೧೩೮. ಲಲಿತಾ ಸಹಸ್ರನಾಮ ೫೮೮ರಿಂದ ೫೯೩ನೇ ನಾಮಗಳ ವಿವರಣೆ

೧೩೮. ಲಲಿತಾ ಸಹಸ್ರನಾಮ ೫೮೮ರಿಂದ ೫೯೩ನೇ ನಾಮಗಳ ವಿವರಣೆ

                                                                                                                          ಲಲಿತಾ ಸಹಸ್ರನಾಮ ೫೮೮-೫೯೩

Trikūṭā त्रिकूटा (588)

೫೮೮. ತ್ರಿಕೂಟಾ

           ದೇವಿಯು ತ್ರಿಕೂಟಗಳ (ತ್ರಿಪುಟಿಗಳ) ರೂಪದಲ್ಲಿದ್ದಾಳೆ. ಆಧ್ಯಾತ್ಮಿಕತೆಯಲ್ಲಿ ಹಲವಾರು ತ್ರಿಕೂಟಗಳಿವೆ. ಓಂಕಾರವು ಮೂರು ಅಕ್ಷರಗಳಾದ ಅ+ಉ+ಮ ಗಳನ್ನು ಒಳಗೊಂಡಿದೆ. ಗಾಯತ್ರೀ ಮಂತ್ರದಲ್ಲಿ ಮೂರು ಲೋಕಗಳಾದ ಭೂಃ, ಭುವಃ ಮತ್ತು ಸುವಃ ಎಂದು ಹೆಸರಿಸಲಾಗಿದೆ. ಸೃಷ್ಟಿ, ಸ್ಥಿತಿ ಮತ್ತು ಲಯಗಳನ್ನು ಉಂಟು ಮಾಡುವು ದೇವರುಗಳು ಮೂರು - ಬ್ರಹ್ಮ, ವಿಷ್ಣು ಮತ್ತು ರುದ್ರ. ಪ್ರಜ್ಞೆಯ ಮೂರು ಅವಸ್ಥೆಗಳಿವೆ ಅವೆಂದರೆ, ಜಾಗ್ರತ್, ಸ್ವಪ್ನ ಮತ್ತು ಸುಷುಪ್ತಿ. ತ್ರಿಗುಣಗಳೆಂದರೆ ಸತ್ವ, ರಜೋ ಮತ್ತು ತಮೋ ಗುಣಗಳು. ಕಾಲದ ಮೂರು ಹಂತಗಳೆಂದರೆ ಭೂತ, ವರ್ತಮಾನ ಮತ್ತು ಭವಿಷ್ಯತ್ ಕಾಲಗಳು. ಪಂಚದಶೀ ಮಂತ್ರವು ಮೂರು ಕೂಟಗಳಾದ ಅಗ್ನಿ, ಸೂರ್ಯ ಮತ್ತು ಚಂದ್ರ ಕೂಟಗಳನ್ನು ಒಳಗೊಂಡಿದೆ. ದೇವಿಯ ಮೂರು ಶಕ್ತಿಗಳು ಇಚ್ಛಾ, ಜ್ಞಾನ ಮತ್ತು ಕ್ರಿಯಾ ಶಕ್ತಿ. ಈ ತ್ರಿಕೂಟಗಳು ಕೇವಲ ದೇವಿಯೊಂದಿಗೆ ಮಾತ್ರವೇ ಅನುಬಂಧವನ್ನು ಹೊಂದಿವೆ.

         ಈ ನಾಮದಲ್ಲಿ ದೇವಿಯು ಸೃಷ್ಟಿ, ಸ್ಥಿತಿ ಮತ್ತು ಲಯಗಳ ಒಡತಿ ಎಂದು ಹೇಳಲಾಗಿದೆ. ಈ ನಾಮವು, ಪಂಚಪ್ರೇತಾಸನಾಸೀನಾ ಎನ್ನುವ ೨೪೯ನೇ ನಾಮಕ್ಕೆ ಪೂರಕವಾಗಿದೆ. ಇನ್ನಷ್ಟು ವಿವರಗಳನ್ನು ೬೨೬ನೇ ನಾಮದಲ್ಲಿ ನೋಡೋಣ.

Kāmakoṭikā कामकोटिका (589)

೫೮೯. ಕಾಮಕೋಟಿಕಾ

           ಪರಬ್ರಹ್ಮಕ್ಕೆ ಎರಡು ರೂಪಗಳಿವೆ. ಒಂದು ಶಿವ (ನಿರ್ಗುಣ ಬ್ರಹ್ಮ) ಮತ್ತೊಂದು ಶಕ್ತಿ (ಸಗುಣ ಬ್ರಹ್ಮ). ಶಿವಶಕ್ತಿ ಐಕ್ಯರೂಪವನ್ನು ಬ್ರಹ್ಮವೆಂದು ಕರೆಯಲಾಗಿದೆ. ಈ ಶಿವ ಮತ್ತು ಶಕ್ತಿಯರ ಐಕ್ಯತೆಯು ಎರಡು ವಿಧವಾಗಿ ಇರುತ್ತದೆ. ಒಂದರಲ್ಲಿ ಶಕ್ತಿಯು ಶಿವನ ತೊಡೆಯ ಮೇಲೆ ಕುಳಿತಿದ್ದರೆ ಮತ್ತೊಂದು ಅರ್ಧನಾರೀಶ್ವರ ರೂಪವಾಗಿದ್ದು ಅದರಲ್ಲಿ ಶಿವನದು ಲಂಬವಾಗಿರುವ ಒಂದು ಭಾಗವಾದರೆ ಶಕ್ತಿಯದು ಇನ್ನೊಂದು ಲಂಬವಾದ ಭಾಗವಾಗಿದೆ. ಇದನ್ನೇ ಈ ನಾಮದಲ್ಲಿ ಉಲ್ಲೇಖಿಸಲಾಗಿದೆ. ಕಾಮ ಎನ್ನುವುದು ಶಿವನನ್ನು ಉಲ್ಲೇಖಿಸಿದರೆ ಕೋಟಿ ಎಂದರೆ ಲಂಬವಾಗಿರುವುದು.

          ಲಲಿತಾ ತ್ರಿಶತಿಯ ನಾಮ ೨೫೯ ‘ಕಾಮಕೋಟಿ ನಿಲಯಾ’ ಆಗಿದ್ದು, ಅದೂ ಸಹ ಇದೇ ಅರ್ಥವನ್ನು ಕೊಡುತ್ತದೆ.

Kaṭākṣa-kiṅkarī-bhūta-kamalā-koṭi-sevitā कटाक्ष-किङ्करी-भूत-कमला-कोटि-सेविता (590)

೫೯೦. ಕಟಾಕ್ಷ-ಕಿಂಕರೀ-ಭೂತ-ಕಮಲಾ-ಕೋಟಿ-ಸೇವಿತಾ

          ಕೇವಲ ದೇವಿಯು ದೃಷ್ಟಿ ಹರಿಸಿದರೆ ಸಾಕು ಸಂಪತ್ತಿನ ಅಧಿದೇವತೆಯಾದ ಕೋಟ್ಯಂತರ ಲಕ್ಷ್ಮಿಯರು ಆಕೆಯ ಸೇವೆಯನ್ನು ಮಾಡುತ್ತಾರೆ. ಲಕ್ಷ್ಮಿಯು ಒಬ್ಬ ವ್ಯಕ್ತಿಯೆಡೆಗೆ ದೃಷ್ಟಿ ಹರಿಸಿದರೆ (ಕಟಾಕ್ಷವನ್ನು ಬೀರಿದರೆ) ಸಾಕು ಅವನ ಸಂಪತ್ತು ಅಭಿವೃದ್ಧಿ ಹೊಂದುತ್ತದೆ. ಈ ನಾಮವು ಲಲಿತಾಂಬಿಕೆಯು ಅಂತಹ ಲೆಕ್ಕವಿಲ್ಲದಷ್ಟು ಲಕ್ಷ್ಮಿಯರಿಂದ ಸೇವಿಸಲ್ಪಡುತ್ತಿದ್ದಾಳೆಂದು ಹೇಳುತ್ತಾ ದೇವಿಯ ಎಣೆಯಿಲ್ಲದ ಸೌಭಾಗ್ಯದ (ಸಿರಿ ಸಂಪದಗಳ) ಕುರಿತು ಪರೋಕ್ಷವಾಗಿ ಹೇಳುತ್ತದೆ.

Śiraḥsthitā शिरःस्थिता (591)

೫೯೧. ಶಿರಃಸ್ಥಿತಾ

          ದೇವಿಯು ಶಿರದಲ್ಲಿ ಇದ್ದಾಳೆ. ಇಲ್ಲಿ ಶಿರವೆಂದರೆ ತಲೆಯ ಮೇಲ್ಭಾಗದಲ್ಲಿರುವ ಸಹಸ್ರಾರವಾಗಿದೆ. ಶಿವ ಮತ್ತು ಶಕ್ತಿಯರನ್ನು ಹೊರತು ಪಡಿಸಿ ಒಬ್ಬನ ಗುರುವನ್ನು ಸಹ ಸಹಸ್ರಾರದಲ್ಲಿ ಪೂಜಿಸಲಾಗುತ್ತದೆ. ಬಹುಶಃ ಈ ನಾಮವು ದೇವಿಯು ಸಹಸ್ರಾರದಲ್ಲಿ ಪೂಜಿಸಲು ಯೋಗ್ಯವಾಗಿರುವ ಪರಮಗುರುವಾಗಿದ್ದಾಳೆನ್ನುವುದನ್ನು ಸೂಚಿಸುತ್ತದೆ. ಗುರುವಾದವನು ಕೇವಲ ಮಂತ್ರ ದೀಕ್ಷೆಯನ್ನು ಕೊಡುವವನಷ್ಟೇ ಅಲ್ಲ ಅವನು ಬ್ರಹ್ಮದ ಕುರಿತಾದ ಜ್ಞಾನವನ್ನು ಪ್ರಸಾದಿಸುತ್ತಾನೆ. ಜ್ಞಾನಿಯಾದ ಗುರುವು ತನ್ನ ಶಿಷ್ಯನು ಎರಡರಲ್ಲೂ ಅಭಿವೃದ್ಧಿ ಹೊಂದುವಂತೆ ಮಾಡುತ್ತಾನೆ. ಶಿಷ್ಯನ ಸಾಧನೆಯ ಪುರೋಗತಿಯನ್ನು ಗಮನಿಸಿ ಗುರುವು ಅವನಿಗೆ ಬಾಹ್ಯ ಆಚರಣೆಗಳಿಂದ ನಿಧಾನವಾಗಿ ಆಂತರಿಕ ಶೋಧನೆಯನ್ನು ಕೈಗೊಳ್ಳುವಂತೆ ಸಲಹೆಗಳನ್ನಿತ್ತು ಅವನು ಆತ್ಮ ಸಾಕ್ಷಾತ್ಕಾರದ ಮಾರ್ಗದೆಡೆಗೆ ಸಾಗುವಂತೆ ಮಾಡುತ್ತಾನೆ. ಕೇವಲ ಶಾಸ್ತ್ರವಿಧಿತ ಆಚರಣೆಗಳನ್ನು ಕೈಗೊಳ್ಳುವುದರ ಮೂಲಕ ಒಬ್ಬನು ಆತ್ಮ ಸಾಕ್ಷಾತ್ಕಾರದ ಹಾದಿಯಲ್ಲಿ ಅಭಿವೃದ್ಧಿಯನ್ನು ಸಾಧಿಸಲಾರ. ಕೇವಲ ಯಾವ ಗುರುಗಳು ಪರಬ್ರಹ್ಮದ ಕುರಿತಾದ ಅಂತಹ ಪರಮೋನ್ನತವಾದ ಜ್ಞಾನವನ್ನು ಕರುಣಿಸಲು ಶಕ್ಯರಾಗಿರುತ್ತಾರೋ ಅಂತಹವರನ್ನು ಮಾತ್ರವೇ ಸಹಸ್ರಾರದಲ್ಲಿ ಪೂಜಿಸಬೇಕು; ಏಕೆಂದರೆ ಸಹಸ್ರಾರವು ಮಾನವ ಶರೀರದ ಪರಮ ಪವಿತ್ರವಾದ ಸ್ಥಳವಾಗಿದೆ.

Candra-nibhā चन्द्र-निभा (592)

೫೯೨. ಚಂದ್ರ-ನಿಭಾ

          ಚಂದ್ರನ ಕಾಂತಿಯು ಸಹಸ್ರಾರದ ಕೆಳಗಡೆ ಗೋಚರವಾಗುತ್ತದೆ. ಚಂದ್ರನ ಗೋಚರವು ಕುಂಡಲಿನೀ ಧ್ಯಾನದಲ್ಲಿನ ಸಾಧನೆಯ ಘಟ್ಟವನ್ನು ಸೂಚಿಸುವ ಬಲವಾದ ಸಂಕೇತವಾಗಿದೆ. ಪಂಚದಶೀ ಮಂತ್ರದಲ್ಲಿನ ಮೂರನೆಯ ಕೂಟವು ಚಂದ್ರ ಕೂಟವಾಗಿದೆ. ದೇವಿಯು ಆ ಚಂದ್ರನ ತೆರನಾಗಿದ್ದಾಳೆ. ಇನ್ನಷ್ಟು ವಿವರಗಳಿಗೆ ೨೪೦ನೇ ನಾಮವನ್ನೂ ಸಹ ನೋಡಬಹುದು.

Bhālasthā भालस्था (593)

೫೯೩. ಭಾಲಸ್ಥಾ

          ದೇವಿಯು, ಆಜ್ಞಾ ಚಕ್ರದ ಬೀಜವಾದ ಹ್ರೀಂ (ह्रीं) ಬೀಜದ ಬಿಂದುವಿನ ರೂಪದಲ್ಲಿರುತ್ತಾಳೆ. ಹ್ರೀಂ ಬೀಜವು ಹನ್ನೆರಡು ಅಂಶಗಳಿಂದ ರೂಪಿತವಾಗಿದೆ; ಅವುಗಳಲ್ಲಿ ಮೂರು ಅಕ್ಷರಗಳಾಗಿದ್ದರೆ ಉಳಿದವು ಶಬ್ದದ ಸೂಕ್ಷ್ಮ ಮಾರ್ಪಾಟುಗಳಾಗಿವೆ. ಹ್ರೀಂ ಬೀಜದ ಬಿಂದುವನ್ನು ಈ (ई) ಅಕ್ಷರದ ಮೇಲಿರಸಲಾಗುತ್ತದೆ.  ಆದರೆ ಶ್ರೀ ಚಕ್ರದಲ್ಲಿ, ಶಿವನು ಬಿಂದುವಿನ ರೂಪದಲ್ಲಿದ್ದರೆ ಶಕ್ತಿಯು ಅತ್ಯಂತ ಒಳಗಿರುವ ತ್ರಿಕೋಣದ ರೂಪದಲ್ಲಿರುತ್ತಾಳೆ. ಈ ನಾಮವು ದೇವಿಯು ಹಣೆಯ ಭಾಗದಲ್ಲಿರುವ ಆಜ್ಞಾ ಚಕ್ರದಲ್ಲಿ ನಿವಸಿಸುತ್ತಾಳೆಂದು ಹೇಳುತ್ತದೆ. 

                                                                                                              ******

         ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM MEANING 588 - 593http://www.manblunder.com/2010/02/lalitha-sahasranamam-meaning-588-593.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
No votes yet

Comments

Submitted by nageshamysore Sat, 10/19/2013 - 17:50

ಶ್ರೀಧರರೆ, '೧೩೮. ಶ್ರೀ ಲಲಿತಾ ಸಹಸ್ರನಾಮದ ವಿವರಣೆ'ಯ ಕಾವ್ಯರೂಪ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೫೮೮-೫೯೩
_________________________________________
.
೫೮೮. ತ್ರಿಕೂಟಾ
ಆಧ್ಯಾತ್ಮಿಕ ತ್ರಿಕೂಟಗಳನೇಕ, ದೇವಿಯಾ ತ್ರಿಪುಟಿಗಳೆಲ್ಲದರ ರೂಪ
ಅ-ಉ-ಮ ಅಕ್ಷರ ಓಂಕಾರ, ಭೂಃ-ಭುವಃ-ಸುವಃ ತ್ರಿಲೋಕ ಸ್ವರೂಪ
ತ್ರಿಕಾರ್ಯತ್ರಿಮೂರ್ತಿ, ಜಾಗೃತ್-ಸ್ವಪ್ನ-ಸುಷುಪ್ತಿ ಪ್ರಜ್ಞಾವಸ್ಥೆ, ತ್ರಿಗುಣ
ತ್ರಿಕಾಲ, ಪಂಚದಶೀತ್ರಿಕೂಟ, ತ್ರಿಶಕ್ತಿಗಳಿಗಾಗಿ ಒಡತಿ ಲಲಿತಾಚರಣ ||
.
೫೮೯. ಕಾಮಕೋಟಿಕಾ
ಪರಬ್ರಹ್ಮದ ಎರಡುರೂಪ, ಶಿವ ನಿರ್ಗುಣಬ್ರಹ್ಮ - ಶಕ್ತಿ ಸಗುಣಬ್ರಹ್ಮ
ಶಿವಶಕ್ತಿ ಐಕ್ಯರೂಪವೆ ಬ್ರಹ್ಮ, ಎರಡು ವಿಧದೆ ಶಿವಶಕ್ತಿ ಪ್ರಸ್ತುತ ಸಮ
ಶಿವನೆಡತೊಡೆಯಲಾಸೀನೆ ಲಲಿತ, ಮತ್ತೊಂದರ್ಧನಾರೀಶ್ವರ ಮುಖ
ಕಾಮ ಶಿವ, ಕೋಟಿ ಲಂಬ ಶಿವಶಕ್ತಿ ನಾರೀಶ್ವರರೂಪ ಕಾಮಕೋಟಿಕಾ ||
.
೫೯೦. ಕಟಾಕ್ಷ-ಕಿಂಕರೀ-ಭೂತ-ಕಮಲಾ-ಕೋಟಿ-ಸೇವಿತಾ
ಎಣೆಯಿಲ್ಲದ ಸಿರಿ ಸಂಪದಗಳ ಸೌಭಾಗ್ಯ, ದೇವಿಯಲಿ ಸಮೃದ್ದ
ಕಣ್ಸನ್ನೆಯಲೆ ಕೋಟ್ಯಾಂತರ ಲಕ್ಷ್ಮಿಯರು ದೇವಿಯ ಸೇವೆಗೆ ಸಿದ್ದ
ಸಂಪತ್ತಿಗೆ ಅಧಿದೇವತೆ ಲಕ್ಷ್ಮಿಕಟಾಕ್ಷದಲೆ, ಐಶ್ವರ್ಯವಾಗಿ ವೃಷ್ಟಿ
ಕಟಾಕ್ಷ-ಕಿಂಕರೀ-ಭೂತ-ಕಮಲಾ-ಕೋಟಿ-ಸೇವಿತಾ ದಯಾದೃಷ್ಟಿ ||
.
೫೯೧. ಶಿರಃಸ್ಥಿತಾ 
ದೇವಿಯಿಹಳು ಶಿರದೆ, ಮೇಲ್ಭಾಗದಲಿಹ ಸಹಸ್ರಾರದ
ಶಿವ ಶಕ್ತಿಯ ಜತೆ ಗುರುವಷ್ಟೆ ಪೂಜಿಸುವ ಪವಿತ್ರ ಶುದ್ಧ
ಪರಮಗುರು ಶಿರಃಸ್ಥಿತಾ, ಮಂತ್ರದೀಕ್ಷೆ ಜತೆ ಬ್ರಹ್ಮಜ್ಞಾನ
ಬಾಹ್ಯದಿಂದಾಂತರಿಕಕೆ, ಸಾಕ್ಷಾತ್ಕಾರಕೆ ಮಾರ್ಗದರ್ಶನ ||
.
೫೯೨. ಚಂದ್ರ-ನಿಭಾ
ಕುಂಡಲಿನೀಯಿಂದೇರಿ ಸಹಸ್ರಾರದತ್ತ ಪಯಣ ಕಠೋರ
ಧ್ಯಾನಸಾಧನ ಶಶಿಸಂಕೇತ ಸಹಸ್ರಾರದ ಕೆಳಗೆ ಗೋಚರ
ಚಂದ್ರಕೂಟವೆ ಪಂಚದಶೀ ಮಂತ್ರದಲಿಹ ಮೂರನೆ ಕೂಟ
ಲಲಿತೆಯು ಆ ಚಂದ್ರನಂತೆ ಚಂದ್ರನಿಭಾ ಕಾಂತಿ ಮುಕುಟ ||
.
೫೯೩. ಭಾಲಸ್ಥಾ
ದೇವಿ ಲಲಾಟ ಭಾಗದಲಿಹ ಆಜ್ಞಾ ಚಕ್ರದೆ ಲಲಿತೆ ವಸತಿ
ದ್ವಾದಶಾಂಶರೂಪಿತ 'ಹ್ರೀಂ' ಬೀಜ ಕೂತ ಮೂರಕ್ಷರ ರೀತಿ
ಮಿಕ್ಕಿದವು ಶಬ್ದದ ಸೂಕ್ಷ್ಮ ಮಾರ್ಪಾಟಾಗಿ ಪ್ರಸ್ಥಾನಗೊಳ್ಳುತ
ಬಿಂದುರೂಪಿಶಿವ ಶ್ರೀಚಕ್ರ, ಶಕ್ತಿಯೊಳತ್ರಿಕೋಣದೆ ಭಾಲಸ್ಥಾ  ||
.
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು