೧೯೬. ಲಲಿತಾ ಸಹಸ್ರನಾಮ ೯೧೮ರಿಂದ ೯೨೩ನೇ ನಾಮಗಳ ವಿವರಣೆ

೧೯೬. ಲಲಿತಾ ಸಹಸ್ರನಾಮ ೯೧೮ರಿಂದ ೯೨೩ನೇ ನಾಮಗಳ ವಿವರಣೆ

                                                                 ಲಲಿತಾ ಸಹಸ್ರನಾಮ ೯೧೮ - ೯೨೩

Caitanyārghya-samārādhyā चैतन्यार्घ्य-समाराध्या (918)

೯೧೮. ಚೈತನ್ಯಾರ್ಘ್ಯ-ಸಮಾರಾಧ್ಯಾ

            ಚೈತನ್ಯವೆನ್ನುವುದು ಮೂಲಭೂತ ಪ್ರಜ್ಞೆಯಾಗಿದ್ದು ಅದು ಅರಿತುಕೊಳ್ಳುವ ಮತ್ತು ಕಾರ್ಯಪ್ರವೃತ್ತವಾಗುವ ಪರಿಪೂರ್ಣವಾದ ಸ್ವಾತಂತ್ರ್ಯವನ್ನು ಹೊಂದಿದೆ. ಶಿವ ಸೂತ್ರವು (೧.೧) ಚೈತನ್ಯಂ ಆತ್ಮಾ ಎಂದು ಹೇಳುತ್ತದೆ. ಚೈತನ್ಯವು ಸಂಪೂರ್ಣವಾಗಿ ಸ್ವತಂತ್ರವಾಗಿದೆ. ಕೇವಲ ಶಿವನೊಬ್ಬನೇ ಇಂತಹ ಸಂಪೂರ್ಣ ಸ್ವತಂತ್ರವಾದ ಪರಮೋನ್ನತ ಪ್ರಜ್ಞೆಯನ್ನು ಹೊಂದಿದ್ದಾನೆ. ಇತರೆಲ್ಲಾ ಜೀವಿಗಳು ಈ ಪರಮ ಚೈತನ್ಯದ ಮೇಲೆ ಅವಲಂಬಿಸಿವೆ. ಅರ್ಘ್ಯ ಎಂದರೆ ಗೌರವಾನ್ವಿತ ಅತಿಥಿಗಳಿಗೆ ಕೊಡುವ ನೀರಾಗಿದೆ. ಭಾವನೋಪನಿಷತ್ತು (೧೦) ಹೀಗೆ ಹೇಳುತ್ತದೆ, "ಜ್ಞಾನಂ ಅರ್ಘ್ಯಃ" ಅಂದರೆ ’ಜ್ಞಾನವೇ ಅತ್ಯುತ್ತಮವಾದ ಅರ್ಘ್ಯವಾಗಿದೆ’. ಯಾವಾಗ ಜ್ಞಾನದೊಂದಿಗೆ ಭಕ್ತಿಯು ಅರ್ಪಿಸಲ್ಪಡುತ್ತದೆಯೋ ಆಗ ಮುಕ್ತಿಯು ದೊರೆಯುತ್ತದೆ.

           ಭುವನೇಶ್ವರೀ ಮಂತ್ರವನ್ನು ಚೈತನ್ಯ ಮಂತ್ರವೆಂದೂ ಕರೆಯಲಾಗುತ್ತದೆ. ಈ ಮಂತ್ರವನ್ನು ಹತ್ತು ಸಾವಿರ ಸಲ ಜಪಿಸಿದರೆ ಅವನ ಎಲ್ಲಾ ಪಾತಕಗಳು ನಶಿಸುತ್ತವೆ ಎಂದು ಹೇಳಲಾಗುತ್ತದೆ. ಎರಡು ವಿಧವಾದ ಭುವನೇಶ್ವರೀ ಮಂತ್ರಗಳಿವೆ ಅದರಲ್ಲಿ ಮೊದಲನೆಯದು ಏಕ ಬೀಜಾಕ್ಷರವಾದ ಹ್ರೀಂ ह्रीं ಅನ್ನು ಹೊಂದಿದ್ದರೆ ಮತ್ತೊಂದು ತ್ರಿ ಬೀಜಾಕ್ಷರಗಳನ್ನು ಹೊಂದಿದೆ - ಐಂ ಹ್ರೀಂ ಶ್ರೀಂ ऐं ह्रीं श्रीं.

ಚೈತನ್ಯದ ಕುರಿತು ಕೆಲವೊಂದು ವಿವರಗಳು:

             ಚೈತನ್ಯವೆನ್ನುವುದು ಪರಬ್ರಹ್ಮದ ಪರಿಶುದ್ಧ ಪ್ರಜ್ಞೆಯಾಗಿದೆ, ಅದು ಪರಬ್ರಹ್ಮದ ಸಾರವಾಗಿದ್ದು ಅದು ಮೂರು ವಿಧಗಳಲ್ಲಿ ರೂಪಾಂತರ ಹೊಂದುತ್ತದೆ. ಅವೆಂದರೆ ಈಶ್ವರ, ಹಿರಣ್ಯಗರ್ಭ ಮತ್ತು ವಿರಾಟ್. ಬ್ರಹ್ಮದ ನಾಲ್ಕನೆಯ ರೂಪಾಂತರವು ತುರ್ಯಾ ಆಗಿದೆ. ಇದು ಅದ್ವೈತ ಪ್ರಜ್ಞೆಯಾಗಿದ್ದು ಅದು ವಿಭಿನ್ನ ರೂಪಗಳಲ್ಲಿ ಕಾಣಿಸಿಕೊಳ್ಳುತ್ತದೆ;

             ಅದು ಆತ್ಮಗಳ ಪೂರ್ವಸಂಸ್ಕಾರಕ್ಕನುಸಾರವಾಗಿ ಮತ್ತು ಕರ್ಮಶೇಷಕ್ಕನುಗುಣವಾಗಿ ವಿವಿಧ ರೀತಿಯ ಆಕಾರಗಳಲ್ಲಿ ಕಂಡು ಬರುತ್ತದೆ. ಅಜ್ಞಾನದಿಂದ ಪರಿಮಿತಿಗೊಳಗಾದ ಪ್ರಜ್ಞೆಯು ಈಶ್ವರವಾದರೆ, ಅಂತಃಕರಣದಿಂದ (ಮನೋ, ಬುದ್ಧಿ, ಚಿತ್ತ ಮತ್ತು ಅಹಂಕಾರಗಳು) ಪರಿಮಿತಿಗೊಳಪಟ್ಟ ಪ್ರಜ್ಞೆಯು ಆತ್ಮವಾಗಿದೆ. ಈಶ್ವರ ಮತ್ತು ಆತ್ಮಗಳು ಕೇವಲ ಸಾಕ್ಷೀಭೂತಗಳಾಗಿ ಕಾರ್ಯವೆಸಗುತ್ತವೆ. ಸಾಮಾನ್ಯವಾಗಿ ಪ್ರಜ್ಞೆಯನ್ನು ನಾಲ್ಕು ವಿಧವಾಗಿ ವರ್ಗೀಕರಿಸಲಾಗುತ್ತದೆ. ವಿಷಯಕ್ಕೆ ಸಂಭಂದಪಟ್ಟ ಪ್ರಜ್ಞೆ, ಜ್ಞಾನಿಗೆ ಸಂಭಂದಪಟ್ಟ ಪ್ರಜ್ಞೆ, ಜ್ಞೇಯಕ್ಕೆ ಸಂಭಂದಪಟ್ಟ ಪ್ರಜ್ಞೆ ಮತ್ತು ಶುದ್ಧ ಜ್ಞಾನಕ್ಕೆ ಸಂಭಂದಪಟ್ಟ ಪ್ರಜ್ಞೆ.

            ಈ ನಾಮವು ದೇವಿಯು ಪ್ರಜ್ಞೆಯನ್ನು ಅರ್ಪಿಸುವುದರ ಮೂಲಕ ಪೂಜಿಸಲ್ಪಡುತ್ತಾಳೆ ಎಂದು ಹೇಳುತ್ತದೆ.

Caitanya-kusuma-priyā चैतन्य-कुसुम-प्रिया (919)

೯೧೯. ಚೈತನ್ಯ-ಕುಸುಮ-ಪ್ರಿಯಾ

          ದೇವಿಯು ಕುಸುಮದ ಪುಷ್ಪಗಳನ್ನು ಬಹುವಾಗಿ ಇಷ್ಟಪಡುತ್ತಾಳೆ. ಇಲ್ಲಿ ಕವಿಗಳಿಂದ ಪ್ರಜ್ಞೆಯು ಹೂವುಗಳಿಗೆ ಹೋಲಿಸಲ್ಪಟ್ಟಿದೆ, ಇದು ಏಕೆಂದರೆ ಮೂಲತಃ ಹೂವು ಅಂತಿಮ ಫಲವಾದ ಮುಕ್ತಿಗೆ ಕಾರಣವಾಗಿದೆ. ಇಲ್ಲಿ ಹೆಸರಿಸಲಾಗಿರುವ ಕುಸುಮ ಪುಷ್ಪವು ಆಧ್ಯಾತ್ಮ ಉನ್ನತಿಗೆ ಕಾರಣವಾದ ಎಂಟು ವಿಧವಾದ ಮೂಲ ಲಕ್ಷಣಗಳ ಕುರಿತಾಗಿ ಹೇಳುತ್ತದೆ. ಅಂತಹ ಪ್ರತಿಯೊಂದು ಗುಣವನ್ನೂ ಒಂದೊಂದು ಹೂವಾಗಿ ಈ ಕೆಳಗಿನ ಶ್ಲೋಕದಲ್ಲಿ ಉಲ್ಲೇಖಿಸಲಾಗಿದೆ.

               अहिंसा प्रथमं पुष्पं पुष्पं इंद्रिय-निग्रह:

               सर्व-भूत-दया पुष्पं क्षमा पुष्पं विशेषत: |

               ज्ञानं पुष्पं तप: पुष्पं ध्यानं पुष्पं तथैव च

               सत्यं अष्टविधं पुष्पं विष्णो: प्रीतिकरं भवेत् ||

               ಅಹಿಂಸಾ ಪ್ರಥಮಂ ಪುಷ್ಪಂ ಪುಷ್ಪಂ ಇಂದ್ರಿಯ-ನಿಗ್ರಹ:

               ಸರ್ವ-ಭೂತ-ದಯಾ ಪುಷ್ಪಂ ಕ್ಷಮಾ ಪುಷ್ಪಂ ವಿಶೇಷತ: |

               ಜ್ಞಾನಂ ಪುಷ್ಪಂ ತಪ: ಪುಷ್ಪಂ ಧ್ಯಾನಂ ಪುಷ್ಪಂ ತಥೈವ ಚ

               ಸತ್ಯಂ ಅಷ್ಟವಿಧಂ ಪುಷ್ಪಂ ವಿಷ್ಣೋ: ಪ್ರೀತಿಕರಂ ಭವೇತ್ ||

          ಈ ಶ್ಲೋಕವು ಅಹಿಂಸೆಯು ಮೊದಲನೇ ಪುಷ್ಪವಾದರೆ, ಇಂದ್ರಿಯ ನಿಗ್ರಹವು ಎರಡನೇ ಪುಷ್ಪವಾಗಿದೆ, ಸಕಲ ಜೀವಿಗಳಲ್ಲಿನ ದಯೆಯು ಮೂರನೇ ಪುಷ್ಪವಾದರೆ, ಕ್ಷಮೆಯು ನಾಲ್ಕನೇ ಪುಷ್ಪವಾಗಿದೆ. ಜ್ಞಾನ ಅಥವಾ ವಿವೇಕವು ಐದನೆಯದಾದರೆ ತಪಸ್ಸು ಆರನೆಯದು ಮತ್ತು ಧ್ಯಾನವು ಏಳನೆಯದಾಗಿದೆ. ಎಂಟನೆಯದೇ ಸತ್ಯವಾಗಿದೆ. ಈ ಶ್ಲೋಕದ ಇನ್ನೊಂದು ಪ್ರಭೇದವೂ ಇದೆ ಅದೂ ಸಹ ಇದೇ ಅರ್ಥವನ್ನು ಕೊಡುತ್ತದೆ.

          ಚೈತನ್ಯವನ್ನು ಈ ಶ್ಲೋಕದಲ್ಲಿ ಹೆಸರಿಸಲಾಗಿರುವ ಎಂಟು ವಿಧದ ಪುಷ್ಪಗಳ ಸಮಾಖ್ಯವೆಂದು ಹೇಳಲಾಗಿದ್ದು; ಅವನ್ನು ಸಂಯುಕ್ತವಾಗಿ ಕುಸುಮ ಪುಷ್ಪವೆಂದು ಕರೆಯಲಾಗುತ್ತದೆ.

          ಈ ನಾಮವು ಗಿಡಗಳಿಂದ ಕೊಯ್ದ ಯಾವುದೇ ವಿಧವಾದ ಹೂವುಗಳು ದೇವಿಗೆ ಅವಶ್ಯವಿಲ್ಲವೆಂದು ಹೇಳುತ್ತದೆ. ಸ್ಥೂಲ ಪುಷ್ಪಗಳು ಒಬ್ಬನ ಆತ್ಮಸಾಕ್ಷಿಗೆ ವ್ಯತಿರಿಕ್ತವಾದವುಗಳಾಗಿವೆ. ದೇವಿಗೆ ಬೇಕಾಗಿರುವುದು ಮೇಲಿನ ಗುಣಗಳನ್ನು ಹೊಂದಿರುವ ಸೂಕ್ಷ್ಮ ಪುಷ್ಪಗಳು. ಕೃಷ್ಣನು ಭಗವದ್ಗೀತೆಯಲ್ಲಿ (೯. ೨೬) ವಿಶೇಷವಾಗಿ ಇದನ್ನು ವಿವರಿಸುತ್ತಾನೆ. "ಯಾರೇ ಆಗಲಿ ನನಗೆ ಪ್ರೇಮಪೂರ್ವಕವಾಗಿ ಒಂದು ಎಲೆ, ಹೂವು, ಹಣ್ಣು ಅಥವಾ ಬರೀ ನೀರನ್ನಾಗಲಿ ಅರ್ಪಿಸಿದರೂ ಸಹ ನಾನು ಅವನಿಗೆ ಪ್ರತ್ಯಕ್ಷವಾಗುತ್ತೇನೆ.”

         ಸೌಂದರ್ಯ ಲಹರಿಯು (ಸ್ತೋತ್ರ ೩) ಹೀಗೆ ಹೇಳುತ್ತದೆ, "ಚೈತನ್ಯ ಸ್ಥಬಕ ಮಕರಂದ ಸೃತಿಜಾರಿ" ಅಂದರೆ”ಆತ್ಮಜ್ಞಾನದ ಮಕರಂದವು ಚೈತನ್ಯದ ಅರಳಿದ ಪುಷ್ಪಗಳಿಂದ ಪ್ರವಹಿಸುತ್ತದೆ’. ಹೀಗೆ ಪ್ರವಹಿಸುವ ಜ್ಞಾನವು ಪರಮಾನಂದವಾಗಿ ಪರಿವರ್ತನೆ ಹೊಂದುತ್ತದೆ.

         ಕುಚೇಲನೆಂದೂ ಕರೆಯಲ್ಪಡುವ ಸುಧಾಮ (ಕುಚೇಲನೆಂದರೆ ಕುವಸ್ತ್ರಧಾರಿ) ಮತ್ತು ಕೃಷ್ಣ ಇಬ್ಬರೂ ತಮ್ಮ ಎಳೆಯ ವಯಸ್ಸಿನಲ್ಲಿ ಒಂದೇ ಕಡೆ ವಿದ್ಯಾಭ್ಯಾಸ ಮಾಡುತ್ತಿದ್ದರು ಮತ್ತು ಅವರಿಬ್ಬರೂ ಒಳ್ಳೆಯ ಗೆಳೆಯರಾಗಿದ್ದರು. ಸುಧಾಮನು ಒಳ್ಳೆಯ ಜೀವನವನ್ನು ಸಾಗಿಸಲು ಶಕ್ಯನಾಗಿರಲಿಲ್ಲ. ಆತನ ಹೆಂಡತಿಯು ಅವನನ್ನು ಶ್ರೀಕೃಷ್ಣನನ್ನು ಭೇಟಿಯಾಗಲು ಒತ್ತಾಯಿಸಿದಳು. ಸುಧಾಮನು ಅವಲಕ್ಕಿಯನ್ನು ಒಂದು ಹಳೇ ಬಟ್ಟೆಯಲ್ಲಿ ಕಟ್ಟಿಕೊಂಡು ಕೃಷ್ಣನನ್ನು ನೋಡಲು ಹೋದ. ಅವರಿಬ್ಬರೂ ಭೇಟಿಯಾದಾಗ ಕೃಷ್ಣನು ಸುಧಾಮನಿಂದ ಆ ಬಟ್ಟೆಯ ಗಂಟನ್ನು ಬಲಾತ್ಕಾರವಾಗಿ ಕಿತ್ತುಕೊಂಡನು ಆಗ ಅದರಲ್ಲಿದ್ದ ಅವಲಕ್ಕಿಯು ನೆಲದ ಮೇಲೆ ಚಲ್ಲಾಪಿಲ್ಲಿಯಾಗಿ ಹರಡಿತು. ಕೃಷ್ಣನು ಸುಧಾಮನನ್ನು ಉದ್ದೇಶಿಸಿ ಹೀಗೆ ಹೇಳಿದ, "ಓಹ್ಞ್! ಮಿತ್ರನೇ ನೀನು ಪ್ರೀತಿಯಿಂದ ತಂದ ಕಾಣಿಕೆಯು ನನಗೆ ಪರಮಾನಂದವನ್ನುಂಟು ಮಾಡಿದೆ. ಈ ಅವಲಕ್ಕಿಯು ನನ್ನನ್ನು ಮತ್ತು ಈ ಸಮಸ್ತ ವಿಶ್ವವನ್ನು ತೃಪ್ತಿಗೊಳಿಸುತ್ತದೆ". ಹೀಗೆ ಹೇಳುತ್ತಾ, ಕೃಷ್ಣನು ಆ ಅವಲಕ್ಕಿಯ ಕಾಳುಗಳನ್ನು ನೆಲದ ಮೇಲಿಂದ ಆಯ್ದುಕೊಂಡು ಅವನ್ನು ತಿಂದನು. ಸುಧಾಮನು ಕೃಷ್ಣನಿಂದ ತನಗಾಗಿ ಏನನ್ನೂ ಬೇಡಿಕೊಳ್ಳದೆ ತನ್ನ ಊರಿಗೆ ಹಿಂದಿರುಗಿದನು. ಅವನು ತನ್ನ ಊರಿಗೆ ಹಿಂದಿರುಗುತ್ತಿದ್ದಂತೆಯೇ ತನ್ನ ಸಣ್ಣ ಗುಡಿಸಲು ದೊಡ್ಡ ಭವನವಾಗಿ ಪರಿವರ್ತನೆ ಹೊಂದಿದ್ದನ್ನು ನೋಡಿದ. ಕೃಷ್ಣನಿಗೆ ಸುಧಾಮನು ಭಕ್ತಿಪೂರ್ವಕವಾಗಿ ಅರ್ಪಿಸಿದ್ದ ಅವಲಕ್ಕಿಗೆ ಬದಲಾಗಿ ಕೃಷ್ಣನು ಅವನಿಗೆ ಸಕಲೈರ್ಶ್ವಯಗಳನ್ನು ಕರುಣಿಸಿದ. ಈ ಕಥೆಯು ಶ್ರೀಮದ್ಭಾಗವತದಲ್ಲಿ ಬರುತ್ತದೆ, ಇದು ನಿಜವಾದ ಭಕ್ತಿಯ ಮಹಾತ್ಮ್ಯೆಯನ್ನು ತಿಳಿಸುತ್ತದೆ. 

Sadoditā सदोदिता (920)

೯೨೦. ಸದೋದಿತಾ

           ದೇವಿಯು ನಿತ್ಯ ನಿರಂತರವಾಗಿ ಹೊಳೆಯುತ್ತಿರುತ್ತಾಳೆ (ನಾಮ ೬, ೨೭೫ ಮತ್ತು ೫೯೬ರ ದೇವಿಯನ್ನು ಸೂರ್ಯನಿಗೆ ಹೋಲಿಸಿರುವುದನ್ನು ಇಲ್ಲಿ ಉಲ್ಲೇಖಿಸಬಹುದು). ದೇವಿಯು ಪುಣ್ಯಪುರುಷರ ಮನಗಳಲ್ಲಿ ಪ್ರಕಾಶಿಸುತ್ತಾಳೆ. ಛಾಂದೋಗ್ಯ ಉಪನಿಷತ್ತು (೩.೧೧.೨) ಹೀಗೆ ಹೇಳುತ್ತದೆ, "ಬ್ರಹ್ಮಲೋಕದಲ್ಲಿ ಸೂರ್ಯನು ಎಂದಿಗೂ ಉದಯಿಸಲಿಲ್ಲ ಅಥವಾ ಅಸ್ತಮಿಸಲಿಲ್ಲ". 

Sadā-tuṣṭā सदा-तुष्टा (921)

೯೨೧. ಸದಾ-ತುಷ್ಟಾ

           ಸದಾ ಎಂದರೆ ಯಾವಾಗಲೂ ಮತ್ತು ತುಷ್ಟಾ ಎಂದರೆ ತೃಪ್ತಿಗೊಂಡ ಅಥವಾ ಸಂತೋಷಗೊಂಡ ಎಂದರ್ಥ. ದೇವಿಯು ಯಾವಾಗಲೂ ತೃಪ್ತಿಯಿಂದಿರುತ್ತಾಳೆ, ಏಕೆಂದರೆ ನಾಮ ೨೫೨ ಮತ್ತು ೬೫೬ರಲ್ಲಿ ಸೂಚಿಸಿರುವ ಅವಳ ಲಕ್ಷಣಗಳಿಂದಾಗಿ. ದೇವಿಯು ನಿಜವಾದ ಭಕ್ತಿಯಿಂದ ಯಾವಾಗಲೂ ಸಂತುಷ್ಟಗೊಳ್ಳುತ್ತಾಳೆ.

           ಪರಬ್ರಹ್ಮದ ಲಕ್ಷಣವು ನಿತ್ಯ ಸಂತುಷ್ಟವಾಗಿರುವುದಾಗಿದೆ; ಏಕೆಂದರೆ ಪರಬ್ರಹ್ಮವು ಯಾವುದೇ ವಿಧವಾದ ಕರ್ಮಗಳಲ್ಲಿ ಭಾಗಿಯಾಗುವುದಿಲ್ಲ ಮತ್ತು ಅದು ಯಾವಾಗಲೂ ಸಾಕ್ಷೀಭೂತವಾಗಿ ಇರುತ್ತದೆ. ಕರ್ಮಗಳು ಮಾತ್ರವೇ ಯಾವತ್ತಿಗೂ ಅಸಂತೃಪ್ತಿಯನ್ನುಂಟು ಮಾಡುತ್ತವೆ; ಇದು ಜೀವಿಗಳ ಲಕ್ಷಣವಾಗಿದೆ. ಯಾವಾಗ ಒಬ್ಬನು ನಿತ್ಯ ತೃಪ್ತವಾದ ಬ್ರಹ್ಮವನ್ನು ಅರಿಯುತ್ತಾನೆಯೋ ಆಗ ಅವನೂ ಸಹ ತುಷ್ಟನಾಗುತ್ತಾನೆ.

Taruṇāditya-pāṭalā तरुणादित्य-पाटला (922)

೯೨೨. ತರುಣಾದಿತ್ಯ-ಪಾಟಲಾ

           ಪಾಟಲ ಎಂದರೆ ಉದಯಸೂರ್ಯನ ತೆಳುಗೆಂಪು ವರ್ಣ. ಈ ಬಣ್ಣವು ಅಧಿಕವಾಗಿ ಕೆಂಪು ಬಣ್ಣವನ್ನು (ದೇವಿಯ ಮೈಕಾಂತಿ) ಹೊಂದಿದೆ ಮತ್ತು ಕಡಿಮೆಯಾಗಿರುವ ಬಿಳಿ ಬಣ್ಣವನ್ನು (ಶಿವನ ಮೈಕಾಂತಿಯನ್ನು) ಹೊಂದಿರುತ್ತದೆ. ಇದರರ್ಥ ಶಿವನ ಗುಣಗಳಿಗಿಂತ ದೇವಿಯ ಗುಣಗಳು ಈ ಪ್ರಪಂಚವನ್ನು ಸುಸ್ಥಿತಿಯಲ್ಲಿಡಲು ಪ್ರಮುಖ ಪಾತ್ರ ವಹಿಸುತ್ತವೆ.

           ದೇವಿಯನ್ನು ನಾವು ಧ್ಯಾನಿಸುವ ರೂಪವನ್ನಾಧರಿಸಿ ಆಕೆಯು ವಿವಿಧ ರೀತಿಯ ಮೈಕಾಂತಿಯನ್ನು ಹೊಂದುತ್ತಾಳೆ. ಬೃಹದಾರಣ್ಯಕ ಉಪನಿಷತ್ತು (೨.೩.೬) ಪರಿಮಿತವಾಗಿರುವ ಬ್ರಹ್ಮದ ಲಕ್ಷಣಗಳನ್ನು ವಿವರಿಸುತ್ತದೆ. ಅದು ವಿವಿಧ ಆಕಾರಗಳನ್ನು ಹೊಂದಿದ ಬ್ರಹ್ಮವನ್ನು ವಿವರಿಸುತ್ತದೆ, "ಹರಿಶಿಣದಿಂದ ಅದ್ದಲ್ಪಟ್ಟ ಬಟ್ಟೆಯಂತೆ, ಅಥವಾ ಬಿಳುಪಾದ ಕುರಿಯ ಉಣ್ಣೆಯಂತೆ, ಅಥವಾ ನೀಲಿ ಭೃಂಗದ ಕೀಟದಂತೆ, ಅಥವಾ ಶ್ವೇತ ವರ್ಣದ ಕಮಲದಂತೆ, ಅಥವಾ ಮಿಂಚಿನ ಪ್ರಭೆಯಂತೆ".

           ಅದೇ ಉಪನಿಷತ್ತು (೩.೯.೨೧) ಮುಂದುವರೆಯುತ್ತಾ ಹೀಗೆ ಹೇಳುತ್ತದೆ, "ನಂಬಿಕೆಯೆನ್ನುವುದು ಹೃದಯವನ್ನು ಅವಲಂಬಿಸಿದೆ ಏಕಂದರೆ ಒಬ್ಬನು ನಂಬಿಕೆಯನ್ನು ಹೃದಯದ ಮೂಲಕ ಅರಿಯುತ್ತಾನೆ". ಯಾರು ಮುಕ್ತಿಯನ್ನು ಹೊಂದಬಯಸುತ್ತಾನೆಯೋ ಅವನು ದೇವಿಯ ಬಿಳಿ ಬಣ್ಣದ ಮೈಕಾಂತಿಯನ್ನು ಧ್ಯಾನಿಸುತ್ತಾನೆ, ಯಾರು ಧೈರ್ಯವನ್ನು ಪಡೆಯಬಯಸುತ್ತಾರೆಯೋ ಅವರು ಆಕೆಯ ಕೆಂಪು ಬಣ್ಣದ ಮೈಕಾಂತಿಯ ಮೇಲೆ ಧ್ಯಾನವನ್ನು ಕೇಂದ್ರೀಕರಿಸುತ್ತಾರೆ. ಮರಣದ ಅಧಿದೇವತೆಯಾದ ಯಮನು ಗಾಢಕಪ್ಪು ವರ್ಣವನ್ನು ಹೊಂದಿದ್ದಾನೆ. ಸರಸ್ವತೀ ದೇವಿಯನ್ನು ಬಿಳಿಯ ಕಮಲದ ಮೇಲೆ ಆಸೀನಳಾಗಿರುವಂತೆ ಕಲ್ಪಿಸಿಕೊಳ್ಳಲಾಗುತ್ತದೆ. ಬಿಳಿ ಎಂದರೆ ಜ್ಞಾನವಾಗಿದೆ. ಪ್ರತಿಯೊಂದು ಬಣ್ಣವೂ ಒಂದೊಂದು ಗುಣವನ್ನು ಹೊಂದಿದೆ. ಪ್ರತಿಯೊಬ್ಬ ಭಕ್ತನೂ ತನ್ನ ಅವಶ್ಯಕತೆಗಳಿಗನುಗುಣವಾಗಿ ದೇವಿಯ ಮೈಕಾಂತಿಯನ್ನು ಕಲ್ಪಿಸಿಕೊಳ್ಳುತ್ತಾನೆ.

          ಕುಂಡಲಿನೀ ಧ್ಯಾನದಲ್ಲಿ ಪ್ರತಿಯೊಂದು ಚಕ್ರದ ವರ್ಣವೂ ಸಹ ವಿವಿಧ ವರ್ಣಗಳಲ್ಲಿ ಹೊಳೆಯುತ್ತದೆ. ಅಂತಹ ಬಣ್ಣಗಳು ವಿವಿಧ ಗುಣಗಳನ್ನು ಹೊಂದಿವೆ ಮತ್ತು ಯಾವಾಗ ಕುಂಡಲಿನಿಯು ಒಂದು ಚಕ್ರದಲ್ಲಿ ಪ್ರಧಾನವಾಗಿರುತ್ತದೆಯೋ ಅದನ್ನನುಸರಿಸಿ ಆ ಬಣ್ಣದ ಗುಣಗಳು ಕುಂಡಲಿನೀ ಧ್ಯಾನದ ಸಾಧಕನಲ್ಲಿ ಪ್ರಧಾನವಾಗುತ್ತವೆ.

          ಈ ನಾಮವು ಧ್ಯಾನ ಶ್ಲೋಕಗಳಲ್ಲಿ ಚರ್ಚಿಸಿದಂತೆ ದೇವಿಯ ಕೆಂಪು ಬಣ್ಣದ ಮೈಕಾಂತಿಯನ್ನು ವ್ಯತಿರೇಕಿಸುವುದಿಲ್ಲ. ಆದರೆ ಈ ನಾಮವು ದೇವಿಯ ಮೈಕಾಂತಿಯು ಆಕೆಯನ್ನು ಯಾವುದಕ್ಕಾಗಿ ಬೇಡುತ್ತೇವೆ ಎನ್ನುವುದರ ಮೇಲೆ ಬದಲಾಗುತ್ತಾ ಹೋಗುತ್ತದೆ ಎಂದು ಹೇಳುತ್ತದೆ.

Dakṣiṇā-dakṣiṇārādhyā दक्षिणा-दक्षिणाराध्या (923)

೯೨೩. ದಕ್ಷಿಣಾ-ದಕ್ಷಿಣಾರಾಧ್ಯಾ

           ದೇವಿಯು, ದಕ್ಷಿಣಾಚಾರವೆಂದು ಕರೆಯಲ್ಪಡುವ ಬಲಹಸ್ತದ ಮೂಲಕ ಪೂಜಿಸುವವರಿಂದ ಗೌರವಿಸಲ್ಪಡುತ್ತಾಳೆ. ಎಡಹಸ್ತದಿಂದ ಪೂಜಿಸುವುದನ್ನು ವಾಮಾಚಾರ ಎಂದು ಕರೆಯಲಾಗುತ್ತದೆ. ೯೧೨ನೇ ನಾಮದಲ್ಲಿ ವಿವರಿಸಿರುವಂತೆ ದೇವಿಯು ದಕ್ಷಿಣಾಚಾರ ಮತ್ತು ವಾಮಾಚಾರ ಎರಡೂ ವಿಧವಾದ ಪದ್ಧತಿಗಳನುಸಾರವಾಗಿ ಪೂಜಿಸುವವರಿಂದ ಗೌರವಿಸಲ್ಪಡುತ್ತಾಳೆ.

           ದಕ್ಷಿಣ ಎಂದರೆ ಜ್ಞಾನಿಗಳು ಮತ್ತು ಅದಕ್ಷಿಣ ಎಂದರೆ ಅಜ್ಞಾನಿಗಳು. ದೇವಿಯು ಜ್ಞಾನಿಗಳಿಂದ ಮತ್ತು ಅಜ್ಞಾನಿಗಳಿಬ್ಬರಿಂದಲೂ ಪೂಜಿಸಲ್ಪಡುತ್ತಾಳೆ. ದೇವಿಯನ್ನು ಯಾರೇ ಪೂಜಿಸಲಿ ಅವರು ಆಕೆಯ ಭಕ್ತರು. ಒಬ್ಬ ಭಕ್ತನು ಜ್ಞಾನಿಯಾಗಿರಬಹುದು ಅಥವಾ ಅಜ್ಞಾನಿಯಾಗಿರಬಹುದು. ಜ್ಞಾನಿ ಎಂದರೆ ಯಾರು ಮುಕ್ತಿಯ ಹೊರತಾಗಿ  ಯಾವುದೇ ವಿಧವಾದ ಪ್ರತಿಫಲವನ್ನು ಅಪೇಕ್ಷಿಸಿದೆ ಬ್ರಹ್ಮವನ್ನು ಮಾನಸಿಕವಾಗಿ ಅರಿಯಲು ಪ್ರಯತ್ನಿಸುತ್ತಾರೋ ಅವರು. ಅಜ್ಞಾನಿಗಳೆಂದರೆ ಯಾರು ಪ್ರತಿಫಲಗಳನ್ನು ಅಪೇಕ್ಷಿಸಿ ನಾನಾ ವಿಧವಾದ ಪೂಜಾಚರಣೆಗಳಲ್ಲಿ ತೊಡಗಿರುತ್ತಾರೆಯೋ ಅವರು.

           ದಕ್ಷಿಣ ಎಂದರೆ ಗುರುವಿಗೆ ಅರ್ಪಿಸುವ ಕಾಣಿಕೆಯನ್ನೂ ಸೂಚಿಸುತ್ತದೆ. ಹಾಗಾಗಿ,  ಶ್ರೀ ವಿದ್ಯಾ ಉಪದೇಶವನ್ನು ನೀಡಿದ ಗುರುವಿಗೆ ದಕ್ಷಿಣೆಯನ್ನು ಸಮರ್ಪಿಸಿದಾಗ ದೇವಿಯು ಸಂತುಷ್ಟಳಾಗುತ್ತಾಳೆ ಎಂದೂ ವ್ಯಾಖ್ಯಾನಿಸಬಹುದು.

           ಕೃಷ್ಣನು ಭಗವದ್ಗೀತೆಯಲ್ಲಿ ( ೭. ೧೫, ೧೬ ಮತ್ತು ೧೭), "ಮೂರ್ಖರು ಮತ್ತು ಕೆಟ್ಟ ಕೆಲಸಗಳನ್ನು ಮಾಡುವ ದುಷ್ಟರು ನನ್ನನ್ನು ಗೌರವಿಸುವುದಿಲ್ಲ. ನಾಲ್ಕು ವಿಧವಾದ ಪುಣ್ಯಶಾಲಿಗಳಾದ ಭಕ್ತರು ನನ್ನನ್ನು ಪೂಜಿಸುತ್ತಾರೆ - ಅವರೆಂದರೆ, ಐಹಿಕ ಸುಖಭೋಗಗಳನ್ನು ಹೊಂದಬಯಸುವವನು, ದುಃಖ ಮತ್ತು ಯಾತನೆಗಳಿಂದ ಕೂಡಿದವನು, ಜ್ಞಾನವನ್ನು ಅರಸುವವನು ಮತ್ತು ವಿವೇಕಶಾಲಿಯಾದ ಮನುಷ್ಯ. ಯಾರು ಈ ವಿವೇಕವುಳ್ಳವರಲ್ಲಿ ಶ್ರೇಷ್ಠರೂ ಮತ್ತು ನನ್ನಲ್ಲಿ ಅಚಲವಾದ ಭಕ್ತಿಯನ್ನಿರಿಸಿ ನನ್ನಲ್ಲೇ ಅಂಕಿತರಾಗಿರುತ್ತಾರೆಯೋ, ನಾನು ಅವರಿಗೆ ಅತ್ಯಂತ ಪ್ರೀತಿಪಾತ್ರನು ಮತ್ತು ಅವರೂ ಸಹ ನನಗೆ ಅತ್ಯಂತ ಪ್ರೀತಿ ಪಾತ್ರರು", ಎಂದು ಹೇಳಿದ್ದಾನೆ.

                                                                                 ******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 918 - 923 http://www.manblunder.com/2010/07/lalitha-sahasranamam-918-923.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

ಅನಂತೇಶ್ ಅವರೆ ನಿಮ್ಮ ಕೊಂಡಿಯನ್ನು ನೋಡಿದೆ. ಅದರಲ್ಲಿ ಬಹಳ ಸರಳವಾಗಿ ಅಷ್ಟವಿಧ ಪುಷ್ಪಗಳ ಕುರಿತಾಗಿ ಬರೆದಿದ್ದೀರ. ಅದರಲ್ಲಿನ ಪ್ರತಿಕ್ರಿಯೆಗೆ ಬಹಳ ಒಳ್ಳೆಯ ಪದ್ಯವನ್ನು ಹರೀಶ್ ಅತ್ರೇಯ ಅವರು ಕೊಟ್ಟಿದ್ದಾರೆ. ಅವರಿಗೂ ನನ್ನ ಧನ್ಯವಾದಗಳು.

Submitted by nageshamysore Fri, 01/10/2014 - 02:06

ಶ್ರೀಧರರೆ,"೧೯೭. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೯೨೪ - ೯೨೮
______________________________________________
.
೯೨೪. ದರಸ್ಮೇರ-ಮುಖಾಂಬುಜಾ
ಹೊಳೆವ ಶಂಖ ದೇವಿದಂತ, ಕೊರಳ ಮೂರುಗೆರೆ ಸೂಚಿ ಅ-ಉ-ಮ ಓಂಕಾರ
ದೇವಿ ಸ್ವಾತ್ಮಾರಾಮ ಆತ್ಮ ಸಂತೋಷಿ, ಏತಕೂ ಭಯಪಡದ ನಗೆ ಮಂದಾರ
ಮಹಾಭಯ-ರುದ್ರ ತಾಂಡವನೃತ್ಯ ಸಾಕ್ಷೀಭೂತ ಲಲಿತೆ ಮಂದಸ್ಮಿತ ಸಹಜ
ಶಿವ ಸೋತ ಮುಗುಳ್ನಗೆ, ಮುಖ ಕಮಲ ನಗೆ ಹಿಗ್ಗೆ ದರಸ್ಮೇರ-ಮುಖಾಂಬುಜಾ ||
.
ಢಕ್ಕೆಯ ನಾದಕೆ ನಾಟ್ಯವಾಡುತ ಶಿವ, ಕಾಲಾಗ್ನಿ ರುದ್ರನಾಗಿ ಜಗವನಪ್ಪುವ
ಸಮಸ್ತ ಸೃಷ್ಟಿ ದೈವಿ ಏಕತ್ವದೆ ಸಮಷ್ಟಿ, ಬ್ರಹ್ಮಾಂಡ ಚಕ್ರದಂತ್ಯ ಸೂಚಿಸುವ
ತಾಂಡವನೃತ್ಯದೆ ಅಗ್ನಿ ಕರಗುತ ನೀರು, ನೀರಾಗಿ ಗಾಳಿ, ಆಕಾಶವಾಗುತಲಿ
ದೇವಾನುದೇವತೆ ಪುರುಷಪ್ರಕೃತಿ ಜತೆಬ್ರಹ್ಮೈಕ್ಯ, ಶಕ್ತಿ ಸಾಕ್ಷಿ ಶಿವನಸ್ತಿತ್ವಕಲ್ಲಿ ||
.
೯೨೫. ಕೌಲಿನೀ-ಕೇವಲಾ
ಕೌಲಿನೀ ಮಾರ್ಪಾಟಾಗಿ ಕೇವಲಾ, ರೂಪಾಂತರಕೆ ಲಲಿತೆಯಾಗುತಾ ಬಲ
ಕಾಮವಾಂಛೆ ಮಣಿಸೆ ಕೌಲಿನೀ-ಸಿದ್ದಪುರುಷ, ತತ್ವಕೆ ಸಮನಾಗಿ ಕೇವಲಾ
ಕೌಲಮಾರ್ಗಾರಾಧಕ ವಾಮಹಸ್ತ ಶಾಕ್ತ ಕೌಲಿನೀ, ಅದ್ವೈತದ ಸ್ಥಿತಿ ಕೇವಲ
ಇಂದ್ರಿಯ-ಮನದನುಬಂಧಕಷ್ಟೆ ದ್ವಂದ್ವ, ಕೇವಲ-ಶುದ್ಧ ಶಿವ ಜ್ಞಾನ ಅಮಲ ||
.
೯೨೬. ಅನರ್ಘ್ಯ-ಕೈವಲ್ಯ-ಪದ-ದಾಯಿನೀ
ಮುಕ್ತಿಯತ್ತ ಪರಮಾನಂದ ಪಥದ ಹಂತ ಕೈವಲ್ಯ ಪದ, ಅನರ್ಘ್ಯ
ಜನನಮರಣ ಚಕ್ರ ವಿಮುಕ್ತಿಣಿ ಲಲಿತೆ, ಪ್ರಸಾದಿಸಿ ಮುಕ್ತಿ ಕೈವಲ್ಯ
ಆತ್ಮದ ಅಸ್ತಿತ್ವ, ಆತ್ಮ ಪ್ರಕೃತಿಯ ದ್ವೈತದ ಜ್ಞಾನ, ಮುಕ್ತಿಗಿಟ್ಟ ಏಣಿ
ಹೂವ್ವೆತ್ತಿಟ್ಟಂತಾಗಿಸಿ ಸುಲಲಿತ, ಅನರ್ಘ್ಯ-ಕೈವಲ್ಯ-ಪದ-ದಾಯಿನೀ ||
.
ಅಂತಿಮ ನಿತ್ಯಾನಿತ್ಯದ ವಿವೇಕ ಕೇವಲ ಜ್ಞಾನ, ನಿರ್ವಿಕಲ್ಪ ಸಮಾಧಿಗೆ ಸಿದ್ದಿ
ಪ್ರಜ್ಞೆಯ ಪರಮೋನ್ನತ ಸ್ಥಿತಿ, ಸಂಸಾರ ಬಂಧಕೆ ಸಿಲುಕದ ಪ್ರತ್ಯೇಕಾತ್ಮನಿಧಿ
ಮಾನವ-ದೇವತಾರೂಪದಸ್ತಿತ್ವ, ಬಂಧನ ರಹಿತ, ಸರ್ವಜ್ಞ, ಪರಿಪೂರ್ಣಾತ್ಮ
ಮುಕ್ತಿ ಸ್ವಾತಂತ್ರ ಜೀವಿಗೆ ಮೂಲಭೂತ ಲಕ್ಷಣ, ಕೈವಲ್ಯಾಂತರ್ಗತ ಸ್ಥಿತಿ ಆತ್ಮ ||
.
೯೨೭. ಸ್ತೋತ್ರ-ಪ್ರಿಯಾ
ಶಾಸ್ತ್ರಕಿದ್ದಂತೆ ವಾಚನ-ಪಠನ, ಹೊಗಳುವ ಸ್ತೋತ್ರ ಹಾಡಾಗುವ ಗದ್ಯ-ಪದ್ಯ
ಪ್ರಣಾಮ ಸ್ತೋತ್ರ-ನಮನಕೆ, ಮುಕ್ತಿ ಸ್ತೋತ್ರ-ಮುಕ್ತಿಗೆ, ಆರುಸ್ತೋತ್ರಗಳ ವಿದ್ಯ
ಸಾಧನೆಯ ಹೊಗಳೆ ಪ್ರಶಂಸಾ ಸ್ತೋತ್ರ, ಸಾಹಸಕೆ ವೀರಗಾಥಾ ನಾಲ್ಕಾಗುತ
ವೈಭವ-ಸಂಪದಭಿವೃದ್ಧಿ ಸ್ತೋತ್ರಪಠನಕೆ ಸಂತುಷ್ಟೆ, ಸ್ತೋತ್ರ-ಪ್ರಿಯಳು ಲಲಿತ ||
.
೯೨೮. ಸ್ತುತಿ-ಮತೀ
ಜ್ಞಾನವೆ ಮತಿ ಹೊಗಳುವಿಕೆ ಸ್ತುತಿ, ಸುಜ್ಞಾನ ನೀಡೆ ಸ್ತುತಿ-ಮತೀ ಲಲಿತೆ
ಬ್ರಹ್ಮಸಾಕ್ಷಾತ್ಕಾರ ಜ್ಞಾನ ಹೊಂದೆ ಮನುಜ, ಸ್ತೋತ್ರದಿಂ ಲಭ್ಯ ಸ್ತುತಿಸುತೆ
ಮತಿ-ಜ್ಞಾನ, ಇ-ಐಶ್ವರ್ಯ, ದೇವಿ ಸ್ತುತಿಯಿಂದಾ ದೊರಕೆ ಜ್ಞಾನ ಸಂಪದ
ನಿರಂತರ ಸ್ತುತಿಗೆ ಇಹ ಪರ ಸುಖ ಸೌಭಾಗ್ಯ ನೀಡುವಳು ದೇವಿ ಸರ್ವದಾ ||
.
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Submitted by nageshamysore Fri, 01/10/2014 - 02:22

ಶ್ರೀಧರರೆ, ಅಜಾಗರೂಕತೆಯಿಂದಾಗಿ ೧೯೭ನೆ ಕಂತಿನ ಕವನಗಳು, ೧೯೬ ರಲ್ಲಿ ಸೇರಿಕೊಂಡುಬಿಟ್ಟವು. ಸರಿಯಾದ ಕಾವ್ಯರೂಪವನ್ನು ಮತ್ತೇ ಸೇರಿಸುತ್ತಿದ್ದೇನೆ. ಗೊಂದಲಕ್ಕೆ ಕ್ಷಮೆಯಿರಲಿ :-(
.
"೧೯೬. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಸರಿಯಾದ ಕಾವ್ಯ ರೂಪ ಈ ಕೆಳಗೆ :-)
.
ಲಲಿತಾ ಸಹಸ್ರನಾಮ ೯೧೮ - ೯೨೩
_____________________________
.
೯೧೮. ಚೈತನ್ಯಾರ್ಘ್ಯ-ಸಮಾರಾಧ್ಯಾ
ಗೌರವಾನ್ವಿತ ಅತಿಥಿಗಳಿಗರ್ಪಿತ ಜಲ ಅರ್ಘ್ಯ, ಜ್ಞಾನ-ಭಕ್ತಿಯರ್ಪಣೆಗೆ ಮುಕ್ತಿ
ಪೂರ್ಣಸ್ವತಂತ್ರ ಪರಮೋನ್ನತ ಪ್ರಜ್ಞೆ ಶಿವಚೈತನ್ಯ, ಅವಲಂಬಿತ ಜೀವರಾಶಿ
ಮೂಲಭೂತ ಪ್ರಜ್ಞೆ ಚೈತನ್ಯ, ಅರಿತೆಸಗುತ ಕಾರ್ಯ ಸ್ವತಂತ್ರಾತ್ಮದ ದಾಯ
ಪಾತಾಕವಿನಾಶಿ ಭುವನೇಶ್ವರೀ-ಚೈತನ್ಯಮಂತ್ರ, ಚೈತನ್ಯಾರ್ಘ್ಯ-ಸಮಾರಾಧ್ಯಾ ||
.
ಚೈತನ್ಯದ ಕುರಿತು ಕೆಲವೊಂದು ವಿವರಗಳು :
_____________________________
.
ಚೈತನ್ಯ ಪರಬ್ರಹ್ಮದ ಪರಿಶುದ್ಧ ಪ್ರಜ್ಞೆ-ಸಾರ, ತ್ರಿವಿಧದೆ ರೂಪಾಂತರ
ಈಶ್ವರ-ಹಿರಣ್ಯಗರ್ಭ-ವಿರಾಟ್ ಜತೆ ತುರ್ಯಾ ನಾಲ್ಕನೆ ರೂಪಾಂತರ
ಅದ್ವೈತ ಪ್ರಜ್ಞೆ ತುರ್ಯಾ, ಕರ್ಮಸಂಸ್ಕಾರಾನುಗುಣದೆ ವಿವಿಧ ಆಕಾರ
ಅಂತಃಕರಣಪರಿಮಿತ ಪ್ರಜ್ಞೆ ಆತ್ಮ, ಅಜ್ಞಾನಪರಿಮಿತ ಪ್ರಜ್ಞೆಯೆ ಈಶ್ವರ ||
.
೯೧೯. ಚೈತನ್ಯ-ಕುಸುಮ-ಪ್ರಿಯಾ
ಅಧ್ಯಾತ್ಮದುನ್ನತಿಗೆ ಕಾರಣ ಗುಣ ಅಷ್ಟ ಲಕ್ಷಣ, ಕುಸುಮರೂಪಿ ಪ್ರಜ್ಞಾ ಪುಷ್ಪ
ಅಷ್ಟ ವಿಧ ಸೂಕ್ಷ್ಮ ಪುಷ್ಪ ಸಮಾಖ್ಯವೆ ಚೈತನ್ಯ, ದೇವಿ ಪ್ರಿಯ ಕುಸುಮ ರೂಪ
ಚೈತನ್ಯ ಪುಷ್ಪ ವಿಕಸಿತ ಜ್ಞಾನ, ಆತ್ಮಜ್ಞಾನದ ಜೇನಾಗಿ ಪರಮಾನಂದಪ್ರಾಯ
ಪ್ರೇಮದಲರ್ಪಿತ ಅವಲಕ್ಕಿಗೆ ತೃಪ್ತಳಾಗೊ ಲಲಿತೆ, ಚೈತನ್ಯ-ಕುಸುಮ-ಪ್ರಿಯಾ ||
.
ಆತ್ಮಸಾಕ್ಷ್ಹಿಗೆ ವ್ಯತಿರಿಕ್ತ ಸ್ಥೂಲ ಪುಷ್ಪ, ದೇವಿ ಬಯಸುವಳು ಸೂಕ್ಷ್ಮ
ಗಿಡದಿಂದಾಯ್ದ ಕುಸುಮವ ಅಧಿಗಮಿಸುವ ಸ್ವರೂಪ ಗುಣ ಧರ್ಮ
ಅಹಿಂಸೆ-ಇಂದ್ರಿಯ ನಿಗ್ರಹ-ಜೀವಿ ದಯೆ-ಕ್ಷಮೆ ಮೊದಲಾ ನಾಲ್ಕು
ವಿವೇಕ-ತಪ-ಧ್ಯಾನ-ಸತ್ಯ ಅಷ್ಟಗುಣ ಪುಷ್ಪ ದೇವಿ ಮುಡಿಗಿಡೆ ಸಾಕು ||
.
೯೨೦. ಸದೋದಿತಾ
ಬ್ರಹ್ಮ ಪ್ರಕಾಶವೆ ಅದ್ಭುತ, ಸೂರ್ಯನಿಗದೆ ಮೂಲವಾಗುತ
ಸ್ವಪ್ರಕಾಶ ಬ್ರಹ್ಮಲೋಕ, ಉದಯಾಸ್ತವೆಲ್ಲಿ ಸದಾ ಬೆಳಗುತ
ನಿತ್ಯನಿರಂತರ ಕಾಂತಿ ದೇವಿ, ಪುಣ್ಯಪುರುಷ ಮನ ಪ್ರಕಾಶಿತ
ಹಣತೆಯಂತೆ ಸೂರ್ಯ ಬ್ರಹ್ಮಕೆ, ಲಲಿತೆಯಾಗಿ ಸದೋದಿತಾ ||
.
೯೨೧. ಸದಾ-ತುಷ್ಟಾ
ನಿಜ ಭಕ್ತಿಗೆ ಸದಾ ಸಂತೃಪ್ತಳು, ದೇವಿ ಸರ್ವದಾ ಸಂತುಷ್ಟೆ
ಕರ್ಮಭಾಗಿಯಾಗದ ಪರಬ್ರಹ್ಮ ಲಕ್ಷಣ, ಸಾಕ್ಷೀಭೂತಳಷ್ಟೆ
ಕರ್ಮಮೂಲದ ಅಸಂತೃಪ್ತಿ, ಜೀವಿಲಕ್ಷಣ ಜನ್ಮಾಂತರ ಗಷ್ಟ
ನಿತ್ಯ ತೃಪ್ತಾ ಬ್ರಹ್ಮವನರಿತವ, ಲಲಿತೆಯಂತೆ ಸದಾ ತುಷ್ಟಾ ||
.
೯೨೨. ತರುಣಾದಿತ್ಯ-ಪಾಟಲಾ
ಜಗ ಸುಸ್ಥಿತಿಗಿಡೆ ದೇವಿ ಕೆಂಪು ಮೈಕಾಂತಿ ಪ್ರಧಾನ, ಶಿವನ ಬಿಳಿ ಗೌಣ
ಉದಯರವಿ ತೆಳುಕಾಂತಿ-ಪಾಟಲ, ಧ್ಯಾನರೂಪದಂತೆ ಕಾಂತಿಧಾರಣ
ಹೃದಯದಂತೆ ನಂಬಿಕೆ ಪ್ರತಿವರ್ಣಕೊಂದು ಗುಣ, ಭಕ್ತ ಮನವೆ ಸಕಲ
ಬಯಕೆಗನುಗುಣ ಮೈಕಾಂತಿ ಹೊಂದಿ ಲಲಿತೆ, ತರುಣಾದಿತ್ಯ-ಪಾಟಲಾ ||
.
ಪರಿಮಿತ ಬ್ರಹ್ಮ ಲಕ್ಷಣ, ಮಿಂಚ ಪ್ರಭೆ, ಹರಿಶಿನ ಬಟ್ಟೆ ಬಣ್ಣ
ಕುರಿ ಬಿಳಿಯುಣ್ಣೆ, ಭೃಂಗ ನೀಲಿ, ಶ್ವೇತ ಕಮಲ ಕಾಣೊ ಕಣ್ಣ
ಮುಕ್ತಿಯಾಚಕ ಬಿಳಿ ಮೈಕಾಂತಿ, ಧೈರ್ಯಕೆ ಕೆಂಪಲಿ ಧ್ಯಾನ
ಕಪ್ಪು ಯಮ, ಬಿಳಿಜ್ಞಾನವೆ ಸರಸ್ವತಿ ಹೃದಯವಿದ್ದಂತೆ ಮನ ||
.
೯೨೩. ದಕ್ಷಿಣಾ-ದಕ್ಷಿಣಾರಾಧ್ಯಾ
ದಕ್ಷಿಣಾ ಜ್ಞಾನಿ ಅದಕ್ಷಿಣಾ ಅಜ್ಞಾನಿ, ಇಬ್ಬರೂ ಲಲಿತೆಗೆ ಭಕ್ತರು
ಮುಕ್ತಿಬ್ರಹ್ಮದ ಹಾದಿ ಜ್ಞಾನಿ, ಐಹಿಕ ಫಲಕೆ ಅಜ್ಞಾನಿಯ ತೇರು
ಶ್ರೀ ವಿದ್ಯಾ ಬೋಧೆ ಗುರುದಕ್ಷಿಣೆ, ಸಂತುಷ್ಟೆ ಪರಮಗುರು ಭಾಧ್ಯ
ಚತುರ್ವಿಧ ಪುಣ್ಯ ಭಕ್ತರಿಂದ ಆರಾಧಿತೆ ದಕ್ಷಿಣಾ-ದಕ್ಷಿಣಾರಾಧ್ಯಾ ||
.
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು