೧೬೭. ಲಲಿತಾ ಸಹಸ್ರನಾಮ ೭೪೫ರಿಂದ ೭೫೦ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೭೪೫ - ೭೫೦
Jarā-dhvānta-ravi-prabhā जरा-ध्वान्त-रवि-प्रभा (745)
೭೪೫. ಜರಾ-ಧ್ವಾಂತ-ರವಿ-ಪ್ರಭಾ
ಜರಾ ಎಂದರೆ ಮುದಿ ವಯಸ್ಸು, ರವಿ ಎಂದರೆ ಸೂರ್ಯ, ಧ್ವಾಂತ ಎಂದರೆ ಕತ್ತಲೆ ಮತ್ತು ಪ್ರಭಾ ಎಂದರೆ ಬೆಳಗು. ಸೂರ್ಯನು ಕತ್ತಲೆಯನ್ನು ಹೊಡೆದೋಡಿಸುವ ತೆರದಲ್ಲಿ ದೇವಿಯು ಅಜ್ಞಾನವನ್ನು ದೂರಮಾಡುತ್ತಾಳೆ. ಅಜ್ಞಾನವೆಂದು ಇಲ್ಲಿ ಪ್ರಸ್ತಾಪಿಸಿರುವುದು ದೇಹಕ್ಕೆ ಸಂಭಂದಿಸಿದುದಾಗಿದೆ. ದೇಹ ಮತ್ತು ಆತ್ಮಗಳೆರಡೂ ಬೇರೆ. ದೇಹವು ವಿನಾಶ ಹೊಂದುತ್ತದೆ ಆದರೆ ಆತ್ಮವು ನಿತ್ಯವಾದದ್ದು. (ಇಲ್ಲಿ ಆತ್ಮವೆಂದರೆ ಅದು ಜೀವಾತ್ಮ ಮತ್ತು ಪರಮಾತ್ಮ ಎರಡನ್ನೂ ಸೂಚಿಸಬಹುದು. ಆತ್ಮಕ್ಕೆ ಕೊನೆಯಿರಬಹುದು ಆದರೆ ಬ್ರಹ್ಮಕ್ಕೆ ಮೊದಲಾಗಲೀ ಕೊನೆಯಾಗಲೀ ಇಲ್ಲ. ಆತ್ಮಸಾಕ್ಷಾತ್ಕಾರದ ದೃಷ್ಟಿಯಿಂದ ಒಬ್ಬನು ಮೊದಲು ತನ್ನ ಆತ್ಮವನ್ನು ಅರಿಯಬೇಕು ತದನಂತರ ಬ್ರಹ್ಮವನ್ನು ತಿಳಿದುಕೊಳ್ಳಬೇಕು. ಸುಲಭವಾಗಿ ಅರ್ಥ ಮಾಡಿಕೊಳ್ಳುವುದಕ್ಕೋಸ್ಕರ ಆತ್ಮ ಮತ್ತು ಬ್ರಹ್ಮವನ್ನು ಪ್ರತ್ಯೇಕವೆಂದು ಪರಿಗಣಿಸಲಾಗುತ್ತದೆ). ಒಬ್ಬನು ತನ್ನ ಶರೀರಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಟ್ಟರೆ ಅವನನ್ನು ಅಜ್ಞಾನಿಯೆಂದು ಕರೆಯಲಾಗುತ್ತದೆ. ಅನಿತ್ಯ ವಸ್ತುಗಳಿಗೆ ಅಂಟಿಕೊಂಡಿರುವುದು ಅಜ್ಞಾನವಾಗಿದೆ. ಸೂರ್ಯನು ಕತ್ತಲೆಯನ್ನು ಚದುರಿಸುವಂತೆ, ದೇವಿಯು ದೇಹಕ್ಕೆ ಕೊಡುವ ಪ್ರಾಮುಖ್ಯತೆಯ ಅಜ್ಞಾನವನ್ನು ಹೊಡೆದೋಡಿಸುತ್ತಾಳೆ; ಒಬ್ಬನಲ್ಲಿ ಮುದಿತನದ ಕುರಿತಾದ ಭಯವನ್ನು ಹೋಗಲಾಡಿಸುವುದರ ಮೂಲಕ.
ಶ್ರೀಕೃಷ್ಣನು ಭಗವದ್ಗೀತೆಯಲ್ಲಿ (೨.೨೨) ಅದನ್ನು ಹೀಗೆ ವಿವರಿಸುತ್ತಾನೆ, "ಯಾವ ವಿಧವಾಗಿ ಮನುಷ್ಯನು ಹಳೆಯದಾದ ಬಟ್ಟೆಗಳನ್ನು ಬಿಟ್ಟು ಹೊಸದನ್ನು ಧರಿಸುತ್ತಾನೆಯೋ ಅದೇ ವಿಧವಾಗಿ ಬದ್ಧವಾಗಿರುವ ಆತ್ಮವು ಜೀರ್ಣವಾದ ಶರೀರವನ್ನು ತ್ಯಜಿಸಿ ಹೊಸ ಶರೀರವನ್ನು ಪಡೆಯುತ್ತದೆ".
ಈ ನಾಮವು ಒಬ್ಬರು ವಯಸ್ಸಾಗುತ್ತಿರುವ ಶರೀರಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಬಾರದೆಂದು ಹೇಳುತ್ತದೆ ಏಕೆಂದರೆ ಅದು ಪ್ರಕೃತಿ ಸಹಜ ಕ್ರಿಯೆಯಾಗಿದೆ. ದೇವಿಗೆ ನಿಷ್ಠನಾಗಿರುವುದರ ಮೂಲಕ ಒಬ್ಬನು ಮುದಿತನದ ಭಯವನ್ನು ಮತ್ತು ಅಂತಿಮವಾಗಿ ಮರಣದ ಭಯವನ್ನು ಹೋಗಲಾಡಿಸಿಕೊಳ್ಳಬಹುದು. ಇನ್ನಷ್ಟು ವಿವರಗಳನ್ನು ೮೫೧ನೇ ನಾಮದಲ್ಲಿ ನೋಡೋಣ.
Bhāgyabdhi-candrikā भाग्यब्धि-चन्द्रिका (746)
೭೪೬. ಭಾಗ್ಯಾಬ್ಧಿ-ಚಂದ್ರಿಕಾ
ಹಿಂದಿನ ನಾಮವು ಸೂರ್ಯನನ್ನು ಉಲ್ಲೇಖಿಸಿದರೆ ಈ ನಾಮವು ಚಂದ್ರನನ್ನು ಉಲ್ಲೇಖಿಸುತ್ತದೆ. ಸೂರ್ಯ ಮತ್ತು ಚಂದ್ರರು ಆಕೆಯ ಎರಡು ಕಣ್ಣುಗಳು ಎಂದು ಹೇಳಲಾಗುತ್ತದೆ. ದೇವಿಯು ಅದೃಷ್ಟದ ಸಾಗರಕ್ಕೆ ಬೆಳದಿಂಗಳಿನಂತಿದ್ದಾಳೆ. ಸಮುದ್ರದ ಅಲೆಗಳು ಶುಕ್ಲ ಪಕ್ಷದ ಚಂದ್ರನಿಗೆ ಸಮಾನಾಂತರವಾಗಿ ಏರುತ್ತಾ ಹೋಗಿ ಹುಣ್ಣಿಮೆಯ ದಿನದಂದು ಅತ್ಯಂತ ಹೆಚ್ಚಾಗಿರುತ್ತವೆ. ಇದು ಕಾವ್ಯಾತ್ಮಕವಾದ ಹೋಲಿಕೆ. ದೇವಿಯನ್ನು ನೋಡುತ್ತಿದ್ದಂತೆಯೇ ಒಬ್ಬನ ಅದೃಷ್ಟವು ಉನ್ನತವಾಗಿ ಏರುತ್ತದೆ.
Bhakta-citta-keki-ghanā-ghanā बक्त-चित्त-केकि-घना-घना (747)
೭೪೭. ಭಕ್ತ-ಚಿತ್ತ-ಕೇಕಿ-ಘನಾ-ಘನಾ
ದೇವಿಯ ಭಕ್ತರ ಮನಗಳನ್ನು ನವಿಲುಗಳಿಗೆ ಹೋಲಿಸಲಾಗಿದೆ. ಘನಾ-ಘನಾ ಎಂದರೆ ಮಳೆ ಸುರಿಸಬಲ್ಲ ಕಪ್ಪನೆಯ ಮೋಡಗಳು. ನವಿಲುಗಳು ಕಪ್ಪನೆಯ ಮೋಡಗಳನ್ನು ನೋಡಿ ನರ್ತಿಸಲು ತೊಡಗುತ್ತವೆ. ಲಲಿತಾಂಬಿಕೆಯನ್ನು ಕಪ್ಪು ಮೋಡಗಳಿಗೆ ಹೋಲಿಸಲಾಗಿದೆ. ಲಲಿತಾಂಬಿಕೆಯನ್ನು ನೋಡುತ್ತಿದ್ದಂತೆಯೇ ಭಕ್ತರ ಮನಸ್ಸುಗಳು ಪರಮಾನಂದದ ಸ್ಥಿತಿಯನ್ನು ತಲುಪುತ್ತವೆ.
ಹಿಂದಿನ ಮತ್ತು ಈಗಿನ ನಾಮಗಳೆರಡರಲ್ಲೂ ನೋಡುತ್ತಿದ್ದಂತೆಯೇ ಎನ್ನುವುದನ್ನು ಸಾಂದರ್ಭಿಕವಾಗಿ ಉನ್ನತ ಸ್ತರದ ಪ್ರಜ್ಞೆಯನ್ನು ದೇವಿಯ ಮೇಲೆ ಕೇಂದ್ರೀಕರಿಸುವುದರ ಮೂಲಕ ಆಕೆಯೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ಎಂದರ್ಥ, ನೋಡುತ್ತಿದ್ದಂತೆಯೇ ಎನ್ನುವುದನ್ನು ಶಬ್ದಶಃ ಸ್ವೀಕರಿಸಬಾರದು. ನೋಡುವುದೆಂದರೆ ದೇವಿಯನ್ನು ಮಾನಸಿಕವಾಗಿ ಕಲ್ಪಿಸಿಕೊಳ್ಳುವುದು (ಮನಗಾಣುವುದು). ನಾಮ ೭೪೫ರಲ್ಲಿ ದೇಹದ ಪ್ರಾಮುಖ್ಯತೆಯನ್ನು ತ್ಯಜಿಸುವಂತೆ ಮಾಡಿದ ನಂತರ ವಾಗ್ದೇವಿಗಳು ಈಗ ಮನಸ್ಸಿನ ಮಹತ್ವವನ್ನು ಈ ಎರಡು ನಾಮಗಳ (ನಾಮ ೭೪೬ ಮತ್ತು ೭೪೭) ಮೂಲಕ ಒತ್ತುಕೊಟ್ಟು ಹೇಳಿದ್ದಾರೆ. ಇಲ್ಲಿ ಘನಾಘನಾ ಎನ್ನುವುದು ಆಕೆಯ ಕೃಪೆಯ ನಿರಂತರೆತೆಯನ್ನು ಸೂಚಿಸುತ್ತದೆ.
ಶಿವಾನಂದ ಲಹರಿಯ ಸ್ತೋತ್ರವೊಂದರಲ್ಲಿ (೫೩) ಸ್ವಲ್ಪ ಹೆಚ್ಚೂ ಕಡಿಮೆ ಇದೇ ಸಾಲುಗಳಿವೆ. ಆ ಸ್ತೋತ್ರದಲ್ಲಿ ಪಾರ್ವತೀ ದೇವಿಯನ್ನು ಮೋಡಗಳಿಗೆ ಹೋಲಿಸಲಾಗಿದ್ದು ಶಿವನ ಜಟೆಯನ್ನು ಆಕಾಶಕ್ಕೆ ಹೋಲಿಸಲಾಗಿದೆ. ಅದರಲ್ಲಿ ಹೀಗೆ ಹೇಳಲಾಗಿದೆ, "ಶ್ಯಾಮಲವರ್ಣಳೂ, ಘನಸುಂದರಿಯೂ (ಅಂದರೆ ಮೋಡದಂತೆ ಸುಂದರವಾಗಿರುವವಳು) ಆದ ಶೈಲಜೆಯನ್ನು ನೋಡಿ ಆನಂದದಿಂದ ನರ್ತಿಸುತ್ತಿರುವ ವೇದಾಂತವೆಂಬ ಉಪವನದಲ್ಲಿ ವಿಹಾರರಸಿಕನಾದ ನೀಲಕಂಠನೆಂಬ ನವಿಲನ್ನು ನಾನು ಸ್ತುತಿಸುತ್ತೇನೆ". (ಮೋಡವನ್ನು ನೋಡಿ ನವಿಲುಗಳು ಕೇಕೆ ಹಾಕುತ್ತವೆ, ಆದ್ದರಿಂದ ಆದಿ ಶಂಕರರು ಈ ಉಪಮೆಯನ್ನು ಇಲ್ಲಿ ಬಳಸಿಕೊಂಡಿದ್ದಾರೆ. ನವಿಲುಗಳು ಉಂಟುಮಾಡುವ ಶಬ್ದವನ್ನು ಕೇಕ ಎನ್ನುತ್ತಾರೆ).
Roga-parvata-dhambholiḥ रोग-पर्वत-धम्भोलिः (748)
೭೪೮. ರೋಗ-ಪರ್ವತ-ಧಂಭೋಲಿಃ
ರೋಗದ ಪರ್ವತಕ್ಕೆ ದೇವಿಯು ಸಿಡಿಲಾಗಿದ್ದಾಳೆ (ಧಂಬೋಲ). ಸಿಡಿಲುಗಳು ಬಹಳ ಶಕ್ತಿಯುತವಾಗಿದ್ದು ಅವುಗಳಿಗೆ ಪರ್ವತಗಳನ್ನೂ ಸಹ ಒಡೆಯುವ ಸಾಮರ್ಥ್ಯವಿರುತ್ತದೆ. ಸಿಡಿಲು ಎನ್ನುವುದು ದೇವೇಂದ್ರನ ವಜ್ರಾಯುಧವನ್ನೂ ಸಹ ಸೂಚಿಸಬಹುದು; ಈ ಅಸ್ತ್ರವು ಶತ್ರುಗಳನ್ನು ವಿನಾಶಗೊಳಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಒಟ್ಟಾರೆಯಾಗಿ ಈ ನಾಮವು ದೇವಿಯು ತನ್ನ ಭಕ್ತರ ರೋಗಗಳನ್ನು ಗುಣಪಡಿಸುತ್ತಾಳೆಂದು ಹೇಳುತ್ತದೆ.
Mṛtyu-dāru-kuṭhārikā मृत्यु-दारु-कुठारिका (749)
೭೪೯. ಮೃತ್ಯು-ದಾರು-ಕುಠಾರಿಕಾ
ದೇವಿಯು ಮೃತ್ಯು ವೃಕ್ಷಕ್ಕೆ ಕೊಡಲಿಯಾಗಿದ್ದಾಳೆ. ಕಠೋಪನಿಷತ್ತು (೧.೨.೨೫) ಹೇಳುತ್ತದೆ, "ಮರಣವು ಎಲ್ಲರನ್ನೂ ಜಯಿಸುತ್ತದೆ, ಆದರೂ ಸಹ ಆತ್ಮಕ್ಕೆ ಮರಣವು ಕೇವಲ ಒಂದು ರೋಚಕ ಪದಾರ್ಥ ಅಥವಾ ವ್ಯಂಜನವಿದ್ದಂತೆ. ಇದರರ್ಥ ಮಾನವರನ್ನು ಕಾಡುವ ಮರಣ ಭಯವು ಬ್ರಹ್ಮಕ್ಕೆ ಕೇವಲ ಒಂದು ವ್ಯಂಜನವಾಗಿದೆ. ಮರಣ ಭಯವೇ ಮಾನವನ ಅತೀ ಕೆಟ್ಟದಾದ ಭಯ. ಆದರೆ ಯಾರಿಗೆ ದೇವಿಯಲ್ಲಿ ನಂಬಿಕೆಯಿದೆಯೋ, ಅವರಿಗೆ ಮರಣ ಭಯವು ಕಾಡುವುದಿಲ್ಲ. ಒಬ್ಬರಿಗೆ ಜೀವನದಲ್ಲಿ ಇಪ್ಪತ್ತೆಂಟು ವಿಧವಾದ ಯಾತನೆಗಳಿವೆ ಎಂದು ಹೇಳಲಾಗುತ್ತದೆ. ಅವೆಲ್ಲವೂ ಅವಿದ್ಯೆ, ಅಹಂಕಾರ ಮತ್ತು ಕಾಮ ಕ್ರೋಧಾದಿ ಅರಿಷಡ್ವರ್ಗಗಳಿಂದ ಉದ್ಭವಿಸುತ್ತವೆ.
Maheśvarī महेश्वरी (750)
೭೫೦. ಮಹೇಶ್ವರೀ
೨೦೮ನೇ ನಾಮವು ಮಾಹೇಶ್ವರೀ ಆಗಿದೆ. ಮಹೇಶ್ವರನ (ಶಿವನ) ಅರ್ಧಾಂಗಿಯು ಮಹೇಶ್ವರೀ ಆಗಿದ್ದಾಳೆ. ಇದು ಆಕೆಯ ಪರಮೋನ್ನತ ಸ್ಥಾನವನ್ನು ಅಥವಾ ಶ್ರೇಷ್ಠತೆಯನ್ನು ಸೂಚಿಸುತ್ತದೆ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 745 - 750 http://www.manblunder.com/2010/05/lalitha-sahasranamam-745-750.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೧೬೭. ಲಲಿತಾ ಸಹಸ್ರನಾಮ ೭೪೫ರಿಂದ ೭೫೦ನೇ ನಾಮಗಳ ವಿವರಣೆ
ಶ್ರೀಧರರೆ, "೧೬೭. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೭೪೫ - ೭೫೦
_____________________________
.
೭೪೫. ಜರಾ-ಧ್ವಾಂತ-ರವಿ-ಪ್ರಭಾ
ವೃದ್ಧಾಪ್ಯ ಮರಣ ಭೀತಿ ಅನುಚಿತ, ಪ್ರಕೃತಿ ಸಹಜ ಮುದಿತನ ಖಚಿತ
ದೇವಿ ಕರುಣೆಗೆ ಭಯ ನಿರ್ನಾಮ, ಆತ್ಮಕೆ ಬಟ್ಟೆ ನವ ಶರೀರ ಧರಿಸುತ
ರವಿ ತೊಳೆದಂತೆ ಕತ್ತಲೆ, ವಯಸಿನ ಅಜ್ಞಾನವ ದೂರಾಗಿಸುತ ಸುಲಭ
ತನ್ನಾತ್ಮವರಿಸಿ ಬ್ರಹ್ಮವರಿಸುವ ಪರಿ ಲಲಿತೆ, ಜರಾ-ಧ್ವಾಂತ-ರವಿ-ಪ್ರಭಾ ||
.
೭೪೬. ಭಾಗ್ಯಾಬ್ದಿ-ಚಂದ್ರಿಕಾ
ಹುಣ್ಣಿಮೆ ಚಂದ್ರನ ಕಂಡಾಗ ಉಕ್ಕೇರುವಂತೆ ಕಡಲಿನ ಅಲೆ
ದೇವಿಯ ದರ್ಶನದಿಂದಲೆ ಏರಿಕೆ ನಿಜ ಭಕ್ತನ ಅದೃಷ್ಟದಲೆ
ಭಾಗ್ಯಸಾಗರದ ಬೆಳದಿಂಗಳಾಗಿ ಲಲಿತೆ ಭಾಗ್ಯಾಬ್ದಿಚಂದ್ರಿಕಾ
ಸೂರ್ಯಚಂದ್ರರೆ ದೇವಿಗೆ ಕಣ್ಣು, ಕಾಂತಿ ಕರುಣೆ ಸಮರ್ಪಕ ||
.
೭೪೭. ಭಕ್ತ-ಚಿತ್ತ-ಕೇಕಿ-ಘನಾ-ಘನಾ
ಮಳೆಯಾಗೊ ಕಪ್ಪನೆ ಮೋಡಕೆ ಗರಿಬಿಚ್ಚಿ ನವಿಲ ನರ್ತನ
ಲಲಿತಾಂಬಿಕೆಯ ನೋಡುತಲೆ ಪರಮಾನಂದ ಭಕ್ತ ಮನ
ನೋಟವೆನೆ ಮನಗಾಣುವಿಕೆ ನಿರಂತರಕೃಪೆಯ ಸಂವಹನ
ಶಿವನ ನವಿಲಾಗಿಸಿ ಶೈಲಜೆ, ಭಕ್ತ-ಚಿತ್ತ-ಕೇಕಿ-ಘನಾ-ಘನಾ ||
.
೭೪೮. ರೋಗ-ಪರ್ವತ-ಧಂಭೋಲಿಃ
ಧಂಭೋಲ-ಸಿಡಿಲಾಗಿ ಶಕ್ತಿಯುತ, ಪರ್ವತಗಳನೆ ಒಡೆಯುತ
ವಜ್ರಾಯುಧದಂತೆ ಶತ್ರು ವಿನಾಶ ಸಾಮರ್ಥ್ಯ ಅನುರಣಿಸುತ
ಸರ್ವರುಜಾಪಹಾರಿಣಿ ಲಲಿತೆ, ರೋಗಪರ್ವತ ಸಿಡಿಲಾಗಿ ಬಲಿ
ಭಕ್ತರ ರೋಗ ಗುಣಪಡಿಸೊ, ದೇವಿ ರೋಗ-ಪರ್ವತ-ಧಂಭೋಲಿಃ ||
.
೭೪೯. ಮೃತ್ಯು-ದಾರು-ಕುಠಾರಿಕಾ
ಮರಣ ಭಯ ಕಾಡೆ ಮಾನವನ, ಬ್ರಹ್ಮಕದು ಬರಿ ವ್ಯಂಜನ
ದೇವಿಯ ನಂಬೇ ಭಕ್ತರಿಗೆ, ಕಾಡದ ಮರಣ ಭೀತಿ ಯಾತನ
ಅಜ್ಞಾನ ಅಹಂಕಾರ ಅರಿಷಡ್ವರ್ಗಾದಿಗಳಿಂದ ಯಾತನೆ ಲೆಕ್ಕ
ಮೃತ್ಯು ವೃಕ್ಷಕೆ ಕೊಡಲಿ ಲಲಿತೆ, ಮೃತ್ಯು-ದಾರು-ಕುಠಾರಿಕಾ ||
.
೭೫೦. ಮಹೇಶ್ವರೀ
ಮಹೇಶ್ವರ ಶಿವನ ಅರ್ಧಾಂಗಿಯಾಗಿ, ಶಕ್ತಿ ಮಹೇಶ್ವರೀ
ಅರ್ಧ ನಾರೀಶ್ವರಿಯಾಗೀ ಏಕತ್ವದಲಿಹ ಲಲಿತಾ ಪರಿ
ಬ್ರಹ್ಮದಾಜ್ಞಾನುಸಾರ ಜಗ ಪಾಲಿಸೊ ಪರಮೋನ್ನತತೆ
ದೇವಿಗಷ್ಟೆ ಸುಲಲಿತ, ತ್ರಿಕಾರ್ಯ ನಿಭಾಯಿಸಿ ಶ್ರೇಷ್ಠತೆ ||
.
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
In reply to ಉ: ೧೬೭. ಲಲಿತಾ ಸಹಸ್ರನಾಮ ೭೪೫ರಿಂದ ೭೫೦ನೇ ನಾಮಗಳ ವಿವರಣೆ by nageshamysore
ಉ: ೧೬೭. ಲಲಿತಾ ಸಹಸ್ರನಾಮ ೭೪೫ರಿಂದ ೭೫೦ನೇ ನಾಮಗಳ ವಿವರಣೆ
ಈ ಕಂತಿನಲ್ಲಿ ಎಲ್ಲವೂ ಒಂದಕ್ಕಿಂತ ಚೆನ್ನಾಗಿವೆ ನಾಗೇಶರೆ. ಅದರಲ್ಲೂ ಭಾಗ್ಯಾಬ್ದಿ ಚಂದ್ರಿಕಾ ಬಹಳ ಚೆನ್ನಾಗಿದೆ. ಈ ಆವೃತ್ತಿಯನ್ನೇ ಅಂತಿಮಗೊಳಿಸಿ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to ಉ: ೧೬೭. ಲಲಿತಾ ಸಹಸ್ರನಾಮ ೭೪೫ರಿಂದ ೭೫೦ನೇ ನಾಮಗಳ ವಿವರಣೆ by makara
ಉ: ೧೬೭. ಲಲಿತಾ ಸಹಸ್ರನಾಮ ೭೪೫ರಿಂದ ೭೫೦ನೇ ನಾಮಗಳ ವಿವರಣೆ
ಶ್ರೀಧರರೆ, ನಿಮ್ಮ ಸಲಹೆಯಂತೆ ಈ ಆವೃತ್ತಿಯನ್ನು ಅಂತಿಮಗೊಳಿಸುತ್ತಿದ್ದೇನೆ :-)
In reply to ಉ: ೧೬೭. ಲಲಿತಾ ಸಹಸ್ರನಾಮ ೭೪೫ರಿಂದ ೭೫೦ನೇ ನಾಮಗಳ ವಿವರಣೆ by nageshamysore
ಉ: ೧೬೭. ಲಲಿತಾ ಸಹಸ್ರನಾಮ ೭೪೫ರಿಂದ ೭೫೦ನೇ ನಾಮಗಳ ವಿವರಣೆ
ಶ್ರೀಧರರೆ, ಅಂತಿಮ ಕೊಂಡಿ ಸೇರಿಸುತ್ತಿದ್ದೇನೆ.
.https://ardharaatriaalaapagalu.wordpress.com/%e0%b3%a6%e0%b3%a7%e0%b3%ac...
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು