೨೦೦. ಲಲಿತಾ ಸಹಸ್ರನಾಮ ೯೪೬ರಿಂದ ೯೪೮ನೇ ನಾಮಗಳ ವಿವರಣೆ

೨೦೦. ಲಲಿತಾ ಸಹಸ್ರನಾಮ ೯೪೬ರಿಂದ ೯೪೮ನೇ ನಾಮಗಳ ವಿವರಣೆ

                                                                ಲಲಿತಾ ಸಹಸ್ರನಾಮ ೯೪೬ - ೯೪೮

Pañca-yajña-priyā पञ्च-यज्ञ-प्रिया (946)

೯೪೬. ಪಂಚ-ಯಜ್ಞ-ಪ್ರಿಯಾ

             ಪಂಚ ಎಂದರೆ ಐದು ಮತ್ತು ಯಜ್ಞ ಎಂದರೆ ಭಕ್ತಿಯಿಂದ ಕೂಡಿದ ಪೂಜಾ ವಿಧಾನ, ಇದು ವೈದಿಕ ಕಾಲದಲ್ಲಿ ಪ್ರಚಲಿತವಿದ್ದ ಅರ್ಪಣೆ, ಆಹುತಿಗಳನ್ನೊಳಗೊಂಡ ಯಾಗವಾಗಿದೆ. ಯಜ್ಞದ ನಿಜವಾದ ಅರ್ಥ ತ್ಯಾಗ ಅಥವಾ ಸಮರ್ಪಣೆಯ ಮೂರ್ತರೂಪ. 

             ಎರಡು ವಿಧವಾದ ಯಜ್ಞಗಳಿದ್ದು, ಅದರಲ್ಲೊಂದು ವಿಧವು ಆರಂಭದಿಂದಲೂ ಕೇಳಲ್ಪಡುವುದರ ಮೂಲಕ ಬಂದ ವೇದಗಳಲ್ಲಿ (ಶ್ರುತಿಗಳಲ್ಲಿ) ಉಲ್ಲೇಖಿಸಲ್ಪಟ್ಟಿದೆ. ಅದು ಪವಿತ್ರ ಜ್ಞಾನವಾಗಿದ್ದು ಅದು ಮೌಖಿಕವಾಗಿ ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದಿದೆ. ಋಗ್ವೇದವು ಬಹಳಷ್ಟು ಯಜ್ಞಾಚರಣೆಗಳ ಕುರಿತು ಉಲ್ಲೇಖಿಸಿದರೆ, ಯಜುರ್ವೇದ ಸಂಹಿತೆಯು ಯಜ್ಞ-ಯಾಗಾದಿಗಳ ಸಮಯದಲ್ಲಿ ಪಠಿಸಬೇಕಾದ ಮಂತ್ರಗಳನ್ನು ಮತ್ತು ಆ ಮಂತ್ರಗಳನ್ನು ವಿವರಿಸುವ ಬ್ರಾಹ್ಮಣಗಳೆಂದು ಕರೆಯಲ್ಪಡುವ ಗದ್ಯ ಪಂಕ್ತಿಗಳನ್ನು ಒಳಗೊಂಡಿದೆ. ಬ್ರಾಹ್ಮಣದ ಪಂಕ್ತಿಗಳು ವೇದಾಚರಣೆಗಳಲ್ಲಿ ಅನುಸರಿಸಬೇಕಾದ ಮತ್ತು ಸಂರಕ್ಷಿಸಬೇಕಾದ ಸೂಕ್ಷ್ಮವಾದ ವಿಷಯಗಳ ಕುರಿತಾಗಿ ಮಾರ್ಗದರ್ಶನವನ್ನು ಕೊಡುತ್ತವೆ. ಮತ್ತೊಂದು ವಿಧವಾದ ಯಜ್ಞವು ಸ್ಮೃತಿಗಳಲ್ಲಿ ಉಲ್ಲೇಖಿಸಲ್ಪಟ್ಟಿದ್ದು, ಇದರಲ್ಲಿ ಪವಿತ್ರವಾದ ಪರಂಪರೆ ಅಥವಾ ಮಾನವ ಗುರುಗಳು ಶ್ರುತಿ ಅಥವಾ ವೇದಗಳಿಗೆ ಪ್ರತಿಯಾಗಿ ನೆನಪಿನಲ್ಲಿಟ್ಟುಕೊಂಡ ಆಚರಣೆಗಳ ವಿಷಯಗಳಿರುತ್ತವೆ. ಸ್ಮೃತಿಗಳು ಆರು ವೇದಾಂಗಗಳು, ಶ್ರೌತ ಮತ್ತು ಗೃಹ್ಯ ಸೂತ್ರಗಳು, ಮನು ಧರ್ಮ ಸಂಹಿತೆ ಮೊದಲಾದವುಗಳನ್ನು ಒಳಗೊಂಡಿವೆ.

