೧೧೧. ಲಲಿತಾ ಸಹಸ್ರನಾಮ ೪೨೨ರಿಂದ ೪೨೩ನೇ ನಾಮಗಳ ವಿವರಣೆ

೧೧೧. ಲಲಿತಾ ಸಹಸ್ರನಾಮ ೪೨೨ರಿಂದ ೪೨೩ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೪೨೨-೪೨೩

Sandhyā सन्ध्या (422)

೪೨೨. ಸಂಧ್ಯಾ

             ಸಂಧ್ಯಾ ಎಂದರೆ ಪ್ರತ್ಯೇಕರಾಹಿತ್ಯತೆ. ಅದರ ಅರ್ಥವೇನೆಂದರೆ ನಮ್ಮ ಮನಸ್ಸು ಮತ್ತು ಸೂರ್ಯನಲ್ಲಿದೆ ಎಂದು ಹೇಳಲಾಗಿರುವ ಚೈತನ್ಯದ ಪ್ರತ್ಯೇಕರಾಹಿತ್ಯತೆ. ಚೈತನ್ಯವೆಂದರೆ ಬೇರೇನೂ ಅಲ್ಲದೆ ಅದು ಚಿತ್ (ಪರಿಶುದ್ಧವಾದ ಪ್ರಜ್ಞೆ), ಯಾವುದು ಚಟುವಟಿಕೆಯ ಹಂತದಲ್ಲಿ ಇದೆಯೋ ಅದು; ಇದನ್ನಾಗಲೇ ನಾಮ ೪೧೬ರ ಚರ್ಚೆಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಬಾಹ್ಯವಾಗಿ ಇಂದ್ರಿಯಗಳ ಮೂಲಕ ಉಂಟಾಗುವ ಅನುಭವ ಮತ್ತು ಆಂತರಿಕವಾಗಿ ಮನಸ್ಸಿನಲ್ಲಿ ಉಂಟಾಗುವ ಅನುಭವಗಳೆರಡೂ ಈ ಚಿತ್ ಅಥವಾ ಪ್ರಜ್ಞೆಯಲ್ಲಿಯೇ ಉಂಟಾಗುತ್ತವೆ. ಇಲ್ಲಿಯೇ ವಸ್ತು ಮತ್ತು ವಿಷಯ ಪ್ರಪಂಚಗಳೆರಡೂ ಅನುಭವವಾಗಿ ಅಭಿವೃದ್ಧಿ ಹೊಂದುವುದು. ಆದ್ದರಿಂದ ಪ್ರಜ್ಞೆಯನ್ನು ಎಲ್ಲಾ ವಿಧವಾದ ಅನುಭವಗಳು ಉಂಟಾಗುವ ಸ್ಥಳವೆಂದು ಕರೆಯಬಹುದು. ಇದನ್ನೇ ವೇದಾಂತವು ಬ್ರಹ್ಮವೆಂದರೆ, ವಿಜ್ಞಾನವು ಅದನ್ನು ಪ್ರಜ್ಞೆಯೆನ್ನುತ್ತದೆ. ಅದ್ವೈತವು ಹಲವಾರು ಹೆಸರುಗಳಿಂದ ಕರೆಯಲ್ಪಡುತ್ತದೆ ಮತ್ತುವುಗಳಲ್ಲಿ ಸಂಧ್ಯಾ ಕೂಡಾ ಒಂದು. ಈ ಬ್ರಹ್ಮಾಂಡದಲ್ಲಿ ಅಸ್ತಿತ್ವದಲ್ಲಿರುವ ಸಮಸ್ತವೂ ಕೇವಲ ಈ ಚಿತ್ ಅಥವಾ ಬ್ರಹ್ಮದ ರೂಪಾಂತರವಾಗಿದೆ. ಸೂರ್ಯನೇ ತನ್ನ ಬೆಳಕನ್ನು ಸ್ವಯಂ-ಪ್ರಕಾಶಿತ ಬ್ರಹ್ಮದಿಂದ ಪಡೆಯುತ್ತಾನೆ ಎಂದು ಹೇಳಿದ ಮೇಲೆ ಸೂರ್ಯನನ್ನೇ ಚೈತನ್ಯವೆಂದು ಏಕೆ ಕರೆಯಲಾಗುತ್ತದೆ? ಇದಕ್ಕೆ ಉತ್ತರ ಸ್ಪಷ್ಟವಿದೆ. ಭೂಮಿಯು ಸೂರ್ಯನಿಲ್ಲದಿದ್ದರೆ ಅಸ್ತಿತ್ವದಲ್ಲಿರದು ಎನ್ನುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಎರಡನೆಯದಾಗಿ ಸೂರ್ಯನು ನಮ್ಮ ಕಣ್ಣಿಗೆ ಕಾಣಿಸುತ್ತಾನೆ. ನಮ್ಮಲ್ಲಿ ಬಹುತೇಕರಿಗೆ ನಿರಾಕಾರ ಬ್ರಹ್ಮವನ್ನು ಕಲ್ಪಸಿಕೊಳ್ಳಲು ಕಷ್ಟವಾಗಿರುವುದರಿಂದ ಅದನ್ನು ಸುಲಭವಾಗಿ ಕಲ್ಪಿಸಿಕೊಳ್ಳಲು ಬ್ರಹ್ಮದ ಮೂಲವನ್ನು ಸೂರ್ಯನೆಂದೂ ಮತ್ತದರ ಕಿರಣಗಳನ್ನು ಬ್ರಹ್ಮದ ವಿವಿಧ ಸೃಷ್ಟಿಗಳನ್ನು ಸೂಚಿಸಲು ಉಲ್ಲೇಖಿಸಲಾಗುತ್ತದೆ. ಸೂರ್ಯೋದಯ ಮತ್ತು ಸೂರ್ಯಾಸ್ತ ಎರಡನ್ನೂ ಸಂಧ್ಯಾ ಎಂದು ಕರೆಯಲಾಗುತ್ತದೆ. ಈ ಕಾಲದಲ್ಲಿ ಧ್ಯಾನವನ್ನು ಕೈಗೊಳ್ಳುವುದರಿಂದ ಪ್ರತ್ಯೇಕರಾಹಿತ್ಯತೆಯನ್ನು ಕಂಡುಕೊಳ್ಳವುದಕ್ಕೆ ಅವಶ್ಯವಾದ ಉತ್ತೇಜಕತೆಯು (ಪ್ರಚೋದನೆಯು) ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಶಿವ ಸೂತ್ರವು (೩.೨೫)  ಈ ವಿಧವಾದ ಪ್ರತ್ಯೇಕರಾಹಿತ್ಯತೆಯ ಫಲಗಳನ್ನು ಆದೇಶಾತ್ಮಕವಾಗಿ ಹೇಳುತ್ತದೆ. ಅದು, "ಶಿವತುಲ್ಯೋ ಜಾಯತೇ (शिवतुल्यो जायते)" ಎಂದು ಹೇಳುತ್ತದೆ. ಈ ಸೂತ್ರವು ಸಾಕ್ಷಾತ್ಕಾರ ಪಡೆಯುವ ಅಂತಿಮ ದಶೆಗಳಲ್ಲಿರುವ ಒಬ್ಬ ಯೋಗಿಯ ಕುರಿತಾಗಿ ಹೇಳುತ್ತದೆ. ಆ ಯೋಗಿಯು ಶಿವನಲ್ಲಿ ಸಾಯುಜ್ಯವನ್ನು ಹೊಂದಿರುವುದಿಲ್ಲ ಆದರೆ ಅವನು ಶಿವನ ಸ್ವರೂಪದಂತೆ ಇರುತ್ತಾನೆ. ಶಿವನ ಸ್ವರೂಪದಲ್ಲಿರುವುದು ಮತ್ತು ಶಿವನಲ್ಲಿ ಐಕ್ಯವಾಗಿರುವುದಕ್ಕೆ ಮಹತ್ವದ ವ್ಯತ್ಯಾಸವಿದೆ. ಶಿವನಲ್ಲಿ ಸಾಯುಜ್ಯವನ್ನು ಹೊಂದುವುದು ಕೇವಲ ಅಂತಿಮ ದಶೆಯಾದ ಕೈವಲ್ಯ ಸ್ಥಿತಿಯಲ್ಲಿ ಮಾತ್ರವೇ ಸಾಧ್ಯ.

           ಆದ್ದರಿಂದ ಈ ಪ್ರತ್ಯೇಕರಾಹಿತ್ಯತೆ ಎಂದರೆ ನಮ್ಮ ಮನಸ್ಸು ಮಾಯೆಯ ದುಷ್ಪ್ರಭಾವಗಳನ್ನು ನಾಶಗೊಳಿಸಿ ಕೊಂಡು ಪರಬ್ರಹ್ಮದೊಂದಿಗೆ ಏಕವಾಗಿರಬೇಕು - ದ್ವಂದತೆಯ ವಿನಾಶವನ್ನು ಈ ನಾಮದಲ್ಲಿ ಒತ್ತುಕೊಟ್ಟು ಹೇಳಲಾಗಿದೆ. ಸಂಧ್ಯಾ ಎನ್ನುವುದು ಶಿವನ ಕ್ರಿಯಾಶೀಲ(ಚಲನಶೀಲ) ಶಕ್ತಿಯಾಗಿದ್ದು ಅದು ಬ್ರಹ್ಮದ ವಿಮರ್ಶ ರೂಪವಾಗಿದೆ. ಬ್ರಹ್ಮದ ಪ್ರಕಾಶ ರೂಪವು ಶಿವ ಎನ್ನುವುದನ್ನು ನೆನಪಿಡಿ.

          ಸಂಧ್ಯಳು ಸೃಷ್ಟಿಕರ್ತನಾದ ಬ್ರಹ್ಮನ ಮಗಳು ಎಂದು ಹೇಳುವ ಕಥೆಯೊಂದಿದೆ. ಬ್ರಹ್ಮನು ಧ್ಯಾನ ಮಗ್ನನಾಗಿದ್ದಾಗ ಆಕೆಯು ಜನಿಸಿದಳು. ಆಕೆಯು ಪರಮೋನ್ನತವಾದ ತಪವನ್ನು ಕೈಗೊಂಡು ವಶಿಷ್ಠ ಮಹರ್ಷಿಗಳ ಪತ್ನಿಯಾದ ಆರುಂಧತಿಯಾಗಿ ಹುಟ್ಟಲು ತನ್ನ ನಶ್ವರ ಶರೀರವನ್ನು ತ್ಯಜಿಸಿದಳು. (ಆರುಂಧತಿಯು ಪಾಶ್ಚಿಮಾತ್ಯರು ಅಲ್ಕೋರ್ ನಕ್ಷತ್ರವೆಂದು ಕರೆಯುವ ಭಾಗಶಃ ಕಾಣಿಸುವ ಚಿಕ್ಕ ನಕ್ಷತ್ರವಾಗಿದ್ದು ಇದು ಗ್ರೇಟ್ ಬೇರ್ ನಕ್ಷತ್ರ ಪುಂಜ ಅಥವಾ ಸಪ್ತರ್ಷಿ ಮಂಡಲಕ್ಕೆ ಸೇರಿದ ನಕ್ಷತ್ರವಾಗಿದೆ. ಆ ಸಪ್ತ ನಕ್ಷತ್ರಗಳ ಅಥವಾ ಏಳು ನಕ್ಷತ್ರಗಳ ಮೂರ್ತರೂಪವೇ ಏಳು ಋಷಿಗಳು ಮತ್ತು ಅವರ ಮುಖ್ಯಸ್ಥರು ಮಹರ್ಷಿ ವಶಿಷ್ಠರು). 

          ಕುಂಡಲಿನೀ ಧ್ಯಾನದಲ್ಲಿ ಮೂರು ಮುಖ್ಯವಾದ ನಾಡಿಗಳಾದ ಇದಾ, ಪಿಂಗಳ ಮತ್ತು ಸುಷುಮ್ನಾ ಇವುಗಳು ಸಮಾಗಮವಾಗುವ ಸ್ಥಾನಕ್ಕೆ ಸಂಧ್ಯಾ ಎಂದು ಹೆಸರು ಏಕೆಂದರೆ ಸಂಧ್ಯಾ ಎಂದರೆ ಕೂಡುವುದು ಎಂದೂ ಅರ್ಥವಿದೆ.

Dvijabṛnda-niṣevitā द्विजबृन्द-निषेविता (423)

೪೨೩. ದ್ವಿಜಬೃಂದ-ನಿಷೇವಿತಾ

            ದೇವಿಯು ಯಾರು ಗಾಯತ್ರೀ ಮಂತ್ರವನ್ನು ಜಪಿಸುತ್ತಾರೆಯೋ ಅವರಿಂದ ಪೂಜಿಸಲ್ಪಡುತ್ತಾಳೆ. ಯಾರು ಗಾಯತ್ರೀ ಮಂತ್ರವನ್ನು ಜಪಿಸುತ್ತಾರೆಯೋ ಅವರನ್ನು ದ್ವಿಜರು ಅಥವಾ ಎರಡು ಬಾರಿ ಜನಿಸಿದವರೆಂದು ಕರೆಯುತ್ತಾರೆ. ಅವರು ದ್ವಿಜರು ಏಕೆಂದರೆ ಮೊದಲನೇ ಹುಟ್ಟನ್ನು ತಾಯಿಯ ಗರ್ಭದಿಂದ ಪಡೆದರೆ ಎರಡನೇ ಹುಟ್ಟನ್ನು ಅವರು ಗಾಯತ್ರೀ ಮಂತ್ರದ ದೀಕ್ಷೆಯಿಂದ ಪಡೆಯುತ್ತಾರೆ. ಸಾಮಾನ್ಯವಾಗಿ ಉಪದೇಶವಾಗದೇ ಇದ್ದರೆ ಗಾಯತ್ರೀ ಮಂತ್ರವನ್ನು ಜಪಿಸಬಾರದು ಎಂದು ಹೇಳಲಾಗುತ್ತದೆ ಮತ್ತು ಸಾಮಾನ್ಯವಾಗಿ ಗಾಯತ್ರೀ ಮಂತ್ರವನ್ನು ತಂದೆಯು ತನ್ನ ಮಕ್ಕಳಿಗೆ ಉಪದೇಶಿಸುತ್ತಾನೆ.

            ೪೨೧, ೪೨೨ ಮತ್ತು ೪೨೩ನೇ ನಾಮಗಳು ಪ್ರಜ್ಞೆಯ ಮೂರು ಸ್ಥಿತಿಗಳಾದ ನಿದ್ರಾ (ಜಾಗೃತ್), ಸ್ವಪ್ನಾ ಮತ್ತು ಗಾಢನಿದ್ರಾವಸ್ಥೆಗಳನ್ನು ಸೂಚಿಸುತ್ತವೆ ಎಂದು ಹೇಳಲಾಗುತ್ತದೆ. ಬೃಹದಾರಣ್ಯಕ ಉಪನಿಷತ್ತು (೪.೩.೧೮) ಮೊದಲೆರಡು ಹಂತಗಳಾದ ನಿದ್ರೆ ಮತ್ತು ಸ್ವಪ್ನದ ಸ್ಥಿತಿಗಳನ್ನು ಮೀನಿನೊಂದಿಗೆ ಹೋಲಿಸುತ್ತದೆ. ಅದು ಹೇಳುತ್ತದೆ, ಯಾವ ವಿಧವಾಗಿ ಮೀನು ಪರ್ಯಾಯವಾಗಿ ನದಿಯ ಒಂದು ದಡದಿಂದ ಮತ್ತೊಂದು ದಡಕ್ಕೆ ಈಜುತ್ತಾ ಇರುತ್ತದೆಯೋ ಅದೇ ವಿಧವಾಗಿ ಈ ಅನಂತ ಜೀವಿಯು ಎರಡೂ ಹಂತಗಳ ನಡುವೆ ಚಲಿಸುತ್ತಿರುತ್ತದೆ. ಮೊದಲನೇ ಹಂತದಲ್ಲಿ, ಎಚ್ಚರವು (ಮನಸ್ಸಿಗೆ ಸಂಭಂದಿಸಿದಂತೆ) ಸಂಪೂರ್ಣವಾಗಿರುತ್ತದೆ. ಎರಡನೆಯ ಹಂತದಲ್ಲಿ ಅದು ಭಾಗಶಃ ಇದ್ದು ಗಾಢನಿದ್ರಾವಸ್ಥೆಯಲ್ಲಿ ನಮ್ಮ ಸುತ್ತಲೂ ನಡೆಯುವ ವಿದ್ಯಮಾನಗಳ ಬಗ್ಗೆ ನಮಗೆ ತಿಳುವಳಿಕೆ ಇರುವುದಿಲ್ಲ". ಈ ಹಂತವನ್ನು ಬೃಹದಾರಣ್ಯಕ ಉಪನಿಷತ್ತಿನಲ್ಲಿ (೪.೩.೧೯) ವಿವರಿಸಲಾಗಿದೆ, "ಯಾವ ವಿಧವಾಗಿ ಆಕಾಶದಲ್ಲಿ ಹಾರುತ್ತಿರುವ ಹದ್ದೊಂದು ಸುಸ್ತಾಗಿ ತನ್ನ ರೆಕ್ಕೆಗಳನ್ನು ಚಾಚಿ ತನ್ನ ಗೂಡಿನೆಡೆಗೆ ಸಾಗುತ್ತದೆಯೋ; ಅದೇ ವಿಧವಾಗಿ ಈ ಅನಂತ ಜೀವಿಯು ಗಾಢನಿದ್ರೆಯ ಈ ಸ್ಥಿತಿಯಲ್ಲಿ, ಯಾವುದೇ ವಿಧವಾದ ಆಸೆ ಮತ್ತು ಕನಸುಗಳಿಲ್ಲದೆ ಇರುತ್ತದೆ".

           ಆದರೆ ಛಾಂದೋಗ್ಯ ಉಪನಿಷತ್ತು ಎಲ್ಲಾ ಮೂರು ಹಂತಗಳನ್ನೂ ವಿವರಿಸುತ್ತದೆ, "ಯಾವಾಗ ನಾವು ಎಚ್ಚರವಾಗಿರುತ್ತೇವೆಯೋ ಆಗ ನಮ್ಮ ದೇಹ ಮತ್ತು ಮನಸ್ಸು ಎರಡೂ ಕ್ರಿಯಾಶೀಲವಾಗಿರುತ್ತವೆ. ಯಾವಾಗ ನಾವು ಕನಸು ಕಾಣುತ್ತಿರುತ್ತೇವೆಯೋ ಆಗ ದೇಹವು ಕ್ರಿಯಾಶೀಲವಾಗಿರುವುದಿಲ್ಲವಾದರೂ ಮನಸ್ಸು ಮಾತ್ರ ಇನ್ನೂ ಕ್ರಿಯಾಶೀಲವಾಗಿರುತ್ತದೆ (ಭಾಗಶಃವಾದರೂ). ಆದರೆ ಗಾಢನಿದ್ರಾವಸ್ಥೆಯಲ್ಲಿ ಮನಸ್ಸೂ ಸಹ ತನ್ನ ಕ್ರಿಯೆಯನ್ನು ಸ್ಥಬ್ದಗೊಳಿಸುತ್ತದೆ. ಯಾವಾಗ ಮನುಷ್ಯನು ನಿದ್ರೆ ಮಾಡುತ್ತಿದ್ದಾನೆ ಎಂದು ಹೇಳಲಾಗುತ್ತದೆಯೋ ಆಗ ಅವನು ಆತ್ಮದೊಂದಿಗೆ ಒಂದಾಗಿ ಅವನು ತನ್ನ ನೈಜರೂಪವಾದ ಆತ್ಮವನ್ನು ಹೊಂದುತ್ತಾನೆ".

           ಗಾಢನಿದ್ರಾವಸ್ಥೆಯಲ್ಲಿ ನಾವು ಪ್ರಜ್ಞಾಹೀನ ಸ್ಥಿತಿಯಲ್ಲಿರುತ್ತೇವೆ. ಈ ಹಂತದ ನಂತರದ ಸ್ಥಿತಿಯಲ್ಲಿ ವ್ಯಕ್ತಿಗತ ಪ್ರಜ್ಞೆಯು ಬ್ರಹ್ಮಾಂಡದ ಶಕ್ತಿಯೊಂದಿಗೆ ಸಮ್ಮಿಳಿತಗೊಳ್ಳುತ್ತದೆ ಮತ್ತು ಆ ಪ್ರಕ್ರಿಯೆಯಲ್ಲಿ ಅದು ದೇಹದ ಸುಸ್ಥಿರತೆಗೆ ಅವಶ್ಯಕವಾದ ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಈ ಹಂತದಲ್ಲಿ ಒಬ್ಬನು ಪರಬ್ರಹ್ಮವನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ. ಪ್ರಪಂಚಕ್ಕೆ ಅವನು ಪ್ರಜ್ಞಾಹೀನ ಸ್ಥಿತಿಯಲ್ಲಿರುತ್ತಾನೆ ಆದರೆ ಅವನಿಗೆ ಚೆನ್ನಾಗಿ ಗೊತ್ತಿರುತ್ತದೆ ತಾನು ಬ್ರಹ್ಮದೊಂದಿಗೆ ತಾದಾತ್ಮ್ಯ ಹೊಂದಿದ್ದೇನೆಂದು. ಈ ಪ್ರಕ್ರಿಯೆಯನ್ನು ಪ್ರಜ್ಞೆಯನ್ನು ಅಧಿಗಮಿಸುವುದೆನ್ನುತ್ತಾರೆ; ಇದು ತುರೀಯಾ ಮತ್ತದರ ಮೇಲಿನ ಹಂತವಾಗಿದೆ.

******

         ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 422 - 423 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Thu, 09/05/2013 - 03:34

ಶ್ರೀಧರರೆ ೧೧೧. ಶ್ರೀ ಲಲಿತಾ ಸಹಸ್ರನಾಮದ ವಿವರಣೆಯ ಕಾವ್ಯ ಸಾರ ಪರಿಷ್ಕರಣೆಗೆ.

ಲಲಿತಾ ಸಹಸ್ರನಾಮ ೪೨೨-೪೨೩
__________________________________________

೪೨೨. ಸಂಧ್ಯಾ
ಪ್ರತ್ಯೇಕತೆಯಿರದ ಪ್ರ್ಯತೇಕರಾಹಿತ್ಯ ಚಿತ್ ಚೈತನ್ಯ ಚಟುವಟಿಕೆ ಸಂಧ್ಯ
ಆಂತರಿಕ-ಬಾಹ್ಯ ವಸ್ತು-ವಿಷಯ ಪ್ರಪಂಚಾನುಭವ ಪ್ರಜ್ಞೆ ಸ್ವಯಂವೇದ್ಯ
ನಿರಾಕಾರ ಬ್ರಹ್ಮ ಸೂರ್ಯಾಕಾರ, ಉದಯಾಸ್ತ ಸಂಧ್ಯ ಧ್ಯಾನದದ್ವೈತ
ಇದಾ ಪಿಂಗಳ ಸುಷುಮ್ನಾ ನಾಡಿಸಂಗಮ, ಆರುಂಧತಿ ಸಂಧ್ಯಾ ಲಲಿತ!

೪೨೩. ದ್ವಿಜಬೃಂದ-ನಿಷೇವಿತಾ
ದ್ವಿಜತ್ವ ಜನನದ ದ್ವೈತ, ಭೌತಿಕಗರ್ಭ ಮಾಯೆಗೆ ಜ್ಞಾನಗರ್ಭದ ಗಾತ್ರ
ಪಿತೃಮುಖೇನ ಸಂತಾನಕೆ ಹರಿಸುತ ಪರಂಪರಾಗತ ಗಾಯತ್ರಿಮಂತ್ರ
ಉಪದೇಶಾಸೂಕ್ತ ಜಪಿಸುತ, ಪೂಜಿಸುತ ದಿನಂಪ್ರತಿ ಧ್ಯಾನಿಸೆ ಲಲಿತ
ಗಾಯತ್ರಿರೂಪದಲಿ ಸೇವಿಸಲ್ಪಡುತಿಹ ದೇವಿ, ದ್ವಿಜಬೃಂದ ನಿಷೇವಿತಾ!
 
ಧನ್ಯವಾದಗಳೊಂದಿಗೆ
-ನಾಗೇಶ ಮೈಸೂರು

ನಾಗೇಶರೆ,
ಎರಡೂ ಕವನಗಳು ಸರಳ ಮತ್ತು ಸುಂದರವಾಗಿ ಮೂಡಿ ಬಂದಿವೆ.
ಒಂದೆರಡು ಬೆರಳಚ್ಚಿನ ತಪ್ಪುಗಳನ್ನಷ್ಟೇ ಸರಿಪಡಿಸುವುದು ಈಗ ಉಳಿದಿರುವ ಕೆಲಸ.
೪೨೨. ಸಂಧ್ಯಾ
:
:
ಇದಾ ಪಿಂಗಳ ಸುಷುಮ್ನಾ ನಾಡಿಸಂಗಮ, ಆರುಂಧತಿ ಸಂಧ್ಯಾ ಲಲಿತ!
ಇದಾ=ಇಡಾ
೪೨೩. ದ್ವಿಜಬೃಂದ-ನಿಷೇವಿತಾ
೨ನೇ ಹಾಗೂ ನಾಲ್ಕನೇ ಸಾಲಿನಲ್ಲಿ ಗಾಯತ್ರಿ ಇರುವ ಕಡೆ ಗಾಯತ್ರೀ ಮಾಡಿ. ಕನ್ನಡದಲ್ಲಿ ಗಾಯತ್ರಿ ಎಂದೇ ಉಪಯೋಗಿಸಿದರೂ ಸಹ ಸಂಸ್ಕೃತದ ರೀತ್ಯಾ ಅದು ಗಾಯತ್ರೀ ಆಗಬೇಕಷ್ಟೆ.

ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ

ಶ್ರೀಧರರೆ, ಮಿಂಚಿನ ವೇಗದಲ್ಲಿ ಪರಿಷ್ಕರಿಸಿಬಿಟ್ಟಿದ್ದೀರಾ..ಇಂದು ಪ್ರಾತಃಕಾಲವೆ ಲಲಿತಾ ಸೇವೆ - ಶುಭ ಬೆಳಗು, ಶುಭದಿನ :-)

ನೀವು ಸೂಚಿಸಿದ ಕಾಗುಣಿತದ ತಿದ್ದುಪಡಿಸಿದ ರೂಪ:

೪೨೨. ಸಂಧ್ಯಾ
ಪ್ರತ್ಯೇಕತೆಯಿರದ ಪ್ರ್ಯತೇಕರಾಹಿತ್ಯ ಚಿತ್ ಚೈತನ್ಯ ಚಟುವಟಿಕೆ ಸಂಧ್ಯ
ಆಂತರಿಕ-ಬಾಹ್ಯ ವಸ್ತು-ವಿಷಯ ಪ್ರಪಂಚಾನುಭವ ಪ್ರಜ್ಞೆ ಸ್ವಯಂವೇದ್ಯ
ನಿರಾಕಾರ ಬ್ರಹ್ಮ ಸೂರ್ಯಾಕಾರ, ಉದಯಾಸ್ತ ಸಂಧ್ಯ ಧ್ಯಾನದದ್ವೈತ
ಇಡಾ ಪಿಂಗಳ ಸುಷುಮ್ನಾ ನಾಡಿಸಂಗಮ, ಆರುಂಧತಿ ಸಂಧ್ಯಾ ಲಲಿತ!

೪೨೩. ದ್ವಿಜಬೃಂದ-ನಿಷೇವಿತಾ
ದ್ವಿಜತ್ವ ಜನನದ ದ್ವೈತ, ಭೌತಿಕಗರ್ಭ ಮಾಯೆಗೆ ಜ್ಞಾನಗರ್ಭದ ಗಾತ್ರ
ಪಿತೃಮುಖೇನ ಸಂತಾನಕೆ ಹರಿಸುತ ಪರಂಪರಾಗತ ಗಾಯತ್ರೀಮಂತ್ರ
ಉಪದೇಶಾಸೂಕ್ತ ಜಪಿಸುತ, ಪೂಜಿಸುತ ದಿನಂಪ್ರತಿ ಧ್ಯಾನಿಸೆ ಲಲಿತ
ಗಾಯತ್ರೀರೂಪದಿ ಸೇವಿಸಲ್ಪಡುತಿಹ ದೇವಿ, ದ್ವಿಜಬೃಂದ ನಿಷೇವಿತಾ!
 
ಧನ್ಯವಾದಗಳೊಂದಿಗೆ,
- ನಾಗೇಶ ಮೈಸೂರು
 

ನಾಗೇಶರೆ,
ಈ ನಡುವೆ ನನ್ನ ನೆಟ್-ವರ್ಕ್ ಕೈಕೊಡುತ್ತಿದೆ ಮತ್ತು ಕೆಲವೊಮ್ಮೆ ನನ್ನ ಆರೋಗ್ಯ ಸಹ ಅದೇಕೋ ಆಗಾಗ್ಗೆ ಸ್ವಲ್ಪ ವ್ಯತ್ಯಯವಾಗುತ್ತಿದೆ; ಬಹುಶಃ ಇಲ್ಲಿ ಸುರಿಯುವ ಅಡ್ಡಾದಿಡ್ಡಿ ಮಳೆಯಿಂದಾಗಿ. ಹಾಗಾಗಿ ಅವಕಾಶ ಸಿಕ್ಕಾಗಲೇ ಸ್ವಲ್ಪ ತ್ವರಿತವಾಗಿ ಲೇಖನಗಳನ್ನು ಸೇರಿಸುತ್ತಿದ್ದೇನೆ. ಮಧ್ಯದಲ್ಲಿ ಮಿಸ್ ಆಗಿರುವುದನ್ನು ಸರಿತೂಗಿಸುವ ಹೊಣೆಯೂ ಇದೆಯಲ್ಲವೇ. ಅದೇನೇ ಇರಲಿ, ನಿಮ್ಮನ್ನು ನೋಡಿ ಶಿಸ್ತನ್ನು ರೂಢಿಸಿಕೊಳ್ಳಬೇಕು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ಶ್ರೀಧರರೆ, ಹಳೆ ಬಾಕಿ ತೀರಿಸಲು ಬೇಕಷ್ಟು ಸಮಯ ಸಿಗುತ್ತದೆ. ಮಳೆಗಾಲದ ಬೇನೆಗಳ ಕೈಯಿಂದ ಪಾರಾಗುವತ್ತ ಮೊದಲು ಗಮನ ಕೊಡಿ - ಆರೋಗ್ಯವಿದ್ದರೆ ಶಿಸ್ತು ನಂತರ  ತಾನಾಗಿಯೆ ಬರುತ್ತದೆ :-)