೧೨೩. ಲಲಿತಾ ಸಹಸ್ರನಾಮ ೫೦೪ರಿಂದ ೫೧೩ನೇ ನಾಮಗಳ ವಿವರಣೆ

೧೨೩. ಲಲಿತಾ ಸಹಸ್ರನಾಮ ೫೦೪ರಿಂದ ೫೧೩ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೫೦೪-೫೧೩

Svādhiṣṭhānāmbuja -gatā स्वाधिष्ठानाम्बुज-गता (504)

೫೦೪. ಸ್ವಾಧಿಷ್ಠಾನಾಂಬುಜ-ಗತಾ

           ಸ್ವಾಧಿಷ್ಠಾನ ಚಕ್ರದ ದೇವತೆಯ ಹೆಸರು ಕಾಕಿನೀ. ಈ ನಾಮದಿಂದ ಪ್ರಾರಂಭವಾಗಿ ೫೧೩ನೇ ನಾಮದವರೆಗೆ (ಹತ್ತು ನಾಮಗಳು) ಈ ಯೋಗಿನಿಯನ್ನು ವರ್ಣಿಸುತ್ತವೆ. ಈ ಚಕ್ರವು ಬೆನ್ನುಮೂಳೆಯ ತಳದಲ್ಲಿ (ಸೊಂಟದ ಭಾಗದಲ್ಲಿ) ಮೂಲಾಧಾರ ಚಕ್ರಕ್ಕಿಂತ ಸ್ವಲ್ಪ ಮೇಲೆ ಇರುತ್ತದೆ ಮತ್ತು ಇದಕ್ಕೆ ಆರು ದಳದ ಪದ್ಮವಿರುತ್ತದೆ. ಪ್ರತಿಯೊಂದು ದಳಕ್ಕೂ ಒಂದೊಂದರಂತೆ ಮುಂದಿನ ಆರು ವ್ಯಂಜನಾಕ್ಷರಗಳನ್ನು ಅವುಗಳ ಮೇಲೆ ಬಿಂದುಗಳೊಂದಿಗೆ ಒಡಮೂಡಿಸಲಾಗಿದೆ. ಈ ಚಕ್ರದ ಪರಿಧಿಯು ಆರು ದಳದ ಪದ್ಮದಂತೆ ಕಾಣಿಸುತ್ತದೆ ಮತ್ತು ಅದರ ಮಧ್ಯದಲ್ಲಿ ಅರ್ಧಚಂದ್ರವಿರುತ್ತದೆ. ಈ ಅರ್ಧಚಂದ್ರದ ಒಳಗಡೆ ವರುಣ ದೇವನ ಬೀಜಾಕ್ಷರವಾದ ವಂ (वं) ಅನ್ನು ಇರಿಸಲಾಗಿರುತ್ತದೆ. ವರುಣ ಬೀಜಾಕ್ಷರವಾದ ’ವಂ’, ಅಗ್ನಿ ಬೀಜಾಕ್ಷರವಾದ ’ರಂ’ನೊಂದಿಗೆ ಸರಿಯಾದ ಸಂಯೋಜನೆಯಲ್ಲಿ ಸೇರಿದಾಗ ಅದು ಕೆಲವೊಂದು ಅತೀಂದ್ರಿಯ ಶಕ್ತಿಗಳನ್ನು ದಯಪಾಲಿಸುತ್ತದೆ. ವರುಣ ಬೀಜವು ಸಂಪದವನ್ನು ಸೂಚಿಸುತ್ತದೆ.

Caturvaktra-manoharā चतुर्वक्त्र-मनोहरा (505)

೫೦೫. ಚತುವಕ್ತ್ರ-ಮನೋಹರಾ

          ಕಾಕಿನೀ ಯೋಗಿನಿಗೆ ನಾಲ್ಕು ಸುಂದರವಾದ ಮುಖಗಳಿವೆ ಆದ್ದರಿಂದ ವಾಕ್-ದೇವಿಗಳು ಇದನ್ನು ನಾಲ್ಕನೆಯ ಚಕ್ರವಾಗಿ ವರ್ಣಿಸುತ್ತಾರೆ.

          ಸೌಂದರ್ಯ ಲಹರಿಯ ೧೪ನೇ ಸ್ತೋತ್ರವು ಮಾನಸಿಕ ಚಕ್ರಗಳ ಮೂಲಕ ಹೊರಸೂಸುವ ಕೆಲವೊಂದು ಕಿರಣಗಳ ಕುರಿತಾಗಿ ಹೇಳುತ್ತದೆ. ಮೂಲಾಧಾರ ಚಕ್ರದಿಂದ ಆಜ್ಞಾ ಚಕ್ರದವರೆಗೆ ಈ ಸ್ತೋತ್ರವು ಒಂದು ವೃತ್ತದ ೩೬೦ ಕೋನಗಳನ್ನು ತಿಳಿಸುವ ಅಥವಾ ಒಂದು ವರ್ಷಕ್ಕೆ ಸಂಭಂದಿಸಿದಂತೆ ಇರುವ ೩೬೦ ದಿನಗಳನ್ನು ಸೂಚಿಸುವ ೩೬೦ ವಿಧವಾದ ಕಿರಣಗಳ ಬಗ್ಗೆ ಪ್ರಸ್ತಾವಿಸುತ್ತದೆ. ಕೆಲವೊಂದು ಲೆಕ್ಕಾಚಾರಗಳಿಗೆ ಒಂದು ವರ್ಷಕ್ಕೆ ೩೬೦ ದಿನಗಳನ್ನು ಮಾತ್ರವೇ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

Śulādyāyudha-saṁpannā शुलाद्यायुध-संपन्ना (506)

೫೦೬. ಶೂಲಾದ್ಯಾಯುಧ-ಸಂಪನ್ನಾ

          ಕಾಕಿನೀ ಯೋಗಿನಿಯು ನಾಲ್ಕು ಕೈಗಳನ್ನು ಹೊಂದಿದ್ದು ಅವುಗಳಲ್ಲಿ ತ್ರಿಶೂಲ, ಪಾಶ, ಕಪಾಲ ಮತ್ತು ಅಂಕುಶಗಳನ್ನು ತನ್ನ ಆಯುಧಗಳಾಗಿ ಹಿಡಿದಿದ್ದಾಳೆ. ಕೆಲವೊಂದು ಶಾಸ್ತ್ರ ಗ್ರಂಥಗಳು ಶಂಖ, ಚಕ್ರ, ಗದಾ ಮತ್ತು ಕಮಲಗಳನ್ನು ಅವಳ ಆಯುಧಗಳೆಂದು ಹೇಳುತ್ತವೆ. ಲಲಿತಾ ಸಹಸ್ರನಾಮಕ್ಕೂ ಮತ್ತು ಕುಂಡಲಿನೀ ಶಕ್ತಿಗೆ ಸಂಭಂದಿಸಿದ ಗ್ರಂಥಗಳಲ್ಲಿ, ಚಕ್ರದಲ್ಲಿ ಸ್ಥಾಪಿತವಾಗಿರುವ ದೇವತೆಗಳ ವಿವರಣೆಗಳಲ್ಲಿ ಹಲವೊಂದು ವ್ಯತ್ಯಾಸಗಳು ಇವೆ.

Pītavarṇā पीतवर्णा (507)

೫೦೭. ಪೀತವರ್ಣಾ

          ಕಾಕಿನೀ ದೇವಿಯ ಮೈಬಣ್ಣವು ಹಳದಿ ಅಥವಾ ಬಂಗಾರದ ವರ್ಣವಾಗಿದೆ.

Ati-garvitā अति-गर्विता (508)

೫೦೮. ಅತಿ-ಗರ್ವಿತಾ

          ಕಾಕಿನೀ ದೇವಿಯು ಅತಿಯಾದ ಗರ್ವವನ್ನು ಹೊಂದಿದ್ದಾಳೆ; ಆಕೆಯು ತನ್ನ ಸೌಂದರ್ಯದ ಬಗೆಗೆ ಅತಿಯಾದ ಗರ್ವವುಳ್ಳವಳಾಗಿದ್ದಾಳೆ. ಆದರೆ ಲಲಿತಾಂಬಿಕೆಯು ಗರ್ವವನ್ನು ಹೊಂದಿಲ್ಲ (ನಾಮ ೧೫೮ ನಿರ್ಮದಾ, ಅದು ಆಕೆಯು ಗರ್ವರಹಿತಳು ಎನ್ನುವುದನ್ನು ಸೂಚಿಸುತ್ತದೆ. ಒಬ್ಬರ ಬಳಿಯಲ್ಲಿ ಇನ್ನೊಬ್ಬರ ಹತ್ತಿರ ಇಲ್ಲದ್ದು ಇದ್ದರೆ ಅದು ಗರ್ವ ಉಂಟಾಗುವುದಕ್ಕೆ ಕಾರಣವಾಗುತ್ತದೆ. ದೇವಿಯ ಬಳಿಯಲ್ಲಿ ಎಲ್ಲವೂ ಇದೆ ಮತ್ತು ಎಲ್ಲವೂ ಆಕೆಯಿಂದಲೇ ಹೊರಹೊಮ್ಮುತ್ತವೆ).

Medo-niṣṭhā मेदो-निष्ठा (509)

೫೦೯. ಮೇದೋ-ನಿಷ್ಠಾ

          ಕಾಕಿನೀ ದೇವಿಯು ಕೊಬ್ಬಿನಾಂಶದ ಮೇಲೆ ಸ್ಥಾಪಿತಳಾಗಿದ್ದಾಳೆ. ಕೊಬ್ಬು ಅಥವಾ ಎಣ್ಣೆಯು ನಮ್ಮ ಚರ್ಮದಿಂದ ನಾಲ್ಕನೆಯ ಪದರವಾಗಿರುವುದರಿಂದ ಸ್ವಾಧಿಷ್ಠಾನ ಚಕ್ರವನ್ನು ವಾಕ್-ದೇವಿಗಳು ನಾಲ್ಕನೆಯ ಚಕ್ರವಾಗಿ ಪ್ರಸ್ತಾಪಿಸುತ್ತಾರೆ.

Madhu-prītā मधु-प्रीता (510)

೫೧೦. ಮಧು-ಪ್ರೀತಾ

           ಮಧು ಎಂದರೆ ಜೇನು ತುಪ್ಪ, ಕಾಕಿನೀ ದೇವಿಗೆ ಅದು ಪ್ರಿಯವಾದದ್ದು. ಮಧು ಎಂದರೆ ಮದ್ಯಸಾರ ಎಂದೂ ಅರ್ಥವಿದೆ (ಮದ್ಯಸಾರವೆಂದರೆ ಕಾಯಿಪಲ್ಯೆಗಳು ಅಥವಾ ಮಾಂಸವನ್ನು ಕುದಿಸಿದ ರಸ ಎನ್ನುವುದನ್ನೂ ಸೂಚಿಸುತ್ತದೆ) ಆದ್ದರಿಂದ ಸಹಜವಾಗಿಯೇ ಕಾಕಿನೀ ದೇವಿಗೆ ಈ ವಿಧವಾದ ರಸಗಳೂ ಇಷ್ಟವೆಂದರ್ಥ.

          ಯಜ್ಞ-ಯಾಗಾದಿಗಳಲ್ಲಿ ಕೆಲವೊಂದು ದೇವತೆಗಳನ್ನು ತೃಪ್ತಿ ಪಡಿಸುವುದಕ್ಕೋಸ್ಕರ ತುಪ್ಪ, ಜೇನು ತುಪ್ಪ ಮತ್ತು ಹಾಲುಗಳನ್ನು ಅಲ್ಪ ಪ್ರಮಾಣದಲ್ಲಿ ಮಿಶ್ರ ಮಾಡಲಾಗಿರುತ್ತದೆ. ಮಧುವನ್ನು ದೇವತೆಗಳಿಗೆ ಅರ್ಪಿಸುವುದನ್ನು ವೇದಗಳಲ್ಲಿ ಕೂಡಾ ಉಲ್ಲೇಖಿಸಲಾಗಿದೆ.

Bandinyādi-samanvitā बन्दिन्यादि-समन्विता (511)

೫೧೧. ಬಂದಿನ್ಯಾದಿ-ಸಮನ್ವಿತಾ

          ಕಾಕಿನೀ ದೇವಿಯು ತನ್ನ ಆರು ಸಹಾಯಕಿಯರಾದ ಬಂದಿನೀ ಮೊದಲಾದವರಿಂದ ಸುತ್ತುವರೆಯಲ್ಪಟ್ಟಿದ್ದಾಳೆ. ಆಕೆಯ ಒಬ್ಬೊಬ್ಬ ಸಹಾಯಕಿಯರೂ ಸಹ ಒಂದೊಂದು ದಳದ ಮೇಲೆ ಆಸೀನರಾಗಿರುತ್ತಾರೆ. ಬಂದಿನೀ ದೇವಿಯಲ್ಲದೇ ಇತರ ಪ್ರಮುಖ ದೇವತೆಗಳೆಂದರೆ ಭದ್ರಕಾಳೀ ಮತ್ತು ಮಹಾಮಾಯಾ.

Dadhyannāsakta-hṛdayā दध्यन्नासक्त-हृदया (512)

೫೧೨. ದಧ್ಯನ್ನಾಸಕ್ತ-ಹೃದಯಾ

          ಕಾಕಿನೀ ದೇವಿಯು ಮೊಸರನ್ನವನ್ನು ಇಷ್ಟಪಡುತ್ತಾಳೆ.

Kākinī-rūpa-dhariṇī काकिनी-रूप-धरिणी (513)

೫೧೩. ಕಾಕಿನೀ-ರೂಪ-ಧಾರಿಣೀ

          ಈ ಹತ್ತು ನಾಮಗಳಲ್ಲಿ ವರ್ಣಿಸಿರುವ ಸ್ವಾಧಿಷ್ಠಾನ ಚಕ್ರದ ಅಧಿದೇವತೆಯಾದ ಕಾಕಿನೀ ದೇವಿ.

******

ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 504 - 513 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.  

Rating
Average: 5 (1 vote)

Comments

Submitted by nageshamysore Wed, 09/25/2013 - 18:54

ಶ್ರೀಧರರೆ, ೧೨೩. ಶ್ರೀ ಲಲಿತಾ ಸಹಸ್ರನಾಮದ ವಿವರಣೆಯ ಕಾವ್ಯ ಸಾರ ತಮ್ಮ ಪರಿಷ್ಕರಣೆಗೆ ಸಿದ್ದ :-)

ಲಲಿತಾ ಸಹಸ್ರನಾಮ ೫೦೪-೫೧೩
________________________________________

೫೦೪. ಸ್ವಾಧಿಷ್ಠಾನಾಂಬುಜ-ಗತಾ 
ನಿವಾಸಿನಿ ಸ್ವಾಧಿಷ್ಠಾನ ಚಕ್ರದೆ, ಬೆನ್ನೆಲುಬಿನ ತಳದ ಪದ್ಮ ಷಟ್ದಳ
ಬಿಂದುಸಹಿತ ವ್ಯಂಜನಾಕ್ಷರ ಪ್ರತಿದಳ, ಪರಿಧಿ ಪದ್ಮಕಾರದಂಗಳ 
ನಡುವಲರ್ಧಚಂದ್ರ ವರುಣ-ಸಂಪದ-ಬೀಜಾಕ್ಷರ 'ವಂ' ಉಪಸ್ಥಿತ
ಅಗ್ನಿಬೀಜ 'ರಂ' ಜತೆಗತೀಂದ್ರೀಯಶಕ್ತಿ, ಸ್ವಾಧಿಷ್ಠಾನಾಂಬುಜ-ಗತಾ ||

೫೦೫. ಚತುವಕ್ತ್ರ-ಮನೋಹರಾ
ಸ್ವಾಧಿಷ್ಠಾನ ಚಕ್ರ ಯೋಗಿನಿ, ಚತುರ್ಮನೋಹರ ವದನೆ
ದಿಕ್ಕುದಿಕ್ಕಿಗು ಗಮನೆ, ಪಸರಿಸಿ ಕಾಂತಿ ಸೌಂದರ್ಯವನೆ
ಚತುರ್ವದನಾ ಚತುರ್ಥಚಕ್ರ, ವಾಕ್ ದೇವಿ ಬಣ್ಣನೆ ನೇರ
ಕಿರಣವಾಗುತ ವೃತ್ತದಿ, ಕಾಕಿನೀ ಚತುವಕ್ತ್ರ ಮನೋಹರಾ ||

೫೦೬. ಶೂಲಾದ್ಯಾಯುಧ-ಸಂಪನ್ನ
ಕಾಕಿನೀ ಯೋಗಿನಿ ಪೊರೆಯುತ ಲಲಿತಾ ಪಥ ಸನ್ನದ್ಧು
ತ್ರಿಶೂಲ ಪಾಶ ಕಪಾಲ ಅಂಕುಶಾಯುಧ ಕೈಲಿ ಹಿಡಿದು
ಕುಂಡಲಿನೀ ಯಾತ್ರೆಗೆ ತೊಡಕಿರದಂತೆ ತೊಡಗಿಸಿ ಮನ
ದಿಕ್ಕುದಿಕ್ಕಲು ದೃಷ್ಟಿ ಕಾಯ್ವ ಶೂಲಾದ್ಯಾಯುಧ ಸಂಪನ್ನ ||
 
೫೦೭. ಪೀತವರ್ಣಾ
ಸುಂದರ ಮನೋಹರ ವದನಗಳೊಡತಿ ಕಾಕಿನೀ ಯೋಗಿನಿ
ಸೊಬಗ ಮೈಕಾಂತಿ ಕಿರಣವಾಗಿ, ಸುತ್ತ ಚೆಲ್ಲುವಾ ದಿನಮಣಿ
ಬಂಗಾರದ ಮೈಬಣ್ಣ ಹೊನ್ನಿನ ತೇರಾಗಿ ಪಸರಿಸುತ ಸುತ್ತಣ
ಪ್ರತಿಫಲಿಸುತ ವಾತಾವರಣ, ಮತ್ತೆಲ್ಲೆಡೆ ಸವರಿ ಪೀತವರ್ಣ ||

೫೦೮. ಅತಿ-ಗರ್ವಿತಾ 
ಲಲಿತಾಂಬಿಕೆಯಲ್ಲಿರದಿದ್ದೇನಿದೆ, ನಿಗರ್ವದ ಹಿರಿ ಸೌಜನ್ಯ
ಲೋಕೈಕಸೌಂದರ್ಯದೊಡತಿಯಾಗಿ, ನಿರ್ಮದಾ ಸ್ವಭಾವ
ಅತಿಶಯದಪರಿಮಿತಸುಂದರಿ ತಾ ಕಾಕಿನೀ ಅತಿ ಗರ್ವಿತಾ
ಅತಿಶಯದತಿಶಯ ದೇವಿ, ಕಾಕಿನೀ ಗರ್ವಕೆ ಮುಗುಳ್ನಗುತ ||

೫೦೯. ಮೇದೋ-ನಿಷ್ಠಾ
ಚರ್ಮದ ಮೊದಲ ಪದರ, ರಕ್ತವಾಗಿ ಎರಡನೆ ಪದರ
ಮಾಂಸ ಖಂಡ ಮೂರನೆ ಪದರ, ಯೋಗಿನೀ ಸಾಕಾರ
ಕೊಬ್ಬಿನಾಂಶ ನಾಲ್ಕನೆ ಪದರ, ಉಪಸ್ಥಿತೆ ಎಣ್ಣೆ ಜಿಗುಟ
ಚತುರ್ಚಕ್ರ ವಾಕ್ದೇವಿ ಗಣನೆ, ಕಾಕಿನೀ ಮೇದೋ-ನಿಷ್ಠಾ ||

೫೧೦. ಮಧು-ಪ್ರೀತಾ
ಮಧುಪರ್ಕ ದೇವತೆಗಳಿಗರ್ಪಿತ, ಯಾಗ ಯಜ್ಞಾದಿ ಹವಿಸ್ಸು
ಯಾಗದೇವತಾ ಸಂತೃಪ್ತ್ಯಾರ್ಥ, ಘೃತ ಕ್ಷೀರ ಮಧುವ ತುಸು
ಮಧು ಮದ್ಯಸಾರ ಜೇನು ತುಪ್ಪ, ಕಾಕಿನಿ ದೇವಿಯ ಪ್ರೀತ್ಯರ್ಥ
ಕಾಯಿಪಲ್ಲೆ ಮಾಂಸ ಕುದಿಸಿದರಸ, ಬಯಸುತೆ ಮಧುಪ್ರೀತಾ ||

೫೧೧. ಬಂದಿನ್ಯಾದಿ-ಸಮನ್ವಿತಾ
ಆರು ದಳ ಕಮಲದ, ಪ್ರತಿ ದಳಕೊಬ್ಬ ಪರಿಚಾರಿಕೆಯಂತೆ
ಸುತ್ತುವರೆದ ಕಾಕಿನೀ ದೇವಿ, ಬಂದಿನೀ ಮೊದಲಾದ ಜತೆ
ಸಹಾಯಕಿಯರಾಸೀನರಾಗಿ ಕುಳಿತೆ ಆರು ದಳಗಳ ಸುತ್ತ
ಭದ್ರಕಾಳೀ ಮಹಾಮಾಯಾ ಜತೆ ಬಂದಿನ್ಯಾದಿ-ಸಮನ್ವಿತಾ ||

೫೧೨. ದಧ್ಯನ್ನಾಸಕ್ತ-ಹೃದಯಾ
ಪ್ರತಿ ಯೋಗಿನಿಗೂ ಪ್ರಿಯವಿಹ ತರತರ ಪರಮಾನ್ನ
ಲಲಿತೆಯೊಲಿಸೊ ಪಥದಲಿ ಸಂತೃಪ್ತಿಗೊಳಿಸೆಲ್ಲರನ
ಸಂಪ್ರೀತಳೆ ಕಾಕಿನೀ, ಇಚ್ಛಿಸೆ ಮೊಸರನ್ನ ಅರ್ಪಣೆಯ
ಸುಗಮವಾಗಿಸುವಳು ಧ್ಯಾನ ದಧ್ಯನ್ನಾಸಕ್ತ-ಹೃದಯಾ ||

೫೧೩. ಕಾಕಿನೀ-ರೂಪ-ಧಾರಿಣೀ
ಸ್ವಾದಿಷ್ಠಾನ ಚಕ್ರದಧಿದೇವತೆ ಕಾಕಿನೀ ಚತುರ್ವದನೆ
ಜಿಡ್ಡಿನೊಳಗಂತರ್ಗತೆ ಚರ್ಮಪದರದ ನಾಲ್ಕನೆ ಮನೆ
ಬಂಗಾರದ ಕಾಂತಿಯಲಿ ಮಿರುಗುವ ಸೌಂದರ್ಯಖನಿ
ಗರ್ವದಿ ಪರಿಚಾರಿಕೆಯೊಡನೆ ಕಾಕಿನೀ-ರೂಪ-ಧಾರಿಣೀ ||

ಧನ್ಯವಾದಗಳೊಂದಿಗೆ
- ನಾಗೇಶ ಮೈಸೂರು
 

ನಾನೂ ನಾಗೇಶರ ಹಾಗೇ ಕವನ ಬರೆದರೆ ಹೇಗೆ ಎಂದು(ನಾಗೇಶರು ಬರೆದ ಕವನ ನೋಡದೇ) ಅರ್ಧಗಂಟೆ ಪ್ರಯತ್ನಿಸಿದೆ. ಸ್ವಾಧಿಷ್ಠಾನ ಕಮಲ ಆಶ್ರಿತೆ..ಅಲ್ಲಿಂದ ನಂತರ ಮುಂದೆ ಹೋಗಲೇ ಇಲ್ಲ..:( .
ಮೆಲ್ಲ ನಾಗೇಶರ ಕವನ ನೋಡಿದೆ-"ನಿವಾಸಿನಿ ಸ್ವಾಧಿಷ್ಠಾನ ಚಕ್ರದೆ, ಬೆನ್ನೆಲುಬಿನ ತಳದ ಪದ್ಮ ಷಟ್ದಳ.." ವ್ಹಾ..ನಾಗೇಶರೆ, ನಾನು ಎರಡು ಲೈನ್ ಬರೆಯುವುದರೊಳಗೆ ನೀವು ಪೂರ್ತಿ ಕವನ, ಮತ್ತೆರಡು ಲೇಖನ, ೫-೬ ಪ್ರತಿಕ್ರಿಯೆ ಬರೆದು ಬಿಡಬಲ್ಲಿರಿ!
ಶ್ರೀಧರ್‌ಜಿ, ".. ’ರಂ’ನೊಂದಿಗೆ ಸರಿಯಾದ ಸಂಯೋಜನೆಯಲ್ಲಿ ಸೇರಿದಾಗ ಅದು ಕೆಲವೊಂದು ಅತೀಂದ್ರಿಯ ಶಕ್ತಿಗಳನ್ನು ದಯಪಾಲಿಸುತ್ತದೆ." :) ಧ್ಯಾನದಂತೆ ಕುಳಿತು ಓದಿದರೂ ತಲೆ ಕೆಲವೊಮ್ಮೆ ಎಲ್ಲೆಲ್ಲೋ ಓಡುತ್ತದೆ. :)
Kākinī-rūpa-dhariṇī काकिनी-रूप-धरिणी (513)

೫೧೩. ಕಾಕಿನೀ-ರೂಪ-ಧಾರಿಣೀ
ಹಿಂದಿಯಲ್ಲಿ "ಧರಿಣೀ" ಅಂದು ಕನ್ನಡದಲ್ಲಿ ಧಾರಿಣೀ ಅಂದಿದ್ದೀರಾ..

ಗಣೇಶ್ ಜೀ, ನೀವು ಮನಸು ಮಾಡಿದರೆ ಖಂಡಿತ ಬರೆಯಬಲ್ಲಿರಿ. ಇದೇನು ಬ್ರಹ್ಮ ವಿದ್ಯೆಯೇನಲ್ಲ ; ಆರಂಭದಲಿ ವೇಗ ಕುಂಠಿತವಾಗಿರಬಹುದಷ್ಟೆ :-)

Submitted by makara Sat, 09/28/2013 - 08:00

@ಗಣೇಶ್‌ಜಿ,
’ರಂ’ನೊಂದಿಗೆ ಬೇರೆ ಬೀಜಾಕ್ಷರಗಳ ಕಾಕ್-ಟೇಲ್ ಆದಾಗ ಸಹಜವಾಗಿಯೇ ಶಕ್ತಿಯ ಕಿಕ್ ಹೆಚ್ಚುತ್ತದೆ :)) ಎಷ್ಟೇ ಆಗಲಿ ಮಲ್ಲೇಶ್ವ’ರಂ’ನಲ್ಲಿ ವಾಸಿಸುವರಿಗೆ ನಾನು ಹೇಳಕೊಡಬೇಕಾದದ್ದೇನಿದೆ.
ಧಾರಣಿ/ಧರಣಿಯ ಕುರಿತು
ಸಂಸ್ಕೃತ ಮತ್ತು ಇಂಗ್ಲೀಷಿನಲ್ಲಿರುವ ನಾಮಗಳನ್ನು ಕಟ್-ಪೇಸ್ಟ್ ಮಾಡುವುದರಿಂದ ಅದರಲ್ಲಿರುವ ಕಾಗುಣಿತ ತಪ್ಪುಗಳನ್ನು ಹಲವಾರು ಬಾರಿ ಗಮನಿಸದೇ ಹೋಗುತ್ತೇನೆ. ಅದನ್ನು ನನ್ನ ದೃಷ್ಟಿಗೆ ತಂದಿರುವುದರಿಂದ ಇನ್ನು ಮುಂದೆ ಪ್ರಕಟಣೆಗೆ ಮುಂಚೆ ಅವುಗಳನ್ನೂ ಸಹ ಕೂಲಂಕುಷವಾಗಿ ಪರಿಶೀಲಿಸುತ್ತೇನೆ.
@ನಾಗೇಶರೆ,
ಖಂಡಿತವಾಗಿ ಗಣೇಶರು ಚೆನ್ನಾಗಿ ಕವನ ರಚಿಸಬಲ್ಲರು. ಅದರ ಕಡೆ ಅವರು ದೃಷ್ಟಿ ಸಾರಿಸಿಲ್ಲವಷ್ಟೇ! ನೀವು ರಚಿಸಿರುವ ಪದ್ಯಗಳ ಪರಿಷ್ಕರಣೆಯೂ ಅದೇಕೂ ವಿಳಂಬವಾಗುತ್ತಿವೆ. ನಿಧಾನವಾಗಿ ಓದಿ ಪರಿಷ್ಕರಿಸುತ್ತೇನೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