೧೧ ನೇ ಶತಮಾನದ ಒಂದು ಜೈನ ಕಥೆ
ಒಬ್ಬ ರಾಜ ತನ್ನ ತಮ್ಮನ ಹೆಂಡತಿಯಲ್ಲಿ ಮೋಹಗೊಂಡು ಅವಳು ತನ್ನ ವಶವಾಗದೆ , ಆ ಸಿಟ್ಟಿನಲ್ಲಿ ತಮ್ಮನನ್ನು ಕೊಲ್ಲಿಸುತ್ತಾನೆ . ಆ ತಮ್ಮನ ಹೆಂಡತಿ ತನ್ನನ್ನು ಕಾಪಾಡಿಕೊಳ್ಳಲು ಮಗ ಯಶೋಭದ್ರನೊಂದಿಗೆ ಓಡಿ ಹೋಗಿ ಒಬ್ಬ ಸನ್ಯಾಸಿನಿಯ ಮನೆಯಲ್ಲಿ ಆಶ್ರಯ ಪಡೆಯುತ್ತಾಳೆ . ಅಲ್ಲಿ ಧರ್ಮಬೋಧೆಯನ್ನು ಕೇಳುತ್ತ ವೈರಾಗ್ಯವನ್ನು ಹೊಂದುತ್ತಾಳೆ . ಮಗನಿಗೂ ಉಪದೇಶ ಮಂತ್ರದೀಕ್ಷೆ ಮುಂತಾದವನ್ನು ಕೊಡಿಸಿದಳು .
ಆದರೆ ಅವನಿಗೆ ಯೌವನ ಬಂದಾಗ ಮದ್ದಾನೆಯು ವಿಂಧ್ಯ ಪರ್ವತವನ್ನು ನೆನೆಯುವಂತೆ ಅವನು ಭೋಗ ಜೀವನ ಬಯಸಿ ಅವುಗಳ ಸುಖಾಭಿಲಾಶೆಯಲ್ಲಿ ಹುಚ್ಚನಂತಾದ. ಅವನ ಆರೋಗ್ಯ ಕ್ಷೀಣಿಸಿತು . ಆಹಾರದಲ್ಲಿ ಅಭಿರುಚಿ ಹೋಯಿತು . ನಿಯಮಗಳನ್ನು ಇಷ್ಟವಿಲ್ಲದೆ ಪಾಲಿಸತೊಡಗಿದ .
ಕೊನೆಗೆ ತನ್ನ ತಾಯಿಯ ಬಳಿ ಹೋಗಿ " ಅಮ್ಮ ನಾನು ಈ ನಿಯಮ ಪಾಲಿಸಲಾರೆ . ನನ್ನ ರಾಜ್ಯಕ್ಕೆ ಹೋಗಿ ಗೃಹಸ್ಥಾಶ್ರಮ ನಡೆಸಿ ಭೋಗಾಭಿಲಾಷೆ ತೀರಿದ ಬಳಿಕ ವ್ರದ್ಧಾಪ್ಯದಲ್ಲಿ ಮತ್ತೆ ವ್ರತ ಜೀವನ ನಡೆಸುತ್ತೇನೆ. ಈಗ ನಮ್ಮ ದೊಡ್ಡಪ್ಪನ ಜತೆಗೆ ಇದ್ದು ರಾಜ್ಯಾದಿಕಾರ ನಡೆಸುತ್ತೇನೆ " ಎಂದ . ತಾಯಿ " ಹಾಗೆಯೇ ಆಗಲಿ ; ಆದರೆ ನನ್ನ ಮೇಲಿನ ಗೌರವದಿಂದ ಇನ್ನೂ ೧೨ ವರ್ಷ ಇಲೇ ಇರು , ನಂತರ ನಿನಗೆ ಸರಿ ಕಂಡಂತೆ ಮಾಡು" ಎಂದಳು. ತಾಯಿಯ ಮಾತಿಗೆ ಒಪ್ಪಿ ೧೨ ವರ್ಷ ಅಲ್ಲೇ ಇದ್ದ . ನಂತರ ಹಾಗೆಯೇ ವಿದ್ಯಾಗುರುವಿನ , ಧರ್‍ಮ ಗುರುವಿನ , ಆಶ್ರಯದಾತರ ಮಾತಿನಂತೆ ಹನ್ನೆರಡು , ಹನ್ನೆರಡು, ಹನ್ನೆರಡು ವರ್ಷ ಇದ್ದು ಒಟ್ಟು ೪೮ ವರ್ಷ ಅಲ್ಲಿ ಇದ್ದು ಕೊನೆಗೆ ದೊಡ್ಡಪ್ಪನ ಆಸ್ಥಾನಕ್ಕೆ ಹೊರಟ.
ರಾಜಧಾನಿ ತಲುಪಿದಾಗ ಸಂಜೆಯಾಗಿತ್ತು. ರಾಜನನ್ನು ನಾಳೆ ಭೆಟ್ಟಿಯಾದರಾಯಿತು ಎಂದು ಅಲ್ಲಿ ಒಂದು ನಾಟಕ ನೋಡಲು ಹೋದ. ಆ ನಾಟಕ ನೋಡಲು ಅನೇಕ ರಾಜನೂ ಅನೇಕ ಪ್ರಮುಖರೂ ಬಂದಿದ್ದರು . ರಾತ್ರಿಯ ಮೂರು ಜಾವ ಕಳೆಯುವ ವೇಳೆಗೆ ಮುಖ್ಯ ನಟಿ ಆಯಾಸದಿಂದ ಇನ್ನು ನಟಿಸುವದು ಸಾಧ್ಯವಿಲ್ಲ ಎಂದು ನೇಪಥ್ಯದಲ್ಲಿ ಕುಳಿತುಬಿಟ್ಟಳು. ಆಗ ಅವಳ ತಾಯಿ "ಮಗಳೇ , ನೀನು ಚೆನ್ನಾಗಿ ಹಾಡಿದ್ದೀ; ಚೆನ್ನಾಗಿ ಅಭಿನಯಿಸಿದ್ದೀ ; ರಾತ್ರಿ ಎಲ್ಲಾ ಕಷ್ಟಪಟ್ಟಿದ್ದೀ; ಈಗ ಕತ್ತಲೆ ಹರಿದು ಬೆಳಕಾಗುತ್ತಿದೆ; ಈಗ ಎಚ್ಚರ ತಪ್ಪಬೇಡ" ಎಂದಳು.
ಈ ಮಾತನ್ನು ಕೇಳಿದ ಯಶೋಭದ್ರನಲ್ಲಿ ವಿರಕ್ತಿ ಮೂಡಿತು. ಅವನು ತಾನು ಹೊದ್ದಿದ್ದ ರತ್ನಖಚಿತ ಶಾಲನ್ನು ಆ ನಟಿಗೆ ನೀಡಿದ. ದೊರೆಯ ಮಗ ಆಕೆಗೆ ಅಮೂಲ್ಯವಾದ ಬಂಗಾರದ ತೋಳಬಂದಿ ನೀಡಿದ; ಕಾಂತಾ ಎಂಬಾಕೆ ನಟಿಗೆ ಮುತ್ತಿನ ಹಾರವನ್ನು ಕೊಟ್ಟಳು; ಪಟ್ಟದ ಆನೆಯ ಮಾವುತ ಆಕೆಗೆ ಅಂಕುಶವನ್ನು ಕೊಟ್ಟ ; ಜಯಸಂಧಿ ಎನ್ನುವ ಮುಖ್ಯಮಂತ್ರಿ ಬಂಗಾರದ ಬಳೆಗಳನ್ನು ಉಡುಗೊರೆಯಾಗಿ ಕೊಟ್ಟ . ಈ ಎಲ್ಲ ಪಾರಿತೋಷಕಗಳ ಬೆಲೆ ಸುಮಾರು ಐದು ಲಕ್ಷ ವರಹಗಳದ್ದಾಯಿತು .
