೧೭೦. ಲಲಿತಾ ಸಹಸ್ರನಾಮ ೭೬೪ರಿಂದ ೭೭೦ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೭೬೪-೭೭೦
Svargāpavargadā स्वर्गापवर्गदा (764)
೭೬೪. ಸ್ವರ್ಗಾಪವರ್ಗದಾ
ದೇವಿಯು ಸ್ವರ್ಗ ಹಾಗು ಮುಕ್ತಿಯನ್ನು ಕರುಣಿಸುತ್ತಾಳೆ. ಜೀವಿಯ ಖಾತೆಯಲ್ಲಿ ಸುಕರ್ಮಗಳ ಫಲಶೇಷವಿದ್ದಲ್ಲಿ ಅದಕ್ಕೆ ಸ್ವರ್ಗವು ತಾತ್ಕಾಲಿಕ ವಿರಾಮವನ್ನು ಕೊಡುವ ಸ್ಥಳವಾಗಿದೆ. ಸೃಷ್ಟಿಯಾದ ಜೀವಿಯು ಸ್ಥೂಲ ಶರೀರದ ಮೂಲಕ ಅನುಭವಿಸುವ ಸುಖ ಮತ್ತು ದುಃಖಗಳಗಳೊಂದಿಗೆ ಅವುಗಳು ಸುಖ-ದುಃಖಗಳನ್ನು ಸ್ವರ್ಗ ಅಥವಾ ನರಕದಲ್ಲಿ ಅನುಭವಿಸಬೇಕು. ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ (೯.೨೧), "ಅವುಗಳ ಪುಣ್ಯವಿಶೇಷವು ಮುಗಿಯುವವರೆಗೆ ಜೀವಿಗಳು ವಿಸ್ತೃತವಾದ ಸ್ವರ್ಗಲೋಕದ ಸುಖವನ್ನು ಅನುಭವಿಸಿದ ಮೇಲೆ ಅವು ನಶ್ವರ ಜೀವಿಗಳ ಈ ಲೋಕಕ್ಕೆ ಹಿಂದಿರುಗುತ್ತವೆ", ಎಂದು ಹೇಳುತ್ತಾನೆ.
ಸ್ವರ್ಗ ಮತ್ತು ಅಪವರ್ಗ ಎನ್ನುವುದು ಬೇರೆಯಾಗಿವೆ. ಅಪವರ್ಗ ಎಂದರೆ ಜೀವಿಗೆ ಶಾರೀರಿಕವಾಗಿ ಇರುವುದರಿಂದ ಬಿಡುಗಡೆ ಅಥವಾ ಮುಕ್ತಿಯನ್ನು ಕೊಡುವುದು; ಇಲ್ಲಿ ಅದು ಜನನ-ಮರಣ ಚಕ್ರದಿಂದ ಮುಕ್ತವಾಗುತ್ತದೆ ಇದನ್ನೇ ಮೋಕ್ಷವೆನ್ನುತ್ತಾರೆ.
ಮುಕ್ತಿಯು ಎರಡು ವಿಧದ್ದಾಗಿದೆ. ಒಂದು ಜೀವನಮುಕ್ತಿ ಅಂದರೆ ಜೀವಿಯು ಜೀವಂತವಾಗಿರುವಾಗಲೇ ಮುಕ್ತಿಯನ್ನು ಹೊಂದುವುದು. ಇನ್ನೊಂದು ವಿದೇಹಮುಕ್ತಿ ಎಂದರೆ ಮರಣದ ನಂತರ ಮುಕ್ತಿಯನ್ನು ಹೊಂದುವುದು. ಈ ಎರಡೂ ವಿಧವಾದ ಮುಕ್ತಿಗಳನ್ನು ಜ್ಞಾನದಿಂದ ಮಾತ್ರವೇ ಹೊಂದಬಹುದು. ಜೀವನ್ಮುಕ್ತನಲ್ಲಿ ಸೂಕ್ಷ್ಮವಾದ ಪೂರ್ವಜನ್ಮದ ಕರ್ಮಶೇಷವು (ಪ್ರಾರಬ್ಧ ಕರ್ಮವು) ವಿವೇಕಾಗ್ನಿಯಿಂದ ಇನ್ನೂ ಸಂಪೂರ್ಣವಾಗಿ ನಾಶವಾಗದೇ ಸುಪ್ತವಾಗಿ ಇರಬಹುದು. ಕೆಲವರು ತಮ್ಮ ಪೂರ್ವ ಜನ್ಮದ ಕರ್ಮಶೇಷವನ್ನು ಕೆಲವೊಂದು ಕ್ರಿಯೆಗಳಿಂದ ಮನೋಲೋಕದಲ್ಲಿ (astral cosmos) ಸುಟ್ಟು ಹಾಕುತ್ತಾರೆ.
ಇನ್ನಷ್ಟು ವಿಷಯಗಳು: ಜೀವಿಗಳು ಸ್ವರ್ಗ ಅಥವಾ ನರಕದಲ್ಲಿ ವಿಚಿತ್ರವಾದ ರೂಪಗಳನ್ನು ತೆಳೆಯುತ್ತವೆ ಎಂದು ಹೇಳಲಾಗುತ್ತದೆ. ಅಂತಹ ರೂಪಗಳಿಗೆ ಕುಡಿಯಲು ಮತ್ತು ತಿನ್ನಲು ಬಾಯಿಗಳಿರುವುದಿಲ್ಲವಂತೆ. ಅವುಗಳು ತಮ್ಮ ಮೂಗುಗಳಿಂದ ಆಹಾರವನ್ನು ತಿನ್ನುತ್ತವೆಯಂತೆ. ಅವುಗಳು ಹುರಿದ ಎಳ್ಳು ಕಾಳಿನ ಸುವಾಸನೆಯನ್ನು ಇಷ್ಟಪಡುತ್ತವೆ ಎಂದು ಹೇಳಲಾಗುತ್ತದೆ. (ಎಳ್ಳನ್ನು ಸಂಸ್ಕೃತದಲ್ಲಿ ತಿಲ ಎನ್ನುತ್ತಾರೆ ಮತ್ತು ಅದರ ಸಸ್ಯಶಾಸ್ತ್ರೀಯ ಹೆಸರು Sesamum indicum). ವಾರ್ಷಿಕ ತಿಥಿಗಳನ್ನು ಮಾಡುವುದರ ಮೂಲಕ ಪೂರ್ವಿಕರ ಆತ್ಮಗಳನ್ನು ತೃಪ್ತಿ ಪಡಿಸಲಾಗುತ್ತದೆ. ಅಂತಹ ಕ್ರಿಯೆಗಳಲ್ಲಿ ಅವರನ್ನು ಪ್ರಾರ್ಥಿಸಲು ಎಳ್ಳಿನ ಬೀಜಗಳನ್ನು ಉಪಯೋಗಿಸಲಾಗುತ್ತದೆ.
Śuddhā शुद्धा (765)
೭೬೫. ಶುದ್ಧಾ
ದೇವಿಯು ಪರಿಶುದ್ಧಳಾಗಿದ್ದಾಳೆ ಅಥವಾ ಆಕೆಯು ಶುದ್ಧತೆಯ ಮೂರ್ತರೂಪವಾಗಿದ್ದಾಳೆ. ಶುದ್ಧತೆಯು ಹಿಂದಿನ ನಾಮದಲ್ಲಿ ಚರ್ಚಿಸಲಾದ ಮುಕ್ತಿದಾಯಕ ಜ್ಞಾನವನ್ನು ಕೊಡುತ್ತದೆ. ಕಲೆ ಅಥವಾ ಕಶ್ಮಲಗಳನ್ನು ಅವಿದ್ಯೆ ಎನ್ನಲಾಗುತ್ತದೆ. ದೇವಿಯು ಇಂತಹ ಕಲೆಗಳಿಂದ ಮುಕ್ತವಾಗಿದ್ದಾಳೆ.
Japā-puṣpa-nibhākṛtiḥ जपा-पुष्प-निभाकृतिः (766)
೭೬೬. ಜಪಾ-ಪುಷ್ಪ-ನಿಭಾಕೃತಿಃ
ಜಪಾ-ಪುಷ್ಪವೆಂದರೆ ದಾಸವಾಳದ ಹೂವು. ಧ್ಯಾನ ಶ್ಲೋಕಗಳಲ್ಲಿ ಉಲ್ಲೇಖಿತವಾಗಿರುವ ಕೆಂಪು ದಾಸವಾಳ ಹೂವಿನ ಮೈಬಣ್ಣವನ್ನು ದೇವಿಯು ಹೊಂದಿದ್ದಾಳೆ.
Ojovatī ओजोवती (767)
೭೬೭. ಓಜೋವತೀ
ಓಜಸ್ ಎಂದರೆ ದೇಹದ ಪ್ರಾಣಶಕ್ತಿ, ದೇಹವನ್ನು ಬೆಚ್ಚಗಿಡುವ ಮತ್ತು ದೇಹದ ಸಮಸ್ತ ಚಟುವಟಿಕೆಗಳನ್ನು ಚಲನಶೀಲವಾಗಿಸುವ ಪ್ರಾಣತತ್ವವಾಗಿದೆ. ಓಜಸ್ಸನ್ನು ದೇಹದ ಎಂಟನೇ ವಸ್ತುವೆಂದು ಗುರುತಿಸಲಾಗುತ್ತದೆ. ಮೆದುಳಿನ ಬಳ್ಳಿಯಲ್ಲಿ ಸೂಕ್ಷ್ಮವಾದ ಪ್ರಾಣಶಕ್ತಿ ಇರುತ್ತದೆ. ಇದು ಜ್ಞಾನೆಂದ್ರಿಯಗಳೆಂದು ಕರೆಯಲ್ಪಡುವ ಪಂಚಂದ್ರಿಯಗಳ ಸಂಯುಕ್ತ ಗ್ರಹಣ ಶಕ್ತಿಯಾಗಿದೆ. ನಾವೇ ಏನನ್ನೇ ಆಗಲಿ ಆಸ್ವಾದಿಸಿದಾಗ ಅದು ಆಹಾರ ಅಥವಾ ಯಾವುದೇ ಗ್ರಹಿಕೆಯಾಗಲಿ ಅದು ಮೊದಲು ಮೆದುಳಿನ ಬಳ್ಳಿಯಲ್ಲಿ ಓಜಸ್ಸಾಗಿ ಪರಿವರ್ತಿತವಾಗುತ್ತದೆ.
ಆಯುರ್ವೇದವು ಏಳು ವಿಧವಾದ ಧಾತುಗಳು ಅಥವಾ ಸಪ್ತಧಾತುಗಳು ದೇಹದಲ್ಲಿ ಇರುತ್ತವೆಂದು ಹೇಳುತ್ತದೆ. ಅವುಗಳೆಂದರೆ, ದುಗ್ದರಸ, ರಕ್ತ, ಮಾಂಸ, ಕೊಬ್ಬು, ಮೂಳೆ, ಮಜ್ಜೆ ಮತ್ತು ಜನ್ಮಕಾರಕ ರಸಗಳು. ಓಜಸ್ಸು ಎಂಟನೆಯ ಧಾತುವಾದರೆ, ಕೂದಲು ಮತ್ತು ಚರ್ಮವನ್ನು ಸೇರಿಸಿಕೊಂಡು ಹತ್ತು ಧಾತುಗಳೆಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಆಯುರ್ವೇದವು ಓಜಸ್ಸನ್ನು ಪರಾ-ಓಜಸ್ ಮತ್ತು ಅಪರಾ-ಓಜಸ್ ಎಂದು ವಿಭಜಿಸುತ್ತದೆ. ಓಜಸ್ಸಿನ ಪ್ರಮಾಣ ಮತ್ತು ಅದು ಇರುವ ಸ್ಥಾನದ ಕುರಿತಾಗಿ ಎರಡು ವಿಧವಾದ ವ್ಯಾಖ್ಯಾನಗಳಿವೆ. ಇಲ್ಲಿ ಮೇಲೆ ತಿಳಿಸಿರುವ ವಿವರಗಳನ್ನು ಬದಿಗಿರಿಸಿ ಓಜಸ್ಸಿನ ಪ್ರಮಾಣವು ಎರಡು ಅಂಗೈಗಳನ್ನು ಕಿರುಬೆರಳಿನ ಪ್ರದೇಶದಲ್ಲಿ ಒಂದುಗೂಡಿಸಿದಾಗ ಅದರಲ್ಲಿನ ಅರ್ಧ ಪ್ರಮಾಣದಷ್ಟು ಓಜಸ್ಸಿರುತ್ತದೆಂದು ಹೇಳಲಾಗುತ್ತದೆ (ಅರ್ಧ ಬೊಗಸೆಯಷ್ಟು).
ಇನ್ನೊಂದು ಸಿದ್ಧಾಂತವು ಪ್ರಾಣಧಾತುವಾಗಿರುವ ಓಜಸ್ಸು ಕೇವಲ ಎಂಟು ಹನಿಗಳಷ್ಟಿದ್ದು ಅದು ಹೃದಯದಲ್ಲಿ ಇರುತ್ತದೆ ಎಂದು ಹೇಳುತ್ತದೆ. ಇವರೆಡರಲ್ಲಿಯೂ ಒಂದು ಸಾಮಾನ್ಯ ಅಂಶವೇನೆಂದರೆ ಓಜಸ್ಸಿಲ್ಲದಿದ್ದರೆ ಜೀವಿಯ ಅಸ್ತಿತ್ವವು ಇಲ್ಲವೆನ್ನುವುದು. ಅದು ಭ್ರೂಣದ ಅವತರಿಣೆಕೆಯ ಆರಂಭವನ್ನು ಸೂಚಿಸುತ್ತದೆ. ಅಂಡಾಣು ಮತ್ತು ವೀರ್ಯಾಣು ಇವುಗಳ ಸಂಯೋಗದ ನಂತರ ಜೀವಿಯು ಈ ಓಜಸ್ಸಿನಲ್ಲಿ ಇರಿಸಲ್ಪಡುತ್ತದೆ ಎಂದು ಹೇಳಲಾಗುತ್ತದೆ (ಚರಕ ಸಂಹಿತದ ೩೦ನೇ ಅಧ್ಯಾಯದ ೯ನೇ ಸೂತ್ರದಲ್ಲಿ ಇದು ಉಲ್ಲೇಖವಾಗಿದೆ). ಇದು ಸ್ಪಷ್ಟವಾಗಿ ಮಾನವನು ಜೀವಿಸಲು ಅವಶ್ಯವಿರುವ ಶಕ್ತಿಯ ಮಹತ್ವವನ್ನು ವಿವರಿಸುತ್ತದೆ. ದೇವಿಯು ಓಜಸ್ಸಿನ ರೂಪದಲ್ಲಿದ್ದಾಳೆ ಮತ್ತು ಇಲ್ಲಿ ಪ್ರಸ್ತಾಪಿಸಿರುವ ವಿಷಯದಿಂದ ದೇವಿಯು ಹೃದಯದಲ್ಲಿ ನಿವಸಿಸುತ್ತಾಳೆನ್ನುವುದು ದೃಢ ಪಡುತ್ತದೆ.
Dyuti-dharā द्युति-धरा (768)
೭೬೮. ದ್ಯುತಿ-ಧರಾ
ದೇವಿಯು ಉತ್ಕೃಷ್ಟವಾಗಿ ಹೊಳೆಯುತ್ತಾಳೆ. ಈ ಬೆಳಗುವಿಕೆಯು ನಾನು ಎನ್ನುವ ಪ್ರಜ್ಞೆಯ (ಅಹಂಕಾರದ) ಆರಂಭಿಕ ಮತ್ತು ಅಂತಿಮ ಹಂತಗಳಿಂದ ಉಂಟಾಗುತ್ತದೆ. ಇಲ್ಲಿ ‘ಅಹಂ’ ಎನ್ನುವುದು ಈ ಸಮಸ್ತ ಬ್ರಹ್ಮಾಂಡದ ಒಟ್ಟು ಜ್ಞಾನವಾಗಿದೆ, ಮತ್ತದು ದೇವಿಯ ಸೃಷ್ಟಿಕಿರಣಗಳ ವ್ಯಕ್ತವಾಗುವಿಕೆಯಾಗಿದೆ.
Yajña-rūpā यज्ञ-रूपा (769)
೭೬೯.ಯಜ್ಞ-ರೂಪಾ
ವಿಷ್ಣುವು ಯಜ್ಞಗಳ ಅಂತಿಮ ಅಧಿಕಾರಿಯಾಗಿದ್ದಾನೆ. ಯಜ್ಞ ಎನ್ನುವುದು ಅಗ್ನಿಯಲ್ಲಿ ಮಂತ್ರೋಚ್ಛಾರಣೆಯೊಂದಿಗೆ ಆಹುತಿಗಳನ್ನು (ಹವಿಸ್ಸುಗಳನ್ನು) ಅರ್ಪಿಸುವ ಒಂದು ಆಚರಣೆಯಾಗಿದೆ. ಬೆಂಕಿಯ ಅಧಿದೇವತೆಯಾದ ಅಗ್ನಿಯು ಹವಿಸ್ಸುಗಳನ್ನು ಆಯಾ ದೇವತೆಗಳಲ್ಲಿಗೆ ಕೊಂಡೊಯ್ಯುವ ವಾಹಕವಾಗಿದ್ದಾನೆ. ಯಜುರ್ವೇದವು, ’ಯಜ್ಞೋ ವೈ ವಿಷ್ಣುಃ ಅಂದರೆ ಯಜ್ಞವೇ ವಿಷ್ಣು (ವೈ ಎಂದರೆ ಖಂಡಿತವಾಗಿ, ಅಂದರೆ ಒತ್ತು ಕೊಡುವ ಅಂಶ. ಇದನ್ನು ಋಗ್ವೇದದಲ್ಲಿ ವಿರಳವಾಗಿ ಬಳಸಿದರೆ ಅಥರ್ವ ವೇದದಲ್ಲಿ ಪದೇ ಪದೇ ಬಳಸಲಾಗಿದೆ). ಯಜ್ಞದ ಉದ್ದೇಶ ತ್ಯಾಗವಾಗಿದೆ. ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ (೧೦.೨೫), "ಯಜ್ಞಗಳಲ್ಲಿ ನಾನು ಜಪ ಯಜ್ಞ", ಎಂದು ಹೇಳಿದ್ದಾನೆ. ಮಂತ್ರಗಳನ್ನು ಸಂಪೂರ್ಣ ಎಚ್ಚರಿಕೆಯಿಂದ ಪಠಿಸುವುದೇ ಜಪವಾಗಿದೆ. ವಿಷ್ಣು ಸಹಸ್ರನಾಮದ ೪೫೫ನೇ ನಾಮವು ‘ಯಜ್ಞಃ’ ಆಗಿದೆ. ಈ ಮಾಹಿತಿಯ ಆಧಾರದ ಮೇಲೆ ದೇವಿಯು ವಿಷ್ಣುವಿನ ಸ್ವರೂಪದಲ್ಲಿದ್ದಾಳೆ ಎಂದು ಹೇಳಲಾಗಿದೆ.
ವೈದಿಕ ವಿಶ್ಲೇಷಗಳನ್ನಾಧರಿಸಿದ ವ್ಯಾಖ್ಯಾನಗಳ ಪ್ರಕಾರ ಯಜ್ಞವೆಂದರೆ ಭಕ್ತಿ. ಆದರೆ ಸಾಮಾನ್ಯವಾಗಿ ವೈದಿಕ ಸಾಹಿತ್ಯವು ಯಜ್ಞವೆಂದರೆ ಆಹುತಿ ಅಥವಾ ಹವಿಸ್ಸುಗಳು ಎಂದು ಹೇಳುತ್ತದೆ. ದೇವಿಯು ಭಕ್ತಿಯುತವಾಗಿ ಪೂಜಿಸಲ್ಪಡುತ್ತಾಳೆ ಅಥವಾ ದೇವಿಯು ಯಜ್ಞಗಳಿಂದುಂಟಾಗಿದ್ದಾಳೆ; ಏಕೆಂದರೆ ಬಹಳಷ್ಟು ಯಜ್ಞಗಳನ್ನು ದೇವಿಯ ಪ್ರೀತ್ಯರ್ಥವಾಗಿ ಮಾಡುತ್ತಾರೆ (ಶಕ್ತಿ ಉಪಾಸನೆ ಮತ್ತು ತಾಂತ್ರಿಕ ಆಚರಣೆಗಳಲ್ಲಿ). ಆದರೆ, ಅತ್ಯುನ್ನತವಾದ ಯಜ್ಞವೆಂದರೆ ಒಬ್ಬನು ತನ್ನ ಆತ್ಮವನ್ನು ತಾನು ಪೂಜಿಸುವುದು ಎಂದು ಹೇಳಲಾಗುತ್ತದೆ.
Priya-vratā प्रिय-व्रता (770)
೭೭೦. ಪ್ರಿಯ-ವ್ರತಾ
ದೇವಿಯು ವ್ರತ ಅಥವಾ ಪ್ರತಿಜ್ಞೆಗಳನ್ನು ಇಷ್ಟಪಡುತ್ತಾಳೆ. ವ್ರತವೆಂದರೆ ದೃಢವಾದ ಸಂಕಲ್ಪದಿಂದ ಕೆಲವೊಂದು ಕ್ರಿಯೆಗಳಿಂದ ದೂರ ಉಳಿಯುವುದು. ಬಹುತೇಕ ಇಂತಹ ವ್ರತಗಳನ್ನು ದೇವ-ದೇವಿಯರನ್ನು ಸಂತುಷ್ಟ ಪಡಿಸುವುದಕ್ಕಾಗಿ ಕೈಗೊಳ್ಳಲಾಗುತ್ತದೆ. ದೇವಿಯು ಇತರೇ ದೇವ-ದೇವಿಯರ ಕುರಿತಾಗಿ ಕೈಗೊಳ್ಳುವ ವ್ರತಾಚರಣೆಗಳಿಂದಲೂ ಸಹ ಸಂತೋಷಗೊಳ್ಳುತ್ತಾಳೆ. ದೇವಿಯು ಎರಡು ಕಾರಣಗಳಿಗಾಗಿ ಸಂತೋಷಗೊಳ್ಳುತ್ತಾಳೆ. ಮೊದಲನೇ ಕಾರಣವೆಂದರೆ ಆಕೆಯ ಬ್ರಹ್ಮವಾಗಿದ್ದಾಳೆ (ಸಗುಣ ಹಾಗು ನಿರ್ಗುಣ). ಎರಡನೇ ಅಂಶವೆಂದರೆ ಈ ಸಮಸ್ತ ಬ್ರಹ್ಮಾಂಡವು ಶಿವ ಮತ್ತು ಶಕ್ತಿಯರ (ಪುರುಷ ಮತ್ತು ಪ್ರಕೃತಿಯರ) ರೂಪಾಂತರವಾಗಿದೆ.
ಕೃಷ್ಣನೂ ಸಹ ಭಗವದ್ಗೀತೆಯಲ್ಲಿ (೭.೨೧), "ಯಾರು ಯಾವುದೇ ವಿಧವಾದ ದಿವ್ಯ ರೂಪದಲ್ಲಿ ನನ್ನನ್ನು ಪೂಜಿಸಿದರೂ ಸಹ ನಾನು ಅವರಿಗೆ ಅದೇ ರೂಪದಲ್ಲಿ ವಿಶ್ವಾಸವನ್ನುಂಟು ಮಾಡುತ್ತೇನೆ" ಎಂದು ಹೇಳುತ್ತಾನೆ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 764 - 770 http://www.manblunder.com/2010/05/lalitha-sahasranamam-764-770.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.