             ವೇದಗಳಲ್ಲಿ ಉಲ್ಲೇಖಿಸಲ್ಪಟ್ಟ ಪಂಚಯಜ್ಞಗಳೆಂದರೆ ಅಗ್ನಿಹೋತ್ರ, ದರ್ಶಪೂರ್ಣಮಾಸ, ಚಾತುರ್ಮಾಸ್ಯ, ಪಶುಬಂಧ ಮತ್ತು ಸೋಮ. ಸೋಮಯಾಗವು ಉಳಿದ ನಾಲ್ಕೂ ಯಜ್ಞಗಳನ್ನೊಳಗೊಂಡಿದ್ದು ಅದು ಪಂಚಯಜ್ಞಗಳಲ್ಲೇ ಶ್ರೇಷ್ಠವೆನಿಸಿದೆ.

             ಸ್ಮೃತಿಗಳಲ್ಲಿ ಉಲ್ಲೇಖಿಸಲ್ಪಟ್ಟಿರುವ ಐದು ವಿಧವಾದ ಯಜ್ಞಗಳನ್ನು ಪಂಚ ಮಹಾ ಯಜ್ಞಗಳೆಂದು ಕರೆಯುತ್ತಾರೆ. ಅವುಗಳೆಂದರೆ, ದೇವ ಯಜ್ಞ (ದೇವತೆಗಳನ್ನು ತೃಪ್ತಿ ಪಡಿಸುವುದು), ಬ್ರಹ್ಮ ಯಜ್ಞ (ವೇದಗಳನ್ನು ಕುರಿತು ತಿಳಿದುಕೊಳ್ಳುವುದು), ಪಿತೃ ಯಜ್ಞ (ಪೂರ್ವಿಕರನ್ನು ತೃಪ್ತಿ ಪಡಿಸುವುದು), ಭೂತಯಜ್ಞ (ಪ್ರಾಣಿ ಪಕ್ಷಿ ಮೊದಲಾದವುಗಳನ್ನು ತೃಪ್ತಿ ಪಡಿಸುವುದು), ಮತ್ತು ನರ ಅಥವಾ ಅತಿಥಿ ಯಜ್ಞ. ದೇವ ಯಜ್ಞ ಎಂದರೆ ಒಬ್ಬನ ಕುಲದೇವತೆಯನ್ನು ಅಥವಾ ಪರಂಪರಾನುಗತವಾಗಿ ಬಂದಿರುವ ದೇವರನ್ನು ಪೂಜಿಸುವುದು. ವೇದಗಳ ಅಧ್ಯಯನವು ಮುಂದಿನದು. ನಮ್ಮ ಪೂರ್ವಿಕರನ್ನು ನೆನೆಯುವುದು ಮೂರನೆಯದು. ಇದನ್ನು ಪೂರ್ವಿಕರಿಗೆ ವಾರ್ಷಿಕ ತಿಥಿಗಳನ್ನು ಆಚರಿಸುವುದರ ಮೂಲಕ ಕೈಗೊಳ್ಳಲಾಗುತ್ತದೆ. ಇದರ ಹಿಂದಿರುವ ಉದ್ದೇಶ ಕೇವಲ ಪೂರ್ವಿಕರನ್ನು ಸ್ಮರಿಸುವುದಷ್ಟೇ ಅಲ್ಲ ಅವರು ಹಾಕಿಕೊಟ್ಟ ಉನ್ನತ ಪಂಕ್ತಿ ಮತ್ತು ಕುಟುಂಬದ ಸತ್ಸಂಪ್ರದಾಯಗಳನ್ನು ಅನುಸರಿಸುವುದನ್ನು ನೆನಪು ಮಾಡಿಕೊಳ್ಳುವುದಾಗಿದೆ. ಭೂತಯಜ್ಞ ಎಂದರೆ ಇತರೇ ಜೀವಿಗಳೊಂದಿಗೆ ಹಂಚಿಕೊಳ್ಳುವುದು. ಹಸಿದ ಪ್ರಾಣಿಗಳಿಗೆ ಆಹಾರವನ್ನು ನೀಡುವುದು ವಿಶ್ವಪ್ರೇಮವನ್ನು ಹೆಚ್ಚಿಸುತ್ತದೆ. ಕಡೆಯದನ್ನು ಮಾನುಷ್ಯ ಯಜ್ಞವೆಂದೂ ಕರೆಯಲಾಗುತ್ತದೆ; ಇದು ಸಹಮಾನವರಿಗೆ ಸಾಂಪ್ರದಾಯಿಕ ಆದರಾತಿಥ್ಯಗಳನ್ನು ನೀಡುವುದನ್ನು ಒಳಗೊಂಡಿದೆ.

            ಪಾಂಚರಾತ್ರ ಆಗಮಗಳು ವಿಷ್ಣುವನ್ನು ಪೂಜಿಸಲು ಐದು ವಿಧವಾದ ಆಚರಣೆಗಳನ್ನು ವಿಧಿಸುತ್ತವೆ. ಅಭಿಗಮನ (ವಿಷ್ಣುವಿನೆಡೆಗೆ ಸಾಗುವುದು), ಉಪಾದಾನ (ಪೂಜಾ ಸಾಮಗ್ರಿಗಳನ್ನು ಸಂಗ್ರಹಿಸುವುದು), ಇಜ್ಯ (ಪೂಜೆ ಅಥವಾ ಅರ್ಚನೆ), ಗದ್ಯರೂಪದ ಸ್ತುತಿ ಮತ್ತು ಸ್ವಾಧ್ಯಾಯ (ವೇದೋಪನಿಷತ್ತು ಮತ್ತು ಶಾಸ್ತ್ರಗಳು, ಸ್ತೋತ್ರ ಮಂತ್ರ ಮೊದಲಾದುವುಗಳನ್ನು ಅಭ್ಯಸಿಸುವುದು). ವಿಷ್ಣುವನ್ನು ಹೆಚ್ಚಿನ ವೇಳೆಯಲ್ಲಿ ಗದ್ಯದ ರೂಪದಲ್ಲಿ ಸ್ತುತಿಸಲಾಗುತ್ತದೆ (ಗದ್ಯವು ಛಂದೋಬದ್ಧವಾಗಿಲ್ಲದಿದ್ದರೂ ಸಹ ಸಮಂಜಸವೆನಿಸುವ ವಿಧದಲ್ಲಿ ರಚಿಸಲ್ಪಟ್ಟಿರುತ್ತವೆ ಮತ್ತು ಅವು ಬಹಳ ದೀರ್ಘವಾದ ರಚನೆಗಳಾಗಿರುತ್ತವೆ).

            ಛಾಂದೋಗ್ಯ ಉಪನಿಷತ್ತು (೫.೪ರಿಂದ ೫.೯ರವರೆಗೆ) ಮಾನವನ ಜನ್ಮಕ್ಕೆ ಕಾರಣವಾದ ಐದು ವಿಧವಾದ ಸಮಿತ್ತುಗಳ ಕುರಿತಾಗಿ ಹೇಳುತ್ತದೆ. ಇವುಗಳನ್ನು ದೇವತೆಗಳು ಸಮಿತ್ತುಗಳಾಗಿ ಅರ್ಪಿಸುತ್ತಾರೆ. ಮೊದಲು ದೇವತೆಗಳು ನೀರನ್ನು ಆಹುತಿಯಾಗಿ ಅರ್ಪಿಸಿದರು ಅದರಿಂದ ಸೋಮನು (ಚಂದ್ರನು) ಕಾಣಿಸಿಕೊಂಡನು. ಅವರು ಸೋಮನನ್ನು ಎರಡನೇ ಆಹುತಿಯಾಗಿ ಅರ್ಪಿಸಿದರು ಆಗ ಮಳೆಯು ಕಾಣಿಸಿಕೊಂಡಿತು. ಆಗ ಅವರು ನೀರನ್ನು ಮೂರನೆಯ ಆಹುತಿಯಾಗಿ ಸಮರ್ಪಿಸಿದರು ಆಗ ಆಹಾರವು ಕಾಣಿಸಿಕೊಂಡಿತು. ಅವರು ಆಹಾರವನ್ನು ನಾಲ್ಕನೇ ಆಹುತಿಯಾಗಿ ಸಮರ್ಪಿಸಿದಾಗ ಉತ್ಪತ್ತಿಗೆ ಕಾರಣವಾದ ರಸಗಳು ಕಾಣಿಸಿಕೊಂಡವು. ಅವರು ಉತ್ಪತ್ತಿಗೆ ಕಾರಣವಾದ ರಸಗಳನ್ನು ಅರ್ಪಿಸಿದರು ಆಗ ಭ್ರೂಣವು ಕಾಣಿಸಿಕೊಂಡಿತು.

           ದೇವಿಯು ಮೇಲೆ ಚರ್ಚಿಸಲ್ಪಟ್ಟ ಐದು ವಿಧವಾದ ಯಜ್ಞಗಳನ್ನು ಇಷ್ಟ ಪಡುತ್ತಾಳೆ.

Pañca-preta-mañcādhi-śāyinī पञ्च-प्रेत-मञ्चाधि-शायिनी (947)

೯೪೭. ಪಂಚ-ಪ್ರೇತ-ಮಂಚಾಧಿ-ಶಾಯಿನೀ

            ಪ್ರೇತ ಎಂದರೆ ಕಳೇಬರ. ಯಾವಾಗ ಪ್ರಾಣವು ದೇಹವನ್ನು ತ್ಯಜಿಸುತ್ತದೆಯೋ, ಆಗ ಉಳಿಯುವ ಭೌತಿಕ ಶರೀರವು ಪ್ರೇತ ಅಥವಾ ಕಳೇಬರವೆಂದು ಕರೆಯಲ್ಪಡುತ್ತದೆ ಮತ್ತು ಆತ್ಮವು ತಕ್ಷಣದಿಂದಲೇ ಪ್ರೇತಾಧಿಪತಿಯಾದ ಯಮನ ನಿಯಂತ್ರಣಕ್ಕೆ ಒಳಪಡುತ್ತದೆ.

            ಈ ನಾಮದ ಸೂಕ್ಷ್ಮ ವಿಚಾರಗಳನ್ನು ಸೌಂದರ್ಯ ಲಹರಿಯು (ಸ್ತೋತ್ರ ೯೨) ಚರ್ಚಿಸುತ್ತದೆ. ಪಂಚ-ಪ್ರೇತ ಎಂದರೆ ಬ್ರಹ್ಮ, ವಿಷ್ಣು, ರುದ್ರ, ಮಹಾದೇವ ಮತ್ತು ಸದಾಶಿವ. ಇಲ್ಲಿ ಮನಸ್ಸಿನ ಕಲ್ಪನೆಗೂ ಮತ್ತು ಇಂದ್ರಿಯಗಳ ಗ್ರಹಿಕೆಗೂ ಇರುವ ನೇರವಾದ ಸಂಭಂದವನ್ನು ಹೇಳಲಾಗುತ್ತಿದೆ.  ಬ್ರಹ್ಮ, ವಿಷ್ಣು, ರುದ್ರ ಮತ್ತು ಮಹದೇವರುಗಳನ್ನು ಕಾಲುಗಳಾಗುಳ್ಳ ಮತ್ತು ಸದಾಶಿವನು ಆಸನವಾಗಿರುವ ಸಿಂಹಾಸನದ ಮೇಲೆ ದೇವಿಯು ಆಸೀನಳಾಗಿದ್ದಾಳೆ.

            ಈ ನಾಮವನ್ನು ಎರಡು ವಿಧವಾಗಿ ಪರಿಶೀಲಿಸಬಹುದು. ಮೊದಲನೆಯದು ಆಧ್ಯಾತ್ಮಿಕ ತತ್ವದ ದೃಷ್ಟಿಕೋನವುಳ್ಳದ್ದಾಗಿದೆ. ಬ್ರಹ್ಮದ ಸರ್ವವ್ಯಾಪಕ ಗುಣವು ಈ ನಾಮದ ಕೇಂದ್ರ ಬಿಂದುವಾಗಿದೆ. ವಿಶ್ವವ್ಯಾಪಿಯಾಗಿರುವ ಬ್ರಹ್ಮದ ಅಸ್ತಿತ್ವವನ್ನು ಪದೇ ಪದೇ ಉಪನಿಷತ್ತುಗಳಲ್ಲಿ ಒತ್ತುಕೊಟ್ಟು ಹೇಳಲಾಗಿದೆ. ಈ ನಾಮದಲ್ಲಿ ಹೆಸರಿಸಲಾಗಿರುವ ಬ್ರಹ್ಮ, ವಿಷ್ಣು ಮೊದಲಾದ ದೇವರುಗಳೆಲ್ಲರೂ ಕೇವಲ ಪರಬ್ರಹ್ಮದ ವಿವಿಧ ರೂಪಗಳಾಗಿವೆ. ಸೃಷ್ಟಿ ಕಾರ್ಯದ ತತ್ವವನ್ನು ಸುಲಭವಾಗಿ ಅರ್ಥಮಾಡಿಸುವ ಉದ್ದೇಶದಿಂದ ಸೃಷ್ಟಿ ಕ್ರಿಯೆಯ ಪ್ರತಿಯೊಂದು ಕಾರ್ಯವನ್ನೂ ಒಬ್ಬೊಬ್ಬ ವಿಭಿನ್ನ ದೇವತೆಯು ಕೈಗೊಳ್ಳುತ್ತದೆ ಎನ್ನುವಂತೆ ರೂಪಿಸಲಾಗಿದೆ. ಸೃಷ್ಟಿ, ಸ್ಥಿತಿ, ಲಯ, ತೀರೋದಾನ ಮತ್ತು ಪುನಸ್ಸೃಷ್ಟಿಯ ಕಾರ್ಯವು ಲಲಿತಾಂಬಿಕೆಯ ಚರ ಶಕ್ತಿಯಿಂದುಂಟಾಗಿದೆ ಎನ್ನುವುದನ್ನು ಸೂಚಿಸಲು ಸೂಕ್ತವಾಗಿ ಬ್ರಹ್ಮ, ವಿಷ್ಣು, ರುದ್ರ, ಮಹಾದೇವ, ಮತ್ತು ಸದಾಶಿವ ಇವರುಗಳನ್ನು ದೇವಿಯು ಆಸೀನಳಾಗಿರುವ ಸಿಂಹಾಸನದ ಭಾಗಗಳೆಂದು ಉಲ್ಲೇಖಿಸಲಾಗಿದೆ. ಇಲ್ಲಿ ಸಿಂಹಾಸನದ ವಿವಿಧ ಭಾಗಗಳಿಗೆ ಕೊಟ್ಟಿರುವ ಹೆಸರುಗಳು ಮುಖ್ಯವಲ್ಲ ಆದರೆ ಆ ದೇವರುಗಳನ್ನು ವಿವಿಧ ಕಾರ್ಯಗಳನ್ನು ಕೈಗೊಳ್ಳಲು ನಿಯುಕ್ತಗೊಳಿಸಿ ತನ್ಮೂಲಕ ಬ್ರಹ್ಮಾಂಡದ ಸಮತೋಲನವನ್ನು ಸಮರ್ಪಕವಾಗಿ ಉಳಿಸಿಕೊಳ್ಳುವುದು ಮಹತ್ವದ್ದೆನಿಸುತ್ತದೆ.

           ಮತ್ತೊಂದು ದೃಷ್ಟಿಯಿಂದ ಈ ನಾಮವನ್ನು ನೋಡುವುದಾದರೆ, ಚರ ಶಕ್ತಿಯಿಲ್ಲದಿದ್ದರೆ, ಪ್ರಮುಖವಾಗಿರುವ ಅಚರ (ಜಡ) ಶಕ್ತಿಯು ಕ್ರಿಯಾಶೀಲವಾಗಲಾರದು. ಇದನ್ನೇ ಬೇರೆ ಮಾತುಗಳಲ್ಲಿ ಹೇಳುವುದಾದರೆ, ಎಲ್ಲಿಯವರೆಗೆ ಶಿವನಿಂದಲೇ ಸೃಷ್ಟಿಸಲ್ಪಟ್ಟ ಚರಶಕ್ತಿಯಾದ ಅವನ ಸಂಗತಿಯಾದ ಲಲಿತಾಂಬಿಕೆಯು ಅವನಿಗೆ ಸೂಕ್ತವಾಗಿ ಸಹಕರಿಸದೇ ಹೋದರೆ, ಶಿವನು ಈ ಕ್ರಿಯಾಶೀಲ ಜಗತ್ತಿನ ಅಧಿಪತಿ ಎಂದು ಹೇಳಲಾಗದು. ತಂತ್ರಲೋಕ (೪.೬) ಹೇಳುತ್ತದೆ, "ಕೇವಲ ಶಕ್ತಿಯೊಂದಿಗೆ ಸಮಾಗಮ ಹೊಂದುವುದರಿಂದಷ್ಟೇ ಸೂಕ್ಷ್ಮರೂಪದ ಶಿವನ ಕುರಿತು ತಿಳಿದುಕೊಳ್ಳಬಹುದು. ದೇವಿಯು ಪರಮೋನ್ನತವಾದ ಸಂಯುಕ್ತ ಶಕ್ತಿಯಾದ ಪರಮೇಶ್ವರೀ ಆಗಿದ್ದು ಆಕೆಯು ಬ್ರಹ್ಮ, ವಿಷ್ಣು ಮತ್ತು ಈಶರುಗಳ ಸ್ವಂತ ಆತ್ಮವಾಗಿದ್ದಾಳೆ". ಇಲ್ಲಿ ಪ್ರಸ್ತಾವಿಸಲಾಗಿರುವ ಐದು ಕಳೇಬರಗಳು, ಆ ಅತ್ಯುನ್ನತರಾದ ಕಾರ್ಯ ಪ್ರಮುಖರು ದೇವಿಯ ಶಕ್ತಿಯು ಅವರೊಳಗೆ ಸಂವಹನಗೊಳ್ಳದಿದ್ದರೆ ಅವರು ಪ್ರೇತಗಳಾಗಿ ಮಾರ್ಪಡುತ್ತಾರೆ ಎಂದು ಸೂಚಿಸುತ್ತದೆ. ಈ ನಾಮವು, ನಿಶ್ಚಿತವಾಗಿ ಮತ್ತು ಅಧಿಕಾರಯುತವಾಗಿ ದೇವಿಯ ಪರಬ್ರಹ್ಮಸ್ವರೂಪವನ್ನು ದೃಢಪಡಿಸುತ್ತದೆ. ಹೆಚ್ಚಿನ ವಿವರಗಳಿಗೆ ನಾಮ ೨೪೯ ಮತ್ತು ೨೫೦ನ್ನು ಸಹ ನೋಡಿ.

Pañcamī पञ्चमी (948)

೯೪೮. ಪಂಚಮೀ

           ಪಂಚಮೀ ಎಂದರೆ ಐದನೆಯವಳು. ಹಿಂದಿನ ನಾಮದಲ್ಲಿ ಚರ್ಚಿಸಲಾದ ಐದು ದೇವರುಗಳಲ್ಲಿ ಸದಾಶಿವನು ಅತ್ಯಂತ ಶ್ರೇಷ್ಠನೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಅವನು ಪ್ರಳಯದ ನಂತರ ಈ ವಿಶ್ವವನ್ನು ಮರುಸೃಷ್ಟಿ ಮಾಡುತ್ತಾನೆ. ಅವನನ್ನು ಪಂಚಮ ಎಂದೂ ಕರೆಯಲಾಗುತ್ತದೆ ಮತ್ತು ಅವನ ಪತ್ನಿಯು ಪಂಚಮೀ ಆಗಿದ್ದಾಳೆ. ಸದಾಶಿವ ತತ್ವದಲ್ಲಿ, ’ಅಹಂ’ ಎನ್ನುವುದರ ಅನುಭವವು ’ಇದು’ (ಪ್ರಕೃತಿ) ಎನ್ನುವುದರ ಅನುಭವಕ್ಕಿಂತ ಹೆಚ್ಚು ಗಾಢವಾಗಿರುತ್ತದೆ.

           ವಾರಾಹಿ ದೇವಿಯೂ ಸಹ ಪಂಚಮೀ ಎಂದು ಕರೆಯಲ್ಪಡುತ್ತಾಳೆ. ಪಂಚಮೀ ಎನ್ನುವುದು ವಾರಾಹಿ ಮಂತ್ರಗಳಲ್ಲಿ ಒಂದು ಭಾಗವಾಗಿದೆ. ವಾರಾಹಿ ದೇವಿಯ ಕುರಿತಾಗಿ ನಾಮ ೬೭ರಲ್ಲಿ ಇದುವರೆಗಾಗಲೇ ಚರ್ಚಿಸಲಾಗಿದೆ. ಆಕೆಯು ಸಪ್ತ ಮಾತೆಯರಲ್ಲಿ ಒಬ್ಬಳು ಮತ್ತು ಅವರಲ್ಲಿ ಆಕೆಯ ಸ್ಥಾನವು ಐದನೆಯದಾಗಿರುವುದರಿಂದ ಆಕೆಯು ಪಂಚಮೀ ಎನಿಸುತ್ತಾಳೆ.

           ನಾಮ ೯೪೬ರಲ್ಲಿ ಚರ್ಚಿಸಲಾಗಿರುವ ಐದನೇ ಆಹುತಿಯೂ ಸಹ ಪಂಚಮೀ ಎಂದು ಕರೆಯಲ್ಪಡುತ್ತದೆ.

           ಕೈವಲ್ಯವು ಮುಕ್ತಿಯ ಹಂತದಲ್ಲಿ ಕಡೆಯ ಸ್ಥಿತಿಯಾಗಿದೆ. ಉಳಿದ ನಾಲ್ಕು ಹಂತಗಳೆಂದರೆ, ಸಾಲೋಕ್ಯ (ದೈವವು ಇರುವ ಪ್ರದೇಶದಲ್ಲಿಯೇ ಇರುವುದು), ಸಾರೂಪ (ದೈವವನ್ನು ಆವಾಹಿಸಿಕೊಳ್ಳುವುದು), ಸಾಮೀಪ್ಯ (ದೈವದೊಂದಿಗೆ ಅತ್ಯಂತ ಸಮೀಪದಲ್ಲಿದ್ದರೂ ಪ್ರತ್ಯೇಕವಾದ ಅಸ್ತಿತ್ವವನ್ನು ಹೊಂದಿರುವುದು) ಮತ್ತು ಸಾಯುಜ್ಯ (ದೈವದೊಂದಿಗೆ ಅತ್ಯಂತ ಸನ್ನಿಹಿತವಾಗಿರುವುದು). ಕೈವಲ್ಯವು ಐದನೆಯ ಹಂತವಾಗಿದ್ದು ಇಲ್ಲಿ ಆತ್ಮವು ಅಂತಃಕರಣ ಮೊದಲಾದ ಮನಸ್ಸಿನ ಅಂಶಗಳೊಂದಿಗೆ ಸಂಪೂರ್ಣವಾಗಿ ಬೇರ್ಪಡುತ್ತದೆ ಮತ್ತು ಜನನ-ಮರಣಗಳ ಚಕ್ರದಿಂದ ಸಂಪೂರ್ಣ ಬಿಡುಗಡೆ ಅಥವಾ ಮುಕ್ತಿಯು ದೊರೆಯುತ್ತದೆ. ಕೈವಲ್ಯವೆಂದರೆ ಆತ್ಮದ ಐದನೇ ಸ್ಥಿತಿಯಾದ ಪಂಚಮವನ್ನು ಸೂಚಿಸುವುದರಿಂದ ಅದನ್ನು ದಯಪಾಲಿಸುವವಳು ಪಂಚಮೀ ಆಗುತ್ತಾಳೆ. ನಾಮ ೬೨೫ ಮತ್ತು ೯೨೬ಗಳನ್ನು ಹೆಚ್ಚಿನ ವಿವರಗಳಿಗಾಗಿ ನೋಡಿ.

