೧೮೨. ಲಲಿತಾ ಸಹಸ್ರನಾಮ ೮೨೮೩೩ರಿಂದ ೮೪೦ನೇ ನಾಮಗಳ ವಿವರಣೆ (ಪರಿಷ್ಕೃತ)

೧೮೨. ಲಲಿತಾ ಸಹಸ್ರನಾಮ ೮೨೮೩೩ರಿಂದ ೮೪೦ನೇ ನಾಮಗಳ ವಿವರಣೆ (ಪರಿಷ್ಕೃತ)

                                                                                              ಲಲಿತಾ ಸಹಸ್ರನಾಮ ೮೩೩ - ೮೪೦

Pañcāśat-pīṭha-rūpiṇī पञ्चाशत्-पीठ-रूपिणी (833)

೮೩೩. ಪಂಚಾಶತ್-ಪೀಠ-ರೂಪಿಣೀ

          ಪಂಚಶ ಎಂದರೆ ಐವತ್ತು, ಪೀಠ ಎಂದರೆ ಆಸನ (ಶಬ್ದಶಃ ಅರ್ಥ) ಮತ್ತು ರೂಪಿಣೀ ಎಂದರೆ ಸ್ವರೂಪವುಳ್ಳವಳು. ಶಾರದಾ ತಿಲಕಂ ಎನ್ನುವ ಪುರಾತನ ತಂತ್ರ ಗ್ರಂಥವು ಹೀಗೆ ಆರಂಭಗೊಳ್ಳುತ್ತದೆ, "ನಿತ್ಯ ನಿರಂತರ ಆನಂದದ ಶರೀರದಿಂದಾವೃತವಾದ ಆ ಪರಮಾತ್ಮನು, ಈ ಸಮಸ್ತ ಚರಾಚರ ವಸ್ತುಗಳಲ್ಲಿ ವ್ಯಾಪಿಸಿ, ಐವತ್ತು ಅಕ್ಷರಗಳಿಂದುಂಟಾದ ಪದಗಳು ಮತ್ತು ಅವುಗಳ ಅರ್ಥಗಳಾಗಿ ಚಿರಂತನವಾಗಿ ಹೊರಹೊಮ್ಮುವವಗಿದ್ದಾನೆ ಅದನ್ನೇ ಶಬ್ದ ಬ್ರಹ್ಮವೆನ್ನುತ್ತಾರೆ. ಮತ್ತೊಂದು ವಿಧದಲ್ಲಿ ಹೇಳಬೇಕೆಂದರೆ ಆ ಮಹಾನ್ ತಂತ್ರ ಗ್ರಂಥವು ದೇವಿಗೆ ವಂದನೆಗಳನ್ನರ್ಪಿಸುವುದರ ಮೂಲಕ ಆರಂಭವಾಗುತ್ತದೆ. ಮುಂದಿನ ಸ್ತೋತ್ರ ಮಾತ್ರವೇ ಶಿವನಿಗೆ ಗೌರವವನ್ನು ಸೂಚಿಸುತ್ತದೆ. ಸಂಸ್ಕೃತದಲ್ಲಿ ಐವತ್ತು ಅಥವಾ ಐವತ್ತೊಂದು ಅಕ್ಷರಗಳಿವೆ ನಾವು ಗಣನೆಗೆ ತೆಗೆದುಕೊಳ್ಳುವ ಸ್ವರ ಮತ್ತು ವ್ಯಂಜನಗಳ ಆಧಾರದ ಮೇಲೆ ಅವುಗಳ ಸಂಖ್ಯೆಯಲ್ಲಿ ವ್ಯತ್ಯಯವಾಗುತ್ತವೆ. ಉದಾಹರಣೆಗೆ ॡ(ಲೄ)ವನ್ನು ಪರಿಗಣನೆಗೆ ತೆಗೆದುಕೊಂಡಾಗ. ಈ ಮೊದಲು ಕ್ಷ ವನ್ನು ವ್ಯಂಜನಾಕ್ಷರವಾಗಿ ಪರಿಗಣಿಸಲಾಗುವುದಿಲ್ಲ ಎಂದು ಹೇಳಲಾಗಿತ್ತು ಅದೇ ವಿಧವಾಗಿ ॡ(ಲೄ)ವನ್ನು ಕೆಲವರು ಸ್ವರವಾಗಿ ಪರಿಗಣಿಸುವುದಿಲ್ಲ.

         ವರಿವಶ್ಯಾ ರಹಸ್ಯವು (೨.೩೫), ಪಂಚದಶಿಯ ಪ್ರತಿಯೊಂದು ಕೂಟವೂ ಹದಿನಾರು ಅಕ್ಷರಗಳನ್ನು ಉಂಟುಮಾಡುತ್ತವೆ; ಆಗ ಒಟ್ಟು ಅಕ್ಷರಗಳ ಸಂಖ್ಯೆಯು ನಲವತ್ತೆಂಟು ಆಗುತ್ತದೆ, (ಕ್ಷ ಮತ್ತು ಹ ಇವುಗಳನ್ನು ಹೊರತುಪಡಿಸಿ) ಎಂದು ಹೇಳುತ್ತದೆ. ಆದ್ದರಿಂದ, ಈ ನಾಮವು ದೇವಿಯು ಸಂಸ್ಕೃತದ ಐವತ್ತು ಅಕ್ಷರಗಳ ರೂಪದಲ್ಲಿದ್ದಾಳೆಂದು ಹೇಳುತ್ತದೆ. ದೇವಿಯ ಅಕ್ಷರ ಸ್ವರೂಪವನ್ನು ಶಬ್ದ ಬ್ರಹ್ಮವೆನ್ನುತ್ತಾರೆ.

        ಕೆಲವೊಂದು ವ್ಯಾಖ್ಯಾನಗಳ ಪ್ರಕಾರ ಐವತ್ತು ಅಥವಾ ಐವತ್ತೊಂದು ಎನ್ನುವ ಸಂಖ್ಯೆಯು ಐವತ್ತೊಂದು ಶಕ್ತಿ ಪೀಠಗಳನ್ನು ಸೂಚಿಸುತ್ತದೆ.  ದಕ್ಷನು ತಾನು ನಿರ್ವಹಿಸುತ್ತಿದ್ದ ಯಜ್ಞಕ್ಕೆ ಶಿವನನ್ನು ಆಹ್ವಾನಿಸದೇ ಇದ್ದಾಗ ಶಕ್ತಿಯ ಅವತಾರವಾದ ಮತ್ತು ದಕ್ಷನ ಮಗಳಾದ ಸತಿಯು (ನಾಮ ೮೨೦) ಆತ್ಮಾಹುತಿ ಮಾಡಿಕೊಂಡಳು. ಅವಳ ಶವವನ್ನು ಕೈಯ್ಯಲ್ಲಿರಿಸಿಕೊಂಡು ಶಿವನು ಅತ್ತಿತ್ತ ತಿರುಗಾಡುತ್ತಿದ್ದ. ಆಗ ವಿಷ್ಣುವು ತನ್ನ ಸುದರ್ಶನ ಚಕ್ರದಿಂದ ಆ ಕಳೇಬರವನ್ನು ಐವತ್ತೊಂದು ತುಂಡುಗಳಾಗಿ ಕತ್ತರಿಸಿದ; ಆ ತುಂಡುಗಳು ಭೂಮಿಯ ಮೇಲೆ ಐವತ್ತೊಂದು ಸ್ಥಳಗಳಲ್ಲಿ ಕೆಳಗೆ ಬಿದ್ದವು. ಈ ಐವತ್ತೊಂದು ಸ್ಥಳಗಳನ್ನೇ ಐವತ್ತೊಂದು ಶಕ್ತಿ ಪೀಠಗಳೆಂದು ಕರೆಯುತ್ತಾರೆ. ಈ ಶಕ್ತಿಪೀಠಗಳಿಗೂ ಈ ನಾಮಕ್ಕೂ ಸಂಭಂದವಿಲ್ಲ; ಕೇವಲ ತಿಳುವಳಿಕೆಯ ದೃಷ್ಟಿಯಿಂದ ಅದರ ಪ್ರಸ್ತಾವನೆಯನ್ನು ಇಲ್ಲಿ ಮಾಡಲಾಗಿದೆಯಷ್ಟೆ. ಶಕ್ತಿ ಪೀಠಗಳು ಸಹಸ್ರನಾಮದ ರಚನೆಯ ನಂತರದ ಬೆಳವಣಿಗೆಗಳು.

ಸಂಸ್ಕೃತ ಅಕ್ಷರಗಳ ಕುರಿತಾಗಿ ಇನ್ನಷ್ಟು ವಿವರಗಳು:

          ಸಂಸ್ಕೃತದಲ್ಲಿನ ಅಕ್ಷರಗಳ ನಿಖರವಾದ ಸಂಖ್ಯೆಯ ಕುರಿತಾದ ಅಧಿಕೃತ ಮಾಹಿತಿಯಿಲ್ಲ. ಈ ವಿಷಯವನ್ನು ಸ್ಪಷ್ಟಪಡಿಸಿಕೊಳ್ಳುವ ಉದ್ದೇಶದಿಂದ ನಾನು (ವಿ.ರವಿ), ಗೇಬ್ರಿಯಲ್ ಪ್ರದೀಪಕ ಎನ್ನುವ ಸಂಸ್ಕೃತ ವಿದ್ವಾಂಸರಿಗೆ ಪತ್ರ ಬರೆದೆ. ಅವರು ಸಂಸ್ಕೃತ ಸಾಹಿತ್ಯವನ್ನು ಅರಿತುಕೊಳ್ಳುವುದಕ್ಕಾಗಿ ತಮ್ಮ ಜೀವಿತವನ್ನೇ ಮುಡಿಪಾಗಿಟ್ಟಿದ್ದಾರೆ ಮತ್ತವರು ತಮ್ಮದೇ ಆದ ಜಾಲತಾಣವನ್ನು (www.sanskrit-sanscrito.com.ar) ಹೊಂದಿದ್ದಾರೆ. ಅವರ ಉತ್ತರವನ್ನು ಇಲ್ಲಿ ಪುನರುಚ್ಛರಿಸಲಾಗಿದೆ.

          ಸಂಪೂರ್ಣ ಅಕ್ಷರಮಾಲೆ ಎಂದರೆ ಅದು ॡ (ಲೄ)ವನ್ನೂ ಒಳಗೊಂಡಿರುತ್ತದೆ (ಇದನ್ನು ನಾನು ಸೇರಿಸಲಿಲ್ಲ; ಏಕೆಂದರೆ ಅದು ಆವಿಷ್ಕರಿಸಿದ ಅಕ್ಷರವಾಗಿದ್ದು ಸರಣಿಯನ್ನು ’ಹ್ರಸ್ವ-ದೀರ್ಘ’ ಮಾಡಲು ಅದನ್ನು ಬಳಸುತ್ತಾರೆ). ಕೆಲವೊಂದು ವೇಳೆಯಲ್ಲಿ ’ಕ್ಷ’ವನ್ನೂ ಸೇರಿಸುತ್ತಾರೆ. ಈ ಸಂಯುಕ್ತಾಕ್ಷರವು ಕ+ಸ(ಷ ಅಲ್ಲ) ಇವುಗಳ ಸಂಯೋಗದಿಂದ ಉಂಟಾಗುತ್ತದೆ. ನೀನು ಉಲ್ಲೇಖಿಸಿದ ಮತ್ತೊಂದು ಅಕ್ಷರವು ಪುರಾತನ ವೈದಿಕ ळ् (ಳ್) ಆಗಿದ್ದು ಅದನ್ನು IAST ವಿಧಾನದಲ್ಲಿ ḷ ಎಂದು ಬರೆಯುತ್ತಾರೆ ಅದನ್ನು ಪುರಾತನ ವೈದಿಕ ಗ್ರಂಥಗಳಲ್ಲಿ ಮಾತ್ರವೇ ಬಳಸುತ್ತಾರೆ. ಈಗ ಸಾಮಾನ್ಯವಾಗಿ ಅದನ್ನು ड् ಡ್ ಮೂಲಕ ಸಂಕೇತಿಸುತ್ತಾರೆ; ಅದು ಎರಡು ಸ್ವರಗಳ ಮಧ್ಯೆ ಬಂದಾಗ ಮಾತ್ರ. ಉದಾಹರಣೆಗೆ ಸ್ವರ+ऴ्+ಸ್ವರ=ಸ್ವರ+ड्+ಸ್ವರ (ಕೇವಲ ಸ್ವರಗಳ ಮಧ್ಯೆ ಮಾತ್ರವೇ ಬಳಸುತ್ತಾರೆ ಹೊರತು ವ್ಯಂಜನಗಳ ಮಧ್ಯೆ ಅಲ್ಲ). ಈ ಪರ್ಯಾಯ ವ್ಯವಸ್ಥೆಯಿದ್ದಾಗೂ ಸಹ ನಾನು ಅದನ್ನು ऴ् ಆಗಿಯೇ ಬಳಸಲು ಇಚ್ಛಿಸುತ್ತೇನೆ.

         ಒಂದು ವೇಳೆ ॡ(ಲೄ)ವನ್ನು ಪರಿಗಣಿಸಿದರೆ, ಆಗ ಅಕ್ಷರಗಳ ಸಂಖ್ಯೆಯು ನಲವತ್ತೊಂಭತ್ತು ಆಗುತ್ತದೆ. ಕೆಲವರು ಕ್ಷವನ್ನೂ ಸೇರಿಸುತ್ತಾರೆ (ಉದಾ: ಕ್ಷೇಮರಾಜನು ತನ್ನ ಅಧ್ಯಯನಗಳಲ್ಲಿ ಇದನ್ನು ಸೇರಿಸಿಕೊಂಡಿದ್ದಾನೆ) ಮತ್ತಾಗ ಒಟ್ಟು ಅಕ್ಷರಗಳ ಸಂಖ್ಯೆಯು ಐವತ್ತು ಆಗುತ್ತದೆ. ಮತ್ತೂ ಕೆಲವರು ವೈದಿಕ ऴ् ḻ (ಳ್) ವನ್ನೂ ಸಹ ಪರಿಗಣಿಸಿತ್ತಾರೆ ಆಗ ಅಕ್ಷರಗಳ ಸಂಖ್ಯೆಯು ಐವತ್ತೊಂದರಷ್ಟಾಗುತ್ತದೆ. ವ್ಯಾಕರಣ ಅಧ್ಯಯನಕ್ಕಾಗಿ ಪ್ರಮಾಣಿಸಲ್ಪಟ್ಟಿರುವ ಅಕ್ಷರಗಳು ನಲವತ್ತೆಂಟೇ ಆಗಿವೆ (ಈ ಪದ್ಧತಿಯನ್ನು ನಾನು ಬಳಸುತ್ತಿದ್ದೇನೆ). ಆದರೆ ಆಧ್ಯಾತ್ಮಿಕ ತತ್ವಗಳ ಅಧ್ಯಯನಕ್ಕೆ, ಐವತ್ತರ ಸಂಖ್ಯೆಯು ಉತ್ತಮ. ಒಂದು ವೇಳೆ ಬೇರೆ ಅಧ್ಯಯನಗಳ ವಿಷಯಕ್ಕೆ ನಿನಗೆ ಐವತ್ತೊಂದು ಅಕ್ಷರಗಳು ಬೇಕಿದ್ದರೆ, ಅದನ್ನು ನೀನು ಅವಶ್ಯವಾಗಿ ಮಾಡಬಹುದು!

         ಯಾವಾಗಲೂ ಸಹ, ರೂಢಿಯಲ್ಲಿರುವ ಅಕ್ಷರಗಳ ಸಂಖ್ಯೆಯು ನಲವತ್ತೆಂಟೇ ಆಗಿದೆ; ಹಾಗಾಗಿ ಅದುವೇ ನನ್ನ ಆಯ್ಕೆಯಾಗಿದೆ. ಬಳಕೆಯಲ್ಲಿರುವ ಸಂಸ್ಕೃತವನ್ನು ಬರೆಯಲು ನಿಮಗೆ ೪೮ಕ್ಕಿಂತ ಹೆಚ್ಚಿನ ಅಕ್ಷರಗಳ ಅವಶ್ಯಕತೆಯಿಲ್ಲ ಮತ್ತು ಈ ರೂಢಿಯು ಶತಮಾನಗಳಿಂದ ಅನುಷ್ಠಾನದಲ್ಲಿದೆ. ಆದರೆ ಋಷಿಗಳು ಕೆಲವೊಂದು ಉದ್ದೇಶಗಳನ್ನು ಪೂರೈಸುವುದಕ್ಕಾಗಿ ಮೂಲ ರೂಪದಲ್ಲಿದ್ದ ಅಕ್ಷರಗಳಿಗೆ ಕೆಲವೊಂದು ಹೊಸ ಅಕ್ಷರಗಳನ್ನು ಸೇರಿಸಿದ್ದಾರೆ. ಆದರೆ ಇದು ಆಧ್ಯಾತ್ಮಿಕ ತತ್ವಾಧ್ಯಯನಗಳ ಅವಶ್ಯಕತೆಗನುಗುಣವಾಗಿ ಇದೆಯೇ ಹೊರತು ಅದು ರೂಢಿಯಲ್ಲಿನ ಬರವಣಿಗೆಗಾಗಿ ಅಲ್ಲ. ಆದ್ದರಿಂದ ನಿಮಗೆ ಸೂಕ್ತವೆನಿಸಿದ ಸಂಖ್ಯೆಯ ಅಕ್ಷರಗಳನ್ನು ಅಥವಾ ಸಂಯೋಜನೆಯನ್ನು ಆರಿಸಿಕೊಳ್ಳಬಹುದು; ತತ್ವಾಧ್ಯಯನಕ್ಕಾಗಿ. ಆದರೆ ವಾಸ್ತವವಾಗಿ  ೪೮ ಅಕ್ಷರಗಳಿಗಿಂತ ಹೆಚ್ಚಿನವು ಬಳಕೆಯಲ್ಲಿ ಇಲ್ಲ. ಸ್ವರ ಅಕ್ಷರವಾದ ॡ(ಲೄ)ವು ಯಾವಾಗಲೂ ಬಳಕೆಯಲ್ಲಿಯೇ ಇಲ್ಲ. ಮತ್ತು ’ಕ್ಷ’ವು ಎರಡು ಅಕ್ಷರಗಳನ್ನು ಹೊಂದಿದ ಸಂಯುಕ್ತಾಕ್ಷರವಾಗಿದೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ.

        ಚಿತ್ರಾಪುರ ಮಠ, ಉತ್ತರ ಕನ್ನಡ ಜಿಲ್ಲೆ, ಇವರು Learn Sanskrit ಮಾಲಿಕೆಯಲ್ಲಿ ಪ್ರಕಟಿಸಿರುವಂತೆ ಸಂಸ್ಕೃತದಲ್ಲಿರುವ ಮೂಲ ಅಕ್ಷರಗಳ ಸಂಖ್ಯೆಯು ಹೀಗಿದೆ :

ಸ್ವರಗಳು

अ आ इ ई उ ऊ ऋ ॠ ऌ ॡ ए ऐ ओ औ अं अः = ೧೬*

ಅ ಆ ಇ ಈ ಉ ಊ ಋ ೠ ಲೃ ಲೄ ಏ ಐ ಓ ಔ ಅಂ ಅಃ = ೧೬

[*ಕನ್ನಡದಲ್ಲಿ ऌ ॡ ಲೃ ಲೄ ಸ್ವರಗಳ ಬಳಕೆಯಿಲ್ಲ ಆದರೆ ಸಂಸ್ಕೃತದಲ್ಲಿ ಬಳಕೆಯಲ್ಲಿಲ್ಲದ ಎ ಮತ್ತು ಒ ಗಳಿವೆ (ಏ ಮತ್ತು ಓಗಳು ಮಾತ್ರವೇ ಸಂಸ್ಕೃತದಲ್ಲಿ ಬಳಕೆಯಲ್ಲಿವೆ. ಈ ಸ್ವರಗಳ ಹ್ರಸ್ವ ರೂಪಗಳ ಬಳಕೆ ಸಂಸ್ಕೃತದಲ್ಲಿ ಇಲ್ಲ). ಲೃ ಲೄ ಗಳ ಬದಲಿಗೆ ಎ ಮತ್ತು ಒ ಗಳನ್ನು ಇರಿಸಿಕೊಂಡರೆ ಒಟ್ಟು ಸ್ವರಗಳ ಸಂಖ್ಯೆಯು ೧೬ ಆಗಿಯೇ ಉಳಿಯುತ್ತದೆ ಎನ್ನುವುದು ಬೇರೆ ವಿಷಯ.]

ವ್ಯಂಜನಗಳು (೩೫)

ವರ್ಗೀಯ ವ್ಯಂಜನಗಳು

ಕ ವರ್ಗ - क ख ग घ ङ = ೫

ಚ ವರ್ಗ - च छ ज झ ञ = ೫

ಟ ವರ್ಗ - ट ठ ड ढ ण = ೫

ತ ವರ್ಗ - त थ द ध न = ೫

ಪ ವರ್ಗ - प फ ब भ म = ೫

ಅವರ್ಗೀಯ ವ್ಯಂಜನಗಳು

य र ल व श ष स ह ळ क्ष = ೧೦

ಯ ರ ಲ ವ ಶ ಷ ಸ ಹ ಳ ಕ್ಷ = ೧೦

[ಇವಲ್ಲದೆ ಸಂಸ್ಕೃತದಲ್ಲಿಲ್ಲದ ಹಳೆಗನ್ನಡದಲ್ಲಿ ಬಳಕೆಯಲ್ಲಿರುವ ಎರಡು ಅಕ್ಷರಗಳು ಹೀಗಿವೆ ಱ (ರ್ರ ದಂತೆ);ೞ (ಳ್ಲದಂತೆ) - ಸುಮ್ಮನೆ ಮಾಹಿತಿಗಾಗಿ ಇವನ್ನು ಕೊಡಲಾಗಿದೆ]

          ಮೇಲೆ ವಿವರಿಸಿದಂತೆ ೧೬ ಸ್ವರಗಳು ಮತ್ತು ೩೫ ವ್ಯಂಜನಗಳನ್ನು ಕೂಡಿದರೆ ಸಂಸ್ಕೃತ ಅಕ್ಷರಗಳ ಸಂಖ್ಯೆಯು ೫೧ ಆಗುತ್ತದೆ. ಇದರಲ್ಲಿ ಸ್ವರಗಳ ಪೈಕಿ ॡ (ಲೄ)ವನ್ನು ಮತ್ತು ವ್ಯಂಜನಗಳಲ್ಲಿ  ळ क्ष (ಳ ಕ್ಷ) - ಮೂರು ಅಕ್ಷರಗಳು ದೈನಂದಿನ ಸಂಸ್ಕೃತದಲ್ಲಿ ಬಳಕೆಯಲ್ಲಿಲ್ಲ. ಹಾಗಾಗಿ ಸಹಜವಾಗಿಯೇ ನಿತ್ಯ ಬಳಕೆಯ ಸಂಸ್ಕೃತ ಅಕ್ಷರಗಳು ೪೮ ಆಗುತ್ತವೆ; ಈ ಆಧಾರದ ಮೇಲೆ ಮುಂದಿನ ವಿಶ್ಲೇಷಣೆಗಳನ್ನು ಅರ್ಥಮಾಡಿಕೊಳ್ಳಬಹುದು.

         ಯಾವಾಗಲೂ ಚಕ್ರಗಳಲ್ಲಿರುವ ದಳಗಳ ಕುರಿತಾದ ಸಂಖ್ಯೆಯ ಬಗ್ಗೆಯೂ ಅನೇಕ ವೇಳೆ ಚರ್ಚೆಗಳು ನಡೆಯುತ್ತಿರುತ್ತವೆ, ಏಕೆಂದರೆ ಅದರಲ್ಲಿ ಕೆಲವೊಂದು ತೊಡಕುಗಳಿವೆ. ಮೂಲಾಧರದಲ್ಲಿ ೪ ದಳಗಳು, ಸ್ವಾಧಿಷ್ಠಾನದಲ್ಲಿ ೬, ಮಣಿಪೂರಕದಲ್ಲಿ ೧೦, ಅನಾಹತದಲ್ಲಿ ೧೨, ವಿಶುದ್ಧದಲ್ಲಿ ೧೬ ಮತ್ತು ಅಜ್ಞಾ ಚಕ್ರದಲ್ಲಿ ೨; ಹೀಗೆ ಇವುಗಳ ಒಟ್ಟು ಸಂಖ್ಯೆಯು ಐವತ್ತಾಗುತ್ತದೆ. ಈ ರೀತಿ  ಒಬ್ಬರು ಲೆಕ್ಕಾಚಾರ ಹಾಕಿ, ಇದು ವರ್ಣಮಾಲೆಯಲ್ಲಿನ ಐವತ್ತು ಅಕ್ಷರಗಳಿಗೆ ಸರಿಹೋಗುತ್ತದೆ ಎಂದು ಸರಳವಾಗಿ ಸಮೀಕರಿಸುತ್ತಾರೆ. ಮತ್ತೆ ಕೆಲವರು ೫೦ x ೨೦ = ೧೦೦೦ವಾಗುತ್ತದೆ ಮತ್ತು ಈ ಸಂಖ್ಯೆಯು ಸಹಸ್ರಾರದಲ್ಲಿನ ದಳಗಳ ಸಂಖ್ಯೆಗೆ ಅನುಗುಣವಾಗಿದೆ ಎಂದು ಅದನ್ನು ದೃಢಿಕರಿಸುತ್ತಾರೆ. ಮತ್ತೆ ಕೆಲವರು ಆಜ್ಞಾ ಚಕ್ರದಲ್ಲಿನ ಎರಡು ದಳಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಅದು ೪೮ x ೨೦ = ೯೬೦ ದಳಗಳೇ ಸಹಸ್ರಾರದಲ್ಲಿರುವುದು ಎಂದು ನಿರ್ಣಯಿಸುತ್ತಾರೆ, ಏಕೆಂದರೆ ಅವರು ರೂಢಿಯಲ್ಲಿರುವ ೪೮ ಅಕ್ಷರಗಳನ್ನು ಮಾತ್ರವೇ ಗಣನೆಗೆ ತೆಗೆದುಕೊಳ್ಳುತ್ತಾರಾದ್ದರಿಂದ.

          ಆದರೆ ನನ್ನ ಸಂಶೋಧನೆಯ ಪ್ರಕಾರ; ಆಜ್ಞಾ ಚಕ್ರವು ತೊಂಬತ್ತಾರು ದಳಗಳನ್ನು ಹೊಂದಿದೆ; ಕೇವಲ ಎರಡನ್ನಲ್ಲ. ವಾಸ್ತವವಾಗಿ ೪೮ ದಳಗಳು ಒಂದೇ ದಳವಾಗಿ ಕಾಣಿಸುತ್ತವೆ ಒಂದು ಎಡಬದಿಯಲ್ಲಿದ್ದರೆ ಮತ್ತೊಂದು ಬಲಬದಿಯಲ್ಲಿರುತ್ತದೆ. ಮತ್ತೊಂದು ವಿಷಯವೇನೆಂದರೆ ಆಜ್ಞಾ ಚಕ್ರದ ದಳಗಳು ಶ್ವೇತವರ್ಣವನ್ನು ಹೊಂದಿಲ್ಲ ಆದರೆ ಅದು ಅತೀ ತಿಳಿಯಾದ ಗುಲಾಬಿ ರಂಗನ್ನು ಹೊಂದಿವೆ. ಒಬ್ಬರಿಗೆ ಆಶ್ಚರ್ಯವಾಗಬಹುದು; ಬಹುತೇಕರು ಅಲ್ಲಿ ಕೇವಲ ಎರಡೇ ದಳಗಳಿವೆ ಎನ್ನುವಾಗ ಅದು ಹೇಗೆ ೯೬ದಳಗಳಿರಲು ಸಾಧ್ಯವೆಂದು. ಇದು ಏಕೆ ಸಾಧ್ಯವೆಂದರೆ ಆ ೪೮ ದಳಗಳು ಎಷ್ಟು ಒತ್ತಾಗಿ ಬೆಸಗೊಂಡಿವೆ ಎಂದರೆ ಅವು ಒಂದೇ ದಳವೋ ಎನ್ನುವ ಭ್ರಮೆಯನ್ನುಂಟು ಮಾಡುತ್ತವೆ! ಇದರ ಹೊರತಾಗಿ ನೀವು ದಳಗಳ ಸಂಖ್ಯಾ ಸರಣಿಯನ್ನು ಗಮನಿಸಿದರೆ ಅವುಗಳ ಅನುಕ್ರಮವು ಈ ವಿಧವಾಗಿ ಇದೆ: ೪ --> ೬ --> ೧೦ --> ೧೨ --> ೧೬ --> ೨ ....ಇಲ್ಲಿ ಯಾವುದೇ ಒಂದು ವಿಷಯವು ಅಸ್ಪಷ್ಟವಾಗಿದೆ ಎನ್ನುವುದು ವ್ಯಕ್ತವಾಗುತ್ತದೆ. ಅದೇನೆಂದರೆ ದಳಗಳ ಸಂಖ್ಯೆಯು ಕ್ರಮೇಣ ಹೆಚ್ಚುಮುಖವಾಗದೆ ಕಡೆಯಲ್ಲಿ ಕಡಿಮೆಯಾಗಿದೆ ಎನ್ನುವುದು. ಈ ಸರಣಿಯನ್ನು ನೋಡಿ: ೪ --> ೬ --> ೧೦ --> ೧೨ --> ೧೬ --> ೯೬ ... ಇಲ್ಲಿ ಒಂದು ವಿಧವಾದ ಅಧಿಕ ಸ್ಪಷ್ಟತೆಯಿದೆ; ಏಕೆಂದರೆ ಕಡೆಯಲ್ಲಿ ಬರುವ ಸಂಖ್ಯೆ ೯೬ ಅದರ ಹಿಂದಿನ ಸಂಖ್ಯೆಗಿಂತಲೂ ದೊಡ್ಡದಾಗಿದೆ ಮತ್ತು ಅದು ೪೮+೪೮=೯೬ ಎನ್ನುವುದಕ್ಕೂ ಸರಿಯಾಗಿದೆ. ಇದರ ಅರ್ಥವೇನೆಂದರೆ ಕೆಳಗಿನ ಚಕ್ರಗಳ ನಲವತ್ತೆಂಟು ದಳಗಳು ಆಜ್ಞಾ ಚಕ್ರದ ಎರಡೂ ದಳಗಳಿಂದಲೂ ನಲವತ್ತೆಂಟು ಮತ್ತು ನಲವತ್ತೆಂಟು ಕೊಂಡಿಗಳನ್ನು ಹೊಂದಿವೆ ಎಂಬುದು. ಒಟ್ಟಾರೆಯಾಗಿ ಇದು ಸೂಚಿಸುವುದೇನೆಂದರೆ, ಅಜ್ಞಾ ಚಕ್ರವು ಕೆಳಗಿನ ಐದು ಚಕ್ರಗಳೊಂದಿಗೆ ಎರಡು ವಿಧವಾದ ಕೊಂಡಿಗಳನ್ನು (ಸಂಪರ್ಕವನ್ನು) ಹೊಂದಿದ್ದು ಅದು ಒಂದು ಪರಿಪೂರ್ಣ ವೃತ್ತವನ್ನು ಉಂಟುಮಾಡಿದೆ (ಇದಕ್ಕಾಗಿಯೇ ದ್ವಿವಿಧ ಸಂಪರ್ಕವಿರುವುದು).

         ಮೇಲಿನ ವಿಧವಾಗಿ ನಮಗೆ ಅಂತಿಮವಾಗಿ ೧೪೪ ದಳಗಳು ದೊರೆಯುತ್ತವೆ....ಹೌದು ಆಗ ಸಹಜವಾಗಿಯೇ ೧೪೪ x ೨೦ = ೧೦೦೦ ದಳಗಳು ಎನ್ನುವುದು ತಪ್ಪಾಗುತ್ತದೆ; ಏಕೆಂದರೆ ಅದು ವಾಸ್ತವವಾಗಿ ೧೪೪ x ೭ = ೧೦೦೮ ದಳಗಳಾಗುತ್ತವೆ. ಹಾಗಾಗಿ ೮ ಸಂಖ್ಯೆಯ ದಳಗಳು ಸ್ವಲ್ಪ ಹೆಚ್ಚಾದರೇನು ಕಡಿಮೆಯಾದರೇನು ಅವು ಸಾವಿರಕ್ಕೆ ಸಮೀಪವಿವೆ ತಾನೇ? ಇಲ್ಲಿ ಇನ್ನೊಂದು ಅಂಶವನ್ನೂ ಗಮನಿಸಬಹುದು ಅದೇನೆಂದರೆ ಏಳು ಎನ್ನುವ ಸಂಖ್ಯೆಯು ನಿಖರವಾಗಿ ದೇಹದಲ್ಲಿರುವ ಪ್ರಮುಖ ಚಕ್ರಗಳನ್ನು ಸೂಚಿಸುತ್ತದೆ ಮತ್ತು ೧೪೪ರ ವರ್ಗಮೂಲವು ೧೨ ಆಗುತ್ತದೆ (೧೨  x  ೧೨ =೧೪೪). ಈ ಹನ್ನೆರಡು ಸಂಖ್ಯೆಯು ತ್ರೈತ ಸಿದ್ಧಾಂತದಲ್ಲಿ ಶ್ರೇಷ್ಙವಾದುದು ಏಕೆಂದರೆ ಈ ಸಂಖ್ಯೆಯನ್ನು ದೇಹದಲ್ಲಿರುವ ವಿವಿಧ ಅಂಗಗಳ ದೂರವನ್ನು ಅಳೆಯಲು ಉಪಯೋಗಿಸುತ್ತಾರೆ (ಉದಾ: ಬ್ರಹ್ಮರಂಧ್ರವು ಆಜ್ಞಾ ಚಕ್ರದಿಂದ ಹನ್ನೆರಡು ಬೆರಳುಗಳ ಗಾತ್ರದ ಅಂತರದಲ್ಲಿದೆ, ಮೊದಲಾದವು).

           ಅಂತಿಮವಾಗಿ ಒಬ್ಬರು ೪೮, ೪೯, ೫೦ ಅಥವಾ ೫೧ ಇವುಗಳಲ್ಲಿ ತಮಗಿಷ್ಟ ಬಂದ ಸಂಖ್ಯೆಯ ಅಕ್ಷರಗಳನ್ನು ಬಳಸಬಹುದು ಅವರ ಅಧ್ಯಯನದ ಅಗತ್ಯಗಳಿಗನುಗುಣವಾಗಿ. ಆದರೆ ಈಗ ರೂಢಿಯಲ್ಲಿರುವ; ಇದು ಅನೇಕ ಶತಮಾನಗಳಿಂದಲೂ ಇದೆ; ಕೇವಲ ೪೮ ಅಕ್ಷರಗಳು ಮಾತ್ರವೇ ಸಾಂಪ್ರದಾಯಿಕ ಸಂಸ್ಕೃತದಲ್ಲಿ ಬಳಯಲ್ಲಿವೆ ಮತ್ತು ॡ(ಲೄ) ಅಕ್ಷರವು ವ್ಯಾವಹಾರಿಕವಾಗಿ ಪ್ರಯೋಗದಲ್ಲಿ ಇಲ್ಲವೆಂದೇ ಹೇಳಬಹುದು. ಕ್ಷವು ಈ ಮೊದಲೇ ಚರ್ಚಿಸಿದಂತೆ ಸಂಯುಕ್ತಾಕ್ಷರವಾಗಿದೆ ಮತ್ತು ळ (ಳ) ಅಕ್ಷರವು ಕೇವಲ ಪುರಾತನ ವೇದ ಗ್ರಂಥಗಳಲ್ಲಿ ಮಾತ್ರವೇ ಬಳಕೆಯಲ್ಲಿದೆ. ಚಕ್ರದ ದಗಳಲ್ಲಿರುವ ಸಂಖ್ಯೆಗಳಿಗೂ ಮತ್ತು ಸಂಸ್ಕೃತ ಅಕ್ಷರಗಳಿಗೂ ಇರುವ ಸಂಭಂದದ ಕುರಿತಾದ ಸಿದ್ಧಾಂತವು ಸರಿಯಾಗಿಯೇ ಇದೆ; ಆದರೆ ಆಜ್ಞಾ ಚಕ್ರದಲ್ಲಿರುವ ದಳಗಳ ಸಂಖ್ಯೆಯ ಕುರಿತಾದ ಅಸ್ಪಷ್ಟತೆಯೊಂದನ್ನು ಹೊರತುಪಡಿಸಿ.

Viśruṇkhalā विश्रुण्खला (834)

೮೩೪. ವಿಶೃಂಖಲಾ

          ವಿ ಎಂದರೆ ರಹಿತ ಮತ್ತು ಶೃಂಖಲಾ ಎಂದರೆ ಬಂಧನ. ದೇವಿಯು ಬಂಧನವಿಲ್ಲದವಳಾಗಿದ್ದಾಳೆ. ಬಂಧನವು ಮಾನವನ ಲಕ್ಷಣವಾಗಿದೆ. ಬ್ರಹ್ಮವು ಬಂಧನಕ್ಕೆ ಅತೀತವಾಗಿದೆ. ಯಾವುದೇ ಕರ್ಮ ಅದು ಒಳ್ಳೆಯದಾಗಿರಲಿ ಅಥವಾ ಕೆಟ್ಟದಾಗಿರಲಿ ಅದು ಬಂಧನವನ್ನು ಉಂಟು ಮಾಡುತ್ತದೆ. ಶಾಸ್ತ್ರವಿಹಿತ ಕರ್ಮಗಳನ್ನು ಅಹಂಕಾರ ಭಾವನೆಯಿಂದ ಮಾಡುವುದು ಅಥವಾ ಮಾಡದೇ ಇರುವುದರ ಮೂಲಕ ಬಂಧನವು ಉಂಟಾಗುತ್ತವೆ. ಈ ಎರಡೂ ಪ್ರಕ್ರಿಯೆಗಳು ಕಾರ್ಯ ಕಾರಣ ಸಂಭಂದವನ್ನು ಹೊಂದಿದ್ದು ಕರ್ಮಫಲಗಳನ್ನು ಉಂಟು ಮಾಡುತ್ತವೆ. ದೇವಿಯು ತನ್ನ ಕರ್ತವ್ಯವನ್ನು ಮಾಡುವಾಗ ಆಕೆಗೆ ಕರ್ಮಫಲವು ಅಂಟಿಕೊಳ್ಳುವುದಿಲ್ಲ ಎಂದು ಈ ನಾಮವು ಹೇಳುತ್ತದೆ ಮತ್ತು ಈ ನಾಮವು ದೇವಿಯು ಬಂಧನಗಳಿಂದ ಮುಕ್ತಳಾಗಿದ್ದಾಳೆ ಎನ್ನುತ್ತದೆ.

Viviktasthā विविक्तस्था (835)

೮೩೫. ವಿವಿಕ್ತಸ್ಥಾ

          ದೇವಿಯು ಏಕಾಂತವಾದ ಸ್ಥಳಗಳಲ್ಲಿ ನಿವಸಿಸುತ್ತಾಳೆ. ಇಲ್ಲಿ ಏಕಾಂತವಾದ ಸ್ಥಳಗಳೆಂದರೆ ಜ್ಞಾನವಂತರಾದ ಪುರುಷರ ಹೃದಯಗಳು. ಜ್ಞಾನಿಗಳೆಂದರೆ ಯಾರು ಸ್ವಾರ್ಥ ಹೊಂದಿರುವ ಆತ್ಮ ಮತ್ತು ಪರಮಾತ್ಮಸ್ವರೂಪಿ ಆತ್ಮಗಳ ನಡುವಿನ ವ್ಯತ್ಯಾಸಗಳನ್ನು ವಿವೇಚನೆಯಿಂದ ನೋಡುತ್ತಾರೋ ಅವರು. ಶಕ್ತಿಯ ಆರಾಧನೆಯನ್ನು ಏಕಾಂತದಲ್ಲಿ ಮಾತ್ರವೇ ಮಾಡತಕ್ಕದ್ದು. ದೇವಿಯು ಗುಂಪಿನಲ್ಲಿ ಆವಿರ್ಭಾವವಾಗುವುದಿಲ್ಲ. ಸಾಮಾನ್ಯವಾಗಿ ಜನಸಂದಣಿಯು ಶಕ್ತಿ ತರಂಗಗಳನ್ನು ವಿರೂಪಗೊಳಿಸುತ್ತದೆ; ಏಕೆಂದರೆ ಒಬ್ಬೊಬ್ಬರು ಒಂದೊಂದು ಆಲೋಚನೆಯನ್ನು ಹೊಂದಿರುತ್ತಾರೆ. ಆದರೆ ಭಜನೆ ಅಥವಾ ಆಧ್ಯಾತ್ಮಿಕ ಪ್ರವಚನಗಳು ನಡೆಯುವ ಸ್ಥಳಗಳಲ್ಲಿ ಧನಾತ್ಮಕಾವಾದ ತರಂಗಗಳ ಸಾಂದ್ರತೆಯು ಅನೇಕ ಪಟ್ಟು ಹೆಚ್ಚಾಗಿರುತ್ತದೆ, ಏಕೆಂದರೆ ಒಟ್ಟಾದ ಆಲೋಚನೆಗಳು ಕೇಂದ್ರೀಕೃತವಾಗಿ ಅದು ಭಾವೋದ್ವೇಗಕ್ಕೆ ಎಡೆಮಾಡಿ ಕೊಡುತ್ತದೆ. ದೇವಿಯು ಕೇವಲ ಪರಿಶುದ್ಧವಾದ ಸ್ಥಳಗಳಲ್ಲಿ ಮಾತ್ರವೇ ಆವಿರ್ಭಾವಗೊಳ್ಳುತ್ತಾಳೆ (ನಾಮ ೭೬೫ ಶುದ್ಧಾ ಆಗಿದೆ). ಪರಿಶುದ್ಧ ಸ್ಥಳಗಳೆಂದರೆ ಆತ್ಮಸಾಕ್ಷಾತ್ಕರ ಹೊಂದಿದ ವ್ಯಕ್ತಿಗಳ ಶುದ್ಧ ಮನಸ್ಸು. 

          ಒಟ್ಟಾರೆಯಾಗಿ ಈ ನಾಮವು ದೇವಿಯು ಆತ್ಮಸಾಕ್ಷಾತ್ಕಾರ ಪಡೆದ ವ್ಯಕ್ತಿಗಳ ಮನಸ್ಸಿನಲ್ಲಿ ಆವಿರ್ಭವಿಸುತ್ತಾಳೆಂದು ಹೇಳುತ್ತದೆ.

ಇನ್ನಷ್ಟು ವಿವರಗಳು: ಮಾನಸಿಕ ಶುದ್ಧತೆಯು ಶಾರೀರಿಕ ಶುದ್ಧತೆಗಿಂತ ಹೆಚ್ಚು ಮಹತ್ವವಾದದ್ದು. ಮನಸ್ಸು ಆಲೋಚನೆಗಳ ಸಂದಣಿಯಿಂದ ಕೂಡಿದ್ದರೆ, ಅದನ್ನು ಕೇಂದ್ರೀಕೃತಗೊಳಿಸಲಾಗದು. ಎಲ್ಲಿಯವರೆಗೆ ಮನಸ್ಸನ್ನು ದೇವಿಯ ಮೇಲೆ ಕೇಂದ್ರೀಕರಿಸಲಾಗುವುದಿಲ್ಲವೋ ಅಲ್ಲಿಯವರೆಗೆ ಆಕೆಯನ್ನು ಹೊಂದಲು ಸಾಧ್ಯವಿಲ್ಲ. ಕೇವಲ ಮನಸ್ಸೊಂದೇ ದೇವಿಯನ್ನು ಪಡೆಯುವ ಸಾಧನವಾಗಿದೆ. ಮನಸ್ಸನ್ನು ಮೂರು ವಿಧವಾಗಿ ನಿಯಂತ್ರಣದಲ್ಲಿಡಬಹುದು. ಮೊದಲನೆಯದು ಪ್ರಾಣಾಯಾಮದ ಮೂಲಕ. ಎರಡನೆಯದು ಆಂತರಿಕ ಸಲಕರಣೆಗಳು ಅಥವಾ ಅಂತಃಕರಣಗಳ ಮೂಲಕ ಪ್ರಜ್ಞೆಯನ್ನು ಕೇಂದ್ರೀಕರಿಸುವುದರ ಮೂಲಕ. ಮೂರನೆಯದೇ ಸಮಾಧಿ ಸ್ಥಿತಿಯನ್ನು ಹೊಂದುವ ಮೂಲಕ ಮನಸ್ಸನ್ನು ನಿಯಂತ್ರಣದಲ್ಲಿಡುವುದು. ಇದುವೇ ವೈಯ್ಯಕ್ತಿಕ ಅನುಭವದ ಮೂಲಕ ಸಾಕ್ಷಾತ್ಕಾರವನ್ನು ಪಡೆಯುವುದಾಗಿದೆ. ಮಹರ್ಷಿ ಪತಂಜಲಿಯು ತನ್ನ ಯೋಗ ಸೂತ್ರದಲ್ಲಿ (೧.೪) ಹೀಗೆ ಹೇಳುತ್ತಾನೆ, "ಯಾವಾಗ ಮನಸ್ಸು ಸ್ಥಿರವಾಗಿರುವುದಿಲ್ಲವೋ, ಸ್ತಬ್ದವಾಗಿರುವುದಿಲ್ಲವೋ ಮತ್ತು ಪರಿಶುದ್ಧಗೊಂಡಿರುವುದಿಲ್ಲವೋ ಅಲ್ಲಿಯವರೆಗೆ ದ್ರಷ್ಟಾರನು (ನೋಡುಗನು) ಚಿತ್ತವೃತ್ತಿಗಳೊಡನೆ (ಮನೋವಿಕಾರಗಳೊಡನೆ) ಸಮೀಕರಿಸಲ್ಪಡುತ್ತಾನೆ. ಯೋಗ ಸೂತ್ರವು ಪ್ರತಿಯೊಂದು ವಿಷಯವೂ ಮನಸ್ಸಿನಿಂದ ಉದ್ಭವಿಸುತ್ತದೆ ಎಂದು ಹೇಳುತ್ತದೆ. ಎಲ್ಲಿಯವರೆಗೆ ಮನಸ್ಸು ಮೋಹಬಂಧನ, ಆಸೆ ಮತ್ತು ಅಹಂಕಾರಗಳಿಂದ ಮುಕ್ತವಾಗಿರುವುದಿಲ್ಲವೋ ಅಲ್ಲಿಯವರೆಗೆ ಅದು ಪರಿಶುದ್ಧವಾಗದು. ಆಧ್ಯಾತ್ಮಿಕ ಉನ್ನತಿಯನ್ನು, ಕೇವಲ ಮನಸ್ಸಿನ ಆಲೋಚನೆಗಳ ಸ್ಥಿರತೆ, ಸ್ತಬ್ದತೆ ಮತ್ತು ಶುದ್ಧತೆ -ಈ ಮೂರು ಅಂಶಗಳ ಮೂಲಕವಷ್ಟೇ ಅಳೆಯಬಹುದು. ಒಬ್ಬನ ಆಧ್ಯಾತ್ಮಿಕ ಉನ್ನತಿಯನ್ನು ಬೇರೊಬ್ಬರ ನಿರ್ಣಯಗಳ ಮೇಲೆ ನಿರ್ಧರಿಸಬಾರದು. ಒಬ್ಬನು ಸ್ವತಃ ತನ್ನಷ್ಟಕ್ಕೇ ತಾನೇ ತನ್ನ ಆಧ್ಯಾತ್ಮಿಕ ಸ್ತರವನ್ನು ಅಳೆದುಕೊಳ್ಳುವ ನ್ಯಾಯನಿರ್ಣಾಯಕನಾಗಬೇಕು.

Vīra-mātā वीर-माता (836)

೮೩೬. ವೀರ ಮಾತಾ

          ವೀರ ಎಂದರೆ ಭಗವಾನ್ ಗಣೇಶ ಮತ್ತು ಆತನ ತಾಯಿಯು ವೀರಮಾತೆಯಾಗಿದ್ದಾಳೆ. ವೀರರು ಎಂದರೆ ಯುದ್ಧದಲ್ಲಿ ಹೋರಾಡುವ ಸೈನಿಕರು. ದೇವಿಯು ಸ್ವಯಂ ಹೋರಾಟಗಾರ್ತಿಯಾಗಿದ್ದು ಆಕೆಯನ್ನು ಹೋರಾಟಗಾರರ ಮಾತೆ ಎಂದು ಇಲ್ಲಿ ಸಂಭೋದಿಸಲಾಗಿದೆ. ಇಲ್ಲಿ ಹೋರಾಟಗಾರರೆಂದರೆ ದುಷ್ಟ ಶಕ್ತಿಗಳ ವಿರುದ್ಧ ಹೋರಾಡುವವರು. ನಾಮ ೭೭೭ - ವೀರಾರ್ಚಿತ ಆಗಿದ್ದು ದೇವಿಯು ವೀರರಿಂದ ಪೂಜಿಸಲ್ಪಡುತ್ತಾಳೆ ಎಂದು ಹೇಳುತ್ತದೆ.

         ವೀರಾಚಾರದ ಮೂಲಕ ದೇವಿಯನ್ನು ಪೂಜಿಸುವವರನ್ನೂ ಸಹ ವೀರರೆಂದು ಕರೆಯಲಾಗುತ್ತದೆ ಅಥವಾ ತನ್ನ ಅಹಂಕಾರವನ್ನು ಜಯಿಸಿದವನನ್ನು ವೀರನೆನ್ನುತ್ತಾರೆ. ದೇವಿಯು ಅಂತಹ ಭಕ್ತರ ಮಾತೆಯಾಗಿದ್ದಾಳೆ. ಅವರು ಆಕೆಯನ್ನು ವಿವಿಧ ಹೆಸರುಗಳಿಂದ ಸಂಭೋದಿಸುತ್ತಾರೆ; ಉದಾ: ಮಾ, ದೇವಮಾತೆ, ಜಗನ್ಮಾತೆ, ತಾಯಿ, ಮಾತಾ, ಮೊದಲಾದವುಗಳು.

Viyatprasūḥ वियत्प्रसूः (837)

೮೩೭. ವಿಯತ್-ಪ್ರಸೂಃ

           ದೇವಿಯು ಆಕಾಶ ಅಥವಾ ಮಹಾಭೂತಗಳ ಮೂಲವಸ್ತುವನ್ನು ಸೃಜಿಸುವವಳಾಗಿದ್ದಾಳೆ ಎನ್ನುವುದು ಈ ನಾಮದ ಅರ್ಥ. ಆಕಾಶವು ಬ್ರಹ್ಮದಿಂದ ಹುಟ್ಟಿತು ಮತ್ತು ಇತರೇ ಧಾತುಗಳು ಆಕಾಶದಿಂದ ಹುಟ್ಟಿದವು. ತೈತ್ತರೀಯ ಉಪನಿಷತ್ತು (೨.೧) ಹೀಗೆ ಹೇಳುತ್ತದೆ, "ತಸ್ಮಾತ್ ವೈ ಏತಸ್ಮಾತ್ ಆತ್ಮನಃ, ಆಕಾಶಃ ಸಂಭೂತಃ तस्मात् वै एतस्मात् आत्मनः, आकाशः संभूतः ಅಂದರೆ ಆತ್ಮನಿಂದ (ಬ್ರಹ್ಮದಿಂದ) ಆಕಾಶವು ಉತ್ಪನ್ನವಾಯಿತು. ಅದೇ ಉಪನಿಷತ್ತು ಮುಂದುವರೆಯುತ್ತಾ ಹೀಗೆ ಹೇಳುತ್ತದೆ, "ಆಕಾಶದಿಂದ ವಾಯುವು, ವಾಯುವಿನಿಂದ ಅಗ್ನಿಯು, ಅಗ್ನಿಯಿಂದ ನೀರು ಮತ್ತು ನೀರಿನಿಂದ ಭೂಮಿ ಉತ್ಪನ್ನವಾದವು. ಈ ಭೂಮಿಯಿಂದ ಸಸ್ಯಗಳು, ಸಸ್ಯಗಳಿಂದ ಆಹಾರ ಮತ್ತು ಆ ಆಹಾರದಿಂದ ಮನುಷ್ಯರು ಉತ್ಪನ್ನರಾದರು. ಈ ಉಪನಿಷತ್ತು ಮನುಷ್ಯರನ್ನು ಒಂದು ಪಕ್ಷಿಗೆ ಹೋಲಿಸುತ್ತದೆ. ಹೆಚ್ಚಿನ ವಿವರಗಳಿಗೆ ಇದೇ ಅರ್ಥವನ್ನು ಕೊಡುವ ೫೫೦ನೇ ನಾಮವನ್ನು ನೋಡಬಹುದು.

Mukundā मुकुन्दा (838)

೮೩೮. ಮುಕುಂದಾ

           ದೇವಿಯು ಜೀವರಿಗೆ ಮುಕ್ತಿಯನ್ನು ಕರುಣಿಸುವವಳಾಗಿದ್ದಾಳೆ. ಮಹಾ ವಿಷ್ಣುವನ್ನು ಸಹ ಮುಕುಂದಃ ಎಂದು ಕರೆಯಲಾಗುತ್ತದೆ. ಯಾರು ಮುಕ್ತಿಯನ್ನು ಕರುಣಿಸುತ್ತಾನೆಯೋ ಅವನು ಮುಕುಂದನಾಗಿದ್ದಾನೆ. ಮುಕ್ತಿ ಎಂದರೆ ಅಂತಿಮ ಬಿಡುಗಡೆ ಅದರ ನಂತರ ವ್ಯಕ್ತಿಗತ ಆತ್ಮವು ಅಸ್ತಿತ್ವದಲ್ಲಿ ಉಳಿಯುವುದಿಲ್ಲ. ಅದು ಪರಬ್ರಹ್ಮದೊಂದಿಗೆ ಐಕ್ಯವಾಗುತ್ತದೆ.

           ಮುಕ್ತಿಯು ಮೂರು ವಿಧದ್ದಾಗಿದೆ; ಕ್ರಮ ಮುಕ್ತಿ (ನಿಧಾನವಾದ ಮುಕ್ತಿ), ವಿದೇಹ ಮುಕ್ತಿ (ಅಂತಿಮ ಮುಕ್ತಿ) ಮತ್ತು ಸದ್ಯೋ ಮುಕ್ತಿ (ತತ್ ಕ್ಷಣದ ಮುಕ್ತಿ). ಮುಕ್ತಿ ಅಥವಾ ಬಿಡುಗಡೆ ಎನ್ನುವುದು ಎಲ್ಲಾ ದುಃಖ ಮತ್ತು ಯಾತನೆಗಳಿಂದ ವಿಮುಕ್ತವಾಗಿ ಬ್ರಹ್ಮಾನಂದವನ್ನು ಹೊಂದುವುದಾಗಿದೆ.

Mukti-nilayā मुक्ति-निलया (839)

೮೩೯. ಮುಕ್ತಿ ನಿಲಯಾ

          ದೇವಿಯು ಮುಕ್ತಿಯ ಆವಾಸ ಸ್ಥಾನವಾಗಿದ್ದಾಳೆ. ಅವಳ ಬಳಿ ಏನಿದೆಯೋ ಅದನ್ನು ಆಕೆಯು ತನ್ನ ಭಕ್ತರೊಂದಿಗೆ ಹಂಚಿಕೊಳ್ಳುತ್ತಾಳೆ (ಉದಾ: ೧೭೨ ಮತ್ತು ೧೭೩ನೇ ನಾಮಗಳಂತೆ). ಮುಕ್ತಿಯ ಹಂತದಲ್ಲಿ ಆತ್ಮವು ಸಂಪೂರ್ಣವಾಗಿ ಬುದ್ಧಿಯಿಂದ ಬೇರ್ಪಟ್ಟು ವಿಮುಕ್ತಿಯನ್ನುಂಟು ಮಾಡುತ್ತದೆ. ಅದು ಪ್ರಕೃತಿಯೆಂದು ಕರೆಯಲ್ಪಡುವ ವಸ್ತು ಪ್ರಪಂಚದಿಂದ ಆತ್ಮದ ಸಂಪೂರ್ಣ ಬೇರ್ಪಡುವಿಕೆಯಾಗಿದೆ. ಎಲ್ಲಾ ವಿಧವಾದ ಶಾರೀರಿಕ ಮತ್ತು ಭೌತಿಕ ಪರಿಮಿತಿಗಳನ್ನು ಅಧಿಗಮಿಸಿ ಆತ್ಮವು ಏಕಾಂಗಿಯಾಗಿ ಮನಸ್ಸು ಮತ್ತು ವಸ್ತುಗಳ ಪರಿಧಿಯಿಂದ ಸಂಪೂರ್ಣವಾಗಿ ಬೇರ್ಪಟ್ಟು ಅದು ನಿತ್ಯ ಶುದ್ಧ ಮತ್ತು ನಿತ್ಯ ಮುಕ್ತವಾದ ಸರ್ವವ್ಯಾಪಿಯಾಗಿರುವ ಆತ್ಮದಂತೆ ತೇಜೋಮಯವಾಗಿ ಹೊಳೆಯುತ್ತದೆ. ನಾಮ ೬೨೫ನ್ನೂ ನೋಡಿ.

         ವೇದಾಂತ ಮತ್ತು ಸಾಂಖ್ಯ ಯೋಗಗಳು ಮುಕ್ತಿಗೆ ವಿಭಿನ್ನವಾದ ಮಾರ್ಗಗಳನ್ನು ಒದಗಿಸುತ್ತವೆ. ವೇದಾಂತವು ಒಬ್ಬನು ಆತ್ಮದಿಂದ ಮನಸ್ಸನ್ನು ಬೇರ್ಪಡಿಸಬಾರದು ಎಂದು ಹೇಳಿದರೆ ಸಾಂಖ್ಯ ಯೋಗವು ಒಬ್ಬನು ಆತ್ಮದಿಂದ ಮನಸ್ಸನ್ನು ಬೇರ್ಪಡಿಸಿಕೊಳ್ಳಬೇಕು ಎಂದು ಹೇಳುತ್ತದೆ.

         ೧೦೮ ಉಪನಿಷತ್ತುಗಳಲ್ಲಿ ಕಡೆಯದಾದ ಮೌಕ್ತಿಕೋಪನಿಷತ್ತು ಎನ್ನುವ ಒಂದು ಉಪನಿಷತ್ತೂ ಇದೆ ಮತ್ತದು ಎಲ್ಲಾ ೧೦೮ ಉಪನಿಷತ್ತುಗಳನ್ನೂ ಹೆಸರಿಸುತ್ತದೆ. ಈ ಉಪನಿಷತ್ತು ಹನುಮಂತನ ಕೋರಿಕೆಯ ಮೇರೆಗೆ ಶ್ರೀರಾಮನಿಂದ ಉಪದೇಶಿಸಲ್ಪಟ್ಟಿತು ಎಂದು ಹೇಳಲಾಗುತ್ತದೆ.

Mūla-vigraha-rūpiṇī मूल-विग्रह-रूपिणी (840)

೮೪೦. ಮೂಲ-ವಿಗ್ರಹ-ರೂಪಿಣೀ

           ಲಲಿತಾಂಬಿಕೆಯು ಎಲ್ಲಾ ಶಕ್ತಿಗಳ ಮೂಲವಾಗಿದ್ದಾಳೆ. ವಿಗ್ರಹ ಎಂದರೆ ವ್ಯಕ್ತವಾಗುವಿಕೆ, ಮೂರ್ತರೂಪ ತಾಳುವಿಕೆ ಮತ್ತು ಮೂಲ ಶಬ್ದವು ಹುಟ್ಟು, ನಿಜವಾದ, ಬುನಾದಿ, ಅಡಿಪಾಯ ಮೊದಲಾದ ಅರ್ಥಗಳನ್ನು ಹೊಂದಿದೆ. ಮೂಲ ವಿಗ್ರಹ ಎನ್ನುವುದು ಮೂಲ ರೂಪವಾಗಿದ್ದು ಅದು ದೇವಿಯ ಶ್ರೀ ಮಾತಾ ರೂಪವಾಗಿದೆ.

           ಬಹುರ್ವಚೋಪನಿಷತ್ತು ಎನ್ನುವ ಒಂದು ಉಪನಿಷತ್ತಿದೆ, ಅದು ಆದಿಯಲ್ಲಿ ಕೇವಲ ದೇವಿಯೊಬ್ಬಳೇ ಅಸ್ತಿತ್ವದಲ್ಲಿದ್ದಳೆಂದು ಹೇಳುತ್ತದೆ. ಅವಳಿಂದಲೇ ಬ್ರಹ್ಮ, ವಿಷ್ಣು ಮತ್ತು ರುದ್ರರು ಉದ್ಭವಿಸಿದರು. ಆಕೆಯನ್ನು ಮಹಾತ್ರಿಪುರ ಸುಂದರೀ ಎಂದು ಕರೆಯಲಾಗಿದೆ. ಆ ಉಪನಿಷತ್ತು ಮುಂದುವರೆಯುತ್ತಾ ದೇವಿಯ ವಿವಿಧ ರೂಪಗಳನ್ನು ಹೆಸರಿಸುತ್ತದೆ; ಷೋಡಶೀ, ಪಂಚದಶೀ, ಬಾಲಾ, ಚಂಡಿ, ಮೊದಲಾದವು.

          ಈ ನಾಮವು ದೇವಿಯು ಎಲ್ಲಾ ಶಕ್ತಿಗಳ ಮೂಲವಾಗಿದ್ದಾಳೆ ಎಂದು ಹೇಳುತ್ತದೆ. ಮೂಲ ಶಕ್ತಿಯು ಶಿವನಿಂದ ಆವಿರ್ಭಾವಗೊಂಡ ಶಕ್ತಿ ಎಂದು ಕರೆಯಲ್ಪಟ್ಟು ಅದು ವಿವಿಧ ಶಕ್ತಿಗಳಾಗಿ ಸೃಷ್ಟಿ, ಸ್ಥಿತಿ ಮತ್ತು ಲಯಗಳಲ್ಲಿ ರೂಪಾಂತರ ಹೊಂದುತ್ತದೆ. 

                                                                             ******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 833 - 840 http://www.manblunder.com/2010/06/lalitha-sahasranamam-833-840.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Mon, 12/09/2013 - 20:00

ಶ್ರೀಧರರೆ, ಪರಿಷ್ಕೃತ ಆವೃತ್ತಿಗೆ ಮತ್ತೆ ಸೇರಿಸುತ್ತಿದ್ದೇನೆ.ನ್ವೀರಮಾತ ಕೊನೆಯ ಸಾಲನ್ನು ತುಸು ತಿದ್ದಿದ್ದೇನೆ :-)
.
೧೮೨. ಶ್ರೀ ಲಲಿತಾ ಸಹಸ್ರನಾಮದ ವಿವರಣೆ
.
ಲಲಿತಾ ಸಹಸ್ರನಾಮ ೮೩೩ - ೮೪೦
__________________________________________
.
೮೩೩. ಪಂಚಾಶತ್-ಪೀಠ-ರೂಪಿಣೀ
ಪಂಚದಶಿ ಪ್ರತಿಕೂಟ ಷೋಡಷಾಕ್ಷರ, ತ್ರಿಕೂಟ ಅಷ್ಟ ಚತುರ್ದಶಾಕ್ಷರ
ಅಕ್ಷರ ಸ್ವರೂಪಿಣಿ ಶಬ್ದ ಬ್ರಹ್ಮ ಪಂಚದಶಾಕ್ಷರ ರೂಪದಿ ದೇವಿ ಸಾಕಾರ
ನಿತ್ಯ ನಿರಂತರ ಪರಮಾತ್ಮ ಹೊರ ಹೊಮ್ಮಿಸೊ ಪದ ಅರ್ಥಗಳ ಭರಣಿ
ಐವತ್ತು ಪೀಠ-ಅಸನದ ಸ್ವರೂಪದಲಿಹಳು ಪಂಚಾಶತ್-ಪೀಠ-ರೂಪಿಣೀ ||
.
ಪ್ರಮುಖ ಚಕ್ರಗಳೇಳನು ಪ್ರತಿನಿಧಿಸಿ ಗುಣಿಸೆ ಹನ್ನೆರಡರ ವರ್ಗ
ಸರಿ ಸುಮಾರು ಸಾವಿರ ದಳಗಳಾಗೊ ಸಂಸ್ಕೃತಾಕ್ಷರ ಸಂಸರ್ಗ
ಆಜ್ಞಾಚಕ್ರದೆರಡು ದಳ ಪ್ರತಿ ಒತ್ತೊತ್ತಾಗಿರಿಸಿದಾಗ ನಲವತ್ತೆಂಟು
ಕೆಳಗೈದು ಚಕ್ರ ಬೆಸೆದು ನೂರ್ನಲವತ್ನಾಲ್ಕರ ಜತೆಗೇಳರ ನಂಟು ||
.
೮೩೪. ವಿಶೃಂಖಲಾ
ವಿ-ರಹಿತ, ಶೃಂಖಲಾ-ಬಂಧನ, ಬಂಧನಕತೀತದ ಬ್ರಹ್ಮ ಲಲಿತೆ
ಮಾನವ ಲಕ್ಷಣ ಬಂಧ, ಸುಕರ್ಮದುಷ್ಕರ್ಮಗಳುಂಟು ಮಾಡುತೆ
ಶಾಸ್ತ್ರವಿಹಿತ ಕರ್ಮ ಪಾಲನೆ-ವರ್ಜನೆ ಕಾರ್ಯ-ಕಾರಣ ಕರ್ಮಫಲ
ಅಂಟಿಸುವ ಬಂಧನ ಮನುಜಗೆ, ಕರ್ಮ ಕಾಡದ ದೇವಿ ವಿಶೃಂಖಲಾ ||
.
೮೩೫. ವಿವಿಕ್ತಸ್ಥಾ
ದೇವಿ ಆವಿರ್ಭವಿಸೆ ಪರಿಶುದ್ಧ ತಾಣ, ಆತ್ಮಸಾಕ್ಷಾತ್ಕಾರದ ಶುದ್ಧ ಮನ
ಧನಾತ್ಮಕ ತರಂಗ ಸಾಂದ್ರತೆಯನೇಕ ಪಟ್ಟು, ಭಜನೆ ಧ್ಯಾನ ಪ್ರವಚನ
ಬರಿ ಜನಸಂದಣಿ ಆಲೋಚನಾ ಸಂಕರ ವಿರೂಪಿಸಿ ಶಕ್ತಿತರಂಗ ಮೊತ್ತ
ಆತ್ಮ ಪರಮಾತ್ಮವರಿತ ಜ್ಞಾನಿ ಹೃದಯದೇಕಾಂತ ನಿವಸಿತೆ ವಿವಿಕ್ತಸ್ಥಾ ||
ಕೇಂದ್ರೀಕೃತ ಶುದ್ಧ ಮನಸೊಂದೇ ಸಾಧನ, ದೇವಿಯನೊಲಿಸೆ ಚಿತ್ತ ಮಥನ
ಪ್ರಾಣಾಯಾಮ-ಅಂತರಿಕ ಸಲಕರಣ-ಸಮಾಧಿ ತ್ರಿವಿಧ ಮನ ನಿಯಂತ್ರಣ
ಅಸ್ತಿರ-ಪ್ರಕ್ಷುಬ್ದ-ಅಶುದ್ಧಮನ ಚಿತ್ತವೃತ್ತಿತಲ್ಲಣ ಮನೋವಿಕಾರ ಸಮೀಕರಣ
ಮೋಹ ಕಾಮನೆ ಅಹಂ ಮುಕ್ತ ಮನ ಪರಿಶುದ್ಧ, ಆಧ್ಯಾತ್ಮಿಕ ಉನ್ನತಿ ಜ್ಞಾನ ||
.
೮೩೬. ವೀರ ಮಾತಾ
ವೀರಾಚಾರದೆ ದೇವಿಯ ಪೂಜಿಸೊ ವೀರ, ತನ್ನ ಅಹಂಕಾರ ಜಯಿಸಿದವರ
ಮಾತೆಯಾಗಿ ತರ ಸಂಭೋದಿತೆ ಲಲಿತೆ, ನಾಮವನೇಕ ಏಕೈಕ ದೇವಿ ಸ್ವರ
ಭಗವಾನ್ ವೀರ ಗಣೇಶನ ಮಾತೆಯಾಗಿ ಸ್ವಯಂ ತಾನಾಗಿಹ ವೀರಮಾತಾ
ಹೋರಾಡುತ ದುಷ್ಟ ಶಕ್ತಿಗಳೊಡನೆ, ವೀರ ಸೈನ್ಯದ ಜತೆ ಮಾತೆ ಕಾಪಿಡುತ  ||
.
೮೩೭. ವಿಯತ್-ಪ್ರಸೂಃ
ಬ್ರಹ್ಮದಿಂದ ಹುಟ್ಟಿದ ಆಕಾಶ, ಅದರಿಂದ ಹುಟ್ಟಿದ ಪಂಚಮಹಾಭೂತ
ಮೂಲವಸ್ತು ಧಾತುಗಳೆಲ್ಲವನು ಸೃಜಿಸುತಾ ವಿಯತ್ ಪ್ರಸೂಃ ಲಲಿತ
ಆಕಾಶದಿಂದ ವಾಯು, ವಾಯುವಿನಿಂದ ಅಗ್ನಿ, ಅಗ್ನಿ-ನೀರು-ಭೂಮಿಯ
ಬಿತ್ತಿ ಬೆಳೆದ ಸಸ್ಯಾಹಾರ, ಉತ್ಪಾದಿಸೆ ಮನುಜರ, ಸೃಷ್ಟಿ ಪಕ್ಷಿ ಪ್ರಕ್ರಿಯ ||
.
೮೩೮. ಮುಕುಂದಾ
ಮುಕ್ತಿಯನು ಕರುಣಿಸುವವನಾವನೊ ದೇವಾ, ಅವನೆ ಮುಕುಂದಾ
ಮುಕ್ತಿ ಅಂತಿಮ ಬಿಡುಗಡೆ, ತದನಂತರ ಜೀವಾತ್ಮಕಿಲ್ಲ ಇಹ ಬಂಧ
ಪರಬ್ರಹ್ಮದೊಡನೆ ಐಕ್ಯವಾಗಿಸಿ, ಮುಕ್ತಿ ಕರುಣಿಸುತ ಲಲಿತಾನಂದ
ಕ್ರಮ-ನಿಧಾನ, ವಿದೇಹ-ಅಂತಿಮ, ಸದ್ಯೋ-ತತ್ ಕ್ಷಣ ಮುಕ್ತಿ ವಿಧ ||
.
೮೩೯. ಮುಕ್ತಿ ನಿಲಯಾ
ಪ್ರಕೃತಿಯ ವಸ್ತು ಪ್ರಪಂಚದ, ಸಂಪೂರ್ಣ ಬೇರ್ಪಡಿಕೆಯೆ ಮುಕ್ತೀ
ಆತ್ಮ ಬುದ್ಧಿ ಬೇರ್ಪಡೆ, ಅಧಿಗಮಿಸಿ ಶಾರೀರಿಕ ಭೌತಿಕ ಪರಿಮಿತಿ
ಏಕಾಂಗಿಯಾಗಿ ಮನ-ವಸ್ತು ಪರಿಧಿ ಕಳೆದು, ನಿತ್ಯಶುದ್ಧ ಮುಕ್ತಿಯ
ತೇಜೋಮಯಾತ್ಮದ ಆವಾಸ ಸ್ಥಾನವಾಗಿ, ದೇವಿ ಮುಕ್ತಿ ನಿಲಯಾ ||
.
೮೪೦. ಮೂಲ-ವಿಗ್ರಹ-ರೂಪಿಣೀ
ಶಿವನಿಂದಾವಿರ್ಭಾವ ಮೂಲಶಕ್ತಿ, ಸೃಷ್ಟಿ-ಸ್ಥಿತಿ-ಲಯದಲಿ ರೂಪಾಂತರ
ಸಕಲ ಶಕ್ತಿಮೂಲ ಲಲಿತಾಂಬಿಕೆ, ಮೂಲ ವಿಗ್ರಹ ಶ್ರೀ ಮಾತೆ ಸಾಕಾರ
ಮಹಾತ್ರಿಪುರಸುಂದರೀ-ಷೋಡಶೀ-ಪಂಚದಶೀ-ಬಾಲಾ-ಚಂಡೀ ಸ್ಮರಣಿ
ತ್ರಿಮೂರ್ತಿಗಳುದ್ಭವ ಆದಿಯಸ್ತಿತ್ವ, ದೇವಿಯೆ ಮೂಲ-ವಿಗ್ರಹ-ರೂಪಿಣೀ ||
.
.
ಧನ್ಯವಾದಗಳೊಂದಿಗೆ  
ನಾಗೇಶ ಮೈಸೂರು