೧೯೧. ಲಲಿತಾ ಸಹಸ್ರನಾಮ ೮೯೭ರಿಂದ ೯೦೦ನೇ ನಾಮಗಳ ವಿವರಣೆ

೧೯೧. ಲಲಿತಾ ಸಹಸ್ರನಾಮ ೮೯೭ರಿಂದ ೯೦೦ನೇ ನಾಮಗಳ ವಿವರಣೆ

                                                                      ಲಲಿತಾ ಸಹಸ್ರನಾಮ ೮೯೭ - ೯೦೦

Kula-rūpiṇī कुल-रूपिणी (897)

೮೯೭. ಕುಲ-ರೂಪಿಣೀ

            ಕುಲ ಶಬ್ದಕ್ಕೆ ಶ್ರೇಷ್ಠವಾದ, ಉನ್ನತವಾದ, ಜಾತಿ, ಪ್ರಮುಖವಾದ, ಮೊದಲಾದ ಅರ್ಥಗಳಿವೆ. ಶಕ್ತಿಯ ಆರಾಧಕರಿಗೆ ಶಾಕ್ತರೆಂದು ಹೆಸರು; ಅವರು ಆಚರಿಸುವ ಪದ್ಧತಿಗಳಿಗೆ ಕುಲ ಎಂದು ಹೆಸರು. ವಿಶೇಷವಾಗಿ ಶಕ್ತಿಯನ್ನು ವಾಮ ಹಸ್ತದಿಂದ (ಎಡಗೈಯ್ಯಿಂದ) ಪೂಜಿಸುವವರ ತತ್ವ ಮತ್ತು ಆಚರಣೆಗಳನ್ನು ಕೌಲ ಪದ್ಧತಿ ಎಂದು ಕರೆಯಲಾಗುತ್ತದೆ.

           ಮೂಲಾಧಾರ ಚಕ್ರವನ್ನೂ ಸಹ ಕುಲ ಎಂದು ಕರೆಯುತ್ತಾರೆ. ಈ ಸಹಸ್ರನಾಮದಲ್ಲಿ ಅನೇಕ ನಾಮಗಳು ಈ ಕುಲ ಶಬ್ದದಿಂದ ಪ್ರಾರಂಭವಾಗುತ್ತವೆ ಉದಾಹರಣೆಗೆ ೯೦ರಿಂದ ೯೬ ಮತ್ತು ೪೩೯ರಿಂದ ೪೪೧; ಇವುಗಳು ದೇವಿಯ ವಿವಿಧ ಕುಲ ಸ್ವರೂಪಗಳನ್ನು ಚರ್ಚಿಸುತ್ತವೆ.

ಕೌಲರ ಕುರಿತು ಇನ್ನಷ್ಟು ವಿವರಗಳು:

           ಒಬ್ಬ ಕೌಲನು ಸ್ವಯಂ ಗುರುವಾಗಿರುತ್ತಾನೆ. ಕೌಲರಲ್ಲಿ ಮೂರು ವಿಭಾಗಗಳಿವೆ. ಅದರಲ್ಲಿ ಮೊದಲನೆಯ ವರ್ಗವು ಕೆಳ ದರ್ಜೆಯದೆಂದು ಪರಿಗಣಿಸಲ್ಪಡುತ್ತದೆ; ಏಕೆಂದರೆ ಇವರು ಯಾವಾಗಲೂ ವಿಧವಿಧವಾದ ಜಪ, ಪೂಜೆ, ಹೋಮ ಮೊದಲಾದ ಉಪಾಸನೆಗಳಲ್ಲಿ ತೊಡಗಿರುತ್ತಾರೆ. ಮಧ್ಯಮ ವರ್ಗದವರು ಧ್ಯಾನದ ಮೇಲೆ ಹೆಚ್ಚಿನ ಸಮಯವನ್ನು ವಿನಿಯೋಗಿಸಿ ಸಮಾಧಿ ಸ್ಥಿತಿಯನ್ನು ಹೊಂದುತ್ತಾರೆ. ಶ್ರೇಷ್ಠನಾದ ಕೌಲನು ಆತ್ಮ-ಸಾಕ್ಷಾತ್ಕಾರ ಹೊಂದಿದ ವ್ಯಕ್ತಿಯಾಗಿರುತ್ತಾನೆ. ಅವನು ಆತ್ಮ ಮತ್ತು ಪರಮಾತ್ಮದೊಂದಿಗೆ ದೃಢವಾದ ಸಂಭಂದವನ್ನೇರ್ಪಡಿಸಿಕೊಳ್ಳುತ್ತಾನೆ. ಅವನು ಸಂಪೂರ್ಣ ತೃಪ್ತಿ, ಕ್ಷಮಾಗುಣ ಮತ್ತು ಕರುಣಾಗುಣಗಳಿಂದ ತುಂಬಿರುತ್ತಾನೆ.

         ಈ ನಾಮವು ದೇವಿಯು ಮೇಲೆ ವಿವರಿಸಿರುವ ಕೌಲರ ವಿವಿಧ ರೂಪಗಳಲ್ಲಿರುತ್ತಾಳೆಂದು ಹೇಳುತ್ತದೆ.

Vīragoṣṭi-priyā वीरगोष्टि-प्रिया (898)

೮೯೮. ವೀರಗೋಷ್ಠಿ-ಪ್ರಿಯಾ

            ದೇವಿಯು ವೀರ ಮಾತಾ (ನಾಮ ೮೩೬) ಆಗಿರುವುದರಿಂದ ಆಕೆಯು ಜ್ಞಾನಿಗಳ ಸಭೆಯನ್ನು (ಗೋಷ್ಠಿಯನ್ನು) ಇಷ್ಟಪಡುತ್ತಾಳೆ. ವೀರ ಎಂದರೆ ಮೇಲ್ಗೈ ಹೊಂದು ಅಥವಾ ಮಣಿಸು ಎನ್ನುವ ಅರ್ಥವೂ ಇದೆ. ಯಾರು ತಮ್ಮ ಇಂದ್ರಿಯಗಳ ಮೇಲೆ ಹತೋಟಿಯನ್ನು ಸಾಧಿಸಿದ್ದಾರೆಯೋ ಅವರನ್ನು ವೀರ ಎಂದು ಕರೆಯಲಾಗುತ್ತದೆ. ಇಂದ್ರಿಯಗಳನ್ನು ಜಯಿಸುವುದು ರಣರಂಗದಲ್ಲಿ ಯುದ್ಧ ಮಾಡಿದಂತೆ. ಹೀಗೆ ವಿಜಯಿಯಾದವರನ್ನು ವೀರಗೋಷ್ಠಿ (ಯೋಧರ ಗುಂಪು) ಎಂದು ಕರೆಯಲಾಗುತ್ತದೆ.

Vīrā वीरा (899)

೮೯೯. ವೀರಾ

            ದೇವಿಯು ಶೌರ್ಯವುಳ್ಳವಳಾಗಿದ್ದಾಳೆ. ಅವಳ ಕುಟುಂಬವೂ ಸಹ ಯುದ್ಧವೀರರಿಂದ ತುಂಬಿದೆ. ಆಕೆಯ ಸಂಗಾತಿಯಾದ ಶಿವ, ಆಕೆಯ ಮಕ್ಕಳಾದ ಗಣೇಶ ಮತ್ತು ಕಾರ್ತಿಕೇಯರೂ ಸಹ ಮಹಾನ್ ಶೂರರಾಗಿದ್ದಾರೆ. ಅವರು ರಾಕ್ಷಸರನ್ನು (ದುಷ್ಟ ಶಕ್ತಿಗಳನ್ನು) ನಾಶಗೊಳಿಸುವುದರ ಮೂಲಕ ತಮ್ಮ ಶೌರ್ಯವನ್ನು ಮೆರೆದಿದ್ದಾರೆ.

            ಕೃಷ್ಣನು ಭಗವದ್ಗೀತೆಯಲ್ಲಿ (೧೬.೪) ರಾಕ್ಷಸ ವ್ಯಕ್ತಿತ್ವವುಳ್ಳವರ ಗುಣ ಲಕ್ಷಣಗಳನ್ನು ವಿವರಿಸುತ್ತಾನೆ, "ದಂಭ (ಆಷಾಡಭೂತಿತನ), ದರ್ಪ (ಸೊಕ್ಕು), ಅಹಂಕಾರ, ಕ್ರೋಧ, ಕಠಿಣವಾದ ಮಾತು, ಮತ್ತು ಅಜ್ಞಾನ ಇವುಗಳು ಅಸುರೀ ಸಂಪತ್ತಿಗೆ ಹುಟ್ಟಿರುವವನಿಗೆ ಉಂಟಾಗುತ್ತವೆ". ಮುಂದಿನ ಶ್ಲೋಕದಲ್ಲಿ, "ಅಸುರೀ ಸಂಪತ್ತು ಬಂಧನಕ್ಕಾಗಿಯೂ ಮತ್ತು ದೈವೀ ಸಂಪತ್ತು ಮೋಕ್ಷಕ್ಕಾಗಿಯೂ ಇರುವುದು" ಎಂದು ಹೇಳುತ್ತಾನೆ.

           ವಿಷ್ಣು ಸಹಸ್ರನಾಮದ ೬೫೮ನೇ ನಾಮವೂ ಸಹ ವೀರಃ ಆಗಿದೆ.

Naiṣkarmyā नैष्कर्म्या (900)

೯೦೦. ನೈಷ್ಕರ್ಮ್ಯಾ

            ದೇವಿಯು ಕರ್ಮವನ್ನು ಅಧಿಗಮಿಸುತ್ತಾಳೆ. ಕರ್ಮ ನಿಯಮಗಳು ಯಾರು ಮರ್ತ್ಯರೋ ಅವರಿಗೆ ಮಾತ್ರ ಅನ್ವಯಿಸುತ್ತವೆ. ದೇವಿಯು ಈ ಕರ್ಮ ನಿಯಮಗಳನ್ನು ಜಾರಿಯಲ್ಲಿ ತಂದ ದೈವವಾಗಿದ್ದಾಳೆ. ಪರಬ್ರಹ್ಮವು ಕರ್ಮಗಳಿಂದ ಬಾಧೆಗೊಳಗಾಗುವುದಿಲ್ಲ. ದೇವಿಯು ಪರಬ್ರಹ್ಮವೆಂದು ಈ ಸಹಸ್ರನಾಮದಲ್ಲಿ ಒತ್ತಿ ಹೇಳಿರುವುದರಿಂದ, ಆಕೆಯು ಕರ್ಮಗಳಿಂದ ಬಾಧಿತಳಾಗುವುದಿಲ್ಲ. ಕರ್ಮಗಳು ಆತ್ಮ-ಸಾಕ್ಷಾತ್ಕಾರ ಹೊಂದಿದ ವ್ಯಕ್ತಿಯ ಮೇಲೆ ಪರಿಣಾಮವನ್ನುಂಟು ಮಾಡುವುದಿಲ್ಲ; ಏಕೆಂದರೆ ಅವನಿಗೆ ತನ್ನ ಕರ್ಮಗಳಿಗೆ ತಾನು ಬಾಧ್ಯನಲ್ಲವೆಂದು ಖಚಿತವಾಗಿ ತಿಳಿದಿದೆ. ಕೃಷ್ಣನೂ ಸಹ ಈ ವಿಷಯವನ್ನು ಭಗವದ್ಗೀತೆಯಲ್ಲಿ (೫.೧೦) ದೃಢಪಡಿಸುತ್ತಾನೆ. ಅವನು, "ಯಾರು ಪರಬ್ರಹ್ಮದಲ್ಲಿ (ಭಗವಂತನಲ್ಲಿ) ಕರ್ಮಗಳನ್ನಿಟ್ಟು ಆಸಕ್ತಿಯನ್ನು (ಫಲದಲ್ಲಿ) ಬಿಟ್ಟು ಕರ್ಮವನ್ನು ಮಾಡುತ್ತಾನೆಯೋ ಅವನು ತಾವರೆ ಎಲೆಯು ನೀರಿನಿಂದ ಲಿಪ್ತವಾಗದ ಹಾಗೆ ಪಾಪದಿಂದ ಲಿಪ್ತನಾಗುವುದಿಲ್ಲ" ಎಂದು ಹೇಳಿದ್ದಾನೆ.

           ಕೈವಲ್ಯ ಉಪನಿಷತ್ತು (೨.೩) ಹೇಳುತ್ತದೆ, "ನಾನು ಪುಣ್ಯಾಪುಣ್ಯಗಳಿಂದ ವಿವರ್ಜಿತನಾಗಿದ್ದೇನೆ". ಇದು ಬ್ರಹ್ಮದ ಅದ್ವಿತೀಯ ಲಕ್ಷಣವಾಗಿದೆ.

          ಮಹರ್ಷಿ ಪತಂಜಲಿಯು ತನ್ನ ಯೋಗ ಸೂತ್ರದಲ್ಲಿ (೧.೨೪), "ಕ್ಲೇಶಕರ್ಮವಿಪಾಕಾಶಯೈರಪರಾಮೃಷ್ಟಃ ಪುರುಷವಿಶೇಷೋ ಈಶ್ವರಃ" ಕ್ಲೇಶಗಳು, ಕರ್ಮಗಳು, ವಿಪಾಕ (ಕರ್ಮ ಫಲಗಳು), ಆಶಯ (ಆಸೆಗಳು) ಇವುಗಳಿಂದ ಸೋಂಕಲ್ಪಡದ ವಿಶೇಷ ಪುರುಷನೇ ಈಶ್ವರನು. (ಹಿಂದಿನ ಯೋಗಸೂತ್ರವು ಈಶ್ವರನಲ್ಲಿ ಭಕ್ತಿಯನ್ನಿಡುವುದರಿಂದಲೂ ಸಹ ಸಮಾಧಿ ಸ್ಥಿತಿಯನ್ನು ಹೊಂದಬಹುದು ಎಂದು ಹೇಳುತ್ತದೆ. ಅದು ವಿಷಯ ಸುಖಗಳಲ್ಲಿ ಆಸಕ್ತಿಯನ್ನಿಡದೆ ಸಮಸ್ತ ಕ್ರಿಯೆಗಳನ್ನೂ ಅವನಲ್ಲಿ ಅರ್ಪಿಸುವುದರಿಂದ ಅವನ ಅನುಗ್ರಹವನ್ನು ಪಡೆಯಬಹುದು ಎಂದು ತಿಳಿಸುತ್ತದೆ). 

                                                                  ******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 897 - 900 http://www.manblunder.com/2010/06/lalitha-sahasranamam-897-900.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

 

Rating
Average: 5 (1 vote)

Comments

Submitted by nageshamysore Thu, 12/19/2013 - 05:46

ಶ್ರೀಧರರೆ,"೧೯೧. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ ಸಿದ್ಧ :-)
.
ಅಂದ ಹಾಗೆ ಒಂಭತ್ತು ಶತಕ ಮುಗಿಸಿ ತೊಂಭತ್ತರ ಹೊಸ್ತಿಲಿಗೆ ಕಾಲಿಟ್ಟ ಸಾಧನೆಗೆ ಅಭಿನಂದನೆಗಳು ಸಹ - ಶೇಕಡಾ ಹತ್ತಷ್ಟೆ ಬಾಕಿ!
.
ಲಲಿತಾ ಸಹಸ್ರನಾಮ ೮೯೭ - ೯೦೦
________________________
.
೮೯೭. ಕುಲ-ರೂಪಿಣೀ
ಮೂಲಾಧಾರ ಕುಲ, ವಾಮಾಚಾರ ತತ್ವಾಚರಣೆ ಕೌಲ ಪದ್ದತಿ
ಶ್ರೇಷ್ಠೋನ್ನತ-ಪ್ರಮುಖ-ಜಾತಿ, ಶಕ್ತಿಯಾರಾಧಕ ಶಾಕ್ತರ ಗಣತಿ
ಸ್ವಯಂಗುರು ಕೌಲ ಕೆಳದರ್ಜೆಯಿರೆ ಜಪಪೂಜೆಹೋಮಕೆ ಅಣಿ
ಮಧ್ಯಮ ಧ್ಯಾನಸಮಾಧಿ, ಶ್ರೇಷ್ಠ ಬ್ರಹ್ಮದತ್ತ ರೂಪಿ ಕುಲರೂಪಿಣಿ ||
.
೮೯೮. ವೀರಗೋಷ್ಠಿ-ಪ್ರಿಯಾ
ಇಂದ್ರಿಯ ಜಯಿಸಿ ನಿಯಂತ್ರಿಸಿದವ ವೀರ, ರಣರಂಗದ ಯುದ್ಧ
ವಿಜಯಿಯಾದವ ವೀರಗೋಷ್ಠಿಯ ಯೋಧ, ತನ್ನೊಳಗನು ಗೆದ್ದ
ಗೆಲುಮೆಯಲೊಲಿದ ಅರಿವು, ಜ್ಞಾನಿಯಾಗಿಸುತ ವೀರತ್ವ ಶೌರ್ಯ
ವೀರಗೋಷ್ಠಿ ಸಾಂಗತ್ಯ ಮೆಚ್ಚುವ ವೀರಮಾತ ವೀರಗೋಷ್ಠಿ ಪ್ರಿಯಾ ||
.
೮೯೯. ವೀರಾ
ಯುದ್ಧ ವೀರರಿಂದಲೆ ತುಂಬಿದ ದೇವಿ ಕುಟುಂಬ, ದುಷ್ಟ ಶಕ್ತಿ ದಮನ
ದೇವಿ ಸಂಗಾತಿ ಶಿವ, ಸಂತಾನ ಗಣೇಶ-ಕಾರ್ತಿಕೇಯರ ಶೌರ್ಯಘನ
ಡಂಭ-ದರ್ಪ-ಅಹಂಕಾರ-ಬಿರುನುಡಿ-ಅಜ್ಞಾನ ಅಸುರಿ ಕುಲದ ಪ್ರವರ
ಬಂಧಿಸಿ ಅಸುರೀ ಸಂಪದ, ಮೋಕ್ಷಕೆ ದೈವೀ ಸಂಪದ ನೀಡುತೆ ವೀರಾ ||
.
೯೦೦. ನೈಷ್ಕರ್ಮ್ಯಾ
ಮರ್ತ್ಯರಿಗನ್ವಯ ಕರ್ಮ, ಜಾರಿತಂದ ದೈವ ಅಧಿಗಮಿಸೊ ನಿಯಮ
ಪರಬ್ರಹ್ಮಕಿಲ್ಲ ಕರ್ಮಬಾಧೆ, ಕಾಡವು ಆತ್ಮಸಾಕ್ಷಾತ್ಕಾರವಿರೆ ಮರ್ಮ
ತಾವರೆಲೆಯ ನೀರಂತೆ ಅಲಿಪ್ತ, ಬ್ರಹ್ಮ ಲಕ್ಷಣ ಪುಣ್ಯಾಪುಣ್ಯ ವಿವರ್ಜ್ಯ
ಸಾಧಕರಿಗೆ ಕರ್ಮಭಾಧ್ಯತೆಯ ಮುಕ್ತಿ, ಕರುಣಿಸಿ ಲಲಿತೆ ನೈಷ್ಕರ್ಮ್ಯಾ ||
.
ಪಾಪಾ-ಪುಣ್ಯ ವಿವರ್ಜಿತತೆಯಾಗಿ ಬ್ರಹ್ಮದ ಅದ್ವಿತೀಯ ಲಕ್ಷಣ
ಕ್ಲೇಶ-ಕರ್ಮ-ಕರ್ಮಫಲ-ಆಶಯ ಸೋಕದಾ ಪುರುಷ ವಿಶೇಷಣ
ಈಶ್ವರ ಭಕ್ತಿಯ ಮುಖೇನ, ಸಮಾಧಿ ಸ್ಥಿತಿ ಹೊಂದುವ ಸಾಧ್ಯತೆ
ವಿಷಯಸುಖಾಸಕ್ತಿ ತ್ಯಜಿಸಿ, ಸಮರ್ಪಿಸೆ ಸಕಲ ಅನುಗ್ರಹವಂತೆ ||
.
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು