಂಧ ತನ್ಮಾತ್ರೆ ಸೂಕ್ಷ್ಮ ಸಂಬಂಧ
ಹೂವ್ವಾಗಿ ವಿನಾಶ ಪ್ರೇರಣೆ ಗೊಂದಲ ಹುಚ್ಚುತನ ಆನಂದ
ಪಂಚಪುಷ್ಪಬಾಣತನ್ಮಾತ್ರ ಮಾಯವಿನಾಶ ಕೆಳ ಬಲದಕೈ
ಪ್ರತಿನಿಧಿಸಿ ವಾರಾಹಿದೇವಿ ಭಕ್ತರ ಸಲಹಿ ಲಲಿತಾಮಯಿ ||
.
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು