೧. ಲಲಿತಾ ಸಹಸ್ರನಾಮದ ವಿವರಣೆ

Submitted by makara on Tue, 04/16/2013 - 23:22
ಚಿತ್ರ

ಲಲಿತಾ ಸಹಸ್ರನಾಮ

ಸಂಸ್ಕೃತದಲ್ಲಿ ಲಲಿತಾ ಎಂದರೆ ಆಟವಾಡು, ಕ್ರೀಡಿಸು, ಸೌಂದರ್ಯ, ಕಳೆ, ಲಾವಣ್ಯ ಎನ್ನುವ ಅರ್ಥಗಳಿವೆ. ಸಾಮಾನ್ಯ ಅರ್ಥದಲ್ಲಿ ಲಲಿತಾ ಎಂದರೆ ಮಹಿಳೆಯೆನ್ನು ಸೂಚಿಸುವುದಕ್ಕೆ ಈ ಶಬ್ದವು ಬಳಕೆಯಲ್ಲಿದೆ. ಆದ್ದರಿಂದ ಲಲಿತಾ ಎಂದರೆ ಲಕ್ಷಣವಾದ, ಲಾವಣ್ಯದಿಂದ ಕೂಡಿದ ಸುಂದರವಾದ ಆಟವಾಡುವ (ಹುಡುಗಾಟವಾಡುವ) ಸ್ತ್ರೀ ಎಂದು ವ್ಯಾಖ್ಯಾನಿಸಬಹುದು. ಸಹಸ್ರನಾಮ ಎನ್ನುವುದರಲ್ಲಿ ಎರಡು ಸಂಸ್ಕೃತ ಶಬ್ದಗಳಿವೆ; ಸಹಸ್ರ+ನಾಮ. ಸಹಸ್ರವೆಂದರೆ ಸಾವಿರ ಮತ್ತು ನಾಮ ಎಂದರೆ ನಾಮಾವಳಿ ಅಥವಾ ಹೆಸರುಗಳು; ಆದ್ದರಿಂದ ಸಹಸ್ರನಾಮವೆಂದರೆ ಸಾವಿರ ಹೆಸರುಗಳು. ಲಲಿತಾ ಸಹಸ್ರನಾಮವೆಂದರೆ ಕಳಾವತಿಯಾದ, ಲಕ್ಷಣವುಳ್ಳ ಮತ್ತು ಸುಂದರವಾದ ಮಹಿಳೆ ಶ್ರೀ ಲಲಿತೆಯ ಸಾವಿರ ಹೆಸರುಗಳು. ಆಕೆಯು ಶಿವನ ವಿಮರ್ಶಾ ರೂಪವಾಗಿದ್ದಾಳೆ ಮತ್ತು ಶಿವನ ರೂಪವನ್ನು ಪ್ರಕಾಶ ರೂಪವೆನ್ನುತ್ತಾರೆ.  ಇದರ ಬಗ್ಗೆ ಹೆಚ್ಚಿನ ವಿವರಗಳಿಗಾಗಿ www.manblunder.com/2009/02/finding-god-vii.html ಮತ್ತು www.manblunder.com/2009/02/finding-god-viii.html ಅನ್ನು ನೋಡಿ. ಲಲಿತಾಂಬಿಕೆ ಎನ್ನುವ ಹೆಸರಿನಿಂದ ಲಲಿತೆಯನ್ನು ಸಾಮಾನ್ಯವಾಗಿ ಕರೆಯುವ ರೂಢಿಯಿದೆ; ಆಕೆಯು ಈ ಸಮಸ್ತ ಬ್ರಹ್ಮಾಂಡದ ಚಟುವಟಿಕೆಗಳನ್ನು ನಿಯಂತ್ರಿಸುತ್ತಾಳೆ. ಆದ್ದರಿಂದ ಅವಳನ್ನು ’ಪ್ರಕಾಶ ವಿಮರ್ಶಾ ಮಹಾ ಮಾಯಾ ಸ್ವರೂಪಿಣಿ’ ಎಂದು ಕರೆಯಲಾಗಿದೆ. ಈ ನಾಮಾವಳಿಯ ಹೆಚ್ಚಿನ ವಿವರಗಳನ್ನು www.manblunder.com/2009/02/finding-god-viii.html ಈ ಲೇಖನದಲ್ಲಿ ವಿವರಿಸಲಾಗಿದೆ.  ಪುರಾತನ ಗ್ರಂಥದಲ್ಲಿ ಹೆಸರಿಸಲಾಗಿರುವ "ಲಲಿತಾ ಸಹಸ್ರನಾಮಮ್" ಎಂದು ಕರೆಯಲಾಗಿರುವ ಒಂದು ಸಾವಿರ ನಾಮಗಳು ನಮ್ಮ ಕಣ್ಣುಗಳಿಗೆ ಮತ್ತು ಕಿವಿಗಳಿಗೆ ಹಬ್ಬವನ್ನುಂಟು ಮಾಡುತ್ತವೆ. ನಾಮಗಳ ಸ್ವರಗಳು ಕಿವಿಗಳಿಗೆ ಇಂಪಾಗಿ ತಂಪನ್ನೆರೆಯುತ್ತವೆ. ಈ ನಾಮಾವಳಿಗಳ ಮೂಲಕ ನಾವು ಶ್ರೀ ಲಲಿತೆಯ ರೂಪವನ್ನು ಆವಿಷ್ಕಾರಗೊಳಿಸಲು ಸಾಧ್ಯವಾದರೆ ಅದು ನಮ್ಮ ಮೂರನೆಯ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.

ಈಗ ದೇವಿಯ ಕುರಿತಾಗಿ ಹಾಗೂ ಲಲಿತಾ ಸಹಸ್ರನಾಮವನ್ನು ಕುರಿತಾಗಿ ಇನ್ನಷ್ಟು ತಿಳಿದುಕೊಳ್ಳೋಣ. ಲಲಿತಾ ಸಹಸ್ರನಾಮವು ಪುರಾತನವಾದದ್ದು ಮತ್ತದು ಎಲ್ಲರಿಗೂ ಸುಪರಿಚಿತರಾದ ಮಹರ್ಷಿ ವ್ಯಾಸರಿಂದ ರಚಿತವಾದ ೧೮ ಪ್ರಸಿದ್ಧ ಪುರಾಣಗಳಲ್ಲಿ ಒಂದಾದ ಬ್ರಹ್ಮಾಂಡಪುರಾಣದಲ್ಲಿ ಹೇಳಲ್ಪಟ್ಟಿದೆ. ಈ ಸಹಸ್ರನಾಮವನ್ನು ಮಹಾವಿಷ್ಣುವಿನ ಅವತಾರವಾದ ಹಯಗ್ರೀವನು ಮೊದಲು ಅಗಸ್ತ್ಯ ಮಹರ್ಷಿಗೆ ಉಪದೇಶಿಸಿದನು. ಈ ಸಹಸ್ರನಾಮವು ಎಂಟು ವಾಕ್ ದೇವಿಗಳಿಂದ (ವಶಿನ್ಯಾದಿ ವಾಕ್ ದೇವಿಗಳು) ಶ್ರೀ ಲಲಿತೆಯ ಆದೇಶದ ಮೇರೆಗೆ ಅವಳ ಉಪಸ್ಥಿತಿಯಲ್ಲಿಯೇ ರಚಿಸಲ್ಪಟ್ಟಿತು. ಸಾಮಾನ್ಯವಾಗಿ ಇತರೇ ಸಹಸ್ರನಾಮಗಳಲ್ಲಿ, ೧೦೦೦ ಅಥವಾ ೧೦೦೮ ನಾಮಗಳ ಸಂಖ್ಯೆಯನ್ನು ಪೂರ್ಣಗೊಳಿಸಲು ಕೆಲವೊಂದು ನಾಮಗಳು  ಹಲವಾರು ಬಾರಿ ಪುನರಾವರ್ತನೆಯಾಗಿರುತ್ತವೆ, ಆದರೆ ಲಲಿತಾ ಸಹಸ್ರನಾಮದಲ್ಲಿ ಯಾವುದೇ ನಾಮವು ಒಂದು ಬಾರಿಗಿಂತ ಹೆಚ್ಚಾಗಿ ಪ್ರಯೋಗಿಸಲಾಗಿಲ್ಲ. ದೇವಿಯು ಅಗ್ನಿಯಿಂದ ಉತ್ಪನ್ನಳಾದವಳು, ಆಕೆಯು ‘ಶ್ರೀ ಚಕ್ರ’ದ ಮಧ್ಯದಲ್ಲಿ ನಿವಸಿಸುತ್ತಾಳೆ ಮತ್ತು ಆ ‘ಶ್ರೀ ಚಕ್ರ’ವು ‘ಶ್ರೀ ಪುರ’ಮ್ ಎನ್ನುವಲ್ಲಿದೆ. ಆಕೆಯು ಭಗವಾನ್ ಶಿವನೊಂದಿಗೆ ಇರುತ್ತಾಳೆ; ಶಿವನ ಹಲವಾರು ಅವತಾರಗಳಲ್ಲಿ ಅವನ ಅತ್ಯುನ್ನತ ರೂಪವು ಮಹಾಕಾಮೇಶ್ವರ ರೂಪವಾಗಿದೆ. ಲಲಿತಾಂಬಿಕೆಯ ಅತ್ಯುನ್ನತ ರೂಪವು ಮಹಾ ಕಾಮೇಶ್ವರಿಯಾಗಿದ್ದು ಆಕೆಯು ಮಹಾ ಕಾಮೇಶ್ವರನ ಎಡ ತೊಡೆಯ ಮೇಲೆ ಕುಳಿತಿದ್ದು, ಶ್ರೀ ಚಕ್ರದ ಕೇಂದ್ರ ಸ್ಥಾನವಾದ ಬಿಂದುವಿನಲ್ಲಿ ಆಸೀನಳಾಗಿರುತ್ತಾಳೆ. ಸಹಸ್ರನಾಮವು ದೇವಿಯನ್ನು ಶ್ರೀ ಮಾತಾ - ಸರ್ವರ ಮಾತೆ ಎಂದು ಸಂಬೋಧಿಸುವುದರಿಂದ ಮೊದಲಾಗುತ್ತದೆ. ಇದು ಆಕೆಯು ಸಮಸ್ತ ಬ್ರಹ್ಮಾಂಡವನ್ನು ಸೃಷ್ಟಿಸಿದಳು ಎನ್ನುವುದನ್ನು ಸಂಕೇತಿಸುತ್ತದೆ. ೯೯೯ನೇ ನಾಮಾವಳಿಯು ’ಶಿವಶಿಕ್ತಿ-ಐಕ್ಯ-ರೂಪಿಣಿ’; ಎಂದರೆ ಅವಳು ಶಿವ ಮತ್ತು ಶಕ್ತಿಯರ ಸಂಯುಕ್ತ ರೂಪ. ೧೦೦೦ನೇ ನಾಮಾವಳಿಯು ಅವಳನ್ನು ಲಲಿತಾಂಬಿಕೆ ಎಂದು ಕರೆಯುತ್ತದೆ; ಇದರ ಅರ್ಥವನ್ನೇ ಮೇಲೆ ಚರ್ಚಿಸಲಾಗಿದೆ. ಅವಳ ಸಂಯುಕ್ತ ರೂಪವಾದ ಶಿವ ಮತ್ತು ಶಕ್ತಿ ಎನ್ನುವುದನ್ನು ಪರಿಪೂರ್ಣ ರೂಪವೆಂದು ಹೇಳಿದರೂ ಕೂಡಾ ಕಡೆಯ ನಾಮವಾಗಿ ಲಲಿತಾಂಬಿಕಾ ಎನ್ನುವುದು ’ಶಿವಶಿಕ್ತಿ-ಐಕ್ಯ-ರೂಪಿಣಿ’ ನಾಮದ ನಂತರ ಬರುವುದರಿಂದ; ಲಲಿತಾಂಬಿಕೆ ಎನ್ನುವುದು ಪರಿಪೂರ್ಣ/ಅಂತಿಮ ರೂಪವೆನ್ನುವುದರ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಆದ್ದರಿಂದ ಅವಳನ್ನು ಪಂಚಬ್ರಹ್ಮ ಸ್ವರೂಪಿಣೀ ಎಂದೂ ಕರೆದಿದ್ದಾರೆ. ಬಹಳಷ್ಟು ನಾಮಗಳು ಅತ್ಯಂತ ರಹಸ್ಯ ಹಾಗೂ ನಿಗೂಢವಾದ ಅರ್ಥಗಳನ್ನು ಒಳಗೊಂಡಿವೆ. ಈ ಗೂಡಾರ್ಥವನ್ನು ಎಲ್ಲರಿಗೂ ಬಯಲುಮಾಡುವುದಿಲ್ಲ, ಏಕೆಂದರೆ ಅವುಗಳ ಅರ್ಥವನ್ನು ಗುರುವಿನ ಮೂಲಕವೇ ತಿಳಿದುಕೊಳ್ಳಬೇಕು. ಆತ್ಮಸಾಕ್ಷಾತ್ಕಾರ, ಕುಂಡಲಿನಿ, ಧ್ಯಾನ ಮೊದಲಾದವುಗಳ ಕುರಿತಾಗಿ ಸಹಸ್ರನಾಮದಲ್ಲಿ ವಿಸ್ತಾರವಾಗಿ ವಿವರಿಸಲಾಗಿದೆ. ದೇವಿಯನ್ನು ಬಹಳ ಅಂದವಾಗಿ ವರ್ಣಿಸಿದ್ದಾರೆ; ಆಕೆಯ ಪಾದಗಳು, ಆಕೆಯ ನಡಿಗೆ, ಆಕೆಯ ಕಣ್ಣುಗಳು, ಆಕೆಯ ನೊಸಲು (ಹಣೆ), ಆಕೆಯ ಗುಣ ಮತ್ತು ಸ್ವಭಾವಗಳು. ಪ್ರತಿಯೊಂದು ನಾಮವನ್ನೂ ಆಸ್ವಾದಿಸಬೇಕು. ಸಹಸ್ರನಾಮದ ಕೊನೆಯಲ್ಲಿ, ದೇವಿಯ ಸಂಪೂರ್ಣರೂಪವನ್ನು ಕಲ್ಪಿಸಿಕೊಂಡು ದೀರ್ಘ ಧ್ಯಾನದ ಮೂಲಕ ಮೂರನೆಯ ಕಣ್ಣಿನಿಂದ ಆಕೆಯನ್ನು ಅರಿಯಬಹುದು. ಮೂರನೆಯ ಕಣ್ಣಿನ ಬಗೆಗಿನ ಹೆಚ್ಚಿನ ವಿವರಗಳಿಗಾಗಿ www.manblunder.com/2009/02/yhird-eye.html ಓದಿ. ದೇವಿಯ ಕುರಿತಾಗಿ ಹೆಚ್ಚಿನ ವಿವರಗಳನ್ನು ಮುಂದಿನ ಕಂತುಗಳಲ್ಲಿ ನೋಡೋಣ. 

ಚಿತ್ರ ಕೃಪೆ: Manblunder.com

ಈ ಲೇಖನವು Lalitha sahasranama Meaning ಎನ್ನುವ ಮೂಲ ಇಂಗ್ಲೀಷ್ ಲೇಖನದ ಅನುವಾದದ ಭಾಗವಾಗಿದೆ. ಮೂಲ ಲೇಖಕರು: ಶ್ರೀಯುತ ಡಾ! ರವಿ. ಮೂಲ ಲೇಖನದ ಕೊಂಡಿಗಾಗಿ ಇಲ್ಲಿ ಚಿಟುಕಿಸಿ: http://www.manblunder.com/2009/04/lalitha-sahasranamam.html

 

Comments

ಆತ್ಮೀಯ ಸಂಪದಿಗರೆ,
ಹಲವಾರು ತಿಂಗಳುಗಳಿಂದ ನಾನು ಸಂಪದದಲ್ಲಿ ಸಕ್ರಿಯವಾಗಿರ ಬೇಕೆಂದು ಕೊಂಡರೂ ಸಹ ಅನಿವಾರ್ಯ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಅವುಗಳಲ್ಲಿ ಒಂದು ನನ್ನನ್ನು ನಾನು ಲಲಿತಾ ಸಹಸ್ರನಾಮದ ವ್ಯಾಖ್ಯಾನದ ಅನುವಾದದಲ್ಲಿ ತೊಡಗಿಸಿಕೊಂಡದ್ದು. ಶ್ರೀ ಲಲಿತಾಂಬಿಕೆಯ ಕೃಪೆಯಿಂದ ಅದರ ಶೇಖಡಾ ೫೦ಕ್ಕಿಂತಲೂ ಸ್ವಲ್ಪ ಅಧಿಕ
ಭಾಗದ ಅನುವಾದವನ್ನು ಕೈಗೊಳ್ಳಲು ಸಾಧ್ಯವಾಗಿದೆ. ಇದರ ಮೂಲ ಲೇಖಕರು ಮದ್ರಾಸಿನ ಶ್ರೀಯುತ ಡಾ!ರವಿಯವರು. ಇವರು ಬಹುತೇಕ ಎಲ್ಲಾ ಪುರಾಣ,ವೇದ ಮತ್ತು ಉಪನಿಷತ್ತುಗಳನ್ನು ಓದಿಕೊಂಡಿರುವುದಷ್ಟೇ ಅಲ್ಲದೇ ಅವುಗಳ ವ್ಯಾಖ್ಯಾನವನ್ನು ತಮ್ಮದೇ ಆದ ವಿಶಿಷ್ಠ ಶೈಲಿಯಲ್ಲಿ ಮಾಡುತ್ತಾರೆ. ಅವರ ಸ್ವಂತ ಬ್ಲಾಗ್ Manblunder.com ಆಗಿದೆ. ಅದರಲ್ಲಿ ಅವರು ಶಿವಸೂತ್ರಗಳು, ಲಲಿತಾ ಸಹಸ್ರನಾಮ, ವಿಷ್ಣು ಸಹಸ್ರನಾಮ, ಲಲಿತಾ ತ್ರಿಶತಿ, ಸೌಂದರ್ಯ ಲಹರಿ, ಗರುಡ ಪುರಾಣ ಹೀಗೆ ಅನೇಕಾನೇಕ ವಿಷಯಗಳ ಕುರಿತು ವ್ಯಾಖ್ಯಾನವನ್ನು ಬರೆಯುತ್ತಿದ್ದಾರೆ. ಅವರ ಇತ್ತೀಚೆಗೆ ಬ್ರಹ್ಮಸೂತ್ರದ ವ್ಯಾಖ್ಯಾನವನ್ನೂ ಪ್ರಾರಂಭಿಸಿದ್ದಾರೆ. ಆಸಕ್ತರು Manblunder.com ಅಂತರ್ಜಾಲ ತಾಣವನ್ನು ನೋಡಬಹುದು. ನಾನು ಲಲಿತಾ ಸಹಸ್ರನಾಮದ ವ್ಯಾಖ್ಯಾನದ ಅನುವಾದವನ್ನು ಪ್ರಾರಂಭಿಸಿ ಸುಮಾರು ಐದರಿಂದ ಆರು ತಿಂಗಳುಗಾಳಾಯಿತು, ಅದನ್ನು ಸಂಪದದಲ್ಲಿ ಪ್ರಕಟಿಸಲು ಇತ್ತೀಚೆಗೆ ಶ್ರೀಯುತ ಡಾ! ರವಿಯವರನ್ನು ಅಪ್ಪಣೆ ಪಡೆಯಲು ಸಂಪರ್ಕಿಸಿದಾಗ ಅವರು ಕೂಡಲೇ ಅದಕ್ಕೆ ಒಪ್ಪಿಗೆಯಿತ್ತಿದ್ದಾರೆ ಮತ್ತು ಕಾಲಾನುಕಾಲಕ್ಕೆ ನನಗೆ ಅನುಮಾನವಿರುವ ವಿಷಯಗಳನ್ನು ಸ್ಪಷ್ಟಪಡಿಸುತ್ತಿದ್ದಾರೆ. ಅವರು ಕೇವಲ ವಯೋವೃದ್ಧರಷ್ಟೇ ಅಲ್ಲ, ಜ್ಞಾನವೃದ್ಧರು ಮತ್ತು ಬಹುಶೃತರಲ್ಲದೇ ನಿಜವಾದ ಆಧ್ಯಾತ್ಮಿಕ ವ್ಯಕ್ತಿ ಹಾಗೂ ಸಹೃದಯರು. "ಹೂವಿನ ಜೊತೆಗೆ ನಾರು ಸ್ವರ್ಗಕ್ಕೇರುವಂತೆ" ಅವರ ವ್ಯಾಖ್ಯಾನಗಳ ಅನುವಾದದಿಂದ ನನಗೂ ಅನೇಕ ಮಹತ್ತರವಾದ ವಿಷಯಗಳ ತಿಳುವಳಿಕೆಯುಂಟಾಗುತ್ತಿದೆ; ಅದಕ್ಕಾಗಿ ನಾನು ಅವರಿಗೆ ಚಿರಋಣಿ. ಸಕಲರಿಗೂ ಆ ಜಗನ್ಮಾತೆ ದೇವಿ ಲಲಿತಾಂಬಿಕೆಯು ಸನ್ಮಂಗಳವನ್ನುಂಟು ಮಾಡಲಿ.
ನಿಮ್ಮ ಆತ್ಮೀಯ,
ಶ್ರೀಧರ್ ಬಂಡ್ರಿ

ಜೀ ಹೇಗಿದ್ದೀರಾ? ಸೌಖ್ಯವೇ? ಕುಶಲವೇ? ಕ್ಷೇಮವೇ ?

ಕೆಲ ತಿಂಗಳುಗಳ ಹಿಂದೆ ಕನ್ನಡದ ಮಾಸಿಕ ಒಂದರಲ್ಲಿ ಲಲಿತ ಸಹಸ್ರ ನಾಮದ ಬಗ್ಗೆ ಒಂದು ಬರಹವಿತ್ತು. ಆ ಬಗ್ಗೆ ಹೆಚ್ಚಿನ ವಿವರಣೆ ಇರಲಿಲ್ಲ . ಈಗ ನೀವುಗಳು ಆ ಬಗ್ಗೆ ವಿವರವಾದ ಬರಹ ಬರೆದಿರುವಿರಿ. ಇಷ್ಟು ದಿನಗಳು ಸಂಪದದಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಿಸುತ್ತಿದ್ದುದು ನೋಡಿ ಬಹುಶ ಕೆಲಸದ ಒತ್ತಡ ಎಂದುಕೊಂಡೆ. ಅದು ನಿಜ ಈ ಮಹಾ ಅಕ್ಷರ ಯಜ್ಞದಲ್ಲಿ ನೀವ್ ಮಗ್ನರಾಗಿದ್ದಿರಿ .
ಈಗ ಆ ಬಗ್ಗೆ ಸಂಪೂರ್ಣ ವಿವರಣೆ ಅದೂ ನಮ್ಮ ಕನ್ನಡದಲ್ಲಿ ಎಲ್ಲರಿಗೂ ಅರ್ಥವಾಗುವ ಹಾಗೆ ಬರೆಯುತ್ತಿರುವುದು ತಿಳಿದು ಖುಷಿ ಆಯ್ತು .

ಈ ತರಹದ ಕಾರ್ಯ ಎಲ್ಲರಿಗೂ ಮಾಡಲು ಸಾಧ್ಯವಿಲ್ಲ ಅದ್ಕೆ ಅಪಾರ ಶ್ರದ್ಧೆ -ತಾಳ್ಮೆ -ಏಕಾಗ್ರತೆ - ಅಧ್ಯಯನ - ಸಂಪೂರ್ಣ ತೊಡಗಿಸಿಕೊಳ್ಳುವಿಕೆ ಬೇಕು . ಮತ್ತು ಅದು ನಿಮ್ಮಲ್ಲಿದೆ.

ನಿಮ್ಮೀ ಕಾರ್ಯದಲ್ಲಿ ಯಶಸ್ಸು ಸಿಗಲಿ ನಿಮ್ಮಿಂದ ಇನ್ನಸ್ಟು ಅಧ್ಯಾತ್ಮಿಕ ಅಧ್ಯಯನ ಬರಹಗಳು ಸಂಪದ ಸೇರಿ ಸಂಪದ ಸಿರಿ ಹೆಚ್ಚಿಸಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುವೆ ..

ಶುಭವಾಗಲಿ..

\\।

ಸಪ್ತಗಿರಿಗಳೇ,
ನಿಮ್ಮ ತುಂಬು ಹೃದಯದ ಹಾರೈಕೆಗಳಿಗೆ ಧನ್ಯವಾದಗಳು, ನಾನು ದೇವಿ ಲಲಿತಾಂಬಿಕೆಯ ಕೃಪೆಯಿಂದ ಚೆನ್ನಾಗಿದ್ದೇನೆ. ನಿಜ ನೀವೆಂದಂತೆ ಈ ಅನುವಾದದ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದರಿಂದ ಸಂಪದದ ಇತರೇ ಲೇಖನಗಳನ್ನು ಓದಿ ಪ್ರತಿಕ್ರಿಯೆ ನೀಡುವುದಕ್ಕೆ ಆಗುತ್ತಾ ಇಲ್ಲ. ಆದರೂ ಮಧ್ಯೆ ಮಧ್ಯೆ ಕೆಲವೊಂದು ಲೇಖನಗಳನ್ನು ಓದಿ ಪ್ರತಿಕ್ರಿಯಿಸುವ ಪ್ರಯತ್ನ ಮಾಡಿದ್ದೇನೆ. ನಿಮಗೆ ಈ ಸರಣಿ ಮೆಚ್ಚುಗೆಯಾದರೆ ಅದಕ್ಕಿಂತ ಸೌಭಾಗ್ಯ ಮತ್ತೇನಿದೆ, ನಾನು ಇಷ್ಟು ಶ್ರಮ ಪಟ್ಟು ಅನುವಾದ ಕೈಗೊಂಡದ್ದೂ ಸಾರ್ಥಕವೆನಿಸುತ್ತಿದೆ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
(ಈ ಪ್ರತಿಕ್ರಿಯೆಯನ್ನು ಈಗಷ್ಟೇ ಗಮನಿಸಿದೆ ಹಾಗಾಗಿ ಮರು ಪ್ರತಿಕ್ರಿಯೆ ನೀಡಲು ತಡವಾಯಿತು, ಅದಕ್ಕೆ ಕ್ಷಮೆಯಿರಲಿ)