೧೪೬. ಲಲಿತಾ ಸಹಸ್ರನಾಮ ೬೨೬ರಿಂದ ೬೩೦ನೇ ನಾಮಗಳ ವಿವರಣೆ

೧೪೬. ಲಲಿತಾ ಸಹಸ್ರನಾಮ ೬೨೬ರಿಂದ ೬೩೦ನೇ ನಾಮಗಳ ವಿವರಣೆ

                                                                                                                                 ಲಲಿತಾ ಸಹಸ್ರನಾಮ ೬೨೬ - ೬೩೦

Tripurā त्रिपुरा (626)

೬೨೬. ತ್ರಿಪುರಾ

           ತ್ರಿಪುರ ರಹಸ್ಯ ಎನ್ನುವ ಪುರಾತನ ಕೃತಿಯೊಂದಿದ್ದು ಅದು ಭಾರ್ಗವ ಮತ್ತು ದತ್ತಾತ್ರೇಯ ಮಹರ್ಷಿಗಳಿಬ್ಬರ ಸಂವಾದದ ರೂಪದಲ್ಲಿದೆ. ಆ ಮೂಲ ಗ್ರಂಥವು ಮೂರು ಭಾಗಗಳನ್ನು ಒಳಗೊಂಡಿದೆ - ಮೊದಲನೆಯದಾಗಿ ದೇವಿಯ ಮಹಾತ್ಮ್ಯೆ, ಎರಡನೆಯದಾಗಿ ದೇವಿಯ ಪೂಜಾ ವಿಧಾನ ಮತ್ತು ಮೂರನೆಯದಾಗಿ ದೇವಿಯ ಬಗೆಗಿನ ಜ್ಞಾನವನ್ನೊಳಗೊಂಡಿದೆ.  

           ಈ ನಾಮವು ದೇವಿಯು ತ್ರಿಕೂಟ ಅಥವಾ ತ್ರಿಪುಟಿಗಳ ರೂಪದಲ್ಲಿದ್ದಾಳೆಂದು ಸೂಚಿಸಬಹುದು. ಉದಾಹರಣೆಗೆ ಆಕೆಯು ಬ್ರಹ್ಮ, ವಿಷ್ಣು ಮತ್ತು ರುದ್ರ; ಇಚ್ಛಾ, ಜ್ಞಾನ ಮತ್ತು ಕ್ರಿಯಾ ಶಕ್ತಿಗಳ ರೂಪದಲ್ಲಿ, ಪಂಚದಶೀ ಮಂತ್ರದ ಮೂರು ಕೂಟಗಳಾಗಿ, ಸೃಷ್ಟಿ, ಸ್ಥಿತಿ ಮತ್ತು ಲಯಕರ್ತಳಾಗಿ, ಮೂರು ನಾಡಿಗಳಾದ -ಇಡಾ, ಪಿಂಗಳ ಮತ್ತು ಸುಷುಮ್ನಗಳಾಗಿ; ಮೂರು ಲೋಕಗಳಾದ - ಭೂಃ, ಭುವಃ ಮತ್ತು ಸ್ವಃ ಆಗಿ, ಮೂರು ಗುಣಗಳಾದ - ಸತ್ವ, ರಜೋ ಮತ್ತು ತಾಮಸ ಗುಣಗಳಾಗಿ. ದೇವಿಯು ಈ ಎಲ್ಲಾ ವಿಧವಾದ ತ್ರಿಷ್ಟಕಗಳ ಸ್ವರೂಪದಲ್ಲಿರುತ್ತಾಳೆ ಮತ್ತು ಒಮ್ಮೆ ಈ ಎಲ್ಲಾ ತ್ರಿಷ್ಟಕಗಳನ್ನು ಅಧಿಗಮಿಸಿದರೆ ಪರಬ್ರಹ್ಮವು ಹೊಂದಲ್ಪಡುತ್ತದೆ.

          ಪರಬ್ರಹ್ಮವು ಶುದ್ಧ ಚೈತನ್ಯವಾಗಿದ್ದು ಅದನ್ನು ಮೂರು ವಿಧವಾಗಿ ಕಲ್ಪಿಸಿಕೊಳ್ಳಬಹುದು. ಮೊದಲನೆಯದು ಪರಾಮಾತೃ-ಚೈತನ್ಯ (ಬುದ್ಧಿಯಿಂದ ಪರಿಮಿತವಾದ ಪ್ರಜ್ಞೆ), ಎರಡನೆಯದು ಪ್ರಮಾಣ-ಚೈತನ್ಯ (ಜ್ಞಾನದಿಂದ ಪರಿಮಿತವಾದ ಪ್ರಜ್ಞೆ). ಮೂರನೆಯದು ಜೀವ - ಚೈತನ್ಯ (ವ್ಯಕ್ತಿಗತ ಜೀವಿಯಿಂದ ಪರಿಮಿತವಾದ ಪ್ರಜ್ಞೆ). ಈ ಮೂರು ವಿಧವಾದ ಪ್ರಜ್ಞೆಗಳನ್ನೂ ಸಹ ತ್ರಿಷ್ಟಕವೆಂದು ಕರೆಯಲಾಗಿದೆ.

Trijagad vandyā त्रिजगद् वन्द्या (627)

೬೨೭. ತ್ರಿಜಗದ್-ವಂದ್ಯಾ

          ದೇವಿಯು ಭೂಃ, ಭುವಃ ಮತ್ತು ಸ್ವಃ ಎನ್ನುವ ತ್ರಿಲೋಕಗಳಲ್ಲಿಯೂ ಪೂಜಿಸಲ್ಪಡುತ್ತಾಳೆ. ಈ ಮೂರು ಲೋಕಗಳು ಗಾಯತ್ರೀ ಮಂತ್ರದ ಮೂರು ವ್ಯಾಹೃತಿಗಳ ಮೂಲಕ ಪ್ರತಿನಿಧಿಸಲ್ಪಡುತ್ತವೆ. ಈ ಮೂರು ಲೋಕಗಳು ಪ್ರಜ್ಞೆಯ ಮೂರು ಸ್ತರಗಳಲ್ಲದೇ ಬೇರೇನೂ ಅಲ್ಲ. ಪ್ರಜ್ಞೆಯ ಅತ್ಯಂತ ಕೆಳಗಿನ ಹಂತವು ಭೌತಿಕತೆ ಅಥವಾ ಪ್ರಾಪಂಚಿಕತೆಯ ಲಕ್ಷಣಗಳನ್ನು ಹೊಂದಿದ್ದರೆ; ಪ್ರಜ್ಞೆಯ ಅತ್ಯುನ್ನತ ಸ್ತರವು ಪರಿಶುದ್ಧತೆಯ ರೂಪದಲ್ಲಿರುತ್ತದೆ. ಪರಬ್ರಹ್ಮವು ಪ್ರಜ್ಞೆಯ ಪರಿಪೂರ್ಣ ಶುದ್ಧತೆಯ ಸ್ವರೂಪವುಳ್ಳದ್ದಾಗಿದೆ.

Trimurtiḥ त्रिमुर्तिः (628)

೬೨೮. ತ್ರಿಮೂರ್ತಿಃ

           ತ್ರಿಮೂರ್ತಿಗಳೆಂದರೆ ಬ್ರಹ್ಮ, ವಿಷ್ಣು ಮತ್ತು ರುದ್ರರುಗಳಾಗಿದ್ದಾರೆ. ದೇವಿಯು ಈ ಮೂರೂ ದೇವರುಗಳ ಸಂಯುಕ್ತ ರೂಪವಾಗಿದ್ದಾಳೆ.

           ಈ ನಾಮದೊಂದಿಗೆ ಒಂದು ಕಥೆಯು ಅನುಬಂಧ ಹೊಂದಿದೆ. ಒಮ್ಮೆ ಬ್ರಹ್ಮ. ವಿಷ್ಣು ಮತ್ತು ಶಿವ ಇವರುಗಳು ಪರಸ್ಪರರನ್ನು ನೋಡಿಕೊಂಡರು ಮತ್ತು ಈ ಪ್ರಕ್ರಿಯೆಯಲ್ಲಿ ಒಬ್ಬ ಬಾಲಕಿಯು ಅವರ ಮುಂದೆ ಪ್ರತ್ಯಕ್ಷಳಾದಳು. ಇವಳನ್ನು ನೋಡಿದ ಆ ತ್ರಿಮೂರ್ತಿಗಳು ಆಕೆಯನ್ನು ತಾನಾರೆಂದು ಪ್ರಶ್ನಿಸಿದರು. ಆಗ ಆ ಬಾಲೆಯು ತಾನು ಅ ಮೂವರ ಸಂಯುಕ್ತರೂಪದ ಶಕ್ತಿ ಎಂದು ಹೇಳಿದಳು. ಆಗ ಆ ತ್ರಿಮೂರ್ತಿಗಳು ಅವಳನ್ನು ತ್ರಿಪುರಾ ಎಂದು ಕರೆದರು. ಹೀಗೆ ದೇವಿಯ ತ್ರಿಪುರ ರೂಪವು ಸೃಷ್ಟಿ, ಸ್ಥಿತಿ ಮತ್ತು ಲಯ ಕರ್ತ ದೇವರುಗಳ ಸೂಕ್ಷ್ಮ ದೃಷ್ಟಿಗಳಿಂದಾಗಿ ಉದ್ಭವವಾಯಿತು. ತ್ರಿಪುರಾ ದೇವಿಯು ಮೂರು ಬಣ್ಣಗಳಿಂದ ರಚಿಸಲ್ಪಟ್ಟಿದ್ದಾಳೆ, ಅವೆಂದರೆ ಶ್ವೇತ, ಕೃಷ್ಣ ಮತ್ತು ರಕ್ತ ವರ್ಣಗಳು. ಶ್ವೇತ ವರ್ಣವು ಬ್ರಹ್ಮನನ್ನು ಪ್ರತಿನಿಧಿಸುತ್ತದೆ, ಅವನು ಸಾತ್ವಿಕ ಗುಣದವನಾಗಿರುವುದರಿಂದ ಅವನನ್ನು ಬಿಳಿ ಬಣ್ಣವುಳ್ಳವನೆಂದು ವರ್ಣಿಸಲಾಗಿದೆ. ಮುಂದಿನದು ಕಪ್ಪು ವರ್ಣವಾಗಿದ್ದು ಅದು ವಿಷ್ಣುವಿನ ರಜೋ ಗುಣವನ್ನು ಪ್ರತಿನಿಧಿಸುತ್ತದೆ. ಮೂರನೆಯದು ರಕ್ತ (ಕೆಂಪು) ವರ್ಣವಾಗಿದ್ದು ಅದು ಶಿವನ ಒಂದು ಸ್ವರೂಪವಾದ ರುದ್ರನ ತಮೋ ಗುಣವನ್ನು ಪ್ರತಿನಿಧಿಸುತ್ತದೆ. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಗುಣಗಳನ್ನು ಒಬ್ಬೊಬ್ಬ ವಿದ್ವಾಂಸರು ಒಂದೊಂದು ವಿಧವಾಗಿ ವಿಶ್ಲೇಷಿಸುತ್ತಾರೆ. ಪರಬ್ರಹ್ಮವು ಬ್ರಹ್ಮ, ವಿಷ್ಣು ಮತ್ತು ರುದ್ರ ಎನ್ನುವ ಮೂರು ಭಾಗಗಳಾಗಿ ವಿಭಜಿಸಲ್ಪಟ್ಟಿದೆ ಎಂದು ಹೇಳಲಾಗುತ್ತದೆ. ಈ ಮೂರು ರೂಪಗಳೇ ಒಂದುಗೂಡಿ ಶಕ್ತಿ ರೂಪವನ್ನು ತಾಳಿದವು. ಆದ್ದರಿಂದ ದೇವಿಯು ಒಂದರಲ್ಲಿ ಅನೇಕವಾಗಿದ್ದಾಳೆ ಮತ್ತು ಅನೇಕದಲ್ಲಿ ಒಂದಾಗಿದ್ದಾಳೆ. ಆ ಒಂದೇ ಪರಬ್ರಹ್ಮವಾಗಿದೆ. ಪರಬ್ರಹ್ಮವು ಕಾರಣವಾದರೆ, ಶಕ್ತಿಯು ಕಾರ್ಯವಾಗಿದ್ದಾಳೆ (ಪರಿಣಾಮವಾಗಿದ್ದಾಳೆ). ಪ್ರತಿಯೊಂದು ಕಾರ್ಯಕ್ಕೂ ಒಂದು ಪರಿಣಾಮ ಅಥವಾ ಪರಿಣಾಮಗಳಿರುತ್ತವೆ.

         ಈ ನಾಮವು ದೇವಿಯು ಪರಬ್ರಹ್ಮದ ಮೂರು ಕ್ರಿಯೆಗಳಾದ ಸೃಷ್ಟಿ, ಸ್ಥಿತಿ ಮತ್ತು ಲಯ ಇವುಗಳನ್ನು ಪ್ರತಿನಿಧಿಸುವ ತ್ರಿಗುಣಗಳ ರೂಪದಲ್ಲಿದ್ದಾಳೆಂದು ಹೇಳುತ್ತದೆ. ಹೆಚ್ಚಿನ ವಿವರಗಳನ್ನು ೭೬೩ ಹಾಗೂ ೯೮೪ನೇ ನಾಮಗಳಲ್ಲಿ ನೋಡೋಣ.

Tridaśeśvarī त्रिदशेश्वरी (629)

೬೨೯. ತ್ರಿದಶೇಶ್ವರೀ

           ದೇವಿಯು ಸಕಲ ದೇವಾನು ದೇವತೆಗಳಿಗೆ ಈಶ್ವರೀ ಅಥವಾ ಒಡತಿಯಾಗಿದ್ದಾಳೆ. ದೇವಿಯು ತ್ರಿ ಅಥವಾ ಮೂರು ದಶೆಗಳಿಗೂ ಒಡತಿಯಾಗಿದ್ದಾಳೆ. ಮಾನವರಿಗೆ ನಾಲ್ಕು ಹಂತಗಳಿರುತ್ತವೆ -ಅವೆಂದರೆ ಶೈಶವ, ಬಾಲ್ಯ, ಯೌವನ ಮತ್ತು ವೃದ್ದಾಪ್ಯ. ಆದರೆ ದೇವತೆಗಳಿಗೆ ನಿತ್ಯ ಯೌವನದ ಕೇವಲ ಒಂದೇ ಒಂದು ದಶೆ ಇರುತ್ತದೆ. ಆದ್ದರಿಂದ ದೇವಾನು ದೇವತೆಗಳನ್ನು ತ್ರಿ-ದಶರೆಂದು ಕರೆಯಲಾಗುತ್ತದೆ. ದೇವಿಯು ಈ ಎಲ್ಲಾ ತ್ರಿದಶರ ಮುಖ್ಯಸ್ಥಳಾಗಿದ್ದಾಳೆ.

          ‘ತ್ರಿ’ ಎಂದರೆ ಮೂರು ಮತ್ತು ದಶ ಎಂದರೆ ಹತ್ತು. ೩ x ೧೦ - ಮೂರನ್ನು ಹತ್ತರಿಂದ ಗುಣಿಸಿದರೆ ನಮಗೆ ಸಂಖ್ಯೆ ೩೦ ಲಭ್ಯವಾಗುತ್ತದೆ. ಈ ಮೂವತ್ತಕ್ಕೆ ಮತ್ತೊಂದು ಮೂರನ್ನು ಸೇರಿಸಿದರೆ ನಮಗೆ ಸಂಖ್ಯೆ ೩೩ ಸಿಗುತ್ತದೆ. ಹನ್ನೆರಡು ಆದಿತ್ಯರು, ಎಂಟು ವಸುಗಳು, ಹನ್ನೊಂದು ರುದ್ರರು ಮತ್ತು ಎರಡು ಆಶ್ವಿನಿಗಳು (ದ್ವಾದಶಾದಿತ್ಯರು, ಅಷ್ಟ ವಸುಗಳು, ಏಕಾದಶ ರುದ್ರರು ಮತ್ತು ಅಶ್ವಿನೀದ್ವಯರು) ಇವುರಗಳ ಒಟ್ಟು ಸಂಖ್ಯೆಯು ೩೩ ಆಗುತ್ತದೆ. ದೇವಿಯು ಈ ಮೂವತ್ತಮೂರು ದೇವರುಗಳ ಅಧಿನಾಯಕಿಯಾಗಿದ್ದಾಳೆ. ಈ ಪ್ರತಿಯೊಬ್ಬ ೩೩ ದೇವರುಗಳಿಗೆ ಒಂದೊಂದು ಕೋಟಿ ಸಹಾಯಕರಿದ್ದಾರೆ ಮತ್ತು ಅವರನ್ನು ಉಪದೇವತೆಗಳೆಂದು (ದೇವ/ದೇವಿ) ವಿವರಿಸಬಹುದು. ಇದು ೩೩ಕೋಟಿ ದೇವತೆಗಳ ಕಲ್ಪನೆಯನ್ನು ವಿವರಿಸುತ್ತದೆ.

           ದೇವಿಯು ಮಾನವ ಪ್ರಜ್ಞೆಯ ಮೂರು ಹಂತಗಳಾದ - ನಿದ್ರಾ/ಜಾಗ್ರತ್ (ಎಚ್ಚರದ ಸ್ಥಿತಿ), ಸ್ವಪ್ನ (ಕನಸಿನ ಅವಸ್ಥೆ) ಮತ್ತು ಸುಷುಪ್ತಿ (ದೀರ್ಘನಿದ್ರಾವಸ್ಥೆ) ಈ ಮೂರಕ್ಕೂ ಅಧಿನಾಯಕಿಯಾಗಿದ್ದಾಳೆ.

Tryakṣarī त्र्यक्षरी (630)

೬೩೦. ತ್ರ‍್ಯಕ್ಷರೀ

           ದೇವಿಯು ಮೂರು ಬೀಜಾಕ್ಷರಗಳ ರೂಪದಲ್ಲಿದ್ದಾಳೆ. ಉದಾಹರಣೆಗೆ, ಬಾಲಾ ಮಂತ್ರವು ಮೂರು ಬೀಜಗಳಾದ ಐಂ- ಕ್ಲೀಂ-ಸೌಃ (ऐं- क्लीं- सौः) ಅನ್ನು ಒಳಗೊಂಡಿದೆ. ಷೋಡಶೀ ಮಂತ್ರದಲ್ಲಿ ಪಂಚದಶೀ ಮಂತ್ರದ ಮೂರು ಕೂಟಗಳನ್ನು ಮೂರು ಬೀಜಾಕ್ಷರಗಳಾಗಿ ಪರಿಗಣಿಸಲಾಗಿದೆ.

           ಬೃಹದಾರಣ್ಯಕ ಉಪನಿಷತ್ತು (೫.೩.೧) ಹೃದಯವು ಮೂರು ಅಕ್ಷರಗಳನ್ನು (ಹೃ+ದ+ಯ) ಒಳಗೊಂಡಿದೆ ಎಂದು ಹೇಳುತ್ತದೆ. ಅದೇ ಉಪನಿಷತ್ತಿನಲ್ಲಿ (೫.೫.೧) ಸತ್ಯವೂ (ಸ+ತಿ+ಯ) ಸಹ ಮೂರು ಅಕ್ಷರಗಳನ್ನು ಒಳಗೊಂಡಿದೆ ಎಂದು ಹೇಳಲಾಗಿದೆ. ಹೃದಯ ಮತ್ತು ಸತ್ಯ ಎರಡೂ ಪರಬ್ರಹ್ಮವನ್ನು ಸೂಚಿಸುತ್ತವೆ. ಯಾವೆಲ್ಲಾ ವಸ್ತುಗಳು ಮೂರು ಅಕ್ಷರಗಳನ್ನು ಹೊಂದಿವೆಯೋ ಅವೆಲ್ಲಾ ದೇವಿಯೆಡೆಗೆ ನಮ್ಮನ್ನು ಕರೆದೊಯ್ಯುತ್ತವೆ. ಉದಾಹರಣೆಗೆ, ಬ್ರಹ್ಮವು ಹೃದಯದಲ್ಲಿ ನೆಲೆಸಿದೆ ಎಂದು ಹೇಳಲಾಗಿದೆ. ಬ್ರಹ್ಮವು ಸತ್ಯಂ-ಜ್ಞಾನಮ್-ಅನಂತಮ್ ಆಗಿದೆ.

                                                                                                                               ******

ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 626 - 630 http://www.manblunder.com/2010/03/lalitha-sahasranamam-626-630.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by ಗಣೇಶ Sun, 10/27/2013 - 21:40

ಶ್ರೀಧರ್‌ಜಿ,
೩ >< ೧೦ >< ಕೋಟಿ=ಮುಕ್ಕೋಟಿ+ ದೇವತೆಗಳು ಹೇಗಾದರು ಎಂದು ಈಗ ತಿಳಿಯಿತು. ಆದರೆ..
>> ಆದರೆ ದೇವತೆಗಳಿಗೆ ನಿತ್ಯ ಯೌವನದ ಕೇವಲ ಒಂದೇ ಒಂದು ದಶೆ ಇರುತ್ತದೆ. ಆದ್ದರಿಂದ ದೇವಾನು ದೇವತೆಗಳನ್ನು ತ್ರಿ-ದಶರೆಂದು ಕರೆಯಲಾಗುತ್ತದೆ.
--ಒಂದೇ ದಶೆ ಇರುವುದಾದರೆ ತ್ರಿದಶರು ಹೇಗೆ? "entertainment, entertainment, entertainment" ವಿದ್ಯಾಬಾಲನ್ ಹೇಳಿದಂತೆ, "ಯೌವನ, ಯೌವನ, ಯೌವನ" ತ್ರಿದಶವಾ? :)
ತ್ರಿಪುರಾ,ತ್ರಿಜಗದ್-ವಂದ್ಯಾ,ತ್ರಿಮೂರ್ತಿಃ,ತ್ರಿದಶೇಶ್ವರೀ,ತ್ರ್ಯಕ್ಷರೀ ಎಲ್ಲಾ "ತ್ರಿ" ಇಂದ ಪ್ರಾರಂಭ-ಸಹಸ್ರನಾಮ ಕಂಠ ಪಾಠ ಮಾಡಲು ಸುಲಭವಾಗಲೆಂದು ಮಾಡಿರಬಹುದೇ?
ಹಿಂದೆಯೂ- "ರ" ಇಂದ ಪ್ರಾರಂಭ- "ರಾಜರಾಜಾರ್ಚಿತ, ...ರಂಜನೀ ರಮಣೀ...ರಮಣಲಂಪಟಾ"
"ಕ"ದಿಂದ ಪ್ರಾರಂಭ- ಕಾಮ್ಯಾ, ಕಾಮಕಲಾರೂಪ....ಕಾದಂಬರಿಪ್ರಿಯಾ"
"ವ"ದಿಂದ - ವರದಾ ವಾಮನಯನಾ....ವಿಲಾಸಿನೀ"
"ಕ್ಷ" - ಕ್ಷೇತ್ರ ಸ್ವರೂಪ....
"ಚ"- ಚತುಷಷ್ಟ್ಯುಪಚರಾಢ್ಯ.. ಹೀಗೇ ಕೆಲವು ಇದೆ. ಕಂಠಪಾಠಕ್ಕೆ ಅನುಕೂಲವಾಗಲೆಂದೋ ಅಥವಾ ಈ ಕ್ರಮದಲ್ಲಿ ಏನಾದರೂ ವಿಶೇಷವಡಗಿದೆಯಾ?

ಗಣೇಶರೆ,
ದೇವತೆಗಳಿಗೆ ಕೇವಲ ಮೂರೇ ದಶಗಳಿರುತ್ತವೆ, ಅವೆಂದರೆ ಜನನ, ಜೀವನ ಮತ್ತು ಮರಣ (ದೇವತೆಗಳು ಕಾಲಾತೀತರು ಎಂದರೂ ಸಹ ಅವರಿಗೂ ನಿರ್ಧಿಷ್ಠವಾದ ಆಯುಷ್ಯವಿರುತ್ತದೆ). ಇತರೇ ಮಾನವರಿಗೆ ಶೈಶವ, ಬಾಲ್ಯ, ಯೌವನ, ವೃದ್ಧಾಪ್ಯ ಹೀಗೆ ಹಲವಾರು ದಶೆಗಳಿರುತ್ತವೆ. ಆದ್ದರಿಂದ ದೇವತೆಗಳು ತ್ರಿದಶರು.
ಲಲಿತಾ ಸಹಸ್ರನಾಮದ ಒಂದು ವಿಶೇಷತೆ ಏನೆಂದರೆ ಅದರಲ್ಲಿನ ಒಂದೇ ಒಂದು ಅಕ್ಷರವೂ ವ್ಯರ್ಥವಾಗಿ ಸೇರಿಸಲ್ಪಟ್ಟಿಲ್ಲ ಮತ್ತು ಅದರ ಸಾವಿರ ನಾಮಗಳಲ್ಲಿ ಯಾವುದೇ ನಾಮವು ಪುನರಾವೃತವಾಗಿಲ್ಲ. ಅದೇ ಅರ್ಥಕೊಡುವ ಅನೇಕ ನಾಮಗಳಿರಬಹುದು ಅದು ಬೇರೆಯ ವಿಷಯ. ಈ ಸಹಸ್ರನಾಮದ ಪ್ರತಿಯೊಂದು ನಾಮವೂ ಒಂದೊಂದು ಮಂತ್ರಕ್ಕೆ ಸಮವಾಗಿದೆ. ಆದ್ದರಿಂದ ಇದನ್ನು ರಾಗಬದ್ಧವಾಗಿ ಹೇಳಬಾರೆದೆಂದು ಹೇಳಲಾಗುತ್ತದೆ. ಇದರ ಕುರಿತಾಗಿ ಈ ಮಾಲಿಕೆಯಲ್ಲಿ ಒಂದೆರಡು ಬಾರಿ ಪ್ರಸ್ತಾವಿಸಲಾಗಿದೆ. ಪ್ರತಿಯೊಂದು ನಾಮದಲ್ಲೂ ಅನೇಕ ಬೀಜಾಕ್ಷರಗಳವು ರಹಸ್ಯವಾಗಿ ಹುದುಗಿವೆ. ಆದರೆ ಪ್ರತಿ ನಾಮದ ಹಿನ್ನಲೆಯನ್ನೂ ಅದರಲ್ಲಿರುವ ಬೀಜಾಕ್ಷರಗಳ ಕುರಿತ ವ್ಯಾಖ್ಯಾನವನ್ನು ಬಲ್ಲವರು ಬಹಳ ಕಡಿಮೆ ಮತ್ತು ಅದು ಬಹಳ ರಹಸ್ಯಾತ್ಮಕವಾದುದೆಂದು ಪರಿಗಣಿಸಲ್ಪಟ್ಟಿರುವುದರಿಂದ ಅದರ ಸಂಪೂರ್ಣ ವ್ಯಾಖ್ಯಾನಗಳು ನಮಗೆ ದೊರೆಯುವುದಿಲ್ಲ. ಅದನ್ನು ಯೋಗ್ಯ ಗುರುವಿನ ಮೂಲಕವಷ್ಟೇ ಪಡೆಯಬಹುದು. ನೀವು ಹೇಳಿದಂತೆ ಜ್ಞಾಪಕದಲ್ಲಿಟ್ಟುಕೊಳ್ಳಲು ಸುಲಭವಾಗುವಂತೆಯೂ ಈ ಸಹಸ್ರನಾಮದ ರಚನೆಯಾಗಿದೆ ಆದರೆ ಅದೇ ಪ್ರಮುಖವಾದ ಅಂಶವಲ್ಲ; ಖಂಡಿತವಾಗಿ ಇದರ ಹಿಂದೆ ಬೀಜಾಕ್ಷರಗಳ ಅನುಕ್ರಮವಿದೆ ಎಂದು ಮಾತ್ರ ಹೇಳಬಲ್ಲೆ.
ನೀವು ಲಲಿತಾ ತ್ರಿಶತಿಯನ್ನು ಓದಿದರೆ ಅದರಲ್ಲಿ ಪಂಚದಶೀ ಮಂತ್ರದ ಒಂದೊಂದು ಅಕ್ಷರದಿಂದ ಪ್ರತಿಯೊಂದು ನಾಮವೂ ಆರಂಭವಾಗುತ್ತದೆ. ಪ್ರತಿಯೊಂದು ಅಕ್ಷರವನ್ನೂ ೨೦ಬಾರಿ ಪುನರುಚ್ಛರಿಸಲಾಗುತ್ತದೆ ಅಂದರೆ ೨೦ನಾಮಗಳಿಗೊಂದರಂತೆ ಪಂಚದಶೀ ಅಕ್ಷರದ ಒಂದೊಂದು ನಾಮದ ಆರಂಭವು ಬದಲಾಗುತ್ತಾ ಹೋಗುತ್ತದೆ. ಈ ಕಾರಣಕ್ಕಾಗಿಯೇ ಶ್ರೀ ಲಲಿತಾ ತ್ರಿಶತಿಯನ್ನು ಓಂ-ಐಂ-ಹ್ರೀಂ-ಶ್ರೀಮ್ ಎಂದು ಆರಂಭಿಸಿ ಅದೇ ಬೀಜಾಕ್ಷರಗಳಿಂದ ಮುಕ್ತಾಯಗೊಳಿಸಲಾಗುತ್ತದೆ. ಈ ನಾಲ್ಕು ಅಕ್ಷರಗಳು ಸಂಪುಟೀಕರಣ ಅಥವಾ ಕವಚ ಮಂತ್ರದ ಅಕ್ಷರಗಳಾಗಿದ್ದು ಅವು ಲಲಿತಾ ತ್ರಿಶತಿಯನ್ನು ಪಠಿಸುವುದರಿಂದ ಉತ್ಪನ್ನವಾಗುವ ಶಕ್ತಿಯು ಸೋರಿಹೋಗದಂತೆ ಸಾಧಕನಲ್ಲಿಯೇ ಶೇಖರಗೊಳ್ಳುವಂತೆ ಮಾಡುತ್ತವೆ.
ಉತ್ತರಿಸುವುದಕ್ಕೆ ತಡವಾದುದಕ್ಕೆ ಕ್ಷಮೆಯಿರಲಿ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by nageshamysore Mon, 10/28/2013 - 03:07

ಶ್ರೀಧರರೆ, '೧೪೬. ಶ್ರೀ ಲಲಿತಾ ಸಹಸ್ರನಾಮದ ವಿವರಣೆ'ಯ ಕಾವ್ಯರೂಪ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೬೨೬ - ೬೩೦
__________________________
.
೬೨೬. ತ್ರಿಪುರಾ
ದತ್ತಾತ್ರೇಯ ಭಾರ್ಗವ ಸಂವಾದ ತ್ರಿಪುರ ರಹಸ್ಯ
ದೇವಿ ಮಹಾತ್ಮೆ-ಪೂಜಾವಿಧಿ-ಜ್ಞಾನದ ಸಾಮರಸ್ಯ
ತ್ರಿಕೂಟ-ತ್ರಿಪುಟಿ-ತ್ರಿಷ್ಟಕರೂಪದಿ ಲಲಿತೆ ತ್ರಿಪುರಾ
ಅಧಿಗಮಿಸೆ ತ್ರಿಷ್ಟಕ, ಪರಬ್ರಹ್ಮವನ್ಹೊಂದಿ ಸಾಕಾರ ||
.
ತ್ರಿಷ್ಟಕಗಳೆ ದೇವಿ, ಬ್ರಹ್ಮ-ವಿಷ್ಣು-ರುದ್ರರಿಹ ಇಚ್ಛಾ-ಜ್ಞಾನ-ಕ್ರಿಯಾಶಕ್ತಿ ಸಮಾನ
ಪಂಚದಶೀ ತ್ರಿಕೂಟ, ಸೃಷ್ಟಿ-ಸ್ಥಿತಿ-ಲಯ ತ್ರಿಕಾರ್ಯ, ಇಡಾ-ಪಿಂಗಳ-ಸುಷುಮ್ನ
ಭೂಃ-ಭುವಃ-ಸ್ವಃ ತ್ರಿಲೋಕ, ಸತ್ವ-ರಾಜೋ-ತಾಮಸ ತ್ರಿಗುಣಗಳೆಲ್ಲವು ಲಲಿತೆ
ಈ ತ್ರಿಷ್ಟಕಗಳೆಲ್ಲವ ಅಧಿಗಮಿಸಿರೆ, ಪರಬ್ರಹ್ಮವ ಹೊಂದೆ ಕರುಣೆಯ ತೋರುತೆ ||
.
ಶುದ್ಧ ಚೈತನ್ಯವೆ ಪರಬ್ರಹ್ಮ, ತ್ರೈಪ್ರಜ್ಞೆಗಳ ತ್ರಿಷ್ಟಕದೆ ಅನನ್ಯ
ಬುದ್ಧಿಯಿಂದ ಪರಿಮಿತವಾದ ಪ್ರಜ್ಞೆಯೆ ಪರಮಾತೃ-ಚೈತನ್ಯ
ಜ್ಞಾನದಿಂದ ಪರಿಮಿತ ಪ್ರಜ್ಞೆಯೆ ಎರಡನೆ ಪ್ರಮಾಣ-ಚೈತನ್ಯ
ವ್ಯಕ್ತಿಗತ ಜೀವಿ ಪರಿಮಿತ ಪ್ರಜ್ಞೆಯೆ, ಮೂರನೆ ಜೀವ-ಚೈತನ್ಯ ||
.
೬೨೭. ತ್ರಿಜಗದ್-ವಂದ್ಯಾ
ಭೂಃ-ಭುವಃ-ಸ್ವಃ ತ್ರಿಲೋಕದಲೆಲ್ಲೆಡೆ ಪೂಜಿತೆ, ದೇವಿ ಲಲಿತೆ ಹೃದ್ಯ
ಗಾಯತ್ರೀ ಮಂತ್ರ ವಾಹೃತಿ ಪ್ರತಿನಿಧಿಸಿ ತ್ರಿಲೋಕದೆ, ತ್ರಿಜಗದ್ವಂದ್ಯ
ತ್ರಿಪ್ರಜ್ಞಾಸ್ತರಗಳೆ ತ್ರಿಲೋಕ, ಅತಿ ಕೆಳ ಹಂತ ಭೌತಿಕತೆ ಪ್ರಾಪಂಚಿಕ
ಪರಿಶುದ್ದತೆ ರೂಪದತ್ಯುನ್ನತ ಪ್ರಜ್ಞಾರೂಪಿ, ಪರಬ್ರಹ್ಮನಿಹ ವಾಸ್ತವಿಕ ||
.
೬೨೮. ತ್ರಿಮೂರ್ತಿಃ
ಬ್ರಹ್ಮ-ವಿಷ್ಣು-ರುದ್ರ ತ್ರಿಮೂರ್ತಿಃ ಸಂಯುಕ್ತರೂಪವೆ ಲಲಿತೆ
ಪರಬ್ರಹ್ಮಕ್ರಿಯೆ ಸೃಷ್ಟಿಸ್ಥಿತಿಲಯ ಪ್ರತಿನಿಧಿಸಿ ತ್ರಿಗುಣಸ್ತುತೆ
ತ್ರಿಮೂರ್ತಿ ದೃಷ್ಟಿ ಪರಸ್ಪರಾ, ಸಂಯುಕ್ತಶಕ್ತಿ ಬಾಲೆ ಪ್ರತ್ಯಕ್ಷ
ತ್ರಿಮೂರ್ತಿ ಸೂಕ್ಷ್ಮದೃಷ್ಟಿಗುದ್ಭವ ತ್ರಿಪುರರೂಪಿ ದೇವಿ ಸಾಕ್ಷ್ಯ ||
ತ್ರಿವರ್ಣ ಸಂಯೋಜಿತೆ ತ್ರಿಪುರಾದೇವಿ, ಶ್ವೇತ-ಕೃಷ್ಣ-ರಕ್ತವರ್ಣಾ ತ್ರಿಭಾವ
ಸಾತ್ವಿಕ ಶ್ವೇತ ಬ್ರಹ್ಮ, ರಜೋಗುಣ ಕಪ್ಪು ವಿಷ್ಣುವರ್ಣ, ತಮೋ ರಕ್ತದೆ ಶಿವ
ಪರಬ್ರಹ್ಮ ವಿಭಜಿಸಿ ತ್ರಿರೂಪ ಬ್ರಹ್ಮವಿಷ್ಣುರುದ್ರ, ಸಂಯೋಜಿಸಿ ಶಕ್ತಿ ರೂಪ
ಕಾರಣ-ಪರಬ್ರಹ್ಮನ ಕಾರ್ಯ-ಶಕ್ತಿ, ಏಕದಲನೇಕ-ಅನೇಕದಲೇಕ ಸ್ವರೂಪ ||
.
೬೨೯. ತ್ರಿದಶೇಶ್ವರೀ
ಮಾನವರಿಗಷ್ಟೆ ನಾಲ್ಕು ಹಂತ ಶೈಶವ-ಬಾಲ್ಯ-ಯೌವ್ವನ-ವೃದ್ದಾಪ್ಯ
ತ್ರಿ-ದಶರೆನಿಸಿದ ದೇವಾನುದೇವತೆಗಳ ನಿತ್ಯಯೌವನದೊಂದೆ ದಶ
ತ್ರಿದಶರಿಗೆಲ್ಲಾ ಒಡತಿ ಲಲಿತೆ, ತ್ರಿದಶೆಗಳಿಗೂ ಸೇರಿಸಿ ತ್ರಿದಶೇಶ್ವರೀ
ಮಾನವ ಪ್ರಜ್ಞಾ ಹಂತಗಳಿಗೂ ಅಧಿದೇವತೆ, ಲಲಿತಾ ಪರಮೇಶ್ವರಿ ||
.
ತ್ರಿದಶ ಗಣಿಸೆ ಮುವ್ವತ್ತು, ಮೂರನು ಪರಿಗಣಿಸೆ ಮೂವತ್ಮೂರು ದೇವರು
ದ್ವಾದಶಾದಿತ್ಯರು, ಅಷ್ಟಾವಸುಗಳು, ಏಕಾದಶರುದ್ರ, ಅಶ್ವಿನೀದ್ವಯರು
ಮುವತ್ಮೂರರಧಿದೇವತೆ ಲಲಿತೆ, ಪ್ರತಿ ದೇವತೆಗೇ ಕೋಟಿ ಉಪದೇವತೆ
ಎಲ್ಲ ಸೇರಿ ಮುವ್ವತ್ಮೂರು ಕೋಟಿ, ದೇವತೆಗಳು ದೇವಿಯ ಆರಾಧಿಸುತೆ ||
.
೬೩೦. ತ್ರ್ಯಕ್ಷರೀ 
ಹೃದಯ-ಸತ್ಯ ಸೂಚಿಸಿ ಪರಬ್ರಹ್ಮ, ಮೂರು ಬೀಜಾಕ್ಷರ ಸ್ವರೂಪದಲಿತ್ತ
ಹೃದಯವಾಸಿ ಬ್ರಹ್ಮ ಸತ್ಯಂ-ಜ್ಞಾನಂ-ಅನಂತಂ, ಮೂರಕ್ಷರವೆ ದೇವಿಪಥ
ಹೃ-ದ-ಯ, ಸ-ತಿ-ಯ, ಐಂ-ಕ್ಲೀಂ-ಸೌಃ, ಪಂಚದಶೀ ತ್ರಿಕೂಟಗಳ ತ್ರ್ಯಕ್ಷರೀ
ಬಾಲಾ ಮಂತ್ರದಂತೆ ಮೂರು ಬೀಜಾಕ್ಷರ ರೂಪದಲಿಹ, ಲಲಿತಾ ಅಕ್ಷರೀ ||
.
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

ನಾಗೇಶರೆ,
ನಿಮ್ಮ ನಿರಂತರ ಕಾವ್ಯ ಸೇವೆಗೆ ನಮನಗಳು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ಶ್ರೀಧರರೆ, ನಿಮ್ಮಿಂದ ಬರುತ್ತಿರುವ ನಿರಂತರ ವಾಹಿನಿಯೆ ಇಲ್ಲಿ ಕಾವ್ಯವಾಗುತ್ತಿರುವುದು. ಹೀಗಾಗಿ ಮೂಲದ್ರವ್ಯ ನಿಮ್ಮದೆ. ಅದಕ್ಕೆ ನಿಮಗೂ, ಶ್ರೀಯುತ ರವಿಯವರಿಗೂ ನಮನಗಳು. ನಿಮ್ಮ ಸರಣಿ ಓದಲಾರಂಭಿಸಿದ ಮೇಲೆ ಅದೆಷ್ಟು ಹೆಚ್ಚುವರಿ ಜ್ಞಾನದ ಲಾಭವಾಯ್ತೆಂದು ಬರಿ ಮಾತಿನಲ್ಲಿ ಹೇಳಲಾಗದು. ಆಧ್ಯಾತ್ಮಿಕದ ಸ್ಪಷ್ಟ ಅರಿವು ಇರದಿದ್ದ ನನಗೆ ಅದರ ಮೂಲಭೂತ ಸ್ವರೂಪದ ಅರಿವು ಮೂಡಿದ್ದೆ ನಿಮ್ಮ ಬರಹದಿಂದ. ಅದಕ್ಕೆ ಮತ್ತೊಮ್ಮೆ ನಮನಗಳು.
ನಿಮಗೆ, ಸಂಪದಿಗೆ ಹಾಗೂ ಕನ್ನಡಿಗರೆಲ್ಲರಿಗು ಕನ್ನಡ ರಾಜ್ಯೋತ್ಸವದ ಮತ್ತು ದೀಪಾವಳಿಯ ಹಾರ್ದಿಕ ಶುಭಾಶಯಗಳು :-)