೧೯೪. ಲಲಿತಾ ಸಹಸ್ರನಾಮ ೯೧೨ನೇ ನಾಮದ ವಿವರಣೆ

೧೯೪. ಲಲಿತಾ ಸಹಸ್ರನಾಮ ೯೧೨ನೇ ನಾಮದ ವಿವರಣೆ

                                                                     ಲಲಿತಾ ಸಹಸ್ರನಾಮ ೯೧೨

Savyāpasavya-mārgasthā सव्यापसव्य-मार्गस्था (912)

೯೧೨. ಸವ್ಯಾಪಸವ್ಯ-ಮಾರ್ಗಸ್ಥಾ

            ಈ ನಾಮವು ಮೂರು ಶಬ್ದಗಳನ್ನು ಒಳಗೊಂಡಿದೆ; ಸವ್ಯ+ಅಪಸವ್ಯ+ಮಾರ್ಗ. ಸವ್ಯ ಎಂದರೆ ಬಲಹಸ್ತ, ಅವಸವ್ಯ ಎಂದರೆ ಎಡಹಸ್ತ ಮತ್ತು ಮಾರ್ಗ ಎಂದರೆ ದಾರಿ (ಬಹುಶಃ ಮಾರ್ಗವು ಸವ್ಯ ಮತ್ತು ಅಪಸವ್ಯ ಇವೆರಡರ ನಡುವಿನ ಮಧ್ಯಮ ಮಾರ್ಗವನ್ನು ಸೂಚಿಸಬಹುದು).

           ಸವ್ಯ ಎಂದರೆ ವೈದಿಕ ಮಾರ್ಗವನ್ನು ಅನುಸರಿಸುವುದು; ಇಲ್ಲಿ ಕೇವಲ ಬಲಗೈಯ್ಯನ್ನು ಮಾತ್ರವೇ ಉಪಯೋಗಿಸಿ ಎಲ್ಲಾ ಪೂಜಾಚರಣೆಗಳನ್ನು ಕೈಗೊಳ್ಳಲಾಗುತ್ತದೆ. ಅಪಸವ್ಯ ಎಂದರೆ ತಾಂತ್ರಿಕ ವಿಧಿ-ವಿಧಾನಗಳು; ಅಲ್ಲಿ ಕೇವಲ ಎಡಗೈಯ್ಯನ್ನು ಮಾತ್ರವೇ ಉಪಯೋಗಿಸಲಾಗುತ್ತದೆ. ಈ ನಾಮವು ದೇವಿಯು ತನ್ನ ಭಕ್ತರು ಇವೆರಡರಲ್ಲಿ ಒಂದು ಮಾರ್ಗವನ್ನು ಆಯ್ದುಕೊಳ್ಳುತ್ತಾರೆ ಎಂದು ಹೇಳುತ್ತದೆ. ಇವನ್ನು ದಕ್ಷಿಣ ಮಾರ್ಗ ಅಥವಾ ವಾಮ ಮಾರ್ಗವೆಂತಲೂ ಹೇಳುತ್ತಾರೆ. ದಕ್ಷಿಣ ಮತ್ತು ವಾಮ ಮಾರ್ಗವನ್ನು ಅನುಸರಿಸಿ ಪೂಜಿಸುವವರಿಗೆ ಇರುವ ಪ್ರಮುಖವಾದ ವ್ಯತ್ಯಾಸವೇನೆಂದರೆ ಅವರು ಪೂಜೆಗೆ ಉಪಯೋಗಿಸುವ ಮೂರ್ತಿ ಅಥವಾ ವಸ್ತು. ದಕ್ಷಿಣ ಮಾರ್ಗದ ಅನುಯಾಯಿಗಳು ಎಲ್ಲಾ ದೇವ-ದೇವಿಯರನ್ನು ಪೂಜಿಸುತ್ತಾರೆ. ಹಿಂದೂ ಧರ್ಮದಲ್ಲಿ ಶಕ್ತಿಯನ್ನು ಕೊಡುವ ಎಲ್ಲಾ ವಸ್ತುಗಳನ್ನು ಪೂಜಿಸಲಾಗುತ್ತದೆ. ಉದಾಹರಣೆಗೆ ನೀರು, ಅಗ್ನಿ, ಭೂಮಿ, ಸೂರ್ಯ, ಚಂದ್ರ, ಗ್ರಹಗಳು, ನದಿಗಳು, ಸಾಗರಗಳು ಮೊದಲಾದವನ್ನೂ ಸಹ ದೇವತೆಗಳೆಂದು ಪೂಜಿಸಲಾಗುತ್ತದೆ. ಇಂತಹ ಉಪದೇವತೆ ಮತ್ತು ದೇವತೆಗಳು ಈ ಪ್ರಪಂಚವನ್ನು ಸುಸ್ಥಿತಿಯಲ್ಲಿಡಲು ಅವಶ್ಯಕವಾಗಿದ್ದಾರೆ. ಈ ದೇವತೆಗಳು ಎಷ್ಟೇ ಅಲ್ಪ ಶಕ್ತಿಯುಳ್ಳವರಾದರೂ ಸಹ ಆ ಪ್ರತಿಯೊಬ್ಬರಿಗೂ ಈ ಪ್ರಪಂಚವನ್ನು ಸುಸ್ಥಿತಿಯಲ್ಲಿಡುವಲ್ಲಿ ತಮ್ಮದೇ ಆದ ಪಾತ್ರವಿದೆ. ದಕ್ಷಿಣ ಮಾರ್ಗದಲ್ಲಿ ಈ ಎಲ್ಲಾ ಉಪದೇವತೆ/ದೇವತೆಗಳನ್ನು ಪೂಜೆ ಮತ್ತು ಹೋಮಗಳನ್ನು ಆಚರಿಸಿ ಅವರನ್ನು ಸಂಪ್ರೀತಗೊಳಿಸಿ, ತೃಪ್ತಿಗೊಳಿಸಲಾಗುತ್ತದೆ. ದಕ್ಷಿಣ ಮಾರ್ಗವನ್ನನುಸರಿಸುವವರಿಗೆ ತಮ್ಮದೇ ಆದ ಇಷ್ಟ ದೇವತೆಗಳಿದ್ದಾಗ್ಯೂ ಸಹ ಅವರು ಇತರೇ ದೇವರು ಅಥವಾ ದೇವತೆಗಳನ್ನು ಪೂಜಿಸುತ್ತಾರೆ. ಇಷ್ಟ ದೇವತೆಗೂ ಮತ್ತು ಕುಲ ದೇವತೆಗೂ ವ್ಯತ್ಯಾಸವಿದೆ. ಕುಲ ದೇವತೆ ಎಂದರೆ ಒಬ್ಬರು ತಮ್ಮ ವಂಶಪಾರಂಪರ‍್ಯವಾಗಿ ಪೂಜಿಸುವ ದೇವರಾಗಿದೆ. ಶಾಸ್ತ್ರಗಳ ಪ್ರಕಾರ ಒಬ್ಬರು ತಮ್ಮ ಕುಲದೇವತೆಯನ್ನು ಎಷ್ಟು ಬಾರಿ ಸಾಧ್ಯವೋ ಅಷ್ಟು ಬಾರಿ ಪೂಜಿಸಬೇಕೆಂದು ಹೇಳಲಾಗುತ್ತದೆ; ಕಡೇಪಕ್ಷ ವರ್ಷಕ್ಕೊಂದಾವರ್ತಿಯಾದರೂ ಪೂಜಿಸಬೇಕು. ಇಷ್ಟ ದೇವತೆ ಎಂದರೆ ಒಬ್ಬನಿಗೆ ಪ್ರಿಯವಾದ ದೇವರಾಗಿದೆ. ಹಲವಾರು ದೇವತೆ/ಉಪದೇವತೆಗಳನ್ನು ಆವಾಹಿಸುವುದರಿಂದ ಮತ್ತು ಅವರೆಲ್ಲರಿಗೂ ತಮ್ಮದೇ ಆದ ವಿಶಿಷ್ಠ ಶಕ್ತಿಗಳಿರುವುದರಿಂದ ಅವರು ಪೂಜಿಸುವವರ ಮೇಲೆ ಕೃಪೆದೋರಿ ಅವರು ಅಭಿವೃದ್ಧಿ ಹೊಂದುವಂತೆ ಮಾಡುತ್ತಾರೆ.

              ಆದರೆ, ವಾಮ ಮಾರ್ಗವನ್ನು ಅನುಸರಿಸುವವರು ಇತರೇ ದೇವ-ದೇವಿಯರನ್ನು ಉಪಾಸಿಸುವುದಿಲ್ಲ. ಆದರೆ ಅವರು ಯಾವಾಗಲೂ ತಮ್ಮ ದೀಕ್ಷಾ ಗುರುವಿನಿಂದ ಉಪದೇಶಿಸಲ್ಪಟ್ಟಂತಹ ತಮಗೆ ಸ್ವಂತವಾದ ದೇವರನ್ನಷ್ಟೇ ಪೂಜಿಸುತ್ತಾರೆ. ಈ ಉಪಾಸಕರು ಇತರೇ ದೇವತೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಾರೆ. ವಾಮಾಚಾರದವರಿಂದ ಆವಾಹಿಸಲ್ಪಟ್ಟ ಆ ಪ್ರತ್ಯೇಕವಾದ ದೇವತೆಯು (ಬಹುತೇಕ ಸ್ತ್ರೀ ದೇವತೆಯು), ತನ್ನ ಎಲ್ಲಾ ಗುಣಗಳನ್ನು ಅವರಿಗೆ ಪ್ರಸಾದಿಸುತ್ತಾಳೆ; ಅವರಿಗೆ ಅಂತಿಮ ಮುಕ್ತಿಯನ್ನು ಕರುಣಿಸದೇ ಇದ್ದರೂ ಸಹ. ಸಾಂದರ್ಭಿಕವಾಗಿ ಈ ವಾಮ ಮಾರ್ಗವನ್ನು ಅನುಸರಿಸುವವರು ಇತರೇ ದೇವತೆಗಳನ್ನೂ ಪೂಜಿಸಿದರೂ ಸಹ, ಅವರು ಅಂತಹ ಪೂಜೆಗಳಿಂದ ದೊರೆಯುವ ಪುಣ್ಯಗಳನ್ನು ತನ್ನ ಇಷ್ಟ ದೇವತೆಗಾಗಿ ತ್ಯಾಗ ಮಾಡುತ್ತಾರೆ; ಏಕೆಂದರೆ ತಮ್ಮ ಸ್ವಂತ ದೇವತೆಯೇ ಇತರೇ ದೇವತೆಗಳು ಕೊಡಮಾಡುವ ಎಲ್ಲಾ ವಿಧವಾದ ಒಳಿತುಗಳನ್ನು ತಮಗೆ ಕರುಣಿಸಬಲ್ಲುದು ಎಂದು ಅವರು ಭಾವಿಸುವುದರಿಂದ. ಸಂಧ್ಯಾವಂದನೆಯಲ್ಲಿ ಹೇಳುವಂತೆ, "सर्व देव नमस्कारः श्री केशवं प्रति गच्छति ಸರ್ವ ದೇವ ನಮಸ್ಕಾರಃ ಶ್ರೀ ಕೇಶವಂ ಪ್ರತಿ ಗಚ್ಛತಿ" ಅಂದರೆ ಯಾವುದೇ ದೇವರಿಗೆ ನಾವು ಸಲ್ಲಿಸುವ ಪ್ರಣಾಮಗಳು ಅಂತಿಮವಾಗಿ ಕೇಶವನನ್ನೇ (ವಿಷ್ಣುವನ್ನೇ) ಸೇರುತ್ತವೆ. ಅವರಿಗೆ ಇತರೇ ದೇವ-ದೇವಿಯರ ವೈಯ್ಯಕ್ತಿಕ ಶಕ್ತಿಗಳನ್ನು ತೋರಿಸಿ ಪ್ರಲೋಭನೆಗೊಳಿಸಲು ಪ್ರಯತ್ನಿಸಲಾಗುತ್ತದೆಯಾದರೂ ಅವರು ತಮ್ಮ ಇಷ್ಟ ದೇವತೆಯೇ ತಮಗೆ ಸೂರ್ಯ, ಅಗ್ನಿ, ವರುಣ ಮೊದಲಾದ ದೇವತೆಗಳ ಸಕಲ ಶಕ್ತಿಗಳನ್ನು ದಯಪಾಲಿಸಬಲ್ಲದೆಂದು ದೃಢವಾಗಿ ನಂಬುತ್ತಾರೆ. ಅವರು ತಮ್ಮ ದೇವತೆಯನ್ನು ಅಧಿಗಮಿಸಿ ಅಂತಿಮ ಲಕ್ಷ್ಯವಾದ ಬ್ರಹ್ಮವನ್ನು ಹೊಂದಲು ಪ್ರಯತ್ನಿಸುವುದಿಲ್ಲ. ಅವರು ಬ್ರಹ್ಮವನ್ನು ಅರಿಯಲು ಶಕ್ಯವಾಗದೇ ಇರುವುದರಿಂದ ಅವರ ಅಂತಿಮ ಮುಕ್ತಿಯು ಮುಂದೂಡಲ್ಪಡುತ್ತದೆ. ಅವರಿಗೆ ತಮ್ಮ ಇಷ್ಟ ದೇವತೆಯ ಮೇಲಿರುವ ಅನನ್ಯ ಪ್ರೀತಿಯಿಂದಾಗಿ ಅವರು ತಮ್ಮ ಪೂರ್ವಿಕರಿಗೆ, ಋಷಿಗಳಿಗೆ ಮತ್ತು ಮುನಿಪುಂಗವರಿಗೆ ಯಜ್ಞಗಳನ್ನು ಮಾಡುವುದನ್ನು ತಪ್ಪಿಸುತ್ತಾರೆ. ನಾಮ ೯೪೬ ಹೇಳುವಂತೆ ಐದು ವಿಧವಾದ ಯಜ್ಞಗಳಿವೆ. ಒಂದು ವೇಳೆ ಒಬ್ಬನು ಈ ಐದು ವಿಧವಾದ ಯಜ್ಞಗಳನ್ನು ಮಾಡಲು ವಿಫಲನಾದರೆ ಅವನಿಗೆ ಮುಕ್ತಿ ಮಾರ್ಗದಲ್ಲಿ ತಡೆಯುಂಟಾಗುತ್ತದೆ. ಇದರರ್ಥ ಅವನು ಈ ತಡೆಗಳನ್ನು ದಾಟಲು ಪುನಃ ಜನಿಸಿ ಬರಬೇಕಾಗುತ್ತದೆ. ಹಾಗಾಗಿ ವಾಮ ಮಾರ್ಗವನ್ನು ಅನುಸರಿಸುವವರಿಗೆ ಅಂತಿಮ ಮುಕ್ತಿಯು ಮುಂದೂಡಲ್ಪಡುತ್ತದೆ.

           ಈ ಸಂದರ್ಭದಲ್ಲಿ ಈ ನಾಮವು ದೇವಿಯನ್ನು ದಕ್ಷಿಣ ಮತ್ತು ವಾಮ ಎರಡೂ ಮಾರ್ಗಗಳನ್ನು ಅನುಸರಿಸುವವರು ಪೂಜಿಸುತ್ತಾರೆಂದು ಹೇಳುತ್ತದೆ.

           ಈ ನಾಮಕ್ಕೆ ಇನ್ನೊಂದು ವಿಧವಾದ ವಿಶ್ಲೇಷಣೆಯೂ ಇದೆ. ಅದೇನೆಂದರೆ, ಮರಣ ಹೊಂದಿದ ನಂತರ ಆತ್ಮವು ಈ ಸ್ಥೂಲ ಶರೀರವನ್ನು ತ್ಯಜಿಸಿ ದೇವಲೋಕಕ್ಕೆ (ಇಂದ್ರಾದಿ ದೇವತೆಗಳು ನಿವಸಿಸುವ ಲೋಕ) ಅಥವಾ ಪಿತೃ ಲೋಕಕ್ಕೆ (ಪೂರ್ವಿಕರು ನಿವಸಿಸುವ ಲೋಕಕ್ಕೆ) ತನ್ನ ಕರ್ಮಾನುಸಾರವಾಗಿ ಹೋಗುತ್ತದೆ. ಸವ್ಯ ಮಾರ್ಗವೆಂದರೆ ಈ ದೇವಲೋಕವನ್ನು ಸೇರಲು ಆತ್ಮವು ಅನುಸರಿಸುವ ಮಾರ್ಗವಾಗಿದೆ. ಈ ಮಾರ್ಗವು ಸಂಪೂರ್ಣ ಪ್ರಕಾಶಮಾನವಾಗಿದೆ. ಆತ್ಮವು ಪಂಚಭೂತಗಳನ್ನು ಅಧಿಗಮಿಸಿ ಉನ್ನತ ಸ್ತರಗಳನ್ನು ಯಾವುದೇ ವಿಧವಾದ ಕಷ್ಟವಿಲ್ಲದೆ ಸುಲಭವಾಗಿ ಸೇರುತ್ತದೆ. ಈ ಮಾರ್ಗವನ್ನು ಯಾರು ಶ್ರೇಷ್ಠವಾದ ಜ್ಞಾನವನ್ನು ಹೊಂದಿರುತ್ತಾರೆಯೋ ಅವರು ಮಾತ್ರ ಅನುಸರಿಸಬಹುದು. ಸಾಮಾನ್ಯವಾಗಿ ಇಂತಹ ಆತ್ಮಗಳು ಪುನಃ ಹುಟ್ಟಿ ಬರುವುದಿಲ್ಲ ಮತ್ತು ಅವು ದೇವಲೋಕದ ಸುಖ-ಸಂತೋಷಗಳನ್ನು ಆನಂದಿಸುತ್ತವೆ. ಯಾವ ಆತ್ಮಗಳ ಕರ್ಮ ಶೇಷವು ಅಷ್ಟು ಒಳ್ಳೆಯದಾಗಿರುವುದಿಲ್ಲವೋ ಅಂತಹವುಗಳು ಸಾಗುವ ಮಾರ್ಗವು ಅಪಸವ್ಯ ಮಾರ್ಗವಾಗಿದೆ. ಈ ಮಾರ್ಗವು ಕತ್ತಲೆಯಿಂದ ಕೂಡಿದ್ದು ಅದನ್ನು ದಾಟುವುದು ಬಹಳ ಕಷ್ಟಕರವಾಗಿರುತ್ತದೆ. ಈ ಆತ್ಮಗಳೂ ಸಹ ದೇವಲೋಕವನ್ನು ಸೇರುತ್ತವೆ ಆದರೆ ಅವು ಪುನಃ ಜನ್ಮತೆಳೆಯುತ್ತವೆ. ಈ ಮಾರ್ಗವು ಕಷ್ಟಕರವಾಗಿದ್ದು ಆತ್ಮವು ಈ ಹಾದಿಯನ್ನನುಸರಿಸುವಾಗ ಯಾತನೆಯನ್ನು ಅನುಭವಿಸುತ್ತದೆ. ಯಾರು ತಮ್ಮ ಮನಸ್ಸು ಮತ್ತು ಇಂದ್ರಿಯಗಳನ್ನು ನಿಗ್ರಹದಲ್ಲಿಟ್ಟುಕೊಂಡು, ಆಸೆಯಿಲ್ಲದವರಾಗಿ, ಮೋಹಬಂಧನಗಳಿಂದ ಮುಕ್ತರಾಗಿ, ಕಾಮವಿವರ್ಜಿತರಾಗಿ ಇರುತ್ತಾರೆಯೋ ಅವರು ಪ್ರಳಯಕಾಲದವರೆಗೂ ದೇವಲೋಕದಲ್ಲಿ ಇರುತ್ತಾರೆ. ಆತ್ಮ ಸಾಕ್ಷಾತ್ಕಾರ ಹೊಂದಿದ ವ್ಯಕ್ತಿಗಳು ಈ ದೇವಲೋಕವನ್ನೂ ಸಹ ದಾಟಿ ಅವರು ವಿಷ್ಣು ಲೋಕವನ್ನು ಸೇರುತ್ತಾರೆ; ಅಲ್ಲಿ ಋಷಿ-ಮುನಿಗಳೊಂದಿಗೆ ಅವರು ವಾಸಿಸುತ್ತಾರೆ. ಅವರು ಯಾವಾಗಲೂ ವಿಷ್ಣುವನ್ನೇ ಧ್ಯಾನಿಸುತ್ತಾ ಅವನ ಪಾದದ ಬಳಿಯಲ್ಲಿ ವಾಸಿಸುತ್ತಾರೆ. ಋಗ್ವೇದವು (೧.೨೨.೨೦) ಹೇಳುತ್ತದೆ, "ತದ್ ವಿಷ್ಣೋಃ ಪರಮಂ ಪದಂ ಸದಾ ಪಶ್ಯಂತಿ ಸೂರ್ಯಃ तद् विष्णोः परमं पदं सदा पश्यंति सूर्यः" ಅಂದರೆ”ಅವರು ತಮ್ಮ ಧ್ಯಾನದಲ್ಲಿ ವಿಷ್ಣುವನ್ನು ನಿಖರವಾಗಿ ನೋಡುತ್ತಾರೆ’ ಎಂದು ಅರ್ಥ. ಈ ನಾಮವು ದೇವಿಯು ಈ ಎರಡೂ ಮಾರ್ಗಗಳ ರೂಪದಲ್ಲಿರುತ್ತಾಳೆಂದು ಹೇಳುತ್ತದೆ.

              ಸೂರ್ಯಮಂಡಲವನ್ನು ಸೇರಲು ಮೂರು ವಿಧಾನಗಳಿವೆ; ಉತ್ತರ, ದಕ್ಷಿಣ ಮತ್ತು ಮಧ್ಯಮ. ಈ ಮೂರು ವಿಧಾನಗಳಿಗೂ ಮೂರು ಮೂರು ದಾರಿಗಳಿದ್ದು ಇವುಗಳಿಂದ ಒಟ್ಟು (೩ x ೩ = ೯) ಒಂಬತ್ತು ಮಾರ್ಗಗಳಿವೆ. ಈ ಪ್ರತಿಯೊಂದು ಮಾರ್ಗಗಳಿಗೂ ಮೂರು ಮೂರು ನಕ್ಷತ್ರಗಳಿದ್ದು ಅವು ಅಶ್ವಿನಿಯಿಂದ ಆರಂಭಗೊಂಡು ರೇವತಿಯಲ್ಲಿ ಅಂತ್ಯವಾಗಿ ಒಟ್ಟು ೨೭ ನಕ್ಷತ್ರಗಳನ್ನು ಹೊಂದಿವೆ. ದೇವಿಯು ಈ ಮೂರು ವಿಧಾನಗಳಲ್ಲಿದ್ದು ಆಕೆಯು ಈ ಪ್ರಪಂಚವನ್ನು ನಿಯಂತ್ರಿಸುತ್ತಾಳೆಂದು ಹೇಳಲಾಗುತ್ತದೆ.

ಸಾಧನೆಯ ಕುರಿತು ಹೆಚ್ಚಿನ ವಿವರಗಳು:

             ಸಾಧನೆ ಎಂದರೆ ಅಭ್ಯಾಸ ಮಾಡುವುದು. ಕೇವಲ ಧರ್ಮದ ಬಗ್ಗೆ ಮಾತನಾಡಿದರೆ ಅದರಿಂದ ಆಧ್ಯಾತ್ಮಿಕವಾಗಿ ಯಾವುದೇ ತೆರನಾದ ಲಾಭವಿಲ್ಲ. ಒಬ್ಬರು ಆಧ್ಯಾತ್ಮಿಕ ಮಾರ್ಗದಲ್ಲಿ ಮುಂದುವರೆಯಬೇಕೆಂದರೆ ಅದಕ್ಕೆ ಸಾಧನೆ ಬಹು ಅವಶ್ಯಕ. ಆಧ್ಯಾತ್ಮಿಕ ಉನ್ನತಿಯು ಅಪ್ಪಟವಾಗಿ ಒಬ್ಬನು ಸಾಧನೆಯ ಮೂಲಕ ಗಳಿಸಿಕೊಳ್ಳುವ ಅನುಭವವನ್ನು ಆಧರಿಸಿದೆ. ವೇದಗಳು ಹಾಗೂ ತಂತ್ರಗಳೆರಡೂ ಮುಕ್ತಿ ಹೊಂದಲು ಮಾರ್ಗದರ್ಶನಗಳನ್ನು ಕೊಡುತ್ತವೆ. ಒಬ್ಬನ ಆಸಕ್ತಿ ಮತ್ತು ಈ ಮಾರ್ಗದರ್ಶಕಗಳನ್ನು ಅರಿಯುವ ಸಾಮರ್ಥ್ಯದ ಮೇಲೆ ಅವನ ಉನ್ನತಿಯ ಪ್ರಶ್ನೆಯು ಅಡಗಿದೆ. ನಂಬಿಕೆ ಎನ್ನುವುದು ಆಧ್ಯಾತ್ಮಿಕ ಮಾರ್ಗದಲ್ಲಿ ಅತ್ಯಂತ ಪ್ರಮುಖವಾದ ವಿಷಯವಾಗಿದೆ. ಒಬ್ಬನು ತನ್ನ ನಂಬಿಕೆಯನ್ನು ಉತ್ತಮಪಡಿಸಿಕೊಳ್ಳಲು ಕೆಲವೊಂದು ಆಚರಣೆಗಳನ್ನು ವಿಧಿಸಲಾಗಿದೆ. ಆದರೆ ಒಬ್ಬನು ಕೇವಲ ಆಚರಣೆಗಳಿಗೇ ಪರಿಮಿತನಾದರೆ ಅವನಿಗೆ ಬ್ರಹ್ಮಸಾಕ್ಷಾತ್ಕಾರ ಹೊಂದಲು ಸಮಯವು ಸಿಕ್ಕುವುದಿಲ್ಲ. ಒಬ್ಬನು ಈ ವಿಧವಾಗಿ ನಂಬಿಕೆಯನ್ನಿರಿಸಿಕೊಳ್ಳಬೇಕು - "ಯಾವುದು ಇಲ್ಲಿದೆಯೋ ಅದು ಅಲ್ಲಿಯೂ ಇದೆ, ಇಲ್ಲಿ ಯಾವುದು ಇಲ್ಲವೋ ಅದು ಎಲ್ಲಿಯೂ ಇಲ್ಲ". ಆಧ್ಯಾತ್ಮವು ಒಬ್ಬನು ಬ್ರಹ್ಮವನ್ನು ಅರಿಯಲು ಮೊದಲು ಕಾರ್ಯಪ್ರವೃತ್ತನಾಗಬೇಕು ಎಂದು ಹೇಳುತ್ತದೆ. ಈ ಕಾರ್ಯವು ಪೂಜಾಚರಣೆಗಳೊಂದಿಗೆ ಆರಂಭವಾಗಿ ಧ್ಯಾನದಲ್ಲಿ ಪರ್ಯವಸಾನಗೊಳ್ಳುತ್ತದೆ. ಧ್ಯಾನವು ಆತ್ಮಸಾಕ್ಷಾತ್ಕಾರಕ್ಕೆ ಬಹಳ ಸೂಕ್ತವಾದ ಸಾಧನವಾಗಿದೆ. ಧಾರ್ಮಿಕ ಆಚರಣೆಗಳು ಹೋಮ, ಮೊದಲಾದವು ಅಥವಾ ಉಪಾಸನೆ (ಮಾನಸಿಕವಾಗಿ ಕಾರ್ಯತತ್ಪರಾಗಿರುವುದು) ಮೊದಲಾದ ಕರ್ಮಗಳ (ಕ್ರಿಯೆಗಳ) ಮೂಲಕ ಕೈಗೊಳ್ಳಲ್ಪಡುತ್ತವೆ. ಇವೆರಡು ವಿಷಯಗಳಲ್ಲಿನ ಪರಿಣಿತಿಯು ಜ್ಞಾನದೆಡೆಗೆ ನಮ್ಮನ್ನು ಕರೆದೊಯ್ಯುತ್ತದೆ. ಕರ್ಮ, ಉಪಾಸನೆ ಮತ್ತು ಜ್ಞಾನ ಇವುಗಳು ವೇದಗಳ ಮೂರು ವಿಧವಾದ ಭಾಗಗಳನ್ನು ಪ್ರತಿನಿಧಿಸುತ್ತವೆ. ಪೂಜಾಚರಣೆಗಳನ್ನು (ಪೂಜಾ ಕರ್ಮಗಳನ್ನು) ಪರಿಪೂರ್ಣವಾದ ನಿಖರತೆಯಿಂದ ಮಾಡಿದಾಗಲಷ್ಟೇ ಅವು ಪರಿಣಾಮಕಾರಿಯಾಗಿರುತ್ತವೆ. ಮಾನಸಿಕ ಪೂಜೆಯಲ್ಲಿನ (ಉಪಾಸನೆಯಲ್ಲಿನ) ಉನ್ನತಿಯು ಭಕ್ತಿಯ ಆಳದ ಮೇಲೆ ಅವಲಂಬಿಸಿದೆ. ಈ ಉಪಾಸನೆಯೂ ಸಹ ಎರಡು ವಿಧದ್ದಾಗಿದೆ, ಸ್ಥೂಲ ಮತ್ತು ಸೂಕ್ಷ್ಮ. ಯಾವಾಗ ಒಬ್ಬನು ಆಧ್ಯಾತ್ಮಿಕವಾಗಿ ಮುಂದುವರೆಯುತ್ತಾನೆಯೋ ಆಗ ಅವನ ಸಾಧನೆಯು ಸ್ಥೂಲದಿಂದ ಸೂಕ್ಷ್ಮಕ್ಕೆ ಮಾರ್ಪಾಡು ಹೊಂದುತ್ತದೆ. ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ (೯. ೧೪ ಮತ್ತು ೧೫) ಹೀಗೆ ಹೇಳುತ್ತಾನೆ, "ನನ್ನ ನಾಮವನ್ನು ನಿರಂತರವಾಗಿ ಜಪಿಸುತ್ತಾ, ನನ್ನ ಮಹಿಮೆಗಳನ್ನು ಹಾಡಿ ಹೊಗಳುತ್ತಾ, ನನ್ನ ಸಾಕ್ಷಾತ್ಕಾರವನ್ನು ಪಡೆಯಲು ಪ್ರಯತ್ನಿಸುವ, ಪದೇ ಪದೇ ನನಗೆ ನಮಸ್ಕರಿಸುವ, ದೃಢ ಪ್ರವೃತ್ತಿಯುಳ್ಳ ಭಕ್ತರು ನನ್ನನ್ನು ಏಕಾಗ್ರ ಭಕ್ತಿಯಿಂದ ಪೂಜಿಸುತ್ತಾರೆ ಮತ್ತು ನನ್ನೊಂದಿಗೆ ಧ್ಯಾನದ ಮೂಲಕ ಸತತವಾಗಿ ಒಂದಾಗಿರುತ್ತಾರೆ. ಜ್ಞಾನ ಮಾರ್ಗವನ್ನು ಅನುಸರಿಸುವ ಇನ್ನೂ ಕೆಲವರು ತಮ್ಮಷ್ಟಕ್ಕೇ ತಾವೇ ಜ್ಞಾನ ಯಜ್ಞದ ಮೂಲಕ ನನ್ನ ಬಳಿಗೆ ಬರುತ್ತಾರೆ; ಅವರು ತಮ್ಮೊಳಗೇ ನನ್ನನ್ನು ಕಂಡುಕೊಳ್ಳುತ್ತಾ, ನನ್ನ ಪರಿಪೂರ್ಣವಾದ ರೂಪರಹಿತ ಸ್ವರೂಪವನ್ನು ಪೂಜಿಸುತ್ತಾರೆ. ಇನ್ನೂ ಕೆಲವರು ನಾನೇ ಅನೇಕ ವಿಧವಾದ ದೈವೀ ರೂಪಗಳನ್ನು ತೆಳೆದವನಾಗಿ ಭಾವಿಸಿ ನನ್ನ ವಿಶ್ವರೂಪವನ್ನು ಪೂಜಿಸುತ್ತಾರೆ".

                                                                                ******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 912 http://www.manblunder.com/2010/07/lalitha-sahasranamam-912.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

 

Rating
Average: 5 (1 vote)

Comments

Submitted by ananthesha nempu Thu, 12/26/2013 - 18:33

ಸವ್ಯಾಪಸವ್ಯ ಮಾರ್ಗಕ್ಕೆ ಇನ್ನೂ ಹೆಚ್ಚಿನ ವಿವರಣೆ ಬೇಕು ಎಂದೆನಿಸುತ್ತದೆ. (ನನ್ನ ಎಣಿಕೆಯ ಪ್ರಕಾರ ಇದು ಕಾದಿ ಮತ್ತು ಹಾದಿ ವಿದ್ಯೆಗೆ ಸಂಬಂಧಿಸಿದೆ. ) ಸ್ಥೂಲವಾಗಿ ಕೇವಲ ಎಡಗೈ ಮತ್ತು ಬಲಗೈಯಿಂದ ಮಾಡುವ ಕ್ರಿಯೆಗಳಿಗೆ ಮಾತ್ರ ಸಂಬಂಧಿಸಿದ್ದು ಎಂದರೆ ಸೀಮಿತಾರ್ಥವಾದೀತು.
ತದ್ ವಿಷ್ಣೋಃ ಪರಮಂ ಪದಂ ಸದಾ ಪಶ್ಯಂತಿ ಸೂರಯಃ तद् विष्णोः परमं पदं सदा पश्यंति सूरयः ಎಂದಾಗಬೇಕು.

Submitted by makara Fri, 12/27/2013 - 19:03

In reply to by ananthesha nempu

ಅನಂತೇಶ್ ಅವರೆ,
ಹಾದಿ ವಿದ್ಯಾ ಮತ್ತು ಕಾದಿ ವಿದ್ಯಾದ ಬಗೆಗೆ ನನ್ನ ಬಳಿ ಮಾಹಿತಿಯಿಲ್ಲ. ಅದನ್ನು ಕುರಿತು ಮೂಲ ಲೇಖಕರಾದ ಶ್ರೀಯುತ ವಿ. ರವಿಯಲ್ಲಿ ಕೇಳುತ್ತೇನೆ. ಅವರಿಂದ ಉತ್ತರ ಬಂದ ನಂತರ ನಿಮಗೆ ಪ್ರತಿಕ್ರಿಯೆ ನೀಡುತ್ತೇನೆ. ಸವ್ಯ ಮತ್ತು ಅಪಸವ್ಯದ ಬಗೆಗೆ ಇನ್ನಷ್ಟು ವಿವರಗಳನ್ನು ಈ ಹಿಂದಿನ ನಾಮಗಳಲ್ಲಿ ಕೊಟ್ಟಿರುವುದರಿಂದ ಬಹುಶಃ ಅದರ ಬಗೆಗೆ ಇಲ್ಲಿ ಹೆಚ್ಚು ವಿವರಿಸಲು ಹೋಗಿಲ್ಲವೆನಿಸುತ್ತದೆ. ಆದರೂ ಸಹ ಇಲ್ಲಿ ದಕ್ಷಿಣಾಚಾರ ಮತ್ತು ವಾಮಾಚರಿಗಳು ಅನುಸರಿಸುವ ದೇವತಾ ಪೂಜೆಗಳ ಕುರಿತು ಈ ಲೇಖನದಲ್ಲಿ ಸಾಕಷ್ಟು ವಿವರವಾಗಿಯೇ ಬರೆದಿದ್ದಾರೆ. ಇನ್ನೊಂದೆಡೆ ಕೌಲರ ಕುರಿತು ಬರೆಯುವಾಗ ಅವರಲ್ಲಿನ ಮೂರು ವಿಧದವರನ್ನೂ ಕುರಿತು ಬರೆದಿದ್ದಾರೆ. ಹಾಗಾಗಿ ಆಯಾಯ ನಾಮಗಳಿಗೆ ಸಂಬಂದಿಸಿದಂತೆ ಎಷ್ಟು ಸಾಧ್ಯವೋ ಅಷ್ಟನ್ನು ವಿವರಿಸುತ್ತಾ ಹೋಗಿದ್ದಾರೆನಿಸುತ್ತದೆ. ಇರಲಿ, ಆದರೂ ಅವರಿಂದ ಉತ್ತರ ಬಂದ ನಂತರ ಇನ್ನಷ್ಟು ವಿವರಗಳನ್ನು ಕೊಡಲು ಪ್ರಯತ್ನಿಸುತ್ತೇನೆ.
ಸೂರಯಃ ಎನ್ನುವ ಸರಿಯಾದ ರೂಪವನ್ನು ಒದಗಿಸಿದ್ದಕ್ಕೆ ಧನ್ಯವಾದಗಳು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by nageshamysore Sat, 01/11/2014 - 06:23

ಶ್ರೀಧರರೆ, "೧೯೪. ಶ್ರೀ ಲಲಿತಾ ಸಹಸ್ರನಾಮದ ವಿವರಣೆ" ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ ಸಿದ್ದ.  ಈ ಕಂತಿನ ಹೊರತಾಗಿ ಇನ್ನು ಎರಾದು ಕಂತು (192-193) ಉಳಿದಿದೆ, ರಜೆಯ ಹೋಮ್ವರ್ಕಿನ ಬಾಕಿ. ಈ ವಾರಾಂತ್ಯದೊಳಗೆ ಬಾಕಿಯೆಲ್ಲ ಮುಗಿಯುತ್ತದೆಂದುಕೊಂಡಿದ್ದೇನೆ :-)
.
ಲಲಿತಾ ಸಹಸ್ರನಾಮ ೯೧೨
_____________________________
.
೯೧೨. ಸವ್ಯಾಪಸವ್ಯ-ಮಾರ್ಗಸ್ಥಾ
ಸವ್ಯ-ಬಲಹಸ್ತ, ಅಪಸವ್ಯ-ಎಡಹಸ್ತ, ದೇವಿ ತಲುಪಿಸೊ ಮಾರ್ಗಾ-ದಾರಿ
ವೈದಿಕ ಮಾರ್ಗದನುಸರಣೆ ಸವ್ಯಾ, ಬಲದ ಕೈಯಲಿ ಪೂಜಾಚರಣೆ ಗುರಿ
ಸವ್ಯ-ದಕ್ಷಿಣ ಅಪಸವ್ಯ-ವಾಮ ತಾಂತ್ರಿಕ ವಿಧಿ ವಿಧಾನ ಬಳಸೆ ಎಡ ಹಸ್ತ
ಸವ್ಯಮುಕ್ತಿ-ಅಪಸವ್ಯಶಕ್ತಿಗಳಿಂ ಪೂಜಿತೆ ಲಲಿತೆ, ಸವ್ಯಾಪಸವ್ಯ-ಮಾರ್ಗಸ್ಥಾ ||
.
ಶಕ್ತಿದಾಯಿ ದೇವ-ದೇವಿ, ಚರಾಚರ ವಸ್ತುವೆಲ್ಲಾ ಪೂಜಿಸುತ ದಕ್ಷಿಣ
ಜಗ ಸುಸ್ಥಿತಿ ಪಾತ್ರಧಾರಿ ದೇವತೆ-ಉಪದೇವತೆ ಸಂಪ್ರೀತಿಸೆ ಪೂರ್ಣ
ವಂಶಪಾರಾಂಪರ್ಯ ಕುಲದೇವತೆ ಜತೆ ಇಷ್ಟದೈವ ಪ್ರಿಯ ಪೂಜಿತ
ಪ್ರತಿ ದೈವದದರದೆ ಶಕ್ತಿ, ಕೃಪೆಗರಸೊ ವ್ಯಕ್ತಿ ದೈವವಾಗಿಸೆ ಸಂತೃಪ್ತ ||
.
ಏಕ ದೇವತಾನಿಷ್ಠ ಉಪಾಸಕ ವಾಮಮಾರ್ಗಿ, ತನ್ನೆಲ್ಲ ಶಕ್ತಿಯ ಧಾರೆ
ದೇವತೆ ಪ್ರಸಾದಿಸಲೆಲ್ಲ ಇಷ್ಟಾನಿಷ್ಟ, ಅಂತಿಮಮುಕ್ತಿ ಪುನರ್ಜನ್ಮಕಿರೆ
ಇಷ್ಟ ದೇವತೆಯಲಿ ದೃಢನಂಬಿಕೆ-ಪ್ರೀತಿ, ಪ್ರಲೋಭನಾತೀತ ಸಂಕಲ್ಪ
ಬ್ರಹ್ಮವರಿಯಲಶಕ್ಯ-ಪಂಚಯಜ್ಞನಿರ್ಲಕ್ಷ್ಯ, ಮುಕ್ತಿಗೊಲ್ಲದ ಮನವಿಕಲ್ಪ ||
.
ಮರಣೋತ್ತರಾತ್ಮ ಬಿಟ್ಟೆ ಸ್ಥೂಲಶರೀರ, ದೇವ-ಪಿತೃಲೋಕ ಕರ್ಮಾನುಸಾರ
ಪಂಚಭೂತವಧಿಗಮಿಸಿದ ಪ್ರಕಾಶದ ಹಾದಿ, ಸವ್ಯಮಾರ್ಗ ದೇವಲೋಕಸ್ತರ
ಶ್ರೇಷ್ಠ ಜ್ಞಾನಾತ್ಮದ ಪುನರ್ಜನ್ಮವಿರದ ಹಾದಿ, ದೇವಲೋಕದ ಸುಖ ಸಂತಸ
ಕಹಿಕರ್ಮ ಶೇಷಾತ್ಮ ಅಪಸವ್ಯ, ಕತ್ತಲ ದುರ್ಗಮಹಾದಿ ಮರುಜನ್ಮದತ್ರಾಸ ||
.
ಜಿತೇಂದ್ರಿಯ-ನಿಷ್ಕಾಮ-ನಿರ್ಮೋಹಿ-ನಿರ್ಲಿಪ್ತಾತ್ಮ, ದೇವಲೋಕದೆ ವಾಸ
ಪ್ರಳಯಾ ತನಕ ಆತ್ಮಸಾಕ್ಷಾತ್ಕಾರಿ, ವಿಷ್ಣುಲೋಕ ಋಷಿಮುನಿ ಸಹವಾಸ
ಸವ್ಯಾಪಸವ್ಯ ಗಡಿ, ಮಧ್ಯಮ ಮಾರ್ಗಗಳೆಲ್ಲದರ ಸ್ವರೂಪದಲಿಹ ಲಲಿತಾ
ರವಿಮಂಡಲ ಸೇರೆ ಉತ್ತರದಕ್ಷಿಣಮಧ್ಯಮ, ನವಮಾರ್ಗ ತ್ರಿನಕ್ಷತ್ರಸಹಿತ ||
.
ಸಾಧನೆಯ ಕುರಿತು ಹೆಚ್ಚಿನ ವಿವರಗಳು:
______________________________
.
ಆಧ್ಯಾತ್ಮಿಕೋನ್ನತಿಗೆ ನಂಬಿಕೆ ಪ್ರಮುಖ, ಅಭ್ಯಾಸ ಸಾಧನೆಗಿಹ ಚಳಕ
ಆಸಕ್ತಿ ಸಾಮರ್ಥ್ಯ ಸೂಕ್ತಾಚರಣೆ, ವೇದ-ತಂತ್ರವೆರಡು ಮಾರ್ಗದರ್ಶಕ
ಬ್ರಹ್ಮವರಿಯೆ ಕಾರ್ಯಪ್ರವೃತ್ತ, ಪೂಜಾಚರಣೆ ಚರಣ ಧ್ಯಾನಕೆ ಪೂರ್ಣ
ಆತ್ಮಸಾಕ್ಷಾತ್ಕಾರಕೆ ಧ್ಯಾನ ಸೂಕ್ತಸಾಧನ, ಕ್ರಿಯಾಪರಿಣಿತಿ ಜತೆ ಜ್ಞಾನ ||
.
ಕ್ರಿಯಾಚರಣೆ ಕರ್ಮ- ಮನಕಾರ್ಯತತ್ಪರತೆ ಉಪಾಸನೆ- ಜ್ಞಾನಾ ವೇದ
ಪೂಜಾಕರ್ಮ ಫಲಿತ ನಿಖರತೆಯವಲಂಬಿತ, ಉಪಾಸನೆ ಭಕ್ತಿಯಾಳದ
ಉಪಾಸನೆಗಾಧ್ಯಾತ್ಮಿಕ ಪ್ರಗತಿ ಸ್ಥೂಲದಿಂದ ಸೂಕ್ಷ್ಮ, ಭಕ್ತಿ ಧ್ಯಾನ ಮಾರ್ಗ
ಜ್ಞಾನಮಾರ್ಗಿ ಯಜ್ಞಮುಖೇನ ಅದ್ವೈತ, ರೂಪವಿಶ್ವರೂಪ ಆರಾಧಿಸೆ ಜಗ ||
.
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು