೧೯೦. ಲಲಿತಾ ಸಹಸ್ರನಾಮ ೮೮೨ರಿಂದ ೮೯೦ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೮೯೧-೮೯೬
Vidrumābhā विद्रुमाभा (891)
೮೯೧. ವಿದ್ರುಮಾಭಾ
ವಿದ್ರುಮಾ ಎಂದರೆ ಹವಳದ ವರ್ಣದ್ದು ಎಂದರ್ಥ. ಹವಳವು ದೇವಿಯ ಮೈಕಾಂತಿಯಾದ ಕೆಂಪು ಬಣ್ಣವನ್ನು ಹೊಂದಿದೆ. ವಿದ್ರುಮಾ ಶಬ್ದವು ಜ್ಞಾನವೃಕ್ಷ ಎನ್ನುವ ಅರ್ಥವನ್ನೂ ಹೊಂದಿದೆ. ಜ್ಞಾನವನ್ನು ವೃಕ್ಷಕ್ಕೆ ಹೋಲಿಸಲಾಗಿದೆ. ಯಾವ ವಿಧವಾಗಿ ಒಂದೇ ಮರದಿಂದ ಅನೇಕ ವೃಕ್ಷಗಳು ಉದ್ಭವಿಸುತ್ತವೆಯೋ ಹಾಗೆಯೇ ಒಬ್ಬ ಗುರುವಿನಿಂದ ಅನೇಕ ಶಿಷ್ಯರು ತಯಾರಾಗುತ್ತಾರೆ. ದೇವಿಯನ್ನು ನಾಮ ೬೦೩, ೭೧೩ ಮತ್ತು ೭೨೨ರಲ್ಲಿ ಗುರು ಎಂದು ಸಂಭೋದಿಸಲಾಗಿದೆ. ದೇವಿಯು, ಒಂದು ವೃಕ್ಷವು ಅನೇಕ ವೃಕ್ಷಗಳನ್ನು ಕೊಡುವಂತೆ ತನ್ನ ಭಕ್ತರಿಗೆ ಜ್ಞಾನ ಮತ್ತು ವಿವೇಕಗಳನ್ನು ಕೊಡುತ್ತಾಳೆ.
Vaiṣṇavī वैष्णवी (892)
೮೯೨. ವೈಷ್ಣವೀ
ದೇವಿಯು ವಿಷ್ಣುವಿನಂತಹ ಶಕ್ತಿಯನ್ನು ಹೊಂದಿದ್ದಾಳೆ. ವಿಷ್ಣು ಮತ್ತು ಲಲಿತಾಂಬಿಕೆಯರನ್ನು ಅಣ್ಣ-ತಂಗಿಯರೆಂದು ಹೇಳಲಾಗುತ್ತದೆ. ಅವರಿಬ್ಬರೂ, ಸಜ್ಜನರಿಗೆ ತೊಂದರೆ ಕೊಡುವ ರಾಕ್ಷಸರ ಸಂಹಾರವನ್ನು ಮಾಡುತ್ತಾರೆ, ಅವರಿಬ್ಬರ ಹತ್ತಿರ ಒಂದೇ ವಿಧವಾದ ಆಯುಧಗಳಿವೆ, ಹೀಗೆ ಹಲವು ವಿಷಯಗಳಲ್ಲಿ ಅವರಿಬ್ಬರಿಗೂ ಸಾಮ್ಯತೆ ಇದೆ. ಮುಂದಿನ ನಾಮವು ಈ ವಿಷಯವನ್ನು ಇನ್ನಷ್ಟು ವಿಶದ ಪಡಿಸುತ್ತದೆ.
Viṣṇurūpiṇī विष्णुरूपिणी (893)
೮೯೩. ವಿಷ್ಣುರೂಪಿಣೀ
ದೇವಿಯು ವಿಷ್ಣುವಿನ ರೂಪದಲ್ಲಿದ್ದಾಳೆ. ಈ ಸಹಸ್ರನಾಮದ ಹಲವಾರು ನಾಮಗಳು ದೇವಿಯು ವಿಷ್ಣುವಿನ ರೂಪವನ್ನು ಹೊಂದಿದ್ದಾಳೆನ್ನುವುದನ್ನು ದೃಢಪಡಿಸುತ್ತವೆ. ನಾಮ ೨೬೭, ೨೯೮ ಮತ್ತು ೮೩೮ ಇದೇ ಅರ್ಥವನ್ನು ಕೊಡುತ್ತವೆ.
ಶಕ್ತಿಯು ದಿವ್ಯ ಬಲವಾಗಿದೆ (ದೈವೀ ಶಕ್ತಿಯಾಗಿದೆ). ಕೃಷ್ಣನು ಇದನ್ನು ಯೋಗಮಾಯಾ ಎನ್ನುತ್ತಾನೆ. ಭಗವದ್ಗೀತೆಯಲ್ಲಿ ಕೃಷ್ಣನು, "ನಾನು ಜನ್ಮರಹಿತನೂ ಮರಣರಹಿತನೂ ಮತ್ತು ಎಲ್ಲಾ ಜೀವಿಗಳ ಪ್ರಭುವಾದರೂ ಸಹ, ನಾನು ನನ್ನ ಯೋಗ ಮಾಯೆಯ ಮೂಲಕ ಅವತಾರವನ್ನು ಹೊಂದುತ್ತೇನೆ ಮತ್ತು ನನ್ನ ಸ್ವಭಾವವನ್ನು (ಪ್ರಕೃತಿಯನ್ನು) ನಿಯಂತ್ರಣದಲ್ಲಿ ಇಟ್ಟು ಕೊಂಡಿರುತ್ತೇನೆ" ಎಂದು ಹೇಳಿದ್ದಾನೆ. ನಾಮ ೩೩೯, ವಿಷ್ಣು ಮಾಯಾ ಆಗಿದ್ದು ಆ ನಾಮವು ದೇವಿಯು ಲೋಕಗಳನ್ನು ಸುಸ್ಥಿತಿಯಲ್ಲಿಡುವ ವಿಷ್ಣುವಿನ ದೈವೀ ಶಕ್ತಿಯಾಗಿದ್ದಾಳೆಂದು ಹೇಳುತ್ತದೆ. ಈ ನಾಮವು ಇನ್ನೊಂದು ಹೆಜ್ಜೆ ಮುಂದೆ ಹೋಗಿ ದೇವಿಯೇ ಸ್ವಯಂ ವಿಷ್ಣುವಾಗಿದ್ದಾಳೆ ಎಂದು ಹೇಳುತ್ತದೆ. ಶಕ್ತಿಯು (ಮಾಯೆಯು) ಬ್ರಹ್ಮವು ತನ್ನ ಹಿರಿಮೆಯನ್ನು ಅರಿತುಕೊಳ್ಳುವ ಕನ್ನಡಿಯಾಗಿದೆ. ಆದರೆ ಈ ನಾಮವು ದೇವಿಯನ್ನು ಮಾಯೆ ಎಂದು ಕರೆಯುವುದಿಲ್ಲ, ಏಕೆಂದರೆ ಅದರ ಕುರಿತಾಗಿ ನಾಮ ೩೩೯ ಅದಾಗಲೇ ಹೇಳಿದೆ. ಈ ನಾಮವು ದೇವಿಯು ಜಗತ್ತನ್ನು ಪಾಲಿಸುವವಳು ಎಂದು ಹೇಳುತ್ತದೆ; ಏಕೆಂದರೆ ವಿಷ್ಣವು ಈ ಜಗತ್ತನ್ನು ಪಾಲಿಸುವುದಕ್ಕೆ ಪ್ರಸಿದ್ಧನಾಗಿದ್ದಾನೆ. ಹಲವಾರು ಪುರಾಣಗಳು ದೇವಿ ಮತ್ತು ವಿಷ್ಣುವಿನ ನಡುವೆ ಹೋಲಿಕೆಗಳನ್ನು ಮಾಡುತ್ತವೆ.
Ayoniḥ अयोनिः (894)
೮೯೪. ಅಯೋನಿಃ
ಯೋನಿ ಶಬ್ದವನ್ನು ದೈವೀ ಜನನದ ಬಲವನ್ನು ಸೂಚಿಸುವುದಕ್ಕೆ ಬಳಸಲಾಗುತ್ತದೆ ಮತ್ತು ಯೋನಿಯನ್ನು ಸೃಷ್ಟಿಯ ಮೂಲವೆಂದು ಕರೆಯಲಾಗುತ್ತದೆ. ಅ-ಯೋನಿ ಎಂದರೆ ದೇವಿಯ ಮೂಲವಿಲ್ಲದವಳಾಗಿದ್ದಾಳೆ. ಯೋನಿ ಎಂದರೆ ನಿವಾಸ ಸ್ಥಾನ ಮತ್ತು ಅಯೋನಿ ಎಂದರೆ ದೇವಿಯು ನಿವಾಸವಿಲ್ಲದವಳಾಗಿದ್ದಾಳೆ ಅಂದರೆ ಇದು ದೇವಿಯ ಸರ್ವವ್ಯಾಪಿಕತ್ವವನ್ನು ಸೂಚಿಸುತ್ತದೆ. ಮುಂದಿನ ನಾಮವು ಇದಕ್ಕೆ ವಿರುದ್ಧವಾದ ವ್ಯಾಖ್ಯಾನವನ್ನು ಕೊಡುತ್ತದೆ.
Yoni-nilayā योनि-निलया (895)
೮೯೫. ಯೋನಿ-ನಿಲಯಾ
ಮುಂಡಕ ಉಪನಿಷತ್ತು (೩.೧.೩), "ರುಕ್ಮಚರ್ಣಾಂ ಕರ್ತಾರಮೀಷಂ ಪುರುಷಂ ಬ್ರಹ್ಮಯೋನಿಮ್" ಎಂದು ಹೇಳುತ್ತದೆ. ಇದರರ್ಥ, ಹೊಳೆಯುವ ಸೃಷ್ಟಿಕರ್ತನಾದ ಪರಬ್ರಹ್ಮವು ಹಿರಣ್ಯಗರ್ಭ ಅಥವಾ ಪರಮಪುರುಷನಾದ ಬ್ರಹ್ಮಕ್ಕೆ ಕಾರಣವಾಗಿದ್ದಾನೆ. ಆದ್ದರಿಂದ ಬ್ರಹ್ಮಯೋನಿ ಎಂದರೆ ಪ್ರಕೃತಿ. ಪ್ರಕೃತಿಯು ಪುರುಷದೊಂದಿಗೆ ಸಹಯೋಗ ಹೊಂದಿದಾಗ ಅದು ಸೃಷ್ಟಿಗೆ ಕಾರಣವಾಗುತ್ತದೆ.
ಶ್ವೇತಾಶ್ವತರ ಉಪನಿಷತ್ತು (೪.೧೧) ಸಹ ಇದೇ ಅರ್ಥವನ್ನು ಹೊಮ್ಮಿಸುತ್ತದೆ. ಅದು ಎಲ್ಲ ವಸ್ತುಗಳ ಮೂಲದಲ್ಲಿ ಬ್ರಹ್ಮವು ನಿವಸಿಸುತ್ತದೆ ಎಂದು ಹೇಳುತ್ತದೆ. ಅವನು (ಬ್ರಹ್ಮವು) ಪ್ರಪಂಚವು ಅಸ್ತಿತ್ವಕ್ಕೆ ಬಂದಾಗ ಅದರೊಂದಿಗೆ ಬರುತ್ತದೆ ಮತ್ತು ಈ ಪ್ರಪಂಚವು ವಿನಾಶವಾದಾಗ ಅದರೊಂದಿಗೆ ಹಿಂದಿರುಗಿ ಹೋಗುತ್ತದೆ. ಅವನು ಎಲ್ಲವನ್ನೂ ನಿಯಂತ್ರಿಸುತ್ತಾನೆ.
ಬ್ರಹ್ಮಸೂತ್ರ (೧.೪.೨೭) ಸಹ "ಬ್ರಹ್ಮವೇ ಯೋನಿಯೆಂದು ಘೋಷಿಸಲಾಗಿದೆ" ಎಂದು ಹೇಳುತ್ತದೆ.
ಈ ಎಲ್ಲಾ ಕೃತಿಗಳೂ ಸಹ ಸೃಷ್ಟಿಕರ್ತನೇ ಉಗಮದ ಮೂಲವಾಗಿದ್ದಾನೆ; ಅದನ್ನೇ ಯೋನಿ ಎಂದು ಕರೆಯಲಾಗಿದ್ದು ಅದು ವಸ್ತುತಃ ಕಾರಣವಾಗಿದೆ. ಈ ನಾಮವು ದೇವಿಯೇ ಸೃಷ್ಟಿಕರ್ತಳೆಂದು ಹೇಳುತ್ತದೆ.
ಸೌಂದರ್ಯ ಲಹರಿಯು (ಶ್ಲೋಕ ೧೧) ಶ್ರೀ ಚಕ್ರದ ಕುರಿತಾಗಿ ಹೇಳುವಾಗ ಸೂಕ್ಷ್ಮವಾಗಿ ಪ್ರಪಂಚದ ಉಗಮದ ಕುರಿತಾಗಿ ಹೇಳುತ್ತದೆ.
Kūṭasthā कूटस्था (896)
೮೯೬. ಕೂಟಸ್ಥಾ
ಕೂಟ ಎಂದರೆ ಮಾಯೆಯಿಂದ ಪ್ರಭಾವಿತವಾಗಿರುವ ಮೌಢ್ಯ ಅಥವಾ ಅಜ್ಞಾನವಾಗಿದೆ. ಅಜ್ಞಾನವು ಸಂಸಾರದಲ್ಲಿ ಅಥವಾ ಪ್ರಾಪಂಚಿಕ ವಿಷಯಗಳಲ್ಲಿ ಮುಳುಗುವುದರಿಂದ ಹೊರಹೊಮ್ಮುವ ವಸ್ತುವಾಗಿದೆ ಮತ್ತು ಸ್ಥ ಎಂದರೆ ನಿರತವಾಗಿರುವ ಅಥವಾ ವ್ಯಸ್ತವಾಗಿರುವ ಎಂದರ್ಥ. ಆದ್ದರಿಂದ ಕೂಟಸ್ಥಾ ಎನ್ನುವುದರ ಒಟ್ಟಾರೆ ಅರ್ಥವು ಅಜ್ಞಾನದಲ್ಲಿ ನಿರತವಾಗಿರುವುದು. ಈ ನಾಮವು ದೇವಿಯು ಅಜ್ಞಾನದ ಮಧ್ಯದಲ್ಲಿ ಹುದುಗಿದ್ದಾಳೆ ಎಂದು ಹೇಳುತ್ತದೆ!
ಕೂಟಸ್ಥದ ಕುರಿತು ಇನ್ನಷ್ಟು ವಿವರಗಳು:
ಬ್ರಹ್ಮವು ಮಾಯೆಯ ಎಣೆಯಿಲ್ಲದ ರೂಪಗಳಲ್ಲಿ ಪ್ರತಿಫಲಿಸುತ್ತದೆ ಅಥವಾ ಅಗಣಿತ ವ್ಯಕ್ತಿಗಳ/ಜೀವಿಗಳ ಅಜ್ಞಾನಗಳಲ್ಲಿ (ಮೌಢ್ಯಗಳಲ್ಲಿ) ಪ್ರತಿಫಲನವಾಗುತ್ತದೆ. ಅಜ್ಞಾನವು ಜೀವಿಯ ಕಾರಣ ಶರೀರವಾಗಿದೆ. ಇದರ ಪ್ರಭಾವದಿಂದಾಗಿ ಪರಿಮಿತ ಜೀವಾತ್ಮವು ಮನಸ್ಸಿನೊಂದಿಗೆ ಗುರುತಿಸಿಕೊಂಡು ಅಹಂಕಾರವಾಗಿ ವ್ಯಕ್ತವಾಗುತ್ತದೆ. ಅಹಂಕಾರವು ಇಂದ್ರಿಯಗಳೊಂದಿಗೆ ಗುರುತಿಸಿಕೊಂಡು ಒಬ್ಬ ವ್ಯಕ್ತಿಯಾಗುತ್ತದೆ. ಈ ಅಹಂಕಾರವೂ ನಿರಂತರ ಬದಲಾವಣೆಗೆ ಒಳಪಡುತ್ತದೆ. ಈ ನಿರಂತರ ಬದಲಾವಣೆ ಹೊಂದುತ್ತಿರುವ ಅಹಂಕಾರದ ಹಿಂದೆ ನಿತ್ಯ ನಿರಂತರವಾದ ಅವಿಚ್ಛಿನ್ನವಾದ ವಿಕಲ್ಪವಿಲ್ಲದ ಆತ್ಮವು ಹೊಳೆಯುತ್ತಿರುತ್ತದೆ ಮತ್ತು ಇದನ್ನೇ ಕೂಟಸ್ಥಾ ಎಂದು ಕರೆಯಲಾಗುತ್ತದೆ. ಯಾವಾಗ ವ್ಯಕ್ತಿಗತ ಆತ್ಮವು ಅನುಭವಿಸುವ ವ್ಯಕ್ತಿಯಾಗಿ ಕಾರ್ಯನಿರತವಾಗುತ್ತದೆಯೋ (ಭೋಕ್ತನಾಗುತ್ತದೆಯೋ) ಮತ್ತು ಕಾರ್ಯ ಮಾಡುವವನಾಗಿ (ಕರ್ತಾ ಆಗಿ) ಗುರುತಿಸಿಕೊಳ್ಳುತ್ತದೆಯೋ ಆಗ ಅವ್ಯಯವಾದ ಆತ್ಮವು (ಕೂಟಸ್ಥವು) ಸಾಕ್ಷಿಯಾಗಿ ಅದರ ಹಿಂದೆ ಉಳಿಯುತ್ತದೆ. ಈ ಅವ್ಯಯವಾದ ಆತ್ಮವು ಅಜ್ಞಾನದಿಂದ ಪರಿಣಾಮ ಹೊಂದುವುದಿಲ್ಲ ಮತ್ತು ಅದು ಯಾವುದೇ ವಿಧವಾದ ಮಾನಸಿಕ ಅಥವಾ ದೈಹಿಕ ಕ್ರಿಯೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಆದರೆ ಅದು ಕೇವಲ ಸಾಕ್ಷೀಭೂತವಾಗಿರುತ್ತದೆಯಷ್ಟೇ! ದೇವಿಯನ್ನೂ ಸಹ ಕೂಟಸ್ಥಾ ಎಂದು ಕರೆಯಲಾಗಿದೆ ಏಕೆಂದರೆ ಆಕೆಯು ಬದಲಾವಣೆಗಳಿಗೆ ಒಳಪಡುವವಳಲ್ಲ. ಚಿಂತನೆ ಮತ್ತು ಕ್ರಿಯೆಗಳೊಂದಿಗೆ ಸಹಯೋಗ ಹೊಂದಿದ್ದರೆ ಮಾತ್ರ ಬದಲಾವಣೆಗಳು ಉಂಟಾಗುತ್ತವೆ. ಇದನ್ನು ಕೂಟಸ್ಥ ಚೈತನ್ಯ ಅಥವಾ ಕೃಷ್ಣ ಪ್ರಜ್ಞೆ ಅಥವಾ ಕ್ತಿಸ್ತ ಪ್ರಜ್ಞೆ ಎಂದು ಬೇಕಾದರೂ ಕರೆಯಬಹುದು.
ಕೃಷ್ಣನೂ ಸಹ ಈ ಕೂಟಸ್ಥದ ಬಗೆಗೆ ಭಗವದ್ಗೀತೆಯಲ್ಲಿ (೧೨.೩) ಉಲ್ಲೇಖಿಸುತ್ತಾನೆ. ಅವನು, “ಕೂಟಸ್ಥಃ ಅಚಲಂ ಧ್ರುವಂ ಅಂದರೆ ಕೂಟಸ್ಥವು(ಬ್ರಹ್ಮವು) ಬದಲಾವಣೆಯಿಲ್ಲದ ಸ್ಥಿರವಾಗಿರುವ ಮತ್ತು ಚಲನರಹಿತವಾದುದು” ಎಂದು ಹೇಳುತ್ತಾನೆ.
*******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 891 - 896 http://www.manblunder.com/2010/06/lalitha-sahasranamam-891-896.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೧೯೦. ಲಲಿತಾ ಸಹಸ್ರನಾಮ ೮೮೨ರಿಂದ ೮೯೦ನೇ ನಾಮಗಳ ವಿವರಣೆ
ಶ್ರೀಧರರೆ, ಯ ೧೯೦. "ಶ್ರೀ ಲಲಿತಾ ಸಹಸ್ರನಾಮದ ವಿವರಣೆ" ಕಾವ್ಯರೂಪ ತಮ್ಮ ಪರಿಷ್ಕರಣೆಗೆ ಸಿದ್ದ :-) .
.
ಲಲಿತಾ ಸಹಸ್ರನಾಮ ೮೯೧-೮೯೬
____________________________
.
೮೯೧. ವಿದ್ರುಮಾಭಾ
ತಾಯಿ ವೃಕ್ಷದಂತೆ ದೇವಿ, ಕೊಡುವಳನೇಕ ವೃಕ್ಷದ ಜ್ಞಾನ, ವಿವೇಕ
ಗುರು ಸಲಹುವಂತೆ ಶಿಷ್ಯರ, ಭಕ್ತರಿಗೆ ಹಂಚುವಳು ಜ್ಞಾನದ ಸರಕ
ವಿದ್ರುಮಾ-ಜ್ಞಾನವೃಕ್ಷ, ದೇವಿ ಮೈಕಾಂತಿ ಧರಿಸಿದ ಹವಳದ ಪ್ರಭಾ
ಕೆಂಪು ಹವಳದ ಲಲಿತಾಕಾಂತಿ, ಜ್ಞಾನವಾಹಿನಿಯಾಗೆ ವಿದ್ರುಮಾಭಾ ||.
.
೮೯೨. ವೈಷ್ಣವೀ
ಸೋದರ ಸೋದರಿ ಬಂಧ, ವಿಷ್ಣು ಲಲಿತಾಂಬಿಕೆ ಸಂಬಂಧ
ಸಜ್ಜನ ಪೀಡಕ ರಕ್ಕಸರನು ಸಂಹಾರಿಸಿ ಕಾಯುವರು ಸದಾ
ಆಯುಧದಿಂದಿಡಿದು ಕರ್ತವ್ಯ ಹತ್ತು ಹಲವು ಸಾಮ್ಯತೆ ಸವಿ
ಲಲಿತೆಯೆ ವಿಷ್ಣುವಾಗವನ ಶಕ್ತಿಯ ಹೊಂದಿಹ ದೇವಿ ವೈಷ್ಣವೀ ||
.
೮೯೩. ವಿಷ್ಣುರೂಪಿಣೀ
ದಿವ್ಯ ಬಲವೆ ಶಕ್ತಿ, ದೈವೀ ಶಕ್ತಿಯೆ ಯೋಗಮಾಯೆಯೆಂದಾ ಕೃಷ್ಣ
ಜನನಮರಣರಹಿತ, ಜೀವಿಗಳ ಪ್ರಭುವಿದ್ದೂ, ಅವತಾರವೆತ್ತಿ ಬ್ರಹ್ಮ
ವಿಷ್ಣುವಿನ ಮಾಯೆ ಲಲಿತ, ಸ್ವಯಂವಿಷ್ಣುವಾಗಿ ಜಗಪಾಲಿಸೆ ಜನನಿ
ಶಕ್ತಿ ಮಾಯೆಯಾಗಿ ಬ್ರಹ್ಮಕೆ ಕನ್ನಡಿ, ಹಿರಿಮೆ ತೋರಿ ವಿಷ್ಣುರೂಪಿಣೀ ||
.
೮೯೪. ಅಯೋನಿಃ
ಸೃಷ್ಟಿಯ ಮೂಲವೆ ಯೋನಿ, ಮೂಲವಿಲ್ಲದ ದೇವಿ ಅಯೋನಿಃ
ಯೋನಿ ದೈವೀ ಜನನಬಲ-ನಿವಾಸ ಸ್ಥಾನ, ದೇವಿ ಅನಿವಾಸಿನಿ
ನಿವಾಸವಿಲ್ಲದ ಲಲಿತೆ, ಸರ್ವ-ಸಕಲದಲವಳೆ ವ್ಯಾಪಿಸಿರುವಂತೆ
ಸರ್ವಾಂತರ್ಯಾಮಿ ಬ್ರಹ್ಮದ ಸ್ವಯಂಭು ಪ್ರಜ್ಞೆಯ ಸಾರುವ ಕಥೆ ||
.
೮೯೫. ಯೋನಿ-ನಿಲಯಾ
ಬ್ರಹ್ಮಯೋನಿಯೆ ಪ್ರಕೃತಿ, ಪುರುಷ ಸಹಯೋಗದಲಿ ಸೃಷ್ಟಿಗೆ ಚರಣ
ಪ್ರಕಾಶಿತ ಪರಬ್ರಹ್ಮನೆ ಹಿರಣ್ಯಗರ್ಭ-ಪರಮ ಪುರುಷ ಬ್ರಹ್ಮಕೆ ಕಾರಣ
ಬ್ರಹ್ಮದೊಂದಿಗೆ ಆಗಮಿಸಿ ನಿರ್ಗಮಿಸೊ ಅಸ್ತಿತ್ವ, ನಿವಸಿಸಿ ಹತೋಟಿಯ
ಇಟ್ಟ ಬ್ರಹ್ಮವೆಯೋನಿ, ದೇವಿ ಸೃಷ್ಟಿಯುಗಮ ಕಾರಣ ಯೋನಿನಿಲಯಾ ||
.
೮೯೬. ಕೂಟಸ್ಥಾ
ಅಜ್ಞಾನ ಮೌಢ್ಯವೆ ಕೂಟ, ಐಹಿಕದೆ ಮುಳುಗಿರೆ ಹೊರಹೊಮ್ಮುವ ವಸ್ತು
ಅಜ್ಞಾನದೆ ವ್ಯಸ್ತವಾಗ್ಹುದುಗಿಹಳು ಮಧ್ಯದಿ ಲಲಿತೆ, ಮಾಯೆ ಮುಸುಕಿತ್ತು
ಇಂದ್ರಿಯ-ಅಹಂ ಸೇರಿ ವ್ಯಕ್ತಿ, ಬದಲಾಗೊ ನಿರಂತರ ಹಿನ್ನಲೆ ಸಾಕ್ಷೀಭೂತ
ಅವಿಚ್ಛಿನ್ಬ ಅವಿಕಲ್ಪಾತ್ಮ ಬ್ರಹ್ಮ ಜತೆ ಲಲಿತೆಯು ಕೂಟಸ್ಥ ಬಲಾವಣೆಗತೀತ ||
.
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು