೧೪೧. ಲಲಿತಾ ಸಹಸ್ರನಾಮ ೬೦೬ರಿಂದ ೬೧೦ನೇ ನಾಮಗಳ ವಿವರಣೆ

೧೪೧. ಲಲಿತಾ ಸಹಸ್ರನಾಮ ೬೦೬ರಿಂದ ೬೧೦ನೇ ನಾಮಗಳ ವಿವರಣೆ

                                                                                                                             ಲಲಿತಾ ಸಹಸ್ರನಾಮ ೬೦೬-೬೧೦

Guhajanma-bhūḥ गुहजन्म-भूः (606)

೬೦೬. ಗುಹಜನ್ಮ-ಭೂಃ

           ಗುಹ ಎಂದರೆ ಮರೆಮಾಚು, ಬಚ್ಚಿಡು, ರಹಸ್ಯವಾಗಿರಿಸು ಅಥವಾ ರಹಸ್ಯ. ಜನ್ಮಭೂಃ ಎಂದರೆ ಹುಟ್ಟಿದ ಸ್ಥಳ. ಅವಿದ್ಯಾ ಅಥವಾ ಅಜ್ಞಾನದ ಪೊರೆಯೊಳಗೆ ಹುದುಗಿ ಅಥವಾ ಮರೆಮಾಚಲ್ಪಟ್ಟು, ಜೀವಿಗಳು ಹುಟ್ಟುತ್ತವೆ. ಈ ಜೀವಿಗಳು ಪರಬ್ರಹ್ಮವಾದ ದೇವಿಯಿಂದ ಜನ್ಮತಾಳಿವೆ.

          ಇದನ್ನೇ ಬೃಹದಾರಣ್ಯಕ ಉಪನಿಷತ್ತಿನಲ್ಲಿ (೨.೧.೨೦) ವಿವರಿಸಲಾಗಿದೆ. ಅದು ಹೀಗೆ ಹೇಳುತ್ತದೆ, "ಹೇಗೆ ಬೆಂಕಿಯಿಂದ ಸಣ್ಣ ಕಿಡಿಗಳು ಎಲ್ಲಾ ದಿಕ್ಕನಲ್ಲಿಯೂ ಸಿಡಿಯುತ್ತವೆಯೋ, ಅದರಂತೆ ಆತ್ಮನಿಂದ.......... ಎಲ್ಲಾ ಜೀವಿಗಳು ಹೊರಹೊಮ್ಮುತ್ತವೆ". ಇಲ್ಲಿ ಜೀವಿಗಳು ಬೆಂಕಿಯ ಚಿಕ್ಕ ಕಿಡಿಗಳಾಗಿದ್ದು ಆತ್ಮನು ಪರಬ್ರಹ್ಮ ಅಥವಾ ನಮ್ಮ ಲಲಿತಾಂಬಿಕೆಯಾಗಿದ್ದಾಳೆ. ಬಹುತೇಕ ಎಲ್ಲಾ ಉಪನಿಷತ್ತುಗಳು ಸೃಷ್ಟಿಯನ್ನು ಈ ಕೋನದಿಂದಲೇ ವಿವರಿಸುತ್ತವೆ. ಈ ನಾಮವನ್ನು ಮೊದಲನೇ ನಾಮವಾದ ’ಶ್ರೀ ಮಾತಾ’ ನಾಮದ ದೃಷ್ಟಿಯಿಂದ ವಿಶ್ಲೇಷಿಸಿದಾಗ, ಜಗನ್ಮಾತೆಯಾದ ದೇವಿಯು ಜಗತ್ತಿನ ಎಲ್ಲಾ ಜೀವಿಗಳಿಗೆ ಜನ್ಮವನ್ನು ನೀಡುತ್ತಾಳೆ ಎನ್ನುವ ಉಪನಿಷತ್ತುಗಳ ಭೋದನೆಗೆ ಈ ನಾಮವು ಸೂಕ್ತವಾಗಿ ಹೊಂದುತ್ತದೆ.

         ಗುಹಾ ಎಂದರೆ ಕಾರ್ತಿಕೇಯ (ಸುಬ್ರಹ್ಮಣ್ಯ ಅಥವಾ ಸ್ಕಂದ) ಎನ್ನುವ ಅರ್ಥವೂ ಇದೆ. ಈ ನಾಮವು ದೇವಿಯು ಕಾರ್ತಿಕೇಯನಿಗೆ ಜನ್ಮವನ್ನು ನೀಡಿದವಳು ಎನ್ನುವುದನ್ನು ಸಹ ಸೂಚಿಸಬಹುದು. ಕೃಷ್ಣನು ಭಗವದ್ಗೀತೆಯಲ್ಲಿ (೧೦. ೨೪), "ಸೇನಾನೀಮಹಂ ಸ್ಕಂದಃ", ಅಂದರೆ ನಾನು ಸೇನಾನಿಗಳಲ್ಲಿ ಸ್ಕಂದ ಎಂದು ಹೇಳಿದ್ದಾನೆ.

Deveśī देवेशी (607)

೬೦೭. ದೇವೇಶೀ

           ದೇವಿಯು ದೇವರುಗಳಿಗೆ ಅಧಿನಾಯಕಿಯಾಗಿದ್ದಾಳೆ ಅಂದರೆ ಆಕೆಯು ದೇವಾನು ದೇವತೆಗಳಲ್ಲೆಲ್ಲಾ ಪರಮೋನ್ನತ ಸ್ಥಾನವನ್ನು ಹೊಂದಿದವಳಾಗಿದ್ದಾಳೆ. ದೇವಿಯು ಎಲ್ಲಾ ವಿಧವಾದ ದೈವೀ ಕ್ರಿಯೆಗಳ ಮೂಲವಾಗಿದ್ದಾಳೆ.

Daṇḍa-nītisthā दण्ड-नीतिस्था (608)

೬೦೮. ದಂಡ-ನೀತಿಸ್ಥಾ

          ದಂಡ-ನೀತಿ ಎಂದರೆ ಯಾರು ಕೆಟ್ಟ ಮಾರ್ಗದಲ್ಲಿ ಹೋಗುತ್ತಾರೆಯೋ ಅದಕ್ಕೆ ತಡೆಯನ್ನು ಒಡ್ಡಿ, ಅವರು  ಒಳ್ಳೆಯ ಮಾರ್ಗದಲ್ಲಿ ಹೋಗುವಂತೆ ಮಾಡುವುದಾಗಿದೆ. ದೇವಿಯು ಯಾರು ಸನ್ಮಾರ್ಗದಲ್ಲಿ ಹೋಗಲು ಇಚ್ಛಿಸುವುದಿಲ್ಲವೋ ಅಂತಹ ಅಜ್ಞಾನಿಗಳನ್ನು ಶಿಕ್ಷಿಸುತ್ತಾಳೆ. ಕೃಷ್ಣನು ಭಗವದ್ಗೀತೆಯಲ್ಲಿ (೧೦.೩೮) ಹೇಳುತ್ತಾನೆ, "ನಾನೇ ಶಿಕ್ಷೆಯ ದಂಡ (ಬೆತ್ತ) ವಾಗಿದ್ದೇನೆ". ಬೈಬಲ್ಲಿನ ಪ್ರಕಾರ ಬೆತ್ತ ಎಂದರೆ ಕರ್ಮದ ನಿಯಮ. ಬೈಬಲ್ಲಿನಲ್ಲಿ (ಹಳೇ ಒಡಂಬಡಿಕೆ - ಸಾಲ್ಮ್ಸ್ ೨೩:೪) ಹೀಗೆ ಹೇಳಲಾಗಿದೆ, "ನಾನು ಕೆಟ್ಟದ್ದಕ್ಕೆ ಅಂಜುವುದಿಲ್ಲ; ಯಾವಾಗ ನೀನು ನನ್ನ ಜೊತೆಯಲ್ಲಿರುವೆಯೋ; ನಿನ್ನ ಬೆತ್ತ ಮತ್ತು ಲಾಂಛನಗಳು ನನಗೆ ಸಮಾಧಾನವನ್ನುಂಟು ಮಾಡುತ್ತವೆ". ದೇವರು ಈ ಪ್ರಪಂಚವನ್ನು ಕರ್ಮನಿಯಮಕ್ಕನುಸಾರವಾಗಿ ಪರಿಪಾಲಿಸುತ್ತಾನೆ ಮತ್ತು ಯಾರು ಸನ್ಮಾರ್ಗವನ್ನು ಅನುಸರಿಸುತ್ತಾರೆಯೋ ಅವರು ದೇವ ದಂಡನೆಗೆ ಹೆದರಬೇಕಾಗಿಲ್ಲ. "ಅವರ ಮನೆಗಳು ಭಯದಿಂದ ದೂರವುಳಿಯುತ್ತವೆ, ಮತ್ತು ದೇವರ ದಂಡವೂ ಅವರ ಮೇಲೆ ಇಲ್ಲ" (ಬೈಬಲ್ಲಿನ ಹಳೇ ಒಡಂಬಡಿಕೆ, ಜಾಬ್ ೨೧:೯) ಮತ್ತು "ಎಷ್ಟು ಬಾರಿ ಅವರ ವಿನಾಶವು ಅವರ ಮೇಲೆರುಗತ್ತದೆ! ದೇವರು ಅವರಿಗೆ ದುಃಖವನ್ನು ಹಂಚುತ್ತಾನೆ ಅವನ ಕೋಪದಲ್ಲಿ (ಜಾಬ್ ೨೧: ೨೭).

          ಈ ಕಾರಣಕ್ಕಾಗಿಯೇ ನ್ಯಾಯಾಧೀಶರು ನ್ಯಾಯಾಸ್ಥಾನವನ್ನು ಪ್ರವೇಶಿಸುವಾಗ ಒಂದು ದಂಡವನ್ನು ಕೈಯ್ಯಲ್ಲಿ ಹಿಡಿದಿರುತ್ತಾರೆ. ಹಲವಾರು ದೇಶದ ಸಂಸತ್ತುಗಳಲ್ಲಿ ಅಲ್ಲಿನ ಸ್ಥಳೀಯ ಅಧಿಕಾರಿಗಳು ಸಂಸತ್ತನ್ನು ಒಳಪ್ರವೇಶಿಸುವಾಗ ಈ ಪದ್ಧತಿಯನ್ನು ಅನುಸರಿಸುತ್ತಾರೆ. ಏಕೆಂದರೆ ಇವರೆಲ್ಲಾ ನ್ಯಾಯವನ್ನು ಪರಿಪಾಲಿಸುವವರು ಅಥವಾ ಎತ್ತಿಹಿಡಿಯುವವರು. ಇದೇ ವಿಧವಾಗಿ ದೇವಿಯು ಈ ಸಮಸ್ತ ವಿಶ್ವವನ್ನು ನ್ಯಾಯಯುತವಾಗಿ (ಅಂದರೆ ಕರ್ಮ ನಿಯಮಕ್ಕನುಸಾರವಾಗಿ) ಪರಿಪಾಲಿಸುತ್ತಾಳೆ.

Daharākāśa-rūpiṇī दहराकाश-रूपिणी (609)

೬೦೯. ದಹರಾಕಾಶ-ರೂಪಿಣೀ

          ದೇವಿಯು ಎಲ್ಲಾ ಜೀವಿಗಳ ಹೃದಯದಲ್ಲಿ ಸೂಕ್ಷ್ಮ ರೂಪದಲ್ಲಿ ಇರುತ್ತಾಳೆ. ಇದರ ಕುರಿತಾದ ಉತ್ತಮ ವ್ಯಾಖ್ಯಾನಗಳು ವಿವಧ ಕೃತಿಗಳಲ್ಲಿ ನಮಗೆ ದೊರೆಯುತ್ತವೆ.

          ಕಠೋಪನಿಷತ್ತು (೧.೩.೧) ಈ ಸ್ಥಳವನ್ನು ಉಲ್ಲೇಖಿಸುತ್ತದೆ, "ಈ ಶರೀರಿದಲ್ಲಿ ಪರಮವಾದ ಹೃದಯಾಕಾಶದಲ್ಲಿರುವ, ಬುದ್ಧಿಯಲ್ಲಿ ಸುಕೃತದ ಕರ್ಮಫಲವನ್ನು ಪಾನಮಾಡುತ್ತಿರುವ............." ಅದೇ ಉಪನಿಷತ್ತು ಮುಂದುವರೆಯುತ್ತಾ ಹೀಗೆ ಹೇಳುತ್ತದೆ (೨.೧.೧೨), "ಗಾತ್ರದಲ್ಲಿ ಅಂಗುಷ್ಠ ಮಾತ್ರದಷ್ಟಿರುವ ಪುರುಷನು ಶರೀರ ಮಧ್ಯದಲ್ಲಿ ಇರುತ್ತಾನೆ".

          ಛಾಂದೋಗ್ಯ ಉಪನಿಷತ್ತು, "ಈ ದೇಹವು ಬ್ರಹ್ಮದ ನಗರವಾಗಿದೆ. ಈ ನಗರದೊಳಗೆ ಕಮಲಾಕಾರದ ಒಂದು ಸ್ಥಳವಿದೆ (ಅಂದರೆ ಹೃದಯ) ಮತ್ತು ಅದರೊಳಗೆ ಒಂದು ಸಣ್ಣ ಆಕಾಶವಿದೆ (ಇಲ್ಲಿ ಆಕಾಶ ಎನ್ನುವ ಶಬ್ದದ ಉಪಯೋಗವನ್ನು ಗಮನಿಸಿ; ಏಕೆಂದರೆ ಇಲ್ಲಿ ಸ್ಥಳವೆಂದು ಹೇಳದೇ ಆಕಾಶವೆಂದು ಹೇಳಲಾಗಿದೆ. ಸ್ಥಳವೆಂದರೆ ಪರಿಮಿತವಾದದ್ದು ಮತ್ತು ನಿಖರವಾದದ್ದು ಆದರೆ ಆಕಾಶವೆಂದರೆ ಅನಂತವಾದದ್ದು). ಒಬ್ಬನು ಈ ಸ್ಥಳದಲ್ಲಿ ಏನಿದೆ ಎಂದು ತಿಳಿಯಲು ಪ್ರಾಮಾಣಿಕವಾದ ಬಯಕೆಯನ್ನು ಹೊಂದಿರಬೇಕು (ಆತ್ಮ ಸಾಕ್ಷಾತ್ಕಾರವನ್ನು ಪಡೆಯಲು ಪ್ರಾಮಾಣಿಕವಾದ ಇಚ್ಛೆಯಿರಬೇಕು)" ಎಂದು ಹೇಳುತ್ತದೆ.

         ಬ್ರಹ್ಮ ಸೂತ್ರವು (೧.೩.೧೪) ಹೀಗೆ ಹೇಳುತ್ತದೆ, "ದಹರ ಉತ್ತರೇಭ್ಯಃ दहर उत्तरेभ्यः" ಅದು ಹೃದಯದಲ್ಲಿರುವ ಸಣ್ಣ ಸ್ಥಳದ ಬಗ್ಗೆ ಉಲ್ಲೇಖಿಸುತ್ತದೆ. ಅದು ಮುಂದುವರೆಯುತ್ತಾ ಹೇಳುತ್ತದೆ, "ಯಾವುದು ಒಳಗಿದೆಯೋ, ಯಾವುದು ಅಪೇಕ್ಷಿಸಲ್ಪಡುತ್ತದೆಯೋ, ಅದನ್ನು ನಿಶ್ಚಿತವಾಗಿಯೂ ಅರಸ ಬೇಕು (ಜಿಜ್ಞಾಸೆಗೊಳಪಡಿಸ ಬೇಕು)" ಇದು ಆತ್ಮಸಾಕ್ಷಾತ್ಕಾರದ ಪ್ರಕ್ರಿಯೆಯನ್ನು ಸೂಚಿಸುತ್ತದೆ.

        ಈ ನಾಮವು ದೇವಿಯು ಸಾಕ್ಷಾತ್ಕರಿಸಿಕೊಳ್ಳಬಹುದಾದ ಆ ರೂಪದಲ್ಲಿ (ಪರಬ್ರಹ್ಮದ ರೂಪದಲ್ಲಿ) ಮಾತ್ರವೇ ಇರತ್ತಾಳೆಂದು ಹೇಳುತ್ತದೆ. ಈ ನಾಮವು ದೇವಿಯ ಪರಬ್ರಹ್ಮ ಸ್ವರೂಪವನ್ನು ಮತ್ತೊಮ್ಮೆ ದೃಢಪಡಿಸುತ್ತದೆ.

Pratipan-mukhya-rākānta-tithi-maṇḍala-pūjitā प्रतिपन्-मुख्य-राकान्त-तिथि-मण्डल-पूजिता (610)

೬೧೦. ಪ್ರತಿಪನ್-ಮುಖ್ಯ-ರಾಕಾಂತ-ತಿಥಿ-ಮಂಡಲ-ಪೂಜಿತಾ  

           ಪ್ರತಿಪದ ಎಂದರೆ ಚಾಂದ್ರಮಾನದ ಮೊದಲನೇ ದಿವಸ (ಪಾಡ್ಯ) ಮತ್ತು ರಾಕಾ ಎಂದರೆ ಪೂರ್ಣ ಚಂದ್ರ. ಶ್ರೀ ಚಕ್ರದಲ್ಲಿ ದೇವಿಯು ಹದಿನೈದು ತಿಥಿ ನಿತ್ಯ ದೇವಿಯರಿಂದ ಆವರಿಸಲ್ಪಟ್ಟಿದ್ದಾಳೆ ಮತ್ತು ಈ ತಿಥಿ ನಿತ್ಯ ದೇವಿಯರು, ಅತ್ಯಂತ ಒಳಗಿನ ತ್ರಿಕೋಣದ ಒಂದೊಂದು ಪಾರ್ಶ್ವದಲ್ಲಿ ಐದೈದರಂತೆ ಆಸೀನರಾಗಿರುತ್ತಾರೆ. ಶ್ರೀ ಚಕ್ರದ ಕೇಂದ್ರದಲ್ಲಿರುವ ಚುಕ್ಕೆ ಅಥವಾ ’ಬಿಂದು’ವಿನಲ್ಲಿ ಶಕ್ತಿಯು ಶಿವನ ತೊಡೆಯ ಮೇಲೆ ಆಸೀನಳಾಗಿರುತ್ತಾಳೆ ಮತ್ತು ಆ ಸ್ಥಳವನ್ನು ಅತ್ಯಂತ ಒಳಗಿನ ತ್ರಿಕೋಣವು ಆವರಿಸಿರುತ್ತದೆ. ಪ್ರತಿಯೊಂದು ಚಾಂದ್ರಮಾನದ ದಿನ ಅಥವಾ ತಿಥಿಯು ಒಂದೊಂದು ತಿಥಿ ನಿತ್ಯ ದೇವಿಯರಿಂದ ಪ್ರತಿನಿಧಿಸಲ್ಪಡುತ್ತದೆ. ಶ್ರೀ ವಿದ್ಯಾ ಉಪಾಸನೆಯಲ್ಲಿ ಈ ಎಲ್ಲಾ ದೇವತೆಗಳನ್ನು ಶ್ರೀ ಚಕ್ರದಲ್ಲಿ ಪೂಜಿಸಲಾಗುತ್ತದೆ. ಲಲಿತಾಂಬಿಕೆಯನ್ನೂ ಸಹ ಮಹಾ-ನಿತ್ಯಳೆಂದು ಪೂಜಿಸಲಾಗುತ್ತದೆ. ಈ ವಿಶ್ಲೇಷಣೆಯನ್ನು ತಂತ್ರ ಶಾಸ್ತ್ರದ ಪ್ರಕಾರ ಮಾಡಲಾಗಿದೆ.

          ತಿಥಿ ಮಂಡಲದ ಉಲ್ಲೇಖವು ವೇದಗಳಲ್ಲಿಯೂ ಕಂಡುಬರುತ್ತದೆ, ಅದು ಶುಕ್ಲ ಪಕ್ಷದ ಹದಿನೈದು ತಿಥಿಗಳಿಗೆ ಅನುಕ್ರಮವಾಗಿರುವ ಹದಿನೈದು ದೇವತೆಗಳನ್ನು ಕುರಿತಾಗಿ ಹೇಳುತ್ತದೆ. ಈ ಹದಿನೈದು ದೇವತೆಗಳ ಹೆಸರಿನೊಂದಿಗೆ, ವೇದಗಳು ಸದಾ (ನಿತ್ಯ ನಿರಂತರವಾದ ಎಂಬ ಅರ್ಥವುಳ್ಳದ್ದು) ಎನ್ನುವ ಮತ್ತೊಂದು ದೇವತೆಯ ಹೆಸರನ್ನೂ ಉಲ್ಲೇಖಿಸುತ್ತವೆ ಮತ್ತು ಇದನ್ನು ಚಂದ್ರನ ೧೬ನೇ ಕಲಾ ಎಂದು ಕರೆಯಲಾಗಿದೆ. ಚಂದ್ರನಿಗೆ ಹದಿನಾರು ಕಲಾಗಳಿವೆ. ಪ್ರತಿಯೊಂದು ಕಲಾವನ್ನು ಅಮೃತಾ ಎಂದು ಆರಂಭವಾಗಿ ಪೂರ್ಣಾಮೃತಾ ಎಂದು ಕೊನೆಗೊಳ್ಳುವ ಒಂದೊಂದು ದೇವತೆಯು ಪ್ರತಿನಿಧಿಸುತ್ತದೆ ಮತ್ತು ಪ್ರತಿಯೊಂದು ದೇವತೆಯ ಹೆಸರೂ ಸಹ ಸಂಸ್ಕೃತ ವರ್ಣಮಾಲೆಯ ಒಂದೊಂದು ಸ್ವರ ಅಕ್ಷರದಿಂದ ಆರಂಭವಾಗುತ್ತದೆ (ಸಂಸ್ಕೃತದಲ್ಲಿ ಹದಿನಾರು ಸ್ವರಾಕ್ಷರಗಳಿವೆ).

         ತಿಥಿ ನಿತ್ಯ ದೇವಿಯರ ಕುರಿತಾದ ಹೆಚ್ಚಿನ ವಿವರಗಳಿಗೆ ೩೯೧ನೇ ನಾಮವನ್ನು ನೋಡಿ.

                                                                                                            ******

         ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 606 - 610 http://www.manblunder.com/2010/02/lalitha-sahasranamam-606-611.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Wed, 10/23/2013 - 03:46

ಶ್ರೀಧರರೆ, '೧೪೧. ಶ್ರೀ ಲಲಿತಾ ಸಹಸ್ರನಾಮದ ವಿವರಣೆ'ಯ ಕಾವ್ಯ ಸಾರ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೬೦೬-೬೧೦
_____________________________
.
೬೦೬. ಗುಹಜನ್ಮ-ಭೂಃ 
ಜೀವಿಗೆ ಜನ್ಮ ನೀಡಿ ಲಲಿತಾಬ್ರಹ್ಮ, ಅಜ್ಞಾನದ ಪೊರೆಯಲ್ಹುದುಗಿಸಿ
ಪರಬ್ರಹ್ಮವೆ ಆತ್ಮ, ಹೊಮ್ಮಿದ ಬೆಂಕಿಯ ಕಿಡಿ ಜೀವಗಳಾಗಿ ಪಸರಿಸಿ
ಸೇನಾನಿ ಸ್ಕಂದನಿಗೆ ಜನುಮ ನೀಡಿದ ಮಾತೆ, ತೇಜದ ಕಂದ ಸ್ವತಃ
ಗುಟ್ಟಿಟ್ಟೆ ಹುಟ್ಟ ರಹಸ್ಯ, ಮೂಲ ಹುಡುಕಿಸೆ ಭಾಷ್ಯ ಗುಹಜನ್ಮ-ಭೂಃ ||
.
೬೦೭. ದೇವೇಶೀ
ದೇವರುಗಳಿಗೆ ಅಧಿನಾಯಕಿಯಾಗಿಹಳು ಲಲಿತ
ಹೊಂದಿರುವ ಸ್ಥಾನ ದೇವತೆಗಳಲೆ ಪರಮೋನ್ನತ
ದೈವೀ ಕ್ರಿಯೆಗಳೆಲ್ಲಕು ಮೂಲವಾಗಿಹ ನೀಳಕೇಶಿ
ದೇವಾದಿದೇವತೆಗಳೆ ಪೂಜಿಸೋ ಲಲಿತೆ ದೇವೇಶೀ ||
.
೬೦೮. ದಂಡ-ನೀತಿಸ್ಥಾ
ಮಾತಿಗೆ ಬಗ್ಗದಾ ರೀತಿ, ದಂಡಕೆ ಬಗ್ಗುವಾ ಪ್ರತೀತಿ
ದುಷ್ಟಮಾರ್ಗರ ದಂಡಿಸಿ,ಸರಿದಾರಿಗೆಳೆಸೊ ಸನ್ಮತಿ
ಸನ್ಮಾರ್ಗದಲಿರಲೆ ವ್ಯಕ್ತಿ, ಭೀತಿಯಿಲ್ಲದ ಧೈರ್ಯಸ್ಥ
ಧರ್ಮಕರ್ಮ ನ್ಯಾಯಪಾಲಕಿ, ದೇವಿ ದಂಡನೀತಿಸ್ಥಾ ||
.
೬೦೯. ದಹರಾಕಾಶ-ರೂಪಿಣೀ
ಬ್ರಹ್ಮದ ನಗರವೀ ದೇಹ, ಒಳಗಿಹ ಕಮಲಾಕಾರ ಹೃದಯಾಕಾಶ
ಈ ಅನಂತವನರಿಯ ಬಯಸೆ, ಆತ್ಮ ಸಾಕ್ಷಾತ್ಕಾರದಿಚ್ಛಾ ಅಂಕುಶ
ಅಂಗುಷ್ಟ ಗಾತ್ರದ ಪುರುಷ, ಶರೀರ ಮಧ್ಯದೆ ನೆಲೆಸಿ ಜ್ಞಾನದ ಗಣಿ
ಎಲ್ಲ ಜೀವಿ ಹೃದಯದೆ ಸೂಕ್ಷ್ಮರೂಪದಲಿಹ ದಹರಾಕಾಶ-ರೂಪಿಣೀ ||
.
೬೧೦. ಪ್ರತಿಪನ್-ಮುಖ್ಯ-ರಾಕಾಂತ-ತಿಥಿ-ಮಂಡಲ-ಪೂಜಿತಾ 
ಚಾಂದ್ರಮಾನ ಮೊದಲದಿನವೆ ಪ್ರತಿಪದ, ಪಾಡ್ಯದ ಪೂರ್ಣಚಂದ್ರನೆ ರಾಕಾ
ಅತಿಯೊಳಗಿನ ಶ್ರೀ ಚಕ್ರ ತ್ರಿಕೋನ ಪಾರ್ಶ್ವದೆ, ತಿಥಿ ನಿತ್ಯ ದೇವಿಯರ ಜಾಗ
ಶಿವನ ತೊಡೆಯೇರಿ ಶಕ್ತಿ, ಆಸೀನೆ ಒಳ ತ್ರಿಕೋನದೆ ಬಿಂದು-ದಿನವು ಅರ್ಚಿತ
ಮಹಾನಿತ್ಯಳೆ ದೇವಿ, ಪ್ರತಿಪನ್-ಮುಖ್ಯ-ರಾಕಾಂತ-ತಿಥಿ-ಮಂಡಲ-ಪೂಜಿತಾ ||
.
ತಿಥಿ ಮಂಡಲದ ಲೆಕ್ಕ, ಶುಕ್ಲಪಕ್ಷದಲಿ ಹದಿನೈದು ತಿಥಿಗಳು
ಪ್ರತಿ ತಿಥಿಗನುಕ್ರಮವಾಗಿರುವರು, ಹದಿನೈದು ದೇವತೆಗಳು
ಚಂದ್ರನ ಷೋಡಶಕಲೆ 'ಸದಾ' ಷೋಡಶದೇವತೆ ಸಂಕೇತಿಸಲ
ಅಮೃತ-ಪೂರ್ಣಾಮೃತಾ ಆದಿ-ಅಂತ್ಯ, ಸ್ವರಾಕ್ಷರ ನಾಮಬಲ ||
.
.
-ಧನ್ಯವಾದಗಳೊಂದಿಗೆ
 ನಾಗೇಶ ಮೈಸೂರು
 

ನಾಗೇಶರೆ,
ಕವನಗಳು ಚೆನ್ನಾಗಿ ಮೂಡಿ ಬಂದಿವೆ. ಒಂದೆರಡು ಕಡೆ ನೀವು ವಿವರಣೆಯನ್ನು ಸ್ವಲ್ಪ ವಿಭಿನ್ನವಾಗಿ ಅರ್ಥೈಸಿಕೊಂಡಂತಿದೆ. ಅದನ್ನು ಆಮೇಲೆ ಸರಿಪಡಿಸುತ್ತೇನೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by ananthesha nempu Wed, 10/23/2013 - 11:01

ಇದನ್ನೇ ಬೃಹದಾರಣ್ಯಕ ಉಪನಿಷತ್ತಿನಲ್ಲಿ (೨.೧.೨೦) ವಿವರಿಸಲಾಗಿದೆ. ಅದು ಹೀಗೆ ಹೇಳುತ್ತದೆ, "ಹೇಗೆ ಬೆಂಕಿಯಿಂದ ಸಣ್ಣ ಕಿಡಿಗಳು ಎಲ್ಲಾ ದಿಕ್ಕನಲ್ಲಿಯೂ ಸಿಡಿಯುತ್ತವೆಯೋ, ಅದರಂತೆ ಆತ್ಮನಿಂದ.......... ಎಲ್ಲಾ ಜೀವಿಗಳು ಹೊರಹೊಮ್ಮುತ್ತವೆ".>>
ಅಗ್ನಿಕಾಂಡ‌ ಸ್ಫುಲಿಂಗವತ್...
ಉಪನಿಷತ್ತುಗಳ‌ ತುಲನೆಯೊಂದಿಗೆ ನಿಮ್ಮ‌ ಸರಣಿ ಬಹಳ‌ ಚೆನ್ನಾಗಿ ಮೂಡಿ ಬರುತ್ತಿದೆ. ವೇದ‍ ವೇದಾಂತಗಳೂ ಶೈವ‌ ಶಾಕ್ತ‌ ವೈಷ್ಣವ‌ ಮುಂತಾದ‌ ಮತಧರ್ಮಗಳ‌ ಗಹನ‌ ತತ್ತ್ವಗಳೂ ಲಲಿತಾಸಹಸ್ರನಾಮದೊಂದಿಗೆ ಸಮೀಕರಣಗೊಂಡು ವೈವಿಧ್ಯಮಯ‌ ದರ್ಶನಗಳ‌ ಸಮಗ್ರತೆಯನ್ನೂ ಏಕತೆಯನ್ನೂ ತೋರಿಸುತ್ತಿವೆ. ಧನ್ಯವಾದಗಳು.

ನಿಮ್ಮ ಮಾತುಗಳು ನಿಜ ಅನಂತೇಶರೆ. ಲಲಿತಾ ಸಹಸ್ರನಾಮವನ್ನು ಸರ್ವಮತಗಳ ಸಾರವೆನ್ನುವಂತೆ ಬಹಳ ಅದ್ಭುತವಾಗಿ ಶ್ರೀಯುತ ರವಿಯವರು ಚಿತ್ರಿಸಿದ್ದಾರೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