           ಈ ನಾಮವು ಇದುವರೆಗೆ ಚರ್ಚಿಸಲ್ಪಟ್ಟ ಎಲ್ಲ ವ್ಯಾಖ್ಯಾನಗಳನ್ನೂ ಸೂಚಿಸಬಹುದು.

                                                                            ******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 946 - 948 http://www.manblunder.com/2010/07/lalitha-sahasranamam-946-948.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Tue, 01/07/2014 - 18:20

ಶ್ರೀಧರರೆ,"೨೦೦. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ, ತಮ್ಮ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೯೪೬ - ೯೪೮
_____________________________
.
೯೪೬. ಪಂಚ-ಯಜ್ಞ-ಪ್ರಿಯಾ 
ಪಂಚ ಯಜ್ಞದೆ ಶ್ರೇಷ್ಠ ಸೋಮ ಯಾಗ, ಚತುರ್ಯಜ್ಞಗಳದರಲೆ ಅಂತರ್ಗತ
ಅಗ್ನಿ ಹೋತ್ರ-ದರ್ಶಪೂರ್ಣಮಾಸ-ಚಾತುರ್ಮಾಸ್ಯ-ಪಶುಬಂಧ ವೇದ ಸೂಕ್ತ
ಸ್ಮೃತಿ ಉಲ್ಲೇಖಿತ ಪಂಚ ಮಹಾಯಜ್ಞ ದೇವ-ಬ್ರಹ್ಮ-ಪಿತೃ-ಭೂತ-ನರಯಜ್ಞ
ಪಾಂಚರಾತ್ರಾ ಅಗಮ, ಪಂಚ ಸಮಿತ್ತು ಸಹಿತ ಲಲಿತೆ, ಪಂಚ-ಯಜ್ಞ-ಪ್ರಿಯಾ  ||
.
ದೇವಯಜ್ಞ ಕುಲ ದೇವತಾ ತೃಪ್ತಿ, ಬ್ರಹ್ಮಯಜ್ಞದೆ ವೇದವನರಿವ ಶಕ್ತಿ
ಪೂರ್ವಿಕರ ತೃಪ್ತಿಗೆ ಪಿತೃಯಜ್ಞ, ಪ್ರಾಣಿಪಕ್ಷಿಗೊಲಿಸೆ ಭೂತಯಜ್ಞ ಭಕ್ತಿ
ಸಹಮಾನವಾದರಾತಿಥ್ಯ ನರಯಜ್ಞ ಸೃತಿಯ ಪಂಚಮಹಾಯಜ್ಞಗಳು
ಷಡ್ವೇದಾಂಗ-ಶೌತ್ರ-ಗೃಹ ಸೂತ್ರ-ಮನುಧರ್ಮ ಸಂಹಿತೆ ಆಚರಣೆಗಳು ||
.
ವಿಷ್ಣು ಪೂಜೆ ಪಂಚ ವಿಧದಾಚರಣೆ ವಿಧಿಸೊ ಪಾಂಚರಾತ್ರ ಆಗಮ ಘನ
ವಿಷ್ಣುವೆಡೆ ಸಾಗೆ ಅಭಿಗಮನ, ಪೂಜಾ ಸಾಮಾಗ್ರಿ ಸಂಗ್ರಹ ಉಪದಾನ
ಪೂಜಾರ್ಚನೆ ಇಜ್ಯ, ವಿಷ್ಣುಪೂಜೆಗೆ ಸಮಂಜಸ ರಚಿತ ಗದ್ಯರೂಪಿ ಸ್ತುತಿ
ಸ್ತೋತ್ರಮಂತ್ರವೇದಶಾಸ್ತ್ರ ಅಭ್ಯಸಿಸೆ ಸ್ವಾಧ್ಯಾಯ ಪಂಚವಿಧಿಗಳ ಪೂರ್ತಿ ||
.
ಮಾನವ ಜನ್ಮ ಕಾರಣ ಸಮಿತ್ತುಗಳೈದು, ದೇವತೆಗಳರ್ಪಿಸಿದ ಆಹುತಿ
ಮೊದಲ ನೀರಿನಾಹುತಿಗೆ ಸೋಮ ಪ್ರತ್ಯಕ್ಷ, ಮಳೆಗವನಾಗಿಸೆ ಆಹುತಿ
ಮಳೆನೀರ ಮೂರನೆ ಆಹುತಿಯಿಂದಾಹಾರ, ನಾಲ್ಕನೆ ಆಹಾರಾಹುತಿ
ಉತ್ಪತ್ತಿ ಕಾರಣದ ರಸದುತ್ಪನ್ನ, ರಸದರ್ಪಣೆಗೆ ಭ್ರೂಣ ನರ ಜನ್ಮದ ಶಕ್ತಿ ||
.
ವೈದಿಕ ಕಾಲ ಪ್ರಚಲಿತ ಪೂಜಾವಿಧಾನ ಯಜ್ಞ, ಅರ್ಪಣೆ ಆಹುತಿ ಭಾಗ
ನಿಜ ಯಜ್ಞ ತ್ಯಾಗ-ಸಮರ್ಪಣೆ ಮೂರ್ತರೂಪ, ಶ್ರುತಿಸ್ಮೃತಿಯಾಗಿ ಸೊಗ
ವೇದ ಮೌಖಿಕ ಪವಿತ್ರ ಜ್ಞಾನ, ಪೀಳಿಗೆಯಿಂದ ಪೀಳಿಗೆಗಳಿಗೆ ಹರಿಯುತ
ಸ್ಮೃತಿ ಉಲ್ಲೇಖಿತ ಯಜ್ಞ ಪರಂಪರಾನುಗತ ಗುರುವಿನ ನೆನಪಿನ ಮೊತ್ತ ||
.
೯೪೭. ಪಂಚ-ಪ್ರೇತ-ಮಂಚಾದಿ-ಶಾಯಿನೀ 
ಬ್ರಹ್ಮ-ವಿಷ್ಣು-ರುದ್ರ-ಮಹದೇವ-ಸದಾಶಿವ ಪಂಚ ಪ್ರೇತ ಸ್ವರೂಪ
ಸಿಂಹಾಸನದ ಕಾಲಾಗಿ ನಾಲ್ವರು, ಆಸನವಾಗಿ ಸದಾಶಿವ ರೂಪ
ದೇವಿ ಆಸೀನಳಾಗಿ ಸಿಂಹಾಸನದೆ, ಸಮಷ್ಟಿ ಸೃಷ್ಟಿಗೆ ನಿಯಂತ್ರಣ
ಚರ ಶಕ್ತಿಯಿರದೆ ಕ್ರಿಯಾಶೀಲನಿರದ ಅಚರ ಶಿವನಿಗೆ ನೀಡೆ ತ್ರಾಣ ||
.
ಬ್ರಹ್ಮ-ವಿಷ್ಣು-ರುದ್ರಾದಿರೂಪ, ಪರಬ್ರಹ್ಮದ ವಿವಿಧ ಸ್ವರೂಪ ಲಯ
ಸುಗಮವಾಗಿಸೆ ಸೃಷ್ಟಿಕ್ರಿಯೆ ಪ್ರತಿ ದೇವರುಗಳಿಗೊಪ್ಪಿಸಿದ ಕಾರ್ಯ
ಸೃಷ್ಟಿ-ಸ್ಥಿತಿ-ಲಯ-ತಿರೋದಾನ-ಪುನಃ ಸೃಷ್ಟಿ ಲಲಿತೆಯ ಚರಶಕ್ತಿ
ಸಿಂಹಾಸನ ಭಾಗವಾಗಿಸಿ ಸಮತೋಲದಲಿಟ್ಟ ಸಂಕೇತದ ಸಮಷ್ಟಿ ||
.
ಶಿವಸೃಷ್ಟಿ ಲಲಿತೆ, ಸಹಕರಿಸದೆ ಶಿವನಾಗಲಾಗದು ಜಗದಧಿಪತಿ
ಶಕ್ತಿ ಜತೆ ಸಮಾಗಮದಲಷ್ಟೆ, ಸೂಕ್ಷ್ಮ ರೂಪಿ ಶಿವನನರಿಯೊ ಶಕ್ತಿ
ದೇವಿ ಪರಮೋನ್ನತ ಸಂಯುಕ್ತ ಶಕ್ತಿ, ಬ್ರಹ್ಮಾದಿ ಕಳೇಬರದ ಆತ್ಮ
ಕ್ರಿಯಾಶೀಲರಾಗಿಸಲು ದೇವಿ ಶಕ್ತಿ ಸಂವಹನ, ಇರದಿರೆ ಪ್ರೇತಾತ್ಮ||
.
೯೪೮. ಪಂಚಮೀ
ಪ್ರಳಯಾನಂತರ ಜಗ ಮರುಸೃಷ್ಟಿಸೊ ಸದಾಶಿವ, ಶ್ರೇಷ್ಠ ಪಂಚಮ ಪತಿ
ಪತ್ನಿ ರೂಪಲಿ ಪ್ರಕೃತಿ, ವಾರಾಹಿದೇವಿ ರೂಪದಲಿಹಳು ಪಂಚಮೀ ಸತಿ
ಸಪ್ತಮಾತೃಕೆ ಪಂಚಮ ಸ್ಥಾನ ವಾರಾಹಿ, ಐದನೆ ಅಹುತಿಯೂ ಪಂಚಮೀ
ಪಂಚಮ ಹಂತದ ಆತ್ಮ ಸ್ಥಿತಿ ಕೈವಲ್ಯದೆ, ಮುಕ್ತಿ ದಯಪಾಲಿಸಿ ಪಂಚಮೀ ||
.
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು