೧೩. ಲಲಿತಾ ಸಹಸ್ರನಾಮ: ೧೯ರಿಂದ ೨೫ರ ವಿವರಣೆ

೧೩. ಲಲಿತಾ ಸಹಸ್ರನಾಮ: ೧೯ರಿಂದ ೨೫ರ ವಿವರಣೆ

ಲಲಿತಾ ಸಹಸ್ರನಾಮ ೧೯ರಿಂದ ೨೫

Navacampaka-puṣpābha-nāsadaṇḍa-virājitā नवचम्पक-पुष्पाभ-नासदण्ड-विराजिता (19)

 ೧೯. ನವಚಂಪಕ-ಪುಷ್ಪಾಭ-ನಾಸದಂಡ-ವಿರಾಜಿತಾ

         ದೇವಿಯ ನಾಸಿಕವು ಹೊಸದಾಗಿ ಬಿರಿದ ಸಂಪಿಗೆಯ ಪುಷ್ಪದಂತಿದೆ.

Tārākānthi-tiraskāri-nāsabharaṇa-bhāsurā ताराकांति-तिरस्कारि-नासभरण-भासुरा (20)

೨೦. ತಾರಾಕಾಂತಿ-ತಿರಸ್ಕಾರಿ-ನಾಸಭರಣ-ಭಾಸುರಾ

       ನಕ್ಷತ್ರಗಳ ಕಾಂತಿಯನ್ನು ಮೀರಿಸುವ ಮೂಗುತಿಯನ್ನು ದೇವಿಯು ಧರಿಸಿದ್ದಾಳೆ. ಅವಳ ಮೂಗುತಿಯು ಮುತ್ತು ಹಾಗು ಮಾಣಿಕ್ಯಗಳಿಂದ ಮಾಡಲ್ಪಟ್ಟಿದೆ. ತಾರಾ ಎಂದರೆ ನಕ್ಷತ್ರಗಳು. ತಾರಾ ಎಂದರೆ ಇಬ್ಬರು ದೇವತೆಗಳನ್ನೂ ಸೂಚಿಸುತ್ತದೆ ಅವರು ಮಂಗಳಾ ಮತ್ತು ಶುಕ್ಲಾ ಆಗಿದ್ದಾರೆ. ಶುಕ್ಲಾ ದೇವತೆಯು ಕಾಲಾನಂತರದಲ್ಲಿ ಶುಕ್ರಾ ಎಂದು ಕರೆಯಲ್ಪಟ್ಟಿದೆ. ಬಹುಶಃ ಈ ಮಂಗಳಾ ಮತ್ತು ಶುಕ್ರಾ ಇವುಗಳು ಮಂಗಳ ಮತ್ತು ಶುಕ್ರ ಗ್ರಹಗಳಿರಬಹುದು. ಪ್ರತಿಯೊಂದು ಗ್ರಹವೂ ಒಂದು ವಿಧವಾದ ಅಮೂಲ್ಯವಾದ ರತ್ನಗಳಿಗೆ ಅಧಿಪತಿಯಾಗಿರುತ್ತದೆ. ಮಂಗಳ ಗ್ರಹವು ಮಾಣಿಕ್ಯದ ಅಧಿಪತಿಯಾಗಿದ್ದು ಅದು ಕೆಂಪು ವರ್ಣದ್ದಾಗಿದೆ ಮತ್ತು ಶುಕ್ರ ಗ್ರಹವು ವಜ್ರದ ಅಧಿಪತಿಯಾಗಿದೆ (ಮಣಿ ಮಾಲಾ ೨.೭೯). ಇವೆರಡೂ ಗ್ರಹಗಳು ದೇವಿಯ ಮೂಗನ್ನು ಅಲಂಕರಿಸಿವೆ ಎಂದೂ ಹೇಳಬಹುದು. ಇದರ ಮೂಲಕ ತಿಳಿಯುವುದೇನೆಂದರೆ ದೇವಿಯನ್ನು ಪೂಜಿಸುವುದರಿಂದ ಗ್ರಹಗಳ ದುಷ್ಪರಿಣಾಮಗಳನ್ನೂ ಕೂಡಾ ಹೋಗಲಾಡಿಸಿಕೊಳ್ಳಬಹುದು.

Kadhamba-mañjarī-klpta-karṇapūra-manoharā कधम्ब-मञ्जरी-क्ल्प्त-कर्णपूर-मनोहरा (21)

೨೧. ಕದಂಬ-ಮಂಜರೀ-ಕ್ಲುಪ್ತ-ಕರ್ಣಪೂರ-ಮನೋಹರಾ

       ದೇವಿಯು ಕದಂಬವೃಕ್ಷದ ಹೂವುಗಳ ದಳಗಳನ್ನು ಅವಳ ಕಿವಿಯಲ್ಲಿ ಮುಡಿದಿದ್ದಾಳೆ ಅಥವಾ ಅವಳ ತಲೆಯಲ್ಲಿ ಮುಡಿದಿರುವ ಆ ಹೂವುಗಳು ಅವಳ ಕಿವಿಯವರೆಗೆ ಕೆಳಗೆ ಹರಿದಿವೆ. ಈ ಹೂವುಗಳು ಅವಳ ಚಿಂತಾಮಣಿ ಗೃಹದ ಹೊರಗಡೆ ಬಿಡುತ್ತವೆ (ಚಿಂತಾಮಣಿ ಎಂದರೆ ದೇವಿಯು ವಾಸಿಸುವ ಅರಮನೆ). ಈ ಹೂವುಗಳಿಗೆ ದಿವ್ಯವಾದ ಸುವಾಸನೆಯಿದ್ದು ಅದು ಅವಳ ಕಿವಿಯ ಹಾಲೆಗಳಿಂದ ಸೂಸಲ್ಪಟ್ಟಿದೆ.

Tāṭaṅka-yugalī-bhūta-tapanoḍupa-maṇḍalā ताटङ्क-युगली-भूत-तपनोडुप-मण्डला (22)

೨೨. ತಾಟಙ್ಕ-ಯುಗಲೀ-ಭೂತ-ತಪನೋಡುಪ-ಮಂಡಲಾ

          ದೇವಿಯು ಸೂರ್ಯ ಚಂದ್ರರನ್ನು ತನ್ನ ಕಿವಿಯೋಲೆಗಳಾಗಿ ಧರಿಸಿದ್ದಾಳೆ. ಇದರ ಅರ್ಥ ಅವಳು ಸಮಸ್ತ ಜಗತ್ತಿನ ಚಟುವಟಿಕೆಗಳನ್ನು ನಿಯಂತ್ರಿಸುತ್ತಾಳೆ; ಸೂರ್ಯ ಚಂದ್ರರು ಜಗದ ಮೇಲಿನ ಜೀವನವು ಸ್ಥಿತವಾಗಿರಲು ಕಾರಣರು. ಸೂರ್ಯಚಂದ್ರರು ಅವಳ ಕಣ್ಣು, ಕಿವಿಯ ಓಲೆ ಮತ್ತು ಸ್ತನಗಳನ್ನು ಪ್ರತಿನಿಧಿಸುತ್ತಾರೆ ಎಂದೂ ಹೇಳುತ್ತಾರೆ. ಕ್ಲೀಂ(क्लीं) ಬೀಜಾಕ್ಷರವು ಅವಳ ಎರಡು ಸ್ತನಗಳನ್ನು ಸಂಕೇತಿಸುತ್ತವೆ ಮತ್ತು क्लीं (ಕ್ಲೀಂ) ಬೀಜಾಕ್ಷರದಲ್ಲಿರುವ ಎರಡು ಅರ್ಧ ವೃತ್ತಗಳು ಇವಳ ಎರಡು ಸ್ತನಗಳನ್ನು ಪ್ರತಿನಿಧಿಸುತ್ತವೆ. ಕ್ಲೀಂ ಬೀಜವನ್ನು ಕಾಮ ಬೀಜವೆಂದೂ ಕರೆಯುತ್ತಾರೆ. ಹೆಚ್ಚಿನ ವಿವರಗಳನ್ನು ಗುರುಮುಖೇನವೇ ತಿಳಿಯಬೇಕು. ಈ ಸಹಸ್ರನಾಮದ ವಿವಿಧ ನಾಮಗಳು ಸೂಕ್ಷ್ಮವಾಗಿ ವಿವಿಧ ಬೀಜಾಕ್ಷರಗಳನ್ನು ಹೇಳುತ್ತವೆ ಆದ್ದರಿಂದ ಲಲಿತಾ ಸಹಸ್ರನಾಮವು ಬಹಳ ಶಕ್ತಿಯುತವಾದುದೆಂದು ಪರಿಗಣಿತವಾಗಿದೆ.

          ಸೌಂದರ್ಯಲಹರಿಯ ೨೮ನೇ ಶ್ಲೋಕವು, "ಬ್ರಹ್ಮ, ಇಂದ್ರ ಮೊದಲಾದ ಉನ್ನತ ಲೋಕದ ಜೀವಿಗಳು ಅಮೃತವನ್ನು ಸೇವಿಸಿ ಅಮರತ್ವವನ್ನು ಪಡೆದಿದ್ದರೂ ಕೂಡಾ ಅವರೆಲ್ಲಾ ಭಯಾನಕವಾದ ಬಿಳಿಕೂದಲು (ಮುದಿತನದಿಂದ) ಮತ್ತು ಮೃತ್ಯುವಿನಿಂದ ನಶಿಸುತ್ತಾರೆ. ಆದರೆ ಭಯಂಕರವಾದ ಹಾಲಾಹಲ(ವಿಷ)ವನ್ನು ಸೇವಿಸಿದರೂ ಕೂಡಾ ದೀರ್ಘಾಯುಷ್ಯವನ್ನು ಶಿವನು ಹೊಂದಿದ್ದಾನೆಂದರೆ ನೀನು ಧರಿಸಿರುವ ನಿನ್ನ ಕಿವಿಯ ಆಭರಣಗಳ ಘನತೆಯೇ ಅದಕ್ಕೆ ಕಾರಣ", ಎನ್ನುತ್ತದೆ.

Padmarāga-śilādharśa-paribhāvi-kapolabhūḥ पद्मराग-शिलाधर्श-परिभावि-कपोलभूः (23)

೨೩. ಪದ್ಮರಾಗ-ಶಿಲಾಧರ್ಶ-ಪರಿಭಾವಿ-ಕಪೋಲಭೂಃ

          ಅವಳ ಕೆನ್ನೆಗಳು ಹೊಳೆಯುತ್ತಿವೆ ಹಾಗು ಮೃದುವಾಗಿದ್ದು ಪ್ರತಿಫಲನವನ್ನು ಹೊಂದಿವೆ. ’ಪದ್ಮರಾಗ’ವು ಒಂದು ವಿಧವಾದ ಮಾಣಿಕ್ಯವಾಗಿದ್ದು ಅದು ಕೆಂಪು ಬಣ್ಣದ್ದಾಗಿದೆ. ಮಾಣಿಕ್ಯಗಳು ನಾಲ್ಕು ವಿಧದಲ್ಲಿರುತ್ತವೆ - ವಿಪ್ರ, ಕುರುವಿಂದ, ಸೌಗಂಧಿಕ, ಮನಸ್ಕಂಡ. ಇವುಗಳಲ್ಲಿ ವಿಪ್ರವು ಸರ್ವೋತ್ತಮವಾಗಿದೆ. (ನಿಷೇಧಿಸಲ್ಪಟ್ಟ ಮಾಣಿಕ್ಯಗಳನ್ನು ಧರಿಸುವುದರಿಂದ ಒಬ್ಬನ ಜೀವನದಲ್ಲಿ ಸರಿ ಪಡಿಸಲಾಗದಂತಹ ಹಾನಿಯುಂಟಾಗುತ್ತದೆ). ಅವಳ ಕೆನ್ನೆಗಳು ಕೆಂಪನ್ನು ಪ್ರತಿಫಲಿಸುತ್ತವೆ ಏಕೆಂದರೆ ಅವಳ ಮೈಕಾಂತಿಯೇ ಕೆಂಪು ಬಣ್ಣದ್ದಾಗಿದೆ. ಮೇಲೆ ವರ್ಣಿಸಲಾಗಿರುವ ಇತರ ಆಭರಣಗಳೂ ಕೂಡಾ ಕೆಂಪು ಬಣ್ಣದವುಗಳೇ ಆಗಿವೆ. ಅವಳು ಕಿವಿಯಲ್ಲಿ ಧರಿಸಿರುವ ಸೂರ್ಯ ಚಂದ್ರರೂ ಕೂಡಾ ಅವಳ ಕೆನ್ನೆಗಳು ಕೆಂಪಾಗಿ ಹೊಳೆಯಲು ಕಾರಣವಾಗಿವೆ. ಅವಳಿಗೆ ಸಂಭಂದಪಟ್ಟ ಎಲ್ಲವೂ ಕೆಂಪಾಗಿರುತ್ತವೆ. ಈ ಹಿಂದೆಯೇ ಚರ್ಚಿಸಿದಂತೆ ಕೆಂಪು ಬಣ್ಣವು ಕರುಣೆಯನ್ನು ಸಂಕೇತಿಸುತ್ತದೆ.

          ಸೌಂದರ್ಯ ಲಹರಿಯ ೫೯ನೇ ಶ್ಲೋಕವು, "ನಿನ್ನ ಮುಖವು ನಾಲ್ಕು ಚಕ್ರಗಳ ಮನ್ಮಥನ ರಥದಂತಿದೆ; ನಿನ್ನ ಕಿವಿಯೋಲೆಗಳ ಜೊತೆಯು ನಿನ್ನ ವಿಶಾಲವಾದ ಕೆನ್ನೆಗಳಲ್ಲಿ ಪ್ರತಿಬಿಂಬಿತವಾಗಿವೆ. ಮಹಾನ್ ಶೂರನಾಗಿರುವ ಕಾಮನು ನಿನ್ನ ಕೆನ್ನೆಗಳ ಮೇಲೆ ಕುಳಿತು ಶಿವನ ವಿರುದ್ಧ ಪ್ರತೀಕಾರವನ್ನು ಹೆಣೆಯುತ್ತಾನೆ; ಭೂಮಿಯೆಂಬ ರಥದ ಮೇಲೆ ಆಸೀನನಾಗಿ ಸೂರ್ಯ ಮತ್ತು ಚಂದ್ರರನ್ನೇ ರಥದ ಚಕ್ರಗಳುಳ್ಳವನಾಗಿದ್ದಾನೆ" ಎಂದು ಹೇಳುತ್ತದೆ.

Navavidruma-bimbaśrī-nyakkāri-radanacchadā नवविद्रुम-बिम्बश्री-न्यक्कारि-रदनच्छदा (24)

೨೪. ನವವಿದ್ರುಮ-ಬಿಂಬಶ್ರೀ-ನ್ಯಕ್ಕಾರಿ-ರದನಚ್ಛದಾ

          ಅವಳ ತುಟಿಗಳು ಹೊಸ ಹವಳದ ಹೊಳಪನ್ನು ಮತ್ತು ಬಿಂಬ ಹಣ್ಣನ್ನು (ಮೊಮೊರ್ಡಿಕಾ ಮೊನಾಡೆಲ್ಫಾ - Momordica monadelpha) ಮೀರಿಸುತ್ತದೆ. ಬಿಂಬ ಹಣ್ಣನ್ನು (ತೊಂಡೆ ಹಣ್ಣನ್ನು)ಸಾಮಾನ್ಯವಾಗಿ ಸುಂದರವಾದ ತುಟಿಗಳಿಗೆ ಹೋಲಿಸುತ್ತಾರೆ; ಏಕೆಂದರೆ ಎರಡೂ ಕೆಂಪು ಬಣ್ಣದ್ದಾಗಿರುತ್ತವೆ.

Śuddha-vidhyāṅkurākāra-dhvijapakṅti-dvayojvalā  शुद्ध-विध्याङ्कुराकार-ध्विजपक्ङ्ति-द्वयोज्वला (25)

೨೫. ಶುದ್ಧ-ವಿಧ್ಯಾಙ್ಕುರಾಕಾರ-ಧ್ವಿಜಪಂಕ್ತಿತ-ದ್ವಯೋಜ್ವಲಾ

          ಅವಳ ಹಲ್ಲುಗಳು ಶುದ್ಧ ವಿದ್ಯೆ ಅಂದರೆ 'ಶ್ರೀ ವಿದ್ಯಾ'ದಂತೆ ಕಾಣಿಸುತ್ತದೆ. ಲಲಿತಾಂಬಿಕೆಯ ಪೂಜೆಯಲ್ಲಿ, ಶ್ರೀ ವಿದ್ಯೆಯನ್ನು ಬಹಳ ರಹಸ್ಯಾತ್ಮಕವಾದುದು ಮತ್ತು ಅತ್ಯಂತ ಶಕ್ತಿಯುತವಾದುದೆಂದು ಪರಿಗಣಿಸಲಾಗಿದೆ. ಇದರಲ್ಲಿ ಬಹಳಷ್ಟು ವಿಧಿವಿಧಾನಗಳಿವೆ ಮತ್ತು ಪ್ರತಿಯೊಂದು ಪೂಜಾಕ್ರಮಕ್ಕೂ ತನ್ನದೇ ಆದ ಅರ್ಥ ಮತ್ತು ವಿಶ್ಲೇಷಣೆಯಿದೆ. ಶುದ್ಧವೆಂದರೆ ಸ್ವಚ್ಛವಾದದ್ದು, ವಿದ್ಯಾ ಎಂದರೆ ಜ್ಞಾನ ಆದ್ದರಿಂದ ಶುದ್ಧ ವಿದ್ಯೆಯೆಂದರೆ ಅಪ್ಪಟವಾದ ಜ್ಞಾನವೆಂದು ಅರ್ಥ. ಇದನ್ನು ಶುದ್ಧವೆಂದು ಕರೆದಿದ್ದಾರೆ ಏಕೆಂದರೆ ಈ ಉಪಾಸನಾ ಮಾರ್ಗ ಅಥವಾ ಪಂಥವು, ಶ್ರೀ ವಿದ್ಯಾ ಪೂಜಾ ಪದ್ಧತಿಯಲ್ಲಿ ಶುದ್ಧಾದ್ವೈತ ತತ್ವವನ್ನು ಅಂದರೆ ‘ನಾನು ಅದೇ’ (ಅಹಂ ಬ್ರಹ್ಮಾಸ್ಮಿ) ತತ್ವವನ್ನು ಪ್ರತಿಪಾದಿಸುತ್ತದೆ.

         ಷೋಡಶೀ ಮಂತ್ರವು ಶ್ರೀ ವಿದ್ಯಾ ಕಲಿಕೆಗೆ ‘ಬೀಜ’ವೆಂದು ಪರಿಗಣಿಸಲಾಗಿದೆ. ಅದರಲ್ಲಿ ೧೬ ಬೀಜಾಕ್ಷರಗಳಿವೆ. ಒಂದು ಬೀಜವು ಮೊಳಕೆಯೊಡೆದಾಗ ಅದರಲ್ಲಿ ಎರಡು ಎಲೆಗಳಿರುತ್ತವೆ. ಆದ್ದರಿಂದ ೧೬ರನ್ನು ದ್ವಿಗುಣಗೊಳಿಸಿದರೆ (೧೬ x ೨) ನಮಗೆ ಮನುಷ್ಯರಲ್ಲಿರುವ ಹಲ್ಲುಗಳ ಸಂಖ್ಯೆಯಾದ ೩೨ ದೊರೆಯುತ್ತದೆ. ಹಲ್ಲುಗಳು ಮೇಲಿನ ಮತ್ತು ಕೆಳ ದವಡೆಗಳ ಎರಡು ಬೇರೆ ಬೇರೆ ಸಾಲುಗಳಲ್ಲಿ ಇದ್ದರೂ ಕೂಡಾ ಆ ದವಡೆಗಳು ಒಳಗಡೆ ಒಂದಕ್ಕೊಂದು ಅಂಟಿಕೊಂಡಿರುತ್ತವೆ. ಇದೇ ರೀತಿ ಆತ್ಮ ಮತ್ತು ಪರಮಾತ್ಮರು ಅಜ್ಞಾನದಿಂದ ಬೇರೆ ಬೇರೆಯಾಗಿ ಕಂಡು ಬಂದರೂ ವಾಸ್ತವದಲ್ಲಿ ಅವರಿಬ್ಬರೂ ಒಂದೇ. ’ಶ್ರೀ ವಿದ್ಯಾ’ ಉಪಾಸನೆಯನ್ನು ಅದರ ಮಹತ್ವ, ಅರ್ಥ ಹಾಗೂ ಪದ್ಧತಿಗಳನ್ನು ಸರಿಯಾಗಿ ತಿಳಿದುಕೊಂಡು ಏಕಾಂತದಲ್ಲಿ ಆಚರಿಸಿದರೆ ಮಾತ್ರ ಅದರ ಫಲವು ದೊರೆಯುತ್ತದೆ.

        ದೇವಿಯ ಮಂತ್ರ ದೀಕ್ಷಾ ವಿಧಾನಗಳಲ್ಲಿ ೩೨ ರೀತಿಯ ಪದ್ಧತಿಗಳಿವೆ. ಮತ್ತೊಂದು ರೀತಿಯ ವಿಶ್ಲೇಷಣೆಯೂ ಸಾಧ್ಯವಿದೆ. ಈ ಸಹಸ್ರನಾಮವು ಸಂಸ್ಕೃತದಲ್ಲಿರುವ ೫೧ ಅಕ್ಷರಗಳಲ್ಲಿ ಕೇವಲ ೩೨ಅಕ್ಷರಗಳಿಂದ ಪ್ರಾರಂಭವಾಗುತ್ತದೆ ಮತ್ತು ಇದು ದೇವಿಯ ಹಲ್ಲುಗಳ ಸಂಖ್ಯೆಯನ್ನು ಸೂಚಿಸುತ್ತದೆ. ಇದರ ಇನ್ನೊಂದು ಅರ್ಥ ಹೀಗಿರಬಹುದು; ಅದೇನೆಂದರೆ ಶ್ರೀ ವಿದ್ಯಾ ಪದ್ಧತಿಯ ದೀಕ್ಷೆಯನ್ನು ಗುರುವು ತನ್ನ ಶಿಷ್ಯನಿಗೆ ಮಾತಿನ ಮೂಲಕವೇ (ಹಲ್ಲುಗಳಿರುವ ಮುಖದ ಮೂಲಕ/ ಮೌಖಿಕವಾಗಿ) ಕೊಡಬೇಕು.

        ಶುದ್ಧ ವಿದ್ಯಾ ಬಗ್ಗೆ ಮತ್ತಷ್ಟು ವಿಚಾರಗಳನ್ನು ಮತ್ತೊಂದು ಕಂತಿನಲ್ಲಿ ನೋಡೋಣ. ಆಸಕ್ತರು ಶುದ್ಧವಿದ್ಯಾ ತತ್ವದ ಕುರಿತಾದ ಹೆಚ್ಚಿನ ವಿವರಗಳಿಗೆ ಸಂಪದದಲ್ಲಿ ಪ್ರಕಟವಾದ ಕಾಶ್ಮೀರ ಶೈವ ತತ್ವದ ಈ ಕೊಂಡಿಯನ್ನು http://sampada.net/blog/%E0%B2%B6%E0%B3%88%E0%B2%B5%E0%B2%AE%E0%B2%A4%E0%B2%A6-%E0%B2%B9%E0%B2%B2%E0%B2%B5%E0%B3%81-%E0%B2%AE%E0%B3%81%E0%B2%96%E0%B2%97%E0%B2%B3%E0%B3%81-%E0%B2%AD%E0%B2%BE%E0%B2%97-%E0%B3%A8-%E0%B2%95%E0%B2%BE%E0%B2%B6%E0%B3%8D%E0%B2%AE%E0%B3%80%E0%B2%B0-%E0%B2%B6%E0%B3%88%E0%B2%B5%E0%B2%A4%E0%B2%A4%E0%B3%8D%E0%B2%B5/07/08/2012/37820 ಸಹ ನೋಡಬಹುದು. 

******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 19-25 http://www.manblunder.com/2009/07/lalitha-sahasranamam-19-25.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 
Rating
Average: 5 (1 vote)

Comments

Submitted by nageshamysore Fri, 05/03/2013 - 02:06

ಶ್ರೀಧರರವರೆ,  ಶ್ರೀ ಲಲಿತೆಯ ಕುರಿತಾದ ಈ ಸರಣಿ ಸಾಕಷ್ಟು ಧೀರ್ಘವಾಗಿ, ಸುಮಾರು ಕಂತುಗಳಿಗೆ ವ್ಯಾಪಿಸುವುದರಿಂದ ಮುಂದೆ ಅವನ್ನೆಲ್ಲ ಸಂಗ್ರಹಿತ ರೂಪದಲ್ಲಿ ಒಂದೆ ಸಂಪುಟದಲ್ಲಿ ತರುವ ಆಲೋಚನೆಯಿದೆಯೆ? ಪುಸ್ತಕ ರೂಪದಲ್ಲಿಯು ಬಂದರೆ ಸೊಗಸಾಗಿರುತ್ತದೆ. ಅಂದಹಾಗೆ ಒಂದು ಪುಟ್ಟ ಸಲಹೆ (ಸಾಧ್ಯವಾದರೆ) - ಪ್ರತಿ ಕಂತನ್ನು ಅದರ ಹಿಂದಿನ ಕಂತಿಗೆ ಲಿಂಕಿನ ಮುಖಾಂತರ ಜೋಡಿಸಿದರೆ ಒಂದರಿಂದ ಅದರ ಹಿಂದಿನ ಕಂತಿಗೆ, ಒಳಗಿಂದಲೆ ಜಾಲಾಡುವ ಸಾಧ್ಯತೆಯಿರುತ್ತದೆ.
- ನಾಗೇಶ ಮೈಸೂರು, ಸಿಂಗಾಪುರದಿಂದ

Submitted by makara Fri, 05/03/2013 - 06:45

In reply to by nageshamysore

ಡಾ! ನಾಗೇಶ್ ಅವರೆ,
ಸಧ್ಯಕ್ಕೆ ಈ ಸರಣಿಯನ್ನು ಪುಸ್ತಕ ರೂಪದಲ್ಲಿ ತರುವ ಆಲೋಚನೆ ಏನೂ ಇಲ್ಲ. ಆ ಜಗನ್ಮಾತೆಯ ಕೃಪೆಯಿದ್ದರೆ ಅದೂ ಸಾಧ್ಯವಾಗಬಹುದು. ಇರಲಿ ಬಿಡಿ, ಈ ಮೊದಲು ಹಿಂದಿನ ಲೇಖನಗಳಿಗೆ ಕೊಂಡಿಯನ್ನು ಕೊಡುತ್ತಾ ಇದ್ದೆ. ಆದರೆ ಈಗ ಸಂಪದದಲ್ಲಿ ಒಬ್ಬ ಲೇಖಕರ ಇತ್ತೀಚಿನ ಬರಹಗಳ ಬಾಕ್ಸ್ ಬಲಗಡೆ ತೆರೆದುಕೊಳ್ಳುತ್ತದೆ; ಅದರ ಮೂಲಕವೇ ಹಿಂದಿನ ಹಾಗೂ ಮುಂದಿನ ಲೇಖನಗಳಿಗೆ ಸಾಗಬಹುದು; ಆದ್ದರಿಂದ ಅದನ್ನು ನಿಲ್ಲಿಸಿದ್ದೇನೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by nageshamysore Fri, 05/03/2013 - 19:38

In reply to by makara

ನಮಸ್ಕಾರ ಶ್ರೀಧರರವರಿಗೆ,
ಢನ್ಯವಾದಗಳು. ಅಂದಹಾಗೆ ಪರಬ್ರಹ್ಮದ ಕುರಿತು ಉತ್ತರಿಸಲಾಗದ ಪ್ರಶ್ನೆ ಕೇಳುತಿದ್ದ ಮಗನಿಗೆ ಉತ್ತರಿಸಲು ತಮ್ಮ ಲೇಖನದಿಂದ ತುಂಬಾ ಸಹಾಯವಾಯ್ತು (ಮೊದಲ ನಾಮ ಶ್ರೀ ಮಾತೆಯ ವಿವರಣೆಯಡಿಯಲ್ಲಿ). ಆದ್ಯಾಗೂ ಕೂಡ ಪರಬ್ರಹ್ಮದ ಮೂಲ ಯಾರು, ಎಲ್ಲಿಂದ? ಎಂಬ ಅವನ ಪ್ರಶ್ನೆಗೆ ಉತ್ತರಿಸಲಾಗಲಿಲ್ಲ. ಸದ್ಯಕ್ಕೆ ನಿಮ್ಮ ಶ್ರೀಮಾತೆಯ ವಿವರಣೆಯ ಭಾವಸಂಗ್ರಹವನ್ನು  ಪುಟ್ಟ ಕವನದ ರೂಪದಲ್ಲಿ ವಿವರಿಸಿ ಹೇಳಿದೆ (ಕವನ ಕೆಳಗಿದೆ ನೋಡಿ). ಅವನಿಗೆ ಪೂರ್ತಿ ಸಮಾಧಾನಕರ ಉತ್ತರ ಸಿಗದಿದ್ದರೂ ಅವನು ಶ್ರೀ ಲಲಿತೆಯ ಬಗ್ಗೆ ಇದೆ ಮೊದಲು ಕೇಳಿದ್ದು. ಬಹುಶಃ ಉಳಿದವನ್ನೆಲ್ಲಾ ಓದುತ್ತಾ ಹೆಚ್ಚು ಉತ್ತರ ಸಿಗಬಹುದೆಂದು ಕೊಂಡಿದ್ದೇನೆ.

1. ಶ್ರೀ ಮಾತಾ
-------------------
ಶ್ರೀ ಮಾತಾ ಬ್ರಹ್ಮಾಂಡ ನೀ ಸೃಷ್ಟಿ ಸ್ಥಿತಿ ಲಯ ಕರ್ತೆ
ಸಂಸಾರಚಕ್ರ ಜನನ ಮರಣ ಜೀವನ ಸಾಗರ ಮುಕ್ತೆ
ಬ್ರಹ್ಮ ಸಾಕ್ಷಾತ್ಕಾರಾರ್ಥ ಪುನರ್ಜನ್ಮ ವಿಮುಕ್ತಿ ದಾತೆ
ಪುರ ಚಕ್ರ ವಿದ್ಯಾ ಸೂಕ್ತ ಗುರು ಶ್ರೀಪಂಚಕ ಅರಾಧಿತೆ
ಪರಬ್ರಹ್ಮವೆ ಲಲಿತೆ ಪ್ರಥಮ ಸೃಷ್ಟಿಕ್ರಿಯಾ ಶ್ರೀಮಾತೆ
ವೇದಶಾಸ್ತ್ರ ಅವಿರ್ಭಾವಿನಿ ಶ್ರೀ ಲಲಿತಾಂಬಿಕೆ ನಮಸ್ತೆ!

 - ನಾಗೇಶ ಮೈಸೂರು ಸಿಂಗಾಪುರದಿಂದ.

Submitted by nageshamysore Fri, 05/03/2013 - 19:43

In reply to by nageshamysore

ನಮಸ್ಕಾರ ಶ್ರೀಧರರವರಿಗೆ,
ಕವನದ ಸಾಲುಗಳು ಪ್ರತಿಕ್ರಿಯೆಯಲ್ಲಿ ಕಲೆಸಿ ಹೋಯ್ತು, ಅದಕ್ಕೆ ಅರ್ಧ ವಿರಾಮದಿಂದ ಪ್ರತಿ ಸಾಲನ್ನು ಬೇರ್ಪಡಿಸಿ ಹಾಕಿದ್ದೇನೆ, ಈ ಪುನರ್ಪ್ರತಿಕ್ರಿಯೆಯಲ್ಲಿ.
- ನಾಗೇಶ ಮೈಸೂರು ಸಿಂಗಾಪುರದಿಂದ.

1. ಶ್ರೀ ಮಾತಾ - ---

ಶ್ರೀ ಮಾತಾ ಬ್ರಹ್ಮಾಂಡ ನೀ ಸೃಷ್ಟಿ ಸ್ಥಿತಿ ಲಯ ಕರ್ತೆ ;
ಸಂಸಾರಚಕ್ರ ಜನನ ಮರಣ ಜೀವನ ಸಾಗರ ಮುಕ್ತೆ ;
ಬ್ರಹ್ಮ ಸಾಕ್ಷಾತ್ಕಾರಾರ್ಥ ಪುನರ್ಜನ್ಮ ವಿಮುಕ್ತಿ ದಾತೆ ;
ಪುರ ಚಕ್ರ ವಿದ್ಯಾ ಸೂಕ್ತ ಗುರು ಶ್ರೀಪಂಚಕ ಅರಾಧಿತೆ ;
ಪರಬ್ರಹ್ಮವೆ ಲಲಿತೆ ಪ್ರಥಮ ಸೃಷ್ಟಿಕ್ರಿಯಾ ಶ್ರೀಮಾತೆ ;
ವೇದಶಾಸ್ತ್ರ ಅವಿರ್ಭಾವಿನಿ ಶ್ರೀ ಲಲಿತಾಂಬಿಕೆ ನಮಸ್ತೆ! ;

Submitted by makara Fri, 05/03/2013 - 20:36

In reply to by nageshamysore

ನಾಗೇಶ್ ಅವರೆ,
ವಿಜ್ಞಾನದಲ್ಲೇ ಆಗಲಿ ಅಥವಾ ಆಧ್ಯಾತ್ಮದಲ್ಲಿಯೇ ಆಗಲಿ ಒಂದು ಮೂಲ ನಂಬಿಕೆ/ಆಧಾರವನ್ನಿಟ್ಟುಕೊಂಡು (Basic Assumption) ಮುಂದುವರೆಯುತ್ತೇವೆ; ಹಾಗಾಗಿ ಅದರಾಚೆ ಆಲೋಚಿಸುವುದು ಕಠಿಣವೇ ಸರಿ. ಇದಕ್ಕೆ ರಾಮಕೃಷ್ಣ ಪರಮಹಂಸರು ಉಪ್ಪಿನ ಗೊಂಬೆಯೊಂದು ಸಾಗರದ ಆಳವನ್ನು ಅಳೆಯಲು ಪ್ರಯತ್ನಿಸಿತಂತೆ ಆ ಪ್ರಯತ್ನದಲ್ಲಿ ಅದು ಅದರಲ್ಲೇ ಲೀನವಾಗಿ ಹೋಯಿತಂತೆ. ಅದರಂತೆ ಬ್ರಹ್ಮವೇನೆಂದು ಅರಿಯಲು ಹೊರಟವನು ಅದರೊಳಗೆ ತಾದಾತ್ಮ್ಯವನ್ನು ಹೊಂದುವುದರಿಂದ ಅದರಿಂದ ಹಿಂದಿರುಗಿ ಬಂದವರು ಮಾತ್ರ ಅದನ್ನು ವಿವರಿಸಬಹುದು. ಇದೇ ರೀತಿಯ ಉದಾಹರಣೆಯನ್ನು ಸಂಪದಿಗರಾದ ಶ್ರೀಯುತ ನಂಜುಂಡಿಯವರು ಕೊಟ್ಟಿದ್ದರು; ಅದೇನೆಂದರೆ ಮಂಜಿನ ಗಡ್ಡೆಯೊಂದು ತನ್ನ ಮೂಲ ಸ್ವರೂಪವನ್ನು ಅರಿಯಲು ಹೊರಟು ಕರಗಿ ನೀರಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಂತೆ.
ಇರಲಿ ಬಿಡಿ, ನಿಮ್ಮ ಕಾವ್ಯ ಚೆನ್ನಾಗಿ ಮೂಢಿ ಬಂದಿದೆ; ಮುಂದುವರೆಸಿ; ಜಗನ್ಮಾತೆಯು ನಿಮಗೆ ಸನ್ಮಂಗಳವನ್ನುಂಟು ಮಾಡಲಿ. ಲಲಿತಾಂಬಿಕೆಯ ಒಂದು ಕನ್ನಡ ರಚನೆಯನ್ನು (ಗುಬ್ಬಿ ಚಿದಂಬರಾಶ್ರಮದಿಂದ ಪ್ರಕಟಿತವಾದ ಲಲಿತಾ ಪೂಜೆಯ ಹಾಡು) ಸಂಪದದಲ್ಲಿ ಸೇರಿಸಿದ್ದೆ ಅದರ ಕೊಂಡಿ ಇಲ್ಲಿದೆ http://sampada.net/blog/%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%AA%E0%B3%82%E0%B2%9C%E0%B3%86%E0%B2%AF-%E0%B2%B9%E0%B2%BE%E0%B2%A1%E0%B3%81/26/07/2012/37659 ಮತ್ತು ತ್ರಿಪುರ ಸುಂದರೀ ಅಷ್ಟಕಂನ ವ್ಯಾಖ್ಯಾನದ ಮಾಲಿಕೆಯನ್ನೂ ಸಹ ಸಂಪದದಲ್ಲಿ ಸೇರಿಸಿದ್ದೆ; ಅದರ ಮೊದಲನೇ ಲೇಖನದ ಕೊಂಡಿ ಇಲ್ಲಿದೆ http://sampada.net/blog/%E0%B2%A4%E0%B3%8D%E0%B2%B0%E0%B2%BF%E0%B2%AA%E0%B3%81%E0%B2%B0-%E0%B2%B8%E0%B3%81%E0%B2%82%E0%B2%A6%E0%B2%B0%E0%B2%BF-%E0%B2%85%E0%B2%B7%E0%B3%8D%E0%B2%9F%E0%B2%95%E0%B2%AE%E0%B3%8D-%E0%B2%AD%E0%B2%BE%E0%B2%97-%E0%B3%A7-%E0%B2%AE%E0%B3%81%E0%B2%A8%E0%B3%8D%E0%B2%A8%E0%B3%81%E0%B2%A1%E0%B2%BF-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%AA%E0%B2%B0%E0%B2%BF%E0%B2%9A%E0%B2%AF/17/08/2012/37980 ಇವುಗಳನ್ನು ಓದುವುದರಿಂದ ನಿಮ್ಮ ಕಾವ್ಯ ರಚನೆಗೆ ಹೆಚ್ಚು ಉಪಯೋಗವಾಗಬಹುದು ಎಂದುಕೊಳ್ಳುತ್ತೇನೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by nageshamysore Sun, 01/26/2014 - 15:30

ಶ್ರೀಧರರೆ, "೧೩. ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ :-)
.
ಲಲಿತಾ ಸಹಸ್ರನಾಮ ೧೯ರಿಂದ ೨೫
______________________________
.
೧೯. ನವಚಂಪಕ-ಪುಷ್ಪಾಭ-ನಾಸದಂಡ-ವಿರಾಜಿತ 
.
ಸುಕೋಮಲ ಸುಂದರ ಸಂಪಿಗೆ ಬೀರುತ ಪರಿಮಳ
ಸೆರೆ ಹಿಡಿದಂತೆ ಮೈ ಮನ ಸುವಾಸನೆ ಮನದಾಳ
ಬಿರಿದರೆಷ್ಟು ಸೊಗವೆ ನೀಳ ನಾಸಿಕ ಅರಳಿದ ಹೂವ್ವೆ
ಹೊಚ್ಚಹೊಸತೆ ಬಿರಿದ ಪುಷ್ಪನಾಸಿಕ ದೇವಿ ಮೊಗದೆ ||
.
೨೦. ತಾರಾಕಾಂತಿ-ತಿರಸ್ಕಾರಿ-ನಾಸಾಭರಣ-ಭಾಸುರ 
.
ಕೆಂಪು ಮಾಣಿಕ್ಯದಧಿಪತಿ ಮಂಗಳ ವಜ್ರಾಧಿಪತಿ ಶುಕ್ರ
ದೇವೀ ಮೂಗುತಿಯಾಗ್ಹಿಡಿದ ಗ್ರಹ ನಿಯಂತ್ರಣ ಸೂತ್ರ
ಮುತ್ತು ಮಾಣಿಕ್ಯದೆ ಮಿನುಗುವ ಮೂಗುತಿಯ ಧರಿಸೊ
ಲಲಿತಾ ಪೂಜೆಯ ಮಾಡುತೆ ಗ್ರಹದೋಷ ನಿವಾರಿಸೊ ||
.
೨೧. ಕದಂಬ-ಮಂಜರೀ-ಕ್ಲುಪ್ತ-ಕರ್ಣಪೂರ-ಮನೋಹರಾ 
.
ಚಿಂತಾಮಣಿ ದೇವಿಯರಮನೆ ಹೊರಗೆ
ಬಿಡುವ ಕದಂಬವೃಕ್ಷ ಹೂಗಳೆ ಸೊಬಗೆ
ದೇವಿ ಮುಡಿಯೇರಿ ವ್ಯಾಪಿಸವಳಾಕರ್ಣ
ದಿವ್ಯ ಪರಿಮಳ ಸೂಸೋ ಕರ್ಣಾಭರಣ ||
.
೨೨. ತಾಟಙ್ಕ- ಯುಗಲೀ- ಭೂತ-ತಪನೋಡುಪ-ಮಂಡಲಾ
.
ಅಮರತ್ವದ ಅಮರತ್ವ ಶಿವ ದೇವಿ ಕರ್ಣಾಭರಣ ಕಾರಣ
ಸೂರ್ಯಚಂದ್ರರೆ ಕಿವಿಯೋಲೆನಯನ ಪ್ರತಿನಿಧಿಸಿ ಸ್ತನ
ಬೀಜಾಕ್ಷರ ಸಂಯುಕ್ತ ಸಶಕ್ತ ಜಗದ ಚಟುವಟಿಕೆ ಸಮಸ್ತ
ಇಹಜೀವನ ಸ್ಥಿಮಿತತೆ ಕಾರಣ ರವಿ ಶಶಿ ನಿಯಂತ್ರಿಸುತ ||
.
೨೩. ಪದ್ಮರಾಗ-ಶಿಲಾಧರ್ಶ-ಪರಿಭಾವಿ-ಕಪೋಲಭೂಃ
.
ಚತುರ್ಚಕ್ರ ಮನ್ಮಥರಥ ವದನ ಶಿವನ ಕಾವ ಕಾಡೊ ರೂಪು
ವಿಶಾಲ ಕಪೋಲದಿ ಪ್ರತಿಫಲಿಸಿ ಕಿವಿಯೋಲೆಯಾ ಹೊಳಪು
ಮೃದು ಪದ್ಮರಾಗ ಮೈ ಕಾಂತಿ ಕದಪು ಮಣಿ ಆಭರಣ ಕೆಂಪು
ಕರ್ಣ ರಥಚಕ್ರ ರವಿಶಶಿಗೂ ಕೆಂಪಲೆ ಕರುಣಾ ಸಂಕೇತ ಕದಪು ||
.
೨೪. ನವವಿದ್ರುಮ-ಬಿಂಬಶ್ರೀ-ನ್ಯಕ್ಕಾರಿ-ರದನಚ್ಛದಾ
ಕೆಂಪು ತುಟಿಗಳ ದೇವಿ ಅಪ್ರತಿಮ ಸ್ವರೂಪ
ತೊಂಡೆಹಣ್ಣುಗಳನ್ನು ಮೀರಿಸುವ ಅಪರೂಪ
ಹೊಳಪೆ ಹವಳದಾ ರೂಪಾಗಿ ಫಳಫಳಿಸಿತ್ತು
ಜಗದೇಕ ಸೌಂದರ್ಯ ಲಲಿತೆಯ ರೂಪಾಯ್ತು ||
.
೨೫. ಶುದ್ಧ-ವಿಧ್ಯಾಙ್ಕುರಾಕಾರ-ಧ್ವಿಜಪಂಕ್ತಿತ-ದ್ವಯೋಜ್ವಲಾ 
.
ಶ್ರೀವಿದ್ಯಾ ಸಮರ್ಥತೆ ರಹಸ್ಯತೆಯಾಗಿ ದಂತ ಪಂಕ್ತಿ
ಶುದ್ಧ ಸ್ವಚ್ಚ ವಿದ್ಯಾಜ್ಞಾನ ಅಪ್ಪಟ ಜ್ಞಾನಕಿಹ ಸಾರಥಿ
'ನಾನು ಅದೆ' ಅಹಂ ಬ್ರಹ್ಮಾಸ್ಮಿ ಶುದ್ದಾದ್ವೈತ ತತ್ವಾ
ಲಲಿತಾದಂತ ಶ್ರೀವಿದ್ಯೆ ತರ ಕಾಣುವದ್ಭುತ ಮಹತ್ವ ||.
.
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು