೧೪೫. ಲಲಿತಾ ಸಹಸ್ರನಾಮ ೬೨೩ರಿಂದ ೬೨೫ನೇ ನಾಮಗಳ ವಿವರಣೆ

೧೪೫. ಲಲಿತಾ ಸಹಸ್ರನಾಮ ೬೨೩ರಿಂದ ೬೨೫ನೇ ನಾಮಗಳ ವಿವರಣೆ

                                                                                                            ಲಲಿತಾ ಸಹಸ್ರನಾಮ ೬೨೩ - ೬೨೫

Kevalā केवला (623)

೬೨೩. ಕೇವಲಾ

          ದೇವಿಯು ಪರಿಪೂರ್ಣಳು, ಏಕೆಂದರೆ ಅವಳು ನಾಮ ರೂಪ ಮತ್ತು ಮಾರ್ಪಾಟುಗಳಿಗೆ ಅತೀತಳಾಗಿದ್ದಾಳೆ. ಇದು ನಿರ್ಗುಣ ಬ್ರಹ್ಮದ ಅದ್ವಿತೀಯ ಗುಣವಾಗಿದೆ. ಶಿವ ಸೂತ್ರವು (೩.೩೪) ಹೀಗೆ ವಿವರಿಸುತ್ತದೆ, "ಸಂಪೂರ್ಣವಾಗಿ ಸುಖದುಃಖಗಳ ಪ್ರಭಾವಕ್ಕೆ ಹೊರತಾಗಿದ್ದಾನೆ, ಅಥವಾ ಅವನು ಒಬ್ಬಂಟಿಯಾಗಿದ್ದಾನೆ - ಸಂಪೂರ್ಣವಾಗಿ ಅಪ್ಪಟವಾದ ಪ್ರಜ್ಞೆಯಿಂದ ಕೂಡಿದ ನಿಜವಾದ ಆತ್ಮದಲ್ಲಿಯೇ ಲೀನವಾಗಿದ್ದಾನೆ". ಈ ಸೂತ್ರವು ಕೇವಲಿ ಎನ್ನುವ ಒಂದು ಶಬ್ದವನ್ನು ಬಳಸುತ್ತದೆ, ಅದರರ್ಥ ’ಯಾರ ಬಗೆಗಿನ ತಿಳುವಳಿಕೆಯು ಕೇವಲ ಪ್ರಜ್ಞೆಯೊಳಗಿರುತ್ತದೆ’.

           ಹಿಂದಿನ ನಾಮದಲ್ಲಿ ಚರ್ಚಿಸಲಾದ ಕ್ಲೀಂ (क्लीं) ಬೀಜವು, ಕ+ಲ+ಈಂ (क+ल+ईं) ಇವುಗಳಿಂದ ಉಂಟಾಗಿದೆ. ಕೇವಲ ಎನ್ನುವುದು ಈ ನಾಮದಲ್ಲಿ ಕಾಮಕಲಾ ಬೀಜವಾದ ಈಂ (ईं) ಆಗಿದೆ. ಕ್ಲೀಂ(क्लीं)ನಿಂದ ಉಳಿದೆರಡು ಬೀಜಗಳನ್ನು ತೆಗೆದರೆ ಏನು ಉಳಿಯುತ್ತದೆಯೋ ಅದೇ ಕಾಮಕಲಾ ಬೀಜವಾಗಿದ್ದು ಅದು ಮುಕ್ತಿಯನ್ನು ಕೊಡಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಪುರುಷಾರ್ಥ ಎಂದರೆ ಮಾನವ ಜೀವನದ ಅಂತಿಮ ಲಕ್ಷ್ಯ ಅಥವಾ ಗುರಿ. ಪುರುಷಾರ್ಥವು, ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳನ್ನು ಒಳಗೊಂಡಿದೆ. ಕ್ಲೀಂ(क्लीं)ನ ಭಾಗವಾಗಿರುವ ಕಾಮಕಲಾವು ಜೀವಿಗೆ ಮುಕ್ತಿಯನ್ನು ಕೊಡುವ ಸಾಮರ್ಥ್ಯವನ್ನು ಹೊಂದಿದೆ.

           ಕಾಮ ಬೀಜವು ಕ್ಲೀಂ(क्लीं) ಆದರೆ ಕಾಮಕಲಾ ಬೀಜವು ಈಂ(ईं) ಆಗಿದೆ. ಕಾಮಕಲಾವು ಕಾಮ ಬೀಜದ ಭಾಗವಾಗಿದ್ದು, ಇವರೆಡೂ ಅತ್ಯಂತ ಮಂಗಳಕರವಾದ ಮತ್ತು ಶಕ್ತಿಯುತವಾದ ಬೀಜಗಳಾಗಿವೆ.

Guhyā गुह्या (624)

೬೨೪. ಗುಹ್ಯಾ

           ದೇವಿಯು ಸ್ವರೂಪ ಹಾಗೂ ಸ್ವಭಾವಗಳೆರಡರಲ್ಲೂ ರಹಸ್ಯಾತ್ಮಕಳಾಗಿದ್ದಾಳೆ. ಪದೇ ಪದೇ ದೇವಿಯ ಆರಾಧನೆಯು ರಹಸ್ಯವಾಗಿರಬೇಕೆಂದು ಹೇಳಲಾಗಿದೆ. ಯಾರಿಗೆ ದೇವಿಯ ಬಗೆಗಿನ ಪ್ರಾಥಮಿಕ ತಿಳುವಳಿಕೆ ಕೂಡಾ ಇಲ್ಲವೊ ಅಂತಹವರ ಉಪಸ್ಥಿತಿಯಲ್ಲಿ ದೇವಿಯ ಪೂಜೆಯನ್ನು ಮಾಡಬಾರದು. ಯಾರಿಗೆ ದೇವಿಯ ಮಂತ್ರದ ಉಪದೇಶವಾಗಿಲ್ಲವೋ ಅಂತಹವರ ಉಪಸ್ಥಿತಿಯಲ್ಲಿ ’ನವಾವರಣ ಪೂಜೆ’ಯನ್ನೂ ಸಹ ಮಾಡಬಾರದು. ದೇವಿಯ ಪೂಜೆಯನ್ನು ರಹಸ್ಯವಾಗಿ ಏಕೆ ಮಾಡಬೇಕೆಂದು ನಿರ್ದೇಶಿಸಲಾಗಿದೆ ಎಂದರೆ ದೇವಿಯು ಕೆಲವು ಅತೀಂದ್ರಿಯ ಶಕ್ತಿಗಳನ್ನು ಆಕೆಯ ಆರಾಧಕರಿಗೆ ಕರುಣಿಸುತ್ತಾಳೆ: ಆದರೆ ಆ ಪೂಜೆಯನ್ನು ಯಾವುದೇ ವಿಧವಾದ ದೋಷಗಳಿಲ್ಲದೇ ವಿಧಿಬದ್ಧವಾಗಿ ಕೈಗೊಳ್ಳಬೇಕು. ಆದರೆ ಆತ್ಮ-ಸಾಕ್ಷಾತ್ಕಾರವು ಶಾಸ್ತ್ರವಿಧಿತ ಆಚರಣೆ ಮತ್ತು ಸಂಪ್ರದಾಯಗಳಿಗೆ ಅತೀತವಾಗಿ ಉಂಟಾಗುತ್ತದೆ (ಕಠೋಪನಿಷತ್ತು ೧.೨.೧೪)

            ಈ ನಾಮವು ದೇವಿಯ ಪರಮೋನ್ನತ ಸ್ವರೂಪವನ್ನು ದೃಢ ಪಡಿಸುತ್ತದೆ ಮತ್ತು ಆ ಪರಮೋನ್ನತ ರೂಪವು ಹೃದಯದಲ್ಲಿರುವ ರಹಸ್ಯವಾದ ಗುಹೆಯೊಳಗೆ ನಿವಸಿಸುತ್ತದೆ ಎಂದು ಹೇಳುತ್ತದೆ. ಕಠೋಪನಿಷತ್ತು (೨.೧.೧೨ ಮತ್ತು ೧೩), "ಅಂಗುಷ್ಠ ಮಾತ್ರವಿರುವ ಪುರುಷನು (ಬ್ರಹ್ಮವು) ಶರೀರ ಮಧ್ಯದಲ್ಲಿ ಇರುತ್ತಾನೆ, ಮತ್ತು ಅಂಗುಷ್ಠ ಪರಮಾಣವುಳ್ಳ ಈ ಪುರುಷನು ಹೊಗೆರಹಿತ ಜ್ಯೋತಿಯಂತೆ ಇರುತ್ತಾನೆ" ಎಂದು ಹೇಳುತ್ತದೆ. ಅದೇ ಉಪನಿಷತ್ತು (೨.೧.೭) ಹೀಗೂ ಹೇಳುತ್ತದೆ, "ಯಾರು ಪ್ರಾಣ ಶಕ್ತಿಯಾಗಿ (ಹಿರಣ್ಯ ಗರ್ಭನಾಗಿ) ಪರಬ್ರಹ್ಮದಿಂದ ಅಭಿವ್ಯಕ್ತವಾಗಿರುವಳೊ, ಭೂತಗಳೊಂದಿಗೆ ಉತ್ಪನ್ನವಾಗಿರುವಳೊ ಮತ್ತು ಹೃದಯವನ್ನು ಪ್ರವೇಶಿಸಿ ಇರುವಳೊ ಅವಳನ್ನು (ಯಾವನು ನೋಡುತ್ತಾನೆಯೋ ಅವನು) ಹಿಂದೆ ಹೇಳಲ್ಪಟ್ಟಿರುವ ಬ್ರಹ್ಮವನ್ನೇ (ಅರಿಯುತ್ತಾನೆ).

             ತೈತ್ತರೀಯ ಉಪನಿಷತ್ತು (೨.೧) ಸಹ ಹೀಗೆ ಹೇಳುತ್ತದೆ, "ಬ್ರಹ್ಮವು ಸತ್ಯ, ಜ್ಞಾನ ಮತ್ತು ಅನಂತವಾಗಿದೆ. ಯಾವನು ಪರಮವ್ಯೋಮದಲ್ಲಿರುವ (ಹೃದಯಾಕಾಶದಲ್ಲಿರುವ) ಗುಹೆಯಲ್ಲಿ (ಬುದ್ಧಿಯಲ್ಲಿ) ಬ್ರಹ್ಮವನ್ನು ಅರಿತುಕೊಳ್ಳುವನೋ ಅವನು ಸರ್ವಜ್ಞ ಸ್ವರೂಪವಾದ ಬ್ರಹ್ಮವಾಗಿ ಎಲ್ಲ ಬಯಕೆಗಳನ್ನು ಒಟ್ಟಿಗೆ ಹೊಂದುತ್ತಾನೆ". ಪರಬ್ರಹ್ಮದಿಂದ ಪರಮವ್ಯೋಮಾನ್ ಎನ್ನುವ ಆ ಸ್ಥಳವು ಹೊರಹೊಮ್ಮಿ ಅದರಿಂದ ಪಂಚ ಮಹಾಭೂತಗಳು ಉತ್ಪನ್ನವಾಗುತ್ತವೆ ಎಂದು ಅದರ ಮುಂದಿನ ಶ್ಲೋಕವು ಹೇಳುತ್ತದೆ.

Kaivalyapada-dāyinī कैवल्यपद-दायिनी (625)

೬೨೫. ಕೈವಲ್ಯಪದ-ದಾಯಿನೀ

           ಕೈವಲ್ಯ ಎನ್ನುವುದು ಜೀವಿಯ ಅಂತಿಮ ಹಂತವಾಗಿದೆ. ಆ ಸಮಯದಲ್ಲಿ ಆ ಜೀವಿಯೊಂದಿಗೆ ಯಾರೂ ಇರುವುದಿಲ್ಲ. ಅವನು ಸುತ್ತಲೂ ಯಾವುದೇ ಸಹಾಯವಿಲ್ಲದ ಒಬ್ಬಂಟಿಯಾಗಿದ್ದು ಅವನು ಈ ಕೈವಲ್ಯ ಸ್ಥಿತಿಯನ್ನು ಸ್ವಂತವಾಗಿ ಸಾಧಿಸಬೇಕು. ಈ ಸ್ಥಿತಿಯು ಜೀವಿಯ ವಿಕಾಸದ ಅಂತಿಮ ಹಂತಿಮವಾಗಿದೆ. ಈ ಹಂತದಲ್ಲಿ ಆತ್ಮವು ತನಗಿರುವ ಶರೀರವನ್ನು ಬಿಟ್ಟು ಬ್ರಹ್ಮದೊಂದಿಗೆ ಲೀನವಾಗುವುದಕ್ಕೆ ಸಿದ್ಧವಾಗುತ್ತಿರುತ್ತದೆ. ಕೈವಲ್ಯವು ಮುಕ್ತಿ ಅಥವಾ ಬಿಡುಗಡೆಯಾಗಿರುವುದರಿಂದ ಅದನ್ನು ಅಂತಿಮ ಹಂತವೆನ್ನಲಾಗಿದೆ. ಅಂತಿಮ ಹಂತವನ್ನು ಎರಡು ವಿಧವಾಗಿ ಹೊಂದಬಹುದು. ಮೊದಲನೆಯದು ಸಾಮಾನ್ಯವಾದ ಹಂತವಾಗಿದ್ದು ಇದರಲ್ಲಿ ಆಶೆ ಮತ್ತು ಮೋಹಗಳಿಂದ ಕೂಡಿದ ಆತ್ಮವು ಪುನರ್ಜನ್ಮಕ್ಕೆ ಸಿದ್ಧವಾಗುತ್ತದೆ. ಇನ್ನೊಂದು ಹಂತವು ಸಮಾಧಿಯ ಹಂತವಾಗಿದ್ದು, ಇಲ್ಲಿ ಆತ್ಮವು ಪುನರ್ಜನ್ಮವನ್ನು ಹೊಂದಲಿಚ್ಛಿಸದೆ ಬ್ರಹ್ಮದೊಂದಿಗೆ ಐಕ್ಯವಾಗಲು ಸಿದ್ಧವಾಗಿರುತ್ತದೆ. ಈ ಹಂತವೇ ಕೈವಲ್ಯವಾಗಿದೆ. ಲಲಿತಾಂಬಿಕೆಯು ಈ ಹಂತವನ್ನು ಕರುಣಿಸುವವಳಾಗಿದ್ದಾಳೆ. 

            ಪದ ಎನ್ನುವುದು ನಾಲ್ಕು ವಿಧವಾದ ಪ್ರಜ್ಞೆಯನ್ನು ಒಳಗೊಂಡಿದೆ. ಅವೆಂದರೆ ಸಾಲೋಕ್ಯ, ಸಾರೂಪ್ಯ, ಸಾಮೀಪ್ಯ ಮತ್ತು ಸಾಯುಜ್ಯ. ಇವೆಲ್ಲವನ್ನೂ ಮೀರಿದ್ದು ಕೈವಲ್ಯ. ಸಾಲೋಕ್ಯ ಹಂತದಲ್ಲಿ ಒಬ್ಬನು ಶಾಸ್ತ್ರವಿಧಿತ ಕರ್ಮಗಳನ್ನಾಚರಿಸುತ್ತಾ ವಿಗ್ರಹಗಳನ್ನು ಮತ್ತು ದೇವರ ಪಟಗಳನ್ನು ಪೂಜಿಸುತ್ತಾನೆ. ಸಾರೂಪ್ಯ ಹಂತದಲ್ಲಿ ಒಬ್ಬನು ವಿಗ್ರಹಾರಾಧನೆಯನ್ನು ಕೈಬಿಟ್ಟು ತನಗೂ, ದೇವರಿಗೂ ಭೇದವನ್ನೆಣಿಸುವುದಿಲ್ಲ (ತಾನು ಮತ್ತು ದೇವರು ಬೇರೆ ಬೇರೆ ಎಂದು ಭಾವಿಸುವುದಿಲ್ಲ). ಸಾಮೀಪ್ಯ ಸ್ಥಿತಿಯಲ್ಲಿ ಒಬ್ಬನು ದೇವರ ಹತ್ತಿರಕ್ಕೆ ಅಂದರೆ ಸಮೀಪಕ್ಕೆ ಹೋಗುತ್ತಾನೆ ಮತ್ತು ಸಾಯುಜ್ಯ ಸ್ಥಿತಿಯಲ್ಲಿ ಅವನು ಭಗವಂತನೊಂದಿಗೆ ಲೀನವಾಗುತ್ತಾನೆ. ಇವು ಒಬ್ಬನ ಪ್ರಜ್ಞೆಯ ಹಂತಗಳಾಗಿದ್ದು ಅವು ಅಂತಿಮವಾಗಿ ಕೈವಲ್ಯದೆಡೆಗೆ ಕೊಂಡೊಯ್ಯುತ್ತವೆ. ಒಬ್ಬನು ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಪ್ರಗತಿಯನ್ನು ಸಾಧಿಸಬೇಕು ಮತ್ತು ಈ ಪ್ರಗತಿಯು ಒಬ್ಬನ ಆಧ್ಯಾತ್ಮಿಕತೆಯ ಪ್ರಮಾಣವನ್ನು ಅವಲಂಬಿಸಿದೆ. ಒಬ್ಬನು ಆಧ್ಯಾತ್ಮಿಕನಾಗಿದ್ದಾನೆಂದರೆ ಅವನು ಶಾಸ್ತ್ರವಿಧಿತ ಎಲ್ಲಾ ಕರ್ಮಗಳನ್ನು ಆಚರಿಸುವ ಧಾರ್ಮಿಕನಾಗಿದ್ದಾನೆಂದಲ್ಲ. ಧಾರ್ಮಿಕತೆಯು ಆಧ್ಯಾತ್ಮಿಕತೆಯ ತಳಹದಿಯಾಗಿದ್ದರೂ ಸಹ ಆಧ್ಯಾತ್ಮಿಕತೆಯು ಧಾರ್ಮಿಕ ಸೆಳೆತಗಳನ್ನು ಅಧಿಗಮಿಸುತ್ತದೆ.

            ಕೈವಲ್ಯ ಹಂತವನ್ನು ಹೊಂದಲು ಒಬ್ಬನು ಬಾಹ್ಯ ಪೂಜೆಯ ಹಂತದಿಂದ ಆಂತರಿಕ ಪೂಜೆ (ಧ್ಯಾನದ) ಹಂತಕ್ಕೆ ಪ್ರಗತಿಯನ್ನು ಸಾಧಿಸಬೇಕು. ಧ್ಯಾನದಲ್ಲಿ ಸಾಕಷ್ಟು ಪ್ರಗತಿಯನ್ನು ಹೊಂದಿದೆ ಮೇಲೆ ಸಾಧಕನು ಅಂತರಂಗದಲ್ಲಿ ಬ್ರಹ್ಮದ ಅನ್ವೇಷಣೆಗೆ ತೊಡಗಬೇಕು. ಒಮ್ಮೆ ಈ ಬ್ರಹ್ಮವು ಹುಡುಕಲ್ಪಟ್ಟು ಅದನ್ನು ಸಾಧಕನು ಅರಿತುಕೊಂಡರೆ ಅವನು ಮುಂದಿನ ಹಂತವಾದ ಕೈವಲ್ಯಕ್ಕೆ ಹೋಗುತ್ತಾನೆ; ಪ್ರಾಪಂಚಿಕ ಬಂಧನಗಳಿಂದ ತನ್ನನ್ನು ತಾನು ಬಿಡುಗಡೆಗೊಳಿಸಿಕೊಂಡು ಅವನು ಸೃಷ್ಟಿಕರ್ತನೊಂದಿಗೆ ಸಂವಹನವನ್ನು ಏರ್ಪಡಿಸಿಕೊಳ್ಳುತ್ತಾನೆ. ಈ ಹಂತದಲ್ಲಿ ಅವನ ಆತ್ಮವು ಅಂತಿಮ ಮುಕ್ತಿಗಾಗಿ ಸೃಷ್ಟಿಕರ್ತನೊಂದಿಗೆ ಲೀನವಾಗಲು ಅಣಿಯಾಗುತ್ತಿರುತ್ತದೆ. ಅಂತಿಮವಾಗಿ ಸಾಧಕನು ಮುಕ್ತಿಯನ್ನು ಹೊಂದಿ ಅವನ ಆತ್ಮವು ಜನನ-ಮರಣಗಳ ಚಕ್ರದಿಂದ ಬಿಡುಗಡೆಯನ್ನು ಪಡೆಯುತ್ತದೆ.

                                                                                                                                     ******

       ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 623 - 625 http://www.manblunder.com/2010/02/lalitha-sahasranamam-623-625.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Mon, 10/28/2013 - 02:39

ಶ್ರೀಧರರೆ, '೧೪೫. ಶ್ರೀ ಲಲಿತಾ ಸಹಸ್ರನಾಮದ ವಿವರಣೆ' ಯ ಕಾವ್ಯಸಾರ ಪರಿಷ್ಕರಣೆಗೆ :-)
.
ಲಲಿತಾ ಸಹಸ್ರನಾಮ ೬೨೩ - ೬೨೫
_________________________________________
.
೬೨೩. ಕೇವಲಾ
ನಾಮರೂಪ ಮಾರ್ಪಾಟಿಗತೀತ ಪರಿಪೂರ್ಣ ನಿರ್ಗುಣಬ್ರಹ್ಮ ಕೇವಲಾ
ಸುಖದುಃಖ ಪ್ರಭಾವಾತೀತೇಕೈಕ, ಅಪ್ಪಟ ಪ್ರಜ್ಞೆಯಾತ್ಮಲೀನ ಸಕಲ
'ಕ್ಲೀಂ' ಕಾಮಬೀಜದಲಿ 'ಈಂ' ಕಾಮಕಲಾ ಬೀಜದಿಂದ ಕೇವಲ ಮುಕ್ತಿ
ಧರ್ಮ-ಅರ್ಥ-ಕಾಮ-ಮೋಕ್ಷ ಪುರುಷಾರ್ಥ, ಲಲಿತೆ ಪ್ರಜ್ಞೆಯೊಳ ಶಕ್ತಿ ||
.
೬೨೪. ಗುಹ್ಯಾ
ದೇವಿ ಪರಮೋನ್ನತ ಸ್ವರೂಪ, ಹೃದಯದ ರಹಸ್ಯ ಗುಹೆಯೇ ನಿವಾಸ
ಧೂಮರಹಿತ ಜೋತಿಯಂಗುಷ್ಠ ಪ್ರಮಾಣದೆ, ಶರೀರ ಮಧ್ಯದಲಿ ವಾಸ
ರಹಸ್ಯಾತ್ಮಕ ಸ್ವರೂಪ, ಸ್ವಭಾವ ದೇವಿ ಗುಹ್ಯಾ, ಅನರ್ಹರುಪಸ್ಥಿತಿ ವಿಘ್ನ
ಸತ್ಯ-ಜ್ಞಾನ-ಅನಂತ ಬ್ರಹ್ಮ, ಹೃದಯಾಕಾಶ ಗುಹೆಯನರಿತವ ಸರ್ವಜ್ಞ ||
.
ಪ್ರಾಣಶಕ್ತಿ-ಹಿರಣ್ಯಗರ್ಭವಾಗಿ ಲಲಿತಾ ಪರಬ್ರಹ್ಮದ ಅಭಿವ್ಯಕ್ತಿ
ಭೂತಗಳೊಂದಿಗುತ್ಪನ್ನವಾಗಿ ಹೃದಯ ಪ್ರವೇಶಿಸಿ ಅಲ್ಲೆ ವಸತಿ
ಪರಮವ್ಯೋಮ ಗುಹೆಯಲಿಹ ಬ್ರಹ್ಮವನರಿತವನೆಲ್ಲಾ ಬಯಕೆ
ಅನಂತ ಸತ್ಯವನರಿಯುತೆ ಹೊಂದೆ, ಬಯಸಿದೆಲ್ಲ ಮನದೆಣಿಕೆ ||
.
೬೨೫. ಕೈವಲ್ಯಪದ-ದಾಯಿನೀ
ಜೀವಾತ್ಮ ವಿಕಸನದ ಅಂತಿಮ ಹಂತ, ಏಕಾಕಿ ಸಾಧಕನಸ್ಥಿತಿ ಕೈವಲ್ಯ
ತ್ಯಜಿಸುತ ಶರೀರವನಾತ್ಮ, ಬ್ರಹ್ಮದೆ ಲೀನವಾಗುವ ಮುಕ್ತಿಯ ಸಾಫಲ್ಯ
ಆಶೆ ಮೋಹದೊಡಗೂಡಿದ ಆತ್ಮ ಪುನರ್ಜನ್ಮವನರಸಿ ಭುವಿಯ ಹಾದಿ
ಕೈವಲ್ಯಪದದಾಯಿನೀ ಲಲಿತಾ ಕರುಣೆ, ಮುಕ್ತಿ ಬಯಸೊ ಆತ್ಮ ಐಕ್ಯದಿ ||
.
ಪದ ಪ್ರಜ್ಞೆ ನಾಲ್ಕು, ಸಾಲೋಕ್ಯ-ಸಾರೂಪ್ಯ-ಸಾಮೀಪ್ಯ-ಸಾಯುಜ್ಯ
ಶಾಸ್ತ್ರಕರ್ಮ ವಿಗ್ರಹ ಪಟ ಪೂಜೆ ಸಾಲೋಕ್ಯ, ನಿರ್ಭೇದ ಸಾರೂಪ್ಯ
ಸಾಮೀಪ್ಯ ದೈವದ ಹತ್ತಿರಕೆ, ಭಗವಂತನಲೀ ಲೀನತೆ ಸಾಯುಜ್ಯ
ಪ್ರಜ್ಞೆಯೆಲ್ಲ ಹಂತ ದಾಟಿ ನಡೆದರೆ, ಸಿಗಲಂತಿಮ ಹಂತಾ ಕೈವಲ್ಯ ||
.
ಹಂತಹಂತಕೆ ದಾಟಿ ಸಾಧಿಸಬೇಕು ಪ್ರಗತಿ, ಆಧ್ಯಾತ್ಮಿಕತೆ ಬಳಸಿ
ಧಾರ್ಮಿಕತೆ ತಳಹದಿಯನಧಿಗಮಿಸುವ ಆಧ್ಯಾತ್ಮಿಕತೆ ಸಂಸ್ಕರಿಸಿ
ಬಾಹ್ಯಪೂಜೆಯ ಕ್ರಮಿಸಿ ಆಂತರಿಕ ಪೂಜೆ ಧ್ಯಾನ ಬ್ರಹ್ಮಾನ್ವೇಷಣೆ
ಬ್ರಹ್ಮವರಿತು ಸಂವಹನ, ಜನನ ಮರಣ ಚಕ್ರ ಬಿಡುಗಡೆಗೆ ಶರಣೆ ||
 .
.
- ಧನ್ಯವಾದಗಳೊಂದಿಗೆ 
   ನಾಗೇಶ ಮೈಸೂರು