೧೨೯. ಲಲಿತಾ ಸಹಸ್ರನಾಮ ೫೪೬ರಿಂದ ೫೪೯ನೇ ನಾಮಗಳ ವಿವರಣೆ

೧೨೯. ಲಲಿತಾ ಸಹಸ್ರನಾಮ ೫೪೬ರಿಂದ ೫೪೯ನೇ ನಾಮಗಳ ವಿವರಣೆ

                                                                                                                  ಲಲಿತಾ ಸಹಸ್ರನಾಮ ೫೪೬ - ೫೪೯

Bandha-mocanī बन्ध-मोचनी (546)

೫೪೬. ಬಂಧ-ಮೋಚನೀ

          ದೇವಿಯು ನಮ್ಮನ್ನು ಬಂಧನಗಳಿಂದ ಮುಕ್ತಗೊಳಿಸುತ್ತಾಳೆ, ಈ ಬಂಧನವು ನಮಗೆ ಅಜ್ಞಾನ ಅಥವಾ ಅವಿದ್ಯೆಯಿಂದ ಉಂಟಾಗುತ್ತದೆ. ಆತ್ಮವು ಆಸೆ ಮತ್ತು ಮೋಹಗಳ ಪ್ರಭಾವಕ್ಕೊಳಪಡುವುದನ್ನೇ ಬಂಧನವೆನ್ನುತ್ತಾರೆ. ಒಬ್ಬರು ದೇವಿಯಲ್ಲಿ ಶರಣಾಗತರಾಗತರಾದಾಗ ಅವರ ಬಂಧನಗಳನ್ನು ಬಿಡಿಸಿ ಆಕೆಯು ಮುಕ್ತಿಯ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಾಳೆ.

Barbarālakā बर्बरालका (547)

೫೪೭. ಬರ್ಬರಾಲಕಾ (ಬಂಧುರಾಲಕಾ*)

           ಕೆಲವೊಂದು ಗ್ರಂಥಗಳಲ್ಲಿ ಈ ನಾಮವನ್ನು ಬಂಧುರಾಲಕಾ ಎಂದು ಹೆಸರಿಸಿದ್ದಾರೆ. ದೇವಿಗೆ ಗುಂಗುರು ಕೂದಲುಗಳಿದ್ದು ಅವು ಅಲೆಗಳಂತೆ ದೇವಿಯು ಮುಂದಲೆಯನ್ನು ತಾಕುವಂತೆ (ಅಪ್ಪಳಿಸುವಂತೆ) ಕಾಣುತ್ತದೆ ಎನ್ನುವುದು ಈ ನಾಮದ ಭಾವಾರ್ಥ.

(*ಶ್ರೀ ರಾಮಕೃಷ್ಣ ಆಶ್ರಮ, ಯಾದವಗಿರಿ, ಮೈಸೂರು, ಪ್ರಕಟಿಸಿರುವ ಶ್ರೀ ಲಲಿತಾ ಸಹಸ್ರನಾಮಸ್ತೋತ್ರಮ್ ಪುಸ್ತಕದಲ್ಲಿ ಬಂಧುರಾಲಕಾ ಎಂದೇ ಇದೆ.)

Vimarśa-rūpiṇī विमर्श-रूपिणी (548)

೫೪೮. ವಿಮರ್ಶ-ರೂಪಿಣೀ**

          ಬ್ರಹ್ಮವು ಪ್ರಕಾಶ ಮತ್ತು ವಿಮರ್ಶ ರೂಪಗಳ ಮಿಶ್ರಣವಾಗಿದೆ. ಪ್ರಕಾಶ ರೂಪವು ಸ್ವಯಂಪ್ರಕಾಶಿತಗೊಳ್ಳುವ ಬೆಳಕಾಗಿದ್ದು ಅದರ ಮೂಲವು ತಿಳಿಯದು. ಅದು ಸೃಷ್ಟಿಯ ಪ್ರಾರಂಭವಾಗಿದೆ ಅಥವಾ ಸೃಷ್ಟಿಯ ಪ್ರಾರಂಭವು ಪ್ರಕಾಶದಿಂದ ಆರಂಭವಾಗುತ್ತದೆ. ಈ ಸ್ವಯಂಪ್ರಕಾಶವಾದ ನಿತ್ಯ ಬೆಳಕಿಲ್ಲದೆ ಯಾವುದೇ ವಸ್ತುವು ಅಸ್ತಿತ್ವದಲ್ಲಿರದು, ಅದು ಶಿವನಾಗಿದೆ. ಶಿವನ ಪ್ರತಿಫಲನವನ್ನು ವಿಮರ್ಶ ಎನ್ನಲಾಗುತ್ತದೆ ಅದನ್ನೇ ಶಕ್ತಿ ಎಂದೂ ಕರೆಯಲಾಗುತ್ತದೆ. ವಿಮರ್ಶ ಅಥವಾ ಶಕ್ತಿಯ ಉಪಸ್ಥಿತಿಯಿಲ್ಲದಿದ್ದರೆ ಶಿವನು ಕಾರ್ಯವನ್ನೆಸಗಲಾರ. ಶಿವನು ಸೃಷ್ಟಿಕರ್ತನಾದರೆ ಶಕ್ತಿಯು ಆ ಕಾರ್ಯವನ್ನು ಮಾಡುವವಳು. ಒಂದು ವೇಳೆ ಅಂತಿಮ ಸತ್ಯವು ವಿಮರ್ಶವಿಲ್ಲದೆ ಕೇವಲ ಪ್ರಕಾಶ ಮಾತ್ರವೇ ಆಗಿದ್ದರೆ ಅದು ನಿದ್ರಾವಸ್ಥೆಯಲ್ಲಿರುತ್ತಿತ್ತು (ಜಡಸ್ಥಿತಿಯಲ್ಲಿರುತ್ತಿತ್ತು) ಎಂದು ಹೇಳಲಾಗುತ್ತದೆ. ಬ್ರಹ್ಮದ ಶಿವ ಅಥವಾ ಪ್ರಕಾಶ ರೂಪವಿಲ್ಲದಿದ್ದರೆ ಶಕ್ತಿ ಅಥವಾ ವಿಮರ್ಶ ರೂಪದ ಅಸ್ತಿತ್ವವು ಸಾಧ್ಯವಿಲ್ಲ. ಬ್ರಹ್ಮದ ವಿಮರ್ಶ ಅಥವಾ ಶಕ್ತಿಯಿಲ್ಲದಿದ್ದರೆ ಸೃಷ್ಟಿಯು ಸಾಧ್ಯವಾಗುತ್ತಿರಲಿಲ್ಲ ಏಕೆಂದರೆ ಶಕ್ತಿಯಿಲ್ಲದ ಶಿವನು ಜಡನಾಗಿರುತ್ತಾನೆ. ಶಿವನು ಕರ್ಮರಹಿತನಾಗಿರುತ್ತಾನೆ ಅದಕ್ಕೆ ಒಂದೇ ಒಂದು ಅಪವಾದವೆಂದರೆ ಶಕ್ತಿಯು ಅವನಿಂದ ಆವಿರ್ಭಾವಗೊಳ್ಳುವುದು. ಆದ್ದರಿಂದ ಆತ್ಮವನ್ನು ಶಿವನ ಪ್ರತಿನಿಧಿ ಎಂದು ಕರೆಯಲಾಗುತ್ತದೆ, ಏಕೆಂದರೆ ಆತ್ಮವು ತನ್ನಷ್ಟಕ್ಕೆ ತಾನೇ ಕಾರ್ಯವನ್ನು ನಿರ್ವಹಿಸಲಾರದು ಅದು ಪ್ರಕೃತಿಯೊಂದಿಗೆ ಸಮ್ಮಿಳಿತಗೊಳ್ಳಲೇ ಬೇಕು. ಶಿವನನ್ನು ಪರಬ್ರಹ್ಮ ಎಂದು ಕರೆಯುವುದಾದರೆ ಶಕ್ತಿಯನ್ನು ಮಾಯೆಯೆಂದು ಕರೆಯಬಹುದು. ಇದು ತರ್ಕಬದ್ಧವೆನಿಸುತ್ತದೆ ಏಕೆಂದರೆ ಬ್ರಹ್ಮದ ಸೃಷ್ಟಿಕರ್ತನ ಸ್ಥಾನವನ್ನು ಇಲ್ಲಿ ಲಯವಾಗಿಸುತ್ತಿಲ್ಲ. ಶಿವನಿಗೆ ಸೃಷ್ಟಿ ಮಾಡಬೇಕೆಂಬ ಬಯಕೆಯಂಟಾದರೂ ಸಹ ಅವನು ತನ್ನ ಸೃಷ್ಟಿಯ ಕಾರ್ಯಗಳನ್ನು ಶಕ್ತಿಯ ಮೂಲಕವಷ್ಟೇ ಅನುಷ್ಠಾನಗೊಳಿಸುತ್ತಾನೆ; ಇದರಿಂದ ಶಕ್ತಿಯು ಬ್ರಹ್ಮದ ನಂತರ ಬಹಳಷ್ಟು ಇಷ್ಟಪಡುವ ರೂಪವಾಗಿ ಪರಿಣಮಿಸಿದೆ. ಶಕ್ತಿಯು ಈ ಪ್ರಪಂಚದ ಪಾಲಕಿಯಾಗಿ ತನ್ನ ಸಾಮರ್ಥ್ಯದಿಂದ ಹಲವಾರು ಕಾರ್ಯಗಳನ್ನು ಕೈಗೊಳ್ಳಬಲ್ಲಳು, ಸೃಷ್ಟಿ, ಸ್ಥಿತಿ, ಸಂಯೋಜನೆ, ಪೂರ್ಣ ವಿನಾಶ ಮತ್ತು ಪುನಃಸೃಷ್ಟಿ (ನಾಮ ೨೭೪), ಮೊದಲಾದವುಗಳು. ಆದ್ದರಿಂದ ಶಿವನು ಅಚರ (ಜಡ) ಶಕ್ತಿಯಾದರೆ ಶಕ್ತಿಯು ಅವನ ಕ್ರಿಯಾಶೀಲ (ಚರ) ಶಕ್ತಿಯಾಗಿದ್ದಾಳೆ. ಯಾವಾಗ ಈ ಎರಡೂ ಶಕ್ತಿಗಳು ಒಂದುಗೂಡುತ್ತವೆಯೋ ಆಗ ಅದನ್ನು ಶಿವ-ಶಕ್ತಿ (ನಾಮ ೯೯೯) ಅಥವಾ ಅರ್ಧನಾರೀಶ್ವರ (ಅರ್ಧ ಪುರುಷ ಮತ್ತು ಅರ್ಧ ಸ್ತ್ರೀ) ರೂಪವೆನ್ನುತ್ತಾರೆ.

          ಈ ನಾಮವು ದೇವಿಯ ಸೃಷ್ಟಿಕ್ರಿಯೆಯ ಅಂಶವನ್ನು ಸೂಚಿಸುತ್ತದೆ.

Vidyā विद्या (549)

೫೪೯. ವಿದ್ಯಾ

           ವಿದ್ಯಾ ಎಂದರೆ ಎಚ್ಚರಿಸುವಿಕೆ ಅಥವಾ ಜಾಗೃತಗೊಳಿಸುವಿಕೆ. ದೇವಿಯು ಜ್ಞಾನವನ್ನು ಕೊಡುವವಳಾಗಿದ್ದು ಅದು ಅಂತಿಮ ಮುಕ್ತಿಯನ್ನು ಕೊಡುವ ಸಾಮರ್ಥ್ಯವನ್ನು ಹೊಂದಿದೆ. ಈ ನಾಮವು ಹಿಂದಿನ ನಾಮದ ವಿಸ್ತರಣೆಯಾಗಿದೆ. ಹಿಂದಿನ ನಾಮದಲ್ಲಿ ಆಕೆಯ ವಿಸ್ತೃತ ಶಕ್ತಿಗಳ ಬಗೆಗೆ ತಿಳಿಸಿದ ನಂತರ ವಾಗ್ದೇವಿಗಳು ಈ ನಾಮದಲ್ಲಿ ಅಂತಿಮ ಮುಕ್ತಿಯ ಕುರಿತಾಗಿ ಹೇಳುತ್ತಾರೆ; ಇದನ್ನು ಕೇವಲ ದೇವಿಯೊಬ್ಬಳೇ ಕರುಣಿಸಬಲ್ಲಳು. ಅಂತಿಮ ಮುಕ್ತಿಯು ಬ್ರಹ್ಮವನ್ನು ಅರಿತುಕೊಳ್ಳದೇ ಸಾಧ್ಯವಿಲ್ಲ, ಇದಕ್ಕೆ ಅತ್ಯುನ್ನತ ಸ್ಥಾಯಿಯ ಶುದ್ಧವಿದ್ಯೆಯೆಂದು ಕರೆಯಲ್ಪಡುವ ಪರಿಶುದ್ಧ ಜ್ಞಾನದ ಅವಶ್ಯಕತೆಯಿದೆ. ಈ ನಾಮವು, ದೇವಿಯು ಆ ಪರಮೋನ್ನತ ಜ್ಞಾನದ ರೂಪದಲ್ಲಿದ್ದಾಳೆ ಅಥವಾ ಆಕೆಯು ಈ ಅತ್ಯುನ್ನತವಾದ ಜ್ಞಾನವನ್ನು ಬಯಸುವವರಿಗೆ ಅದನ್ನು ಕರುಣಿಸುತ್ತಾಳೆ ಎಂದು ಹೇಳುತ್ತದೆ.

           ಶಿವ ಸೂತ್ರವು (೨೧ನೇ ಸೂತ್ರ) ಹೀಗೆ  ಹೇಳುತ್ತದೆ, “ಶುದ್ಧವಿದ್ಯೋದಯಾಚ್ಚಕ್ರೇಶತ್ವಸಿದ್ಧಿಃ (शुद्धविद्योदयाच्चक्रेशत्वसिद्धिः)” ಅಂದರೆ - ಶುದ್ಧವಿದ್ಯೆಯನ್ನು ಸಾಕ್ಷಾತ್ಕಾರಗೊಳಿಸಿಕೊಳ್ಳುವುದರ ಮೂಲಕ ಸಕಲ ಶಕ್ತಿಗಳ ಒಟ್ಟು ಮೊತ್ತದ ಮೇಲೆ ಪ್ರಭುತ್ವವನ್ನು ಹೊಂದಲು ಸಾಧ್ಯ". ದೇವಿಯು ವಿದ್ಯೆಗಳಲ್ಲಿ ಅತ್ಯುನ್ನತವಾದವಳೆಂದು ಹೇಳಲಾಗುತ್ತದೆ ಮತ್ತು ಈ ವಿದ್ಯೆಯನ್ನು ಸಾಧಕನು ಸಾಕ್ಷಾತ್ಕರಿಸಿಕೊಂಡಾಗ ಅವನು ಸಿದ್ದಿಗಳ ಕುರಿತಾದ ಅನಂತವಾದ ಜ್ಞಾನವನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ. ಈ ವಿಧವಾದ ಪರಿಶುದ್ಧ ಜ್ಞಾನವನ್ನು ಕರುಣಿಸುವುದರ ಮೂಲಕ ದೇವಿಯು ಒಬ್ಬ ವ್ಯಕ್ತಿಯು ಶಿವನನ್ನು ಮೂಲ ಪ್ರಕಾಶದ ರೂಪದಲ್ಲಿ ಗ್ರಹಿಸುವಂತೆ ಮಾಡುತ್ತಾಳೆ, ತನ್ಮೂಲಕ ಅವನು ಶಿವಸ್ವರೂಪನೇ ಆಗುತ್ತಾನಾದ್ದರಿಂದ ಸಕಲ ಶಕ್ತಿಗಳ ಒಟ್ಟು ಮೊತ್ತದ ಮೇಲೆ ಪ್ರಭುತ್ವವನ್ನು ಹೊಂದಲು ಸಾಧ್ಯವಾಗುತ್ತದೆ.

