೧೮೬೧ ರಲ್ಲಿನ ಕನ್ನಡದ ಮಾದರಿ ( ಉ.ಕ.ಕ. ಕಥೆ...)

೧೮೬೧ ರಲ್ಲಿನ ಕನ್ನಡದ ಮಾದರಿ ( ಉ.ಕ.ಕ. ಕಥೆ...)

"ಮುಂಬಯಿ ಯಿಲಾಖೆಯೊಳಗೆ ಇರುವ ಕನ್ನಡು ಮಾತಾಡುವ ಜನರೊಳಗೆ ಇಂಗ್ರಜ ಭಾಷೆಯನ್ನು ಕಲಿತವರು ಅನೇಕರು ಇಲ್ಲ . ಅದರೆ ಮಹಾರಾಷ್ಟ್ರ ಮತ್ತು ಗುಜರಾಥಿ ಮಾತಾಡುವವರೊಳಗೆ ನೋಡಲಿಕ್ಕೆ ಕೂತರೆ ಯಷ್ಟೋ ಜನರು ಇಂಗ್ರಜ ಭಾಷೆಯ ಅಭ್ಯಾಸ ಚೆನ್ನಾಗಿ ಮಾಡಿ ತಂಮ ಸ್ವಭಾಷೆಯೊಳಗೆ ಉಪಯುಕ್ತವಾದ ವಿಷಯಗಳ ಮೇಲೆ ಅನೇಕ ಗ್ರಂಥಗಳನ್ನು ಬರಿದವರು ಇದ್ದಾರೆ. ಆದರೆ ಇನ್ನುವರೆಗೂ ಕನ್ನಡು ಮಾತನಾಡುವ ಜನರೊಳಗೆ ಹೇಳಿಸಿಕೊಂಬುವಷ್ಟು ಶ್ಯಾಹಣಿರು ಯಾರು ಆಗಿಲ್ಲ . ಮತ್ತು ಇದೇ ಕಾರಣದಿಂದಲೆ ಇನ್ನೂ ತನಕ ಕನ್ನಡು ಭಾಷೆಯೊಳಗೆ ಬಹಳ ಗ್ರಂಥಗಳು ಆಗಿಲ್ಲ . ಅದರ ದೆಸೆಯಿಂದ ಇತ್ತ ಕಡಿಯಿಂದ ೧೦ ಮಂದಿಯನ್ನು ಪುಣೆ ಪಾಠಶಾಲೆಯೊಳಗೆ ಕಳುಹಿಸಿ ತಿಂಗಳು ತಿಂಗಳು ಪಗಾರು ಕೊಟ್ಟು ಇಂಗ್ರಜ ವಿದ್ಯವನ್ನು ಚನ್ನಾಗಿ ಕಲಿಸಿ ಅವರಿಗೆ ದೊಡ್ಡ ದೊಡ್ಡ ಕೆಲಸಗಳನ್ನು ಕೊಡಬೇಕೆಂದು ಸರಕಾರದ ಮನಸ್ಸಿನಲ್ಲಿ ಅದೆ. ಅದರ ದೆಸೆಯಿಂದ ಕನ್ನಡು ಮಾತಾಡುವ ಜನರೊಳಗೆ ೧೬ ರಿಂದ ೧೯ ವರ್ಷದ ತನಕ ವಯಸಿನವರು ವೊಳ್ಳೆ ಪ್ರಕೃತಿಯವರಿದ್ದು ಪುಣೆಕ್ಕೆ ಹೋಗಿ ಅಭ್ಯಾಸ ಮಾಡಬೇಕೆಂಬ ಮನಸ್ಸುಳ್ಳವರು ತಂಮ ತಂಮ ಹೆಸರು , ವಯ , ಜಾತಿ ಇವೆಲ್ಲ ಬರಿದು ಬೆಳಗಾವಿಯ ಡೆಪ್ಯುಟಿ ಯೆಜುಕೇಶನಲ ಇನಸ್ಪೆಕ್ಟರರಾದ ಮಹದೇವ ವಾಸುದೇವರ ಕಡಿಗೆ ಇಲ್ಲವೆ ದಕ್ಷಿಣ ಭಾಗದ ಇನಸ್ಪೆಕ್ಟರರಾದ ಕ್ಯಾಪಟನ ಲೆಸ್ಟರ್ ಸಾಹೇಬರ ಕಡಿಗೆ ಕಳುಹಿಸಿಕೊಡಬೇಕು. ಮತ್ತು ತಂಮ ಅರ್ಜಿಯ ಸಂಗಡ ತಾವು ಕಲಿತ ಸಾಲಿ ಪಂತೋಜಿಯವರ ಕಡಿಯಿಂದ ಚಲುನಡತಿಯ ವಿಷಯಕ್ಕೆ ಸರಟಿಫಿಕೇಟ ಸಹ ಕಳುಹಿಸಬೇಕು. ಅಂದರೆ ಅದರೊಳಗೆ ಬುದ್ಧಿವಂತರಾಗಿರು ೧೦ ಮಂದಿಯನ್ನು ನೇಮಿಸಿ ಪಗಾರು ಠರಾವು ಮಾಡಿ ಪುಣೆಕ್ಕೆ ಕಳುಹಿಸಿಕೊಡುವರು. ಅಲ್ಲಿ ಅವರು ಹೋಗಿ ಪಾಠಶಾಲೆಯೊಳಗೆ ಅಭ್ಯಾಸ ಚಲು ಮಾಡಲಿಕ್ಕೆ ಹತ್ತಿದರೆ ಮುಂದೆ ಅವನಿಗೆ ಇಡಲ್ಪಡುವದು. ಇದರ ವಿಷಯಕ್ಕೆ ಹೆಚ್ಚಿಗೆ ಮಜಕೂರು ತಿಳಿದುಕೊಳ್ಳುವದಕ್ಕೆ ಮನಸ್ಸುಳ್ಳವರು ಸದರ ಗೃಹಸ್ಥರಿಗೆ ಅರ್ಜಿ ಮಾಡಬೆಕು.

(ಸಹಿ)ಕ್ಯಾಪಟನ ಲೆಸ್ಟರ್
ಯೆಜುಕೇಶನಲ ಇನಸ್ಪೆಕ್ಟರ
ದಕ್ಷಿಣ ಭಾಗ .ತಾ.

೭ ಡಿಸೆಂಬರ ೧೮೬೧
ಸ್ವಾರಿ ಮುಕ್ಕಾಮ ಸೊಲ್ಲಾಪೂರ

ಹೀಗೆ ಪುಣೆಕ್ಕೆ ಹೋಗಿ ಬಂದವರು ತಮ್ಮ ಜತೆಗೆ ಮರಾಠಿ ಗಾಳಿ ಮತ್ತು ಸಂಸ್ಕೃತಿಗಳ ಪ್ರಭಾವವನ್ನೂ ಹೊತ್ತುಕೊಂಡು ಆರೇರೆ* ಆಗುತ್ತಿದ್ದರೆಂದು ಬೇರೆ ಹೇಳುವ ಕಾರಣವಿಲ್ಲ. ಇಂಗ್ಲಂಡಕ್ಕೆ ಹೆಚ್ಚಿನ ಅಭ್ಯಾಸಕ್ಕೆ ಹೋದವರು ಥೇಮ್ಸ್ ನದಿಯ ದಂಡೆಯ ಮೆಲೆಯೇ ತಮ್ಮ ಆತ್ಮವನ್ನು ಬಿಟ್ಟು ಬಂದ ಹಾಗೆ , ಪುಣೆಗೆ ಹೋದವರ ಆತ್ಮ ಮುಳಾಮುಠಾ ಸಂಗಮವನ್ನು ಬಿಟ್ಟು ತಿರುಗಿ ಬರುತ್ತಲೇ ಇರಲಿಲ್ಲ.

ಟಿಪ್ಪಣಿ :-
*ಆರೆ- ಮರಾಠಿಗ( ಆರ್ಯ?)

Rating
No votes yet

Comments