೧೩೯. ಲಲಿತಾ ಸಹಸ್ರನಾಮ ೫೯೪ರಿಂದ ೬೦೦ನೇ ನಾಮಗಳ ವಿವರಣೆ

೧೩೯. ಲಲಿತಾ ಸಹಸ್ರನಾಮ ೫೯೪ರಿಂದ ೬೦೦ನೇ ನಾಮಗಳ ವಿವರಣೆ

                                                                                                                        ಲಲಿತಾ ಸಹಸ್ರನಾಮ ೫೯೪ - ೬೦೦

Indra-dhanuḥ-prabhā इन्द्र-धनुः-प्रभा (594)

೫೯೪. ಇಂದ್ರ-ಧನುಃ-ಪ್ರಭಾ

           ಇಂದ್ರ ಧನುಃ ಎನ್ನುವುದರ ಶಬ್ದಶಃ ಅರ್ಥ ಇಂದ್ರನ ಬಿಲ್ಲು, ಆದರೆ ಈ ಸಂದರ್ಭದಲ್ಲಿ ಅದು ಮಳೆಬಿಲ್ಲನ್ನು (ಕಾಮನಬಿಲ್ಲನ್ನು) ಸೂಚಿಸುತ್ತದೆ. ವಾಸ್ತವವಾಗಿ ಈ ನಾಮವು ಹಿಂದಿನ ನಾಮದ ಮುಂದುವರೆದ ಭಾಗವಾಗಿದೆ. ಹಿಂದಿನ ನಾಮದಲ್ಲಿ ಉಲ್ಲೇಖಿಸಲಾದ ಹ್ರೀಂ (ह्रीँ)ನ ಬಿಂದುವಿನ ಸ್ವಲ್ಪ ಮೇಲ್ಗಡೆ ಒಂದು ಮಳೆಬಿಲ್ಲು ಇದೆ. ಆ ಬಿಂದುವೇ ಸ್ವತಃ ಹೊಳೆಯುತ್ತದೆ, ಅದರೊಂದಿಗೆ, ಬಿಂದುವಿನ ಕಾಲುಭಾಗದಷ್ಟಿರುವ ಈ ಮಳೆಬಿಲ್ಲಿನಂತಹ ಆಕಾರವೂ ಸಹ ಹೊಳೆಯುತ್ತದೆ. ಈ ಬಿಂದು ಮತ್ತು ಮಳೆಬಿಲ್ಲಿನ ರಚನೆಯನ್ನು ಅರ್ಧಚಂದ್ರವೆಂದೂ (ಚಂದ್ರನ ಅರ್ಧರೂಪವು ಧನುಸ್ಸಿನಂತಿರುವುದರಿಂದ ಅದು ಮಳೆಬಿಲ್ಲನ್ನು ಸೂಚಿಸುತ್ತದೆ) ಕರೆಯಲಾಗಿದೆ, ಇವುಗಳನ್ನು ಈ ವಿಧವಾಗಿ ಲಲಿತಾಂಬಿಕೆಯ ‘ಕಾಮಕಲಾ ರೂಪ’ವನ್ನು ಪೂಜಿಸುವಾಗ ಕಲ್ಪಿಸಿಕೊಳ್ಳಲಾಗುತ್ತದೆ.

          ಇಲ್ಲಿ ಮಳೆಬಿಲ್ಲನ್ನು ಉಲ್ಲೇಖಿಸಲಾಗಿದೆ, ಏಕೆಂದರೆ ಅದು ಏಳು ಬಣ್ಣಗಳನ್ನು ಒಳಗೊಂಡಿದೆ, ಈ ಬಣ್ಣಗಳು ಸಹಸ್ರಾರದಲ್ಲಿ ಸ್ಫೋಟಗೊಳ್ಳುತ್ತವೆ. ಈ ಬಣ್ಣಗಳು ಇಲ್ಲಿ ಉದ್ಭವವಾಗುತ್ತವೆ. (ಕಾಮನ ಬಿಲ್ಲಿನ ಏಳು ಬಣ್ಣಗಳೆಂದರೆ VIBGYOR - ನೇರಳೇ ಬಣ್ಣ, ಕಡು ನೀಲಿ (ಊದಾ ಬಣ್ಣ?), ನೀಲಿ, ಹಸಿರು, ಹಳದಿ, ಕಿತ್ತಳೆ ಮತ್ತು ಕೆಂಪು)

         ವರಿವಶ್ಯಾ ರಹಸ್ಯವು (೧.೨೨), "ವೃತ್ತಾಕಾರದಲ್ಲಿರುವ ಬಿಂದುವು ಹಣೆಯ ಮಧ್ಯಭಾಗದಲ್ಲಿ ವಿರಾಜಮಾನವಾಗಿದ್ದು ದೀಪದಂತೆ ಪ್ರಕಾಶಮಾನವಾಗಿ ಹೊಳೆಯುತ್ತದೆ" ಎಂದು ಹೇಳುತ್ತದೆ.

Hrdayasthā ह्र्दयस्था (595)

೫೮೫. ಹೃದ್ಯಸ್ಥಾ

         ದೇವಿಯು ಹೃದಯದಲ್ಲಿ ಆಸೀನಳಾಗಿದ್ದಾಳೆ. ಕಠೋಪನಿಷತ್ತು ಹೀಗೆ ಹೇಳುತ್ತದೆ, "ಹೆಬ್ಬೆರಳಿನ ಗಾತ್ರದಷ್ಟಿರುವ ಪುರುಷನು (ಬ್ರಹ್ಮವು) ದೇಹದ ಮಧ್ಯಭಾಗದಲ್ಲಿ ಅಂದರೆ ಹೃದಯದಲ್ಲಿ ವಾಸಿಸುತ್ತಾನೆ". ಈ ನಾಮವು ದೇವಿಯ ಪರಬ್ರಹ್ಮ ಸ್ವರೂಪವನ್ನು ಮತ್ತೊಮ್ಮೆ ದೃಢ ಪಡಿಸುತ್ತದೆ. 

         ಬಹುಶಃ ಈ ನಾಮವು ದೇವಿಯನ್ನು ನಾವು ಹೃದಯ ಚಕ್ರ ಅಥವಾ ಅನಾಹತ ಚಕ್ರದಲ್ಲಿ ಧ್ಯಾನಿಸಬೇಕು ಎಂದು ಸೂಚ್ಯವಾಗಿ ಹೇಳಬಹುದು. ಪುರಾತನ ಗ್ರಂಥವೊಂದು, ಯಾರು ಬ್ರಹ್ಮದ ಹೃದಯವನ್ನು ಅರಿಯುತ್ತಾರೋ ಅವರು ನಿತ್ಯ ಸಂತೋಷವನ್ನು ಅನುಭವಿಸುತ್ತಾರೆ ಎಂದು ಹೇಳುತ್ತದೆ. ಬ್ರಹ್ಮದ ಹೃದಯವು ಬ್ರಹ್ಮಾಂಡ ಪ್ರೀತಿಯ ಭಂಡಾರವಾಗಿದೆ.

Raviprakhyā रविप्रख्या (596)

೫೯೬. ರವಿಪ್ರಖ್ಯಾ

           ಪಂಚದಶೀ ಮಂತ್ರದ ಎರಡನೇ ಕೂಟವು ಅನಾಹತ ಚಕ್ರದಲ್ಲಿ ಸ್ಥಿತವಾಗಿದೆ. ಇದನ್ನೇ ಸೂರ್ಯ ಕೂಟವೆಂದೂ ಸಹ ಕರೆಯಲಾಗುತ್ತದೆ. ಈ ನಾಮವು ದೇವಿಯು ಒಬ್ಬನ ಹೃದಯದಲ್ಲಿ ನಿವಾಸವಿದ್ದು ಸೂರ್ಯನಂತೆ ಹೊಳೆಯುತ್ತಾಳೆ ಎಂದು ಹೇಳುತ್ತದೆ. ದೇವಿಯ ಎಲ್ಲಾ ಕೂಟಗಳಲ್ಲಿಯೂ ಹೊಳೆಯುತ್ತಾಳೆ ಆದರೆ ಅದರ ಪ್ರಖರತೆಯು ಕೂಟದಿಂದ ಕೂಟಕ್ಕೆ ಭಿನ್ನವಾಗಿರುತ್ತದೆ.

Trikoṇāntara-dīpikā त्रिकोणान्तर-दीपिका (597)

೫೯೭. ತ್ರಿಕೋಣಾಂತರ-ದೀಪಿಕಾ

           ದೇವಿಯು ಮೂಲಾಧಾರ ಚಕ್ರದ ತ್ರಿಕೋಣದಲ್ಲಿ ಬೆಂಕಿಯಂತೆ ಹೊಳೆಯುತ್ತಾಳೆ. ಪಂಚದಶೀ ಮಂತ್ರದ ಮೊದಲನೇ ಕೂಟವಾದ ಅಗ್ನಿ ಕೂಟವನ್ನು ಇಲ್ಲಿ ಹೆಸರಿಸಲಾಗಿದೆ.

೫೯೧ನೇ ನಾಮದಿಂದ ೫೯೭ನೇ ನಾಮಗಳ ಕುರಿತಾಗಿ ಇನ್ನಷ್ಟು ವಿವರಗಳು:

         ಈ ನಾಮಗಳಲ್ಲಿ ಪಂಚದಶೀ ಮಂತ್ರದ ಮೂರು ಕೂಟಗಳ ಸೂಕ್ಷ್ಮ ಸ್ವಭಾವವನ್ನು ವಿವರಿಸಲಾಗಿದೆ. ಮೊದಲನೇ ಕೂಟವನ್ನು ಮೂಲಾಧಾರ ಚಕ್ರದಲ್ಲಿ ಬೆಂಕಿಯ ಜ್ವಾಲೆಯಂತೆ ಚಿತ್ರಿಸಲಾಗಿದೆ. ಎರಡನೇ ಕೂಟವನ್ನು ಅನಾಹತ ಚಕ್ರದಲ್ಲಿ ಮಳೆಬಿಲ್ಲಿನಂತೆ ಚಿತ್ರಿಸಲಾಗಿದೆ. ಮೂರನೆಯ ಕೂಟವನ್ನು ಸಹಸ್ರಾರದ ಸ್ವಲ್ಪ ಕೆಳಗಿನ ಸ್ಥಳದಲ್ಲಿ ಚಂದ್ರನಂತೆ ಕಲ್ಪಸಿಕೊಳ್ಳಲಾಗಿದೆ. ಪಂಚದಶೀ ಮಂತ್ರದ ಮೊದಲನೇ ಕೂಟವು ಮೂಲಾಧಾರ ಚಕ್ರದಲ್ಲಿ ಮೊಳಕೆಯೊಡೆದು ಅನಾಹತ ಚಕ್ರದಲ್ಲಿ ಎರಡನೇ ಕೂಟವನ್ನು ಸೇರಿಸಿಕೊಂಡು ಮತ್ತಷ್ಟು ಬೆಳವಣಿಗೆಯನ್ನು ಹೊಂದಿ ಸಹಸ್ರಾರದ ಸ್ವಲ್ಪ ಕೆಳಗೆ ಪೂರ್ಣವಾಗಿ ಅರಳುತ್ತದೆ; ಇಲ್ಲಿ ಮೂರನೆಯ ಕೂಟವು ಅದಕ್ಕೆ ಸೇರಿಕೆಯಾಗುತ್ತದೆ. ಇದನ್ನೇ ಮೂಕ-ಪಂಚಶತೀ (೧.೫೦) ಗ್ರಂಥದಲ್ಲಿ ಬಹು ಸುಂದರವಾಗಿ ವರ್ಣಿಸಲಾಗಿದೆ, "ಹೃದಯದ ಮಧ್ಯಭಾಗದಲ್ಲಿ, ಹಣೆಯ ಮಧ್ಯಭಾಗದಲ್ಲಿ ಮತ್ತು ತಲೆಯ ಮಧ್ಯಭಾಗದಲ್ಲಿ ಆಕೆಯು ಸೂರ್ಯನಂತೆ, ಇಂದ್ರನ ಧನುಸ್ಸಿನಂತೆ ಮತ್ತು ಚಂದ್ರನಂತೆ ಹೊಳೆಯುತ್ತಾಳೆ". (ಮೂಕ ಎಂದರೆ ಮಾತು ಬಾರದವನು)

Dākṣāyaṇī दाक्षायणी (598)

೫೯೮. ದಾಕ್ಷಾಯಣೀ

          ದೇವಿಯು ದಕ್ಷನ ಮಗಳಾಗಿ ಜನಿಸಿ ಶಿವನೊಂದಿಗೆ ವಿವಾಹವನ್ನು ಮಾಡಿಕೊಂಡಳು. ಈ ನಾಮವು ದೇವಿಯ ವಂಶವನ್ನು ಕುರಿತು ಹೇಳುತ್ತದೆ.

          ಕೆಲವೊಂದು ಯಜ್ಞಗಳನ್ನು ಹುಣ್ಣಿಮೆ ಹಾಗು ಅಮವಾಸ್ಯೆಯ ದಿನಗಳಂದು ನಿರಂತರವಾಗಿ ಕೈಗೊಳ್ಳಲಾಗುತ್ತದೆ. ಇವನ್ನೇ ದರ್ಶ-ಪೂರ್ಣ-ಮಾಸ-ಯಜ್ಞ ಎಂದು ಕರೆಯುತ್ತಾರೆ ಮತ್ತು ಈ ಸಮಯದಲ್ಲಿ ಅರ್ಪಿಸುವ ಆಹುತಿಗಳನ್ನು ದಾಕ್ಷಾಯನ ಯಜ್ಞವೆಂದು ಕರೆಯುತ್ತಾರೆ. ಈ ಯಜ್ಞಗಳು ಬಹಳ ಶಕ್ತಿಯುತವಾಗಿದ್ದು ದೇವಿಯು ಈ ಯಜ್ಞಗಳ ರೂಪದಲ್ಲಿರುತ್ತಾಳೆಂದು ಹೇಳಲಾಗುತ್ತದೆ.

         ದಕ್ಷ ಎಂದರೆ ದೃಢ ಮನಸ್ಸು, ಶಕ್ತಿ, ಸಾಮರ್ಥ್ಯ, ಮನೋಭಾವ, ಪ್ರವೃತ್ತಿ ಮೊದಲಾದ ಅರ್ಥಗಳಿವೆ. ಇದು ಬೌದ್ಧಿಕ ಶಕ್ತಿ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳುವುದನ್ನು ಸಹ ಸೂಚಿಸುತ್ತದೆ.

         ದಕ್ಷನಿಗೆ ಇಪ್ಪತ್ತೇಳು ಕುಮಾರಿಯರಿದ್ದು ಅವರೆಲ್ಲಾ ಚಂದ್ರನ ಹೆಂಡತಿಯರಾಗಿ ನಕ್ಷತ್ರ ರಾಶಿಗಳಾಗಿದ್ದಾರೆಂದೂ ಹೇಳುತ್ತಾರೆ. ದಕ್ಷನು ಪ್ರಜಾಪತಿಯೊಂದಿಗೂ ಗುರುತಿಸಲ್ಪಟ್ಟು ಅವನು ದಕ್ಷ ಪ್ರಜಾಪತಿ ಎಂದೂ ಹೆಸರಾಗಿದ್ದಾನೆ.

ದರ್ಶ-ಪೂರ್ಣ-ಮಾಸ ಯಜ್ಞದ ಕುರಿತು ಇನ್ನಷ್ಟು ವಿವರಗಳು:

        ದರ್ಶಪೂರ್ಣಮಾಸವು ಶ್ರೌತಾಚರಣೆಗಳಲ್ಲೊಂದಾಗಿದೆ, ಅವುಗಳಲ್ಲಿ ಮೂರು ಪ್ರಧಾನ ವಿಧಗಳಿವೆ. ಮೊದಲನೆಯದನ್ನು ಇಷ್ಟಿ ಅಥವಾ ಹವಿರ್ಯಜ್ಞಾ ಎಂದು ಕರೆಯಲಾಗಿದ್ದು ಇದರಲ್ಲಿ ಅನ್ನ ಅಥವಾ ಬಾರ್ಲಿಯನ್ನು ಆಹುತಿಯಾಗಿ ಅರ್ಪಿಸಲಾಗುತ್ತದೆ. ಎರಡನೆಯದು ಪ್ರಾಣಿಬಲಿ ಮತ್ತು ಮೂರನೆಯದು ಸೋಮ ಆಚರಣೆ. ಮೊದಲನೆಯದಾದ ಇಷ್ಟಿ ವಿಧದಲ್ಲಿ  ಐದು ವಿಧವಾದ ಆಚರಣೆಗಳಿದ್ದು ಅವುಗಳು ಕ್ರಮವಾಗಿ ಅಜ್ಞ್ಯಾಧೇಯ, ಪುನರಾಧೇಯ, ಅಗ್ನಿಹೋತ್ರ, ದರ್ಶಪೂರ್ಣಮಾಸ ಮತ್ತು ಚಾತುರ್ಮಾಸ್ಯ. ದರ್ಶಪೂರ್ಣಮಾಸದ ಹುಣ್ಣಿಮೆ ಮತ್ತು ಅಮವಾಸ್ಯೆಯ ಆಚರಣೆಗಳಲ್ಲಿ ಋಗ್ ಮತ್ತು ಯಜುರ್ - ಈ ಎರಡು ವೇದಗಳಿಂದ ಆಯ್ದ ಮಂತ್ರಗಳ ಪಠಣವಿರುತ್ತದೆ ಮತ್ತು ಇದಕ್ಕೆ ನಾಲ್ಕು ಪುರೋಹಿತರ ಅವಶ್ಯಕತೆಯಿರುತ್ತದೆ. ಹುಣ್ಣಿಮೆ ಮತ್ತು ಅಮವಾಸ್ಯೆಗಳಲ್ಲಿ ಕೈಗೊಳ್ಳುವ ದರ್ಶಪೂರ್ಣಮಾಸ ಯಜ್ಞವು ಎಲ್ಲಾ ಇಷ್ಟಿ ಯಜ್ಞಗಳ ಸಮಷ್ಟಿಯಾಗಿರುತ್ತದೆ.

Daitya-hantri दैत्य-हन्त्रि (599)

೫೯೯. ದೈತ್ಯ-ಹಂತ್ರಿ

            ದೈತ್ಯ ಎಂದರೆ ಕೆಡುಕು ಮತ್ತು ಪುರಾಣಗಳಲ್ಲಿ ಇದು ರಾಕ್ಷಸರಿಂದ ಪ್ರತಿನಿಧಿಸಲ್ಪಟ್ಟಿದೆ. ದೇವಿಯು ಎಲ್ಲಾ ದುಷ್ಟ ಕ್ರಿಯೆಗಳ (ರಾಕ್ಷಸೀ ಗುಣಗಳ) ಸಂಹಾರಕಳಾಗಿದ್ದಾಳೆ. ಹೆಚ್ಚಿನ ವಿವರಗಳಿಗೆ ನಾಮ ೩೧೮ರ ಚರ್ಚೆಯನ್ನು ನೋಡಿ.

Dakṣa-yajña-vināśinī दक्ष-यज्ञ-विनाशिनी (600)

೬೦೦. ದಕ್ಷ-ಯಜ್ಞ-ವಿನಾಶಿನೀ

          ದೇವಿಯು ಎರಡು ದಕ್ಷರುಗಳ ಯಜ್ಞಾಚರಣೆಗಳನ್ನು ನಾಶ ಮಾಡಿದಳು. ಇಬ್ಬರು ದಕ್ಷರಿದ್ದರು, ಮೊದಲನೆಯವನು ದಕ್ಷ ಪ್ರಜಾಪತಿ; ಇವನು ಅತಿಮಾನುಷ ವ್ಯಕ್ತಿ ಮತ್ತೊಬ್ಬನು ಈ ಪ್ರಜಾಪತಿಯ ಮಾನವ ಅವತಾರ. ಇವರಿಬ್ಬರೂ ಶಿವನನ್ನು ಗೌರವಿಸಲಿಲ್ಲ. ಎಲ್ಲಾ ಯಜ್ಞಗಳಲ್ಲಿ ಹವಿಸ್ಸಿನ ಅಲ್ಪಭಾಗವನ್ನು ಎಲ್ಲಾ ದೇವ-ದೇವಿಯರಿಗೆ ಅರ್ಪಿಸಲಾಗುತ್ತದೆ. ಆದರೆ ಅವರುಗಳ ಅಹಂಕಾರಪೂರಿತ ಸ್ವಭಾವದಿಂದಾಗಿ ಅವರು ಯಜ್ಞದ ಹವಿರ್ಭಾಗವನ್ನು ಶಿವನಿಗೆ ಸಲ್ಲಿಸಲಿಲ್ಲ. ಇದರಿಂದ ವ್ಯಗ್ರನಾದ ಶಿವನು ತನ್ನ ಸೈನ್ಯದ ಮೂಲಕ ಇವರ ಯಜ್ಞಗಳನ್ನು ನಾಶಪಡಿಸಿದನು. ದೇವಿಯು ಇಂತಹ ವಿನಾಶಕ್ಕೆ ಕಾರಣಳಾಗಿದ್ದಾಳೆ ಎಂದು ಹೇಳಲಾಗಿದೆ. ಈ ನಾಮವು ಈ ಕಾರಣವನ್ನು ಎತ್ತಿ ತೋರಿಸುತ್ತದೆ. ಎರಡು ದಕ್ಷರು ವಿವಿಧ ಕಾಲಗಳಲ್ಲಿ ಅಸ್ಥಿತ್ವದಲ್ಲಿದ್ದರು. ಶಿವನು ಅತಿಮಾನವನಾದ ದಕ್ಷನನ್ನು ಮಾನವನಾಗಿ ಜನಿಸೆಂದು ಶಪಿಸಿದ್ದನು.

                                                                                                                        ******

ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 594 - 600 http://www.manblunder.com/2010/02/lalitha-sahasranamam-594-600.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
No votes yet

Comments

Submitted by nageshamysore Sun, 10/20/2013 - 15:11

ಶ್ರೀಧರರೆ, ಮೊದಲಿಗೆ 600ನೆ ನಾಮ ತಲುಪಿದ ಅಭಿನಂದನೆಗಳು - ನೋಡಿ ಆಗಲೆ ಶೇಕಡಾ 60 ಆಗಿಹೋಯ್ತು - ಫಸ್ಟಕ್ಲಾಸಿನಿಂದ ಹೈ ಫರ್ಸ್ಟಕ್ಲಾಸ್ನಿನತ್ತ ಮುಂದೋಡಲಿ ರಥ :-)
.
ಈ ಕಂತು '೧೩೯. ಶ್ರೀ ಲಲಿತಾ ಸಹಸ್ರನಾಮದ ವಿವರಣೆ' ಯ ಕಾವ್ಯಸಾರ ಪರಿಷ್ಕರಣೆಗೆ ಈ ಕೆಳಗೆ:
.
ಲಲಿತಾ ಸಹಸ್ರನಾಮ ೫೯೪ - ೬೦೦
___________________________________________
.
೫೯೪. ಇಂದ್ರ-ಧನುಃ-ಪ್ರಭಾ 
ಜತೆಗ್ಹೊಳೆವ 'ಹ್ರೀಂ' ಬಿಂದು ಮೇಲಿನ ಬಿಂದು-ಕಾಲಂಶದ ಕಾಮನಬಿಲ್ಲು
ಅರ್ಧಚಂದ್ರ ಧನುಸ್ಸಿನಾಕಾರವು ಹೋಲಿಕೆಯಲಿ ಸಮವಿಹ ಮಳೆಬಿಲ್ಲು
ಸಹಸ್ರಾರದೆ ಸ್ಪೋಟಿಪ ಇಂದ್ರಚಾಪದೇಳು ಬಣ್ಣ ಉದ್ಭವಮೂಲವೆ ನಭ
ಲಲಾಟಮಧ್ಯ ಪ್ರಕಾಶ ದೀಪ ಕಾಂತಿವೃತ್ತದೆ ದೇವಿ ಇಂದ್ರ-ಧನುಃ-ಪ್ರಭಾ ||
.
೫೮೫. ಹೃದ್ಯಸ್ಥಾ
ಶ್ರೀ ಚಕ್ರ ನಿವಾಸಿನಿ ಲಲಿತಾಹೃದಯ, ಬ್ರಹ್ಮಾಂಡ ಪ್ರೀತಿಯ ಭಂಡಾರ
ಬ್ರಹ್ಮದ ಹೃದಯವರಿತವರಿಗೆ ನಿತ್ಯ ಆನಂದ, ಸಂತೋಷಕೆಲ್ಲಿದೆ ಪಾರ
ಹೆಬ್ಬೆರಳಗಾತ್ರ ಪುರುಷರೂಪಿ ಬ್ರಹ್ಮ, ದೇಹ ಮಧ್ಯಭಾಗದೆ ವಾಸಿಸುತ
ಹೃದಯ ಅನಾಹತಚಕ್ರದೆ ವಾಸಿಪ ದೇವಿ ಧ್ಯಾನಕೆ, ಲಲಿತಾ ಹೃದ್ಯಸ್ಥ ||
.
೫೯೬. ರವಿಪ್ರಖ್ಯಾ 
ಪಂಚದಶೀ ಮಂತ್ರದ ಪ್ರತಿಸಾಲು ಪ್ರತಿನಿಧಿಸುತ ಒಂದೊಂದು ಕೂಟ
ಅನಾಹತ ಚಕ್ರದಲುಪಸ್ಥಿತವಾಗಿ ಸಂಕೇತ, ಎರಡನೆ ಸೂರ್ಯಕೂಟ
ಕೂಟದಿಂಕೂಟಕೆ ಭಿನ್ನ ಪ್ರಖರತೆ, ಹೊಳೆಯುವಳೆಲ್ಲಾ ಕೂಟದ ಸಖ್ಯಾ
ಪ್ರತಿ ಹೃದಯದಲಿ ಸೂರ್ಯನಂತೆ ಲಕಲಕ ಹೊಳೆಯುವ ರವಿಪ್ರಖ್ಯಾ ||
.
೫೯೭. ತ್ರಿಕೋಣಾಂತರ-ದೀಪಿಕಾ
ಪಂಚದಶೀ ತ್ರಿಕೂಟ ಸೂಕ್ಷ್ಮ ಸ್ವಭಾವ, ಅಗ್ನಿಕೂಟದ ಅಗ್ನಿಜ್ವಾಲೆ ಮೂಲಾಧಾರ
ತ್ರಿಕೋಣದಗ್ನಿರೂಪಾಗಿ ಹೊಳೆವ ಲಲಿತೆಗೆ, ತ್ರಿಕೋಣಾಂತರ-ದೀಪಿಕಾ ಹೆಸರ
ಮಳೆಬಿಲ್ಲಾಗಿ ಅನಾಹತ ಚಕ್ರ ದ್ವಿತೀಯ, ಸಹಸ್ರಾರದ ಕೆಳಚಂದ್ರ ತೃತೀಯ
ಸಹಸ್ರಾರದೆ ರವಿ-ಮಳೆಬಿಲ್ಲು-ಶಶಿಯಂತೆ ಹೊಳೆದೆ ಹೃದಯ-ಹಣೆ-ಶಿರಮಧ್ಯ ||
.
೫೯೮. ದಾಕ್ಷಾಯಣೀ
ಹುಣ್ಣಿಮೆ ಅಮಾವಾಸೆ ದಿನದೆ ನಡೆಸೊ ದರ್ಶ-ಪೂರ್ಣ-ಮಾಸ-ಯಜ್ಞ
ಯಜ್ಞರೂಪಿ ದೇವಿಗರ್ಪಿಸುವ ಶಕ್ತ ಆಹುತಿಗಳೆ, ದಾಕ್ಷಾಯನ ಯಜ್ಞ
ದೃಢ ಮನ, ಶಕ್ತಿ, ಸಾಮರ್ಥ್ಯ ದೈಹಿಕ ಬೌದ್ಧಿಕ ವರ್ಧನೆ ಅನುಕರಣಿ
ದಕ್ಷನ ಮಗಳಾಗಿ ಜನಿಸಿ ಶಿವನ ವರಿಸಿದ ವಂಶಾವಳಿ ದಾಕ್ಷಾಯಣೀ ||
.
ದರ್ಶ-ಪೂರ್ಣ-ಮಾಸ ಯಜ್ಞದ ಕುರಿತು ಇನ್ನಷ್ಟು ವಿವರಗಳು :
_____________________________________________
ದರ್ಶಪೂರ್ಣಮಾಸ ಶ್ರೌತಾಚರಣೆಯಲೊಂದು, ಅದರ ಮೂರುವಿಧ ಪ್ರಧಾನ
ಮೊದಲನೆಯ ಇಷ್ಟಿ-ಹವಿರ್ಯಜ್ಞ ಆಹುತಿಗನ್ನ ಬಾರ್ಲಿ ಐದು ವಿಧದಾಚರಣ
ಅಜ್ಞ್ಯಾಧೇಯ,ಪುನರಾಧೇಯ,ಅಗ್ನಿಹೋತ್ರ,ದಶಪೂರ್ಣಮಾಸ,ಚಾತುರ್ಮಾಸ
ದರ್ಶಪೂರ್ಣ ಇಷ್ಟಿಗಳಾ ಸಮಷ್ಟಿ, ವೇದಾಂಶ ಪಠನ ಚತುರ್ಪುರೋಹಿತ ಸಹ ||
.
೫೯೯. ದೈತ್ಯ-ಹಂತ್ರಿ 
ಭಕ್ತ ಸಾಧಕರ ಹಾದಿಯ ಮುಳ್ಳೆಲ್ಲ ನಿವಾರಿಸಿ ದೈವಿ ಕರುಣೆ
ಅಜ್ಞಾನ, ಅವಿದ್ಯೆ ವಿನಾಶದಿ, ಜ್ಞಾನದೀಪ ಹಚ್ಚಿ ಪ್ರಜ್ಞಾಪೂರ್ಣೆ
ಕೆಡುಕೆ ದೈತ್ಯ ಪುರಾಣದಲದ ಪ್ರತಿನಿಧಿಸಿ ರಾಕ್ಷಸ ಕುತಂತ್ರಿ
ಸಂಹಾರಕಿ ದೇವಿ ರಾಕ್ಷಸ ದುರ್ಗುಣ-ದುಷ್ಕೃತ್ಯ ದೈತ್ಯಹಂತ್ರಿ ||
.
೬೦೦. ದಕ್ಷ-ಯಜ್ಞ-ವಿನಾಶಿನೀ
ಶಿವನಿಗೇ ಅಗೌರವ ಅತಿಮಾನುಷ ದಕ್ಷ್ ಮತ್ತವನ ಮಾನವಾವತಾರ
ಯಜ್ಞಗಳ ಹವಿಸ್ಸಿನ ಅರ್ಹ ಭಾಗ, ಶಿವನಿಗೆ ಸಲ್ಲಿಸಬಿಡದ ಅಹಂಕಾರ
ಪತಿಗೆ ನೀಡದ ಮನ್ನಣೆ, ಮಗಳಿಗೆ ಅನಾದರವೆ ಔದಾರ್ಯ ಅಗ್ನಿಗೆ ತನಿ
ಶಿವರೋಷದೆ ಧೂಳಿಪಟ, ಸರ್ವನಾಶಕೆ ಕಾರಣ ದಕ್ಷ-ಯಜ್ಞ-ವಿನಾಶಿನೀ ||
 .
-ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು