೧೬೧. ಲಲಿತಾ ಸಹಸ್ರನಾಮ ೭೧೨ರಿಂದ ೭೧೫ನೇ ನಾಮಗಳ ವಿವರಣೆ

೧೬೧. ಲಲಿತಾ ಸಹಸ್ರನಾಮ ೭೧೨ರಿಂದ ೭೧೫ನೇ ನಾಮಗಳ ವಿವರಣೆ

                                                                                            ಲಲಿತಾ ಸಹಸ್ರನಾಮ ೭೧೨ರಿಂದ ೭೧೫

Ī ई (712)

೭೧೨. ಈ

           ‘ಈ’ ಎನ್ನುವುದು ‘ಕಾಮಕಲಾ’ ರೂಪವನ್ನು ಪ್ರತಿನಿಧಿಸುತ್ತದೆ. ಕಾಮಕಲಾದ ಬಗ್ಗೆ ಈಗಾಗಲೇ ಕಾಮಕಲಾ ರೂಪ - ನಾಮ ೩೨೨ರಲ್ಲಿ ಚರ್ಚಿಸಲಾಗಿದೆ. ಕಾಮಕಲಾವು ದೇವಿಯ ಸೂಕ್ಷ್ಮತರರೂಪವಾದರೆ ಕುಂಡಲಿನೀ ರೂಪವು ಆಕೆಯ ಸೂಕ್ಷ್ಮಾತಿಸೂಕ್ಷ್ಮರೂಪವಾಗಿದೆ.

           ಸಂಸ್ಕೃತದ ನಾಲ್ಕನೆಯ ಅಕ್ಷರವು ಈ (ई) ಆಗಿದೆ. ‘ಈ’ ಎನ್ನುವುದು ವಿಷ್ಣುವಿನ ಸಹೋದರಿಯಾಗಿರುವ ಶಕ್ತಿಯನ್ನು ಪ್ರತಿನಿಧಿಸುತ್ತದೆ. ವಿಷ್ಣು ಮತ್ತು ಆತನ ಸಹೋದರಿಯಾದ ಶಕ್ತಿಯು ’ಈ’ ಬೀಜಾಕ್ಷರದಿಂದ ಪ್ರತಿನಿಧಿಸಲ್ಪಡುತ್ತಾರೆ. ಈ ನಾಮಕ್ಕೆ ಇನ್ನೊಂದು ವಿಶ್ಲೇಷಣೆಯೂ ಇದೆ ಅದನ್ನು ವಿವರವಾಗಿ ೭೧೫ನೇ ನಾಮದಲ್ಲಿ ನೋಡೋಣ. ಬ್ರಹ್ಮವು ಎರಡಾಗಿ ಇಬ್ಭಾಗವಾಗುತ್ತದೆ; ಒಂದು ಆಕೃತಿಯುಳ್ಳದ್ದಾದರೆ ಮತ್ತೊಂದು ಆಕೃತಿ ಇಲ್ಲದ್ದು (ಒಂದು ಸಾಕಾರವಾದರೆ ಮತ್ತೊಂದು ನಿರಾಕಾರವಾದುದು). ಈ ಆಕೃತಿಯುಳ್ಳದ್ದು ಒಂದು ಪುಲ್ಲಿಂಗವಾಗಿ ಮತ್ತೊಂದು ಸ್ತ್ರೀಲಿಂಗವಾಗಿ ಮತ್ತೆ ಇಬ್ಭಾಗವಾಗುತ್ತದೆ. ಪುಲ್ಲಿಂಗದ ರೂಪದಲ್ಲಿರುವುದು ವಿಷ್ಣುವಾದರೆ ಸ್ತ್ರೀರೂಪದಲ್ಲಿರುವುದು ಶಿವನ ಸಂಗಾತಿಯಾಗಿರುವ ಶಕ್ತಿಯಾಗಿದೆ. ’ಈ’ ಎನ್ನುವುದು ಬಹಳ ಶಕ್ತಿಯುತವಾದ ಬೀಜಾಕ್ಷರವಾಗಿದೆ ಏಕೆಂದರೆ ಇದು ಸೃಷ್ಟಿಯನ್ನು ಒಳಗೊಂಡಿದೆ. ಈಂ (ईं) ಬೀಜವನ್ನು ಷೋಡಶೀ ಮಂತ್ರದಲ್ಲಿ ಸರಿಯಾಗಿ ಬಳಸಿದರೆ ಅದು ಸಿದ್ಧಿಯನ್ನು ತ್ವರಿತವಾಗಿ ಉಂಟು ಮಾಡುತ್ತದೆ. ಈ ಬೀಜವು ಅಮೃತ ಬೀಜಗಳ ಸಾರವನ್ನು ಕೊಡುತ್ತದೆ. ಅಮೃತ ಬೀಜಗಳು ರಿ, ರೀ, ಲಿ ಮತ್ತು ಲೀ (रि, री, लि, ली)ಗಳಾಗಿವೆ. ಅಗ್ನಿ ಬೀಜದೊಂದಿಗೆ ಕಾಮಕಲಾ ಬೀಜವು ಎಣೆಯಿಲ್ಲದಷ್ಟು ಒಳಿತನ್ನು ಉಂಟುಮಾಡುತ್ತದೆ. ಕಾಮಕಲಾವು ई (ಈ) ಬೀಜಾಕ್ಷರದ ಮೇಲೆ ಮೂರು ಬಿಂದುಗಳನ್ನು ಇರಿಸಿದಾಗ ಮಾತ್ರವೇ ಪೂರ್ಣವಾಗುತ್ತದೆ; ಈ ಮೂರು ಬೀಜಗಳನ್ನು ಒಂದಾಗಿ ಜೋಡಿಸಿದಾಗ ಒಂದು ತ್ರಿಕೋಣವು ಏರ್ಪಟ್ಟು ಆಗ ಉಂಟಾಗುವ ಬೀಜವನ್ನು ईं (ಈಂ) ಎಂದು ಉಚ್ಛರಿಸಲಾಗುತ್ತದೆ. ಈ ಮೂರು ಚುಕ್ಕೆ ಅಥವಾ ಬಿಂದುಗಳನ್ನು ಹಲವಾರು ಉಪನಿಷತ್ತುಗಳು ಹಲವು ವಿಧವಾದ ತ್ರಿಪುಟಿಗಳ ರೂಪದಲ್ಲಿ ಉಲ್ಲೇಖಿಸುತ್ತವೆ. ಉದಾಹರಣೆಗೆ ಛಾಂದೋಗ್ಯ ಉಪನಿಷತ್ತು (೬.೩.೩), "ಆ ಮೂರು ಧಾತುಗಳನ್ನು, ಅವನು ಪ್ರತಿಯೊಂದನ್ನೂ ಮೂರು ಪಟ್ಟು ಮಾಡಿದ". ಮೂರರ ಸಂಖ್ಯೆಯು ಸೃಷ್ಟಿಕ್ರಿಯೆಯಲ್ಲಿ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದಿದೆ ಮತ್ತು ಇದನ್ನು ईं (ಈಂ) ಬೀಜದಲ್ಲಿ ಮೂರು ಬಿಂದುಗಳಾಗಿ ಪ್ರತಿನಿಧಿಸಲಾಗುತ್ತದೆ. (ಇಚ್ಛಾ, ಜ್ಞಾನ ಮತ್ತು ಕ್ರಿಯಾ ಶಕ್ತಿಯ ಕುರಿತಾದ ಹೆಚ್ಚಿನ ವಿವರಗಳಿಗಾಗಿ ೬೫೮ನೇ ನಾಮವನ್ನು ನೋಡಿ).

          ಈ ನಾಮವನ್ನು ಅರ್ಚನೆ ಮಾಡುವಾಗ ’ಯೈ’ ಎಂದು ಉಚ್ಛರಿಸಲಾಗುತ್ತದೆ. ಲಲಿತಾ ತ್ರಿಶತಿಯ ೪೧ನೇ ನಾಮವು ಈಕಾರ ರೂಪ ಅಂದರೆ ದೇವಿಯು ಕಾಮಕಲಾ ರೂಪದಲ್ಲಿದ್ದಾಳೆನ್ನುವ ಅರ್ಥವನ್ನು ಕೊಡುತ್ತದೆ.

Guru-maṇḍala-rūpiṇī गुरु-मण्डल-रूपिणी (713)

೭೧೩. ಗುರು-ಮಂಡಲ-ರೂಪಿಣೀ

           ಈ ನಾಮವು ಸೂಕ್ಷ್ಮವಾಗಿ ಕಾಮಕಲಾದ ವಿಶ್ಲೇಷಣೆ ಮತ್ತು ಅರ್ಥವನ್ನು ಗುರುವಿನ ಮೂಲಕವೇ ತಿಳಿದುಕೊಳ್ಳತಕ್ಕದ್ದು ಎಂದು ಹೇಳುತ್ತದೆ; ಏಕೆಂದರೆ ಅದು ಗೂಢವಾದ ಮತ್ತು ಸೂಕ್ಷ್ಮವಾದ ಅರ್ಥಗಳನ್ನು ಒಳಗೊಂಡಿದೆ. ಈ ವಿಶ್ಲೇಷಣೆಗಳನ್ನು ಬಹುತೇಕ ಈಗಾಗಲೇ ವಿವರವಾಗಿ ಚರ್ಚಿಸಲಾಗಿದೆ. ಗುರುಮಂಡಲವೆಂದರೆ ಗುರುಗಳ ಪರಂಪರೆ. ಶ್ರೀ ವಿದ್ಯೆಯು ಗುರು ಹಾಗೂ ಆತನ ಪರಂಪರೆಗೆ ಬಹಳಷ್ಟು ಮಹತ್ವವನ್ನು ಕೊಡುತ್ತದೆ. ಗುರು ಏನು ಹೇಳುತ್ತಾನೆಯೋ ಅದು ಅಂತಿಮವಾಗಬೇಕು. ಗುರುವಿನ ವಂಶಾವಳಿಯ ಬಗೆಗೆ ಬಹಳಷ್ಟು ಮಹತ್ವವನ್ನು ಏಕೆ ಕೊಡಲಾಗಿದೆ ಎಂದರೆ ಕೆಲವೊಂದು ಆಚರಣೆಗಳು ಹಾಗೂ ಪದ್ಧತಿಗಳು ಮಂಡಲ(ಪಂಗಡ)ದಿಂದ ಮಂಡಲಕ್ಕೆ ಭಿನ್ನವಾಗಿರುತ್ತವೆ ಮತ್ತು ಒಂದೊಂದು ಮಂಡಲವು ಒಂದೊಂದು ಬಗೆಯ ಉಪಾಸನಾ ಪದ್ಧತಿಗಳನ್ನು ಅನುಸರಿಸುತ್ತವೆ. ಶ್ರೀ ವಿದ್ಯಾ ಪದ್ಧತಿಯಲ್ಲಿ ಮೂರು ವಿಧವಾದ ಗುರುಗಳಿರುತ್ತಾರೆ - ಗುರು, ಪರಮಗುರು (ಗುರುವಿನ ಗುರು) ಮತ್ತು ಪರಮೇಷ್ಠಿ ಗುರು (ಪರಮಗುರುವಿನ ಗುರು). ನವಾವರಣ ಪೂಜೆಯಲ್ಲಿ ಈ ಎಲ್ಲಾ ಗುರುಗಳು ಇತರೇ ಹಲವಾರು ಗುರುಗಳೊಂದಿಗೆ ಪೂಜಿಸಲ್ಪಡುತ್ತಾರೆ. ಈ ನಾಮವು ದೇವಿಯು ಗುರುಮಂಡಲದ ರೂಪದಲ್ಲಿದ್ದಾಳೆ ಎಂದು ಹೇಳುತ್ತದೆ. ಗುರು ಮತ್ತು ಲಲಿತಾಂಬಿಕೆಯಲ್ಲಿ ಯಾವುದೇ ವಿಧವಾದ ಭೇದವಿಲ್ಲವೆಂದು ಸೂಚಿಸುವುದು ಈ ನಾಮದ ಹಿನ್ನಲೆಯಾಗಿದೆ. ಪ್ರಥಮ ಅಥವಾ ಆದಿಗುರುವು ಶಿವನಾಗಿದ್ದಾನೆ. ಸಹಸ್ರಾರದಲ್ಲಿ ಶಿವನೊಂದಿಗೆ ಶಕ್ತಿಯು ಸಮಾಗಮ ಹೊಂದುವ ಸ್ಥಳದಲ್ಲಿ ಗುರುವನ್ನು ಪೂಜಿಸಲಾಗುತ್ತದೆ.

Kulottīrṇā कुलोत्तीर्णा (714)

೭೧೪. ಕುಲೋತ್ತೀರ್ಣಾ  

          ಕುಲ ಶಬ್ದದಿಂದ ಪ್ರಾರಂಭವಾಗುವ ಒಂಬತ್ತು ವಿವಿಧ ನಾಮಗಳಿದ್ದು ಅವೆಲ್ಲಕ್ಕೂ ವಿಭಿನ್ನವಾದ ವಿಶ್ಲೇಷಣೆಗಳನ್ನು ಕೊಡಲಾಗಿತ್ತು. ಈ ನಾಮದಲ್ಲಿ ಕುಲ ಎಂದರೆ ಎಲ್ಲಾ ಇಂದ್ರಿಯಗಳ ಒಟ್ಟು ಮೊತ್ತ,  ಅಂತಃಕರಣ (ಆಂತರಿಕವಾಗಿರುವ ಮನಸ್ಸು, ಬುದ್ಧಿ, ಚಿತ್ತ ಮತ್ತು ಅಹಂಕಾರಗಳು) ಹಾಗೂ ಬಾಹ್ಯ ಇಂದ್ರಿಯಗಳು. ಈ ನಾಮವು ದೇವಿಯು ಈ ಎಲ್ಲಾ ಇಂದ್ರಿಯಗಳನ್ನು ಅಧಿಗಮಿಸಿದ್ದಾಳೆ ಎಂದು ಹೇಳುತ್ತದೆ. ಸಗುಣ ಬ್ರಹ್ಮವು ಕ್ರಿಯಾಶೀಲವಾಗಿದ್ದರೆ ನಿರ್ಗುಣ ಬ್ರಹ್ಮವು ಯಾವುದೇ ವಿಧವಾದ ಚಟುವಟಿಕೆಗಳನ್ನು ಹೊಂದಿರದೇ ಅದು ಕೇವಲ ಸಾಕ್ಷಿಯಾಗಿರುತ್ತದೆ. ಬ್ರಹ್ಮದ ಈ ಸಗುಣ ರೂಪವನ್ನೇ ವಿಮರ್ಶ ರೂಪವೆನ್ನಲಾಗುತ್ತದೆ. ಪ್ರಕಾಶ ರೂಪವು ಶಿವನಾಗಿದ್ದರೆ ವಿಮರ್ಶ ರೂಪವು ಶಕ್ತಿಯಾಗಿದೆ.

Bhagārādhyā भगाराध्या (715)

೭೧೫. ಭಗಾರಾಧ್ಯಾ

           ಭಗಾ ಎಂದರೆ ಸೂರ್ಯ ಮಂಡಲ. ದೇವಿಯು ಸೂರ್ಯ ಮಂಡಲದಲ್ಲಿ ಪೂಜಿಸಲ್ಪಡುತ್ತಾಳೆ. ಮಾನವರಿಗೆ ಈ ಸೂರ್ಯ ಮಂಡಲವನ್ನು ಪ್ರವೇಶಿಸಲು ಸಾಧ್ಯವಾಗದು. ಈ ನಾಮವು ಪರೋಕ್ಷವಾಗಿ ದೇವಿಯು ರಹಸ್ಯವಾಗಿ ಪೂಜಿಸಲ್ಪಡಬೇಕು ಎಂದು ಹೇಳುತ್ತದೆ. ೨೭೫ನೇ ನಾಮವು ದೇವಿಯು ಸೂರ್ಯಮಂಡಲದ ಮಧ್ಯದಲ್ಲಿದ್ದಾಳೆ ಎಂದು ಈಗಾಗಲೇ ಹೇಳಿದೆ. ಕೇವಲ ಬ್ರಹ್ಮವು ಮಾತ್ರವೇ ಸೂರ್ಯಮಂಡಲದ ಮಧ್ಯದಲ್ಲಿ ಧ್ಯಾನಿಸಲ್ಪಡುತ್ತದೆ. ಈ ಸಹಸ್ರನಾಮವು, ದೇವಿಯು ಪರಬ್ರಹ್ಮಸ್ವರೂಪಳೆನ್ನುವುದನ್ನು ಪದೇ ಪದೇ ಒತ್ತಿ ಹೇಳುತ್ತದೆ ಹಾಗೆ ದೃಢಪಡಿಸುವ ಹಲವಾರು ನಾಮಗಳಲ್ಲಿ ಇದು ಮತ್ತೊಂದಾಗಿದೆ. ಕಾಮಕಲಾ ರೂಪದ ದೃಷ್ಟಿಯಿಂದ ನೋಡಿದಾಗ ಸೂರ್ಯನು ಒಂದು ಬಿಂದುವನ್ನು ಪ್ರತಿನಿಧಿಸಿದರೆ ಇತರೇ ಎರಡು ಬಿಂದುಗಳು ಚಂದ್ರ ಮತ್ತು ಅಗ್ನಿಯನ್ನು ಪ್ರತಿನಿಧಿಸುತ್ತವೆ. ಛಾಂದೋಗ್ಯ ಉಪನಿಷತ್ತು (೧.೬.೬), "ಸೂರ್ಯನ ಪರಿಧಿಯೊಳಗೆ ಒಂದು ದೇವತೆಯಿದ್ದು ಅದು ಯೋಗಿಗಳಿಂದ ನೋಡಲ್ಪಡುತ್ತದೆ. ಆ ದೇವತೆಯ ಸಂಪೂರ್ಣ ಶರೀರವು ಬಂಗಾರದಂತೆ ಹೊಳೆಯುತ್ತದೆ" ಎಂದು ಹೇಳುತ್ತದೆ.

         ಸಂಸ್ಕೃತದ ಮೊದಲನೇ ಅಕ್ಷರವಾದ अ (ಅ)ವು ई (ಈ)ಯೊಂದಿಗೆ ಸಂಧಿಗೊಳಪಟ್ಟಾಗ ए (ಏ) ಅಕ್ಷರವು ಏರ್ಪಡುತ್ತದೆ (ಅ + ಈ = ಏ  अ + ई = ए). अ (ಅ) ಅಕ್ಷರವು ಶಿವನನ್ನು ಪ್ರತಿನಿಧಿಸಿದರೆ ई (ಈ) ಅಕ್ಷರವು ಶಕ್ತಿಯನ್ನು ಪ್ರತಿನಿಧಿಸುತ್ತದೆ (ನಾಮ ೭೧೨ಕ್ಕೆ ಪ್ರತಿಯಾಗಿ) ಮತ್ತು ए (ಏ) ಶಿವ-ಶಕ್ತಿ ಐಕ್ಯವನ್ನು ಪ್ರತಿನಿಧಿಸುತ್ತದೆ ಮತ್ತು ಅವರಿಬ್ಬರನ್ನು ಗುಪ್ತವಾಗಿ ಸಹಸ್ರಾರದಲ್ಲಿ ಪೂಜಿಸಲಾಗುತ್ತದೆ. ಇಲ್ಲಿ ಸಂಧಿಯಿಂದ ಏರ್ಪಟ್ಟ ए (ಏ) ಅಕ್ಷರವು ಸ್ವಲ್ಪ ಹಚ್ಚು ಕಡಿಮೆ ತ್ರಿಕೋಣವನ್ನು ಹೋಲುತ್ತದೆ. ಶ್ರೀ ಚಕ್ರವು ತ್ರಿಕೋಣಗಳಿಂದಲೇ ರಚಿಸಲ್ಪಟ್ಟಿದ್ದು ಮಧ್ಯದ ತ್ರಿಕೋಣದಲ್ಲಿ ದೇವಿಯು ಪೂಜಿಸಲ್ಪಡುತ್ತಾಳೆ. ಶಿವನು ಬಿಂದುವಿನ ರೂಪದಲ್ಲಿದ್ದರೆ ಶಕ್ತಿಯು ತ್ರಿಕೋಣದ ರೂಪದಲ್ಲಿರುತ್ತಾಳೆ. ೭೧೩, ೭೧೪ ಮತ್ತು ೭೧೫ನೇ ನಾಮಗಳು ೭೧೨ನೇ ನಾಮದ ಮುಂದುವರಿಕೆಯಾಗಿವೆ.

                                                                                   ******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 712 - 715 http://www.manblunder.com/2010/05/lalitha-sahasranamam-712-715.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Tue, 11/19/2013 - 05:49

ಶ್ರೀಧರರೆ "೧೬೧. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೭೧೨ರಿಂದ ೭೧೫
_____________________________
.
೭೧೨. ಈ
ನಾಲ್ಕನೆ ಸಂಸ್ಕೃತಾಕ್ಷರ 'ಈ' ದೇವಿ ಕಾಮಕಲಾ ಸೂಕ್ಷ್ಮ ರೂಪ
ಉಚ್ಛಾರದಲಿ 'ಯೈ' ಪ್ರತಿನಿಧಿತ ವಿಷ್ಣು ಸೋದರಿ ಶಕ್ತಿ ಸ್ವರೂಪ
ಸೃಷ್ಟಿಯುಕ್ತ ಶಕ್ತ ಬೀಜಾಕ್ಷರ, ಸೂಕ್ತ 'ಈಂ' ಷೋಡಶಿಯ ತ್ವರಿತ ಸಿದ್ಧಿ
ಅಮೃತ ಬೀಜಸಾರ, ಕೂಡಲೊಳಿತು ಅಗ್ನಿಬೀಜ, ಚುಕ್ಕೆ ತ್ರಿಪುಟಿ ಶುದ್ಧಿ ||
.
ಇಬ್ಬಾಗವಾಗೆ ಬ್ರಹ್ಮ ಸಾಕಾರಾಕೃತಿ ನಿರಾಕಾರಾಕೃತಿ
ಸಾಕಾರಾಕೃತಿ ಸೀಳಿ ಪುಲ್ಲಿಂಗ-ಸ್ತ್ರೀಲಿಂಗದ ಸಮಶೃತಿ
ಪುಲ್ಲಿಂಗ ರೂಪಿ ವಿಷ್ಣು, ಸ್ತ್ರೀ ರೂಪಿ ಶಕ್ತಿ ಶಿವನ ಸೇರುತ
'ಈ' ಬೀಜಾಕ್ಷರವೆ ವಿಷ್ಣು ಜತೆ ಸೋದರಿ ಶಕ್ತಿ ಸಂಕೇತ ||
.
ಈ ಬೀಜಾಕ್ಷರಕೆ ತ್ರಿಬಿಂದು ಮೇಲಿಟ್ಟೆ ಕಾಮಕಲಾ ಪೂರ್ಣ
ಮೂರು ಬೀಜವು ಸೇರಿ 'ಈಂ' ಬೀಜಾಕ್ಷರ ತ್ರಿಕೋನ ಘನ
ಮೂರರ ಮಹತ್ವ ಸೃಷ್ಟಿಕ್ರಿಯೆಗಿಹ ಸತ್ವ ತ್ರಿಪುಟಿ ಸ್ವರೂಪ
ರಿ-ರೀ-ಲಿ-ಲೀ ಅಮೃತಬೀಜವಿದ್ದಂತೆ, ತ್ರಿಬಿಂದುವಿನರೂಪ ||
.
೭೧೩. ಗುರು-ಮಂಡಲ-ರೂಪಿಣೀ
ಗುರು ಪರಂಪರೆಯೆ ಗುರುಮಂಡಲ, ಅಂತಿಮ ವಾಕ್ ಶ್ರೀ ವಿದ್ಯೆ
ಅಚಾರಣೋಪಾಸನ ಪದ್ದತಿ ಭಿನ್ನ, ವಂಶಾವಳಿ ಮಂಡಲಾ ಮಧ್ಯೆ
ಗುರು-ಪರಮಗುರು-ಪರಮೇಷ್ಟಿಗುರು ಜತೆ ಗುರು ಲಲಿತಾ ರಾಣಿ
ಗೂಢ ಸೂಕ್ಷ್ಮಾರ್ಥ ವಿಶ್ಲೇಷಿಸುತಾ ದೇವಿ ಗುರು ಮಂಡಲ ರೂಪಿಣೀ ||
.
೭೧೪. ಕುಲೋತ್ತೀರ್ಣಾ
ಅಂತಃಕರಣ ಬಾಹ್ಯ ಇಂದ್ರಿಯಗಳ ಒಟ್ಟು ಮೊತ್ತ ಕುಲ
ಮನಸ್ಸು-ಬುದ್ಧಿ-ಚಿತ್ತ-ಅಹಂಕಾರ ಅಂತಃಕರಣದ ಸಕಲ
ಇಂದ್ರಿಯಗಳೆಲ್ಲವ ಅಧಿಗಮಿಸಿಹ ದೇವಿ ಕುಲೋತ್ತೀರ್ಣಾ
ಕ್ರಿಯಾಶೀಲ ಸಗುಣ ಬ್ರಹ್ಮ ವಿಮರ್ಶ, ಸಾಕ್ಷಿಯೆ ನಿರ್ಗುಣ ||
.
೭೧೫. ಭಗಾರಾಧ್ಯಾ
ಸೂರ್ಯ ಮಂಡಲವೆ ಭಗಾ, ದೇವಿ ಸೂರ್ಯ ಮಂಡಲದೆ ಪೂಜಿತೆ
ಕಾಮಕಲಾ ತ್ರಿಪುಟಿಗೊಂದು ಬಿಂದು, ಸೂರ್ಯದೇ ಬ್ರಹ್ಮ ನಿವಸಿತೆ
ಯೋಗಿ ಕಣ್ಣ ಹೊನ್ನ ದೇಹದ ಪರಬ್ರಹ್ಮ, ಅ-ಶಿವ, ಈ-ಶಕ್ತಿ ಕ್ರಿಯಾ
ಸಂಯುಕ್ತ ಏ-ಶಿವಶಕ್ತಿ ಐಕ್ಯ, ಚಕ್ರ ತ್ರಿಕೋನದೆ ಪೂಜಿತೆ ಭಗಾರಾಧ್ಯ ||
.
.
ಧನ್ಯವಾದಗಳೊಂದಿಗೆ 
-ನಾಗೇಶ ಮೈಸೂರು