           ಮುಂಡಕ ಉಪನಿಷತ್ತು ಎರಡು ವಿಧವಾದ ಜ್ಞಾನಗಳನ್ನು ಕುರಿತಾಗಿ ಹೇಳುತ್ತದೆ, ಮೊದಲನೆಯದು ಅಪರಾ ಅಥವಾ ಕೆಳಸ್ತರದ ವಿದ್ಯೆಯಾದರೆ ಇನ್ನೊಂದು ಪರಾ ಅಥವಾ ಅತ್ಯುನ್ನತವಾದದ್ದಾಗಿದೆ. ದೇವಿಯು ಪರಾ ವಿದ್ಯೆಯ ಸ್ವರೂಪದಲ್ಲಿದ್ದಾಳೆ.

ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM MEANING 546-549, http://www.manblunder.com/2010/01/lalitha-sahasranamam-meaning-546-549.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

**ಪ್ರಕಾಶ ಮತ್ತು ವಿಮರ್ಶ ರೂಪದ ಹೆಚ್ಚಿನ ವಿವರಣೆಗಳಿಗೆ ಸಂಪದದ ಈ ಕೊಂಡಿಯನ್ನು ನೋಡಿ. 

http://sampada.net/blog/%E0%B3%A8-%E0%B2%B2%E0%B2%B2%E0%B2%BF%E0%B2%A4%E...

Rating
Average: 5 (1 vote)

Comments

Submitted by nageshamysore Thu, 10/10/2013 - 18:36

ಶ್ರೀಧರರೆ, ೧೨೯. ಶ್ರೀ ಲಲಿತಾ ಸಹಸ್ರನಾಮದ ವಿವರಣೆಯ ಕಾವ್ಯಸಾರದ ವಿವರಣೆ ಪರಿಷ್ಕರಣೆಗೆ ಸಿದ್ದ. ಫಾರ್ಮಾಟಿಂಗ್ ಇನ್ನು ಸರಿ ಹೋಗಿದೆಯೊ ಇಲ್ಲವೊ ಗೊತ್ತಿಲ್ಲ. ಅದಕ್ಕೆ, ಪ್ರತಿ ಕವನದ ಸಾಲಿಗೆ ಕೊನೆಯಲ್ಲಿ 'ಅರ್ಧವಿರಾಮ ಚಿಹ್ನೆ (; )' ಹಾಕಿದ್ದೇನೆ - ಸಾಲುಗಳ ಬೇರ್ಪಡೆ ಗೊತ್ತಾಗಳು ಸುಲಭವಾಗುವಂತೆ :-)
                                                                                   
ಲಲಿತಾ ಸಹಸ್ರನಾಮ ೫೪೬ - ೫೪೯
__________________________________________

೫೪೬. ಬಂಧ-ಮೋಚನೀ |
ಇಹ ಜೀವನವೆ ಬಂಧಗಳ ಶರಧಿ, ಮುಕ್ತಿಯೆ ವಿಮುಕ್ತಿಯ ಪರಿಧಿ ;
ಅವಿದ್ಯೆಯ ಅಜ್ಞಾನದೆ ಸಿಲುಕಿದಾತ್ಮದ, ಆಸೆ ಮೋಹಗಳ ಸರದಿ ;
ಶರಣಾಗತರಾಗೆ ದೇವಿಗೆ, ಪ್ರಭಾವ ಹರಿಸುವಾ ಬಂಧ ಮೋಚನೀ  ;
ಬಿಡಿಸಿ ಬಂಧಗಳಾ ಲಲಿತೆ, ಮುಕ್ತಿ ಪ್ರಕ್ರಿಯೆ ಆರಂಭಿಸುತೆ ಜನನೀ ||

೫೪೭. ಬರ್ಬರಾಲಕ (ಬಂಧುರಾಲಕಾ) |
ಕರುಣಾಸಾಗರ ಲಲಿತೆ, ಮುಂದಲೆಯೆ ಶರಧಿಯ ತೆರೆಗಳಂತೆ ;
ಗುಂಗುರುಂಗುರವಾಗಿ ಅಪ್ಪಳಿಸಿದಾ ಕೇಶಾರವವೆ ಅಲೆಗಳಂತೆ ;
ತೀಡಿದಾ ಗಾಳಿಯಲೆ ಅಲೆಅಲೆಯಾಗಿ ಪಸರಿಸಿ ಬರ್ಬರಾಲಕ ;
ನಂಬಿದವರೆಲ್ಲರ ಸವರಿ ನೇವರಿಸಿ ಸಂತೈಸುತೆ ಬಂಧುರಾಲಕ ||

೫೪೮. ವಿಮರ್ಶ-ರೂಪಿಣೀ  |
ಕರ್ಮರಹಿತ ಬ್ರಹ್ಮ ಶಿವಕೊಂದೆ ಅಪವಾದ ಶಕ್ತಿಯಾವಿರ್ಭಾವ ;
ಶಿವನ ಪ್ರತಿನಿಧಿ ಆತ್ಮ, ಪ್ರಕೃತಿ ಮಿಳಿತಕಷ್ಟೆ ಸಕ್ರೀಯವಾಗುವ ;
ಶಕ್ತಿಯಿಲ್ಲದ ಶಿವ ಜಡ, ಪ್ರಕಾಶಕೆ ಚೇತನಾ ವಿಮರ್ಶಾರೂಪಿಣೀ ;
ಮೂಲಾತೀತ ಸ್ವಯಂಪ್ರಕಾಶ, ನಿದ್ರಾವಸ್ಥೆ ಹರಿಸೆ ಜಗತ್ಕಾರಣೀ ||

ಸೃಷ್ಟಿಯೆ ಶಿವದೃಷ್ಟಿ, ಅದರನುಷ್ಠಾನಕೆ ಶಕ್ತಿಯ ಮಾಯೆ ಸಮಷ್ಟಿ ;
ಬ್ರಹ್ಮದಿಂಗಿತದೆ ಜಗ ನಡೆಸುವ, ದೇವಿಯ ಮೇಲಪರಿಮಿತ ಪ್ರೀತಿ ;
ಸೃಷ್ಟಿ ಸ್ಥಿತಿ ಸಂಯೋಜನೆ ವಿನಾಶ ಮರುಸೃಷ್ಟಿಗಳೆಲ್ಲಕೆ ಪಾಲಕತ್ವ ;
ಅಚರ-ಜಡಶಕ್ತಿ ಶಿವನ, ಕ್ರಿಯಾಶೀಲ-ಚರ ಶಕ್ತಿಯಾಗಿಹಾ ಮಹತ್ವ ||

೫೪೯. ವಿದ್ಯಾ  |
ವಿಮರ್ಶಾರೂಪದಿ ವಿಸ್ತೃತ ಶಕ್ತಿ, ಅಂತಿಮ ಮುಕ್ತಿಗೆ ಜ್ಞಾನವಾಗಿ ವಿದ್ಯಾ ;
ಜಾಗೃತಗೊಳಿಸಬಲ್ಲವಳವಳೊಬ್ಬಳೆ ದೇವಿ, ಬ್ರಹ್ಮವರಿಸೊ ಸಾಮರ್ಥ್ಯ ;
ಶಕ್ತಿ ಸಮಷ್ಟಿಯ ಪ್ರಭುತ್ವ, ಸಾಧಕ ಸಿದ್ದಿ ಶುದ್ಧ ವಿದ್ಯಾ ಸಾಕ್ಷಾತ್ಕಾರದೆ ;
ಮೂಲ ಪ್ರಕಾಶ ರೂಪ ಗ್ರಹಣ, ಪರಾ ವಿದ್ಯಾ ಸ್ವರೂಪಿಣಿ ಅನುಗ್ರಹದೆ ||

- ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
 
ಮೂಲ ಪ್ರಕಾಶ ರೂಪ ಗ್ರಹಣ, ಪರಾ ವಿದ್ಯಾ ಸ್ವರೂಪಿಣಿ ಅನುಗ್ರಹದೆ || -
ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು