೧೭೫. ಲಲಿತಾ ಸಹಸ್ರನಾಮ ೭೯೦ರಿಂದ ೭೯೨ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೭೯೦-೭೯೨
Parāparā परापरा (790)
೭೯೦. ಪರಾಪರಾ
ಬ್ರಹ್ಮಕ್ಕೆ ಮೂರು ವಿಧವಾದ ರೂಪಗಳಿವೆ, ಅವೆಂದರೆ ಪರಾ, ಅಪರಾ ಮತ್ತು ಪರಾಪರಾ. ಈ ನಾಮವು ಮೂರನೆಯದಾದ ಪರಾಪರಾವನ್ನು ಕುರಿತು ಹೇಳುತ್ತದೆ. ಈ ಮೂರು ವಿವಿಧ ರೂಪಗಳನ್ನು ಕುರಿತು ಇದಾಗಲೇ ’ಪರಾ’ದಲ್ಲಿ (ನಾಮ ೩೬೬) ಚರ್ಚಿಸಲಾಗಿದೆ.
೩೬೬ನೇ ನಾಮದ ಚರ್ಚೆಯ ಸಂಕ್ಷಿಪ್ತ ಅಂಶಗಳನ್ನು ಇಲ್ಲಿ ಪುನಃ ಕೊಡಲಾಗಿದೆ. ’ಪರಾ’ವು ಮೂರು ಹಂತಗಳನ್ನು ಒಳಗೊಂಡಿದೆ. ಮೂಲ ಪರಾ ಸ್ವರೂಪವು ಪರಮೋನ್ನತವಾದದ್ದೆಂದು ಪರಿಗಣಿಸಲ್ಪಟ್ಟು ಅದು ಸಂಪೂರ್ಣ ಶಕ್ತಿಯನ್ನೊಳಗೊಂಡಿರುತ್ತದೆ. ವಿಕಾಸ ಹೊಂದುವುದಕ್ಕಾಗಿ, ಅದು ನಿಧಾನವಾಗಿ ತನ್ನ ಪರಮೋನ್ನತ ಸ್ಥಾನವನ್ನು ಕಳಚಿಕೊಳ್ಳುತ್ತಾ ತನ್ನ ಶಕ್ತಿಯ ಸ್ಥಾಯಿಯನ್ನೂ ಕಡಿಮೆಗೊಳಿಸಿಕೊಳ್ಳುತ್ತಾ ಪರಾ-ಪರಾ ಆಗಿ ಮಾರ್ಪಾಡುಹೊಂದುತ್ತದೆ ಮತ್ತು ಈ ಹಂತದಲ್ಲಿ ’ಪರಾ’ವು ಉನ್ನತ ಸ್ಥಾಯಿಯ ಕನಿಷ್ಠ ಮಟ್ಟದಲ್ಲಿ ಇರತ್ತದೆ. ಇದು ವಿಕಾಸದ ನಿಖರವಾದ ಹಂತದಲ್ಲಿ ತನ್ನ ಶಕ್ತಿಯನ್ನು ಮತ್ತಷ್ಟು ಕಳೆದುಕೊಳ್ಳುತ್ತದೆ ಹಾಗು ಅದು ಅಪರಾ ಆಗಿ ಮಾರ್ಪಾಡುಗೊಳ್ಳುತ್ತದೆ ಮತ್ತು ಈ ಹಂತದಲ್ಲಿ ಅದು ತನ್ನ ಉನ್ನತ ಸ್ಥಾಯಿಯನ್ನು ಕಳೆದುಕೊಂಡು ವಿಕಾಸ ಹೊಂದುತ್ತದೆ.
ಯಾವಾಗ ಬ್ರಹ್ಮವು ಸರ್ವವ್ಯಾಪಕವಾಗಿದೆ ಎಂದು ಹೇಳಲಾಗುತ್ತದೆಯೋ ಆಗ ಅದಕ್ಕೆ ಉನ್ನತವಾದ ಮತ್ತು ಕೆಳಸ್ತರದ ಎರಡೂ ವಿಧವಾದ ಗುಣಗಳಿರಬೇಕು. ಶ್ರೀ ರುದ್ರಂ ಈ ಅಂಶವನ್ನು ಬಹಳ ಸುಂದರವಾಗಿ ವಿವರಿಸುತ್ತದೆ. ಬ್ರಹ್ಮವು ಕೇವಲ ಒಡೆಯ ಮಾತ್ರವೇ ಅಲ್ಲ ಅದು ಸೇವಕನೂ ಹೌದು. ಅವನು ಕೇವಲ ದಾತನೊಂದೇ ಅಲ್ಲ ಸ್ವೀಕರಿಸುವವನೂ ಅವನೇ ಆಗಿದ್ದಾನೆ. ಅವನು ಕೇವಲ ಸೃಷ್ಟಿಕರ್ತ ಮಾತ್ರನಲ್ಲ ಅವನು ವಿನಾಶಕನೂ ಅಗಿದ್ದಾನೆ. ಈ ಸಮಸ್ತ ವಿಶ್ವದಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ವಿಧವಾದ ಗುಣಗಳು ಬ್ರಹ್ಮದ ಈ ಪರ ಮತ್ತು ಅಪರ ಅಂಶಗಳ ಮಧ್ಯದಲ್ಲಿಯೇ ಇರಿಸಲ್ಪಟ್ಟಿವೆ. ಇದುವೇ ಬ್ರಹ್ಮದ ಅದ್ವಿತೀಯ ಗುಣವಾಗಿದೆ. ಎಲ್ಲಿಯವರೆಗೆ ಬ್ರಹ್ಮದ ಈ ಗುಣವನ್ನು ಸಂಪೂರ್ಣವಾಗಿ ಅರಿಯಲಾಗದೋ ಅಲ್ಲಿಯವರೆಗೆ ಬ್ರಹ್ಮವನ್ನು ಸಾಕ್ಷಾತ್ಕರಿಸಿಕೊಳ್ಳಲಾಗದು. ಇದನ್ನು ಇನ್ನಷ್ಟು ಸುಲಭವಾಗಿ ತಿಳಿಸಬೇಕೆಂದರೆ, ಒಂದು ಮಾರಣಾಂತಿಕ ಸರ್ಪ ಮತ್ತು ಒಬ್ಬ ಪರಮಶ್ರೇಷ್ಠನಾದ ಋಷಿ ಇಬ್ಬರೂ ಬ್ರಹ್ಮವಾಗಿದ್ದಾರೆ. ನಾವು ಮಾಯೆಯ ಪ್ರಭಾವಕ್ಕೊಳಪಟ್ಟು ಅವುಗಳ ರೂಪಗಳಿಂದ ಭ್ರಮೆಗೊಳಗಾಗಿ ಆಂತರ್ಯದಲ್ಲಿರುವ ಬ್ರಹ್ಮವನ್ನು (ಆತ್ಮದ ಸಾರ್ವತ್ರಿಕತೆಯನ್ನು) ಅರಿಯಲು ವಿಫಲರಾಗುತ್ತೇವೆ. ರಮಣ ಮಹರ್ಷಿಗಳು (ರಮಣ ಗೀತೆ, ಶ್ಲೋಕ ೩೩) ಹೀಗೆ ಹೇಳುತ್ತಾರೆ, "ಅಜ್ಞಾನಿಗಳು ಕೇವಲ ನಾಮ ಮತ್ತು ರೂಪಗಳನ್ನಷ್ಟೇ ಗ್ರಹಿಸುತ್ತಾರೆ". ಕೃಷ್ಣನು ಭಗವದ್ಗೀತೆಯಲ್ಲಿ (೯.೨೯), "ನಾನು ಸಮಸ್ತ ಭೂತಗಳಲ್ಲಿ ಸಮಾನವಾಗಿರುತ್ತೇನೆ; ನನಗೆ ಶತ್ರುವೂ ಇಲ್ಲ ಮಿತ್ರನೂ ಇಲ್ಲ" ಎಂದು ಹೇಳಿದ್ದಾನೆ.
ಪ್ರಶ್ನ ಉಪನಿಷತ್ತು (೫.೨) ಹೀಗೆ ಹೇಳುತ್ತದೆ, "ಪರಂ ಚಾಪರಂ ಚ ಬ್ರಹ್ಮ" ಅಂದರೆ ಇದು ನಿರ್ಗುಣ ಬ್ರಹ್ಮವಾಗಿದೆ (ಪರ) ಮತ್ತು ಸಗುಣ ಬ್ರಹ್ಮವಾಗಿದೆ (ಅಪರ). ಬ್ರಹ್ಮವು ಯಾವಾಗಲೂ ಒಂದೇ ಆಗಿರುತ್ತದೆ ಆದರೆ ನಮ್ಮ ಅನುಕೂಲಕ್ಕೋಸ್ಕರ ಮತ್ತು ಸುಲಭವಾಗಿ ಅರ್ಥೈಸಿಕೊಳ್ಳಲು ನಾವು ಬ್ರಹ್ಮವನ್ನು ಸಗುಣ ಮತ್ತು ನಿರ್ಗುಣ ಬ್ರಹ್ಮವೆಂದು ವಿಭಜಿಸಿದ್ದೇವೆ. ಇದನ್ನು ಗೊಂದಲಕ್ಕೆಡೆ ಮಾಡದಂತೆ ಸುಲಭವಾಗಿ ಹೀಗೆ ವಿವರಿಸಬಹುದು. ಶಿವನು ನಿರ್ಗುಣ ಬ್ರಹ್ಮವಾದರೆ, ಶಕ್ತಿಯು ಸಗುಣ ಬ್ರಹ್ಮವಾಗಿದೆ ಮತ್ತು ಶಿವ-ಶಕ್ತಿಯು ಪರಬ್ರಹ್ಮವಾಗಿದೆ. ಇದನ್ನು ಇನ್ನಷ್ಟು ವಿಶದವಾಗಿ ೭೯೨ನೇ ನಾಮದಲ್ಲಿ ವಿವರಿಸಲಾಗಿದೆ.
ಮುಂಡಕ ಉಪನಿಷತ್ತು (೧.೧.೪) ಹೀಗೆ ಹೇಳುತ್ತದೆ, "ಎರಡು ವಿಧವಾದ ಜ್ಞಾನಗಳಿವೆ; ಪರ ಎಂದರೆ ಶ್ರೇಷ್ಠವಾದ ಬ್ರಹ್ಮಾಂಡ ಜ್ಞಾನ ಮತ್ತು ಅಪರ ಎಂದರೆ ಕೆಳಸ್ತರದ ಜ್ಞಾನ, ಇದು ತೋರಿಕೆಯ ವಿಶ್ವಕ್ಕೆ ಸಂಭಂದಿಸಿದುದಾಗಿದೆ. ಎರಡು ವಿಧವಾದ ವಿದ್ಯೆಗಳನ್ನು ತಿಳಿಯಬೇಕೆಂದು ಬ್ರಹ್ಮಜ್ಞಾನಿಗಳು ಹೇಳುತ್ತಾರೆ ಅವು ಬ್ರಹ್ಮವಿದ್ಯೆ (ಪರಾ ವಿದ್ಯೆ) ಮತ್ತು ಲೌಕಿಕ ವಿದ್ಯೆ (ಅಪರಾ ವಿದ್ಯೆ). ಮುಂದಿನ ಶ್ಲೋಕವು (೧.೧.೫) ಈ ವಿಷಯವನ್ನು ಮತ್ತಷ್ಟು ವಿವರಿಸುತ್ತಾ ಹೀಗೆ ಹೇಳುತ್ತದೆ, "ಅಪರಾ ವಿದ್ಯೆಯು ಯಾವುದೆಂದರೆ ಅದು - ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ, ಶಿಕ್ಷಾ, ಕಲ್ಪ, ವ್ಯಾಕರಣ, ನಿರುಕ್ತ, ಛಂದಸ್ಸು, ಜ್ಯೋತಿಷ್ಯವಾಗಿದೆ ಮತ್ತು ಪರಾ ವಿದ್ಯೆಯು ಯಾವುದರಿಂದ ಅಕ್ಷರವು (ವಿನಾಶವಿಲ್ಲದ್ದು ಅಂದರೆ ಬ್ರಹ್ಮವು) ಹೊಂದಲ್ಪಡುತ್ತದೆಯೋ ಅದು". ವೇದೋಪನಿಷತ್ತುಗಳು ಮತ್ತು ಇತರ ಆಚರಣೆಗಳನ್ನು ತಿಳಿದುಕೊಳ್ಳುವುದಕ್ಕಿಂತ ಮುಖ್ಯವಾದುದು ಬ್ರಹ್ಮಸಾಕ್ಷಾತ್ಕಾರವೆನ್ನುವುದನ್ನು ಇಲ್ಲಿ ಸ್ಪಷ್ಟಪಡಿಸಲಾಗಿದೆ. ಒಮ್ಮೆ ಬ್ರಹ್ಮವು ತಿಳಿಯಲ್ಪಟ್ಟರೆ ಅರಿತುಕೊಳ್ಳಬೇಕಾದ್ದು ಮತ್ತೇನೂ ಇರುವುದಿಲ್ಲ.
ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿ ದೇವಿಯನ್ನು ಪರಾ-ಶಕ್ತಿ ಎನ್ನಲಾಗಿದೆ. ಪರಾಪರಾ ಎನ್ನುವುದು ಶ್ರೇಷ್ಠವಾದ ಮತ್ತು ಕನಿಷ್ಠವಾದ ಸ್ಥಾಯಿಗಳ ನಡುವಿನ ಮಧ್ಯ ಸ್ತರದ್ದು. ಬ್ರಹ್ಮವು ಸರ್ವವ್ಯಾಪಿಯಾಗಿರುವುದರಿಂದ ಈ ಸ್ಥಾಯಿಗಳನ್ನು ಗುರುತಿಸುತ್ತೇವೆ. ಪರಾಪರಾ ನಾಮವು ದೇವಿಯ ಮಧ್ಯಮ ಶಕ್ತಿಯ ಸ್ಥಾಯಿಯನ್ನು ಉಲ್ಲೇಖಿಸುತ್ತದೆ.
ಇನ್ನಷ್ಟು ವಿವರಗಳು: ೧೫೬ರ ನಂತರ ನಾಮಗಳು ನಿರ್ಗುಣ ಬ್ರಹ್ಮ ಮತ್ತು ಸಗುಣ ಬ್ರಹ್ಮವನ್ನು ವಿವರಿಸುತ್ತವೆ. ಉದಾಹರಣೆಗೆ ೧೬೨ನೇ ನಾಮವು ನಿರ್ಮೋಹಾ ಎಂದರೆ ದೇವಿಯು ಗೊಂದಲಗಳಿಲ್ಲದಿರುವವಳು ಎಂದಾಗುತ್ತದೆ; ಅದರ ಮುಂದಿನ ೧೬೩ನೇ ನಾಮವು ಮೋಹ-ನಾಶಿನೀ ಅಂದರೆ ದೇವಿಯು ತನ್ನ ಭಕ್ತರ ಮನಗಳಲ್ಲಿರುವ ಗೊಂದಲಗಳನ್ನು ನಾಶ ಮಾಡುವವಳಾಗಿದ್ದಾಳೆ ಎಂದು ಹೇಳುತ್ತದೆ. ೧೬೩ನೇ ನಾಮವು ನಿರ್ಗುಣ ಬ್ರಹ್ಮ ಅಥವಾ ಪರಾ ಆಗಿದ್ದರೆ ಮುಂದಿನ ನಾಮವು ಸಗುಣ ಬ್ರಹ್ಮ ಅಥವಾ ಪರಾಪರಾ ಮತ್ತು ಅಪರಾ ಇವುಗಳನ್ನು ಕುರಿತು ಉಲ್ಲೇಖಿಸುತ್ತದೆ.
Satyajñānānanda rūpā सत्यज्ञानानन्द रूपा (791)
೭೯೧. ಸತ್ಯಜ್ಞಾನಾನಂದ ರೂಪಾ
ಸತ್ಯವೆಂದರೆ ನಿಜ, ಜ್ಞಾನವೆಂದರೆ ಅರಿವು ಮತ್ತು ಆನಂದವೆಂದರೆ ಪರಮಸಂತೋಷ. ದೇವಿಯು ಸತ್ಯ, ಜ್ಞಾನ ಮತ್ತು ಆನಂದಗಳ ಸಂಯೋಗವಾಗಿದ್ದಾಳೆ.
ತೈತ್ತರೀಯ ಉಪನಿಷತ್ತು (೨ನೇ ವಲ್ಲಿ, ೧ನೇ ಅನುವಾಕ) ಹೀಗೆ ಹೇಳುತ್ತದೆ, "ಸತ್ಯಂ ಜ್ಞಾನಂ ಅನಂತಂ ಬ್ರಹ್ಮ". ಇದು ಪರಬ್ರಹ್ಮವನ್ನು ಸೂಚಿಸುತ್ತದೆ. ಸತ್ಯ, ಜ್ಞಾನ ಮತ್ತು ಅನಂತತೆ ಇವು ಬ್ರಹ್ಮವಾಗಿವೆ. ಬ್ರಹ್ಮದ ಲಕ್ಷಣಗಳನ್ನು ಕುರಿತು ಈ ಉಪನಿಷತ್ತಿನಲ್ಲಿ ವಿವರಿಸಲಾಗಿದೆ. ಈ ಉಪನಿಷತ್ ವಾಕ್ಯಕ್ಕೂ ಹಾಗೂ ಈ ನಾಮದಲ್ಲಿ ಹೇಳಿರುವುದಕ್ಕೂ ವ್ಯತ್ಯಾಸವಿದೆ. ಉಪನಿಷತ್ತು ಅನಂತವಾದದ್ದು (ಎಲ್ಲವೂ ಅಥವಾ ಎಲ್ಲವನ್ನೂ ಒಳಗೊಂಡದ್ದು) ಎಂದು ಹೇಳಿದರೆ ಈ ನಾಮವು ಆನಂದ ಎಂದು ಹೇಳುತ್ತದೆ. ಜಗನ್ಮಾತೆಯ ಕರುಣಾಮಯ ರೂಪವು ಈ ವ್ಯತ್ಯಾಸವನ್ನು ಉಂಟು ಮಾಡುತ್ತದೆ. ಈ ಪರಮಾನಂದವು ಲಲಿತಾಂಬಿಕೆಯ ಒಂದು ಪ್ರಮುಖವಾದ ಗುಣವಾಗಿದೆ. ಯಾವಾಗ ಪರಮಾನಂದದ ಸ್ಥಿತಿಯು ಹೊಂದಲ್ಪಡುತ್ತದೆಯೋ ಆಗ ಅನಂತವು (ಎಲ್ಲಾ ಬಾಹ್ಯ ವಿಚಾರಗಳು) ಮರೆಯಲ್ಪಡುತ್ತದೆ.
ಬೃಹದಾರಣ್ಯಕ ಉಪನಿಷತ್ತು (೩.೯.೨೮.೨) ಹೀಗೆ ಹೇಳುತ್ತದೆ, "ಜ್ಞಾನ, ಆನಂದ ಮತ್ತು ಬ್ರಹ್ಮ ಎಲ್ಲವೂ ಒಂದೇ ಆಗಿವೆ". ಛಾಂದೋಗ್ಯ ಉಪನಿಷತ್ತು (೭.೨೩.೧) "ಯಾವುದು ಅನಂತವೋ ಅದುವೇ ಆನಂದವು (ಸುಖವು)" ಎಂದು ಹೇಳುತ್ತದೆ.
ಈ ನಾಮವು ನಿರ್ಗುಣ ಬ್ರಹ್ಮದ ಲಕ್ಷಣವನ್ನು ಹೇಳುತ್ತದೆ. ಹಿಂದಿನ ನಾಮವು ಸಗುಣ ಬ್ರಹ್ಮದ ಕುರಿತು ಚರ್ಚಿಸಿದರೆ ಈ ನಾಮವು ದೇವಿಯನ್ನು ನಿರ್ಗುಣ ಬ್ರಹ್ಮವಾಗಿದ್ದಾಳೆಂದು ಮತ್ತೊಮ್ಮೆ ದೃಢಪಡಿಸುತ್ತದೆ.
Sāmarasya- parāyaṇā सामरस्य-परायणा (792)
೭೯೨. ಸಾಮರಸ್ಯ-ಪರಾಯಣಾ
ಪರಾಯಣ ಎಂದರೆ ಯಾವುದಾದರೂ ಒಂದು ಪ್ರಮುಖ ಅಧಿಕಾರಿಗೆ ನಿಷ್ಠನಾಗಿರುವುದು ಅಥವಾ ಅವನಿಗೆ ಅಡಿಯಾಳಾಗಿರುವುದು. ದೇವಿಯು ಸಮಾನತೆಯ ಅಥವಾ ಐಕ್ಯಮತ ತತ್ವಕ್ಕೆ ಬದ್ಧಳಾಗಿದ್ದಾಳೆ. ಹಾಗಾದರೆ ಆಕೆಯು ಯಾರಿಗೆ ಸಮನಾಗಿದ್ದಾಳೆ? ಅದು ಶಿವನಲ್ಲದೇ ಬೇರೆಯಲ್ಲ. ಒಬ್ಬರಿಲ್ಲದೆ ಮತ್ತೊಬ್ಬರು ನಿಷ್ಕ್ರಿಯರು. ಅವರು ಪರಸ್ಪರರನ್ನು ಹಲವು ಕಠಿಣತಮ ತಪಗಳನ್ನಾಚರಿಸಿ ಹೊಂದಿದ್ದಾರೆ.
ಶಿವನು ಸ್ವಯಂ ಪ್ರಕಾಶಕ ಬ್ರಹ್ಮವಾಗಿದ್ದರೆ ಶಕ್ತಿಯು ಅವನ ಸ್ವಭಾವವಾಗಿದ್ದಾಳೆ. ಸ್ವಭಾವವೆಂದರೆ ರಕ್ತಗತವಾಗಿ ಅಥವಾ ಅಂತರ್ಲೀನವಾಗಿರುವ ಸಹಜ ಪ್ರಕೃತಿ. ಶಿವನ ಸ್ವಭಾವು ಶಕ್ತಿಯ ಮೂಲಕ ಪ್ರತಿಫಲನಗೊಳ್ಳುತ್ತದೆ. ಶಿವನು ತನ್ನನ್ನು ತಾನು ಕೇವಲ ಶಕ್ತಿಯ ಮೂಲಕವಷ್ಟೇ ಅರಿಯಬಲ್ಲ ಏಕೆಂದರೆ ಆಕೆಯು ಅವನಿಗೆ ಕನ್ನಡಿಯಂತಿದ್ದಾಳೆ. ಶಕ್ತಿಯು ಶಿವನ ಕಾರ್ಯವೆಸಗುವ ಬಲವಾಗಿದ್ದಾಳೆ. ಒಂದು ವೇಳೆ ಅಂತಿಮ ಸತ್ಯವು ಕೇವಲ ಶಿವನಾಗಿದ್ದರೆ ಅವನು ಜಡವಾಗಿರುತ್ತಿದ್ದನು. ಬ್ರಹ್ಮವು ಜಡವಾಗಿ ಇರಲಾಗದು. ಶಿವನು ತನ್ನ ಜಡ ಸ್ವರೂಪವನ್ನು ಮುಂದುವರೆಸಿದರೂ ಸಹ ಶಿವನ ಬಲವನ್ನು ಹೊಂದಿರುವ ಶಕ್ತಿಯು ಈ ಪ್ರಪಂಚದ ಸೃಷ್ಟಿ, ಸ್ಥಿತಿ ಮತ್ತು ಲಯಗಳ ಹಿಂದಿರುವ ಕ್ರಿಯಾಶೀಲ ಶಕ್ತಿಯಾಗಿದ್ದಾಳೆ. ಆದ್ದರಿಂದ ಶಿವನಿಲ್ಲದ ಶಕ್ತಿ ಅಥವಾ ಶಕ್ತಿ ಇಲ್ಲದ ಶಿವ ಇವರುಗಳು ನಿಷ್ಕ್ರಿಯರಾಗುತ್ತಾರೆ. ಅವರಿಬ್ಬರನ್ನು ಜಗದ ಮಾತಾ ಪಿತರೆಂದು ಕರೆಯಲಾಗುತ್ತದೆ.
ಈ ನಾಮವು ದೇವಿಯು ಶಿವನಿಗೆ ಸರಿಸಮಾನಳೆಂದು ಹೇಳುತ್ತದೆ. ಶಿವನು ಚಿತ್ ಆದರೆ ಶಕ್ತಿಯು ಆನಂದವಾಗಿದ್ದಾಳೆ ಮತ್ತು ಚಿದಾನಂದವು (ಚಿತ್+ಆನಂದವು) ಶಿವಶಕ್ತಿಯಾಗಿದೆ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM MEANING 790 - 792 http://www.manblunder.com/2010/05/lalitha-sahasranamam-meaning-790-792.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೧೭೫. ಲಲಿತಾ ಸಹಸ್ರನಾಮ ೭೯೦ರಿಂದ ೭೯೨ನೇ ನಾಮಗಳ ವಿವರಣೆ
ನಾನು ಇಷ್ಟು ದಿನವೂ ಪರಾ ಅನ್ನುವ ಪದವನ್ನು ಎರಡು ಸಾರಿ ಜೋಡಿಸಿ ಪರಾಪರಾ ಎನ್ನುತ್ತಾರೆ ಎಂದು ಬಾವಿಸಿದ್ದೆ :)
ಉ: ೧೭೫. ಲಲಿತಾ ಸಹಸ್ರನಾಮ ೭೯೦ರಿಂದ ೭೯೨ನೇ ನಾಮಗಳ ವಿವರಣೆ
ಶ್ರೀಧರರೆ, "೧೭೫. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೭೯೦-೭೯೨
_____________________________
.
೭೯೦. ಪರಾಪರಾ
ಬ್ರಹ್ಮವನರಿವ ತ್ರೈರೂಪ, ಪರಾ-ಅಪರಾ-ಪರಾಪರಾ ಮೂರು ಹಂತ
ಮೂಲಸ್ವರೂಪವೆ ಪರಾ, ಪರಮೋನ್ನತವಿಹ ಸಂಪೂರ್ಣ ಶಕ್ತಿಯುತ
ವಿಕಾಸ ಹೊಂದೆ ಕುಸಿವ ಶಕ್ತಿ, ಇಳಿತ ಉನ್ನತಸ್ಥಾಯಿಯ ಕನಿಷ್ಠಸ್ತರ
ಮಧ್ಯಮದೀ ಶ್ರೇಣಿಯೆ ಪರಾಪರ ಲಲಿತೆ, ನಿರಂತರ ಶಕ್ತಿನಷ್ಟ ಅಪರ ||
.
ಸರ್ವವ್ಯಾಪಿ ಬ್ರಹ್ಮ ಉನ್ನತ ಸೀಮಿತ ಸ್ತರಗಳ ಸಗುಣ ನಿರ್ಗುಣ ರೂಪ
ಒಡೆಯ-ಸೇವಕ ದಾತ-ದಾತೃ ಸೃಷ್ಟಿಕರ್ತ-ವಿನಾಶಕ ಬ್ರಹ್ಮದಸ್ವರೂಪ
ಸಮಸ್ತ ವಿಶ್ವಗುಣ ಪರಾ-ಅಪರಾ ನಡುವಲಿಹ ಬ್ರಹ್ಮದದ್ವಿತೀಯ ಗುಣ
ಅರಿತರೆ ವಿಷಸರ್ಪ ಋಷಿ ಇಬ್ಬರು ಬ್ರಹ್ಮ, ಶತ್ರುಮಿತ್ರ ಸರ್ವ ಸಮಾನ ||
.
ಸರಳದಲರಿಯೆ ಸಗುಣ ನಿರ್ಗುಣ ವಿಭಜಿತ ರೂಪ, ನೈಜ್ಯದಲೊಂದು
ನಿರ್ಗುಣಬ್ರಹ್ಮ ಶಿವ ಸಗುಣಬ್ರಹ್ಮ ಶಕ್ತಿ, ಶಿವಶಕ್ತಿ ಸೇರೆ ಪರಬ್ರಹ್ಮವದು
ಪರಾ ಶ್ರೇಷ್ಟ ಬ್ರಹ್ಮಾಂಡ ಜ್ಞಾನ, ಅಪರಾ ಕೆಳ ಸ್ತರ ಸೀಮಿತ ಲೌಕಿಕತೆ
ಬ್ರಹ್ಮ ವಿದ್ಯೆಯೆ ಪರಾ ವಿದ್ಯೆ, ಲೌಕಿಕ ವಿದ್ಯೆಯೆ ಅಪರಾ ವಿದ್ಯೆ ಲಲಿತೆ ||
.
ಬ್ರಹ್ಮ ಸಾಕ್ಷಾತ್ಕಾರ ಮಹತ್ತರ, ಮೀರಿಸಿ ವೇದೋಪನಿಷತ್ತು ಆಚಾರ
ಬ್ರಹ್ಮವರಿತಾದ ಮೇಲೊಮ್ಮೆ, ಮತ್ತೇನನರಿಯಲಿರದ ಸರ್ವಜ್ಞ ತರ
ಅಂತಿಮವಾಗಿಹಳವಳೆ ಲಲಿತಾ ಬ್ರಹ್ಮ, ಪರಾಶಕ್ತಿ ಸರ್ವ ವ್ಯಾಪಿಣಿ
ದೇವಿಯ ಮಧ್ಯಮಶಕ್ತಿ ಸ್ಥಾಯಿ ಪರಾಪರ, ಶ್ರೇಷ್ಠಕನಿಷ್ಠ ಮಧ್ಯದೇಣಿ ||
.
೭೯೧. ಸತ್ಯಜ್ಞಾನಾನಂದ ರೂಪ
ಕರುಣಾಮಯಿ ಲಲಿತಾಂಬಿಕೆ ಗುಣ, ಅನನ್ಯವಿಹ ಪರಮಾನಂದ
ಅನಂತವೆ ಆನಂದ, ಜ್ಞಾನ-ಆನಂದ-ಬ್ರಹ್ಮ ಒಂದಾಗಿಹ ಸಂಬಂದ
ಸತ್ಯವೆ ನಿಜ, ಜ್ಞಾನ ಅರಿವು, ಆನಂದವೆ ಪರಮಸಂತೋಷದ ತಲ್ಪ
ಸತ್ಯ-ಜ್ಞಾನ-ಆನಂದದ-ಸಂಗಮ ಲಲಿತೆ, ಸತ್ಯಜ್ಞಾನಾನಂದ ರೂಪ ||
.
೭೯೨. ಸಾಮರಸ್ಯ-ಪರಾಯಣಾ
ಸಮಾನತೆ-ಐಕ್ಯಮತಕೆ ಬದ್ದಳು ದೇವಿ, ಶಿವನಿಗವಳು ತಾನೆ ಸರಿಸಮ
ಅದ್ವತದೆ ಶಿವ ಶಕ್ತಿ ಒಂದಾದ ಭಾವ, ನಿಷ್ಕ್ರಿಯವಾಗಿರಬಿಡದು ಸಂಗಮ
ಸ್ವಯಂಪ್ರಕಾಶಕ ಶಿವನ ಸ್ವಭಾವವೆ ಶಕ್ತಿ, ಶಿವನಿಗಾಗಿ ಕನ್ನಡಿ ಪ್ರತಿಫಲನ
ಶಕ್ತಿಯಿರದೆ ಜಡ ಶಿವ, ಕ್ರಿಯಾಶೀಲೆ ಜತೆಗೂಡಿರೆ ಚಿದಾನಂದ ಸಮ್ಮಿಲನ ||
.
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
ಉ: ೧೭೫. ಲಲಿತಾ ಸಹಸ್ರನಾಮ ೭೯೦ರಿಂದ ೭೯೨ನೇ ನಾಮಗಳ ವಿವರಣೆ
ಪಾರ್ಥ ಸರ್,
ನಿಮ್ಮ ಮಾತು ನಿಜ, ವಿ.ರವಿಯವರ ವ್ಯಾಖ್ಯಾನಗಳನ್ನು ಓದುತ್ತಿದ್ದರೆ ಹೀಗೆ ಅನೇಕ ವಿಷಯಗಳ ಕುರಿತು ನಮಗೆ ಹೆಚ್ಚಿನ ತಿಳುವಳಿಕೆ ಮೂಡುತ್ತದೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