ದೊರೆ ಅಶ್ಚರ್ಯಚಕಿತನಾದ . ಅವನು ಯಶೋಭದ್ರನನ್ನು ಕುರಿತು ಅಷ್ಟು ದೊಡ್ಡ ಪಾರಿತೋಷಕವನ್ನು ಅವಳಿಗೆ ಕೊಟ್ಟದ್ದೇಕೆ ಎಂದು ಕೇಳಿದ. ಅದಕ್ಕೆ ಅವನು , "ನನ್ನ ಬುದ್ಧಿಯನ್ನವಳು ಸ್ಥಿಮಿತಕ್ಕೆ ತಂದಿದ್ದಾಳೆ. ನನ್ನ ಗುರುವಿನ ಕೈಲಿ ಆಗದ್ದನ್ನು ಅವಳು ಮಾಡಿದ್ದಾಳೆ ;
ನೆಲಮಾಳಿಗೆಯಲ್ಲಿನ ಕತ್ತಲೆಯನ್ನು ಸೂರ್ಯ ಓಡಿಸಲಾರ;ಒಂದು ನಂದಾದೀಪ ಅದನ್ನು ಚೆದುರಿಸಿ , ಬೆಳಕು ಬೀರಬಲ್ಲುದು; ಈಕೆ ಅದನ್ನು ಮಾಡಿದ್ದಾಳೆ.
ದೊರೆಯೇ , ಈಕೆ ನನ್ನ ಧರ್ಮಗುರು ; ನಿಜವಾದ ದಾರಿಯನ್ನು ತೋರಿದ್ದಾಳೆ; ಅದಕ್ಕೆ ರತ್ನಖಚಿತ ಶಾಲನ್ನು ಕೊಟ್ಟಿದ್ದೇನೆ. " ಎಂದ. ದೊರೆ ಕಾಂತಾಳನ್ನು ಕೇಳಿದಾಗ " ದೊರೆಯೇ , ನಾನು ನನ್ನ ಗಂಡನನ್ನು ಕೊಂದು ಬೇರೊಬ್ಬನ ಜತೆಗೆ ಇರಬೇಕೆಂದಿದ್ದೆ. ಆದರೆ ಈಕೆಯ ಮಾತುಗಳಿಂದ ನನ್ನ ಮನಸ್ಸು ಬದಲಾಗಿ ಹೋಯಿತು. " ಎಂದಳು. ಮಾವುತನನ್ನು ಕೇಳಿದಾಗ "ದೊರೆಯೇ , ನಾನು ನಿಮಗೆ ದ್ರೋಹ ಬಗೆದು ನಿಮ್ಮನ್ನು ಆನೆಯ ಮೇಲಿದ್ದಾಗ ಶತ್ರುಗಳ ನಡುವೆ ಒಯ್ಯಬೇಕೆಂದಿದ್ದೆ" . ಎಂದ . ಅವನ ಹಾಗೆಯೇ ಮಂತ್ರಿ ಹಾಗೂ ರಾಜಕುಮಾರನೂ ದೊರೆಯನ್ನು ಉರುಳಿಸಿ ರಾಜ್ಯವನ್ನು ಕಸಿದುಕೊಳ್ಳುವ ಪಿತೂರಿ ನಡೆಸಿದ್ದರು. ಈ ಎಲ್ಲ ವಿಷಯ ಕೇಳಿ ಪ್ರಪಂಚದ ಪೊಳ್ಳುತನ , ನಶ್ವರತೆಗಳು ಮನಸ್ಸಿಗೆ ಬಂದವು ಅವನು ಮಗನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ ತಪಸ್ಸಿಗೆ ಹೋದ. ಯಶೋಭದ್ರನೂ ಸ್ವಸ್ಥಾನಕ್ಕೆ ಹಿಂತಿರುಗಿ ಕಾಲಕ್ರಮದಲ್ಲಿ ಪ್ರಾಯೋಪವೇಶ ಕೈಕೊಂಡು ಮೋಕ್ಷ ಸಂಪಾದಿಸಿದ.
Comments
ಉ: ೧೧ ನೇ ಶತಮಾನದ ಒಂದು ಜೈನ ಕಥೆ
In reply to ಉ: ೧೧ ನೇ ಶತಮಾನದ ಒಂದು ಜೈನ ಕಥೆ by anivaasi
ಉ: ೧೧ ನೇ ಶತಮಾನದ ಒಂದು ಜೈನ ಕಥೆ
In reply to ಉ: ೧೧ ನೇ ಶತಮಾನದ ಒಂದು ಜೈನ ಕಥೆ by shreekant.mishrikoti
ಉ: ೧೧ ನೇ ಶತಮಾನದ ಒಂದು ಜೈನ ಕಥೆ