೧೪೮. ಲಲಿತಾ ಸಹಸ್ರನಾಮ ೬೩೭ರಿಂದ ೬೪೪ನೇ ನಾಮಗಳ ವಿವರಣೆ

೧೪೮. ಲಲಿತಾ ಸಹಸ್ರನಾಮ ೬೩೭ರಿಂದ ೬೪೪ನೇ ನಾಮಗಳ ವಿವರಣೆ

                                                                                         ಲಲಿತಾ ಸಹಸ್ರನಾಮ ೬೩೭ -೬೪೪

Viśva-garbhā विश्व-गर्भा (637)

೬೩೭. ವಿಶ್ವ-ಗರ್ಭಾ

          ದೇವಿಯ ಗರ್ಭದೊಳಗೆ ವಿಶ್ವವು ಅಡಗಿದೆ ಅಥವಾ ಅವಳ ಗರ್ಭದಿಂದ ವಿಶ್ವವು ಜನಿಸಿತು ಎನ್ನುವುದು ಈ ನಾಮದ ಶಬ್ದಶಃ ಅರ್ಥ. ದೇವಿಯು ಈ ವಿಶ್ವಕ್ಕೆ ಜನ್ಮವೀಯುತ್ತಾಳೆ ಅದನ್ನೇ ವಿಶ್ವ-ಮಾತಾ ಎನ್ನುವ ೯೩೪ನೇ ನಾಮವು ಉಲ್ಲೇಖಿಸುತ್ತದೆ. ವಿಶ್ವ ಎಂದರೆ ನಮಗೆ ಗೋಚರವಾಗುವ ಎಲ್ಲವೂ, ಅಂದರೆ ಇಡೀ ವಿಶ್ವ. ದೇವಿಯು ತನ್ನ ಗರ್ಭದಿಂದ ಈ ವಿಶ್ವಕ್ಕೆ ಜನ್ಮವಿತ್ತದ್ದರಿಂದ ಆಕೆಯನ್ನು ವಿಶ್ವ-ಮಾತಾ ಎಂದು ಕರೆಯಲಾಗಿದೆ.

Svarṇa-garbhā स्वर्ण-गर्भा (638)

೬೩೮. ಸ್ವರ್ಣ-ಗರ್ಭಾ

          ದೇವಿಯ ಉದರದಲ್ಲಿ ಬಂಗಾರದ ಮೊಟ್ಟೆಯಿದೆ ಅಥವಾ ಆಕೆಯು ಬಂಗಾರದ ಮೊಟ್ಟೆಯಿಂದ ಜನಿಸಿದವಳಾಗಿದ್ದಾಳೆ. ಸ್ವರ್ಣ ಎಂದರೆ ಬಂಗಾರ ಮತ್ತು ಹಿರಣ್ಯ ಎಂದರೂ ಸಹ ಬಂಗಾರವೇ. ವೇದಾಂತ ಪರಿಭಾಷಾ ಎನ್ನುವ ೧೭ನೇ ಶತಮಾನದ ಗ್ರಂಥವೊಂದು ಹಿರಣ್ಯಗರ್ಭದ ವಿವರಣೆಯನ್ನು ಕೊಡುತ್ತದೆ. "ಹಿರಣ್ಯಗರ್ಭವು ಜನಿಸಿದ ಮೊದಲ ಜೀವಿಯಾಗಿದ್ದು ಅದು ಬ್ರಹ್ಮ, ವಿಷ್ಣು ಮತ್ತು ಶಿವ ಇವರಿಗಿಂತ ಭಿನ್ನವಾಗಿದೆ". ಪಂಚಪ್ರಾಣಗಳು, ಮನಸ್ಸು, ಬುದ್ಧಿ, ಐದು ಕರ್ಮೇಂದ್ರಿಯಗಳು ಮತ್ತು ಐದು ಗ್ರಹಣೇಂದ್ರಿಯಗಳು (ಪಂಚೇಂದ್ರಿಯಗಳು) ಇರುವ ಸೂಕ್ಷ್ಮ ಶರೀರವು ಪಂಚಭೂತಗಳಿಂದ (ಐದು ಮೂಲ ಧಾತುಗಳಿಂದ) ಉಂಟಾಗುತ್ತದೆ. ಇದು ಜೀವಿಯು ತನ್ನ ಕರ್ಮದ (ಕ್ರಿಯೆಗಳ) ಫಲಗಳನ್ನು ಅನುಭವಿಸಲಿಕ್ಕೆ ದಾರಿ ಮಾಡಿಕೊಡುತ್ತದೆ. ಸೂಕ್ಷ್ಮ ಶರೀರವು ಎರಡು ವಿಧದ್ದಾಗಿದೆ, ಒಂದು ಉನ್ನತವಾದದ್ದು ಮತ್ತೊಂದು ನೀಚವಾದದ್ದು (ಕೆಳಸ್ತರದ್ದು). ಈ ಉನ್ನತವಾದದ್ದು ಹಿರಣ್ಯಗರ್ಭದ ಸೂಕ್ಷ್ಮ ಶರೀರವಾದರೆ ಕೆಳಗಿನ ಸ್ತರದ ಸೂಕ್ಷ್ಮ ಶರೀರವು ಜೀವಿಗಳ ಸೂಕ್ಷ್ಮಶರೀರವಾಗಿದೆ.  ಹಿರಣ್ಯಗರ್ಭದ ಸೂಕ್ಷ್ಮ ಶರೀರವನ್ನು ಮಹತ್ ಅಥವಾ ಬ್ರಹ್ಮಾಂಡ ಪ್ರಜ್ಞೆ ಎಂದು ಕರೆದರೆ, ಜೀವಿಗಳ ಸೂಕ್ಷ್ಮ ಶರೀರವನ್ನು ’ಅಹಂಕಾರ’ವೆನ್ನುತ್ತಾರೆ.

ಸು ಎಂದರೆ ಉತ್ತಮವಾದ ಅಥವಾ ಬೃಹತ್ತಾದ ಮತ್ತು ವರ್ಣ ಎಂದರೆ ಮಂತ್ರಗಳನ್ನು ರೂಪಿಸುವ ಅಕ್ಷರಗಳು ಮತ್ತು ಗರ್ಭ ಎಂದರೆ ಹೊಳೆಯುವುದು ಅಥವಾ ಧರಿಸುವುದು. ಈ ವಿಧವಾಗಿ ಈ ನಾಮದ ಅರ್ಥವು ದೇವಿಯ ಪವಿತ್ರ ಮಂತ್ರಗಳನ್ನು ತನ್ನ ಗರ್ಭದಲ್ಲಿ ಧರಿಸಿದ್ದಾಳೆ ಎಂದಾಗುತ್ತದೆ. ಇದರ ಒಟ್ಟು ಅರ್ಥ ದೇವಿಯು ಎಲ್ಲಾ ಮಂತ್ರಗಳಿಗೆ ಕಾರಣಳಾಗಿದ್ದಾಳೆ ಎನ್ನವುದಾಗಿದೆ. ಆದ್ದರಿಂದ ಆಕೆಯು ಮಾತೃಕೆ ಅಥವಾ ಅಕ್ಷರಗಳ ರೂಪದಲ್ಲಿದ್ದಾಳೆಂದು ಹೇಳಲಾಗುತ್ತದೆ. ಇದನ್ನು ಈಗಾಗಲೇ ಮಾತೃಕಾ-ವರ್ಣ-ರೂಪಿಣೀ ಎನ್ನುವ  ೫೭೭ನೇ ನಾಮದಲ್ಲಿ ಚರ್ಚಿಸಿದ್ದೇವೆ. ವರ್ಣಗಳು (ಅಕ್ಷರಗಳು) ಆಕೆಯ ಗರ್ಭದಲ್ಲಿ ಹೊಳೆಯುತ್ತಾ ಇರುತ್ತವೆ.

Avaradā अवरदा (639)

೬೩೯. ಅವರದಾ

          ದೇವಿಯು ದುಷ್ಟ ಕಾರ್ಯಗಳನ್ನೆಸುಗುವವರ ಅಂದರೆ ರಾಕ್ಷಸರ ಸಂಹಾರಕಳಾಗಿದ್ದಾಳೆ. ದುಷ್ಟ ಕಾರ್ಯಗಳನ್ನು ಮಾಡುವವರೆಂದರೆ ಕೇವಲ ಯಾರು ದುಷ್ಟಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೋ ಅವರು ಮಾತ್ರವಲ್ಲದೇ ಯಾರು ದುಷ್ಟ ಆಲೋಚನೆಗಳನ್ನು ಹೊಂದಿರುತ್ತಾರೆಯೋ ಅವರೂ ಸಹ ಎಂದಾಗುತ್ತದೆ. ಏಕೆಂದರೆ, ಕೆಟ್ಟ ಆಲೋಚನೆಗಳು ಕೆಟ್ಟ ಕಾರ್ಯಗಳಲ್ಲಿ ಪರ್ಯವಸಾನಗೊಳ್ಳುತ್ತವೆ.

Vāgadhīśvarī वागधीश्वरी (640)

೬೪೦. ವಾಗಧೀಶ್ವರೀ

           ದೇವಿಯು ಮಾತಿನ (ವಾಕ್‌ನ) ಅಧಿದೇವತೆಯಾಗಿದ್ದಾಳೆ. ಸೌಂದರ್ಯ ಲಹರಿಯ ೧೦೦ನೇ ಸ್ತೋತ್ರವು ಹೀಗೆ ಕೊನೆಗೊಳ್ಳುತ್ತದೆ, "ಇದು ನಿನ್ನ ಸ್ವಂತ ಪದಗಳಿಂದಲೇ ರಚಿತವಾಯಿತು". ನಾಮ ೫೭೭ನ್ನೂ ಸಹ ಇಲ್ಲಿ ಉಲ್ಲೇಖಿಸಬಹುದು. ಶಬ್ದದ ಉಗಮವನ್ನು ಕುರಿತು ಈಗಾಗಲೇ ಅನೇಕ ನಾಮಗಳ ಅಡಿಯಲ್ಲಿ ಚರ್ಚಿಸಲಾಗಿದೆ.

Dhyāna-gamyā ध्यान-गम्या (641)

೬೪೧. ಧ್ಯಾನ-ಗಮ್ಯಾ

          ದೇವಿಯು ಧ್ಯಾನದಿಂದ ಹೊಂದಲ್ಪಡುತ್ತಾಳೆ. ಧ್ಯಾನವು ಮನುಷ್ಯನೊಳಗೆ ಹುದುಗಿರುವ ಎಲ್ಲಾ ಸುಪ್ತ ಶಕ್ತಿಗಳನ್ನು ಹುಡುಕಿ ತೆಗೆಯುವ ಒಂದು ವಿಧಾನವಾಗಿದೆ. ಧ್ಯಾನವೆಂದರೆ ಕೇವಲ ಒಂದು ಅತಿಮಾನವ ರೂಪವನ್ನು ಕುರಿತು ಚಿಂತಿಸುವುದಲ್ಲ. ಅದು ತನ್ನೊಳಗೆ ಪರಿಶೋಧನೆ ಮಾಡಿಕೊಳ್ಳುವ ಸಂಕೀರ್ಣ ಕ್ರಿಯೆಯಾಗಿದೆ. ಅದು ಆಧ್ಯಾತ್ಮಿಕವಾಗಿ ಉನ್ನತಿ ಹೊಂದುವ ಸಾಧನವಾಗಿದೆ. ಅದು ಉದ್ದೇಶಪೂರ್ವಕವಾಗಿ ಮತ್ತು ಪ್ರಜ್ಞಾಪೂರ್ವಕವಾಗಿ ಪ್ರಜ್ಞೆಯ ಮಟ್ಟವನ್ನು ಪ್ರಗತಿ ಪಥದಲ್ಲಿ ಉತ್ತೇಜಿಸಿಕೊಳ್ಳುವುದಾಗಿದೆ.

ಶ್ವೇತಾಶ್ವತರ ಉಪನಿಷತ್ತು (೧.೩) ಹೇಳುತ್ತದೆ, "ಋಷಿಗಳು ಗಾಢ ಧ್ಯಾನದಲ್ಲಿ ಮಾಯೆಯಿಂದ ಮರೆಮಾಚಲ್ಪಟ್ಟ ಸ್ವಯಂಪ್ರಕಾಶಿಸುವ ವಿಶ್ವಾತ್ಮವನ್ನು ಈ ಜಗತ್ತಿನ ಕಾರಣವಾಗಿ ಅರಿತರು. ಅದ್ವಿತೀಯನಾದ ಆ ಪರಮಾತ್ಮನು ಕಾಲದಿಂದ ಆತ್ಮನವರೆಗಿರುವ ಕಾರಣಗಳನ್ನೆಲ್ಲ ನಿಯಂತ್ರಿಸುತ್ತಾನೆ". ದೇವಿಯು ಆ ಸ್ವಯಂಪ್ರಕಾಶಿಸುವ ವಿಶ್ವಾತ್ಮವಾಗಿದ್ದಾಳೆ.  

Aparicchedyā अपरिच्छेद्या (642)

೬೪೨. ಅಪರಿಚ್ಛೇದ್ಯಾ

          ದೇವಿಯು ಪರಿಮಿತಿಗೊಳಪಡದವಳು ಅಥವಾ ಗ್ರಹಿಕೆಗೆ ನಿಲುಕದವಳು, ಅನಂತಳು. ಆಕೆಯು ಏಕಮೇವಾದ್ವಿತೀಯಳು, ಇದು ಬ್ರಹ್ಮದ ವಿಶಿಷ್ಠ ಲಕ್ಷಣವಾಗಿದೆ. ಆದರೂ ಸಹ ದೇವಿಯ ಭಕ್ತರು ಆಕೆಯನ್ನು ಧ್ಯಾನದ ಮೂಲಕ ಪಡೆಯುತ್ತಾರೆ (ಹಿಂದಿನ ನಾಮ).

Jñānadā ज्ञानदा (643)

೬೪೩. ಜ್ಞಾನದಾ

          ದೇವಿಯು ಜ್ಞಾನವನ್ನು ಕರುಣಿಸುವವಳಾಗಿದ್ದಾಳೆ; ದೇವಿಯ ಪರಿಪೂರ್ಣ ರೂಪವನ್ನು ಅರಿಯಲು ಬೇಕಾಗುವಂತಹ ಜ್ಞಾನ. ಬ್ರಹ್ಮವನ್ನು ಅರಿಯಬೇಕಾದರೆ ಒಬ್ಬನಿಗೆ ಇಂದ್ರಿಯಗಳಿಂದ ಕಲುಷಿತವಾಗದ ಶುದ್ಧವಾದ ಜ್ಞಾನವು ಇರಬೇಕಾಗುತ್ತದೆ. ದೇವಿ ಮಾತ್ರಳೇ ಅಂತಹ ಜ್ಞಾನವನ್ನು ಕೊಡಬಲ್ಲಳು. ಧ್ಯಾನದ ಮೂಲಕ ದೈನಂದಿನ ಜ್ಞಾನವು (ಪ್ರಾಪಂಚಿಕ ಜ್ಞಾನವು) ಪರಿಪೂರ್ಣ ಜ್ಞಾನವಾಗಿ ಪರಿವರ್ತಿತವಾಗುತ್ತದೆ. ಮೊದಲು ಆಕೆಯು ಅವಶ್ಯವಾದ ಜ್ಞಾನವನ್ನು ಕರುಣಿಸಿದನಂತರ ಆಕೆಯು ತನ್ನ ಸ್ವರೂಪವನ್ನು ಬಹಿರಂಗಗೊಳಿಸುತ್ತಾಳೆ ಮತ್ತು ಅಂತಿಮವಾಗಿ ತನ್ನ ಭಕ್ತರನ್ನು ಅವಳಲ್ಲಿ ಐಕ್ಯಗೊಳಿಸಿಕೊಳ್ಳುತ್ತಾಳೆ. ಆತ್ಮ ಸಾಕ್ಷಾತ್ಕಾರದಲ್ಲಿ ಜ್ಞಾನವು ಪ್ರಾಥಮಿಕ ಹೆಜ್ಟೆಯಾಗಿದ್ದು ದೇವಿಯು ಆ ಜ್ಞಾನವನ್ನು ಒದಗಿಸುತ್ತಾಳೆ.

         ಶಿವ ಸೂತ್ರವು (೧.೨) ಹೀಗೆ ಹೇಳುತ್ತದೆ, "ಜ್ಞಾನಂ ಬಂಧಃ" ಅಂದರೆ ಪರಿಮಿತ ಜ್ಞಾನವು ಬಂಧನವನ್ನುಂಟು ಮಾಡುತ್ತದೆ. ಆದ್ದರಿಂದ ಇದರಿಂದ ವ್ಯಕ್ತವಾಗುವುದೇನೆಂದರೆ ಅಪರಿಮಿತ ಜ್ಞಾನವು ಒಬ್ಬನಿಗೆ ಮುಕ್ತಿಯನ್ನು  ಕೊಡುತ್ತದೆ.

Jñāna-vigrahā ज्ञान-विग्रहा (644)

೬೪೪. ಜ್ಞಾನ-ವಿಗ್ರಹಾ

         ಆಕೆಯು ಜ್ಞಾನದ ವಿಗ್ರಹವಾಗಿದ್ದಾಳೆ ಅಂದರೆ ಆಕೆಯ ಶರೀರವೇ ಜ್ಞಾನವಾಗಿದೆ. ಹಿಂದಿನ ನಾಮವು ದೇವಿಯು ಜ್ಞಾನವನ್ನು ಪ್ರಸಾದಿಸುವವಳಾಗಿದ್ದಾಳೆ ಎಂದು ಹೇಳಿತು ಮತ್ತು ಆ ವಿಧವಾದ ಜ್ಞಾನಕ್ಕೆ ಮೂಲವಾಗಿರುವುದು ದೇವಿಯ ಸಂಪೂರ್ಣ ಶರೀರವಾಗಿದೆ.

         ರಮಣ ಮಹರ್ಷಿಗಳು ಯಾರಿಗೂ ಸಹ ಮಂತ್ರಗಳ ಮೂಲಕ ದೀಕ್ಷೆಯನ್ನು ಕೊಡಲಿಲ್ಲ. ಅವರು ತಮ್ಮ ಶಿಷ್ಯರನ್ನು ಕೇವಲ ಕಣ್ಣಿನ ಕುಡಿನೋಟದಿಂದ ದೃಷ್ಟಿಸಿ ನೋಡುತ್ತಿದ್ದರಷ್ಟೆ. ಆ ನೋಟವು ಒಬ್ಬ ವ್ಯಕ್ತಿಯನ್ನು ಪರಿವರ್ತನೆಗೊಳಿಸುತ್ತಿತ್ತು. ಅಂತಹ ಪರಿವರ್ತನೆಗಳ ಫಲಿತಾಂಶವೇನು? ಆಧುನಿಕ ವೈಜ್ಞಾನಿಕ ಸಂಶೋಧನೆಗಳು ಅದನ್ನು ಹೀಗೆ ವಿವರಿಸುತ್ತವೆ. "ಪ್ರಜ್ಞೆಯ ಮೂಲಕ ಹೊಂದುವ ಅನುಭವವು ಭೌತಿಕ ಮತ್ತು ಜೈವಿಕ ಕ್ರಿಯೆಗಳ ಅನುಭವಗಳಿಗಿಂತ ಹೆಚ್ಚಿನದಾಗಿದೆ. ಯಾವುದು ಮನುಷ್ಯನ ಪ್ರಜ್ಞೆಯನ್ನು ಇತರೇ ಜೀವಜಂತುಗಳಿಂದ ಪ್ರತ್ಯೇಕಿಸುತ್ತದೆ ಎಂದರೆ ಮಾನವನಲ್ಲಿ ವಿಕಸನ ಹೊಂದಿರುವ ಈ ಅಂಶದಿಂದಾಗಿ ಸತ್ಯವು ಅವನೊಳಗಡೆಯೇ ಗೋಚರವಾಗುವುದು".

                                                                    ******

         ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 637 - 644 http://www.manblunder.com/2010/03/lalitha-sahasranamam-637-644.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Fri, 11/01/2013 - 02:47

ಶ್ರೀಧರರೆ, "೧೪೮. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೬೩೭ -೬೪೪
______________________________________
.
೬೩೭. ವಿಶ್ವ-ಗರ್ಭಾ
ಗೋಚರವಾದುದ್ದೆಲ್ಲವೂ ವಿಶ್ವ, ಈ ಬ್ರಹ್ಮಾಂಡದಲೋಡುವ ಅಶ್ವ
ಮಾತೆ ಲಲಿತೆಯ ಗರ್ಭದೊಳಗಡಗಿ, ಗೋಚರಾಗೋಚರ ಭಾವ
ಕತ್ತಲ ಗರ್ಭದೊಳಗೆ ಹರವು , ಅಜ್ಞಾನವೆ ಮುಸುಕಿದ ಸಂಧರ್ಭ
ಜ್ಞಾನದ ಬೆಳಕಲಿ ಮಜ್ಜನ, ಮಾಡಿಸುವ ತಾಯ್ಮಮತೆ ವಿಶ್ವಗರ್ಭಾ ||
.
೬೩೮. ಸ್ವರ್ಣ-ಗರ್ಭಾ
ಪಂಚಭೂತಗಳಿಂದಾದ ಸೂಕ್ಷ್ಮ ಶರೀರ, ಉನ್ನತ ನೀಚ ಸ್ತರ
ಉನ್ನತಾ ಹಿರಣ್ಯಗರ್ಭಶರೀರ, ಕೆಳಸ್ತರ ಜೀವಿ ಸೂಕ್ಷ್ಮಶರೀರ
ಮಹತ್ ಬ್ರಹ್ಮಾಂಡ ಪ್ರಜ್ಞೆ ಉನ್ನತ, ಅಹಂಕಾರಾ ನೀಚ ಸ್ತರ
ಉದರದಲೆ ಸ್ವರ್ಣಾಂಡ, ಹಿರಣ್ಯಗರ್ಭದೆ ಜನಿಸಿ ಸ್ವರ್ಣಗರ್ಭ ||
.
ಸು-ಎನ್ನೆ ಬೃಹತ್-ಉತ್ತಮಕುಲ, ಮಂತ್ರ ರೂಪಿಸಿ ವರ್ಣಾಕ್ಷರ
ಧರಿಸುವ ಹೊಳೆವ ಪ್ರಕ್ರಿಯೆ ಗರ್ಭ, ಸರ್ವಮಂತ್ರಾತ್ಮಿಕೆ ಸಾರ
ಗರ್ಭದಲಡಗಿಸಿ ಪವಿತ್ರ ಮಂತ್ರ, ಕಾರಣಳಾಗಿ ಲಲಿತೆ ಮಾತ್ರ
ಮಾತೃಕಾರೂಪಿದೇವಿ ವರ್ಣಾಕ್ಷರ, ಗರ್ಭದೆ ಹೊಳೆದೆ ಸಾಕಾರ ||
.
೬೩೯. ಅವರದಾ
ದುಷ್ಟ ಕಾರ್ಯ ನಿರತ, ರಾಕ್ಷಸ ಸಂಹಾರಿಣಿ ದೇವಿ
ದುಷ್ಟಾಲೋಚನೆಯಾಗಬಿಡದೆ ದುಷ್ಟಕ್ರಿಯೆಗೆ ಭಾವಿ
ಶಿಷ್ಟ ಅಲೋಚನೆಗಳಿಹ ಮನಕೆ ಸಂಸ್ಕಾರದ ವಾಣಿ
ನೀಡುತಿಹಳು ಲಲಿತೆ ಅವರದಾ, ಲೋಕ ಕಲ್ಯಾಣಿ ||
.
೬೪೦. ವಾಗಧೀಶ್ವರೀ
ಶಬ್ದಬ್ರಹ್ಮ ರೂಪಿಣಿ ಲಲಿತೆ, ನಾಭಿಚಕ್ರದೆ ಹೊರಡಿಸುತೆ
ಮಾತಾಗುವ ಶಬ್ದಕೆ, ಪದಗಳಾ ಮುಡಿಸುವಾಧಿದೇವತೆ
ಎಲ್ಲ 'ವಾಕ್' ಮೂಲ ದೇವಿ, ಪದಗಳಾಗಿ ಹರಿದ ಝರಿ
ಶಬ್ದವಿರದಾ ಸಂವಹನವೆಲ್ಲಿ, ಕರುಣಿಸುವ ವಾಗಧೀಶ್ವರೀ ||
.
೬೪೧. ಧ್ಯಾನ-ಗಮ್ಯಾ
ಆಡಂಬರ ವೈಭವಕೆ ಸಿಗದಲ್ಲ ಲಲಿತಾಬ್ರಹ್ಮ, ಧ್ಯಾನಕೆ ದೇವಿ ಗಮ್ಯಾ
ಹುದುಗಿಟ್ಟ ಸುಪ್ತಶಕ್ತಿ ಪ್ರೇರೇಪಿಸಲು, ಅಂತರ್ಶೋಧ ಸಂಕೀರ್ಣಕ್ರಿಯಾ
ಪ್ರಜ್ಞೆಯ ಮಟ್ಟವೇರಿಸಿ ಪ್ರಜ್ಞಾಪೂರ್ವಕ, ಪ್ರಗತಿಪಥಕೆ ಸಾಧಕ ಧ್ಯೇಯ
ಸ್ವಯಂಪ್ರಕಾಶಿ ವಿಶ್ವಾತ್ಮ ಲಲಿತೆ, ಕಾರಣಗಳ್ಹತೋಟಿಸುತ ಧ್ಯಾನಗಮ್ಯ ||
.
೬೪೨. ಅಪರಿಚ್ಛೇದ್ಯಾ
ಹೇಗೆ ಬಣ್ಣಿಸಿಯು ವರ್ಣನೆಗೆ ನಿಲುಕದಾ ಲಲಿತಾ ಬ್ರಹ್ಮ
ದೇವಿ ಗ್ರಹಿಕೆ ಪರಿಮಿತಿಗಳಿಗತೀತೆ ಅನಂತವಿಹ ಮರ್ಮ
ಏಕಮೇವಾದ್ವಿತೀಯಳವಳ, ಬ್ರಹ್ಮಲಕ್ಷಣ ಸ್ವಯಂ ವೇದ್ಯ
ಧ್ಯಾನಿಸೊ ಭಕ್ತರಿಗೊಲಿವಳು, ಅನುಗ್ರಹಿಸಿ ಅಪರಿಚ್ಛೇದ್ಯಾ ||
.
೬೪೩. ಜ್ಞಾನದಾ
ಆತ್ಮ ಸಾಕ್ಷಾತ್ಕಾರಕೆ ಪ್ರಾಥಮಿಕ ಹೆಜ್ಜೆ ಧ್ಯಾನ, ಅದನೊದಗಿಸಿ ಲಲಿತ
ಬಂಧನದಲಿರಿಸಿ ಪರಿಮಿತಜ್ಞಾನ, ಅಪರಿಮಿತ ಜ್ಞಾನವಾಗಿಸಲೆ ಮುಕ್ತ
ಪರಿಪೂರ್ಣ ಬ್ರಹ್ಮದರಿವಿಗಿರಬೇಕು, ಇಂದ್ರಿಯ ಶೋಧಿತ ಜ್ಞಾನ ಶುದ್ದಾ
ಧ್ಯಾನದಿಂದ ಪರಿಪೂರ್ಣಜ್ಞಾನ, ಭಕ್ತನೈಕ್ಯತೆಗನಾವರಣವಾಗಿ ಜ್ಞಾನದಾ ||
.
೬೪೪. ಜ್ಞಾನ-ವಿಗ್ರಹಾ
ಅಜ್ಞಾನವ ಮಾಡೆ ನಿಗ್ರಹ, ದೇವಿಯೆ ತಾನಾಗಿ ಜ್ಞಾನ ವಿಗ್ರಹಾ
ಲಲಿತೆ ಶಿರದಿಂದಗುಷ್ಠ ಶರೀರವೆಲ್ಲ ಜ್ಞಾನ, ಭಕ್ತರಿಗಿಟ್ಟಾ ಬರಹ
ಜ್ಞಾನ ಪ್ರಸಾದಿನಿ ಕಾಯಕಕೆ ಮೂಲವೆ, ಶರೀರಪೂರ್ಣದ ಜ್ಞಾನ
ಅಲೌಕಿಕಾನುಭವದಿ ಪ್ರಜ್ಞೆಗೆ, ಸತ್ಯಗೋಚರಿಪಳು ಲಲಿತಾಬ್ರಹ್ಮ ||
.
.
- ಧನ್ಯವಾದಗಳೊಂದಿಗೆ 
    ನಾಗೇಶ ಮೈಸೂರು