೧೨೬. ಲಲಿತಾ ಸಹಸ್ರನಾಮ ೫೨೮ರಿಂದ ೫೩೪ನೇ ನಾಮಗಳ ವಿವರಣೆ

೧೨೬. ಲಲಿತಾ ಸಹಸ್ರನಾಮ ೫೨೮ರಿಂದ ೫೩೪ನೇ ನಾಮಗಳ ವಿವರಣೆ

ಚಿತ್ರ

ಲಲಿತಾ ಸಹಸ್ರನಾಮ ೫೨೮ - ೫೩೪

Sahasradala-padmasthā सहस्रदल-पद्मस्था (528)

೫೨೮. ಸಹಸ್ರದಲ-ಪದ್ಮಸ್ಥಾ

           ಮುಂದಿನ ಏಳು ನಾಮಗಳು ಯಾಕಿನೀ ಯೋಗಿನಿಯನ್ನು ಕುರಿತು ಚರ್ಚಿಸುತ್ತವೆ; ಈಕೆಯು ಎಲ್ಲಾ ಚರ್ಚಿತ ಯೋಗಿನಿಯರಲ್ಲಿ ಕಡೆಯವಳಾಗಿದ್ದಾಳೆ. ಸಹಸ್ರಾರ ಅಥವಾ ಕಿರೀಟ ಚಕ್ರದಲ್ಲಿ ಯಾಕಿನೀ ಯೋಗಿನಿಯು ಉಪಸ್ಥಿತಳಾಗಿದ್ದಾಳೆ. ಸಹಸ್ರಾರವು ಸಹಸ್ರದಳ ಪದ್ಮದ ರೂಪದಲ್ಲಿರುತ್ತದೆ. ಇದನ್ನು ಚಕ್ರಗಳ ಗುಂಪಿನೊಂದಿಗೆ ವರ್ಗೀಕರಿಸುವುದಿಲ್ಲ ಮತ್ತು ಇದರ ವಿವರಣೆಯು ಕ್ಲಿಷ್ಟವಾಗಿದೆ. ಬ್ರಹ್ಮಾಂಡ ಮತ್ತು ಆತ್ಮದೊಂದಿಗಿನ ದೈವೀ ಸಂವಹನವು ತಲೆಯ ಮೇಲಿನ ಬ್ರಹ್ಮರಂಧ್ರ (ब्रह्मरन्ध्र) ಎನ್ನುವ ಅತೀ ಸಣ್ಣರಂಧ್ರದ ಮೂಲಕ ಜರಗುತ್ತದೆ. ಸಹಸ್ರಾರದ ಪರಿಧಿಯು ಪೂರ್ಣ ಚಂದ್ರನಿಗಿಂತ ಹೆಚ್ಚು ಕಾಂತಿಯುತವಾಗಿರುತ್ತದೆಂದು ಹೇಳಲಾಗುತ್ತದೆ. ಈ ಚಂದ್ರನ ಕಿರಣಗಳು ಬಹುವರ್ಣಗಳಿಂದ ರಚಿತವಾಗಿದ್ದು, ಪ್ರಮುಖವಾಗಿ ಕಾಮನ ಬಿಲ್ಲಿನ ಏಳು ಬಣ್ಣಗಳಿಂದ ಕೂಡಿವೆ. ಚಕ್ರಗಳ ಬಣ್ಣವು ಮೂಲಾಧಾರದಲ್ಲಿ ಕೆಂಪು ವರ್ಣದಿಂದ ಪ್ರಾರಂಭವಾಗಿ, ಸ್ವಾಧಿಷ್ಠಾನದಲ್ಲಿ ಕಿತ್ತಳೆ ಬಣ್ಣವನ್ನು ಹೊಂದಿ, ಮಣಿಪೂರಕದಲ್ಲಿ ಹಳದಿಯಾಗಿದ್ದು, ಅನಾಹತದಲ್ಲಿ ಹಸಿರು ಬಣ್ಣದ್ದಾಗಿರುತ್ತದೆ, ಆಜ್ಞಾ ಚಕ್ರದಲ್ಲಿ ಊದಾರಂಗನ್ನು ಹೊಂದಿ ಅದು ಸಹಸ್ರಾರದಲ್ಲಿ ನೇರಳೇ ಬಣ್ಣವನ್ನು ಪಡೆಯುತ್ತದೆ. ನೇರಳೇ ಬಣ್ಣವು ಸಹಸ್ರಾರದಲ್ಲಿ ಎಲ್ಲಕ್ಕಿಂತ ಪ್ರಮುಖವಾದ ಬಣ್ಣವೆನಿಸಿದರೂ ಸಹ ಅದನ್ನು ಪ್ರಚೋದಿಸಿದಾಗ ಅದರಲ್ಲಿ ಬಹು ವರ್ಣಗಳು ಕಂಡುಬರುತ್ತವೆ. ಶಿವ ಮತ್ತು ಶಕ್ತಿಯರ ಸಮಾಗಮವು ಇಲ್ಲಿ ಜರಗುತ್ತದೆ.

          ಸಹಸ್ರಾರದ ಮಧ್ಯದಲ್ಲಿ ಶೂನ್ಯ (ಬರಿದು) ಎಂದು ಕರೆಯಲ್ಪಡುವ ಒಂದು ಬಿಂದುವಿದ್ದು ಅದು ಮುಕ್ತಿಗೆ ಮೂಲವಾಗಿದೆ ಮತ್ತದು ಮಾನವನ ತಲೆ ಕೂದಲಿನ ಅಗಲದ ಒಂದು ಕೋಟಿಯಲ್ಲಿ ಒಂದನೇ ಭಾಗದಷ್ಟಿದೆ. ಶಿವನು ಇಲ್ಲಿ ಪರಿಶುದ್ಧ ಬ್ರಹ್ಮವಾಗಿ ಆವಿರ್ಭಾವಗೊಳ್ಳುತ್ತಾನೆ ಮತ್ತು ಶಕ್ತಿಯು ಇಲ್ಲಿ ಅವನೊಂದಿಗೆ ಸಮಾಗಮ ಹೊಂದುತ್ತಾಳೆ ತನ್ಮೂಲಕ ನಿತ್ಯಾನಂದವು ಹೊರಹೊಮ್ಮಿ ಅದು ನಮ್ಮನ್ನು ಅಂತಿಮ ಮುಕ್ತಿಯೆಡೆಗೆ ಕೊಂಡೊಯ್ಯುತ್ತದೆ. ಆಜ್ಞಾ ಚಕ್ರದಲ್ಲಿ ಸಂಪೂರ್ಣವಾಗಿ ಪರಿಶುದ್ಧಗೊಂಡ ಮನಸ್ಸು ಆತ್ಮ ಮತ್ತು ಪರಮಾತ್ಮದ (ಪರಬ್ರಹ್ಮದ) ಏಕತೆಯನ್ನು ಅರಿಯಲು ಪ್ರಾರಂಭಿಸುತ್ತದೆ. ಯಾವ ಸಾಧಕನು ಈ ರಂಧ್ರವನ್ನು ಪ್ರಚೋದಿಸುವುದರಲ್ಲಿ ಸಫಲನಾಗುತ್ತಾನೆಯೋ ಅವನಿಗೆ ಪುನರ್ಜನ್ಮವಿರದು, ಅವನು ತನ್ನ ಎಲ್ಲಾ ಕರ್ಮಗಳಿಂದ ಬಿಡುಗಡೆ ಹೊಂದುತ್ತಾನೆ.

          ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ (೧೮.೪೯), "ಒಬ್ಬ ವ್ಯಕ್ತಿಯು ವೈರಾಗ್ಯವನ್ನು ರೂಡಿಸಿಕೊಳ್ಳುವುದರ ಮೂಲಕ ಕರ್ಮಗಳಿಂದ ಬಿಡುಗಡೆ ಹೊಂದಿ ಮುಕ್ತಿಯನ್ನು ಹೊಂದಬಹುದು" ಎಂದು ಹೇಳುತ್ತಾನೆ. ಈ ಹಂತದಲ್ಲಿ ಸಾಧಕನು ಅವನ ಸ್ವತಂತ್ರ ಹೊಂದಿದ ಮನಸ್ಸನ್ನು ಬಳಸುವುದಿಲ್ಲ (ಸ್ವೇಚ್ಛೆಯಾಗಿರುವ ಅವನ ಮನಸ್ಸನ್ನು ಭಗವಂತನಿಗೆ ಅರ್ಪಿಸುತ್ತಾನೆ) ಮತ್ತು ಅವನು ಕೇವಲ ಭಗವಂತನ ಇಚ್ಛೆಯ ಆಜ್ಞಾನುವರ್ತಿಯಾಗಿ ಕಾರ್ಯನಿರ್ವಹಿಸುತ್ತಾನೆ. ಈ ವಿಧವಾದ ಪ್ರಸಂಗವು ಸಹಸ್ರಾರವು ಪ್ರಚೋದಿತವಾಗಿದ್ದರೆ ಮಾತ್ರ ಸಾಧ್ಯವಾಗುತ್ತದೆ. ಮೂಲಾಧಾರದಿಂದ ಆರೋಹಣಗೊಂಡ ಶಕ್ತಿಯು ಸಹಸ್ರಾರದಲ್ಲಿ ಶಿವನೊಂದಿಗೆ ಸಮಾಗಮ ಹೊಂದಿದಾಗ ಪರಮಾನಂದವನ್ನುಂಟು ಮಾಡುವ ಅಮೃತವು ಬಿಡುಗಡೆಯಾಗುತ್ತದೆ ಅದು ಗಂಟಲಿನಲ್ಲಿ ಅನುಭವಕ್ಕೆ ಬರುತ್ತದೆ, ಮತ್ತು ಇದರಿಂದ ದೈವೀ ಪೋಷಣೆಯುಂಟಾಗಿ ಇದು ಸಾಧಕನು ಅದು ನಾನೇ (ತತ್ತ್ವಮಸಿ - ತತ್ ತ್ವಮ್ ಅಸಿ) ಎನ್ನುವುದನ್ನು ಅರಿಯುತ್ತಾನೆ, ಇದು ಒಬ್ಬನ ಆಧ್ಯಾತ್ಮಿಕ ತೃಷೆಯು ಇಂಗಿದ್ದನ್ನು ಸೂಚಿಸುತ್ತದೆ. ಇಲ್ಲಿ ಶಿವ (ಅದು) ಮತ್ತು ಶಕ್ತಿ (ನಾನು) ಇವುಗಳ ಒಂದುಗೂಡುವಿಕೆಯು ಅತ್ಯಂತ ಸೂಕ್ಷ್ಮರೂಪಗಳಲ್ಲಿ ಜರುಗುತ್ತದೆ.

          ಎಲ್ಲಾ ಅಕ್ಷರಗಳು ಅವ್ಯಾಹತವಾಗಿ ಪದ್ಮದ ಎಲ್ಲಾ ದಳಗಳಲ್ಲಿ ಇರಿಸಲ್ಪಟ್ಟಿವೆ. ಐವತ್ತೊಂದು ಸಂಸ್ಕೃತ ಅಕ್ಷರಗಳಲ್ಲಿ ’ಕ್ಷ’ ಅಕ್ಷರವನ್ನು ಹೊರತುಪಡಿಸಿದರೆ ಐವತ್ತೊಂದು ಅಕ್ಷರಗಳಾಗುತ್ತವೆ ಎಂದೂ ಹೇಳಲಾಗುತ್ತದೆ. ಈ ಐವತ್ತು ಅಕ್ಷರಗಳನ್ನು ಅನುಕ್ರಮದಲ್ಲಿ ಇಪ್ಪತ್ತು ಬಾರಿ ಇರಿಸುವುದರ ಮೂಲಕ ಒಂದು ಸಹಸ್ರವವಾಗುತ್ತದೆ. ಇಲ್ಲಿ ಪರಬ್ರಹ್ಮದ ಪಾದಗಳನ್ನು (ಕೆಲವರು ಇದನ್ನು ಒಬ್ಬನ ಗುರುವಿನ ಪಾದಗಳೆಂದು ಉಲ್ಲೇಖಿಸುತ್ತಾರೆ; ಯಾವುದೇ ರೀತಿಯಿಂದ ನೋಡಿದರೂ ಇದರಲ್ಲಿ ವ್ಯತ್ಯಾಸವುಂಟಾಗದು ಏಕೆಂದರೆ ಗುರು ಮತ್ತು ಬ್ರಹ್ಮ ಇವರಿಬ್ಬರಿಗೂ ತತ್ವಶಃ ವ್ಯತ್ಯಾಸವಿಲ್ಲ) ಪೂಜಿಸಲಾಗುತ್ತದೆ ಅದರ ಮೂಲಕ ಒಬ್ಬನ ಸಂಚಿತ ಕರ್ಮವು ಕಳೆಯುತ್ತದೆ (ಪೂರ್ವ ಜನ್ಮಗಳಿಂದ ಶೇಖರಗೊಂಡ ಇನ್ನೂ ಫಲಿಸದೇ ಇರುವ ಒಟ್ಟು ಕರ್ಮಗಳ ಮೊತ್ತ). ಸಹಸ್ರಾರದ ಅಂಚಿನಲ್ಲಿ ಒಂದು ಚಂದ್ರನಿದ್ದು ಆ ಚಂದ್ರನೊಳಗೆ ಒಂದು ತ್ರಿಕೋಣವಿದೆ ಮತ್ತು ಆ ತ್ರಿಕೋಣದಲ್ಲಿ ಉನ್ಮನೀ ಅಂದರೆ ಮನಸ್ಸಿನ ಎಲ್ಲಾ ವಿಕೃತಿಗಳನ್ನು ಬರಿದಾಗಿಸುವ (ಶೂನ್ಯಗೊಳಿಸುವ) ತತ್ವವು ಇರುತ್ತದೆ. ಉನ್ಮನೀ ಎನ್ನುವುದು ಹೀಗೆ ನಿರ್ವಚಿಸಬಹದುದು, ಉನ್ಮನೀ ಅಥವಾ ಉನ್ಮನಾ ಎನ್ನುವುದು ಪರಮಶಿವನ ಅಸಾಮಾನ್ಯ ಶಕ್ತಿಯಾಗಿದ್ದು ಅದು ರೂಪಾಂತರ ಹೊಂದುವ ಪ್ರಾಥಮಿಕ ಹಂತದಲ್ಲಿದ್ದರೂ ಸಹ ಅವನಿಂದ ಬೇರ್ಪಡಿಸಲಾಗದೇ ಇರುವಂತಹದ್ದು. ಇದು ಪರಮಾನಂದವನ್ನು ಹೊಂದಲು ಅತ್ಯಂತ ಪ್ರಮುಖ ಕಾರಣವಾಗಿದೆ, ಎಕೆಂದರೆ ಇಲ್ಲಿ ಮನಸ್ಸಿನ ಎಲ್ಲಾ ಪ್ರಲೋಭನೆಗಳು ಆಧಿಗಮಿಸಲ್ಪಡುತ್ತವೆ.

Sarva-varṇopa-śobhitā सर्व-वर्णोप-शोभिता (529)

೫೨೯. ಸರ್ವ-ವರ್ಣೋಪ-ಶೋಭಿತಾ

          ಯಾಕಿನೀ ದೇವಿಯು ಎಲ್ಲಾ ವರ್ಣಗಳಿಂದ ಕಂಗೊಳಿಸುತ್ತಾಳೆ. ವರ್ಣ ಎನ್ನುವುದು ಒಂದು ಸಹಸ್ರ ದಳಗಳ ಮೇಲೆ ಕೆತ್ತಲಾಗಿರುವ ಅಕ್ಷರಗಳನ್ನೂ ಸಹ ಸೂಚಿಸುತ್ತದೆ. ಅಕ್ಷರಗಳನ್ನು ’ಅ’(अ)ದಿಂದ ಪ್ರಾರಂಭಿಸಿ ’ಕ್ಷ’(क्ष)ವರೆಗೆ ಆ ದಳಗಳಲ್ಲಿ ಇರಿಸಲಾಗಿರುತ್ತದೆ ತದನಂತರ ’ಕ್ಷ’ ದಿಂದ ಪ್ರಾರಂಭಿಸಿ ’ಅ’ದವರೆಗೆ ಮತ್ತು ಅದರ ನಂತರ ”ಅ’ದಿಂದ ”ಕ್ಷ’ದವರೆಗೆ ಹೀಗೆ ಸಾಗುತ್ತದೆ ಎನ್ನುವ ವ್ಯಾಖ್ಯಾನವೂ ಇದೆ.

Sarvāyudha-dharā सर्वायुध-धरा (530)

೫೩೦. ಸರ್ವಾಯುಧ-ಧರಾ

          ಯಾಕಿನೀ ದೇವಿಯು ಬಳಿ ಎಲ್ಲಾ ವಿಧವಾದ ಆಯುಧಗಳಿವೆ. ಸಹಸ್ರಾರದಲ್ಲಿ, ಎಲ್ಲವೂ ಅನಂತವಾಗಿರುತ್ತದೆ ಏಕೆಂದರೆ ಸಹಸ್ರಾರವು ಮಾನವನ ವಿವರಣೆಗೆ ನಿಲುಕಲಾರದ್ದು. ಮತ್ತು ಸಹಸ್ರಾರದಲ್ಲಿ ಉಂಟಾಗುವ ಅನುಭವವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ.

ಶ್ರೀ ರುದ್ರಂ (ಯಜುರ್ವೇದ ೪.೫.೧೦ ಶ್ಲೋಕ ೧೨) ಹೀಗೆ ಹೇಳುತ್ತದೆ, "ಸಾವಿರದಲ್ಲಿ ಸಾವಿರ ಪಟ್ಟು ನಿನ್ನ ಕೈಯ್ಯಲ್ಲಿರುವ ಆಯುಧಗಳಿವೆ".

ಈ ವಿಧವಾದ ಉಲ್ಲೇಖಗಳು ವೇದ ಮತ್ತು ಉಪನಿಷತ್ತುಗಳಲ್ಲಿ ವಿಪುಲವಾಗಿ ದೊರೆಯುತ್ತವೆ.

Śukla-saṁsthitā शुक्ल-संस्थिता (531)

೫೩೧. ಶುಕ್ಲ-ಸಂಸ್ಥಿತಾ

           ಯಾಕಿನೀ ದೇವಿಯು ಮಾನವ ಶರೀರದ ಅತ್ಯಂತ ಸೂಕ್ಷ್ಮ ಉತ್ಪನ್ನವಾದ ವೀರ್ಯ ಅಥವಾ ಅಂಡಾಣುಗಳ ರೂಪದಲ್ಲಿದ್ದಾಳೆ. ಯಾಕಿನೀ ದೇವಿಯು ಮಾನವ ಶರೀರದ ಸೃಷ್ಟಿ ಮತ್ತು ಮಾನವನ ಮನಸ್ಸಿನ ವಿನಾಶವನ್ನು ಪ್ರತಿನಿಧಿಸುತ್ತಾಳೆ.

Sarvatomukhī सर्वतोमुखी (532)

೫೩೨. ಸರ್ವತೋಮುಖೀ

          ಯಾಕಿನೀ ದೇವಿಗೆ ಎಣೆಯಿಲ್ಲದಷ್ಟು ಮುಖಗಳಿವೆ.

          ’ಎಲ್ಲಾ ದಿಕ್ಕುಗಳನ್ನು ನೋಡುವ ಅನಂತ ಮುಖಗಳಿವೆ’ ಎನ್ನುವುದು ಪರಬ್ರಹ್ಮದ ಕಲ್ಪನೆಯಾಗಿದೆ. ಮುಂಡಕ ಉಪನಿಷತ್ತು (೧.೧೩), "ಎಲ್ಲೆಡೆ ಕಣ್ಣುಗಳನ್ನು ಹೊಂದಿದ್ದು, ಎಲ್ಲಾ ಕಡೆ ಕೈಗಳನ್ನು ಹೊಂದಿದ್ದು, ಎಲ್ಲಾ ಕಡೆ ಪಾದಗಳನ್ನು ಹೊಂದಿದ್ದು" ಎಂದು ಹೇಳುತ್ತದೆ.

ಭಗವದ್ಗೀತೆಯ ೧೩.೧೩ನೇ ಶ್ಲೋಕವು, ಅವನು ಈ ಪ್ರಪಂಚದಲ್ಲಿ ಎಲ್ಲವನ್ನೂ ಆವರಿಸಿ ನಿವಸಿಸುತ್ತಾನೆ, ಅವನ ಕೈ ಮತ್ತು ಕಾಲುಗಳು ಎಲ್ಲೆಡೆ ಇರುತ್ತವೆ. ಅವನ ಕಣ್ಣುಗಳು ಮತ್ತು ಕಿವಿಗಳು, ಬಾಯಿಗಳು ಮತ್ತು ಶಿರಗಳು ಎಲ್ಲಾ ಕಡೆಗಳಲ್ಲಿ ಇರುತ್ತದೆ" ಎಂದು ಹೇಳುತ್ತದೆ.

ಪುರುಷ ಸೂಕ್ತವು ಹೀಗೆ ಹೇಳುವುದರೊಂದಿಗೆ ಪ್ರಾರಂಭವಾಗುತ್ತದೆ, "ಪುರುಷನಿಗೆ (ಪರಬ್ರಹ್ಮನಿಗೆ) ಸಾವಿರಾರು ಶಿರಗಳು, ಸಾವಿರಾರು ಕಣ್ಣುಗಳು, ಸಾವಿರಾರು ಪಾದಗಳು ಇವೆ".

ಈ ಪುರುಷನು ಹೇಗೆ ಕಾಣಿಸುತ್ತಾನೆ ಎನ್ನುವುದನ್ನು ಭಗವದ್ಗೀತೆಯ ೧೧.೧೨ನೇ ಶ್ಲೋಕವು ವಿವರಿಸುತ್ತದೆ, ಅದು ಹೇಳುತ್ತದೆ "ಒಂದು ವೇಳೆ ಸಹಸ್ರ ಸೂರ್ಯರು ಆಕಾಶದಲ್ಲಿ ಒಮ್ಮೆಲೇ ಕಾಣಿಸಿಕೊಂಡರೆ ಅವುಗಳು ’ಅವನನ್ನು’ ಮಸುಕಾಗಿ ಹೋಲಬಹುದು".

Sarvaudana-prīta-cittā सर्वौदन-प्रीत-चित्ता (533)

೫೩೩. ಸರ್ವೌದನ-ಪ್ರೀತ-ಚಿತ್ತಾ

ಯಾಕಿನೀ ದೇವಿಯು ಎಲ್ಲಾ ವಿಧವಾದ ಆಹಾರಗಳನ್ನು ಇಷ್ಟಪಡುತ್ತಾಳೆ.

ಸಹಸ್ರಾರದ ಬಗ್ಗೆ ನೆನಪಿನಲ್ಲಿಡಬೇಕಾದದ್ದೇನೆಂದರೆ ಅದರ ಅನಂತತೆಯ ಗುಣ. ಸಹಸ್ರಾರದಲ್ಲಿ ಉಪಸ್ಥಿತಳಿರುವ ಯೋಗಿನಿಯು ಎಲ್ಲಕ್ಕೂ ಅತೀತಳು.

Yākinyambā-svarūpiṇī याकिन्यम्बा-स्वरूपिणी (534)

೫೩೪. ಯಾಕಿನ್ಯಾಂಬಾ-ಸ್ವರೂಪಿಣೀ

           ಸಹಸ್ರಾರದಲ್ಲಿ ಆಸೀನಳಾಗಿರುವ ಯೋಗಿನಿಯನ್ನು ಯಾಕಿನೀ ಮಾತೆ ಎಂದು ಕರೆಯಲಾಗುತ್ತದೆ, ಅವಳನ್ನೇ ೫೨೮ನೇ ನಾಮದಿಂದ ೫೩೪ನೇ ನಾಮದವರೆಗೆ (ಏಳು ನಾಮಗಳಲ್ಲಿ) ವರ್ಣಿಸಿರುವುದು. ಇದರೊಂದಿಗೆ ಯೋಗಿನಿಯರ ವರ್ಣನೆಯು ಕೊನೆಗೊಳ್ಳುತ್ತದೆ.

******

         ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 528 - 534 http://www.manblunde...ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.            ಚಕ್ರಗಳ ಮತ್ತು ಸಹಸ್ರಾರ ಚಿತ್ರಕೃಪೆ: ಗೂಗಲ್   

Rating
Average: 5 (1 vote)

Comments

Submitted by nageshamysore Thu, 10/03/2013 - 04:03

ಶ್ರೀಧರರೆ, ೧೨೬. ಶ್ರೀ ಲಲಿತಾ ಸಹಸ್ರನಾಮದ ವಿವರಣೆಯ ಕಾವ್ಯಸಾರ ಪರಿಷ್ಕರಣೆಗೆ ಸಿದ್ದ:-)

ಲಲಿತಾ ಸಹಸ್ರನಾಮ ೫೨೮ - ೫೩೪
____________________________________________

೫೨೮. ಸಹಸ್ರದಲ-ಪದ್ಮಸ್ಥಾ 
ಯೋಗಿನಿಯರಲಂತಿಮ ಯೋಗಿನಿ ಯಾಕಿನೀ, ಸಹಸ್ರಾರದಲಿ ಉಪಸ್ಥಿತೆ
ಸಹಸ್ರದಳ ಪದ್ಮರೂಪಿ ಸಹಸ್ರಾರ, ಬ್ರಹ್ಮರಂಧ್ರ ದೈವೀಸಂವಹನ ತರುತೆ
ಕ್ಲಿಷ್ಟ-ಉತ್ಕೃಷ್ಟ ನಿಜ ಚಕ್ರವಲ್ಲದ ಕಿರೀಟ, ಬ್ರಹ್ಮಾಂಡ-ಆತ್ಮಗಳ ಮಿಲನದಲ್ಲಿ
ತಿಂಗಳನ ಮೀರಿದ ಕಾಂತಿ ಸಹಸ್ರಾರ ಪರಿಧಿಗೆ ಲೇಪಿಸಿ, ಬ್ರಹ್ಮಕೆ ಬೆಸೆವಲ್ಲಿ ||

ವರ್ಣರಂಜಿತವಿಹ ಚಂದ್ರ ಕಿರಣ, ಸೌರಛಾಪದ ಏಳು ಬಣ್ಣಗಳೆ ಪ್ರಮುಖ
ಮೂಲಾಧಾರ ಚಕ್ರದಿ ಕೆಂಪಾಗಿ, ಸ್ವಾಧಿಷ್ಟಾನದಿ ಕಿತ್ತಳೆ ರಂಗಿನ ಚಾಲೂಕ
ಮಣಿಪೂರಕದೆ ಹಳದಿ, ಅನಾಹತದೆ ಹಸಿರು, ಆಜ್ಞಾಚಕ್ರದಲಿರೆ ಊದಾ
ಸಹಸ್ರಾರದೆ ಬಹುವರ್ಣದಲಿ ನೇರಳೆ, ಶಿವಶಕ್ತಿ ಸಮಾಗಮಕೆ ಸದಾಸಿದ್ದ ||
           
ಸಹಸ್ರಾರ ಮಧ್ಯ ಶೂನ್ಯ ಬಿಂದು, ಕೇಶದಗಲದ ಕೋಟಿಯೊಂದನೆ ಭಾಗ 'ಬರಿದು'
ಪರಿಶುದ್ಧ ಬ್ರಹ್ಮದ ಆವಿರ್ಭಾವ, ಶಕ್ತಿಸಮಾಗಮದೆ ಮುಕ್ತಿ ನಿತ್ಯಾನಂದಕೆ ಸರಹದ್ದು
ಆಜ್ಞಾಚಕ್ರದಿ ಪರಿಶುದ್ಧಾ ಮನಸು, ಅರಿಯುತ ಆತ್ಮ ಪರಮಾತ್ಮದ ಏಕತೆ ಸೊಗಸು
ಪುನರ್ಜನ್ಮಾ-ಕರ್ಮಶೇಷ ಬಿಡುಗಡೆ ಬಯಸೆ ಸಾಧಕ, ಬ್ರಹ್ಮರಂಧ್ರವ ಪ್ರಚೋದಿಸು ||

ರೂಡಿಸಿಕೊಂಡರೆ ವೈರಾಗ್ಯ, ಕರ್ಮದಿಂದ ಬಿಡುಗಡೆ ಮುಕ್ತಿಗೆ ದಾರಿ
ಭಗವಂತನಿಗರ್ಪಣೆ ಸಾಧಕ ಸ್ವೇಚ್ಛಾಮನ, ಅವನಿಚ್ಛೆಗೆ ನಡೆವ ಪರಿ
ಪ್ರಚೋದಿತ ಸಹಸ್ರಾರಕಷ್ಟೆ ಸಾಧ್ಯ, ಕೊರಳ ಪರಮಾನಂದಾಮೃತ
'ತತ್ತ್ವಮಸಿ' ಇಂಗಿ ಆಧ್ಯಾತ್ಮಿಕ ತೃಷೆ, ಶಿವ ಶಕ್ತಿ ಸಮಾಗಮದದ್ಭುತ |

'ಕ್ಷ' ರಹಿತ ಐವತ್ತು ಸಂಸ್ಕೃತಾಕ್ಷರ, ಜೋಡಿಸೆ ಇಪ್ಪತ್ತು ಬಾರಿ 'ಸಹಸ್ರ'
ಸಹಸ್ರಾರದಳದವ್ಯಾಹತ ಇರಿಸಿ, ಗುರುಪರಬ್ರಹ್ಮ ಪಾದಪೂಜಾ ಸ್ಥರ
ಕಳೆಯುತೆಲ್ಲಾ ಪೂರ್ವ ಸಂಚಿತ ಕರ್ಮ, ವಿಕೃತಿ ಶೂನ್ಯಗೊಳಿಸುವ ತತ್ವ
ಸಹಸ್ರಾರದಂಚ ಚಂದ್ರನೊಳತ್ರಿಕೋನ, ಉನ್ಮನೀ ಪರಮಾನಂದ ಭಾವ!

೫೨೯. ಸರ್ವ-ವರ್ಣೋಪ-ಶೋಭಿತಾ 
ಸಹಸ್ರಾರದಳದೆ ಯಾಕಿನೀ ದೇವಿ, ಸರ್ವವರ್ಣದಿಂ ಕಂಗೊಳಿಸುತೆ
ಪ್ರತಿ ದಳದಲು ಇರಿಸಿದ ವರ್ಣಾಕ್ಷರ, 'ಅ-ಕ್ಷ' 'ಕ್ಷ-ಅ' ಅನುರಣಿತೆ
ಇಪ್ಪತ್ತು ಸಾಲು ಮರುಕಳಿಸೆ ಸಹಸ್ರಾರದಳವ ಪೂರ್ಣಗೊಳಿಸುತಾ
ವರ್ಣದಲಿ ವರ್ಣಾಕ್ಷರದಲಿ ಯೋಗಿನೀ ಸರ್ವವರ್ಣೋಪಶೋಭಿತಾ!

೫೩೦. ಸರ್ವಾಯುಧ-ಧರಾ 
ಮಾನವನೆಣಿಕೆ, ವಿವರಣೆಗೆ ನಿಲುಕದ ಸಹಸ್ರಾರ
ಅನುಭವ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುವ ತರ
ಯಾಕಿನಿ ಕೈಯಲಿ ಹಿಡಿದೆ ಆಯುಧಗಳೆ ಸಹಸ್ರ
ಅನಂತ ಸಹಸ್ರಾದಲಿ ದೇವಿ ಸರ್ವಾಯುಧ-ಧರಾ!

೫೩೧. ಶುಕ್ಲ-ಸಂಸ್ಥಿತಾ 
ಸಹಸ್ರಾರದ ಶಕ್ತಿ ಯಾಕಿನಿಯಲಿ ನಿಯುಕ್ತಿ
ಮಾನವ ಸೃಷ್ಟಿಕ್ರಿಯೆಗಾಗಿರೆ ಮೂಲತಃ ಶಕ್ತಿ
ನೆಲೆಸಿ ಅಂಡಾಣು ವೀರ್ಯ ರೂಪದಲಿರುತಾ
ತನುಸೃಷ್ಟಿ ಮನವಿನಾಶವಾಗಿ ಶುಕ್ಲಸಂಸ್ಥಿತಾ!

೫೩೨. ಸರ್ವತೋಮುಖೀ 
ಅಗಣಿತ ವದನಗಳೊಡನೆ ಸಹಸ್ರಾರದೆ ಯಾಕಿನೀ
ಎಲ್ಲೆಡೆ ಕೈ ಕಾಲು ಕಣ್ಣು ಇರುವಂತೆ ಪರಬ್ರಹ್ಮ ದನಿ
ಸಾವಿರಾರು ಶಿರ ನೇತ್ರ ಕರ್ಣ ಕುಹರ ಪಾದ ಸೋಕಿ
ಸಹಸ್ರಸೂರ್ಯ ಕಾಂತಿ ಬೆಳಗೊ ಸರ್ವತೋಮುಖೀ ||

೫೩೩. ಸರ್ವೌದನ-ಪ್ರೀತ-ಚಿತ್ತಾ 
ಸಹಸ್ರಾರದ ವಿಶೇಷ ಅನಂತತೆಯೆ ಸಶೇಷ
ಉಪಸ್ಥಿತ ಯೋಗಿನಿ ಅತೀತಳಿಹಳೆ ವಿಶೇಷ
ಅಂತೆಯೆ ಬಯಸುವಳೆಲ್ಲ ತರಹಾ ಪ್ರೀತ್ಯರ್ಥ
ಅರ್ಪಿಸಿದೆಲ್ಲ ಆಹಾರ ಸರ್ವೌದನಪ್ರೀತಚಿತ್ತಾ||

೫೩೪. ಯಾಕೀನ್ಯಾಂಬಾ-ಸ್ವರೂಪಿಣೀ 
ಸಹಸ್ರಾರದಲಾಸೀನಳೆ ಯಾಕಿನಿ ಸಹಸ್ರ ದಳ ಮಧ್ಯೆ
ವರ್ಣಭೂಷಿತೆ ವರ್ಣಾಕ್ಷರಪೂರ್ಣೆ ದಳಗಳಲೆ ಸಮೃದ್ದೆ
ಶಿವ ಶಕ್ತಿ ಸಹಸ್ರಾರ ಮಿಲನ, ಬ್ರಹ್ಮರಂಧ್ರ ಸಂವಹನೀ
ಸಾಧಕ ಮಾರ್ಗ ತೆರೆಸೊ ಯಾಕೀನ್ಯಾಂಬಾ-ಸ್ವರೂಪಿಣೀ ||

ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು